Archive for the ‘ಡಸ್ಟ್ ಬಿನ್ (ಕ.ಬು)’ Category
“ಡಸ್ಟ್ ಬಿನ್” ಎಂಬ ಹೊಸ ಅಂಕಣ
ಡಸ್ಟ್ ಬಿನ್ ಹೊಸ ಅಂಕಣ. ಇದು ಒಂಥರ “ಕ.ಬು”. ಇದಕ್ಕೆ ನೀವು ನೋಡಿದ ಯಾವುದಕ್ಕೂ ಪ್ರಯೋಜನಕ್ಕೆ ಬಾರದ ಸಿನಿಮಾಗಳ ಬಗ್ಗೆ ಪುಟ್ಟದ್ದಾಗಿ ಬರೆಯಬಹುದು. ಅದು ಏಕೆ ಪ್ರಯೋಜನವಿಲ್ಲ ಎಂದು ನಾಲ್ಕೈದು ಸಮರ್ಥನೆಗಳನ್ನು ಕೊಟ್ಟರೆ ಸಾಕು.
ಜತೆಗೆ ಒಂದು ಚಿತ್ರ ಸರಿಯಿಲ್ಲ ಏಕೆನಿಸುತ್ತದೆ ? ಯಾವ ರೀತಿಯಲ್ಲೂ ಖುಷಿ ನೀಡದಿದ್ದರೆ, ಹೊಸ ಬಗೆಯ ಪ್ರಯತ್ನವೆಂದೂ ಅನಿಸದಿದ್ದರೆ…ಇತ್ಯಾದಿ. ಸುಂದರ ಕ್ಲೈಮ್ಯಾಕ್ಸ್ ನಿಂದಲೇ ಚಿತ್ರ ಚೆನ್ನಾಗಿದೆ ಎಂತಲೂ ಅಲ್ಲ, ಕ್ಲೈಮ್ಯಾಕ್ಷ್ ಚೆನ್ನಾಗಿಲ್ಲ ಎಂದ ಮಾತ್ರಕ್ಕೆ ಸಿನಿಮಾದ ಉಳಿದ ಭಾಗ ಚೆನ್ನಾಗಿರಬಾರದೆಂದೇನೂ ಅಲ್ಲ. ಕೆಲವೊಮ್ಮೆ ನಿರೂಪಣೆ ಚೆನ್ನಾಗಿರದಿದ್ದರೂ, ಅದನ್ನು ಹೆಣೆದ ರೀತಿಯಿಂದ ಖುಷಿ ಕೊಡಬಹುದು, ಇನ್ನೂ ಕೆಲವೊಮ್ಮೆ ಅದರಲ್ಲಿನ ಛಾಯಾಗ್ರಹಣವೇ ಕಣ್ಣಿಗೆ ತಂಪು ತಂದುಕೊಡುತ್ತದೆ. ಕಥೆ ಏನೇ ಇರಲಿ, ಅದನ್ನು ಹಿಡಿದಿಟ್ಟುಕೊಟ್ಟ ಬಗೆ ಚೆನ್ನಾಗಿದೆ ಎನಿಸುವುದಿದೆ.
ಹಲವು ಬಾರಿ ಸಂಕಲನದ ರೀತಿಯಿಂದಲೇ ಆ ಚಿತ್ರ ಯಶಸ್ವಿ ಎನಿಸಬಹುದು. ಹೀಗೆ ನಾನಾ ಕಾರಣಗಳಿವೆ ಒಂದು ಚಿತ್ರ ಚೆನ್ನಾಗಿದೆ ಎಂದು ಹೇಳಲು. ಇಷ್ಟೆಲ್ಲಾ ಸಕಾರಣಗಳ ದೃಷ್ಟಿಯಿಂದಲೂ ಸಿನಿಮಾ ಚೆನ್ನಾಗಿಲ್ಲ ಎನಿಸುವುದಾದರೆ ನಿಜಕ್ಕೂ ಬೇಸರದ ಸಂಗತಿ.
ನಮ್ಮ ಮೌಲ್ಯಯುತ ಸಮಯವನ್ನು ನಷ್ಟ ಮಾಡುವಂಥ ಇಂಥ ಪ್ರಯತ್ನಗಳ ಬಗ್ಗೆ ಇಲ್ಲಿಗೆ ಬರೆಯಬಹುದು. ಯಾವುದೆ ಭಾಷೆಯ ಚಲನಚಿತ್ರಗಳ ಬಗ್ಗೆಯೂ ಬರೆಯಬಹುದು. ಕನ್ನಡ, ಹಿಂದಿ, ಇಂಗ್ಲಿಷ್…ಹೀಗೆ ನೀವು ನೋಡಿದ ಕೆಟ್ಟ ಚಿತ್ರಗಳ ಬಗ್ಗೆ ಬರೆಯಿರಿ saangatya@gmail.comಗೆ.
