Archive for the ‘ಚಿತ್ರ ಖಜಾನೆ’ Category
ಜುಕ್ತಿ ಟಕೋ ಆರ್ ಗಪ್ಪೋ
ಜುಕ್ತಿ ಟಕೋ ಆರ್ ಗಪ್ಪೋ(ಕಾರಣ, ವಾದ ಮತ್ತು ಕಥೆ)
ಈ ಶೀರ್ಷಿಕೆ, ಈ ಸಿನೆಮಾವನ್ನು ನೋಡಬಹುದಾದ ಆಯಾಮಗಳನ್ನು ಸೂಚ್ಯವಾಗಿ ತಿಳಿಸುತ್ತದೆ. ಇದು ಬಂಗಾಳದ ಇಂಟಲೆಕ್ಚುಯಲ್ ನಿರ್ದೇಶಕ ಋತ್ವಿಕ್ ಘಟಕ್ ಅವರ ಕೊನೆಯ ಪ್ರಸ್ತುತಿ. ಆಂಶಿಕವಾಗಿ ಅವರ ಬಯಾಗ್ರಫಿ ಕೂಡಾ. ಬಂಗಾಳ ವಿಭಜನೆಯ ನೋವನ್ನು ಎದೆಯಲ್ಲಿ ಹೊತ್ತ, ಕುಡಿತದ ಚಟಕ್ಕೆ ದಾಸನಾಗಿ ತನ್ನನ್ನು ತಾನೇ ನಾಶ ಮಾಡಿಕೊಳ್ಳುವ ನೀಲಕಂಠ ಒಂದು ಕಾಲದ ಚಿಂತಕ ಹಾಗೂ ಬುದ್ಧಿಜೀವಿ. ಅವನ ಅಲೆಮಾರಿತನ ಮತ್ತು ಚಟಗಳಿಂದ ಬೇಸತ್ತ ಪತ್ನಿ ದುರ್ಗಾ ಮನೆ ಖಾಲಿ ಮಾಡಿ, ತನ್ನ ಮಗನನ್ನು ಕರೆದುಕೊಂಡು ಊರು ಬಿಟ್ಟು ಹೊರಡುವ ದೃಶ್ಯದೊಂದಿಗೆ ಸಿನೆಮಾ ಶುರುವಾಗುತ್ತದೆ. ಈ ಚಿತ್ರದುದ್ದಕ್ಕೂ ನೀಲಕಂಠನ ನೆಲದ ಹಂಬಲ, ಸೋಲು, ಹತಾಶೆಗಳು ಸೂಕ್ಷ್ಮವಾಗಿ ಅನಾವರಣಗೊಳ್ಳುತ್ತ ಸಾಗಿದೆ. ಇದು, ಬೇರ್ಪಡಿಕೆಯ ನೋವು. ಚಿತ್ರದ ಆರಂಭದಲ್ಲಿ ಪತಿ ಪತ್ನಿಯ ಬೇರ್ಪಡಿಕೆಯ ದೃಶ್ಯವಿದ್ದರೂ ನೀಲಕಂಠನಲ್ಲಿ ನೆಲದಿಂದ ಬೇರ್ಪಟ್ಟ ದುಃಖವನ್ನೇ ನಾವು ಮುಖ್ಯವಾಗಿ ಕಾಣುತ್ತೇವೆ. ಬಾಂಗ್ಲಾದ ಒಗ್ಗೂಡುವಿಕೆಯ ಕನಸು ಕಾಣುವ ನೀಲಕಂಠ ತನ್ನ ಪತ್ನಿಯೊಂದಿಗೆ ಒಗ್ಗೂಡಲು ಸಾಧ್ಯವಾಗದೆ ಹೋಗುವುದೊಂದು ವಿಡಂಬನೆ. ತನ್ನ ಅಸ್ತಿತ್ವ ನಾಶದ ಕಾರಣದಿಂದಾಗಿ ಉಂಟಾದ ಚಡಪಡಿಕೆಂದಲೇ ಆತನ ಅಸ್ತಿತ್ವ ಕುಡಿತದಲ್ಲಿ ಕರಗುತ್ತ ಹೋಗುತ್ತದೆ. ಆದರೆ ಆತ, ಜೀವನಕ್ಕಾಗಿ ತಾನಲ್ಲದ ಮತ್ತೊಂದು ಪಾತ್ರವನ್ನು