Archive for the ‘ನಮ್ಮ ಸುದ್ದಿ’ Category
ವಾರಕ್ಕೊಂದು ಡಾಕ್ಯುಮೆಂಟರಿ
ಕನ್ನಡದಲ್ಲಿ ಸಾಕ್ಷ್ಯಚಿತ್ರಗಳು ಬೇಕಾದಷ್ಟಿವೆ. ಅದರ ಬಗ್ಗೆ ಲಭ್ಯ ಮಾಹಿತಿ ಅತ್ಯಲ್ಪ. ಹಾಗೆಯೇ ಜಗತ್ತಿನ ಒಳ್ಳೆಯ ಡಾಕ್ಯುಮೆಂಟರಿಗಳ ಬಗ್ಗೆಯೂ ಕನ್ನಡದಲ್ಲಿ ಮಾಹಿತಿ ಸಿಗೋದು ಕಡಿಮೆಯೇ.
ಆದರೆ ಡಾಕ್ಯುಮೆಂಟರಿ ಕ್ಷೇತ್ರ ಬಹಳ ದೊಡ್ಡದು. ಅದರಲ್ಲಿ ತೊಡಗಿಸಿಕೊಳ್ಳುವುದೆಂದರೆ ಕಷ್ಟದ ಮಾತೂ ಹೌದು. ಅಂಥ ಕ್ಷೇತ್ರದ ಒಳ್ಳೊಳ್ಳೆ ಡಾಕ್ಯುಮೆಂಟರಿಗಳ ಬಗ್ಗೆ ಇನ್ನುಮುಂದೆ ವಾರಕ್ಕೊಮ್ಮೆ ಡಾ. ಜಿ. ಬಿ. ಹರೀಶ್ ಬರೆಯಲಿದ್ದಾರೆ.
ತಾವು ನೋಡಿದ, ತಮ್ಮಲ್ಲಿ ಲಭ್ಯವಿರುವ ಹಾಗೂ ಇತರೆ ಡಾಕ್ಯುಮೆಂಟರಿಗಳ ಬಗ್ಗೆ ಲೇಖನಗಳನ್ನು ಬರೆಯಲಿರುವ ಅವರ ಮೊದಲ ಲೇಖನ ಗುರುವಾರ ಪ್ರಕಟವಾಗಲಿದೆ.
ಆಹ್ವಾನ
ನೀವೂ ಸಹ ಇದಕ್ಕೆ ಕೊಡುಗೆ ನೀಡಬಹುದು. ಡಾಕ್ಯುಮೆಂಟರಿಗಳ ಬಗ್ಗೆ ನಿಮ್ಮಲ್ಲಿರುವ ಮಾಹಿತಿ, ಲೇಖನವನ್ನು ಕಳಿಸಬಹುದು. ಅಥವಾ ನೀವು ಕೇಳಿದ, ನೋಡಿದ ಒಳ್ಳೆಯ ಡಾಕ್ಯುಮೆಂಟರಿಗಳ ಬಗ್ಗೆ ಮಾಹಿತಿ ಉಲ್ಲೇಖಿಸಬಹುದು. ದಯವಿಟ್ಟು ಲೇಖನಗಳನ್ನು ಓದಿ ಅಭಿಪ್ರಾಯಿಸಿ.
ಸಾಂಗತ್ಯ ಪತ್ರಿಕೆಗೆ ಲೇಖನಗಳ ಆಹ್ವಾನ
ಸಾಂಗತ್ಯ ಈಗಾಗಲೇ ಪ್ರಕಟಿಸಿರುವಂತೆ ಮ್ಯಾಗಜೈನ್ ತರುವತ್ತ ಸಿದ್ಧತೆ ಆರಂಭಿಸಿದೆ.
ಮೂರು ತಿಂಗಳಿಗೊಮ್ಮೆ ಬರುವ ಈ ಪತ್ರಿಕೆ ಸಿನಿಮಾ ಗ್ರಹಿಕೆಯಿಂದ ಹಿಡಿದು ತಾಂತ್ರಿಕ ಸಂಗತಿಗಳ ಬಗ್ಗೆಯೂ ಅರಿವು ಮೂಡಿಸುತ್ತಲೇ ಚಿತ್ರಭಾಷೆಯ ಮಾಧ್ಯಮವಾದ ಸಿನಿಮಾ ಕುರಿತು ಪ್ರೀತಿ, ಅಕ್ಕರೆ ಹಾಗೂ ಒಲವು ಬೆಳೆಸುವುದು ಸಾಂಗತ್ಯದ ಉದ್ದೇಶ.
ಬರಿದೇ ಅಂಕಣಗಳಿಂದ ತುಂಬಿ ಹೋಗದೇ, ಒಂದಿಷ್ಟು ಹೊಸ ಹೊಳಹುಗಳಿಂದಲೂ ಇರಬೇಕೆಂಬುದು ನಮ್ಮ ಮ್ಯಾಗಜೈನ್ ನ ಉದ್ದೇಶ. ಸಿನಿಮಾ ವೀಕ್ಷಣೆ ಕುರಿತು ಪ್ರೀತಿ ಬೆಳೆಸುವತ್ತಲೇ ಸಿನಿಮಾ ಮಾಧ್ಯಮದ ಬಗ್ಗೆ ಮಗುಮ್ಮಾಗಿರದೇ ಒಂದಿಷ್ಟು ಚರ್ಚೆ ಬೆಳೆಸುವುದು, ಬರಹಗಳನ್ನು ಬರೆಯುವಂತೆ ಪ್ರೇರೇಪಿಸಲು ಚಿಂತನೆ ನಡೆಸಿದೆ.
ಹೀಗಾಗಿ ನೀವೆಲ್ಲಾ ಅದಕ್ಕೆ ಬರೆಯಬಹುದು. ಸಿನಿಮಾ ಗ್ರಹಿಕೆ, ಸಿನಿಮಾ ವಿಮರ್ಶೆ, ಒಳ್ಳೆ ಸಂದರ್ಶನ, ತಾಂತ್ರಿಕ ಸಂಗತಿಗಳ ಬಗೆಗಿನ ಲೇಖನಗಳೂ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದಂತೆ ಎಲ್ಲ ಬರಹಗಳನ್ನೂ ಕಳಿಸಬಹುದು saangatyamagazine@gmail.com.
ಒಳ್ಳೊಳ್ಳೆ ಲೇಖನಗಳನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಹಳೇಬೇರು-ಹೊಸಚಿಗುರುಗಳು ನಮ್ಮಲ್ಲಿ ನಳನಳಿಸಬೇಕೆಂಬುದು ನಮ್ಮ ಆಶಯ. ತಡ ಮಾಡದೇ ಲೇಖನಗಳನ್ನು ಕಳಿಸಿ.
ಯುಗಾದಿಗೆ ಸಾಂಗತ್ಯ ಮ್ಯಾಗಜೈನ್
ಗೆಳೆಯರೇ, ಸಾಂಗತ್ಯ ಹೊಸ ಸಾಹಸಕ್ಕೆ ಕೈ ಹಾಕಲೊರಟಿರುವುದು ತಮಗೇ ತಿಳಿದೇ ಇದೆ. ಸಾಂಗತ್ಯ ಮ್ಯಾಗಜೈನ್ ಬಗ್ಗೆ ಇಲ್ಲಿ ಪ್ರಕಟಿಸಿ ಸಲಹೆಯನ್ನೂ ಕೇಳಿದ್ದೆವು. ಕೆಲವರು ಮ್ಯಾಗಜೈನ್ ಅಗತ್ಯವಿಲ್ಲ ಎಂದು ಹೇಳಿದರೆ, ಇನ್ನು ಕೆಲವರು ತನ್ನಿ, ಒಳ್ಳೆಯದು ಎಂದರು. ಜತೆಗೆ ಆರ್ಥಿಕ ನೆಲೆ ಕುರಿತೂ ಸಲಹೆ ನೀಡಿದರು.
