ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಜಗತ್ತಿನ ಚೆಂದದ ಸಿನಿಮಾ’ Category

ಪ್ರೀತಿಯ ಸಿನಿಮಾ

without comments

“ಸಿನಿಮಾ ಪ್ಯಾರಡಿಸೋ” ಬಗ್ಗೆ ಶ್ರೀ ಬರೆದ ಪುಟ್ಟದೊಂದು ಬರಹ ಇಲ್ಲಿ ಹಾಕುತ್ತಿದ್ದೇವೆ.

ನನ್ನ ಮಿಕ್ಕೆಲ್ಲ ಸೋಮಾರಿ ಪ್ಲ್ಯಾನುಗಳಂತೆ ‘ಸಿನೆಮಾ ಪ್ಯಾರಡಿಸೋ’
ನೋಡಬೇಕು ಅನ್ನೂದಕ್ಕೂ ವರ್ಷ ದಾಟಿದ ಮೇಲೆ ಕೊನೆಗೂ ಮುಹೂರ್ತ ಬಂತು! ನೋಡೋಕೆ ಅಂತ ಕೂತ್ಕೊಳ್ಳೋಕೆ ವರ್ಷವಾದ್ರೂ ಫ್ಯಾಶ್ಬ್ಯಾಕ್ ನಲ್ಲಿ ತೆರೆದುಕೋಳ್ಳೋ ಚಿತ್ರ ನಿರ್ದೇಶಕನೊಬ್ಬನ ಬದುಕು, ಪ್ರೀತಿಗಳ ಈ ಕಥೆಯ ಪ್ರೀತಿಯಲ್ಲಿ ಮುಳುಗಿಹೊಗೋಕೆ ಮಾತ್ರ ನಿಮಿಷಗಳೇ ಬೇಕಾಗ್ಲಿಲ್ಲ!

ಪ್ರೊಜೆಕ್ಷನ್ ಬೂತಿನ ಕಡೆ ನೆಟ್ಟ ಪುಟ್ಟ ಕಂಗಳು ನಿರ್ದೇಶಕನಾಗಿ ಹೆಸರು ಮಾಡಿ ಮತ್ತೆ ಊರಿಗೆ ಮರಳುವವರೆಗೆ ಕಾಣುವುದು, ಕಾಣಿಸುವುದು ಏನೇನೆಲ್ಲ! Read the rest of this entry »

ಬೇಲಿಯ ಆಚೆ ಮತ್ತು ಈಚೆ : ಒಂದು ತಣ್ಣಗಿನ ಕತೆಯ ಸುತ್ತ

with 5 comments

ಈ ಚಿತ್ರ ಸಾಂಗತ್ಯ ಚಿತ್ರೋತ್ಸವದಲ್ಲಿ ತೋರಿಸಿದ್ದು. ಎಲ್ಲರನ್ನೂ ಕಾಡಿದ ಚಿತ್ರ. ಕಲ್ಲರೆ ಮಹೇಶ್ ಅವರು ಈ ಚಿತ್ರದ ಬಗ್ಗೆ ಚೆಂದದ ಲೇಖನವನ್ನು ಕಳುಹಿಸಿದ್ದಾರೆ. ಓದಿ ಅಭಿಪ್ರಾಯಿಸಿ.

ಒಂದು ಬೇಲಿ. ಇಬ್ಬರು ಹುಡುಗರು. ಅಷ್ಟೇ ಸಾಕು ನೋಡುವವರಿಗೆ. ಮೊದಲ ನಿಮಿಷದಿಂದ ಕೊನೆಯವರೆಗೂ ಒಂದೇ ಹದದಲ್ಲಿ ಸಾಗುತ್ತದೆ ನೋಟ. ಎಲ್ಲೂ ನಿಲ್ಲುವುದಿಲ್ಲ. ’ದಿ ಎಂಡ್’ ಕಾಣಿಸಿ, ಭಾರವಾದ ಮನಸಿನೊಂದಿಗೆ ಹೊರಬರುತ್ತಾರೆ ಎಲ್ಲ. ಮೈಮುರಿಯುವುದಕ್ಕೆ, ಆಕಳಿಸುವುದಕ್ಕೆ, ಆಚೀಚೆ ನೋಡುವುದಕ್ಕೆ ಅವಕಾಶವೇ ಆಗುವುದಿಲ್ಲ. ಬದಲಿಗೆ ಮತ್ತೆ ಪ್ರಾರಂಭವಾಗುತ್ತದೆ ಚಿತ್ರ. ಒಳಗೊಳಗೆ ನಿಲ್ಲದೆ ಚಲಿಸುತ್ತದೆ ದೃಶ್ಯಾವಳಿ. ಅದು ಹಾಗೆ ಸುಮ್ಮನೆ ಮುಗಿಯುವುದಿಲ್ಲ. ದಿನಗಟ್ಟಲೆ, ವಾರಗಟ್ಟಲೆ, ತಿಂಗಳುಗಟ್ಟಲೆ ಓಡುತ್ತಿರುತ್ತದೆ. ಒಂದು ಲೆಕ್ಕದಲ್ಲಿ ’ಭಾರೀ’ ದಾಖಲೆಯಾಗಬಹುದು! ಆದರೆ ವಸ್ತುವಿನ ಒಳಹೊಕ್ಕವರಲ್ಲಿ ಮಾತ್ರ ’ದಾಖಲಾಗುತ್ತದೆ’.

ಕಥೆಗಾರ, ಇಡೀ ಕತೆಯನ್ನು ಶುಭ್ರ ವಸ್ತ್ರದ, ನೀಟಾದ ಕ್ರಾಪಿನ, ಶಿಸ್ತುಬದ್ಧ ಎಂಟು ವರ್ಷದ ಚಿಕ್ಕ ಹುಡುಗನ ಕಣ್ಣುಗಳಲ್ಲಿ ನೋಡುತ್ತಾನೆ. ಆದರೆ ಕೇವಲ ಈ ಹುಡುಗನನ್ನೆ ಎದುರಿಗಿಟ್ಟುಕೊಂಡು ಹೆಜ್ಜೆ ಹಾಕುವುದಿಲ್ಲ ಆತ. ಆತನಿಗೊಂದು ಅವನದೇ ವಯಸ್ಸಿನ ಜೊತೆಗಾರನನ್ನು ತಂದು ನಿಲ್ಲಿಸುತ್ತಾನೆ. ಆ ಹುಡುಗನಿಗೊಂದು ಬೋಳು ಬೋಳು ತಲೆ. ಒಂದೆರಡು ಗಾಯ, ಮಣ್ಣು ಮಣ್ಣು ಬಟ್ಟೆ. ಹರಕು ಚಪ್ಪಲಿ. ಕೈಲೊಂದು ಮುರುಕು ಗಾಡಿ. ಈ ಹುಡುಗನಿಗೆ, ಸಮವಸ್ತ್ರ-ಶಾಲೆಯಾದರೆ, ಅವನಿಗೂ ಸಮವಸ್ತ್ರವಿದೆ. ಜೊತೆಗೆ ಕೆಲಸ… ಅವರಿಬ್ಬರ ಸುತ್ತ ಪಾತ್ರವರ್ಗ ಎದ್ದು ನಿಲ್ಲುತ್ತವೆ. ಹುಡುಗನಿಗೊಂದು ಅಕ್ಕ, ಅಪ್ಪ-ಅಮ್ಮ, ಅವರ ಸುತ್ತಲಿನ ಜನ, ಪರಿಸರ. ಮತ್ತೊಬ್ಬ ಹುಡುಗ ಸುತ್ತಲಿನ ಜನ, ಪರಿಸರ, ವಿಷಯ ಎನ್ನುತ್ತ ಕತೆಯ ಹಂದರ ಗಟ್ಟಿಗೊಳ್ಳುತ್ತದೆ. ಇಬ್ಬರು ಹುಡುಗರ ನಡುವೆ ಬೇಲಿ ಅಡ್ಡ ನಿಲುತ್ತದೆ. ಬೇಲಿ ಅಡ್ಡಿಯಾಗುತ್ತದೆ. ಅದೇ ಬೇಲಿ ಕಳಚಿಕೊಳ್ಳುತ್ತದೆ. ಕತೆ ಮುಂದುವರೆಯುತ್ತದೆ… Read the rest of this entry »

ಬೇಯುವ ವಿಷಾದಗಳ ಹೊಸ್ತಿಲಲ್ಲಿ ಸ್ವಗತವೆಂಬ ಮೌನರಾಗ

with 3 comments

ಕಾರ್ತಿಕ್ ಪರಾಡ್ಕರ್ ಕಳಿಸಿದ “ದಿ ಬ್ಯಾಂಡ್ಸ್ ವಿಸಿಟ್” ಚಿತ್ರದ ಬರಹ ಕಳಿಸಿದ್ದಾರೆ. ಇದು ಒಂದು ಒಳ್ಳೆಯ ಚಿತ್ರ. ನಮ್ಮೊಳಗೆ ವಿಷಾದದೊಂದಿಗೆ ಆವರಿಸಿಕೊಳ್ಳುತ್ತಲೇ ಏನನ್ನೋ ಹೇಳಲು ಹೊರಟಂಥ ಚಿತ್ರ. ಎಲ್ಲಾದರೂ ಸಿಕ್ಕರೆ ಬಿಡಬೇಡಿ…ಸದಾ ಇಟ್ಟುಕೊಳ್ಳಬಹುದಾದ ಚಿತ್ರ.

ಕಳೆದು ಹೋಗುವುದನ್ನು ಹುಡುಕುವ ಸಿನಿಮಾಗಳು ವಿಶ್ವದ ಹಲವು ಭಾಷೆಗಳಲ್ಲಿ ಬಂದಿವೆ. ಕಳೆದು ಹೋದ ಪ್ರೇಮಿ, ಗೆಳೆಯ, ಅಮ್ಮ, ಶೂ…ಹೀಗೆ ಪಟ್ಟಿ ಬೆಳೆಯುತ್ತದೆ.ಆದರೆ ಮನುಷ್ಯನೊಬ್ಬ ತನ್ನನ್ನೇ ದಿನ ನಿತ್ಯದಲ್ಲಿ ಕಳೆದುಕೊಂಡರೆ? ಕಳೆದು ಹೋಗಿದ್ದೇನೆ ಎಂದು ಅರಿವಾಗದೆ ಬದುಕುತ್ತಿದ್ದರೆ??–40 ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ “ದಿ ಬ್ಯಾಂಡ್ಸ್ ವಿಸಿಟ್” ಎನ್ನುವ ಇಸ್ರೇಲಿ ಸಿನಿಮಾ ಚರ್ಚಿಸುವುದು ಇದೇ ವಿಷಯವನ್ನೇ.

ಈಜಿಪ್ಟಿನ ಅಲೆಗ್ಸಾಂಡ್ರಿಯಾ ಸೆರೆಮೋನಿಯಲ್ ಪೋಲಿಸ್ ಆರ್ಕೆಸ್ಟ್ರಾ, ಇಸ್ರೇಲಿನ ಅರಬ್ ಕಲ್ಚರ್ ಅಕಾಡೆಮಿಯಲ್ಲಿ ಕಾರ್ಯಕ್ರಮ ನೀಡಲು ಬಂದಿಳಿಯುತ್ತದೆ. ಆದರೆ ವಿಳಾಸ ತಪ್ಪಿ ಅನಾಮಿಕ ಊರಿನಲ್ಲಿ ನಿಂತುಬಿಡುತ್ತದೆ. ದಿಕ್ಕು ತೋಚದೆ ಪಕ್ಕದ ರೆಸ್ಟೋರೆಂಟಿನಲ್ಲಿ ಆಶ್ರಯ ಬೇಡುತ್ತದೆ.ಅಲ್ಲಿ ರಾತ್ರಿ ಕಳೆದು ಬೆಳಿಗ್ಗೆ ಬಸ್ಸಿಗೆ ಹೊರಡುತ್ತದೆ. ಇದು ಕತೆ. ಹೀಗೆ ಆರ್ಕೆಸ್ಟ್ರಾ ಗುಂಪಿನ 8 ಮಂದಿ,ಅತಿ ಮುಖ್ಯವಾಗಿ ತೌಫೀಕ್ ಪರಿಚಯವೇ ಇಲ್ಲದ ಊರೊಳಗೆ ತನ್ನನ್ನು ಕಂಡುಕೊಳ್ಳುವ ಕತೆಯಿದು.

ಇರಾನ್ ಕೊಲಿರಿನ್ ನಿರ್ದೇಶನದ ಮೊದಲ ಸಿನಿಮಾ. ಕತೆಯೂ ಈತನದ್ದೇ. 2007ರಲ್ಲಿ ಈ ಸಿನಿಮಾ ನಿರ್ಮಾಣವಾಯಿತು. ಮೌನವನ್ನು ಬಳಸಿ ವ್ಯಕ್ತಿಯ ಮನವನ್ನು ತೆರೆದಿಡುವ ತಂತ್ರ ಇಲ್ಲಿದೆ. ಹಾಸ್ಯಪ್ರಜ್ಞೆಯನ್ನು ಜೊತೆಗಿಟ್ಟುಕೊಂಡು ಕತೆ ಹೇಳುತ್ತಾನೆ ಕೊಲಿರಿನ್. Read the rest of this entry »

ಕ್ಯಾಸ್ಟ್ ಅವೇ-ಆತ್ಮವಿಶ್ವಾಸ ಬೆಳೆಸುವ ಅಮೃತಬಳ್ಳಿ !

with 3 comments

ಚೇತನಾ ತೀರ್ಥಹಳ್ಳಿಯವರು ಹೇಳಿದಂತೆ ಕ್ಯಾಸ್ಟ್ ಅವೇ ನಮ್ಮನ್ನು ತುಂಬಿಕೊಳ್ಳುವಂಥ ಅದ್ಭುತಚಿತ್ರ. ಒಂದು ಸಾಲಿನ ಕಥೆಗೆ ಹಲವು ರೀತಿಯಲ್ಲಿ ನೋಡುವಂಥ ದೃಷ್ಟಿಯನ್ನು ಸೃಷ್ಟಿಸಿದ್ದು ನಿರ್ದೇಶಕ ರಾಬರ್ಟ್ ಜೆಮಿಕೀಸ್. 2000 ನೇ ಸಾಲಿನಲ್ಲಿ ಬಿಡುಗಡೆಯಾದ ಇದು ಇಂಗ್ಲಿಷ್ ಮತ್ತು ರಷ್ಯನ್ ಭಾಷೆ ಯದ್ದು. ಇದಕ್ಕೆ ವಿಲಿಯಂ ಬೋಯ್ ಲೆಸ್ ಕಥೆ ಬರೆದವರು. ಒಟ್ಟೂ ಎಂಥ ಚೆಂದದ ಸಿನಿಮಾ ಎಂದರೆ ನಮ್ಮೊಳಗೆ ಆತ್ಮವಿಶ್ವಾಸದ ಅಮೃತಬಳ್ಳಿ ಬೆಳೆಸುವಷ್ಟು. 

ಕಣ್ಣು ಹಾಸಿದಷ್ಟು ದೂರ ಬರಿ ಉಪ್ಪು ನೀರು.

ಮರದ ದಿಮ್ಮಿಗಳದೊಂದು ಅಳ್ಳಕವಾದ ತೆಪ್ಪ. ಅದರ ಮೇಲೆ ಕಾಡು ಮನುಷ್ಯನ ಗೆಟಪ್ಪಿನ ಅವನು! ಜತೆಗಿದ್ದ ವಿಲ್ಸನ್ ಕೂಡ ಇದೀಗ ನೀರು ಪಾಲಾಗಿದ್ದಾನೆ. ನಾಲ್ಕು ವರ್ಷಗಳಿಂದ ಜತೆಗಿದ್ದ ಏಕೈಕ ಸಂಗಾತಿಯೂ ಈಗ ಇಲ್ಲವಾಗಿದ್ದಾನೆ…. ಅಕ್ಷರಶಃ ನಡುನೀರಲ್ಲಿ ಕೈಬಿಟ್ಟು ಹೋಗಿದ್ದಾನೆ.

ವಿಲ್ಸನ್… ಸಾರಿ ವಿಲ್ಸನ್… ಐ ಆಮ್ ಸಾರಿ… ವಿಲ್ಸನ್…

ಚಕ್ ನ ಕೂಗು ಎದೆಯನ್ನ ಕಲಕುತ್ತದೆ. ನೋಡುತ್ತ ಕುಂತ ನಮ್ಮ ಕಣ್ಣಲ್ಲೂ ನೀರು ತೊಟ್ಟಿಕ್ಕದಿದ್ದರೆ ಹೇಳಿ. 

ಜತೆಗಿದ್ದ ಮನುಷ್ಯನೊಬ್ಬ ಹೀಗೆ ಇಲ್ಲವಾಗಿದ್ದರೆ ಬಹುಶಃ ಇಷ್ಟೆಲ್ಲ ಸಂಕಟವಾಗ್ತಿರಲಿಲ್ಲವೇನೋ? ಹೌದು. ವಿಲ್ಸನ್ ಒಂದು…

ವಾಲಿ ಬಾಲು!

cast-away

ಕ್ಯಾಸ್ಟ್ ಅವೇ ಸಿನೆಮಾ ಇಷ್ಟವಾಗೋದೇ ಅದಕ್ಕೆ. ಕಂಡರಿಯದ ನಿರ್ಜನ ದ್ವೀಪದಲ್ಲಿ ಬರೋಬ್ಬರಿ ನಾಲ್ಕು ವರ್ಷ ಕಾಲ ಏಕಾಂಗಿ ಮನುಷ್ಯನೊಬ್ಬ ಬದುಕಿದ್ದೂ ಅಲ್ಲಿ ಯಾವ ಅಬ್ಬರ, ಅರಚಾಟಗಳು ಇಲ್ಲದೆ ಹೋದುದಕ್ಕೆ. ನಂಬಿ… ಸರಿಸುಮಾರು ಎಂಬತ್ತು ನಿಮಿಷ ಸಿನೆಮಾದಲ್ಲಿ ಮಾತುಕತೆಯೆ ಇಲ್ಲ, ಬರೀ ಕಥೆ. ಅಷ್ಟೂ ಹೊತ್ತು ಸ್ಕ್ರೀನಿನ ಮೇಲೆ ಕಾಣಿಸೋದು ಚಂಕ್ ಎನ್ನುವ ಅವನೊಬ್ಬನೇ ಆಸಾಮಿ. ಜೊತೆಗೆ ಅವನ ರಕ್ತಸಿಕ್ತ ಹಸ್ತದ ಪಡಿಯಚ್ಚು ಹೊತ್ತ, ಅದಕ್ಕೇ ಕಣ್ಣು, ಮೂಗು, ಬಾಯಿ ಬರೆದಿಟ್ಟ ‘ವಿಲ್ಸನ್’ ಅನ್ನುವ ವಾಲಿಬಾಲು.