ಅಭಿನುಸಲು ತಯಾರಿಲ್ಲದ ಪ್ರಾಮಾಣಿಕ. ಇದು, ಆತ ಶತ್ರುಜಿತ್ ಎನ್ನುವ ಮತ್ತೊಬ್ಬ ಮಾಜಿ ಚಿಂತಕನೊಂದಿಗೆ ನಡೆಸುವ ಸಂಭಾಷಣೆಯಲ್ಲಿ ನಿರೂಪಿತವಾಗಿದೆ. ಈ ಸಿನೆಮಾ ನೆಲೆ ಕಳೆದುಕೊಂಡವರ ಹುಡುಕಾಟವನ್ನು ಬಿಂಬಿಸುತ್ತದೆ. ಇಲ್ಲಿ ನೀಲಕಂಠ ಎರಡೂ ಬಗೆಯಲ್ಲಿ ನೆಲೆ ಕಳೆದುಕೊಂಡವನಾಗಿದ್ದಾನೆ. ಅವನ ಪ್ರಯಾಣ ಬಾಹ್ಯ ನೆಲೆಯನ್ನು ಹುಡುಕುವುದಕ್ಕಾದರೆ, ಕುಡಿತದ ಮೈಮರೆವು ಒಳಗಿನ ಹುಡುಕಾಟದ ಪ್ರಕ್ರಿಯೆಯಂತೆ ತೋರುತ್ತದೆ. ಅವನ ನಿರುದ್ಯೋಗಿ ಮತ್ತು ನಿರಾಶ್ರಿತ ಸಾಥಿಗಳು ಅವನ ಅಲೆಮಾರಿತನದ ಅನಾಥಪ್ರಜ್ಞೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡುತ್ತಾರೆ. ಕಾಡಿನಲ್ಲಿ ಅವಿತು ನೆಲಕ್ಕಾಗಿ ಹೋರಾಡುವ ನಕ್ಸಲರನ್ನು ಆತ ಭೇಟಿಯಾಗುವುದು ಕೂಡ ಒಂದು ಸಂಕೇತವೇ. ಜುಕ್ತಿ, ಟಕೋ ಆರ್ ಗಪ್ಪೋ… ಕಾರಣ, ವಾದ ಮತ್ತು ಕಥೆ; ಇದು ತರ್ಕವನ್ನು “ರಿದ ಸಿನೆಮಾ. ಪ್ರತಿ ಬಾರಿ ನೋಡಿದಾಗಲೂ ಭಿನ್ನ ಅನುಭವಗಳನ್ನು ಕಟ್ಟಿಕೊಡುತ್ತ, ನಮ್ಮನ್ನೂ ತನ್ನಲ್ಲಿ ಒಳಗೊಳ್ಳುತ್ತ ಸಾಗುತ್ತದೆ. ಸಿನೆಮಾದ ಕಥೆಯ ಸಂದರ್ಭ ನಾಲ್ಕು ದಶಕ ಅಂದಿನದಾದರೂ ಅದರ ಭಾವ ಸದಾ ಕಾಲಕ್ಕೂ ಸಲ್ಲುತ್ತದೆ.
ಇಸವಿ: 1974
ಭಾಷೆ: ಬಂಗಾಳಿ
ನಿರ್ದೇಶನ: ಋತ್ವಿಕ್ ಘಟಕ್
ಮುಖ್ಯ ತಾರಾಗಣ: ನೀಲ ಕಂಠ- ಋತ್ವಿಕ್ ಘಟಕ್
ನಚಿಕೇತ- ಸೌಗತ ಬರ್ಮನ್
ಬಂಗ ಬಾಲಾ- ಸಾಂಘಮಿತ್ರ
ದುರ್ಗಾ- ತೃಪ್ತಿ ಮಿತ್ರ
ಸತ್ಯ- ಋತಬನ್ ಘಟಕ್ ~ಮಾಹಿತಿ : ಚೇತನಾ ತೀರ್ಥಹಳ್ಳಿ
ಕ್ರ್ಯಾಶ್
ಕ್ರ್ಯಾಶ್
ಕ್ರ್ಯಾಶ್ – ಕಥೆ ಹಲವು, ಆತ್ಮವೊಂದು.
