ಆಮೀರ್, ಮುಂಬಯಿ ಮೆರೆ ಜಾನ್ ಹಾಗೂ ವೆಡ್ನೆಸ್ಡೆ ಒಂದೇ ವಸ್ತುವಿನ ಕುರಿತು ಭಿನ್ನ ನೆಲೆಗಳಲ್ಲಿ ಮೂಡಿಬಂದ ಚಿತ್ರ. ನಮ್ಮ ದೇಶದೊಳಗಿನ ಸಾಮಾಜಿಕ ಭದ್ರತೆ ವಿಷಯವನ್ನೇ ವಿವಿಧ ಕೋನಗಳಲ್ಲಿ ಚಿತ್ರಿಸಿದ್ದು. ಆದರೆ ಭದ್ರತೆಯ ವಿಚಾರವನ್ನು ಇಂದಿನ ಚುನಾವಣೆಯ ಪ್ರಣಾಳಿಕೆಯ ವಿಷಯವನ್ನಾಗಿಸಿ ಒಣಚರ್ಚೆ ಮಾಡುವುದಕ್ಕಿಂತಲೂ, ಭದ್ರತೆಯ ಅಭಾವದಿಂದ ಉಂಟಾದ, ಉಂಟಾಗುವ ಘಟನೆಗಳ ಹಿನ್ನೆಲೆಯಲ್ಲಿ ಅಭದ್ರಗೊಳ್ಳುವ ಮಾನಸಿಕ ನೆಲೆಯನ್ನು ಪದರ ಪದರವಾಗಿ ಬಿಚ್ಚಿಟ್ಟ ಚಿತ್ರ. ಆ ಮೂಲಕ ಶಿಥಿಲಗೊಳ್ಳುವ ಸಂಬಂಧದ ಪದರವನ್ನು ವಿಶ್ಲೇಷಿಸುವ ನೆಲೆಯೂ ಹೌದು. ಈ ಹಿನ್ನೆಲೆಯಲ್ಲಿ ಹರೀಶ್ ಕೇರ ಬರೆದ ಆಮೀರ್ ಚಿತ್ರದ ವಿಮರ್ಶೆ ಇಲ್ಲಿ ನೀಡಲಾಗಿದೆ.
Archive for the ‘ಚಿತ್ರ ಅನಿಸಿಕೆ’ Category
ಲೈರಾ ಮತ್ತು ಚಿನ್ನದ ಕಾಂಪಾಸ್
ಟೀನಾ ಶಶಿಕಾಂತ್ ಬರೆದಿರುವ “ಗೋಲ್ಡನ್ ಕಾಂಪಾಸ್” ಚಿತ್ರದ ಕುರಿತ ಬರಹವಿದು. ಓದಿ ಹೇಳಿ.
‘ನನ್ನ ಕವಚ ನನ್ನ ಆತ್ಮವಿದ್ದ ಹಾಗೆ.. ನಿನ್ನ ಆತ್ಮವಿದೆಯಲ್ಲ, ಅದನ್ನ ಬದಲಾಯಿಸೋಕೆ ಸಾಧ್ಯವೆ? ಹಾಗೇ ನನಗೂ ನನ್ನ ಕವಚವನ್ನ ಬದಲಾಯಿಸೋಕೆ ಆಗದು.’ ವಿಸ್ಕಿ ಕುಡಿಕುಡಿದು ತನ್ನ ನೋವು ಮರೆಯಲೆತ್ನಿಸುವ ‘ಲೊರೆಕ್ ಬರ್ನಿಸನ್’ ಎಂಬ ಹಿಮಕರಡಿ ಪುಟ್ಟ ಲೈರಾ ಬೆಲಾಕ್ವಾಳಿಗೆ ಹೇಳುತ್ತದೆ. ತನ್ನನ್ನು ದಿಟ್ಟಿಸುವ ಬಂದೂಕು ಹಿಡಿದ ಜಿಪ್ಸಿಯೊಬ್ಬನನ್ನು ’ಹಾಗ್ಯಾಕೆ ನೋಡ್ತೀಯ?’ ಎಂದು ಗುರುಗುಟ್ಟುವ ಲೈರಾ ಒಂದೇ ಕ್ಷಣದಲ್ಲಿ ನಮ್ಮ ಮನೆಯ ತುಂಟಹುಡುಗಿ ಹುಟ್ಟಿಸುವಷ್ಟೇ ಅಕ್ಕರೆ ಮೂಡಿಸುತ್ತಾಳೆ. ಆಕೆಯ ನಾಲಗೆಯೋ, ಚಾವಟಿ. ಅದರ ಮೇಲೆ ನಿಜವಲ್ಲದೆ ಇನ್ನೇನೂ ಬರದು. ಆಕೆಯ ಮೆದುಳು ಈಗಿನ ಕಾಲದ ಮಕ್ಕಳ ಹಾಗೆ – ಬಲು ಚಾಲಾಕು. ಹಾಗಾಗೇ ಲೊರೆಕ್ ಬರ್ನಿಸನ್ ತನಗೇ ಅರಿವಿಲ್ಲದ ಹಾಗೆ ಲೈರಾಳ ಜತೆ ಒಪ್ಪಂದ ಮಾಡಿಕೊಳ್ಳುತ್ತದೆ. ತಾನು ಲೈರಾಳ ಸಮಯಪ್ರಜ್ನೆಯಿಂದ ವಾಪಾಸು ಹಿಮಕರಡಿಗಳ ರಾಜನಾದ ಮೇಲೂ ’ನನ್ನ ಹೆಸರು ಇನ್ನುಮುಂದೆ ಲೊರೆಕ್ ಬೆಲಾಕ್ವಾ, ನಾನು ನನ್ನ ಕೈಲಾಗುವವರೆಗೂ ನೀನು ಹೇಳಿದಂತೆ ಕೇಳುವೆ!’ ಎಂದೆನ್ನುತ್ತದೆ. ಲೈರಾಳ ಪಾತ್ರವೇ ಅಂಥದು. ಆಕೆ ಬರಿ ಪಾತ್ರವಾಗಿ ಉಳಿಯದೆ ನಮ್ಮ ಮನಸ್ಸುಗಳೊಳಗೆ ಅಚ್ಚೊತ್ತುವ ತುಂಟಹುಡುಗಿ. Read the rest of this entry »
ಎರಡೂವರೆ ಗಂಟೆಯ ದುನಿಯಾ ಮತ್ತು ಒಂದು ಚಿಕ್ಕ ಆಕ್ಯಿಡೆಂಟ್
ವೇಣುವಿನೋದ ಬರೆದ “ದುನಿಯಾ” ಚಿತ್ರದ ಬಗೆಗಿನ ಬರಹ. ತನ್ನದೇ ಆದ ಧಾಟಿಯಲ್ಲಿ ಸಿನಿಮಾವನ್ನು ವಿಮರ್ಶಿಸುತ್ತಲೇ ಸಮಕಾಲೀನಕ್ಕೆ ಕೊಂಡಿ ಕಲ್ಪಿಸುವ ಈ ಲೇಖನವನ್ನು ಓದಿ ಹೇಳಿ.
ವಿಲಕ್ಷಣ ಸಮಾಜದಲ್ಲಿ ಅದೊಂದು ವಿಲಕ್ಷಣ ಸಿನಿಮಾ….
ನಮ್ಮ ಸುತ್ತಲೂ ಜಗಮಗಿಸುವ ದೀಪಗಳ ನೆರಳಿನ ಕತ್ತಲೆಯಲ್ಲಿ ನಮಗರಿವಿಲ್ಲದ ಆಗುಹೋಗುಗಳತ್ತ ಶಾರ್ಪ್ ಸಿನಿಮಾ ನಿರ್ದೇಶಕನೊಬ್ಬ ಕಣ್ಣು ಹಾಯಿಸಿದಾಗ ದುನಿಯಾದಂತಹ ಸಿನಿಮಾಗಳು ಹುಟ್ಟಿಕೊಳ್ಳುತ್ತವೆ.