ಆಗೀಗ ಅದರೊಟ್ಟಿಗೆ ಎರಡು ಮಾತಾಡುತ್ತ, ತೆಂಗಿನ ಕಾಯಿ ಹೆರೆದು ತಿನ್ನುತ್ತ, ಥೇಟು ಶಿಲಾಯುಗದ ಮನುಷ್ಯನ ಹಾಗೆ ಕಚಕ್ಕನೆ ಸಮುದ್ರದ ಮೀನಿಗೆ ಭರ್ಜಿ ಹಾಕಿ ಹಿಡಿದು ತಿನ್ನುತ್ತ, ಮರದ ಕೊರಡು ತಿಕ್ಕಿ ತಿಕ್ಕಿ ಬೆಂಕಿ ಹುಟ್ಟಿಸುವುದನ್ನ ಕಲಿತುಕೊಳ್ಳುತ್ತ…. ಮತ್ತೊಂದು ಮುಖ ಕಾಣದೇ ಹೊದರೂ ನಿಮಗೆ ಸಿನೆಮಾ ಬೋರ್ ಅನಿಸೋದೇ ಇಲ್ಲ!

ಅದೆಲ್ಲ ಆಗೋದು ಹೀಗೆ. 

ಫೆಡ್ ಎಕ್ಸ್ ಎಂಬ ಕೊರಿಯರ್ ಕಂಪೆನಿಯ ಪಾರ್ಸೆಲ್ ಜವಾಬ್ದಾರಿ ಹೊತ್ತ ಚಕ್, ಸಮಯಕ್ಕೆ ಬಹಳ ಮಹತ್ವ ಕೊಡುವ ಮನುಷ್ಯ. ಅವನಿಗೊಬ್ಬಳು ಪ್ರಿಯತಮೆ ಕೆಲ್ಲಿ. ಕ್ರಿಸ್ ಮಸ್ಸಿಗೆ ಮುನ್ನ ಪಾರ್ಸೆಲ್ ಡೆಲಿವರಿಗಾಗಿ ವಿಮಾನ ಹತ್ತಿ ಹೊರಡುತ್ತಾನೆ ಚಕ್, ಪ್ರೇಯಸಿ ಉಡುಗೊರೆಯಿತ್ತ ಅವಳ ಫೋಟೋ ಇರುವ ಗಡಿಯಾರವನ್ನ ಜೊತೆಗಿಟ್ಟುಕೊಂಡು. 

ಸಮುದ್ರದ ಮೇಲೆ ಹಾರುತ್ತಿರುವ ವಿಮಾನದಲ್ಲಿ ಇದ್ದಕ್ಕಿದ್ದ ಹಾಗೆ ತೊಂದರೆಯಾಗಿ ಅದು ಕ್ರ್ಯಾಶ್ ಆಗಿ ಬೀಳುತ್ತದೆ. ಒಳಗಿದ್ದವರೆಲ್ಲ ಸಮುದ್ರದ ಪಾಲಾಗುತ್ತಾರೆ. ಚಕ್, ಜೀವ ರಕ್ಷಕದ ಸಹಾಯದಿಂದ ಯಾವುದೋ ಒಂದು ದಡ ಸೇರುತ್ತಾನೆ. 

ಬರೀ ಒಂದಷ್ಟು ತೆಂಗಿನ ಮರಗಳು ತುಂಬಿಕೊಂಡ ಆ ಪುಟ್ಟ ದ್ವೀಪದಲ್ಲಿ ಈಗವನು ಒಬ್ಬಂಟಿ. ಎರಡು ದಿನ ‘ಯಾರಾದರೂ ಇದ್ದೀರಾ?’ ಎಂದವನು ಕೂಗುವುದರಲ್ಲೇ ಕಳೆದು ಹೋಗುತ್ತದೆ. ಮೂರನೆಯ ದಿನದ ಹೊತ್ತಿಗೆ, ಅವನಿಗೀಗ ಇಲ್ಲಿ ತಾನೊಬ್ಬನೇ ಜೀವ ಹಿಡಿದಿಟ್ಟುಕೊಳ್ಳಬೇಕಾಗಿರುವುದು ಅನಿವಾರ್ಯ ಎಂಬುದು ಅರ್ಥವಾಗುತ್ತದೆ. ಸಮುದ್ರದಲ್ಲಿ ತನ್ನೊಂದಿಗೆ ತೇಲಿ ಬಂದ ಕೊರಿಯರ್ ಪಾರ್ಸೆಲ್ ಗಳನ್ನೆ ಬಳಸಿಕೊಂಡು ಚಾಕು, ಬಲೆ ಇತ್ಯಾದಿಗಳನ್ನ ಮಾಡಿಕೊಳ್ಳುತ್ತಾನೆ. ಇದೇ ಹೊತ್ತಿಗೆ ತನ್ನ ಒಬ್ಬ ಸಾಥಿಯ ಹೆಣವೂ ಸಿಕ್ಕು, ಅದನ್ನು ಹೂತು ಹಾಕುತ್ತಾನೆ. ಇಲ್ಲಿ ಹೆಣದ ಕಾಲಿಂದ ಬೂಟ್ ತೆಗೆಯುವ ದೃಶ್ಯ ಮನುಷ್ಯನ ಅಸಹಾಯಕತೆಗೆ ಹಿಡಿದಿಟ್ಟ ಕನ್ನಡಿ. 

ಪ್ರೇಯಸಿ ಕೆಲ್ಲಿಯ ಭಾವಚಿತ್ರವೊಂದೇ ಚಕ್ ನ ಜೀವ ಹಿಡಿದಿಡುವ ಆಮ್ಲಜನಕ. ದಿನವೂ ಅದನ್ನು ನೋಡುತ್ತ, ಯಾವುದಾದರೂ ಹಡಗು ಇತ್ತ ಹಾಯಬಹುದೆಂದು ತವಕಿಸುತ್ತ, ಸಮುದ್ರ ದಾಟುವ ವ್ಯರ್ಥ ಪ್ರಯತ್ನ ಮಾಡುತ್ತ, ವಿಲ್ಸನ್ನನಿಗೆ ತಲೆ ಮೇಲೆರಡು ಗರಿ ಚುಚ್ಚಿ ಮತ್ತಷ್ಟು ಮನುಷ್ಯನನ್ನಾಗಿ ಭಾವಿಸಿಕೊಳ್ಳುತ್ತ ದಿನ ತಳ್ಳುತ್ತಾನೆ. ಅನಿವಾರ್ಯತೆ, ಬದುಕಿ ದಾರಿಗಳನ್ನ ರೂಪಿಸಿಕೊಡುತ್ತದೆ ಎಂಬ ಮಾತನ್ನ ಇಲ್ಲಿ ಸೊಗಸಾಗಿ ಚಿತ್ರಿಸಲಾಗಿದೆ. ಆ ದೃಶ್ಯಗಳನ್ನು ನೋಡುತ್ತಿರುವ ಅಷ್ಟೂ ಹೊತ್ತು ನಾವೇ ಕಳೆದುಹೋದವರ ಹಾಗೆ, ನಮ್ಮನ್ನು ಹುಡುಕಿಕೊಳ್ಳುವ ಹಾಗೆ, ಒಂಟಿತನದ ಭಾವ ಕಾಡುವ ಹಾಗೆ ಸಿನೆಮಾ ನಮ್ಮನ್ನು ತಟ್ಟುತ್ತದೆ. 

away-11

ಈ ಚಕ್ ಎಂಬ ಪಾತ್ರದ ಸಕಾರಾತ್ಮಕ ಮನೋಭಾವ ಅದ್ಭುತವಾದದ್ದು. ಪ್ರೇಯಸಿಯನ್ನ ಮತ್ತೆ ಸೇರುವ ಒಂದೇ ಉದ್ದೇಶದಿಂದ ಜೀವ ಹಿಡಿದಿಟ್ಟುಕೊಳ್ಳುವ ಆತ, ಕೊನೆಗೂ ಇರುವ ವಸ್ತುಗಳನ್ನೇ ಬಳಸಿಕೊಂಡು ತೆಪ್ಪ ಕಟ್ಟಿಕೊಳ್ಳುತ್ತಾನೆ. ಸಮುದ್ರದಲ್ಲಿ ಪ್ರಯಾಣ ಮಾಡುತ್ತ ಹಡಗೊಂದನ್ನು ತಲುಪಿ ಮರಳಿ ತನ್ನ ಊರಿಗೆ ಬಂದು ಸೇರುತ್ತಾನೆ ಕೂಡ. (ಇದನ್ನೆಲ್ಲ ಮಾತಿನಲ್ಲಿ ಕಟ್ಟಿಕೊಡುವುದು ಬಹಳ ಕಷ್ಟದ ಕೆಲಸ. ಈ ಥ್ರಿಲ್ ಅನ್ನು ನೋಡಿ ಅನುಭವಿಸಬೇಕಷ್ಟೆ). ಆದರೆ ಕೆಲ್ಲಿ, ಬದುಕಿನ ಅನಿವಾರ್ಯತೆಗೆ ಬಿದ್ದು ಮದುವೆಯಾಗಿಬಿಟ್ಟಿರುತ್ತಾಳೆ!

ಸಿನೆಮಾ ಸೂಕ್ಷ್ಮವಾಗುವುದು ಇಲ್ಲಿ. ನಿರ್ಜನ ದ್ವೀಪದಲ್ಲಿ ಒಂಟಿಯಾಗಿದ್ದು ಕೂಡ ಪ್ರೇಯಸಿಗಾಗಿ ಬದುಕಿ ಬರುವ ಚಕ್ ಒಂದು ಕಡೆ, ಎಲ್ಲ ಅನುಕೂಲಗಳೂ ಇರುವ ಜನ ನಿಬಿಡ ಭೂಮಿಯಲ್ಲಿದ್ದುಕೊಂಡೂ ಬದುಕು ಏಕಾಂಗಿಯಾಗಬಾರದೆಂದು ಮದುವೆಯಾಗುವ ಕೆಲ್ಲಿ ಒಂದು ಕಡೆ!

ದ್ವೀಪದಿಂದ ನಾಡಿಗೆ ಬಂದ ಮೇಲೆಯೂ ಚಕ್ ಒಂಟಿಯಾಗಿ ಉಳಿಯುತ್ತಾನೆ. ಈ ಹೊತ್ತಿಗೆ ಬಹುಶಃ ಅವನಿಗೆ ದ್ವೀಪದ ಬದುಕೇ ಹಿತವೆನಿಸಿರಲಿಕ್ಕೂ ಸಾಕು. ಹೀಗೆ ಉದ್ದಕ್ಕೂ ತಣ್ಣನೆ ಸಾಗುವ ಈ ಸಿನೆಮಾ, ಪಾರ್ಸೆಲ್ ಒಂದನ್ನ ಮರಳಿಸಲು ಹೋಗುವ ಚಕ್ ದಾರಿ ತಪ್ಪಿ ನಿಲ್ಲುವ ದೃಶ್ಯದೊಂದಿಗೆ ಕೊನೆಗೊಳ್ಳುತ್ತದೆ. 

~

ಒಟ್ಟಾರೆ ಕ್ಯಾಸ್ಟ್ ಅವೇ ಸಿನೆಮಾದ ಚಿತ್ರ ಕಥೆ ಒಂದೇ ಸಾಲಿನಲ್ಲಿ ಮುಗಿದುಹೋಗುವಂಥದ್ದು. ಆದರೂ ಇದನ್ನು ಬೇರೆ ಬೇರೆ ದೃಷ್ಟಿಕೋನಗಳಿಂದ ನೋಡಬಹುದು. ‘ಅಗತ್ಯವೇ ಅನ್ವೇಷಣೆಯ ತಾಯಿ’ ಎನ್ನುವ ಸುಪ್ರಸಿದ್ಧ ಸೂಕ್ತಿಯ ಎಳೆಯಿಂದ ಇದನ್ನು ನೋಡಬಹುದು. ಈ ಸಿನೆಮಾ ಸಕಾರಾತ್ಮಕ ಮನೋಭಾವಕ್ಕೆ ಉದಾಹರಣೆಯಾಗಬಲ್ಲದು. ಪ್ರೇಮದ ತಾಕತ್ತನ್ನು ಬಿಂಬಿಸಲೂಬಲ್ಲದು. ಸಮಯದ ಹಿಂದೋಡುವ ಮನುಷ್ಯನಿಗೆ, ಕಾಲ ನಿನಗಾಗಿ ಕಾಯುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ಇದು ರವಾನಿಸುವುದು. ಅಥವಾ, ‘ಯಾವುದೇ ಉದ್ದೇಶ ಯಾಕೆ? ಸುಮ್ಮನೆ ಸಿನೆಮಾವನ್ನು ಸಿನೆಮಾ ಆಗಿ ನೋಡಿ’ ಎನ್ನುವಿರಾದರೆ, ತಾಂತ್ರಿಕ ಅಂಶಗಳಿಂದಾಗಿ ಶ್ರೀಮಂತವಾಗಿರುವ ಇದನ್ನು ಬರೀ ‘ನೋಡುವ ಖುಷಿ’ಗಾಗಿಯೂ ನೋಡಬಹುದು. 

ಹೆಸರಿಗೆ ಸಾಕಷ್ಟು ಪಾತ್ರಗಳಿದ್ದರೂ ಕ್ಯಾಸ್ಟ್ ಅವೇ ಅವಲಂಬಿತವಾಗಿರುವುದು ಹಾಗೂ ಕೆಲ್ಲಿ ಪಾತ್ರಗಳ ಮೇಲೆ. ಅದರಲ್ಲೂ ಮುಖ್ಯವಾಗಿ ಚಕ್ ಪಾತ್ರದ ಮೇಲೆ. ಚಕ್ ನೋಲ್ಯಾಂಡ್ ಆಗಿ ಟಾಮ್ ಹ್ಯಾಂಕ್ಸನ್ ಅವರದು ಅದ್ಭುತ ಅಭಿನಯ. ಏಕಾಂಗಿತನದ ಭಾವವನ್ನ, ನಿರ್ಲಿಪ್ತತೆಯನ್ನ ಅವರು ಅಭಿವ್ಯಕ್ತಪಡಿಸಿರುವ ರೀತಿ ಬೆರಗುಗೊಳಿಸುವಂಥದ್ದು. ಕೆಲ್ಲಿ ಪಾತ್ರದಲ್ಲಿ ಹೆಲೆನ್ ಹಂಟ್ ಚೆನ್ನಾಗಿ ನಟಿಸಿದ್ದರೂ ಅದು ನಮ್ಮನ್ನು ಮುಟ್ಟುವುದಿಲ್ಲ. ಒಂದೇ ಲೊಕೇಶನ್ನಿನಲ್ಲಿ ದೃಶ್ಯಗಳು ಬೋರ್ ಬರದಂತೆ ನಡೆಸಿರುವ ಛಾಯಾಗ್ರಹಣವನ್ನು ಮೆಚ್ಚಲೇಬೇಕು. ಜೊತೆಗೆ, ಇಂಥದೊಂದು ಸಿನೆಮಾ ತೆಗೆಯುವ ಸಾಹಸಕ್ಕೆ ಕೈಹಾಕಿ ಗೆದ್ದ ರಾಬರ್ಟ್ ಜೆಮೆಕಿಸ್ ಎಂಬ ನಿರ್ದೇಶಕನಿಗೆ ಹ್ಯಾಟ್ಸ್ ಆಫ್ ಹೇಳುವುದನ್ನು ಯಾರೂ ಮರೆಯಬಾರದು!

Written by chetana Teerthahalli

April 28, 2009 at 7:48 am

ಹುಳಿ ಮುಪ್ಪೇ ?…ಎಂದಿಗೂ ಇಲ್ಲ !

without comments

ಟೀನಾ ಶಶಿಕಾಂತ್ ಅವರು ಬರೆದಿರುವ ಈ ಚಿತ್ರ ಈಗಾಗಲೇ ಮುದುಕರಾಗಿ ರುವ ಯುವಕರನ್ನು ಚೇತನಗೊಳಿಸುವಂಥದ್ದು.  ನೋಡಲೇಬೇಕಾದ ಚಿತ್ರ.