ಎಲ್ಲದಕ್ಕೂ ಧನ್ಯವಾದಗಳು. ಈಗಾಗಲೇ ಲೆಕ್ಕಾಚಾರ ಮುಗಿದಿದೆ ಆರ್ಥಿಕ ನೆಲೆಯದ್ದು. ಇನ್ನು ಸಂಪನ್ಮೂಲ ವ್ಯಕ್ತಿಗಳ ಲೆಕ್ಕಾಚಾರ ಆರಂಭವಾಗಿದೆ. ಒಂದು ಮ್ಯಾಗಜೈನ್ ಎಷ್ಟು ಚೆನ್ನಾಗಿ ತರಬಹುದೆಂಬ ಲೆಕ್ಕಾಚಾರವೂ ಪ್ರಾರಂಭವಾಗಿದೆ. ವಿನ್ಯಾಸ, ಹೂರಣ ಎಲ್ಲದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ಬಗ್ಗೆಯೂ ನಿಮ್ಮ ಸಲಹೆಗಳಿದ್ದರೆ saangatyamagazine@gmail.com ಗೆ ಕಳುಹಿಸಬಹುದು. ನಿಮ್ಮಲ್ಲಿ ಏನಾದರೂ ಮಾದರಿಗಳಿದ್ದರೆ ಅದನ್ನೂ ಕಳಿಸಬಹುದು.
ಎಲ್ಲ ಲೆಕ್ಕಾಚಾರ ಸರಿ ಹೋಗುತ್ತದೆ ಅನ್ನಿ. ಸರಿ ಹೋದರೆ ಯುಗಾದಿಗೆ ನಮ್ಮ ಮ್ಯಾಗಜೈನ್ ಬಿಡುಗಡೆಗೆ ಸಿದ್ಧವಾಗಲಿದೆ. ಅಂದರೆ ಅಂದು ನಿಮಗೆ ಲಭ್ಯ. ಆಸಕ್ತರಿಗೆ ಹೇಗೆ ಮುಟ್ಟಿಸಬೇಕೆಂಬ ಯೋಜನೆಯೂ ನಡೆಯುತ್ತಿದೆ. ನಿಮ್ಮಲ್ಲಿ ಏನಾದರೂ ಹೊಸ ಐಡಿಯಾ ಇದ್ದರೆ ಹೇಳಿ. ಚಂದಾದಾರರನ್ನು ಆಶ್ರಯಿಸುವುದು ಇದ್ದೇ ಇದೆ. ಜತೆಜತೆಗೆ ಮಾರುಕಟ್ಟೆಯತ್ತಲೂ ಮುಖ ಮಾಡಲಿದೆ ಸಾಂಗತ್ಯ.
ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ರೂಪಿಸಬೇಕೆಂದು ಹೊರಟಿದೆ ಸಾಂಗತ್ಯ ಬಳಗ. ನಿಮ್ಮೆಲ್ಲರ ಬೆಂಬಲವಿದೆಯೆಂಬ ಭರವಸೆಯೇ ಇಂಥದೊಂದು ಸಾಹಸಕ್ಕೆ ಮುನ್ನುಗ್ಗುವಂತೆ ಮಾಡಿರುವುದು. ಈ ಮಾತು ಖಂಡಿತಾ ಅತಿಶಯೋಕ್ತಿಯದ್ದಲ್ಲ.
ಕಾರಣ, ಸಾಂಗತ್ಯ ಜನವರಿ 3 ರಂದು 2009 ರಲ್ಲಿ ಸಮೂಹ ಬ್ಲಾಗ್ ಆರಂಭವಾದಾಗಲೂ ಬಹಳಷ್ಟು ಮಂದಿ ಒಂದು ತಿಂಗಳು ಅಪ್ ಟು ಡೇಟ್ ಆಗಬಹುದು, ನಂತರ ಅಷ್ಟಕಷ್ಟೇ ಎಂದು ಊಹಿಸಿದ್ದರು. ಎಲ್ಲರ ಸಹಕಾರದಿಂದ ಆ ಊಹೆ ಸುಳ್ಳಾಗಿದೆ. ಸುಮಾರು ಹತ್ತು ತಿಂಗಳಿಂದ ತಿಂಗಳಿಗೆ ಕನಿಷ್ಠ 15 ಒಳ್ಳೆಯ ಲೇಖನಗಳನ್ನು ಪ್ರಕಟಿಸುತ್ತಿದೆ. ನಿತ್ಯವೂ ಒಂದು ಹೊಸ ಲೇಖನ ಪ್ರಕಟಿಸಬೇಕೆಂಬ ಇಚ್ಛೆ ಇದೆ. ಅದಕ್ಕೆ ಬರೆದುಕೊಡುವವರ ಸಂಖ್ಯೆಯೂ ಜಾಸ್ತಿ ಆಗಬೇಕಿದೆ. ಸಾಂಗತ್ಯ ಆ ದಿಕ್ಕಿನತ್ತಲೇ ಮುಖ ಮಾಡಿದೆ.
ಈ ಮಧ್ಯೆ ಎಂದಿನಂತೆ ಜನವರಿಯಲ್ಲಿ ಮೂರನೇ ಚಿತ್ರೋತ್ಸವಕ್ಕೆ ತಣ್ಣಗೆ ಆಲೋಚನೆ ಶುರುವಾಗಿದೆ. ಬಹಳ ವಿಭಿನ್ನವಾಗಿ ಮಾಡಬೇಕೆಂಬ ಆಸೆಯೂ ಇದೆ. ಅದಕ್ಕೆ ನಿಮ್ಮೆಲ್ಲರ ಲೆಕ್ಕಾಚಾರವೂ ಸೇರಿದರೆ ಅನುಕೂಲ.ನಮ್ಮ ಹೊಸ ಸಾಹಸವನ್ನು ಬೆಂಬಲಿಸಿ, ಲೇಖನ ಕಳಿಸಿ.
ಸಾಂಗತ್ಯದಿಂದ ಮ್ಯಾಗಜೈನ್ ಪ್ರಯತ್ನ

ಸಾಂಗತ್ಯ ಮತ್ತೊಂದು ಸಾಹಸಕ್ಕೆ ಕೈ ಹಾಕುತ್ತಿದೆ.
ಸಿನಿಮಾ ಕುರಿತು ಪ್ರೀತಿ, ಮಾಹಿತಿ, ಜಾಗೃತಿ ಮೂಡಿಸುವತ್ತ ಹೊರಟಿರುವ ಸಾಂಗತ್ಯ, ಈಗಾಗಲೇ ಕುಪ್ಪಳ್ಳಿಯಲ್ಲಿ ಎರಡು ಯಶಸ್ವಿ ಚಿತ್ರೋತ್ಸವಗಳನ್ನು ನಡೆಸಿದೆ. ಜನವರಿಯಲ್ಲಿ ಮೂರನೇ ಚಿತ್ರೋತ್ಸವಕ್ಕೆ ಯೋಜನೆ ಸಿದ್ಧವಾಗುತ್ತಿದೆ. ಇದೇ ಸಂದರ್ಭದಲ್ಲಿ ಹಲವು ಕಾರ್ಯಾಗಾರಗಳನ್ನು ಆಯೋಜಿಸುವತ್ತಲೂ ಚಿಂತನೆ ನಡೆಸಿದೆ.
ಸಿನಿಮಾ ನೋಡುವುದರ ಬಗ್ಗೆ, ಅರ್ಥ ಮಾಡಿಕೊಳ್ಳುವುದರ ಬಗ್ಗೆ ಹಾಗೂ ಆ ಚಿತ್ರದ ಬಗೆಗಿನ ತಮ್ಮೊಳಗಿನ ಅಭಿಪ್ರಾಯಗಳನ್ನು ಹೇಳಿಕೊಳ್ಳುವುದಕ್ಕೆ-ಬರೆಯುವುದಕ್ಕೆ ಮಾದರಿಗಳನ್ನು ನಿರ್ಮಿಸುವ ಇರಾದೆ ಸಾಂಗತ್ಯದ್ದು. ಇದೇ ನೆಲೆಯಲ್ಲಿ ವಿಭಿನ್ನ ರೀತಿಯಲ್ಲಿ ಮತ್ತು ವಿಶೇಷವಾದ ಕಾರ್ಯಾಗಾರಗಳನ್ನು ನಡೆಸಲೂ ಸಿದ್ಧತೆ ಆರಂಭಿಸಿದೆ.