ಲಾಸ್ ಏಂಜೆಲ್ಸ್ ನಗರ. 1991ರ ಒಂದು ಸಂಜೆ. ಪಾಲ್ ಹ್ಯಾಗಿಸ್ ತನ್ನ ಕಾರನ್ನು ವಿಲ್‌ಶೈರ್ ಬೂಲೆವಾರ್ಡಿನ ವಿಡಿಯೊ ಅಂಗಡಿಯೊಂದರ ಎದುರು ನಿಲ್ಲಿಸುತ್ತಿದ್ದಂತೆಯೆ ಈರ್ವರು ಅದನ್ನು ಕಾರ್ ಜ್ಯಾಕ್ ಮಾಡಿದರು. ಆ ಘಟನೆಯನ್ನು ಪಾಲ್ ಹ್ಯಾಗಿಸ್ ಮರೆಯಲೇ ಇಲ್ಲ. ಹದಿಮೂರು ವರುಷಗಳ ನಂತರ ಇದೇ ಘಟನೆಯಿಂದ ಸ್ಫೂರ್ತಿಗೊಂಡ ಚಲನಚಿತ್ರವೊಂದನ್ನು ಆತ ನಿರ್ದೇಶಿಸಿದ. ‘ಕ್ರ್ಯಾಶ್’ 2005ರ 78ನೆಯ ಅಕ್ಯಾಡೆಮಿ ಅವಾರ್ಡುಗಳ ಪೈಕಿ ಮೂರು ಆಸ್ಕರುಗಳನ್ನು ಗೆದ್ದ ಅಪರೂಪದ ಚಲನಚಿತ್ರ. ಅಮೆರಿಕಾದ ಪ್ರಮುಖ ನಗರಗಳಲ್ಲೊಂದಾದ ಲಾಸ್ ಏಂಜೆಲ್ಸ್ ನಲ್ಲಿ ಕೇಂದ್ರಿತವಾಗಿರುವ ‘ಕ್ರ್ಯಾಶ್’ನ ಕಥಾವಸ್ತು ಅಮೆರಿಕೆಯಲ್ಲಿ ಸುಪ್ತವೂ ವ್ಯಾಪಕವೂ ಆಗಿರುವ ವರ್ಣಭೇದ ಹಾಗೂ ಅದಕ್ಕೆ ಹೊಂದಿಕೊಂಡ ಹಲವು ಸಾಮಾಜಿಕ ಬಿಕ್ಕಟ್ಟುಗಳಿಗೆ ಸಂಬಂಧಿಸಿದ್ದು. 2004ರಲ್ಲಿ ಈ ಚಲನಚಿತ್ರ ಮೊದಲ ಬಾರಿಗೆ ಟೊರಾಂಟೊ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತಗೊಂಡಿತು.
ಚಿತ್ರದಲ್ಲಿ ಎಂಟು ಪ್ರಮುಖ ಪಾತ್ರಗಳಿವೆ. ಎಲ್ಲರೂ ಅಮೆರಿಕನ್ ಸಮಾಜದ ವಿವಿಧ ಸ್ತರಗಳಿಂದ ಬಂದವರು, ತಮ್ಮದೇ ದ್ವೀಪಗಳನ್ನು ನಿರ್ಮಿಸಿಕೊಂಡು ಬದುಕುತ್ತಿರುವವರು. ಆದರೆ ಇವರ ಜೀವನಗಳು ಅಷ್ಟೆ ಸಂಕೀರ್ಣ. ಒಂದು ಕಿಡಿ ಸಾಕು – ಇವರೆಲ್ಲರೂ ಉರಿದುಬೀಳಲಿಕ್ಕೆ. ಹೀಗಿರುವಾಗ ಈ ಎಲ್ಲ ಪಾತ್ರಗಳು ಕೇವಲ ಇಪ್ಪತ್ತನಾಲ್ಕು ಗಂಟೆಗಳ ಅವಧಿಯಲ್ಲಿ ಒಬ್ಬರನ್ನೊಬ್ಬರು ವಿಚಿತ್ರ ಸಂದರ್ಭಗಳಲ್ಲಿ ಭೇಟಿಯಾಗುವ ಹಾಗಾದರೆ? ಏನಾಗಬಹುದು? ಸಾಮಾಜಿಕ ಬದುಕು, ಮನುಷ್ಯಸಂಬಂಧಗಳು ಹಾಗು ವೈಯಕ್ತಿಕ ಒಳತೋಟಿಗಳ ನಡುವೆ ಉಂಟಾಗುವ ಪ್ರಬಲ ಘರ್ಷಣೆಯೇ ಚಲನಚಿತ್ರದುದ್ದಕ್ಕೂ ಕಾಣಬರುವುದು. ಚಲನಚಿತ್ರದ ಮುಖ್ಯವಸ್ತು ವರ್ಣಭೇದವಾದ್ದರಿಂದ ಇಲ್ಲಿನ ಕಥಾವಸ್ತುವಿನಲ್ಲಿ ಯಾವುದೇ ರಿಯಾಯಿತಿ, ನೀತಿಬೋಧೆಗಳು ಇಲ್ಲ. ಪಾತ್ರಗಳು ಹಸಿಹಸಿಯಾಗಿ ತಮ್ಮೆಲ್ಲ ಕೆಟ್ಟತನ, ಒಳ್ಳೆಯತನ ಹಾಗೂ ಇವೆರಡರ ನಡುವಿನ ಭಾವಗಳೊಂದಿಗೆ ಹರಡಿಕೊಳ್ಳುತ್ತ ಹೋದಂತೆ ಪ್ರೇಕ್ಷಕನಿಗೆ ತನ್ನ ಪ್ರಾಪಂಚಿಕ ಒಂಟಿತನದ ಅರಿವು ಗಾಢವಾಗತೊಡಗುವುದು. ಎಲ್ಲ ಪಾತ್ರಗಳೂ ಕೂಡ ಒಂದಲ್ಲ ಒಂದು ಘಟ್ಟದಲ್ಲಿ ಒಳ್ಳೆಯದು ಮತ್ತು ಕೆಟ್ಟದರ ನಡುವೆ ಬಂದು ನಿಲ್ಲುತ್ತವೆ. ಯಾವ ದಾರಿಯನ್ನು ಆಯ್ದುಕೊಳ್ಳಬೇಕೆನ್ನುವ ಸ್ವಾತಂತ್ರ್ಯ ಅವರಿಗೆ ಸಿಗುತ್ತದೆ. ಅದರಾಚೆ ಮುಂದೆ ನಡೆಯುವದು ಪಾತ್ರಗಳ ಆಯ್ಕೆಯ ಪ್ರಕಾರ. ಇಲ್ಲಿ ನಮಗೆ ಗ್ರೀಕ್ ದುರಂತನಾಟಕಗಳ ಅನುಭವ ದೊರಕುತ್ತದೆ. ಪ್ರತಿಯೊಂದು ಪಾತ್ರದ ಸುತ್ತಲಿನ ಕಥೆಯಲ್ಲಿಯೂ ಒಂದು ವಿಚಿತ್ರ ತಿರುವಿದೆ. ಆ ತಿರುವಿನ ನಂತರ ಎಲ್ಲ ಬದಲಾಗಿಹೋಗುವುದು.. ಎಲ್ಲವೂ. ಆ ಲೆಕ್ಕದಲ್ಲಿ ಇಲ್ಲಿ ನಡೆಯುವ ಕ್ರ್ಯಾಶ್‌ಗಳು ಕೇವಲ ವಾಹನಗಳ ಆಕ್ಸಿಡೆಂಟುಗಳಲ್ಲ… ವ್ಯಕ್ತಿತ್ವಗಳ ಕ್ರ್ಯಾಶ್‌ಗಳು, ನೈತಿಕತೆ ಹಾಗೂ ಅನಾಚಾರಗಳ ನಡುವಿನ ಕ್ರ್ಯಾಶ್‌ಗಳು, ಭೂತ, ಭವಿಷ್ಯ ಹಾಗೂ ವರ್ತಮಾನಗಳ ನಡುವಿನ ಕ್ರ್ಯಾಶ್‌ಗಳು, ಜೀವನ ಹಾಗೂ ಮರಣದ ಮಧ್ಯೆ ಆಗುವ ಕ್ರ್ಯಾಶ್‌ಗಳು, ಆತ್ಮದ ಕೊಲೆ ಮತ್ತು ಪಶ್ಚಾತ್ತಾಪದ ಸೆಲೆಯ ನಡುವಣ ಕ್ರ್ಯಾಶ್‌ಗಳು…
ಇಸವಿ : 2004
ಭಾಷೆ : ಇಂಗ್ಲಿಷ್
ನಿರ್ದೇಶನ – ಪಾಲ್ ಹ್ಯಾಗಿಸ್
ನಿರ್ಮಾಪಕರು: ಪಾಲ್ ಹ್ಯಾಗಿಸ್, ಡಾನ್ ಶೀಡ್ಲ್, ರಾಬರ್ಟ್ ಮೊರೆಸ್ಕೋ
ಚಿತ್ರಕಥೆ: ಪಾಲ್ ಹ್ಯಾಗಿಸ್, ಬಾಬಿ ಮೊರೆಸ್ಕೋ
ಅಭಿನಯ/ಪಾತ್ರ: ಬ್ರೆಂಡನ್ ಫ್ರೇಸರ್ – ರಿಕ್ ಕೇಬಟ್
ಸಾಂಡ್ರಾ ಬುಲಾಕ್ – ಜೀನ್ ಕೇಬಟ್
ಕ್ರಿಸ್ “ಲುಡಾಕ್ರಿಸ್’ ಬ್ರಿಡ್ಜಸ್ – ಆಂಥನಿ