ಸುಮಾರು  ಜನರಿಗೆ ವೃದ್ಧಾಪ್ಯ  ಒಂದು ಹೊರೆ. “ದೇವರೇ, ವಯಸ್ಸಾಗಿ ಸಾಯೋದು ಬೇಡಪ್ಪ, ಮೊದಲೇ ಹೋಗಿಬಿಡಬೇಕು !’ ಎಂದು ಸುಮಾರು ಜನ ಹೇಳುವುದು ಕೇಳಿದ್ದಿದೆ. ಹಿರಿಯರ ಬಗೆಗಿನ ಯುವಜನರ ತಾತ್ಸಾರ ಕೂಡ ಅವರನ್ನು ಈ ಸ್ಥಿತಿಗೆ ತಳ್ಳುವುದು ಸಾಮಾನ್ಯ. ಇತ್ತೀಚಿನ ಚಲನಚಿತ್ರಗಳು ಇಂಥ ಹಲವಾರು ಹಿರಿಯರಿಗೆ ನಮಿಸುತ್ತಾ ಬಂದಿರುವುದು ಸಂತಸದ ವಿಚಾರ. ಅನುಪಮ್ ಖೇರ್ ರ ಮೊದಲನೇ ಚಲನಚಿತ್ರ “ಸಾರಾಂಶ್’ ತನ್ನ ಅಸಹಾಯಕ ಪರಿಸ್ಥಿತಿಯನ್ನು ಮೀರಿ ನಿಲ್ಲಲೆಳಸುವ ಗಟ್ಟಿ ಮನಸ್ಸಿನ ವೃದ್ಧನೊಬ್ಬನ ಪಕ್ವ ಚಿತ್ರಣವನ್ನು ನೀಡುತ್ತದೆ. ಅಮಿತಾಬ್ ರ “ಬಾಘ್‌ಬಾನ್’ ಇಳಿವಯಸ್ಸಿನ  ದಂಪತಿಯ ಪ್ರೇಮ, ಮಕ್ಕಳ ಉಪೇಕ್ಷೆ ಮತ್ತು ಅದನ್ನು ವಿರೋಧಿಸಿ ಹೊಸ ದಾರಿ ತುಳಿಯುವ ಹಿರಿಯರ ಕತೆ ಹೇಳುತ್ತದೆ. “ಗಾಳಿಪಟ’ ದ ಅನಂತನಾಗ್ ತಮ್ಮ ದೈಹಿಕ ತೊಂದರೆಯನ್ನೂ ಲೆಕ್ಕಿಸದೇ ಕಾಡು ಹಂದಿಯ ಬೇಟೆಗೆ ಹುಡುಗರೊಡನೆ ಗಡದ್ದಾಗಿ ಹೊರಡುತ್ತಾರೆ. ಇತ್ತೀಚಿನ ಚಲನಚಿತ್ರಗಳಲ್ಲಿ ಕಂಡು ಬರುತ್ತಿರುವ ಹಿರಿಯ ಪಾತ್ರಗಳು ತಮ್ಮ ಗಟ್ಟಿತನವನ್ನು ಸಫಲವಾಗಿ ತೋರುತ್ತಿರುವುದು ಒಳ್ಳೆಯ ಬೆಳವಣಿಗೆ. 

theworldsfastestindianpic1

2005 ರಲ್ಲಿ ಬಿಡುಗಡೆಯಾದ ಆಂಗ್ಲ ಚಲನಚಿತ್ರ “ದ ವರ್ಲ್ಡ್ಸ್  ಫಾಸ್ಟೆಸ್ಟ್ ಇಂಡಿಯನ್’ಚಲನಚಿತ್ರದ ಕಥೆ ನಿಜವಾದ ವ್ಯಕ್ತಿಯೊಬ್ಬನದು. ನಾಯಕ ಬರ್ಟ್ ಮನ್ರೋನ ಪಾತ್ರ ವಹಿಸಿರುವವರು ಸುಪ್ರಸಿದ್ಧ ನಟ, ಆಸ್ಕರ್ ಪ್ರಶಸ್ತಿ ವಿಜೇತ ಆಂಥನಿ ಹಾಪ್ಕಿನ್ಸ್, ಚಲನಚಿತ್ರದ ಶೀರ್ಷಿಕೆಯಲ್ಲಿರುವ “ಇಂಡಿಯನ್’ ಎಂಬುದು ಒಂದು ರೀತಿಯ ಮೋಟರ್ ಬೈಕಿನ ಹೆಸರು. ಬರ್ಟ್ ಮನ್ರೋ (1899-1978)  ನ್ಯೂಜಿಲ್ಯಾಂಡಿನ  ಇನ್ವರ್ ಕಾರ್ಗಿಲಿನಲ್ಲಿ ತನ್ನದೇ ಗುಂಗಿನಲ್ಲಿ ಬದುಕುವ ಮನುಷ್ಯ. ಆತನ ಬಳಿಯಲ್ಲಿ ೧೯೨೦ ರ ಮಾದರಿಯ ಒಂದು ಇಂಡಿಯನ್  ಮೋಟಾರ್ ಸೈಕಲ್. ಬರ್ಟ್ ಮನ್ರೋಗೆ  ಈ ವಾಹನವೆಂದರೆ ಪರಮ ಪ್ರೀತಿ. ತನ್ನ ಜೀವನದ ಪ್ರತಿ ದಿನವೂ ಬೈಕಿನ ರೇಸು ಮಾಡುತ್ತ ಕಳೆದಿರುವ ಬರ್ಟ್ ಮನ್ರೋ ನ್ಯೂಜಿಲೆಂಡಿನ ಹಲವಾರು ಮೊಬೈಕ್ ರೇಸಿಂಗ್ ದಾಖಲೆಗಳನ್ನು ಮಾಡಿದ್ದ. ಆತನ ಹಳೆಯ ಇಂಡಿಯನ್ ಬೈಕಿನ ಮೇಲೆ ಹಲವಾರು ಪ್ರಯೋಗ ಮಾಡಿ ಅದನ್ನು ಅಭಿವೃದ್ಧಿಪಡಿಸಿದ್ದ ಕೂಡ ! 1960ನೆಯ ಸುಮಾರಿಗೆ ಬರ್ಟ್ ಮನ್ರೋಗೆ ಹೃದಯದ ಕಾಯಿಲೆ ಬಂತು. ಅದರ ಜತೆಗೇ ವೃದ್ಧಾಪ್ಯದೊಡನೆ ಬರುವ ಪ್ರಾಸ್ಟೇಟ್ ತೊಂದರೆ ಹಾಗೂ ಕಿವುಡತನಗಳೂ ಕೂಡ. ಆದರೆ ಮನ್ರೋನನ್ನು ಕಾಡುತ್ತಿದ್ದುದು ಯಾವುದೇ ದೈಹಿಕ ತೊಂದರೆಗಳಲ್ಲ. ಆತನಿಗೆ ಇದ್ದಿದ್ದು ಒಂದೇ ಕನಸು. ಆಗಿನ ಕಾಲದಲ್ಲಿ ಸ್ವೀಡ್ ರೇಸರುಗಳ  ಸ್ವರ್ಗವೆನೆಸಿಕೊಂಡಿದ್ದ ಅಮೆರಿಕದ ಯುಟಾ ಪ್ರಾಂತ್ಯದ ಬಾನ್ವಿಲ್‌ನ ಉಪ್ಪು ಮೈದಾನದಲ್ಲಿ  ನಡೆಯುವ ವಾರ್ಷಿಕ  ಸ್ವೀಡ್ ವೀಕ್ ಸ್ಪರ್ಧೆಯಲ್ಲಿ ತನ್ನ ಬೈಕಿನೊಂದಿಗೆ  ಭಾಗವಹಿಸಿ ಒಂದು ವೇಗದ ದಾಖಲೆ ನಿರ್ಮಿಸಬೇಕೆನ್ನುವುದು.

ತನ್ನ ಕನಸನ್ನು ಹೇಗಾದರೂ ಮಾಡಿ ನನಸು ಮಾಡಲೇಬೇಕೆಂದು ಹಠ ತೊಟ್ಟ ಮನ್ರೋ, ಮನೆಯನ್ನು ಅಡವಿಟ್ಟು, ಕೆಲ ಸ್ನೇಹಿತರ ಸಹಾಯ ಪಡೆದು ತನ್ನ ಬೈಕಿನೊಡನೆ ಹಡಗಿನಲ್ಲಿ ಅಮೆರಿಕಕ್ಕೆ ಹೊರಡುತ್ತಾನೆ. ಆತನ ಬಳಿ ಹೆಚ್ಚಿಗೆ ಹಣವಿಲ್ಲ. ಆತ ಇಳಿದ ಬಂದರು ಲಾಸ್ ಏಂಜೆಲೀಸ್‌ನಿಂದ ಆತ ಹೋಗಬೇಕಿರುವ ಯೂಟಾದ ಬಾನ್ವಿಲ್ ಬಹಳ ದೂರವಿದೆ. ಕಡಿಮೆ ಬೆಲೆಯ ಕಾರುಗಳನ್ನು ಮಾರುವ ಏಜೆಂಟನೊಡನೆ ಸ್ನೇಹ ಬೆಳೆಸುವ ಮನ್ರೋ ಅಗ್ಗಕ್ಕೆ ಕಾರೊಂದನ್ನು ಖರೀದಿಸಿ ಅದರ ದುಡ್ಡನ್ನು ಮೆಕ್ಯಾನಿಕ್ ಕೆಲಸ ಮಾಡಿ ತೀರಿಸುತ್ತಾನೆ. ತನ್ನ ಬೈಕನ್ನು ಕಸ್ಟಮ್ಸ್ ಅಧಿಕಾರಿಗಳಿಂದ ಬಿಡಿಸಲೂ ಪರದಾಡಬೇಕಾಗುತ್ತದೆ. ಆತ ಇಳಿದುಕೊಂಡಿರುವ ಹೋಟೆಲಿನಲ್ಲಿ ಕೆಲಸ ಮಾಡುವ ಟ್ರಾನ್ಸ್ ವೆಸ್ಟೈಟ್ (ಹೆಣ್ಣು ವೇಷ ಧರಿಸುವ ಗಂಡು) ಟೀನಾ,  ಮನ್ರೋನ ಸ್ನೇಹಪೂರಿತ ನಡವಳಿಕೆಗೆ ಮಾರುಹೋಗಿ ಆತನಿಗೆ ಸಹಾಯ ಮಾಡುತ್ತಾಳೆ.  ಕೊನೆಗೂ ತನ್ನ ಕಾರನ್ನು ಪ್ರಯಾಣಕ್ಕೆ ಸಜ್ಜುಗೊಳಿಸುವ ಮನ್ರೋ ಬಾನ್ವಿಲ್‌ಗೆ ಹೊರಡುತ್ತಾನೆ. ದಾರಿಯಲ್ಲಿ ಆತನಿಗೆ ಹಲವಾರು ಜನ ಪರಿಚಯವಾಗುತ್ತಾರೆ.  ಮನ್ರೋನ ಪ್ರಾಸ್ಟೇಟ್ ತೊಂದರೆಗೆ ತನ್ನ ವಿಶೇಷ ಔಷಧಿ ನೀಡುವ ಅಮೆರಿಕನ್ ಮೂಲ ನಿವಾಸಿ, ಆತನ ಕಾರು, ರಿಪೇರಿ ಮಾಡುವ ವೃದ್ಧ ಪ್ರೇಯಸಿ, ಒಬ್ಬ ಯುವ ಸೈನಿಕ.. ಇದರೆಲ್ಲದರ  ಹಿನ್ನೆಲೆಯಲ್ಲಿ ಅರವತ್ತನೆಯ ದಶಕದ ಪೂರ್ವ ಅಮೆರಿಕ ಪ್ರಾಂತ್ಯ.

ಹೇಗೋ ಬರ್ಟ್ ಮನ್ರೋ ತನ್ನ ಗುರಿ ಬಾನ್ವಿಲ್  ತಲುಪಿದರೆ ಅಲ್ಲಿನ ರೇಸಿಗೆ ಕೆಲವು ತಿಂಗಳ ಮೊದಲೇ ನೋಂದಾಯಿಸಬೇಕಿರುವ ಕಾರಣ ಆತನನ್ನು ರೇಸಿನಲ್ಲಿ ಭಾಗವಹಿಸುವುದರಿಂದ ತಡೆಯಲಾಗುತ್ತದೆ. ನಿರಾಶನಾದರೂ ಮನ್ರೋ  ಎದೆಗೆಡುವುದಿಲ್ಲ. ತನ್ನ ಹಲವು ಸ್ನೇಹಿತರ ಸಹಾಯ ಪಡೆದು ಸ್ಪರ್ಧೆಯಲ್ಲಿ ಹೇಗೋ ಪ್ರವೇಶ ಗಿಟ್ಟಿಸಿಯೇ ಬಿಡುತ್ತಾನೆ. ಆತನ ವೈಕು ಬಹಳ ಹಳೆಯದು. ಅದರ ಬ್ರೇಕುಗಳು ಸರಿಯಾಗಿಲ್ಲ. ಟಯರುಗಳು ಸವೆದು ಹೋಗಿವೆ. ಮನ್ರೋನ ಬಳಿ ಬೈಕರುಗಳಿಗೆ ಬೇಕೇಬೇಕಾದ ಹೆಲ್ಮೆಟ್ ಅಥವಾ ದೇಹದ ರಕ್ಷಾ ಕವಚ ಇಲ್ಲ. ಎಲ್ಲರೂ ಮೊದ ಮೊದಲು ಆತನನ್ನು ನೋಡಿ  ಕಿಚಾಯಿಸಿದರೂ ಬರಬರುತ್ತ ಆತನ ಇಚ್ಛಾ ಶಕ್ತಿಗೆ ಗೌರವ ತೋರುತ್ತಾರೆ. ಎಲ್ಲರೂ ದುಡ್ಡು ಸೇರಿಸಿ ಮನ್ರೋಗೆ ಕಾಣಿಕೆ ನೀಡುತ್ತಾರೆ. ಮನ್ರೋ ರೇಸಿಗೆ ಸಜ್ಜಾಗುತ್ತಾನೆ. ಆತನಿಗೆ ತಾನು ರೇಸಿನಿಂದ ಬದುಕಿ ಬರುವೆನೆಂಬ ಯಾವ ನಂಬಿಕೆಯೂ ಇಲ್ಲ. ಆತನ ಸ್ನೇಹಿತರಿಗೂ ಇಲ್ಲ.  ಮನ್ರೋಗೆ ತನ್ನ ಆಸೆ ಪೂರೈಸುತ್ತಿರುವ ಹರುಷ. ರೇಸು ಮುಗಿಸಲು ಆಗುವುದೆ ಎಂಬ ಸಂಶಯ.

ಅಂದು ಅರವತ್ತೆಂಟು ವಯಸ್ಸಿನ ಬರ್ಟ್ ಮನ್ರೋ ಮಾಡಿದ ಗಂಟೆಗೆ 201 ಮೈಲಿನ ವೇಗದ ದಾಖಲೆಯನ್ನು ಭಾರತೀಯ ಮೂಲದ ಆದಿತ್ಯ ಅತ್ತಾವರ್ 2008 ರಲ್ಲಿ ಮುರಿಯಲು ಸಾಧ್ಯವಾಯಿತು ! ಇಂದಿನವರೆಗೂ ಆತನ ಹಲವಾರು ದಾಖಲೆಗಳನ್ನು ಮುರಿಯಲು ಯಾರಿಂದಲೂ ಸಾಧ್ಯವಾಗಿಲ್ಲ.                                    (ವಿಜಯ ಕರ್ನಾಟಕ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾದದ್ದು)

ಸುಧನ್ವಾ ಬರೆದ “ಡ್ಯುಯಲ್ “

without comments

“ಡ್ಯುಯಲ್ ” ಒಂದು ಅತ್ಯುತ್ತಮ ಚಿತ್ರ. ಆ ಕುರಿತು ಸುಧನ್ವಾ ದೇರಾಜೆ ವಿಜಯ ಕರ್ನಾಟಕದ ಯುಗಾದಿ ವಿಶೇಷಾಂಕಕ್ಕೆ ಬರೆದ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ.

ದ್ದುದ್ದ ಚಾಚಿಕೊಂಡಿರುವ ನುಣ್ಣನೆ ರಸ್ತೆ. ಮನುಷ್ಯರ ವಸತಿ-ವಾಹನಗಳ ಸುಳಿವೇ ಅಪರೂಪ. ಫಿಯೆಟ್‌ನಂತಿರುವ ಕೆಂಪು ಕಾರಿನಲ್ಲಿ, ವ್ಯಾಪಾರದ ಕೆಲಸ ನಿಮಿತ್ತ ಹೊರಟಿದ್ದಾನೆ ಡೇವಿಡ್ ಮೇನ್. ರೇಡಿಯೊದಲ್ಲಿ ಯಾರದ್ದೋ ಸಂಭಾಷಣೆಗೆ ನಗುತ್ತಾ ಅವನದ್ದು ನಿರಾಯಾಸ ಚಾಲನೆ.

ಅದ್ಯಾವುದೋ ಒಂದು ಲಡಕಾಸು ಲಾರಿ, 40 ಟನ್ ಭಾರದ್ದು, 18 ಚಕ್ರಗಳದ್ದು ! ಮಾರ್ಗ ಮಧ್ಯೆ ಸಿಕ್ಕಿದೆ. ತುಕ್ಕು ಹಿಡಿದ ದೊಡ್ಡ ಟ್ಯಾಂಕರ್ ಹೊಂದಿರುವ ಅದರಲ್ಲಿ Highly Inflammable ಎಂಬ ಬರೆಹವೂ, ಮೂರು ನಂಬರ್ ಪ್ಲೇಟ್‌ಗಳೂ ! ಫ್ರಂಟ್ ಎಂಜಿನ್ ಹೊಂದಿರುವ ಅದು, ಎದುರಿರುವ ಕೊಳವೆಯಲ್ಲಿ ರೈಲಿನಂತೆ ಬುಸುಬುಸು ಹೊಗೆ ಬಿಡುತ್ತಿದೆ. ಕಾರಿಗೆ ಸರಿಯಾಗಿ ದಾರಿಯೂ ಬಿಡಲೊಲ್ಲದು. ‘ಥೂ, ಇವನಿಗೆ ಗಾಡಿ ಓಡಿಸಲೂ ಬರುವುದಿಲ್ಲ’ ಎಂಬ ಗೊಣಗಾಟದಿಂದ ಆರಂಭವಾದ ಡೇವಿಡ್‌ನ ಅಸಹನೆ, ನಿಧಾನ ಸ್ಪರ್ಧೆಯಾಗಿ ಮಾರ್ಪಡುತ್ತಿದೆ. ಈತ ಕಾರು ನಿಲ್ಲಿಸಿದರೆ ನಿಲ್ಲುವ, ಹೊರಟರೆ ದಾರಿಗಡ್ಡ ಬರುವ ಲಾರಿ ಅದು. ಏನೋ ಆ ಡ್ರೈವರು ಆಟ ಆಡುತ್ತಿದ್ದಾನೆಂದು ತಿಳಿದು ಥ್ರಿಲ್ಲಾಗುತ್ತಿದ್ದರೆ ನಿಧಾನವಾಗಿ ಅದು ಆತಂಕಕ್ಕೆಡೆ ಮಾಡಿದೆ. ಸಮತಟ್ಟು ರಸ್ತೆಯಲ್ಲಂತೂ ಕಾರು 80 ಕಿಮೀ ವೇಗದಲ್ಲಿ ಸಾಗಿದರೂ, ಘ್ರಾ…..ಅನ್ನುತ್ತಾ ಬಿಡದೆ ಬೆಂಬತ್ತುತ್ತಿದೆ ಆ ದೈತ್ಯ ಟ್ರಕ್. ಪೊಲೀಸರಿಗೆ ಕರೆ ಮಾಡಲು, ರಸ್ತೆ ಪಕ್ಕದ ಟೆಲಿಫೋನ್ ಬೂತ್ ಹೊಕ್ಕರೆ, ಅದನ್ನೇ ಧ್ವಂಸ ಮಾಡುತ್ತಿದೆ. ಮುಂದೆ ಹೋಗೆಂದು ಆಗೀಗ ಲಾರಿ ಡ್ರೈವರ್ ಕೈ ಬೀಸುತ್ತಾನೆ. ಓವರ್‌ಟೇಕ್ ಮಾಡಹೊರಟರೆ…ಅಬ್ಬಾ ಜುಂಮ್….! ಆ ಟ್ರಕ್ ಚಾಲಕ, ಡೇವಿಡ್‌ನನ್ನು ಕೊಲ್ಲಲೆಂದೇ ಹುಟ್ಟಿದವನಂತಿದ್ದಾನೆ. ಈ ಪಯಣ ಎಲ್ಲಿವರೆಗೆ?ಸ್ಟೀವನ್ ಸ್ಪಿಲ್‌ಬರ್ಗ್ ಎಂದರೆ ಎಲ್ಲರಿಗೂ ನೆನಪಾಗದಿರಬಹುದು, ಆದರೆ ಆತನ ನಿರ್ದೇಶನದಲ್ಲಿ 1993 ರಲ್ಲಿ ಬಿಡುಗಡೆಯಾದ ‘ಜುರಾಸಿಕ್ ಪಾರ್ಕ್’ ಗೊತ್ತಿರಲೇಬೇಕು. ಅಂತಹ ನಿರ್ದೇಶಕ ಸ್ಪಿಲ್‌ಬರ್ಗ್ ತನ್ನ ೨೪ನೇ ವಯಸ್ಸಿನಲ್ಲಿ ನಿರ್ದೇಶಿಸಿದ ಮೊದಲ ಸಿನಿಮಾ ‘ಡ್ಯುಯಲ್’(DUEL). 1971ರಲ್ಲಿ ಬಿಡುಗಡೆಯಾದ ಇದೊಂದು ಕಾರು-ಲಾರಿಯ ದ್ವಂದ್ವಯುದ್ಧ. ಆಗಲೇ ಕಿರು ಚಿತ್ರಗಳಿಗೆ ನಿರ್ದೇಶನ-ಸಹ ನಿರ್ದೇಶನ ಮಾಡಿದ್ದ. ಟಿವಿ ಸೀರಿಯಲ್‌ಗಳಿಗೆ ಕೆಲಸ ಮಾಡಿದ್ದ ಸ್ಪಿಲ್‌ಬರ್ಗ್, ಡ್ಯುಯೆಲ್ ಚಿತ್ರದ ಬಳಿಕ, ಹಾಲಿವುಡ್‌ನ ಮಹೋನ್ನತ ನಿರ್ದೇಶಕ-ನಿರ್ಮಾಪಕನಾಗಿ ರೂಪುಗೊಳ್ಳುತ್ತ ಹೋದ. ರಾಶಿ ಸಂಪತ್ತಿನ ಒಡೆಯನಾಗಿ ಮೆರೆಯತೊಡಗಿದ. ಮೂರು ಆಸ್ಕರ್ ಪ್ರಶಸ್ತಿಗಳನ್ನೂ ಗೆದ್ದುಕೊಂಡ. ಡ್ಯುಯೆಲ್ ಅನ್ನು ಟಿವಿಗಾಗಿ ನಿರ್ಮಿಸಿದ್ದರೂ ಅದು ಕೆಲವೆಡೆ ಥಿಯೇಟರ್‌ಗಳಲ್ಲೂ ಬಿಡುಗಡೆಯಾಗಿ ಸಿನಿಮಾಸಕ್ತರ ಗಮನ ಸೆಳೆಯಿತು.