*
ಮೇರೆ ಖ್ವಾಬೋಂ ಮೆ ಜೊ ಆಯೇ
ಮಧುರೀತಾ ಆನಂದ್ ಅನ್ನುವ ಹೊಚ್ಚ ಹೊಸ ನಿರ್ದೇಶಕಿಯ ಚೊಚ್ಚಲ ಚಿತ್ರವೊಂದು, ನಿರ್ಮಾಪಕರನ್ನು ಮಖಾಡೆ ಮಲಗಿಸಿದ್ದೂ ಅಲ್ಲದೆ, ಅಪರೂಪದ ಪ್ರೇಕ್ಷಕರನ್ನು ‘ಇನ್ನು ಏಳು ಜನ್ಮಕ್ಕೆ ಪಿಚ್ಚರು ನೋಡಲ್ಲಪ್ಪಾ!!” ಅಂತ ಪ್ರಮಾಣ ಮಾಡಲು ಪ್ರೇರೇಪಿಸುವಷ್ಟು ಪ್ರಭಾವಶಾಲಿಯಾಗಿರಬಲ್ಲದು ಅಂದರೆ ನಂಬ್ತೀರಾ?
‘ಮೇರೆ ಖ್ವಾಬೋಂ ಮೆ ಜೊ ಆಯೇ’ ಸಿನೆಮಾ ನೋಡಿದ ಮೇಲೆ ನೀವು ನಂಬಲೇಬೇಕು. ಯಾತಕ್ಕೂ ಒಮ್ಮೆ ನೋಡಿ ಬನ್ನಿ!!
ಅಸಹನೆಯ ಮುದ್ದೆ, ಸ್ವಲ್ಪ ಜುಗ್ಗ, ಸಾಲದ್ದಕ್ಕೆ ಯಾರ ಜತೆಗೋ ಅಫೇರು ಇಟ್ಟುಕೊಂಡಿರುವ ಗಂಡ. ಅವಳಿಗೋ, ಪಾಪ ಹುಡುಗಿಯಾಗಿದ್ದಾಗಿಂದಲೂ ಹಾಡುವ ಹುಚ್ಚು. ನವಿರು ಭಾವನೆಗಳ ಹುಡುಗಿ. ಹುಡುಗಿ ಎನು? ಎಂಟೋ ಹತ್ತೋ ವರ್ಷದ ಮಗಳ ತಾಯಿ.
ಹೆಂಗಸಿನ ಸಾಂಸಾರಿಕ ತುಮುಲವನ್ನ, ಅದರಿಂದ ಆಕೆ ಹೊರಬರಲು ಸಂಗಾತಿಯನ್ನು ಅರಸಿಕೊಳ್ಳುವ ಪರಿಯನ್ನ ಎಷ್ಟು ನಾಜೂಕಾಗಿ ಹಿಡಿದಿಡಬಹುದು ಅನ್ನೋದು ನಮಗೀಗಾಗಲೇ (ಅಫ್ ಕೋರ್ಸ್, ಹಲವು ಸಿನೆಮಾಗಳಿಂದ) ಗೊತ್ತಾಗಿದೆ.
ಆದರೆ, ‘ಮೇರೆ….’ ಮೂವಿಯ ಸ್ಟೈಲೇ ಬೇರೆ!
ಚಿತ್ರ ವಿಚಿತ್ರ ವೇಷದ ಕಾಲ್ಪನಿಕ ಪ್ರಿಯತಮ, ಫ್ಯಾಂಟಸಿ, ಅಂತೂ ಅವಳು ಗಂಡನ್ನ ಉಪೇಕ್ಷೆ ಮಾಡಿ ಏಕಾ ಏಕಿ ಎದೆಗಾರ್ತಿಯಾಗಿ ಛಲ ಸಾಧಿಸುವುದು…
ಅರೆ!! ಈ ನಡುವೆ ಮಗಳು ಎಲ್ಲಿ ಹೋದಳೋ?
ಕೊನೆಗೆ ಅವಳೊಬ್ಬಳೇ ರಾತ್ರಿಯಿಡೀ ಕುಡಿದು ಬಿದ್ದುಕೊಳ್ಳುವುದರ ಜೊತೆಗೆ ಸಿನೆಮಾ ಮುಕ್ತಾಯ…
ಅಂದುಕೊಂಡರೆ ತಪ್ಪು! ಆಗ, ಕಲ್ಪನೆಯ ಪ್ರಿಯತಮ, ನಿಜಕ್ಕೂ ಎದುರು ಮನೆಗೆ ಬಾಡಿಗೆಗೆ ಬಂದು ಇವಳಿಗೆ ಲೈನು ಹೊಡೀತಾನೆ!! ಸಿಲ್ಲಿ… ಸಿಲ್ಲಿ…
ಅಂದ ಹಾಗೆ, ಈ ಪಿಚ್ಚರಿನಲ್ಲಿ ರೈಮಾ ಸೇನ್, ರಣದೀಪ್ ಹೂಡಾ, ಅರ್ಬಾಜ್ ಖಾನ್ ಮುಖ್ಯ ಪಾತ್ರಧಾರಿಗಳು. ಅದಕ್ಕೇ ಹೇಳಿದ್ದು, ನೀವೂ ಒಮ್ಮೆ ಈ ಮೂವಿಯನ್ನ ನೋಡಿ. ಡಸ್ಟ್ ಬಿನ್ನಿಗೆ ಬಿಸಾಕದಿದ್ದರೆ ಆಮೇಲೆ ಹೇಳಿ !