ಈ ಮಧ್ಯೆ ಸಾಂಗತ್ಯ ಹೊರಟಿರುವುದು ಸಿನಿಮಾದ ಬಗೆಗಿನ ಹೂರಣವನ್ನು ಎಲ್ಲರಿಗೂ ತಲುಪಿಸುವುದಕ್ಕಾಗಿ. ಹಾಗಾಗಿ ಸಾಂಗತ್ಯ ಒಂದು ಮ್ಯಾಗಜೈನ್ ಹೊರತರುವತ್ತ ಚಿಂತನೆ ನಡೆಸಿದೆ. ಈಗಾಗಲೇ ಹೂರಣದ ಸಿದ್ಧತೆಯೂ ನಡೆದಿದ್ದು, ಒಂದಿಷ್ಟು ಪೂರ್ವ ಸಿದ್ಧತೆ ಪ್ರಗತಿಯಲ್ಲಿದೆ.
ಸಿನಿಮಾಸಕ್ತ ಮಂದಿಗೆ ಅದರದ್ದೇ ಕುರಿತು ಶೈಕ್ಷಣಿಕ ಮತ್ತು ಮನೋರಂಜಿಕ ನೆಲೆಯ ಹೂರಣವನ್ನು ಒದಗಿಸುವುದು ನಮ್ಮ ಉದ್ದೇಶ. ಇದೇ ದಿಕ್ಕಿನಲ್ಲಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಬಹಳ ವಿಭಿನ್ನವಾಗಿ ಮಾಡಬೇಕೆಂದು ಹೊರಟಿರುವ ನಮಗೆ ನಿಮ್ಮೆಲ್ಲರ ಬೆಂಬಲ ಬೇಕು. ಬರಿದೇ ಪತ್ರಿಕೆ ಕೊಳ್ಳುವುದಲ್ಲ, ಅದರೊಂದಿಗೆ ಒಳ್ಳೊಳ್ಳೆ ಸಂಗ್ರಹಯೋಗ್ಯ ಲೇಖನಗಳನ್ನು ಪೂರೈಸುವುದು. ಈ ನೆಲೆಯಿಂದಲೇ ಈ ಸುದ್ದಿಯನ್ನು ಪ್ರಕಟಿಸುತ್ತಿರುವುದು.
ಒಂದಷ್ಟು ಮಂದಿ ಕೊಳ್ಳುವವರನ್ನು ಸೃಷ್ಟಿಸಬಹುದು. ಕಾರಣ, ಒಂದಷ್ಟು ಮಂದಿ ಆಸಕ್ತರನ್ನು ಹುಡುಕುವುದು ದೊಡ್ಡ ಮಾತಲ್ಲ. ಜತೆಗೆ ಅವರಿಗೆ ಮ್ಯಾಗಜೈನ್ ಮುಟ್ಟಿಸುವುದೂ ದೊಡ್ಡ ಕೆಲಸವಲ್ಲ. ಆದರೆ, ಪ್ರತಿ ಬಾರಿಯೂ ಅಂಥದೆ ಕುತೂಹಲ ಮತ್ತು ಖುಷಿ ನೀಡುವುದು ಕಷ್ಟದ ಕೆಲಸ. ಅದಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯವಶ್ಯ.
ಸಿನಿಮಾ ಮ್ಯಾಗಜೈನ್ ಗಳು ಬೇಕಾದಷ್ಟಿವೆ. ಅದರ ಮಧ್ಯೆ ಇದೊಂದು ಬೇಕೆ ಎನ್ನುವ ಮಾತು ಇದ್ದೇ ಇದೆ. ನಾವು ಪ್ರಯತ್ನಿಸೋಣ ಎಂದು ಹೊರಟಿದ್ದೇವೆ. ನಿಮ್ಮ ಸಹಕಾರವಿದ್ದರೆ ಗೆದ್ದೇ ಗೆಲ್ಲುತ್ತೇವೆ…
ನಮ್ಮದೇನಿದ್ದರೂ ಹಂಬಲ…ಅದನ್ನು ಮುಟ್ಟುವ ತವಕ ನಮ್ಮನ್ನು ಮುನ್ನಡೆಸಲಿದೆ ಎಂಬ ನಂಬಿಕೆ. ಅತ್ಯಂತ ಸಂತೋಷದ ಸಂಗತಿಯೆಂದರೆ ಸಾಂಗತ್ಯ ಬ್ಲಾಗ್ ಸಹ ಅಂಥದೆ ಹಂಬಲದಿಂದ ಹೊರಟದ್ದು, ನಿಮ್ಮ ಬೆಂಬಲದಿಂದ ನಡೆಯುತ್ತಿದೆ. ನಿತ್ಯವೂ ಒಂದಷ್ಟು ಮಂದಿ ಆಸಕ್ತರು ನೋಡುವವರಿದ್ದಾರೆ. ಅಂಥದೇ ಬೆಂಬಲ ಇದಕ್ಕೂ ಸಿಗುತ್ತದೆಂಬುದೇ ನಮ್ಮ ನಂಬಿಕೆ.
ಇದಕ್ಕೆ ಕುರಿತಂತೆ ಸಲಹೆಗಳಿದ್ದರೆ ದಯವಿಟ್ಟು saangatyamagazine@gmail.com ಗೆ ಕಳಿಸಿ.
ಶಮ ಕಳಿಸಿದ ಚಿತ್ರೋತ್ಸವದ ಚಿತ್ರಗಳು !
ಮತ್ತಷ್ಟು ಹುರುಪು ತುಂಬಿದ ಚಿತ್ರೋತ್ಸವ ಯಶಸ್ಸು
ನಾವು ಹಮ್ಮಿಕೊಂಡಿದ್ದ ಎರಡನೇ ಉತ್ಸವವೂ ಯಶಸ್ವಿಯಾಗಿದ್ದು ಸಂತಸ ತಂದಿದೆ. ಒಟ್ಟು 9 ಚಿತ್ರಗಳು (ಸಾಕ್ಷ್ಯ ಚಿತ್ರ ಸೇರಿ) ಪ್ರದರ್ಶನಗೊಂಡು, ಅದರ ಬಗ್ಗೆ ಚರ್ಚೆ ನಡೆಯಿತು. 40 ಕ್ಕೂ ಹೆಚ್ಚು ಮಂದಿ ಪಾಲ್ಗೊಂಡು ಸಂಭ್ರಮ ತುಂಬಿದರು. ಸಿನಿತಜ್ಞ ಶ್ರೀ ಪರಮೇಶ್ ಗುರುಸ್ವಾಮಿ ಹಾಗೂ ಚಿತ್ರ ನಿರ್ದೇಶಕ ಗುರುಪ್ರಸಾದ್ ಪಾಲ್ಗೊಂಡು ಸಂಭ್ರಮವನ್ನು ಹೆಚ್ಚಿಸಿದರು. ಗುರುಪ್ರಸಾದ್ ಅವರೊಂದಿಗಿನ ಸಂವಾದ, ಕೆಲಚಿತ್ರಗಳ ಚರ್ಚೆಯ ವರದಿಗಳನ್ನು ಸದ್ಯವೇ ಪ್ರಕಟಿಸಲಾಗುವುದು. ಶಮ ನಂದಿಬೆಟ್ಟ ಅವರು ಕಳಿಸಿಕೊಟ್ಟ ಚಿತ್ರಗಳನ್ನು ಇಲ್ಲಿ ಹಾಕಲಾಗಿದೆ.