Fear is the driving force ಎನ್ನುವ ಅಡಿ ಶೀರ್ಷಿಕೆಯ, ಈ ಸಿನಿಮಾ ರಿಚರ್ಡ್ ಮ್ಯಾತ್‌ಸನ್‌ನ ಸಣ್ಣ ಕತೆ ಆಧರಿಸಿದ್ದು. ಚಿತ್ರಕತೆಯನ್ನು ಬರೆದವನೂ ಅವನೇ. ಅಷ್ಟಕ್ಕೂ ಇದರಲ್ಲಿ ಅಂಥಾ ಕತೆಯೇನೂ ಇಲ್ಲ. ಮಾತೂ ತೀರ ಕಡಿಮೆ. ಅಷ್ಟಲ್ಲದೆ ಹಾಡು, ಹೀರೋಯಿನ್ ಇಲ್ಲದೆಯೂ ಒಂದೂವರೆ ಗಂಟೆ ಕಾಲ, ನೋಡುಗ ಅತ್ತಿತ್ತ ಮಿಸುಕದಂತೆ ಮಾಡಬಲ್ಲ ಶಕ್ತಿ ಈ ಸಿನಿಮಾಕ್ಕಿದೆ. ಇದರಲ್ಲಿ ಕಾರಿನ ಡ್ರೈವರ್‌ಗೆ ಪ್ರತಿ ಪಾತ್ರವಾಗಿ ಕಾಣಿಸಿಕೊಳ್ಳುವ ಟ್ರಕ್‌ನ್ನು ಈಗಲೂ ಸುರಕ್ಷಿತವಾಗಿ ಕಾಪಿಡಲಾಗಿದೆ. ಆ ಬಗ್ಗೆ ವಿವರ ತಿಳಿಯಬೇಕಾದರೆ, ಫೋಟೊ ನೋಡಬೇಕಾದರೆ www.stlouisdumptrucks.com/Duel/index.html ಇಲ್ಲಿಗೆ ಹೋಗಬಹುದು.

ಕಾರು-ಟ್ರಕ್‌ಗಳ ರೇಸ್‌ನ ಈ ಸಿನಿಮಾಕ್ಕೆ ಅತ್ಯಂತ ನಿಖರವಾಗಿ ಕ್ಯಾಮೆರಾ ಹಿಡಿದವನು ಜ್ಯಾಕ್ ಎ. ಮಾರ್ತಾ .24 ವರ್ಷದ ನಿರ್ದೇಶಕನಿಗೆ67 ವರ್ಷದ ಕ್ಯಾಮೆರಾಮ್ಯಾನ್. ಒಂದೇಒಂದು ಶಾಟ್ ಕೂಡಾ ವ್ಯರ್ಥ ಅನ್ನಿಸದಂತೆ, ಸಿನಿಮಾದ ಬಿಗಿಯನ್ನು ಕಾಪಾಡಿಕೊಂಡದ್ದರಲ್ಲಿ ಜ್ಯಾಕ್ ಪಾಲು ದೊಡ್ಡದಿರಬಹುದು. ತೆರೆಯಲ್ಲಿ ಕಾರಿನ ಓಟ ನೋಡುತ್ತಾ ಕೊಂಚ ತಲೆತಿರುಗಿದಂತಾದರೆ ಈತನನ್ನು ನೆನೆಯಬೇಕು ! ಚಿತ್ರದ ಬಹುಭಾಗ ವೇಗದ ಚಲನೆಯೇ ಇರುವುದರಿಂದ, ಚಲಿಸುವ ಬಿಂಬಗಳನ್ನು ನಿಖರವಾಗಿ ಹಿಡಿಯುವುದು ಸುಲಭವೇನಲ್ಲ. ದಾರಿ ಮಧ್ಯೆಯ ಹೋಟೆಲ್‌ನಲ್ಲಿ ಡೇವಿಡ್ ಕುಳಿತು, ಟ್ರಕ್ ಚಾಲಕನನ್ನು ಹುಡುಕುವ ದೃಶ್ಯಗಳಲ್ಲಿ, ಮಾರ್ತಾ ಕ್ಯಾಮೆರಾ ನಮ್ಮ ಎದೆ ಬಡಿತವನ್ನು ಹಿಡಿಯುತ್ತದೆ. ಎಷ್ಟು ಬೇಕೋ ಅಷ್ಟೇ, ಎಲ್ಲಿ ಬೇಕೋ ಅಲ್ಲೇ, ಕ್ಯಾಮೆರಾ ಒಡ್ಡಿದ್ದಾನೆ ಆತ. ಕೊನೆಯ ದೃಶ್ಯವನ್ನಂತೂ ಟೈಟಾನಿಕ್ ತೋರಿಸಿದ ಹಾಗೆ, ಒಂದು ದೈತ್ಯಾಕಾರವನ್ನು ಚಿತ್ರಿಸಿರುವ ರೀತಿ ಆತನ ಸಾಮರ್ಥ್ಯದ ಸಿದ್ಧಿಯಂತಿದೆ.

ಡೇವಿಡ್ ಪ್ರಯಾಣ ಹೊರಟಿರುವ ಕಾರಿನ ರೇಡಿಯೊದಲ್ಲಿ ಯಾವುದೋ ಕುಟುಂಬದ ಸಮಸ್ಯೆಯ ಬಗ್ಗೆ ಪ್ರಶ್ನೋತ್ತರ ನಡೆಯುತ್ತಿದೆ. ಗಂಡಸೊಬ್ಬ ಫೋನ್ ಮಾಡಿ, ತಾನು ಹೊರಗಿನ ಕೆಲಸವನ್ನೆಲ್ಲ ಹೆಂಡತಿಗೆ ಬಿಟ್ಟು ಮನೆವಾರ್ತೆಯನ್ನಷ್ಟೇ ನೋಡಿಕೊಳ್ಳುತ್ತಿದ್ದೇನೆ. ಈಗ ನೆರೆಹೊರೆಯವರೆಲ್ಲ ಆಡಿಕೊಳ್ಳುತ್ತಿದ್ದಾರೆ ಏನು ಮಾಡಲಿ ಅನ್ನುತ್ತಿದ್ದಾನೆ. ಆದರೆ ಡೇವಿಡ್ ದಾರಿ ಮಧ್ಯೆ ಪೆಟ್ರೋಲ್ ಬಂಕ್ ಬೂತ್‌ನಿಂದ ಮನೆಗೆ ಫೋನ್ ಮಾಡಿದರೆ, ಹೆಂಡತಿಗೆ ಈತನ ಮೇಲೆ ಸಿಟ್ಟು. ನೀನು ಪಾರ್ಟಿಯೊಂದರಲ್ಲಿ ಅವಮಾನವಾದಾಗ ಗಂಡುಗಲಿಯಾಗಿ ನಡೆದುಕೊಳ್ಳಲಿಲ್ಲ, ರೇಪ್ ಮಾಡೋದಕ್ಕೆ ಮಾತ್ರ ಮನೆಗೆ ಬರ್‍ತೀಯ- ಅಂತ ಸಿಡಿಮಿಡಿಗೊಳ್ಳುತ್ತಾಳೆ. ಇಲ್ಲ ಸಮಯಕ್ಕೆ ಸರಿಯಾಗಿ ಖಂಡಿತಾ ಬರ್ತೀನಿ ಅಂತ ಆಶ್ವಾಸನೆ ಕೊಟ್ಟು ಮತ್ತೆ ಡ್ರೈವಿಂಗ್ ಶುರು ಮಾಡಿದ್ದಾನೆ. ರಾಕ್ಷಸ ಟ್ರಕ್ ಹಸಿದಿದೆ.

ಇದೂ ಆ ಸ್ವರ್ಗದ ಮಕ್ಕಳ ಬಗ್ಗೆಯೇ…

without comments

ಇತ್ತೀಚೆಗಷ್ಟೇ ಶಿವು ಕೆ ಚಿಲ್ಡ್ರನ್ ಆಫ್ ಹೆವನ್ ಚಿತ್ರದ ಬಗ್ಗೆ ಬರೆದಿದ್ದರು. ಆ ಚಿತ್ರದ ಮತ್ತೊಂದು ನೆಲೆ ಬಗ್ಗೆ ಚೆಂಡೆಮದ್ದಳೆಯಲ್ಲಿ ನಾವಡರು ಬರೆದ ಲೇಖನವನ್ನು ಜಗತ್ತಿನ ಚೆಂದದ ಸಿನಿಮಾದಲ್ಲಿ ಒಂದು ಎಂದು ಇಲ್ಲಿ ಹಾಕಲಾಗಿದೆ. 

ನನ್ನ ಭಾವಕೋಶದೊಳಗೆ ತೀರಾ ಕಾಡಿದ ಚಿತ್ರವದು. ಯಾಕೋ, ನನಗೆ ಸ್ವಲ್ಪ ಇರಾನಿ ಚಿತ್ರಗಳೆಂದರೆ ಇಷ್ಟ. ಅದಕ್ಕೆ ಕಾರಣ ಹಲವಿವೆ. ಈ ಹಿಂದೆಯೂ ಒಂದು ಇರಾನಿ (ಸೈಲೆನ್ಸ್) ಚಿತ್ರದ ಬಗ್ಗೆಯೇ ಬರೆದಿದ್ದೆ.  ನನ್ನನ್ನು ತೀರಾ ಬಾಧಿಸಿದ ಚಿತ್ರವದು.

childrenofheaven-2

ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನ ಸುಚಿತ್ರಾ ಫಿಲಂ ಸೊಸೈಟಿಯಲ್ಲಿ ಈ ಚಿತ್ರವನ್ನು ನೋಡಿದ್ದೆ. ದೊಡ್ಡ ಸ್ಕ್ರೀನ್‌ನಲ್ಲಿ ನೋಡಿದಾಗ ಗಂಟಲು ಗದ್ಗದಿತವಾಗಿತ್ತು. ಅಳು ತುಟಿಗೆ ಬಂದು ನಿಂತಿತ್ತು !

ವಾಸ್ತವವಾಗಿ ಅಂದಿನಿಂದ ಇರಾನಿ ಚಿತ್ರದ ಬಗೆಗೆ ಬೆರಗು ಬೆಳೆಸಿಕೊಂಡದ್ದು. ಮಜಿದ್ ಮಜ್ದಿಯ ಎಲ್ಲ ಚಿತ್ರಗಳನ್ನು ನೋಡುವ ಶಪಥ ತೊಟ್ಟು ಬಹುಪಾಲನ್ನು ಮುಗಿಸಿದ್ದೇನೆ. ಇನ್ನೂ ನೋಡುವುದಿದೆ. ಮೊನ್ನೆ ಗೆಳತಿಯೊಬ್ಬಳೊಂದಿಗೆ ಇದೇ ವಿಷಯವಾಗಿ ಮತ್ತು ಇದೇ ಚಿತ್ರದ ಬಗ್ಗೆ ಹರಟುತ್ತಿದ್ದೆ.

ನಮ್ಮ ಕನ್ನಡ ಚಿತ್ರಗಳಲ್ಲಿ ವಿಷಾದವನ್ನು ಕಟ್ಟಿಕೊಡಲು ಬರುವುದೇ ಇಲ್ಲ ಎನ್ನುವುದು ನನ್ನ ತಕರಾರು. ನನ್ನ ದೃಷ್ಟಿಯಲ್ಲಿ ಎಂದಿಗೂ ದುಃಖ ವಿಷಾದವಲ್ಲ. ಅಳುವುದು ವಿಷಾದಕ್ಕೆ ಸಮನಲ್ಲ. ವಿಷಾದ ನಮ್ಮನ್ನು ಗಂಟಲು ಉಬ್ಬಿಸುವಂಥ ಸ್ಥಿತಿ. ಅಳು ಬಂದು ಧಾರೆಯಾಗಿ ಇಳಿಯುವಂಥ ಸ್ಥಿತಿ ; ಇಳಿಯುವುದಿಲ್ಲ. ಮನದೊಳಗೆಲ್ಲಾ ಒಂದು ತೀರಾ ತಣ್ಣನೆಯ ಸ್ಪರ್ಶವನ್ನು ಕೊಟ್ಟು ವಿಷಣ್ಣನಾಗಿಸಿಬಿಡುವಂಥದ್ದು. ಬಹಳಷ್ಟು ಬಾರಿ ಅತ್ತು ಹಗುರಾಗುವ ಪ್ರಕ್ರಿಯೆ ನಮ್ಮ ವಿಷಾದದ ಸನ್ನಿವೇಶಗಳಲ್ಲಿ ನಡೆಯುತ್ತದೆ. ವಾಸ್ತವವಾಗಿ ಅದಲ್ಲ.

ನಮ್ಮಲ್ಲಿ ವಿಷಾದವೆಂದರೆ ಗೊಳೋ ಎಂದು ಅಳಿಸಿಬಿಡುತ್ತೇವೆ. ಗಿರೀಶ್ ಕಾಸರವಳ್ಳಿಯವರ “ದ್ವೀಪ’ದಲ್ಲೂ ಸ್ಥಳಾಂತರದ ಅನಿವಾರ್ಯದಿಂದ ಹುಟ್ಟಿದ ವಿಷಾದ ಮಳೆಯಂತೆಯೇ ಅಳುವಾಗಿ ಮಾರ್ಪಡುತ್ತದೆ. ಇವುಗಳನ್ನೆಲ್ಲಾ ಬ್ಯಾಕ್‌ಡ್ರಾಪ್‌ನಲ್ಲಿಟ್ಟುಕೊಂಡು ನೋಡಿದಾಗ “ಸ್ವರ್ಗದ ಮಕ್ಕಳು’ ಅದ್ಭುತ ಚಿತ್ರವೆನಿಸುತ್ತದೆ. ಇದುವರೆಗೆ ಇದನ್ನು ಎಂಟು ಬಾರಿ ನೋಡಿದ್ದೇನೆ. ನೋಡಿದಾಗಲೆಲ್ಲಾ ಮನಸ್ಸಿನೊಳಗೆ ಹೊಸ ಹುರುಪು ತುಂಬಿದೆ. ಸುಂದರ ಚಿತ್ರ ಬದುಕಿಗೆ ಭಾಷ್ಯ ಬರೆಯಬಲ್ಲದು ಎಂಬುದೊಂದು ಮಾತಿದೆ. ಅದರಂತೆಯೇ ಇದು ಭಾಷ್ಯ ಬರೆದ ಚಿತ್ರವೇ ಹೌದು.

ಕಳೆದ ಶಿವರಾತ್ರಿಯಂದು ಕೊಡಚಾದ್ರಿ ಬೆಟ್ಟದ ಮೇಲಿನ ಭಟ್ಟರ ಮನೆಯಲ್ಲಿ ನಾವೆಲ್ಲಾ ಒಂದಷ್ಟು ಮಂದಿ (ವಾದಿರಾಜ್, ಹರ್ಷ, ವಿಘ್ನೇಶ್, ಪ್ರವೀಣ್, ಚೈತನ್ಯ, ಸಿಂಚನ, ಸಿರಿ, ಲಕ್ಷ್ಮೀನಾರಾಯಣ, ಗಿರಿಧರ್, ಕಾರ್ತಿಕ್, ಮಹೇಂದ್ರ ಮತ್ತಿತರರು) ಇದೇ ಚಿತ್ರವನ್ನು ನೋಡಿದೆವು ; ಚರ್ಚಿಸಿದೆವು. ಒಂದು ಒಳ್ಳೆಯ ಸಂವಾದ. ಚೇತನಾರಿಗೂ ಈ ಚಿತ್ರ ನೋಡುವಂತೆ ಸಲಹೆ ನೀಡಿದ್ದೆ. ನನಗೆ ಇರಾನಿ ಚಿತ್ರ ಇಷ್ಟವಾಗುವ ಕಾರಣ ತಿಳಿಸುತ್ತೇನೆ. ಬಹುಶಃ ಅದೇ ಈ ಸ್ವರ್ಗದ ಮಕ್ಕಳ ಚಿತ್ರದ ಬಗೆಗಿನ ವ್ಯಾಖ್ಯಾನವಾಗಬಹುದೇನೋ? ಗೊತ್ತಿಲ್ಲ.