ಈ ಸಿನಿಮಾ ಮಂಗಳೂರಿನಂತಹ ನಗರದಲ್ಲೂ ಶತದಿನ ಆಚರಿಸಿದ್ದಕ್ಕೆ ನಾನು ಕಾರಣಗಳನ್ನು ಊಹಿಸುವುದಕ್ಕೆ ಹೋಗಲಾರೆ. ಆದರೆ ಥಳುಕುಬಳುಕಿನ ಬದುಕಿನ ಸುತ್ತಲೇ ಗಿರಕಿ ಹೊಡೆಯುವ ಇಂದಿನ ದಿನಗಳಲ್ಲೂ ಕಲ್ಲು ಒಡೆಯುವ ಯುವಕನೊಬ್ಬನ ಕಥೆಯನ್ನೇ ಆಧಾರವಾಗಿರಿಸಿ, ಆ ಪಾತ್ರಕ್ಕೂ ಹೊಸಮುಖ(ವಿಜಯ್)ವನ್ನೇ ಹುಡುಕಿದ ನವನಿರ್ದೇಶಕ ಸೂರಿ ಪ್ರಯತ್ನಕ್ಕೆ ಮಾತ್ರ ಸೆಲ್ಯೂಟ್!
ಬಹುಷಃ ಈ ಸಿನಿಮಾ ಅನೇಕರು ನೋಡಿ ಆಗಿರಬಹುದು, ಆದರೂ ನನಗನ್ನಿಸಿದ ಕೆಲವು ಯೋಚನೆಗಳನ್ನು ಇಲ್ಲಿ ಹಂಚಿಕೊಳ್ತಾ ಇದ್ದೇನೆ. ತನ್ನದೇ ದುನಿಯಾದಲ್ಲಿ ಕಲ್ಲು ಬಂಡೆ ಒಡೆಯುತ್ತಾ ಜೀವನ ಸಾಗಿಸುತ್ತಿದ್ದ ಕಲ್ಲಿನಂಥ ದೇಹದ ಆದರೆ ಹೂವಿನ ಮನಸ್ಸಿನ ಯುವಕ ಶಿವಲಿಂಗು. ಬದುಕಿನ ಕೊನೆಕ್ಷಣದಲ್ಲಿರುವ ತಾಯಿಯನ್ನು ‘ದೊಡ್ಡಾಸ್ಪತ್ರೆ ’ಗೆ ಸೇರಿಸಲು ದುಡ್ಡು ಸಾಲದೆ ಮತ್ತೆ ಆಸ್ಪತ್ರೆಗೆ ಮರಳುವಾಗ ತಾಯಿ ಕಣ್ಮುಚ್ಚಿರುತ್ತಾರೆ. ತನ್ನವರೆಂದಿದ್ದ ಮುದಿ ಜೀವವೂ ಇಲ್ಲದಾದಾಗ ಕಂಗಾಲಾಗುವ ಶವಲಿಂಗುವಿಗೆ ತಾಯಿಯ ಶವದಹನಕ್ಕೂ ಹಣವಿರುವುದಿಲ್ಲ. ಅರ್ಧಹೂತಾದ ಗೋರಿಯನ್ನು ಬಗೆದು ಮೃತಶರೀರದ ಕೈನಿಂದ ಉಂಗುರವನ್ನೇ ತೆಗೆದು ಕೊಡುವಾಗ ನಾಯಕನ ಅಭಿನಯದ ಆಳ ಕಾಣುತ್ತದೆ. Read the rest of this entry »
“ಅರ್ಥ” ಸಿನಿಮಾ : ಒಂದು ಒಳ್ಳೆಯ ನಿರೂಪಣೆ
ಬಿ. ಸುರೇಶ ನಿರ್ದೇಶಿಸಿದ “ಅರ್ಥ” ಸಿನಿಮಾ ಇತ್ತೀಚೆಗೆ ಸಮುದಾಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. ಈ ಚಿತ್ರದ ಬಗ್ಗೆ ವಿನುತಾ ಅವರು ಬರೆದ ಬರಹವನ್ನು ಇಲ್ಲಿ ಪ್ರಕಟಿಸಲಾಗಿದೆ.
ಭಾರತದ ಸಾಮಾನ್ಯ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಂದ ಹುಟ್ಟುತ್ತಿರುವ ಸಣ್ಣ ಜಗಳಗಳು ಮನೆಯಲ್ಲಿರುವ ಮಕ್ಕಳ ಮನಸ್ಸುಗಳಲ್ಲಿ ಗೊಂದಲಗಳನ್ನು ಏಳಿಸುತ್ತಿವೆ. ಮನೆಯಲ್ಲಿ ನೆಮ್ಮದಿ ಕಾಣದ ಮಕ್ಕಳು ಹಿಂಸೆಯಲ್ಲಿ ಆನಂದ ಕಾಣುವಂತಹ ಸ್ಥಿತಿಯುಂಟಾಗುತ್ತಿದೆ. ಇದರಿಂದಾಗಿ ನಮ್ಮ ಯುವಜನಾಂಗವು ಆತಂಕವಾದ ಕಡೆಗೆ ಅಥವಾ ಕೋಮುವಾದಿತ್ವ ಅಥವಾ ಮೂಲಭೂತವಾದಿತ್ವದ ಕಡೆಗೆ ತಿರುಗುತ್ತಿದ್ದಾರೆ. ಇದರಿಂದ ನಮ್ಮ ದೇಶಾದ್ಯಂತ, ಜಾತಿ-ಧರ್ಮಗಳನ್ನು ಮೀರಿ ಹಿಂಸಾಚಾರಗಳು ಆಗುತ್ತಿವೆ. ಇದರಿಂದಾಗಿ ನಮ್ಮ ದೇಶವು ವಿಚ್ಛಿದ್ರಕಾರಿ ಮನಸ್ಸುಗಳ ಕೈಯಲ್ಲಿ ಹೇಗೆ ಸೇರಿಹೋಗುತ್ತಿದೆ ಎಂಬುದನ್ನು ಪ್ರತಿನಿತ್ಯ ಪತ್ರಿಕೆಗಳು ಹೆಣಗಳ ಸಂಖ್ಯೆಯನ್ನು ಮುಖಪುಟದಲ್ಲಿಯೇ ಹಾಕುವ ಮೂಲಕ ದಾಖಲಿಸುತ್ತಿವೆ. ಇವೆಲ್ಲವುಗಳ ಪರಿಣಾಮವಾಗಿ ಚಿತ್ರಿತವಾದದ್ದೇ “ಅರ್ಥ”. – ಇದು “ಅರ್ಥ” ಚಿತ್ರದ ಕುರಿತಾಗಿ ಸಮುದಾಯ ((ಸಮುದಾಯ ಚಿತ್ರೋತ್ಸವ – 2009) ನೀಡಿರುವ ಒಕ್ಕಣೆ.
“ಅರ್ಥ” – ಈ ಪದ, ತಿರುಳು, Meaning ಎಂಬುದಾಗಿ ಮತ್ತು ಹಣ, ವಿತ್ತ ಎಂಬುದಾಗಿ ಚಾಲ್ತಿಯಲ್ಲಿದೆ. ಇವೆರಡೂ ಪ್ರಯೋಗಗಳನ್ನು ಬಳಸಿಕೊಂಡು ಇನ್ನೊಂದು ಸಮಾಜಮುಖಿ ಅರ್ಥವನ್ನು ಕಂಡುಕೊಳ್ಳುವಲ್ಲಿ ನವೀನ ಪ್ರಯೋಗವೇ ಈ ಚಿತ್ರ ಎಂದು ಭಾವಿಸುತ್ತೇನೆ. ಹಂತ ಹಂತವಾಗಿ ಸಮಸ್ಯೆಗಳು ಹರಡಿಕೊಳ್ಳುತ್ತಾ ಸಾಗುತ್ತವೆ. ಒಟ್ಟಾರೆ, ಶ್ರೀಸಾಮಾನ್ಯನ ದೈನಂದಿನ ಆರ್ಥಿಕ ಬಿಕ್ಕಟ್ಟುಗಳು, ಜಾಗತೀಕರಣ, ಪಾಶ್ಚಿಮಾತ್ಯ ಅಂಧಾನುಕರಣೆ ಮತ್ತು ಜಾತೀಯ ಕಲಹ ಅಥವಾ ಮೂಲಭೂತವಾದ ಎಂಬುದಾಗಿ ವಿಂಗಡಿಸಬಹುದು.