ಸಾಂಗತ್ಯ ಕುಪ್ಪಳಿಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಾಲ (ಆ.8 ಮತ್ತು 9 ) ನಡೆದ ಚಿತ್ರೋತ್ಸವ ಯಶಸ್ವಿಯಾಯಿತು.
40 ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ 8 ಚಲನಚಿತ್ರಗಳನ್ನು ವೀಕ್ಷಿಸಲಾಯಿತು. ಬರೀ ವೀಕ್ಷಿಸಿದ್ದಷ್ಟೇ ಅಲ್ಲ ; ಚರ್ಚಿಸಲಾಯಿತು. ಒಂದು ಚಿತ್ರ ನೋಡುವ ಬಗೆಯನ್ನು ಹಾಗೂ ಚಿತ್ರಮಾಧ್ಯಮದ ಭಾಷೆಯನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಲಾಯಿತು.

ಚಿತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿರುವ ಶ್ರೀ ಪರಮೇಶ್ ಗುರುಸ್ವಾಮಿ
ಸಿನಿತಜ್ಞರಾದ ಶ್ರೀ ಪರಮೇಶ್ ಗುರುಸ್ವಾಮಿ ಅವರು ಸಮರ್ಥ ಮಾರ್ಗದರ್ಶನ ನೀಡಿದರೆ, ನಿರ್ದೇಶಕ ಶ್ರೀ ಗುರುಪ್ರಸಾದ್ ನಿರ್ದೇಶನದ ಕುರಿತ ಮಾಹಿತಿ ಹಾಗೂ ಕನ್ನಡ ಚಿತ್ರರಂಗದ ಸ್ಥಿತಿಗತಿ ಕುರಿತು ನಡೆದ ಸಂವಾದದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಚಿತ್ರೋತ್ಸವದ ಸಂಭ್ರಮ ಹೆಚ್ಚಿಸಿದರು.
ಆ. 8 ರ ಬೆಳಗ್ಗೆ 9. 30 ಕ್ಕೆ ಉತ್ಸವಕ್ಕೆ ಚಾಲನೆ. ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಶ್ರೀ ಕಡಿದಾಳ್ ಪ್ರಕಾಶ್ ಅವರು ಉದ್ಘಾಟಿಸಬೇಕಿತ್ತು. ಕಾರಣಾಂತರದಿಂದ ಬರಲಿಲ್ಲ. ಶ್ರೀ ಪರಮೇಶ್ ಗುರುಸ್ವಾಮಿಯವರು ಉದ್ಘಾಟಿಸಿ, ‘ನಾವು ಚಿತ್ರ ವೀಕ್ಷಣೆಗೆ ಮಹತ್ವ ನೀಡಬೇಕಿರುವ ದಿನಗಳಿವು’ ಎಂದು ಅಭಿಪ್ರಾಯಪಟ್ಟರು.
“ನಮ್ಮ ಚಲನಚಿತ್ರಗಳಿಗೂ ಪ್ರೇಕ್ಷಕರ ಸ್ಪಂದನೆ ದೊರೆಯಬೇಕಿದ್ದರೆ ಸಾರ್ವಕಾಲಿಕ ಎನ್ನುವ ಸಂಗತಿಗಳನ್ನು ಆಧರಿಸಿ ಕೈಗೊಳ್ಳಬೇಕು. ಒಂದು ಉತ್ತಮ ಚಿತ್ರಕ್ಕೆ ಪ್ರೇಕ್ಷಕರ ಸ್ಪಂದನೆ ಇದ್ದೇ ಇರುತ್ತದೆ’ ಎಂದರು.

ಸಮಾರೋಪದಲ್ಲಿ ಶ್ರೀ ಗುರುಪ್ರಸಾದ್ ಮಾತನಾಡುತ್ತಿರುವುದು.
ಹಾಗೆಯೇ ಸಮಾರೋಪದಲ್ಲಿ ಭಾಗವಹಿಸಿದ್ದ ನಿರ್ದೇಶಕ ಶ್ರೀ ಗುರುಪ್ರಸಾದ್, “ಇದೊಂದು ಒಳ್ಳೆಯ ಪ್ರಯತ್ನ. ಈ ಮೂಲಕ ಒಳ್ಳೆಯ ನಿರ್ದೇಶಕರನ್ನು, ಪ್ರೇಕ್ಷಕರನ್ನು ರೂಪಿಸಲು ಸಾಧ್ಯ. ಬೆಂಗಳೂರಿನಂಥ ಪ್ರದೇಶದಲ್ಲಿ ಇಂಥ ಕಾರ್ಯಕ್ರಮ ಹಮ್ಮಿಕೊಂಡರೆ ನಾವು ಮತ್ತು ನಮ್ಮ ಗೆಳೆಯರು (ಚಿತ್ರರಂಗಕ್ಕೆ ಸಂಬಂಧಿಸಿದವರು)ಸಾಂಗತ್ಯಕ್ಕೆ ಎಲ್ಲ ಸಹಕಾರವನ್ನು ಒದಗಿಸುತ್ತೇವೆ. ಒಟ್ಟಾಗಿ ಕಾರ್ಯಕ್ರಮವನ್ನು ಆಯೋಜಿಸೋಣ’ ಎಂದು ಹೇಳಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶ್ರೀ ಕಡಿದಾಳ್ ಪ್ರಕಾಶ್, “ಸಾಂಗತ್ಯದಂಥ ಸಂಸ್ಥೆ ದೂರದೂರಿನಿಂದ ಬಂದು ಇಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ನಾವು ಅಗತ್ಯ ಸಹಕಾರ ನೀಡಲಿದ್ದೇವೆ’ ಎಂದು ಹೇಳಿದರು. ಶ್ರೀ ಪರಮೇಶ್ ಗುರುಸ್ವಾಮಿಯವರು ಚಿತ್ರೋತ್ಸವ ನಡೆದ ರೀತಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ವಾದಿರಾಜ್ ಅವರು ನಿರೂಪಿಸಿದರು.
ಚಿತ್ರೋತ್ಸವಕ್ಕೆ ಕಿರೀಟಪ್ರಾಯ
ನಮ್ಮ ಚಿತ್ರೋತ್ಸವಕ್ಕೆ ಕಿರೀಟಪ್ರಾಯವೆನಿಸಿದ್ದು ಸಚ್ಚಿದಾನಂದ ಹೆಗಡೆ ಅವರ ಕಥೆ ಆಧರಿಸಿ ಭಾರತೀಶಂಕರ್ ಅವರು ಪ್ರದರ್ಶಿಸಿದ “ಕಾರಂತಜ್ಜನಿಗೊಂದು ಪತ್ರ” ಚಲನಚಿತ್ರ ಪ್ರದರ್ಶಿತವಾಯಿತು. ಇದಿನ್ನೂ ಬಿಡುಗಡೆಯಾಗಿಲ್ಲ. ನಮ್ಮ ಚಿತ್ರೋತ್ಸವದಲ್ಲೇ ಅದರ ಚೊಚ್ಚಲ ಪ್ರದರ್ಶನ. ನಂತರ ಒಳ್ಳೆಯ ಚರ್ಚೆಯೂ ನಡೆಯಿತು. ಇದಕ್ಕೆ ಸಹಕರಿಸಿದ ಚಿತ್ರ ನಿರ್ದೇಶಕರು, ಕಥೆಗಾರ ಸಚ್ಚಿದಾನಂದ ಹೆಗಡೆಯವರ ಮತ್ತಿತರಿಗೆ ಕೃತಜ್ಞತೆ ಸಲ್ಲಿಸಲಾಯಿತು.