ಮನುಷ್ಯ ಸಂಬಂಧಗಳಲ್ಲಿನ ಸೂಕ್ಷ್ಮತೆ, ನಾಜೂಕುತನವನ್ನು ಇರಾನಿ ನಿರ್ದೇಶಕರು ಅತ್ಯಂತ ನಯವಾಗಿ, ಸೊಗಸಾಗಿ ಕಟ್ಟಿಕೊಡಬಲ್ಲರು. ಅದರಲ್ಲೂ ಮಕ್ಕಳ ಮುಗ್ಧ ಭಾವನೆಗಳಲ್ಲಿನ ಹೂಗಳಂಥ ಕೋಮಲತೆಯನ್ನು ಹಾಗೆಯೇ ತಾಜಾ ತಾಜಾ ಆಗಿ ಕೊಡುವುದು ಅಂದುಕೊಂಡಷ್ಟು ಸುಲಭವಲ್ಲ. ಈ ಚಿತ್ರದಲ್ಲಿ ಎಲ್ಲೆಲ್ಲೂ ಕಾಣುವುದು ಅಷ್ಟೇ, ಮನುಷ್ಯ ಸಂಬಂಧಗಳ ನಿರ್ವಹಣೆ. ಅದ್ರಲ್ಲೂ ನಿರ್ದೇಶಕ ತೋರಿದ ನಾಜೂಕುತನ. ಇದನ್ನು ಪುಷ್ಟೀಕರಿಸುವಂಥ ಎಷ್ಟೊಂದು ದೃಶ್ಯಗಳು ಬೇಕು ಆ ಚಿತ್ರದಲ್ಲಿ. ಪ್ರತಿ ಕ್ಷಣದಲ್ಲೂ ಆ ಕಾಳಜಿಯೇ ಇಡೀ ಚಿತ್ರವನ್ನು ಸೊಗಸಾಗಿ ಕಟ್ಟಿಕೊಟ್ಟಿದೆ. ಅಂಥ ಕೆಲವು ಸನ್ನಿವೇಶಗಳನ್ನು ಹೇಳುತ್ತೇನೆ. ಇಲ್ಲಿ ಜಹ್ರಾ ಎಂದರೆ ಶುಭ್ರ, ಹೂವ ಎಂದೆಲ್ಲಾ ಅರ್ಥವಿದೆ. ಇವು ಸ್ವರ್ಗದ ಹೂವುಗಳೇ !
 
ಮೊದಲಿಗೆ ಅಲಿ (ಅಣ್ಣ)ಯ ಮನೆಯಲ್ಲಿ ಟೀ ಗೆ ಸಕ್ಕರೆ ಇರೋದಿಲ್ಲ. ಅವನಪ್ಪ ಮಸೀದಿಯಲ್ಲಿ ಟೀ ಸರಬರಾಜು ಮಾಡುವವ. ಅದಕ್ಕೆ ಮನೆಯಲ್ಲಿ ಕುಳಿತು ಸಕ್ಕರೆ ಪುಡಿ ಮಾಡುತ್ತಿರುತ್ತಾನೆ. ಆಗ ಅಲಿಯ ತಂಗಿ ಜಹ್ರಾ, ಈ ಸಕ್ಕರೆ ಇದೆಯಲ್ಲಾ ಎಂದು ಅಪ್ಪನಿಗೆ ಕೇಳುತ್ತಾಳೆ. ಆಗ ಅಪ್ಪ “ಇದು ಮಸೀದಿಯದ್ದು, ಹಾಗೆ ಬಳಸುವಂತಿಲ್ಲ’ ಎಂದು ಹೇಳುತ್ತಾನೆ. ಇದು ಪವಿತ್ರತೆ ಇತ್ಯಾದಿಗಿಂತಲೂ ಪ್ರಾಮಾಣಿಕತೆಯನ್ನು ಅನಾವರಣಗೊಳಿಸುವ ಸನ್ನಿವೇಶ.

ಎರಡನೇ ಸನ್ನಿವೇಶದಲ್ಲಿ ತಾನು ಕಳೆದುಕೊಂಡ ಷೂ ತನ್ನ ಸಹಪಾಠಿಯೊಬ್ಬಳಲ್ಲಿ ಇದೆ ಎಂದು ಜಹ್ರಾಳಿಗೆ ತಿಳಿಯುತ್ತದೆ. ಜಹ್ರಾಳಲ್ಲಿ ಒಂದು ಬಗೆಯ ಸಿಟ್ಟು ಬರಿಸಿರುತ್ತೆ. ಆದರೆ ಒಮ್ಮೆ ಅಣ್ಣ ತಂದುಕೊಟ್ಟ ಮುದ್ದಿನ ಪೆನ್ನನ್ನು ಜಹ್ರಾ ತರುವಾಗ ರಸ್ತೆಯಲ್ಲಿ ಬೀಳಿಸಿಕೊಂಡು ಬಿಟ್ಟಿರುತ್ತಾಳೆ. ಅವಳ ಹಿಂದೆಯೇ ಬರುವ ಅವಳ ಸಹಪಾಠಿ ಹುಡುಗಿ ಅದನ್ನು ಎತ್ತಿಕೊಂಡು ಮರುದಿನ ಅವಳಿಗೆ ನೀಡುತ್ತಾಳೆ. ಆಗ ಜಹ್ರಾ ಅವಳನ್ನು ವಿಶ್ವಾಸದಿಂದ ನೋಡುವ ಬಗೆಯೇ ಅನನ್ಯ. ಇದೊಂದು ದೃಶ್ಯದಲ್ಲಿ ಇಬ್ಬರೊಳಗೂ ಕ್ಷೀಣಿಸಬಹುದಾದ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಾನೆ. ಅಂದಿನಿಂದ ಅವಳ ಬಗ್ಗೆ ಜಹ್ರಾ ಏನೂ ಅಂದುಕೊಳ್ಳುವುದಿಲ್ಲ.

ಇಂಥದ್ದೇ ಇನ್ನೊಂದು ಸನ್ನಿವೇಶ ಹೇಳುತ್ತೇನೆ. ಅಲಿ ಚೆನ್ನಾಗಿ ಅಂಕ ಗಳಿಸಿದ್ದಕ್ಕೆ ಅವನ ಮೇಸ್ಟ್ರು ಒಂದು ಚೆನ್ನಾದ ಪೆನ್ನನ್ನು ಉಡುಗೊರೆಯಾಗಿ ಕೊಟ್ಟಿರುತ್ತಾರೆ. ಶಾಲೆಯಿಂದ ಬರುವಾಗ ಪಕ್ಕದ ಮನೆಗೆ ಹೋಗ್ತಾ ಇದ್ದ ಜಹ್ರಾ ಸಿಗುತ್ತಾಳೆ ರಸ್ತೆಯಲ್ಲಿ. ಅಲಿ, ತಗೊಳೆ ತಂಗಿ ಈ ಪೆನ್ನು ನಿನಗೆ ಎಂದು ತನ್ನ ಹೊಸ ಪೆನ್ನನ್ನು ಕೊಡುತ್ತಾನೆ. ಆಕೆಗೆ ನಂಬಿಕೆ ಬರುವುದಿಲ್ಲ. ಆ ಪೆನ್ನನ್ನು ಕೈಯಲ್ಲಿಟ್ಟುಕೊಂಡು ನೋಡಿ “ಚೆನ್ನಾಗಿದೆಯಲ್ಲೋ’ ಎನ್ನುತ್ತಾಳೆ.

ಆಗ ಅಣ್ಣ ಅಲಿ “ಅದು ನಿನಗೇ’ ಎಂದಾಗ ಅಚ್ಚರಿ ಮತ್ತು ಆನಂದದಿಂದ “ನನಗಾ, ನನ್ನನನ್ಗಾ’ ಎಂದು ಕೇಳುತ್ತಾಳೆ. ಆಗ ಅಲಿ, “ಹೌದೇ, ನಿನಗೇ’ ಎಂದಾಗ ಅವಳ ಮುಖದಲ್ಲಿ ನಗೆ ನದಿಯಲ್ಲಿ ಚಿಕ್ಕದೊಂದು ಗಾಳಿ ಹೊರಡಿಸುವ ತರಂಗದಂತೆ ಅರಳುತ್ತದೆ. ಜತೆಗೆ, “ಅಣ್ಣಾ, ನಾನು ಅಪ್ಪನ ಬಳಿ (ಷೂ ಕಳೆದದ್ದನ್ನು) ಹೇಳುವುದಿಲ್ಲ’ ಎಂದು ಹೇಳುತ್ತಾಳೆ. ಆಗ ಅಣ್ಣ ಹೇಳುವ ವಿಶ್ವಾಸದ ಮಾತು “ನನಗೆ ಗೊತ್ತು ಕಣೆ. ನೀನು ಹಾಗೆ ಹೇಳುವುದಿಲ್ಲ’ ಎಂದು ಹೇಳಿ ಮನೆಗೆ ಹೋಗುತ್ತಾನೆ. ಇದು ಸಂಬಂಧಗಳ ನಿರ್ವಹಣೆ.

ಅಪ್ಪನೊಂದಿಗೆ ಹೊಸ ಕೆಲಸ ಹುಡುಕಿಕೊಂಡು ಬಂದವನಿಗೆ ಕೆಲಸ ಸಿಗುವುದು ಅಂಥದೊಂದು ಸಂಬಂಧದ ಎಳೆಯಿಂದಲೇ. ಅಪ್ಪ-ಅಮ್ಮನಿಲ್ಲದೇ ಅಜ್ಜನೊಂದಿಗೆ ಬದುಕುವ ತಬ್ಬಲಿ ಮಗು ಮತ್ತು ಇವನೊಡನೆ ಸಂಬಂಧ ಬೆಳೆಯುವಂಥದ್ದು.”ನಿಮ್ಮ ಮನೆ ತೋಟದಲ್ಲಿ ಕೆಲಸವಿದೆಯೇ?’ ಎಂದು ಕೇಳುವಾಗ ಅತ್ತಲಿಂದ ಬಾಗಿಲ ಒಳಗಿಂಡಿಯಿಂದಲೇ ಆ ಮಗು “ನೀನ್ಯಾರು, ನಿನ್ನ ಹೆಸರೇನು, ಎಷ್ಟನೇ ಕ್ಲಾಸು’ ಹೀಗೆಲ್ಲಾ ಕೇಳಿ ಪರಿಚಯಿಸಿಕೊಳ್ಳುತ್ತದೆ. ನಂತರ ಅಪ್ಪ ಕೆಲಸ ಮಾಡುವಾಗ ಅಲಿ ಆ ಮಗುವಿನೊಂದಿಗೆ ಆಟವಾಡುತ್ತಾನೆ. ಕೆಲವೇ ಕ್ಷಣಗಳಲ್ಲಿ ಅವರಿಬ್ಬರ ಮಧ್ಯೆ ಏರ್ಪಡುವ ಸಂಬಂಧ ಸೂಕ್ಷ್ಮ. ಮಲಗಿದ ಆ ಮಗುವನ್ನು ಬಿಟ್ಟು ಹೋಗುವಾಗ ಅವನೊಳಗೆ ಆವರಿಸಿಕೊಳ್ಳುವ ವಿಷಾದವನ್ನೂ ಮುಖದ ಭಾವ ಹೇಳುತ್ತದೆ. ಈ ಮೂಲಕ ನಗರದ ಸಂಬಂಧಗಳ ನೆಲೆಯನ್ನೂ ಅನಾವರಣಗೊಳಿಸುತ್ತಾನೆ.

ಹೀಗೆ ಮನುಷ್ಯ ಸಂಬಂಧಗಳ ನಿರ್ವಹಣೆ ಕುರಿತೇ ಬರೆಯಲು ಬಹಳಷ್ಟಿದೆ. ಇಡೀ ಚಿತ್ರದಲ್ಲಿ ಅಣ್ಣ-ತಂಗಿಯರಿಬ್ಬರನ್ನೇ ಇಟ್ಟುಕೊಂಡು ಒಂದು ಸುಂದರವಾದ ಕಥೆ ಹೆಣೆಯುವ ಮಜಿದ್ ಮಜ್ದಿ ಎಷ್ಟು ಅದ್ಭುತವಾದ ನಿರ್ದೇಶಕ ಎನಿಸಿ ಬಿಡುತ್ತಾನೆ. ಪ್ರತಿ ಚಿತ್ರದಲ್ಲೂ ಮನುಷ್ಯ ಸಂಬಂಧಗಳ ಸೂಕ್ಷ್ಮತೆಯನ್ನೇ ಹೇಳುತ್ತಾ, ಅದನ್ನು ಹಾಗೆಯೇ ಗಟ್ಟಿಗೊಳಿಸುವ ಬಗೆಗೆ ಕೃತಜ್ಞತೆ ಹೇಳಲೇಬೇಕು. ಇವನ ಮತ್ತೊಂದು ಚಿತ್ರ (ಕಲರ್ ಆಫ್ ಪ್ಯಾರಡೈಸ್)ವೂ ಇಂಥ ನೆಲೆಯದ್ದೇ.

ಹಾಗೆಯೇ ಪ್ರತಿ ಸನ್ನಿವೇಶಗಳಲ್ಲೂ ಅದನ್ನೇ “ಫೋಕಸ್’ ಮಾಡುತ್ತಾ, ಎಲ್ಲಿಯೂ ಅದು ಭಾರ ಅಥವಾ ರೇಜಿಗೆ ಹುಟ್ಟದಂತೆ ವಹಿಸುವ ಮುತುವರ್ಜಿಯನ್ನು ಗಮನಿಸಬೇಕು. ಒಂದೇ ಮಾತಿನಲ್ಲಿ ಹೇಳುವುದಾದರೆ ಅಣ್ಣ-ತಂಗಿಯಂಥ ಸೂಕ್ಷ್ಮ ಸಂಬಂಧದ ಪೋಟ್ರೈಟ್ ಇದು. ಸುಪ್ರೀತ್‌ನ ಬರಹ ಓದಿ ನನ್ನ ಭಾವವಲಯ ತೆರೆದುಕೊಂಡಿತು. ಅಲ್ಲಿ ಕಂಡ ಬಿಡಿ ಬಿಡಿ ಚಿತ್ರಗಳನ್ನು ಇಲ್ಲಿ ತೆರೆದಿಟ್ಟೆ, ಅಷ್ಟೇ. ಬಹಳ ದಿನಗಳಿಂದ ಬರೆಯಬೇಕೆಂದಿದ್ದೆ, ಈಗ ಬರೆದಿದ್ದೇನೆ.

Written by saangatya

April 4, 2009 at 10:15 am

ಲೈಫ್ ಈಸ್ ಬ್ಯೂಟಿಫುಲ್…!