ಶ್ರೀಸಾಮಾನ್ಯನನ್ನು ಆಟೋಚಾಲಕ ಸೀನಪ್ಪ (ರಂಗಾಯಣ ರಘು) ಪ್ರತಿನಿಧಿಸಿದ್ದಾನೆ. ಆಟೋ ಮಾಲೀಕನಿಗೆ ದೈನಂದಿನ ಬಾಡಿಗೆ ನೀಡಲಾಗದೆ ಉದ್ಭವಿಸುವ ಆರ್ಥಿಕ ಸಮಸ್ಯೆ ಕೌಟುಂಬಿಕ ಕಲಹಕ್ಕೆ ಕಾರಣವಾಗುತ್ತದೆ. ಪತ್ನಿ (ಮೇಘ ನಾಡಿಗೇರ್) ಯನ್ನು ಹಿಂಸಿಸುವ, ಮಕ್ಕಳನ್ನು ದೂಷಿಸುವುದರೊಂದಿಗೆ ಅವಸಾನಗೊಳ್ಳುತ್ತದೆ. ಇಲ್ಲಿ ಹಿಂಸೆಯ ವೈಭವೀಕರಣವಾಗಿದೆಯೇನೋ ಎಂದೊಂದು ಕ್ಷಣ ಅನ್ನಿಸಿದರೂ, ಅದೇ ವಾಸ್ತವ ಎನ್ನುವ ಸತ್ಯವನ್ನು ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. Read the rest of this entry »
“ಸಂಸಾರ”ದ ಸುತ್ತ ಮುತ್ತ
“………. There are things we must unlearn inorder to learn………. There are things we must own to renounce them”…ಚೇತನಾ ತೀರ್ಥಹಳ್ಳಿಯವರು ಟಿಬೆಟಿಯನ್ ಸಿನಿಮಾ “ಸಂಸಾರ್’ ಕುರಿತು ಬರೆದ ಬರಹವಿದು.
ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ.
ಕಾಲಕ್ಕೆ ಸದಾ ಓಡುವ ಕಾಲು.
ಎಷ್ಟು ಬೇಗ ಪ್ರಣಯದಾಟ, ಒದೆತ, ಮದುವೆ, ಮಗು, ವ್ಯಾಪಾರ, ವಿದ್ರೋಹ, ಹೊಡೆದಾಟಗಳು ಮುಗಿದುಹೋದವು?
ಇತ್ತ ಬುದ್ಧವಿಹಾರದಲ್ಲೂ ನಡೆದಿದ್ದಾಆನೆ ಕಾಲ. ಮುಖ್ಯಸ್ಥ ಆಪೋ ನಿರ್ವಾಣ ಪಡೆಯುತ್ತಾನೆ. ಸಮಾಧಿಗೇರುವ ಮುನ್ನ ಮತ್ತೊಬ್ಬ ಶಿಷ್ಯನ ಕೈಲಿ ತಾಶಿಗಾಗಿ ಪತ್ರ ಕೊಡುತ್ತಾನೆ. ಈ ಪತ್ರ, ಕಾಮದ ಹಸಿವನ್ನೆ ಉಣ್ಣುತ್ತ, ಸಂಸಾರದ ನಿಭಾವಣೆಯಲ್ಲಿ ಹೈರಾಣಾಗುತ್ತ ಗೊಂದಲಗೊಳ್ಳುತ್ತಿದ್ದ ತಾಶಿಯನ್ನ ಕೇಳುತ್ತೆ- ” What is more important? To satisfy one thousand desires, or to conquer just one?” Read the rest of this entry »
ಮನಸಾರೆ ಪರವಾಗಿಲ್ಲ : ಭಟ್ಟರ ನಿಜವಾದ ಸಿನಿಮಾ ಇನ್ನೂ ಬಂದಿಲ್ಲ !
“ಮನಸಾರೆ” ಕನ್ನಡ ಚಲನಚಿತ್ರ ಬಿಡುಗಡೆ ಆಗಿದೆ. ಯೋಗರಾಜಭಟ್ಟರು ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದವರು. ಈ ಹಿನ್ನೆಲೆಯಲ್ಲಿ “ಮನಸಾರೆ” ನೋಡಿರುವ ಸಿನಿಮಾಸಕ್ತ ಕಾರ್ತಿಕ್ ಪರಾಡ್ಕರ್, ಅದರ ಎಳೆಯನ್ನು, ನೆರಳನ್ನು ಕುರಿತು ಚರ್ಚಿಸಿದ್ದಾರೆ. ಓದಿ ನಿಮ್ಮ ಅಭಿಪ್ರಾಯ ತಿಳಿಸಿ.