ವಿಶಿಷ್ಟ ಚಿತ್ರಗಳು
ಈ ಚಿತ್ರೋತ್ಸವ ಮೊದಲಿನಂತಿರಲಿಲ್ಲ. ಸ್ವಲ್ಪ ವಿಶೇಷವಾಗಿತ್ತು. ಒಟ್ಟು ಎಂಟು ಚಿತ್ರಗಳ ಪೈಕಿ ಜನರಲ್ ವಿಭಾಗದಲ್ಲಿ “ದಿ ಗೋಸ್ಟ್ ಅಂಡ್ ದಿ ಡಾರ್ಕ್ ನೆಸ್’, “ದಿ ಬಾಯ್ ಇನ್ ದಿ ಸ್ಟ್ರೈಪ್ಡ್ ಪೈಜಾಮ”, “ಬಲ್ಜಾಕ್ ಅಂಡ್ ದಿ ಲಿಟ್ಲ್ ಚೈನೀಸ್ ಸೀಮ್ಸ್ಟ್ರೆಸ್” ಪ್ರದರ್ಶನಗೊಂಡಿತು. ಛಾಯಾಗ್ರಹಣಕ್ಕೆ ಮಹತ್ವ ನೀಡಿದ್ದ “ಆಷಸ್ ಅಂಡ್ ಸ್ನೋ” ಹಾಗೂ “ವಿಂಗ್ಡ್ ಮೈಗ್ರೇಷನ್”, ಅಮೆಚೂರ್ ವಿಭಾಗದಲ್ಲಿ ಕಾರ್ತಿಕ್ ಪರಾಡ್ಕರ್ ಅವರ “ನಾಗಮಂಡಲ’ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು.
ತೌಲನಿಕ ಅಧ್ಯಯನ
ತೌಲನಿಕ ಅಧ್ಯಯನ ಈ ಬಾರಿಯ ವಿಶೇಷ. ಇದರಡಿ ಮ್ಯಾಕ್ ಬೆತ್ ಆಧರಿಸಿದ ಅಕಿರಾ ಕುರಸೋವಾರ “ಥ್ರೋನ್ ಆಫ್ ಬ್ಲಡ್” ಹಾಗೂ ರೋಲನ್ ಪೋಲಂಸ್ಕಿಯವರ “ದಿ ಟ್ರಾಜಿಡಿ ಆಫ್ ಮ್ಯಾಕ್ ಬೆತ್” ಪ್ರದರ್ಶನಗೊಂಡಿತು. ಈ ಬಗ್ಗೆಯೂ ಚರ್ಚೆ ನಡೆದದ್ದು ಚೆನ್ನಾಗಿತ್ತು. ಎಲ್ಲರೂ ಚರ್ಚೆಯಲ್ಲಿ ಉತ್ಸಾಹದಿಂದ ಭಾಗಿಯಾದರು. ನಂತರ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.
ಉಳಿದಂತೆ ಊಟ ಉಪಚಾರ. ಮೊದಲ ದಿನ ತಿಂಡಿಗೆ ಹಲಸಿನ ಎಲೆ ಕಡುಬು (ಕೊಟ್ಟೆ ಕಡುಬು), ಊಟದಲ್ಲಿ ಬಿಸಿಬೇಳೆಬಾತು, ಅನ್ನ ರಸಂ, ಪಕೋಡ ಇತ್ಯಾದಿ. ಮಧ್ಯಾಹ್ನ ಅಂಟಿನುಂಡೆಯೊಂದಿಗೆ ಸ್ನ್ಯಾಕ್ಸ್. ರಾತ್ರಿ ಕಾಯಿ ಹೋಳಿಗೆಯೊಂದಿಗೆ ಸರಳ ಊಟ. ಎರಡನೇ ದಿನ ಬೆಳಗ್ಗೆ ಇಡ್ಲಿ ಸಾಂಬಾರ್ ತಿಂಡಿ. ಮಧ್ಯಾಹ್ನ ಊಟವೆಂದರೆ ವೆಜಿಟಬಲ್ ಫಲಾವ್, ಅನ್ನ ಸಾಂಬಾರ್, ಸಾಂಗತ್ಯದ ಸುಧೀರ್ ಕುಮಾರ್ ಮುರೊಳ್ಳಿಯವರ ಹುಟ್ಟುಹಬ್ಬದ ಪ್ರಯುಕ್ತ “ಜಹಾಂಗೀರ್” ಹಾಜರಾಗಿದ್ದರು. ಸಂಜೆ ಸ್ನ್ಯಾಕ್ಸ್-ಕಷಾಯದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಚಿತ್ರೋತ್ಸವ ಹೊಸ ನೆನಪುಗಳನ್ನು ಉಳಿಸಿದ್ದು ವಿಶೇಷ. ಕೊನೆಯ ಚಿತ್ರವಾಗಿ ಪ್ರದರ್ಶಿತಗೊಂಡ “ದಿ ಬಾಯ್ ವಿತ್ ದಿ ಸ್ಟ್ರೈಪ್ಡ್ ಪೈಜಾಮ” ಬಹಳ ಕಾಡಿತು. ಹಿಟ್ಲರ್ ಕಾಲದ ಹಿಂಸೆಯನ್ನು ಅತ್ಯಂತ ಸಾಂಕೇತಿಕವಾಗಿ ಕಟ್ಟಿಕೊಟ್ಟ ಚಿತ್ರ ಎಲ್ಲರ ಮನಸ್ಸನ್ನು ಕಲಕಿದ್ದು ನಿಜ.
ಒಟ್ಟೂ ಈ ಚಿತ್ರೋತ್ಸವ, ಆಸಕ್ತರು ಪಾಲ್ಗೊಂಡು ಪ್ರೋತ್ಸಾಹಿಸಿದ ಬಗೆ ಸಾಂಗತ್ಯಕ್ಕೆ ಮತ್ತಷ್ಟು ಹುರುಪು ತುಂಬಿದಂತೂ ಸತ್ಯ. ಸಹಕಾರ ನೀಡಿದ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಟಾನ, ಅದರ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್, ಪ್ರಮಾಣ ಪತ್ರ ಪೂರೈಸಿದ ಬೆಂಗಳೂರಿನ ಮೇಫ್ಲವರ್ ಮೀಡಿಯಾ ಹೌಸ್ ಮತ್ತು ಅದರ ಮುಖ್ಯಸ್ಥ ಜಿ. ಎನ್. ಮೋಹನ್, ಸಿನಿತಜ್ಞರಾಗಿ ಭಾಗವಹಿಸಿ ಸಲಹೆ ನೀಡಿದ ಪರಮೇಶ್ ಗುರುಸ್ವಾಮಿ, ಗುರುಪ್ರಸಾದ್ ಅವರನ್ನು ನೆನೆಯಲೇಬೇಕು. ನಮಗೆಲ್ಲಾ ಚೆಂದದ ಸಹಕಾರ ನೀಡಿದ ಪ್ರತಿಷ್ಠಾನದ ಉದ್ಯೋಗಿ ಮಂಜುನಾಥ್ ಮತ್ತು ಸಿಬ್ಬಂದಿಗೂ ಕೃತಜ್ಞತೆ ಸಲ್ಲಲೇಬೇಕು. ಇನ್ನಷ್ಟು ವಿಸ್ತೃತ ವರದಿಗಳನ್ನು ನಾಳೆ ಪ್ರಕಟಿಸಲಾಗುವುದು.
ಸಾಂಗತ್ಯ ಚಿತ್ರೋತ್ಸವಕ್ಕೆ ಆಹ್ವಾನ

ಈ ಬಾರಿಯ ಚಿತ್ರೋತ್ಸವದ ವಿಶೇಷ!
ಸಾಂಗತ್ಯ ಚಿತ್ರೋತ್ಸವದ ಸಿದ್ಧತೆ ಪೂರ್ಣಗೊಂಡಿದೆ. ನಮ್ಮ ಆಹ್ವಾನಕ್ಕೆ ಬಹಳಷ್ಟು ಮಂದಿ ಓಗೊಟ್ಟು ಹೆಸರು ನೋಂದಣಿ ಮಾಡಿಸಿದ್ದಾರೆ. ಈಗ ಇರುವ ಅಗ್ನಿ ಪರೀಕ್ಷೆ ನಮಗೇ.