with one comment

“ಲೈಫ್ ಈಸ್ ಬ್ಯೂಟಿಫುಲ್” ಜಗತ್ತಿನ ಚೆಂದದ ಸಿನಿಮಾದಲ್ಲಿ ಒಂದು. ಬಹಳ ಕಾಡುವ ಚಿತ್ರ. ತನ್ನ ಅಭಿನಯದಿಂದಲೇ ನಮ್ಮೊಳಗೆ ಇಳಿಯುತ್ತಾ ಹೋಗುವ ನಾಯಕ ಎಂದಿಗೂ ಮಾಸದೇ ಉಳಿದುಕೊಳ್ಳುತ್ತಾನೆ. ಕಾರ್ತಿಕ್ ಪರಾಡ್ಕರ್ ಬರೆದ ಈ ಲೇಖನ ಓದಿ ಹೇಳಿ. 
“ಲೈಫ್ ಈಸ್ ಬ್ಯೂಟಿಫುಲ್” 1998ರಲ್ಲಿ ಬಿಡುಗಡೆಯಾದ ಇಟಾಲಿಯನ್ ಸಿನಿಮಾ. ಕಲ್ಪನೆಯೊಳಗೆ ನಿರ್ಮಿಸುವ ಪ್ರೀತಿಯ ಜಗತ್ತು ಈ ಸಿನಿಮಾದ ಜೀವಾಳ.
ನಾಯಕ ಗಿಡೋ ಯಹೂದಿ. ವೃತ್ತಿಯಲ್ಲಿ ವೈಟರ್. ಅಸಾಧಾರಣ ಹಾಸ್ಯಪ್ರಜ್ಞೆ, ಲವಲವಿಕೆಯ ವ್ಯಕ್ತಿತ್ವ ಆತನದ್ದು. ಸುಂದರಿ ದೋರಾಳನ್ನು ಪ್ರೀತಿಸಿ ಮದುವೆಯಾಗುತ್ತಾನೆ. ಜೋಶ್ವಾ ಎನ್ನುವ ಪುಟ್ಟ ಮಗನ ಜೊತೆ ಈತನದ್ದು ಸುಖೀ ಸಂಸಾರ.
ಈ ನೆಮ್ಮದಿಯನ್ನು ಕಲಕಿಬಿಡುವುದು ಎರಡನೇ ಮಹಾಯುದ್ಧದ ಕರಿನೆರಳು. ಹಿಟ್ಲರ್ ಜ್ಯೂ (ಯಹೂದಿ)ಗಳನ್ನು ಬಂಧಿಸಿ ಅಮಾನವೀಯವಾಗಿ ನಡೆಸಿಕೊಳ್ಳುವ ಹೊತ್ತಿಗೇನೇ, ಗಿಡೋ ಯಹೂದಿ ಎನ್ನುವ ಕಾರಣಕ್ಕಾಗಿ ಆತನ ಜೊತೆ ಮಗ ಹಾಗೂ ಅಂಕಲ್ನನ್ನು ಬಂಧಿಸಿ ಕಾನ್ಸಂಟ್ರೇಶನ್ ಕ್ಯಾಂಪಿಗೆ ತಳ್ಳುತ್ತಾರೆ. ಹೆಂಡತಿ ಇಷ್ಟಪಟ್ಟು ಆತನಿಗೆ ಅಲ್ಲಿಯೂ ಜೊತೆಯಾಗುತ್ತಾಳೆ. ಅಲ್ಲಿ ಆತ ನಾಜಿಗಳ ಕೈಯಿಂದ ತನ್ನ ಮಗ ಮತ್ತು ಹೆಂಡತಿಯನ್ನು ಪಾರು ಮಾಡಲು ಹೋರಾಡುವ ಕತೆ “ಲೈಫ್ ಈಸ್ ಬ್ಯೂಟಿಫುಲ್” ಸಿನಿಮಾದ್ದು.
ಗಿಡೋ ಎನ್ನುವ ಪಾತ್ರವೇ ಅತ್ಯಂತ ಸಮರ್ಥವಾಗಿ ಚಿತ್ರಿತಗೊಂಡಿದೆ. ಸಿನಿಮಾದಲ್ಲಿ ಗಿಡೋ ನಗಿಸುತ್ತಾ, ನಗುತ್ತಾ ಸನ್ನಿವೇಶಗಳನ್ನು ಎದುರಿಸುತ್ತಾನೆ. ಆತನ ಹಾಸ್ಯಪ್ರಜ್ಞೆ ಕಾನ್ಸಂಟ್ರೇಶನ್ ಕ್ಯಾಂಪಿನ ಒಳಗೂ ಬತ್ತುವುದಿಲ್ಲ. ಪುಟ್ಟ ಮಗ ಜೋಶ್ವಾನಿಗೆ ತಾವಿಬ್ಬರೂ ಬದುಕುತ್ತಿರುವ ಕಾನ್ಸಂಟ್ರೇಶನ್ ಕ್ಯಾಂಪಿನ ಕ್ರೂರತೆಯನ್ನು ಆತ ಹೇಳುವುದಿಲ್ಲ. “ಈ ಕ್ಯಾಂಪಿನ ಒಳಗಡೆ ನಾವೆಲ್ಲಾ ಸ್ಪರ್ಧೆಯೊಂದರಲ್ಲಿ ಭಾಗ ವಹಿಸುತ್ತಿದ್ದೇವೆ. ಸಾವಿರ ಅಂಕ ಕೂಡಿಟ್ಟರೆ ಗೆಲ್ಲುತ್ತೇವೆ. ಮೊದಲ ಬಹುಮಾನ ನಿನ್ನಿಷ್ಟದ ಟ್ಯಾಂಕರ್” ಎಂದು ಆಸೆ ಹುಟ್ಟಿಸುತ್ತಾನೆ. ಮಗನಿಗದು ಸುಂದರ ಆಟವಾಗಿ ಕಾಣುತ್ತದೆ. ಮುಗ್ಧ ಮಗುವಿನ ಮನಸ್ಸು, ಬಾಲ್ಯ, ಕನಸು ವಾಸ್ತವದ ಸತ್ಯದ ಮಧ್ಯೆ ಕಳೆದು ಹೋಗಬಾರದು ಎನ್ನುವ ಅಪ್ಪನ ಕಾಳಜಿ ಎದ್ದು ಕಾಣುತ್ತದೆ.
ಈ ಆಟದ ನೆಪದಲ್ಲೇ ಮಗನನ್ನು ಸೈನಿಕರ ಕೈಗೆ ಸಿಗದಂತೆ ಬಚ್ಚಿಡುತ್ತಾನೆ ಗಿಡೋ. ನಿರ್ದಯ ವಾಸ್ತವ ಎದುರಿಗಿದ್ದರೂ ಸ್ಪರ್ಧೆ ಎನ್ನುವ ಕಲ್ಪನೆಯೊಳಗೆ ಮಗನ ಸಂವೇದನೆಗಳನ್ನು ಗಿಡೋ ಜೀವಂತವಾಗಿಡುತ್ತಾನೆ. ಕಾನ್ಸಂಟ್ರೇಶನ್ ಕ್ಯಾಂಪಿನ ಒಳಗಡೆ ಅವನು ಕೂಡಾ ಜೀವಂತವಾಗಿರಲು ಪ್ರಯತ್ನಿಸುವುದು ತಾನು ಸೃಷ್ಟಿಸಿದ ಸ್ಪರ್ಧೆಯ ಜಗತ್ತಿನಿಂದಾಗಿಯೇ.
ಆತ ಕೊನೆವರೆಗೂ ಉಳಿಸಿಕೊಳ್ಳುವ ನಗು, ಲವಲವಿಕೆ, ಸ್ಥಿಮಿತ ಮನಸ್ಥಿತಿ ನಮ್ಮನ್ನು ಸೆಳೆಯುತ್ತದೆ. ಗಿಡೋ ಮಗನೆದುರು ಮಾಡುವ ಮಾರ್ಚ್ ಫಾಸ್ಟ್, ಅದನ್ನು ಬಚ್ಚಿಟ್ಟುಕೊಂಡ ಡಬ್ಬಿಯೊಳಗಿನಿಂದ ನೋಡುವ ಮಗ ಸಿನಿಮಾವಾಗಿ ಕಾಡಲು ಈ ಒಂದು ಸನ್ನಿವೇಶ ಸಾಕು. ಲವಲವಿಕೆಯೊಂದಿಗೆ ಪ್ರಾರಂಭವಾಗುವ ಸಿನಿಮಾ ಕಾನ್ಸಂಟ್ರೇಶನ್ ಕ್ಯಾಂಪಿನೊಳಗಿದ್ದರೂ, ಲವಲವಿಕೆಯನ್ನು ಕಳೆದುಕೊಳ್ಳುವುದಿಲ್ಲ.
ಇಟೆಲಿಯ ಪ್ರಖ್ಯಾತ ಹಾಸ್ಯನಟ ರಾಬರ್ಟೋ  ಬೆನಿನಿ ನಟಿಸಿ, ನಿರ್ದೇಶಿಸಿರುವ ಸಿನಿಮಾವಿದು. ಐತಿಹಾಸಿಕ ಘಟನೆಯೊಂದನ್ನು ಹಿನ್ನೆಲೆಯಾಗಿ ಇಟ್ಟುಕೊಂಡು ಹೇಳುವ ಕತೆಯಲ್ಲಿ, ಕಾನ್ಸಂಟ್ರೇಶನ್ ಕ್ಯಾಂಪು ಕತೆಯ ಭಾಗವಾಗಿ ಬರುತ್ತದೆಯೇ ಹೊರತು ಇತಿಹಾಸದ ಅಂಕಿ-ಅಂಶಗಳ ಪಾಠಶಾಲೆಯಾಗುವುದಿಲ್ಲ. ಬಹುಶಃ ಇಲ್ಲೇ ನಿರ್ದೇಶಕನ ಗೆಲುವಿರುವುದು. ಚಿತ್ರಕತೆ, ಸಂಗೀತ, ಪಾತ್ರವರ್ಗದಲ್ಲಿ ಅಚ್ಚುಕಟ್ಟಿದೆ.  
ಲೈಫ್ ಈಸ್ ಬ್ಯೂಟಿಫುಲ್  ತಯಾರದದ್ದು 1997ರಲ್ಲಿ. ವಿವಿದೆಡೆ 52 ಪ್ರಶಸ್ತಿಗಳನ್ನು ಈ ಸಿನಿಮಾ ಚಾಚಿಕೊಂಡಿದೆ.  ಅತ್ಯುತ್ತಮ ನಟ(ರಾಬರ್ಟೋ  ಬೆನಿನಿ), ಅತ್ಯುತ್ತಮ ವಿದೇಶಿ ಸಿನಿಮಾ(ಇಟಲಿ), ಅತ್ಯುತ್ತಮ ಸಂಗೀತ(ನಿಕೋಲಾ ಪಯೋವನಿ) ಸೇರಿ ಒಟ್ಟು ಮೂರು ಆಸ್ಕರ್ ಪ್ರಶಸ್ತಿ ಪಡೆದಿದೆ.
ಚಿತ್ರ: ಲೈಫ್ ಈಸ್ ಬ್ಯೂಟಿಫುಲ್                                                              ಭಾಷೆ: ಇಟಾಲಿಯನ್
ನಿರ್ದೇಶಕ: ರಾಬರ್ಟೋ ಬೆನಿನಿ                                                              ಅವಧಿ: 116 ನಿಮಿಷ

‘ಸ್ಟಾಕರ್’ ಜೊತೆ ನಂಬಿಕೆಯ ಕಡೆಗೊಂದು ಪಯಣ

without comments

“ಸ್ಟಾಕರ್” ಒಂದು ಒಳ್ಳೆ ಚಿತ್ರ. ನಿರ್ದೇಶಕ ಆಂಡ್ರೆ ಟಾರ್ ಕೋವಸ್ಕಿಯ ಅದ್ಭುತ ಪ್ರಯತ್ವೂ ಹೌದು. ಈ ಚಿತ್ರದ ಬಗ್ಗೆ ಮುಸಾಫಿರಾ ಅವರು ತಮ್ಮ ಬ್ಲಾಗ್ ನಲ್ಲಿ ಬರೆದ ಲೇಖನವಿದು. ಒಂದು ಚೆಂದದ ಚಿತ್ರದ ಬಗ್ಗೆ ಬರೆದಿರುವ ಅವರ ಅಭಿಪ್ರಾಯ ಓದಿ ಪ್ರತಿಕ್ರಿಯಿಸಿ.  
ದಾರ್ಶನಿಕನ ನಂಬಿಕೆಯೂ…. ವಿಜ್ಞಾನಿಯ ತರ್ಕವೂ….

ಚಲನಚಿತ್ರವೊಂದು ಕಾವ್ಯವಾಗಿಯೂ, ಕಲಾಕೃತಿಯಾಗಿಯೂ ನಮ್ಮನ್ನು ಮುಟ್ಟಲು, ತಟ್ಟಲು ಸಾಧ್ಯವೆ? ಆಂಡ್ರೆ ಟಾರ್‍ಕೋವಸ್ಕಿ ನಿರ್ದೇಶನದ ‘ಸ್ಟಾಕರ್’ ಚಿತ್ರವನ್ನು ನೋಡಿದರೆ ಇದು ಸಾಧ್ಯವೆನ್ನಿಸುತ್ತದೆ.
ಇಡೀ ಸಿನಿಮಾ ಅದ್ಭುತ ದೃಶ್ಯಕಾವ್ಯದ ಅನುಭೂತಿಯನ್ನು, ಅನುಭಾವವನ್ನು ಕಟ್ಟಿಕೊಡುತ್ತದೆ. ಛಾಯಾಗ್ರಹಣ ಪ್ರತಿಯೊಂದು ದೃಶ್ಯವನ್ನು ಕಲಾಕೃತಿಯನ್ನಾಗಿಸಿದರೆ, ಸಂಭಾಷಣೆ, ಬಳಸಿರುವ ರೂಪಕಗಳು ಚಿತ್ರವನ್ನು ಕಾವ್ಯವನ್ನಾಗಿಸುತ್ತವೆ.
‘ಸ್ಟಾಕರ್’ಚಿತ್ರ ಒಂದು ಪಯಣ. ತಾನು ನಂಬಿದ ಒಂದು ಸಂಗತಿಯ ಕಡೆ ಪ್ರಯಾಣ ಮಾಡುತ್ತಲೇ ತನ್ನೊಳಗನ್ನು ಅನ್ವೇಷಿಸುವ ಪಯಣ. ನಂಬಿಕೆ ಹಾಗೂ ಮನುಷ್ಯನಲ್ಲಿರುವ ಅಪನಂಬಿಕೆ, ದ್ವಂದ್ವಗಳನ್ನೇ ಟಾರ್‍ಕೋವಸ್ಕಿ ಸಿನಿಮಾದುದ್ದಕ್ಕೂ ಚಿತ್ರಿಸುತ್ತಾ ಹೋಗುತ್ತಾರೆ.
ಚಿತ್ರ ಭಿನ್ನವಾಗುವುದು ಚಿತ್ರಿಸಿರುವ ರೀತಿಯಲ್ಲಿ. ನಂಬಿಕೆ, ಅಪನಂಬಿಕೆಗಳ ಗೊಂದಲವನ್ನು ಕಾವ್ಯ ಪ್ರತಿಮೆಗಳು, ರೂಪಕಗಳ ಮೂಲಕ ಕಟ್ಟಿಕೊಡುತ್ತಾ ಹೋಗುತ್ತಾರೆ. ಒಂದೊಂದು ರೂಪಕವೂ ಗ್ರಹಿಕೆಯ ಅಯಾಮವನ್ನು ವಿಸ್ತರಿಸುತ್ತಾ ಸಾಗುವಂತೆ ಮಾಡುತ್ತಾರೆ.
ಕಥೆ ಸಾಗುವುದು ಸ್ಟಾಕರ್‌ನ ಹಿಂದೆ. ‘ಝೋನ್’ ಎಂಬ ಕೇಳಿದ್ದನ್ನು ಕೊಡುವ ಮನೆ ಇರುತ್ತದೆ. ಅದು ಸ್ಟಾಕರ್‌ಗೆ ಮಾತ್ರ ಗೊತ್ತು. ಅವನು ಮಾತ್ರ ಅಲ್ಲಿಗೆ ಕರೆದೊಯ್ಯಬಲ್ಲ. ಅದನ್ನು ತೋರಿಸಲೆಂದೇ ಒಬ್ಬ ಲೇಖಕ ಮತ್ತು ವಿಜ್ಞಾನಿಗಳನ್ನು ಕರೆದುಕೊಂಡು ಸ್ಟಾಕರ್ ಹೊರಡುತ್ತಾನೆ. ಆದರೆ ಅವರು ಅಲ್ಲಿಗೆ ಹೋಗುವುದಿಲ್ಲ. ಹೊಸ್ತಿಲವರೆಗೆ ಹೋದವರು ಝೋನ್ ಒಳಗಡೆ ಪ್ರವೇಶಿಸಿದೆ ಹೊರಬರುತ್ತಾರೆ.
ಜ್ಞಾನ, ಅದರ ಮೂಲಕ ಸಿಕ್ಕ ತರ್ಕವೆಂಬ ಅಸ್ತ್ರ ಸ್ಟಾಕರ್ ಹೇಳಿದ ಝೋನ್‌ನನ್ನು ನಂಬುವುದಕ್ಕೆ ಬಿಡುವುದೇ ಇಲ್ಲ. ಅನುಮಾನ, ಅಪನಂಬಿಕೆ ಝೋನ್ ಪ್ರವೇಶಿಸದಂತೆ ಮಾಡಿ ಬಿಡುತ್ತದೆ. ವಿಜ್ಞಾನಿಗೂ, ಲೇಖಕನಿಗೂ ಅಲ್ಲೇನು ಇಲ್ಲ ಎನ್ನಿಸುತ್ತದೆ. ತಮ್ಮ ಇಚ್ಛೆಗಳು ಈಡೇರುವುದಿಲ್ಲ ಎನ್ನಿಸುತ್ತದೆ. ಅವರು ಹಿಂದಿರುಗುತ್ತಾರೆ.
ಟಾರ್‍ಕೋವಸ್ಕಿಯ ಸ್ಟಾಕರ್ ಒಂದರ್ಥದಲ್ಲಿ ಗುರು. ನಂಬಿಕೆಯೊಂದಿದೆ, ಅದನ್ನು ಕಂಡುಕೊಳ್ಳಬೇಕೆಂದು ಲೇಖಕ, ವಿಜ್ಞಾನಿಯನ್ನು ಕರೆದೊಯ್ಯುತ್ತಾನೆ. ಅದಷ್ಟೇ ಅವನ ಕೆಲಸ. ಆತ ಲೋಕದ ಜ್ಞಾನ, ತರ್ಕಗಳನ್ನೆಲ್ಲಾ ಮೀರಿದವನು. ಆದರೆ, ಇವುಗಳನ್ನು ಮೀರಲಾಗದೆ ಉಳಿದ ವಿಜ್ಞಾನಿ, ಸಾಹಿತಿಗಳು ಆ ನಂಬಿಕೆಯನ್ನು ಒಪ್ಪಿಕೊಳ್ಳದೇ ಹೋಗುತ್ತಾರೆ.
ತಾತ್ವಿಕ, ಆಧ್ಯಾತ್ಮಿಕವಾಗಿಯೂ ಇರುವ ಈ ಸಿನಿಮಾ ತುಂಬಾ ಸಂಭಾಷಣೆಗಳೇ ತುಂಬಿ ಹೋಗಿದ್ದಾರೆ ಎಲ್ಲಾ ಕಲಾತ್ಮಕ ಸಿನಿಮಾಗಳಂತೆ ಬೋರ್ ಹೊಡೆಸುತ್ತಿತ್ತು.
ಟಾರ್‍ಕೋವಸ್ಕಿ ಹಾಗೇ ಮಾಡುವುದಿಲ್ಲ. ಇಲ್ಲಿ ಮಾತಿನಲ್ಲೇ ಹೇಳಿದ್ದರೆ ಸೀಮಿತವಾಗಿ ಬಿಡಬಹುದಾದ ಅನೇಕ ಸಂಗತಿಗಳನ್ನು ಪ್ರತಿಮೆಗಳಲ್ಲಿ ರೂಪಕಗಳಲ್ಲಿ ಕಟ್ಟಿಕೊಡುತ್ತಾರೆ. ಚಿತ್ರದುದ್ದಕ್ಕೂ ಸದ್ದು ಮಾಡುವ ರೈಲು, ಅಪನಂಬಿಕೆಯನ್ನೇ ತುಂಬಿಕೊಂಡ ಮನುಷ್ಯ ಖಾಲಿತನವನ್ನು ಎತ್ತಿ ಹಿಡಿಯುವ ಖಾಲಿ ಲೋಟಗಳು, ಇಬ್ಬರೂ ನಂಬದಿದ್ದ ಮಾತ್ರಕ್ಕೆ ನಂಬಿಕೆ ಇಲ್ಲವಾಗುವುದಿಲ್ಲ ಎನ್ನುವುದನ್ನು ನಾಯಿಯ ರೂಪದಲ್ಲಿ ಮತ್ತೆ ನಂಬಿಕೆಯನ್ನು ಮರಳಿಸುವ ರೀತಿ ನಮ್ಮ ಅನುಭವವನ್ನು, ಗ್ರಹಿಕೆಯನ್ನು ವಿಸ್ತರಿಸುತ್ತದೆ.
ಕವಿಯೂ ಆಗಿದ್ದ ಟಾರ್‍ಕೋವಸ್ಕಿ ಸಿನಿಮಾದುದ್ದಕ್ಕೂ ನೀರು, ಪಸೆ, ತುಂತುರು ಸಿಂಪಡಿಸಿ ಕಾವ್ಯದ ಆರ್ದ್ರತೆಯನ್ನು ಉಳಿಸುತ್ತಾರೆ. ಎಲ್ಲ ಹುಡುಕಾಟಗಳ ಗುರಿಯಾದ ನಿಸರ್ಗವನ್ನು ಹೀಗೆ ನೆನಪಿಸುತ್ತಾ ಹೋಗುತ್ತಾರೆ.
‘ಸ್ಟಾಕರ್’ ಸಿನಿಮಾ ತೆರೆ ಕಂಡಿದ್ದು 1979 ರಲ್ಲಿ. ಆದರೆ ಇದಕ್ಕಾಗಿ ಟಾರ್‍ಕೋವಸ್ಕಿ ಸುಮಾರು ಏಳೆಂಟು ವರ್ಷಗಳ ಸಿದ್ಧತೆ ನಡೆಸಿದ್ದ. ‘ರೋಡ್‌ಸೈಡ್ ಪಿಕ್‌ನಿಕ್’ ಎಂಬ ಬೋರಿಸ್ ಮತ್ತು ಆರ್ಕಡಿ ಅವರ ವೈಜ್ಞಾನಿಕ ಕಾದಂಬರಿಯನ್ನು ಇದಕ್ಕೆ ಬಳಸಿಕೊಳ್ಳಲಾಯಿತು. ಈಸ್ಟೋನಿಯಾದ ಟಲ್ಲೀನ್ ಸಮೀಪವಿದ್ದ ಜಗಲಾ ಎಂಬ ನದಿ ತಟದಲ್ಲಿ ಇದರ ಚಿತ್ರೀಕರಣ ನಡೆಯಿತು. ಈ ಮಧ್ಯೆ ರಷ್ಯನ್ ಅಧಿಕಾರಿಗಳಿಂದ ರಾಜಕೀಯ ಕಾರಣಗಳಿಗಾಗಿ ಚಿತ್ರೀಕರಣಕ್ಕೆ ಅಡ್ಡಿಯುಂಟಾಯಿತು. ಇದನ್ನು ನಿವಾರಿಸಿಕೊಂಡು ಚಿತ್ರೀಕರಣ ಮುಂದುವರೆಸುವ ಹೊತ್ತಿಗೆ ಛಾಯಾಗ್ರಾಹಕ ತಂಡದಿಂದ ಹೊರ ನಡೆದರು. ಸ್ವಲ್ಪ ಪ್ರಮಾಣದ ಚಿತ್ರವನ್ನು ತಾನೇ ಚಿತ್ರೀಕರಿಸಿದ ಟಾರ್‍ಕೋವಸ್ಕಿ ಉಳಿದದ್ದನ್ನು ಹೊಸ ಛಾಯಾಗ್ರಾಹಕರ ನೆರವಿನಿಂದ ಪೂರೈಸಿದರು. ಎರಡು ಬಾರಿ ಚಿತ್ರೀಕರಣಗೊಂಡ ಸಿನಿಮಾ ಇದು. ಚಿತ್ರೀಕರಣ ಪೂರ್ಣವಾಗುವ ಹೊತ್ತಿಗೆ ಚಿತ್ರ ತಂಡದಲ್ಲಿದ್ದ ಅನೇಕ ಮಂದಿ ಕಲುಷಿತ ವಾತಾವರಣದಿಂದಾಗಿ ಸಾವನ್ನಪ್ಪಿದ್ದರು. ಈ ಪೈಕಿ ಟಾರ್‍ಕೋವಸ್ಕಿ ಪತ್ನಿಯೂ ಒಬ್ಬಳಾಗಿದ್ದಳು.
ಟಾರ್‍ಕೋವಸ್ಕಿಗೆ ಸ್ಟಾಕರ್ ಚಿತ್ರವನ್ನು ಇನ್ನೊಂದು ಭಾಗದಲ್ಲಿ ನಿರ್ಮಿಸುವ ಇಚ್ಛೆ ಇತ್ತಂತೆ. ಅದರಲ್ಲಿ ತನ್ನ ನಂಬಿಕೆ ನಿಜವೆಂದು ಸಾಬೀತು ಮಾಡುವುದಕ್ಕೆ ಅಪಹರಿಸಿ ಝೋನ್‌ನಲ್ಲಿಗೆ ಒಯ್ಯುವ ಕಥೆಯನ್ನು ಇಟ್ಟುಕೊಂಡಿದ್ದರಂತೆ. ದೌಭಾರ್ಗ್ಯ ನಮ್ಮದು. ಮತ್ತೊಂದು ಅದ್ಭುತ ಸಿನಿಮಾ ಮಿಸ್ ಆಯಿತು…
ಸ್ಟಾಕರ್ ಚಿತ್ರದ ಸಂಭಾಷಣೆಯ ಕೆಲವು ಸಾಲುಗಳು ಇಲ್ಲಿವೆ:
ಸ್ಟಾಕರ್: ಇದೊ ನಾವೀಗ ಹೊಸ್ತಿಲ ಬಳಿ ಇದ್ದೇವೆ. ನಮ್ಮ ಜೀವನದ ಮಹತ್ವ ಕ್ಷಣವಿದು. ಅಲ್ಲಿ ನಿಮ್ಮ ಬಹುದಿನಗಳ ಬಯಕೆ ಈಡೇರುತ್ತದೆ. ನಿಮ್ಮ ಪ್ರಾಮಾಣಿಕ ಇಚ್ಛೆ. ನಿಮ್ಮ ನೋವುಗಳಿಂದ ಹುಟ್ಟಿದ್ದು..