ಲಾರೆನ್ಜ್ ಟೇಟ್ – ಪೀಟರ್ ವಾಟರ್ಸ್
ಡಾನ್ ಶೀಡ್ಲ್ – ಡಿಟೆಕ್ಟಿವ್ ಗ್ರಹಾಮ್ ವಾಟರ್ಸ್
ರಿಯಾ – ಜೆನಿಫರ್ ಎಸ್ಪೊಸಿಟೊ
ಪ್ರಶಸ್ತಿಗಳು:
1. ಮೂರು ಆಸ್ಕರ್ ಪ್ರಶಸ್ತಿಗಳು: ಉತ್ತಮ ಚಲನಚಿತ್ರ, ಉತ್ತಮ ಸ್ಕ್ರೀನ್ ಪ್ಲೇ, ಉತ್ತಮ ಎಡಿಟಿಂಗ್
2. ಎರಡು ಗೋಲ್ಡನ್ ಗ್ಲೋಬ್: ಉತ್ತಮ ಪೋಷಕಪಾತ್ರ(ಮ್ಯಾಟ್ ಡಿಲಾನ್), ಉತ್ತಮ ಸ್ಕ್ರೀನ್ ಪ್ಲೇ.
3. 2005 ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಪ್ರಶಸ್ತಿ
4. 2005 ರೈಟರ್ಸ್ ಗಿಲ್ಡ್ ಆಫ್ ಅಮೆರಿಕಾ ಪ್ರಶಸ್ತಿ
5. BAFTA ಪ್ರಶಸ್ತಿ ~ ಮಾಹಿತಿ : ಟೀನಾಶಶಿಕಾಂತ್
ಚಿತ್ರ ಖಜಾನೆ-ಹೊಸ ಪ್ರಯತ್ನ
“ಸಾಂಗತ್ಯ” ದ ಬೆಳವಣಿಗೆಗೆ ನಿಮ್ಮೆಲ್ಲರ ಬೆಂಬಲ-ಹಂಬಲ ಅತ್ಯಂತ ಅವಶ್ಯ. ಇದುವರೆಗೆ ಸಿಕ್ಕ ಆ ಎರಡೂ ಸಕಾರಾತ್ಮಕ ನೆಲೆಗಳು ನಮ್ಮ ಪ್ರಯಾಣದ ದಿಕ್ಕನ್ನು ಸ್ಪಷ್ಟಗೊಳಿಸಿರುವುದಲ್ಲದೇ, ಪಯಣದ ಹಾದಿಯ ಶ್ರಮವನ್ನು ಹಗುರಗೊಳಿಸುತ್ತಿವೆ. ಈಗ ಎಲ್ಲರ ಹಂಬಲದಿಂದಲೇ ಹೊಸ ಪ್ರಯತ್ನಕ್ಕೆ ಮುಖಿಯಾಗುತ್ತಿದೆ ಸಾಂಗತ್ಯ. ಅದರ ಹೊಸ ಪ್ರಯತ್ನ “ಚಿತ್ರ ಖಜಾನೆ”.
ಕನ್ನಡದಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಬಗ್ಗೆ ಪುಟ್ಟ ಮಾಹಿತಿ ಖಜಾನೆಯದು. ಚಿತ್ರದ ತಿರುಳು (ಎರಡು ಪ್ಯಾರಾಗಳಲ್ಲಿ), ತಾರಾಗಣದಲ್ಲಿನ ಪ್ರಮುಖರ ಹೆಸರು-ಪಾತ್ರ, ನಿರ್ದೇಶಕರು, ಛಾಯಾಗ್ರಹಕರು ಇತ್ಯಾದಿ ತಾಂತ್ರಿಕ ತಂಡದ ವಿವರ, ಪ್ರಶಸ್ತಿ ದೊರೆತಿದ್ದರೆ ಅದರ ವಿವರಗಳನ್ನು saangatya@gmail.com ಗೆ ಕಳುಹಿಸಿಕೊಟ್ಟರೆ ಸಾಕು. ದಯವಿಟ್ಟು ಎಲ್ಲರೂ ಸಹಕರಿಸಿ. ಪ್ರಯತ್ನದ ಆರಂಭವಾಗಿ ಒಂದೆರಡು ಚಿತ್ರಗಳನ್ನು ಖಜಾನೆಯಲ್ಲಿ ಸೇರಿಸಿದ್ದೇವೆ.