ಕಳೆದ ಚಿತ್ರೋತ್ಸವಕ್ಕೆ ಹೋಲಿಸಿದರೆ, ಚಿತ್ರಗಳ ಆಯ್ಕೆ ಮತ್ತು ವಿಧಗಳಲ್ಲಿ ಬಹಳಷ್ಟು ಸುಧಾರಣೆಗಳನ್ನು ತರಲಾಗಿದೆ. ಜತೆಗೆ ಸಿನಿಮಾ ಗ್ರಹಿಕೆಯ ಅಧ್ಯಯನದ ದೃಷ್ಟಿಯಿಂದಲೂ ಆಯ್ಕೆಗಳನ್ನು ಮಾಡಿರುವುದು ಈ ಬಾರಿಯ ವಿಶೇಷ.
ಸುಮಾರು 7 ರಿಂದ 8 ಚಲನಚಿತ್ರಗಳ ಪೈಕಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಚಲನಚಿತ್ರಗಳಿವೆ. ನಮ್ಮ ಮನಸ್ಸನ್ನು ಸದಾ ಕಾಡುವ, ಚಿಂತನೆಗೆ ಹಚ್ಚುವ, ಚಲನಚಿತ್ರ ತಾಂತ್ರಿಕ ಅಂಶಗಳಿಂದಲೂ ಉತ್ತಮವಾದ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ.
ಬಹಳ ಖುಷಿಯ ಸಂಗತಿಯೆಂದರೆ ಸಾಂಗತ್ಯದ ಉದ್ದೇಶ ಬರಿದೇ ಚಿತ್ರಗಳನ್ನು ನೋಡುವುದಲ್ಲ, ಜತೆಗೆ ಅದನ್ನು ಅರ್ಥ ಮಾಡಿಕೊಳ್ಳುವುದು. ಆ ನಿಟ್ಟಿನಲ್ಲಿ ಪ್ರತಿ ಚಿತ್ರದ ನಂತರ ನಡೆಯುವ ಸಂವಾದದಲ್ಲಿ ಪ್ರತಿಯೊಬ್ಬರ ಕಡ್ಡಾಯ ಪಾಲ್ಗೊಳ್ಳುವಿಕೆಗೆ ಕಾಳಜಿ ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ನಮಗೆ ಸಹಕರಿಸಲು ತಜ್ಞರಾದ ಶ್ರೀಯುತರಾದ ಪರಮೇಶ್ ಗುರುಸ್ವಾಮಿ, ಗುರುಪ್ರಸಾದ್, ತಬಲಾ ನಾಣಿ ಹಾಜರಿರುವರು.
ಜತೆಗೆ ಈ ಬಾರಿ “ಅಮೆಚೂರ್ ” ವಿಭಾಗವೆಂದು ಗುರುತಿಸಿ ಅದರಲ್ಲಿ “ಹೊಸ ಪ್ರಯತ್ನಗಳು ” ಎಂದು ಒಂದು ಚಿತ್ರ, ಒಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುತ್ತಿದೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಒಂದು ವೇದಿಕೆ ಕಲ್ಪಿಸುವುದೂ ಸಾಂಗತ್ಯದ ಉದ್ದೇಶ.
ಉಳಿದಂತೆ ಹೋಳಿಗೆ ಊಟ ಸಿದ್ಧಗೊಂಡಿದೆ. ಕೊಪ್ಪದ ಸುಧೀರ್ ಕುಮಾರ್ ಮುರೊಳ್ಳಿ, ತೀರ್ಥಹಳ್ಳಿಯ ಮಧುಕರ್ ಮಯ್ಯ ಮತ್ತಿತರರು ನಮ್ಮೆಲ್ಲರ ಬರುವಿಕೆಗೆ ಕಾಯುತ್ತಿದ್ದಾರೆ.
ಮಾರ್ಗ
ಬೆಂಗಳೂರಿನಿಂದ ಬರುವವರಿಗೆ ನೇರವಾಗಿ ಕುಪ್ಪಳ್ಳಿಗೇ ರಾತ್ರಿ 10. 30 ಕ್ಕೆ ಬೆಂಗಳೂರು ಬಸ್ ನಿಲ್ದಾಣದಿಂದ ಬಸ್ ಇದೆ. ಅದು ತೀರ್ಥಹಳ್ಳಿ ಮಾರ್ಗವಾಗಿ ಬಸ್ ಕುಪ್ಪಳ್ಳಿಯನ್ನು ಬೆಳಗ್ಗೆ ಸುಮಾರು 7 ರ ಹೊತ್ತಿಗೆ ತಲುಪಲಿದೆ. ಅದು ಕಾರ್ಯಕ್ರಮ ನಡೆಯುವ ಸ್ಥಳದ ಎದುರೇ ಹೋಗುತ್ತದೆ. ಏನೂ ಸಮಸ್ಯೆಯಿಲ್ಲ.
ಮೈಸೂರಿನಿಂದ ಬರುವವರು ಹಾಸನಕ್ಕೆ ಬಂದು, ಚಿಕ್ಕಮಗಳೂರಿಗೆ ಬಂದು ಅಲ್ಲಿಂದ ಕೊಪ್ಪ ಬಸ್ ಹತ್ತಬೇಕು. ಇಲ್ಲದೇ ಇದ್ದರೆ ಮೈಸೂರಿನಿಂದ ರಾತ್ರಿ 9. 30 ಕ್ಕೆ ಶೃಂಗೇರಿ ಬಸ್ ಹೊರಡಲಿದೆ. ಅದರಲ್ಲಿ ಕೊಪ್ಪದಲ್ಲಿ ಇಳಿದು, ಕೊಪ್ಪ-ತೀರ್ಥಹಳ್ಳಿ ಬಸ್ ಹತ್ತಬೇಕು. ಸೋಲಾಪುರ ಹೈವೇಯಲ್ಲಿ ಸಾಗುವ ಬಸ್ ಗಡಿಕಲ್ಲು ಎಂಬಲ್ಲಿ ಇಳಿದು, ಅರ್ಧ ಕಿ. ಮೀ ನಡೆದರೆ ಕಾರ್ಯಕ್ರಮದ ಸ್ಥಳ ಲಭ್ಯ.
ಬಾಗಲಕೋಟ, ಬಳ್ಳಾರಿಯಿಂದ ಬರುವವರು ಶಿವಮೊಗ್ಗಕ್ಕೆ ಬಂದು, ಅಲ್ಲಿಂದ ತೀರ್ಥಹಳ್ಳಿ ಬಸ್ ಹತ್ತಬೇಕು. ನಂತರ ತೀರ್ಥಹಳ್ಳಿಯಿಂದ ಕೊಪ್ಪ ಬಸ್ ಹಿಡಿದು ಗಡಿಕಲ್ಲು ಎಂಬಲ್ಲಿ ಇಳಿದು ಬರಬೇಕು. ಮಂಗಳೂರಿನಿಂದ ಬರುವವರೂ ಭದ್ರಾವತಿಗೆ ಹೋಗುವ ಬಸ್ ಹಿಡಿದರೆ ಕೊಪ್ಪದಲ್ಲಿ ಇಳಿದು ತೀರ್ಥಹಳ್ಳಿ ಬಸ್ ಹತ್ತಬೇಕು. ಹಾಗೆಯೇ ತೀರ್ಥಹಳ್ಳಿಯಲ್ಲಿ ಇಳಿದರೆ ಕೊಪ್ಪಕ್ಕೆ ಹೋಗುವ ಬಸ್ ಅನ್ನು ಹತ್ತಬೇಕು. ಈ ಎರಡೂ ಮಾರ್ಗಗಳಲ್ಲಿ ಬರಬೇಕಾದವರು ಗಡಿಕಲ್ಲು ಎಂಬಲ್ಲಿ ಇಳಿದು ಅರ್ಧ ಕಿ. ಮೀ ನಡೆದು ಬರಬೇಕು.