ಲೇಖಕ: ಲೇಖಕನಾದವನು. ನೊಂದಿರುತ್ತಾನೆ. ಅದಕ್ಕೇ ಬರೆಯುತ್ತಾನೆ. ಅವನಿಗೆ ಸಂದೇಹಗಳಿರುತ್ತವೆ. ತಾನೂ ‘ಏನೋ’ಆಗಿದ್ದೀನಿ ಅನ್ನೋದನ್ನು ತನಗೂ, ತನ್ನ ಜನರಿಗೂ ಸಾಬೀತು ಮಾಡುವುದಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತಾನೆ. ನಾನು ಒಬ್ಬ ಜೀನಿಯಸ್ ಆಗಿ ಬಿಟ್ಟರೆ, ಮತ್ಯಾಕೆ ಬರೆಯಬೇಕು?

ಲೇಖಕ:ನನ್ನ ಪ್ರಜ್ಞೆ ಜಗತ್ತಿನ ತುಂಬಾ ಸಸ್ಯಹಾರವಿರಬೇಕು ಅನ್ನುತ್ತೆ. ಆದರೆ ಸುಪ್ತ ಪ್ರಜ್ಞೆ ಮಾಂಸಾಹಾರಕ್ಕೆ ಹಪಹಪಿಸುತ್ತಿದೆ. ಆದರೆ ನನಗೆ.. ಏನು ಬೇಕು? 

ಸಂಬಂಧಗಳ ನೆಲೆಯ ಸಮಗ್ರ ಚಿತ್ರಣ : ”ಇಲ್ ಪೋಸ್ಟಿನೊ”

with 4 comments

ilpostino1

ಇಲ್ ಪೋಸ್ಟಿನೋ ಚಿತ್ರದಲ್ಲಿ ಕವಿ ಮತ್ತು ಅಂಚೆಯವ

ಸಾಂಗತ್ಯ, “ಇಲ್ ಪೋಸ್ಟಿನೊ” ಚಿತ್ರವನ್ನು ಚಿತ್ರೋತ್ಸವಕ್ಕೆ ಆಯ್ಕೆ ಮಾಡಿಕೊಂಡಾಗ ಹಲವು ಕಾರಣಗಳಿದ್ದವು. ಚಿತ್ರ ನಮ್ಮನ್ನು ಆವರಿಸಿಕೊಳ್ಳುವ ರೀತಿ, ತನ್ನೊಳಗೆ ನಮ್ಮನ್ನು ಒಳಗೊಳ್ಳುವ ಬಗೆ, ಸನ್ನಿವೇಶ, ಕವಿ ಮತ್ತು ಶ್ರೀಸಾಮಾನ್ಯನೊಡಗಿನ ಸಂಬಂಧ, ಅಪ್ಯಾಯಮಾನವಾದ ಕವಿ, ಮಾನವೀಯ ನೆಲೆ…ನಮ್ಮ ಚಿತ್ರೋತ್ಸವ ಆರಂಭವಾಗಿದ್ದೇ ಈ ಚಿತ್ರದಿಂದ. ಚಿತ್ರ ಮುಗಿದು ಅದರ ಕುರಿತು ಚರ್ಚಿಸುವ ಮುನ್ನ ಚಹಾಕ್ಕೆ ಹೊರಟಾಗ ಎಲ್ಲರ ಬಾಯಲ್ಲಿ ಹೊರಟ ಮಾತೊಂದೇ…”ಒಳ್ಳೆ ಆಯ್ಕೆ…ಫೆಂಟಾಸ್ಟಿಕ್ ಫಿಲ್ಮ್’.

ಇಂಥ ಚಿತ್ರದ ಬಗ್ಗೆ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದ ಬೆಂಗಳೂರಿನಲ್ಲಿ ಇತ್ತೀಚೆಗೆ ಆರಂಭವಾಗಿರುವ ಸರಾಟ ಸಲ್ಯೂಷನ್ಸ್ ನ ಕ್ರಿಯಾಶೀಲ ಹಾಗೂ ಬ್ಲಾಗರ್  ಮಹೇಶ್ ಹೆಗಡೆ ಬರೆದುಕೊಟ್ಟಿದ್ದಾರೆ.

*

Writer/star Massimo Troisi postponed heart surgery so that he could complete the film.’  …

 

ಇಂಥದ್ದೊಂದು ವಿಚಾರ ತಿಳ್ಕೊಬೇಕಾಗುತ್ತೆ ಮತ್ತು ಅಲ್ಲಿಂದಲೇ ಬರೆಯಬೇಕಾದ ಸಂದರ್ಭ ಬರುತ್ತೆ ಅಂದ್ಕೊಂಡಿರ್ಲಿಲ್ಲ, ಸಿನಿಮಾ ನೋಡುವಾಗ. ಸುಮ್ಮನೆ ಸಿನಿಮಾ ನೋಡಿ, ಅದರ ಕುರಿತಾಗಿಷ್ಟು ಮಾತಾಡಿ, ಚರ್ಚೆ ಮಾಡಿ, ಹೊಗಳಿ ಇಲ್ಲಾ ತೆಗಳಿ.. ಇದ್ದಿದ್ದೆ ಅವೆಲ್ಲಾ ಅಲ್ವಾ?

 

ಆದರೆ ಕೆಲವು ಸಂದರ್ಭಗಳಲ್ಲಿ ವಿಷಯವನ್ನು ಮೀರುತ್ತದೆ ವಸ್ತು. ವಿಷಯಕ್ಕಿಂತ ವ್ಯಕ್ತಿ ಮುಖ್ಯವಾಗಿಬಿಡುತ್ತಾನೆ. ‘ Troisi ‘ಅನ್ನುವ ಅಲ್ಪಾಯುಷಿಯ ವಿಷಯದಲ್ಲಾದದ್ದೂ ಅದೇ. 1994 ರಲ್ಲಿ ಬಿಡುಗಡೆಯಾದ ತನ್ನ ಸಿನಿಮಾವೊಂದರ ಚಿತ್ರೀಕರಣಕ್ಕೆ ತೊಂದರೆಯಾಗಬಾರದೆಂದು ಆತ ಆಗಲೇಬೇಕಿದ್ದ ತನ್ನ ಹೃದಯ ಚಿಕಿತ್ಸೆಯನ್ನು ಮುಂದೂಡಿದ್ದ. ಯಾವ ತೊಂದರೆಯೂ ಆಗದಂತೆ ಚಿತ್ರವನ್ನು ಮುಗಿಸಿ ಒಂದೇ ಒಂದು ದಿನ, he suffered a fatal heart attack. ಅಷ್ಟೇ. ಚಿತ್ರ ನೋಡಲು ಆತನೇ ಇರಲಿಲ್ಲ. ‘Michael Radford’ ನಿರ್ದೇಶನದ  ‘ಇಲ್ ಪೋಸ್ಟಿನೊಎನ್ನುವ ಚಿತ್ರ ಮಾತ್ರ ಅದ್ಭುತವಾಗಿ ಮೂಡಿಬಂದಿತ್ತು.

 

‘Il Postino ಮುಖ್ಯ ಪಾತ್ರವೇ ಆತನದು. Mario Ruoppolo ಅನ್ನುವ ಹೆಸರಿನ ಪೋಸ್ಟ್ ಮ್ಯಾನ್ ಅಂವ. ಜೊತೆಗೆ ಇನ್ನೆರಡು ಮುಖ್ಯ ಪಾತ್ರಗಳು. ‘ ಚಿಲಿ ಕವಿ Pablo Neruda’ ಪಾತ್ರದಲ್ಲಿ ‘Philippe Noiret’ ಹಾಗು ‘Beatrice’ ಪಾತ್ರದಲ್ಲಿ  ‘Maria Grazia Cucinotta’. Beatrice ಮರಿಯೊನ ಪ್ರೇಯಸಿ.

 

ಸಾಮಾನ್ಯ ಅಂಚೆಯವ ಒಬ್ಬ ಪ್ರಸಿದ್ದ ಕವಿಯ ಪತ್ರಗಳನ್ನು ತಲುಪಿಸುತ್ತಾ ತಲುಪಿಸುತ್ತಾ ತಾನೂ ಕವಿತೆಯ ಪ್ರೇಮಕ್ಕೆ ಬೀಳುವುದರ ಸುತ್ತ ಹಣೆದ ಸುಂದರ ಕಾವ್ಯ ಇದು. ನೆರುಡಾ ಅನ್ನುವ ಚಿಲಿಯ ಕವಿ ತನ್ನ ದೇಶದಿಂದ ಹೊರಬಂದವನು ನೆಲೆ ಕಂಡುಕೊಳ್ಳುವುದು ಇದೇ ‘Mario ‘ ಚಿಕ್ಕ ದ್ವೀಪದಲ್ಲಿ. ಮೀನುಗಾರಿಕೆಯನ್ನೆ ನಂಬಿಕೊಂಡ ದ್ವೀಪದ, ಮೀನುಗಾರನೊಬ್ಬನ ಮಗ ‘Mario ‘. ತಂದೆಯ ವೃತ್ತಿಯನ್ನು ಮುಂದುವರಿಸುವ ಯಾವುದೇ ಇಚ್ಛೆಯಿಲ್ಲದ ಮಗ. ಆತ ನೆರುಡಾನನ್ನು ಭೇಟಿಯಾಗುವುದು, ಅಂಚೆಯವನಾಗಿ ಕೆಲಸ ಪ್ರಾರಂಭಿಸುವುದು… ಹೀಗೆ Mario ಬದುಕು ಪ್ರಾರಂಭವಾಗುತ್ತದೆ. ಚಿತ್ರ ಆಗಲೇಮ್ಮನ್ನು ಹಿಡಿದಿಟ್ಟುಕೊಳ್ಳುತ್ತದೆ, ‘Timely ಸಂಭಾಷಣೆ ಮತ್ತು ‘Punch’ಗಳ ಮೂಲಕ

 

ತನ್ನದೊಂದು ಮುರುಕು ಸೈಕಲ್, ಚಿತ್ರ ವಿಚಿತ್ರ ಹಾವ ಭಾವ, ಮಾತುಗಳ ಪೋಸ್ಟ್ ಮ್ಯಾನ್, ತಾನು ದಿನವೂ ಭೇಟಿಯಾಗುವ, ಕಮ್ಯುನಿಸ್ಟ್ ವಿಚಾರ ಧಾರೆಯ, ಅದರಿಂದಾಗಿಯೇ ತನ್ನ ದೇಶದಿಂದ ಹೊರದಬ್ಬಲ್ಪಟ್ಟ, ಕವಿಗೆ ಹತ್ತಿರವಾಗುತ್ತಾ ಹೋಗುತ್ತಾನೆ. ಕವಿಯ ಗೆಳೆಯನಾಗುತ್ತಾನೆ. ಏನೆಂದರೆ ಏನೂ ತಿಳಿಯದ ‘Mario’ಗೆ ಕವಿತೆಯನ್ನು ಹೇಳುತ್ತಾನೆ ನೆರುಡಾ. ಅದನ್ನು ಅನುಭವಿಸಲು, ಪ್ರೀತಿಸಲು ಕಲಿಸುತ್ತಾನೆ. ‘ಮರಿಯೊಕವಿತೆ ಬರೆಯಲೂ ಪ್ರಯತ್ನಿಸುತ್ತಾನೆ

 

ಹಾಗೇ ಸುಮ್ಮನೆ ಅಲ್ಲ! ನೆರುಡಾನಿಂದ ಪ್ರಭಾವಿತನಾದವನು ಕವಿತೆ ಬರೆಯ ಹೊರಟಿದ್ದು ಅಷ್ಟರಲ್ಲಾಗಲೇ ತಾನು ಇಷ್ಟಪಟ್ಟಿದ್ದ ‘Beatrice’ಳನ್ನು ಒಲಿಸಿಕೊಳ್ಳುವುದಕ್ಕೆ. ಆದ್ರೆ ಆತನ ಪ್ರಯತ್ನ ‘pathetic failure’ ಆಗುವುದು, ಮುಂದೆ ನೆರುಡಾನ ಸಹಾಯದಿಂದ ಅವರಿಬ್ಬರೂ ಹತ್ತಿರವಾಗುವುದು, ನಂತರ ಇಬ್ಬರ ಮದುವೆ ..ಹೀಗೆ ಸುಂದರ ಸನ್ನಿವೇಶಗಳ, ಸಂಭಾಷಣೆಗಳ ನಡುವೆ ಸಾಗುತ್ತದೆ ಚಿತ್ರ.