ತರಬೇಕಾದದ್ದೇನು
ನಿಮ್ಮ ಅಗತ್ಯದ ವಸ್ತುಗಳು (ಸಾಬೂನು, ಹಲ್ಲುಜ್ಜುವ ಸಾಮಗ್ರಿ ಇತ್ಯಾದಿ)ಗಳನ್ನು ತನ್ನಿ. ಸ್ವಲ್ಪ ಮಳೆ-ಚಳಿ ಇರಬಹುದಾದದ್ದರಿಂದ ಇನ್ನೊಂದು ಚಾದರ್ ತರಬಹುದು. ಪುಟ್ಟದೊಂದು ಪುಸ್ತಕ, ಪೆನ್ನು ಜತೆಗಿದ್ದರೆ ಸಂವಾದದ ಸಂದರ್ಭದಲ್ಲಿ ಅಗತ್ಯವೆನಿಸಿದ ಕೆಲ ಅಂಶಗಳನ್ನು ಬರೆದುಕೊಳ್ಲಲು ಅನುಕೂಲ.
ಇನ್ನೇನಾದರೂ ಮಾಹಿತಿ ಬೇಕಾದರೆ 93433 81802, ಮಾರ್ಗದ ಬಗ್ಗೆ ಗೊಂದಲವಾದರೆ ಸುಧೀರ್ ಕುಮಾರ್ ಮುರೊಳ್ಳಿ-94482 45172 , ಮಧುಕರ್ ಮಯ್ಯ- 94481 54298 ಕರೆ ಮಾಡಬಹುದು. ನಾವು ಶನಿವಾರ ಬೆಳಗ್ಗೆ ಬಿಸಿಬಿಸಿ ಕಾಫಿಯೊಂದಿಗೆ ಸ್ವಾಗತಿಸುತ್ತೇವೆ, ಬನ್ನಿ ಕುಪ್ಪಳಿಯಲ್ಲಿ ಭೇಟಿಯಾಗೋಣ.
ಸಾಂಗತ್ಯ ಚಿತ್ರೋತ್ಸವಕ್ಕೆ ಆಹ್ವಾನ
ಸಾಂಗತ್ಯದ ಚಿತ್ರೋತ್ಸವ ಆ.8 ಮತ್ತು 9 ರಂದು ಎಂದಿನ ಲೆಕ್ಕಾಚಾರದಂತೆ ಕುಪ್ಪಳ್ಳಿಯಲ್ಲಿ ನಡೆಯಲಿದೆ. ಅತಿಥಿಗಳಾಗಿ ಸಿನಿತಜ್ಞ ಶ್ರೀ ಪರಮೇಶ್ ಗುರುಸ್ವಾಮಿ, ನಿರ್ದೇಶಕರಾದ ಶ್ರೀ ಗುರುಪ್ರಸಾದ್ ಭಾಗವಹಿಸುವರು.
ಹೊಸ ಪ್ರಕಟಣೆ-ಕಂದಹಾರ್ : ಮೊಹಿಸಿನ್ ಟಿಪ್ಪಣಿ ಸದ್ಯವೇ ಸಾಂಗತ್ಯದಲ್ಲಿ
ಸದ್ಯವೇ ಸಾಂಗತ್ಯದಲ್ಲಿ ಮೊಹಿಸಿನ್ ನ ಕಂದಹಾರ್ ಕುರಿತ ಟಿಪ್ಪಣಿಯ ಕನ್ನಡ ಅನುವಾದ ಪ್ರಕಟವಾಗಲಿದೆ. ಕಾಯುತ್ತಿರಿ.
ಇದು ಪುಟ್ಟ ಅನೌನ್ಸ್ ಮೆಂಟ್. ಸಾಂಗತ್ಯ ಸಿನಿಮಾ ಕುರಿತಾದ ಹಲವು ಮಾಹಿತಿಪೂರ್ಣ ಲೇಖನಗಳನ್ನು ನೀಡುತ್ತಿದೆ. ಇದರ ಬೆನ್ನಿಗೇ ಇರಾನಿನ ಹೆಸರಾಂತ ನಿರ್ದೇಶಕ ಮೊಹಿಸಿನ್ ಮಕ್ಮಲ್ಭಫ್ ನವರ “ಕಂದಹಾರ್” ಕುರಿತು ಬರೆದ ಟಿಪ್ಪಣಿಯ ಕನ್ನಡ ಅನುವಾದವನ್ನು ಪ್ರಕಟಿಸಲಿದೆ.
2001 ರಲ್ಲಿ ಮಕ್ಮಲ್ಬಫ್ “ಕಂದಹಾರ್” ಕುರಿತು ಸಿನಿಮಾ ರೂಪಿಸಿದರು. ಆ ಸಂದರ್ಭದಲ್ಲಿ ಅಲ್ಲಿನ ವಾಸ್ತವವನ್ನು ಕಂಡು ಬರೆದ ಟಿಪ್ಪಣಿ. ಬಹಳ ಆಸಕ್ತಿಕರ ಹಾಗೂ ಅಧ್ಯಯನಪೂರ್ಣವಾಗಿದೆ. ಸುಮಾರು ಅರವತ್ತು ಪುಟಗಳ ಟಿಪ್ಪಣಿಯ ಅನುವಾದ ಕಂತಿನ ಲೆಕ್ಕಾಚಾರದಲ್ಲಿ ಪ್ರಕಟವಾಗಲಿದೆ.
ಅವರ ಕೃತಿಯ ಕನ್ನಡ ಅನುವಾದಕ್ಕೆ ಸ್ವತಃ ಮೊಹಿಸಿನ್ ಅವರೇ, ಸಾಂಗತ್ಯಕ್ಕೆ ಒಪ್ಪಿಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಪ್ಪಣಿ ಸಿದ್ಧವಾಗುತ್ತಿದೆ. ಮೊಹಿಸಿನ್ ಇರಾನಿನ ಪ್ರತಿಭಾವಂತ ನಿರ್ದೇಶಕ. ಹೆಚ್ಚು ಪ್ರಯೋಗಾತ್ಮಕ ನೆಲೆಯಲ್ಲೇ ಚಲನಚಿತ್ರಗಳನ್ನು ರೂಪಿಸುತ್ತಾ ಒಬ್ಬ ಮಾನವೀಯ ಕಾರ್ಯಕರ್ತನಂತೆಯೂ ದುಡಿದವರು. ಅವರು ಮಾನವೀಯ ನೆಲೆಯಲ್ಲೇ, ಬರೆದ ಟಿಪ್ಪಣಿಯದು “ಬುದ್ಧನನ್ನು ಉರುಳಿಸಲಿಲ್ಲ ; ಅವಮಾನದಿಂದ ಕುಸಿದು ಬಿದ್ದ”.
ಚಿತ್ರೋತ್ಸವಕ್ಕೆ ಸಾಕ್ಷ್ಯಚಿತ್ರಗಳಿಗೆ ಆಹ್ವಾನ ಮತ್ತು ಹೆಸರು ನೋಂದಣಿ ಆರಂಭ
ಆ. 8 ಮತ್ತು 9 ರಂದು ಶಿವಮೊಗ್ಗ ಜಿಲ್ಲೆಯ ಕುಪ್ಪಳ್ಳಿಯಲ್ಲಿ ಸಾಂಗತ್ಯ ಆಯೋಜಿಸಿರುವ ಎರಡನೇ ಚಿತ್ರೋತ್ಸವಕ್ಕೆ ಹೆಸರು ನೋಂದಣಿ ಆರಂಭವಾಗಿದೆ.