ಅಷ್ಟರಲ್ಲೊಮ್ಮೆ ಕವಿ ನೆರುಡಾಗೆ ಮರಳಿ ತನ್ನ ನೆಲಕ್ಕೆ ಹೊರಡುವ ಅವಕಾಶವಾಗಿ, ಆತ ಚಿಲಿಗೆ ಹೊರಟರೆ, ‘ಮರಿಯೊ ಬದುಕು ನಿತ್ಯದ ದುರಂತಕ್ಕೆ ಮರಳುತ್ತದೆ. ಕವಿಯ ವಿಚಾರದಿಂದ ಪ್ರಭಾವಿತನಾದಮರಿಯೊಆತನ ವಿಚಾರಗಳೂ ತನ್ನದೆಂದುಕೊಂಡು ತನ್ನನ್ನೂಕಮ್ಯುನಿಸ್ಟ್ಅಂದುಕೊಳ್ಳುತ್ತಾನೆ. ಅದು ಕೇವಲ ಕವಿಯ ಮೇಲಿನ ಪ್ರೀತಿಯಿಂದಾದದ್ದು, ಯಾವುದೇ ವಿಚಾರ ಧಾರೆ, ಸೈದ್ದಾಂತಿಕ ನಿಲುವು, ರಾಜಕೀಯ ತಿಳುವಳಿಕೆಯಿಂದಲ್ಲ

 

ಕವಿಗೆ ಮತ್ತೆ ಸಿಗುವ ಹಂಬಲದಲ್ಲೇ ಸಮಯ ಸಾಗುತ್ತದೆ. ನೆರುಡಾನ ಪತ್ರದ ನಿರೀಕ್ಷೆಯೂ ಹುಸಿಯಾಗುತ್ತಾ, ತನ್ನ ದೈನಂದಿನ ಬದುಕಿನಲ್ಲೂ ಶಾಂತಿ ಕಳೆದುಕೊಳ್ಳುತ್ತಾನೆ ‘Mario’.  He finds himself in intense state of melancholy.  ಕೊನೆಗೊಮ್ಮೆ ಆತನ ಪತ್ರ ಬರುವುದೂ, ‘Mario’ ಪತ್ರ ಕವಿ ಬರೆದುದಲ್ಲವೆಂದು ತಿಳಿದುಕೊಳ್ಳುವುದೂ ಅದರಿಂದಾಗಿ ನಿರಾಶನಾಗುವುದೂ ನಡೆದುಹೋಗುತ್ತದೆ. ‘Mario’ ತನ್ನನ್ನು ತಾನು ಕಂಡುಕೊಳ್ಳುವ ಪ್ರಯತ್ನ ಮಾಡುತ್ತಾನೆ. ಆತ್ಮವಿಮರ್ಶೆ ಮಾಡಿಕೊಳ್ಳುತ್ತಾನೆ. ಅದರಿಂದಾಗಿ ತಾನು ಏನಾದರೂ ಮಾಡಬೇಕೆಂಬ ಬಯಕೆಯುಂಟಾಗುತ್ತದೆ ಆತನಿಗೆ. ಉಪಯುಕ್ತವಲ್ಲದಿದ್ದರೂ ಸರಿ. ತನ್ನ ದ್ವೀಪದ ಎಲ್ಲ ಶಬ್ದಗಳನ್ನೂ, ಭಾವನೆಗಳನ್ನೂ ಧ್ವನಿಮುದ್ರಿಸುತ್ತಾನೆ. ನೆರುಡಾ ಇಲ್ಲದ ತನ್ನ ನೆಲದ ಮತ್ತೊಂದು ರೂಪ ಕಾಣುತ್ತದೆ ಆತನಿಗೆ. ಬರೆಯುವುದಕ್ಕೊಂದು ಪ್ರೇರಣೆ ಸಿಗುತ್ತದೆ

 

ನೆರುಡಾನಿಗಾಗಿ ಬರೆದ ಕವನವನ್ನು ವಾಚಿಸುವ ಅವಕಾಶ ಸಿಕ್ಕು, ಸಂಭ್ರಮದಿಂದ ಹೊರಡುತ್ತಾನೆ ಮರಿಯೊ. ಆತನಿಗೆ ತನ್ನ ಕವನವನ್ನು ನೆರುಡಾಗೆ ಅರ್ಪಿಸಬೇಕುಅದನ್ನೆಲ್ಲಾ ಧ್ವನಿಮುದ್ರಿಸಿ ನೆರುಡಾಗೆ ತಲುಪಿಸಬೇಕು. ಆದರೆ ಮರಿಯೋನ ಹಣೆಬರಹ ಬದಲಾಗುತ್ತದೆ, ಅಲ್ಲ ಅಲ್ಲಿಗೇ ಮುಗಿಯುತ್ತದೆ. ಸ್ಟೇಜಿನ ಮುಂದೇ ಶುರುವಾದ ಗಲಭೆಯಲ್ಲಿ ಮರಿಯೊ ಇಲ್ಲವಾಗುತ್ತಾನೆಕವನ ಅಲ್ಲೇ ಉಳಿದುಹೋಗುತ್ತದೆ. ಕವಿ ಚಿಲಿಯಲ್ಲಿ

ಸಮಯ ಸರಿಯುತ್ತದೆ. ನೆರುಡಾ ತಾನಿದ್ದ ದ್ವೀಪವನ್ನೂ, ತಾನಿಷ್ಟಪಟ್ಟಅಂಚೆಯವನನ್ನೂನೋಡಲು ಬರುತ್ತಾನೆ. ಇತ್ತ ಮಾರಿಯೊ ಕಾಲವಾದ ಸ್ವಲ್ಪ ಸಮಯದಲ್ಲೇಬಿಯಟ್ರೀಸ್‘ ‘ಪೆಬ್ಲಿಟೊಗೆ ಜನ್ಮ ನೀಡುತ್ತಾಳೆ. ತನ್ನಲ್ಲಿಗೆ ಬರುವ ಕವಿಗೆ ಎದುರಾಗುವ ಮಗನೊಂದಿಗೆ ಕಣ್ಣೀರ ಸ್ವಾಗತ ನೀಡುವಬಿಯಾಟ್ರೀಸ್ಮರಿಯೋನ ಟೇಪನ್ನೆಲ್ಲಾ ನೆರುಡಾಗೆ ನೀಡುತ್ತಾಳೆ….  

 

ಅಲ್ಲಿಗೆ ಚಿತ್ರ ಮುಗಿಯುವುದಿಲ್ಲ. ನಿಮ್ಮೊಳಗೆ ನಿಜವಾದ ಚಿತ್ರ ಮೂಡಲಾರಂಭಿಸುತ್ತದೆ. ಚೆಂದದ ನಿರೂಪಣೆ, ಜೀವನ ಪ್ರೀತಿ, ಗೆಳೆತನ, ಕಲಿಕೆ.. ಬಹಳಷ್ಟು ಕಾರಣಗಳಿಗೆ ಹಿಡಿದಿಟ್ಟುಕೊಳ್ಳುತ್ತದೆ ಚಿತ್ರ. ಕವಿತೆಯಂತೆ ಸಾಗುತ್ತದೆ.  ಕಥೆಗೆ ತಕ್ಕ ಪರಿಸರ, ಅದ್ಭುತ ಅನ್ನುವಂತಹ ಚಿತ್ರೀಕರಣ, ಸುಂದರ ಸಂಗೀತ ಮೋಡಿಮಾಡುತ್ತದೆ. ಚಿತ್ರದ ಕೊನೆಯಲ್ಲಿ ಬರುವ ಮರಿಯೊನ ಮಗ, ಬೆಳ್ಳನೆಯ ಚೆಂಡು ಹಾಗೆಯೇ ನೆನಪಿನಲ್ಲುಳಿಯುತ್ತದೆ….

*

ನಿರ್ದೇಶನ : Michael Radford, Mario Cecchi Gori, ಛಾಯಾಗ್ರಹಣ : ಸಂಗೀತ : Luis Enriquez Bacalov, ಇಸವಿ : 1994, ಭಾಷೆ : ಇಟಾಲಿಯನ್, ಸಂಕಲನ : ಕಾಲಾವಧಿ :  147 ನಿಮಿಷ, ಪ್ರಶಸ್ತಿ : BAFTA Award for best film not in the language, Academy Award for Originial music score. The film alos nominated for Best Actor in a Leading Role (Massimo Troisi), Best director,Best picture and Best writing, Screenplay based on Material from Another Medium.

ಅಕಿರಾ ಕುರೋಸಾವಾನ ಡ್ರೀಮ್ಸ್- ನಮ್ಮೆಲ್ಲರ “ಕನಸು”!

with 6 comments

 crows-1 ಡ್ರೀಮ್ಸ್ ಚಿತ್ರದಲ್ಲಿ ಹಾದು ಹೋಗುವ ವಿನ್ಸೆಂಟ್ ವ್ಯಾಂಗೋನ ಪೇಂಟಿಂಗ್

ಕನಸಿನ ಸುತ್ತ ಮೇರೆ ಎಂಬ ಗೆರೆಗಳಿಲ್ಲ. ಆದರೆ ಕನಸಿನ ತುಂಬ ಗೆರೆಗಳೇ. ಅಮೂರ್ತ ಶೈಲಿಯನ್ನು ನೆಚ್ಚಿಕೊಂಡ ಕಲಾವಿದನು ಎಳೆದ ಅಡ್ಡ, ಉದ್ದದ ರೇಖೆಗಳೇ ಕನಸಿನ ತಾತ್ಪರ್ಯ. ಜಗತ್ತಿನ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಅಕಿರಾ ಕುರೋಸಾವಾ ಇಂಥ ಕಲಾವಿದ. ತನು ಕಂಡ ಕನಸುಗಳನ್ನು ಬದಲಾಯಿಸದೇ ಹಾಗೆಯೇ ಚಿತ್ರ ಮಾಡಿದರೆ ಹೇಗೆ ಎಂಬ ಆಲೋಚನೆಯಡಿ ರೂಪುಗೊಂಡಿದ್ದು “ಡ್ರೀಮ್ಸ್’. ಬಿಡಿ ಬಿಡಿಯಾದ ಎಂಟು ಕನಸುಗಳ ಗುಚ್ಛದಲ್ಲಿ ಕೆಲವನ್ನು “ಸಾಂಗತ್ಯ’ ಕುಪ್ಪಳ್ಳಿಯಲ್ಲಿ ಆಯೋಜಿಸಿದ್ದ ಚಿತ್ರೋತ್ಸವದಲ್ಲಿ ಪ್ರದರ್ಶಿಸಿತು. ಆ ಕುರಿತ ಬರಹ ವಿಜಯ ಕರ್ನಾಟಕದ ಬಾಗಲಕೋಟೆಯ ವರದಿಗಾರ ರವಿರಾಜ್ ಗಲಗಲಿ ಅವರದ್ದು. 

*

ಅಕಿರಾ ಕುರೋಸಾವಾ ಹೆಸರು ಜಾಗತಿಕ ಚಿತ್ರರಂಗದಲ್ಲಿ ದೊಡ್ಡ ಹೆಸರು. ಅವರು ನಿರ್ದೇಶಿಸಿದ ಚಿತ್ರಗಳು ಪ್ರೇಕ್ಷಕರಿಗೆ ಹೊಸ ಅನುಭವ, ವಾಸ್ತವದ ದರ್ಶನ ಮಾಡಿಸಿವೆ. “ರೊಶೊಮನ್’ ನಿಂದ ಹಿಡಿದು  ಎಲ್ಲ ಚಿತ್ರಗಳೂ ಒಂದಕ್ಕಿಂತ ಒಂದು ಭಿನ್ನ. ರೊಶೊಮನ್ ಅನ್ನೇ ಉದಾಹರಿಸುವುದಾದರೆ “ಒಂದು ಕೊಲೆ’ ಯ ಸುತ್ತ ಇರುವ ಹಲವು ನೆಲೆ-ಅದರಲ್ಲೂ ಮನೋನೆಲೆ- ಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾನೆ.

ಹಾಗೆಯೇ ಸದಾ ಬಣ್ಣ ಬಣ್ಣವಾಗಿ ಕಾಡುವ ಅವನ ಚಿತ್ರ “ಡ್ರೀಮ್ಸ್’. ಕನಸು ಹೇಗೆ ಅಮೂರ್ತವೋ ಹಾಗೆಯೇ ಇವನ ಡ್ರೀಮ್ಸ್ ಸಹ ಅಮೂರ್ತವೇ. ಅಂದರೆ ಕಂಡ ಕನಸನ್ನೇ ಯಥಾವತ್ತಾಗಿ ಚಿತ್ರೀಕರಿಸುವ ಪ್ರಯತ್ನವಿದು.
ನಾವಾದರೂ ಅಷ್ಟೇ. ರಾತ್ರಿ ಕಂಡ ಕನಸನ್ನು ಬೆಳಗ್ಗೆ ವಿವರಿಸುವಾಗ ಪಡೆಯುವ ರೂಪವೇ ಬೇರೆ. ಜತೆಗೆ ಹಾಗೆ ಯಥಾವತ್ತಾಗಿ ಪ್ರಕಟಿಸಿದಾಗ ಒಂದಕ್ಕೊಂದು ಅರ್ಥ-ಸಂಬಂಧ ಇದೆಯೇ ಎನಿಸುವ ಪ್ರಶ್ನೆಯೂ ಹುಟ್ಟುವುದುಂಟು. ಆದರೆ ಅಕಿರಾನ “ಡ್ರೀಮ್ಸ್’ ನಲ್ಲಿ ಎಲ್ಲೂ ತಾಳ ತಪ್ಪುವುದಿಲ್ಲ. ಎಲ್ಲವೂ ಸುಂದರ ಕನಸುಗಳು.
ಆ ಸರಣಿಯಲ್ಲಿ ನನಗೆ ಮನತಟ್ಟಿದ್ದು “ವಾಟರ್‌ಮಿಲ್ ವಿಲೇಜ್’. ಅದೊಂದು ಹಳ್ಳಿ, ಅಕ್ಕಪಕ್ಕ ನೀರೆತ್ತುವ ಯಂತ್ರಗಳು, ನಡುವೆ ನದಿ, ಆಚೆ ಈಚೆ ಸುಂದರ ಗಿಡಗಳು. ಊರಿಗೆ ಭೇಟಿ ನೀಡುವ ಯುವ ಪ್ರವಾಸಿಗನೊಬ್ಬ ಆ ಊರನ್ನು ಕಂಡು ಹುಟ್ಟಿಕೊಂಡ ಕೌತುಕದ ಪ್ರಶ್ನೆಗಳಿಗೆ ಗ್ರಾಮದ ಹಿರಿಯಜ್ಜನಲ್ಲಿ ಉತ್ತರ ಹುಡುಕಿಕೊಳ್ಳುತ್ತಾನೆ. ಅಜ್ಜಹೇಳುವ ಮಾತುಗಳೆಲ್ಲ ಮುತ್ತು. ಅವನ ಮಾತಿನಲ್ಲಿ “ತನ್ನ ಅಭಿವೃದ್ಧಿಯ ಆಯ್ಕೆ’ ಯನ್ನು ತಣ್ಣಗೆ ವಿವರಿಸುತ್ತಾನೆ.

ಇಂದು ಅಭಿವೃದ್ಧಿಯ ಪಥ ಹಿಡಿದಿರುವ ನಾವು, ಅದರಿಂದಾಗುತ್ತಿರುವ ವಿನಾಶದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇರುವುದನ್ನೂ ಉಳಿಸಿಕೊಂಡು, ಹೊಸದಕ್ಕೆ ಮಾರ್ಪಾಡುಗೊಳ್ಳುವ-ಸ್ವೀಕರಿಸುವ ಪ್ರಯತ್ನ- ಸುಸ್ಥಿರ ಅಭಿವೃದ್ಧಿ- ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಅಂಥ ನಮ್ಮ ಪ್ರಶ್ನೆಗಳಿಗೆ ಅಜ್ಜನೇ ಉತ್ತರಿಸುತ್ತಾನೆ. ಪರಿಸರದೊಂದಿಗಿನ ಬದುಕೇ ಕ್ಷೇಮ-ಸುಗಮ ಎನ್ನುವುದು ಅವನ ಹಿತವಚನವೂ ಹೌದು.

ಆ ಊರಿನಲ್ಲಿ ಮೃತಪಟ್ಟವರ ಅಂತ್ಯಯಾತ್ರೆಯಲ್ಲಿ ಯಾರೂ ಅಳುವುದಿಲ್ಲ, ನಗು ನಗುತ್ತ ಕಳಿಸಿಕೊಡುತ್ತಾರೆ. ಆ ಊರಿನ ಜನರ ಆಯುಷ್ಯವೂ ಹೆಚ್ಚೇನಿಲ್ಲ ಕೇವಲ ೧೦೩, ೧೦೪ ಅಷ್ಟೇ. ಅಂದ ಹಾಗೆ ಪ್ರವಾಸಿಗನೊಂದಿಗೆ ಸಂಭಾಷಣೆ ನಡೆಸುವ ಅಜ್ಜನ ವಯಸ್ಸೂ ಕೇವಲ ೧೦೩. ಅಂದರೆ ಬದುಕು ಬರೀ ದುಃಖಿಸುವುದಲ್ಲ ; ಸುಖಿಸುವಂಥದ್ದೂ ಎಂದು ಹೇಳುತ್ತಲೇ ಕಟ್ಟಿಕೊಡುವ ದೃಶ್ಯಗಳು ಅದ್ಭುತ. “ನಮ್ಮ ಹೃದಯ ಸ್ವಚ್ಛವಾಗಿದ್ದರೆ ಜಗತ್ತು ಸ್ವಚ್ಛ’-ಚಿತ್ರ ಮುಗಿದ ಮೇಲೂ ಮನಸ್ಸಿನಲ್ಲಿ ಉಳಿಯುವ ಮಾತು. ಮಲೆನಾಡಿನ ಒದ್ದೆ ಒದ್ದೆ ಪರಿಸರ, ಹಸಿರು ಬಣ್ಣ ಹೊದ್ದ ಪರ್ವತ, ಝರಿ, ಹೂವಿನ ತೋಟ- ಹೀಗೆ ಇದು ಬಣ್ಣದ ಹೋಳಿ. ಇದರ ಛಾಯಾಗ್ರಹಣವಂತೂ ಅದ್ಭುತ. 

ಮತ್ತೊಂದು ಅಂಥದೇ ಚಿಂತನೆಗೀಡು ಮಾಡುವಂಥದ್ದು “ದಿ ಟನಲ್’. ಯುದ್ಧದ ಪರಿಣಾಮವನ್ನು ತೀಕ್ಷ್ಣವಾಗಿ ಹೇಳುವ ಈ ಕನಸು, ಸೇನಾಧಿಕಾರಿಯೊಬ್ಬ ಆತ್ಮಾವಲೋಕನಕ್ಕೀಡಾಗುವಂಥದ್ದು. ಅಲ್ಲದೇ ಪ್ರಸಿದ್ಧ ಕಲಾವಿದ “ವ್ಯಾನ್‌ಗೋ’ ಕುರಿತಾದ “ಕ್ರೌಸ್’ಸಹ ಪ್ರಮುಖವೇ. “ದಿ ಡಿಪಾರ್ಟೆಡ್’ ಚಿತ್ರದ ನಿರ್ದೇಶಕ ಮಾರ್ಟಿನ್ ಸೊರ್ಸೆಸೆ ಇಲ್ಲಿ ವ್ಯಾನ್‌ಗೋ ಪಾತ್ರಧಾರಿ. ಇದಲ್ಲದೇ, ಸನ್‌ಶೈನ್ ಥ್ರೂ ದ ರೇನ್, ಮೌಂಟ್ ಫಿಜಿ ಇನ್ ರೆಡ್ ಇತ್ಯಾದಿ ಕನಸುಗಳಿವೆ. ನಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದಾದ ಚಿತ್ರ.

ನಿರ್ದೇಶನ : ಅಕಿರಾ ಕುರೋಸಾವಾ, ಛಾಯಾಗ್ರಹಣ : Takao Saito, Masaharu Ueda, ಇಸವಿ : 1990, ಭಾಷೆ : ಜಪಾನಿ, ಸಂಕಲನ : Tome Minami, ಕಾಲಾವಧಿ :  113 ನಿಮಿಷ