ಈ ಬಾರಿ ಹೆಸರು ನೋಂದಣಿ ಕಡ್ಡಾಯವಾಗಿದ್ದು, ಸಾಂಗತ್ಯ ಹಲವೆಡೆ ಮಾಹಿತಿ ಮತ್ತು ನೋಂದಣಿಗೆ ತನ್ನ ಪ್ರತಿನಿಧಿಗಳನ್ನು ನಿಯೋಜಿಸಿದೆ. ಜತೆಗೆ ಸಾಕ್ಷ್ಯಚಿತ್ರಗಳನ್ನೂ ಆಹ್ವಾನಿಸಿದೆ. ಆ. 5 ರೊಳಗೆ 20 ನಿಮಿಷಗಳೊಳಗಿನ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಕಳುಹಿಸಬಹುದು. ಆಯ್ಕೆಯಾದ ಎರಡು ಸಾಕ್ಷ್ಯಚಿತ್ರಗಳಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.
ಈ ಬಾರಿ ಚಲನಚಿತ್ರೋತ್ಸವದಲ್ಲಿ ಸಾಕಷ್ಟು ಹೊಸತನವನ್ನು ಹೊಂದಿದ್ದು, ಚರ್ಚೆ, ಸಂವಾದಕ್ಕೆ ಅನುಕೂಲವಾಗುವಂತೆ ಯೋಜಿಸಲಾಗಿದೆ. ವಿದೇಶಿ ಭಾಷೆಗಳ ಚಿತ್ರಗಳೊಂದಿಗೆ, ದೇಶಿ ಅದರಲ್ಲೂ ದಕ್ಷಿಣ ಭಾರತೀಯ ಚಲನಚಿತ್ರಗಳನ್ನೂ ಪ್ರದರ್ಶಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಹೊಸಬರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲೂ ಆಲೋಚಿಸಿದ್ದು, ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಹೆಸರು ನೋಂದಾಯಿಸಿದವರು ತಕ್ಷಣವೇ ತಮ್ಮ ಹೆಸರನ್ನು ದಾಖಲಿಸಬಹುದು.
ಬಹಳ ವಿಶಿಷ್ಟವಾಗಿ ಈ ಉತ್ಸವವನ್ನು ಸಂಘಟಿಸಿದ್ದು, ಸಿನಿಮಾ ಗ್ರಹಿಕೆ, ಸಿನಿಮಾ ನಿರ್ಮಾಣ ಇತ್ಯಾದಿ ಬಗ್ಗೆಯೂ ಮಾಹಿತಿ ನೀಡಲಾಗುವುದು. ಇದು ಸಿನಿಮಾ ಗ್ರಹಿಕೆಯ ವಿಧಾನವನ್ನು ಅರಿಯಲೆಂದೇ ರೂಪಿಸಿದ್ದು, ಆಸಕ್ತರು ಭಾಗವಹಿಸಬಹುದು. ಮಾಹಿತಿಗೆ ದೂರವಾಣಿ ಸಂಖ್ಯೆ 93433 81802, 98444 91532 ಗೆ ಸಂಪರ್ಕಿಸಬಹುದು.
ಪ್ರವೇಶ ಶುಲ್ಕ 300 ರೂ.. ಬೆಂಗಳೂರಿನಲ್ಲಿ ಮಹೇಶ್ ಹೆಗಡೆ-99864 11247, ಪ್ರವೀಣ್ ಬಣಗಿ- 98444 91532, ಮೈಸೂರಿನಲ್ಲಿ ನಾವಡ- 93433 81802, ಬಾಗಲಕೋಟೆ- ರವಿರಾಜ್ ಗಲಗಲಿ-93433 81818, ಉಡುಪಿ, ದಕ್ಷಿಣ ಕನ್ನಡದಲ್ಲಿ ಸಿಬಂತಿ ಪದ್ಮನಾಭ-94495 25854, ತೀರ್ಥಹಳ್ಳಿಯಲ್ಲಿ ಮಧುಕರ್ ಮಯ್ಯ-94481 54298, ಚಿಕ್ಕಮಗಳೂರು, ಕೊಪ್ಪದಲ್ಲಿ ದೀಪಾ ಹಿರೇಗುತ್ತಿ-94804 76176…ಇವರಲ್ಲಿ ಹೆಸರು ನೋಂದಾಯಿಸಬಹುದು.
ಸಾಕ್ಷ್ಯಚಿತ್ರಗಳಿಗೆ ಆಹ್ವಾನ
ಚಿತ್ರೋತ್ಸವದಲ್ಲಿ ಹವ್ಯಾಸಿಗಳು ನಿರ್ಮಿಸಿದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಗುವುದು. ಸಾಕ್ಷ್ಯಚಿತ್ರಗಳು ೨೦ ನಿಮಿಷಗಳೊಳಗಿರಬೇಕು. ಬಂದ ಸಾಕ್ಷ್ಯಚಿತ್ರಗಳನ್ನು ಪ್ರದರ್ಶನಕ್ಕೆ ತಜ್ಞರ ಸಮಿತಿ ಆಯ್ಕೆ ಮಾಡಲಿದೆ. ಆಸಕ್ತರು ತಾವು ನಿರ್ಮಿಸಿದ ಸಾಕ್ಷ್ಯಚಿತ್ರಗಳ ಪ್ರತಿಗಳನ್ನು ಸಾಂಗತ್ಯ, c/o ಸುಧಾ, 905/175 ಎ, 7 ನೇ ಕ್ರಾಸ್, ನಾಲ್ಕನೇ ಮುಖ್ಯರಸ್ತೆ, ಸಾರ್ವಜನಿಕ ಹಾಸ್ಟೆಲ್ ರಸ್ತೆ, ವಿದ್ಯಾರಣ್ಯಪುರಂ, ಮೈಸೂರು 570 008 ಇಲ್ಲಿಗೆ ಕಳುಹಿಸಬಹುದು.
ನೀವು ಹೇಳಿ…ನಾವು ಇನ್ನೇನು ಮಾಡಬಹುದು ?
ಸಾಂಗತ್ಯ ಕ್ರಿಯಾಶೀಲವಾಗಿ ಏಳು ತಿಂಗಳು ಕಳೆಯುತ್ತಿದೆ. ಇದುವರೆಗೆ ಹಲವು ರೀತಿಯ ಮಾಹಿತಿಗಳನ್ನು ಒದಗಿಸುತ್ತಿದೆ.
ಚಿತ್ರ ಅನಿಸಿಕೆ, ಚಿತ್ರ ಗ್ರಹಿಕೆ ಕುರಿತಾದ ಲೇಖನಗಳು ಒಂದೆಡೆ ನಮ್ಮ ಚಿತ್ರ ಭಾಷೆಯ ಗ್ರಹಿಕೆಯಲ್ಲಿ ಅಥವಾ ಅರ್ಥ ಮಾಡಿಕೊಳ್ಳುವಲ್ಲಿ ಊರುಗೋಲಿನಂತಾಗಿರಬಹುದು.
ಹಾಗೆಯೇ ಸಿನಿತಜ್ಞ ಪರಮೇಶ್ ಗುರುಸ್ವಾಮಿಯವರ ಕನ್ನಡ ಚಿತ್ರ ರಂಗದ ಬಗೆಗಿನ ಅಪರೂಪದ ಮಾಹಿತಿಯುಳ್ಳ ಅಂಕಣ, ಕಲಾವಿದ ಸೃಜನ್ ಅವರು ನೀಡುತ್ತಿರುವ ನಮ್ಮ ನೆರೆ-ಹೊರೆ ಭಾಷೆಯ ಅತ್ಯುತ್ತಮ ಚಲನಚಿತ್ರಗಳ ಬಗೆಗಿನ ಲೇಖನಮಾಲೆ ಹಾಗೂ ಹಾಲಿವುಡ್ ಸಿನಿಮಾಗಳ ಕುರಿತಾದ ಬೇಳೂರು ಸುದರ್ಶನರ ಅಂಕಣ ಜಗತ್ತಿನ ಚಿತ್ರರಂಗದ ಮಾಹಿತಿ ಒದಗಿಸುತ್ತಿದೆ. Read the rest of this entry »