“ಕಿತ್ತೋಗಿರೋ ಹವಾಯಿ ಚಪ್ಪಲಿ ತರಹಾ ಆಗೋಯ್ತು, ಬದುಕು!!!”
ಹೊರಗಿರುವ ಜಗತ್ತಿಗಿಂತ ಜೈಲಿನ ಒಳಗಿರುವ ಜಗತ್ತೇ ಉಲ್ಲಾಸದಾಯಕವಾಗಿದೆ ಅಂತನ್ನಿಸುತ್ತದೆ ಆತನಿಗೆ.
ಸದ್ಯಕ್ಕಿರುವ ಜಗತ್ತಿನ ವೇಗಕ್ಕೆ ತನಗೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಎನ್ನುವ ಮನವರಿಕೆಯ ನಡುವೆ ತಾನು ಜೈಲಿನಿಂದ ಹೊರಬಂದು ಕಳೆದುಕೊಂಡಿರುವ ಸ್ವಾತಂತ್ರ್ಯದ ಮನವರಿಕೆಯಾಗುತ್ತದೆ. ಜೀವಮಾನದ ಬಹುತೇಕ ವರ್ಷಗಳನ್ನು ಜೈಲಿನಲ್ಲಿ ಕಳೆದ ಆ ಸುಕ್ಕು ಮುಖದ ಮುದುಕನಿಗೆ ಹಾಗನ್ನಿಸುವುದರ ಹಿಂದೆ ಬದುಕಿನ ಆಧ್ಯಾತ್ಮವಿದೆ. ತಾನೇ ಕಂಡುಕೊಂಡ ತಾತ್ವಿಕತೆಯಿದೆ. ಜೈಲಿನ ಒಳಗೊಂದು ಆಪ್ತ ವಾತಾವರಣವನ್ನು ಸೃಷ್ಥಿಸಿಕೊಂಡ ಆತನಿಗೆ ಹೊರಜಗತ್ತು ಉಸಿರು ಕಟ್ಟಿಸುತ್ತದೆ. ಅಸ್ವಸ್ಥನಾಗುವಂತೆ ಮಾಡುತ್ತದೆ.
ಅದಕ್ಕೇ ಇರಬೇಕು ಆ ಸುಕ್ಕು ಮುಖದ ಮುಸ್ಸಂಜೆಯ ಮುದುಕ, ಹೊರ ಜಗತ್ತಿನಲ್ಲಿ ತಾನು ವಾಸಿಸುವ ಕೋಣೆಯಲ್ಲೇ ನೇಣು ಹಾಕಿಕೊಳ್ಳುತ್ತಾನೆ…ಆತನ ಹೆಸರು ಬ್ರೂಕ್.

ರೆಡ್ಡಿಂಗ್‌ನದ್ದೂ ಇದೇ ಸ್ಥಿತಿ. ಆತ ಬಿಡುಗಡೆಯಾಗಿ ಜೈಲಿನಿಂದ ಹೊರಕ್ಕೆ ಬಂದಾಗಲೂ ಆತನಿಗೆ ಹೊರಜಗತ್ತಿನಲ್ಲಿ ವಾಸಿಸಲು ಸಿಗುವುದು ಅದೇ ಬ್ರೂಕ್ ವಾಸಕ್ಕಿದ್ದ ರೂಮು. ಆತನಿಗೂ ಹೊರಜಗತ್ತಿನ ಸತ್ತುಹೋದ ಸುದೀರ್ಘ ಹಗಲುಗಳು ಅಕ್ಷರಶಃ ನರಳಾಡಿಸುತ್ತವೆ. 1994ರಲ್ಲಿ ತೆರೆಕಂಡ “ಶ್ವಶಾಂಕ್ ರಿಡಂಪ್ಶನ್” ಸಿನಿಮಾದಲ್ಲಿ ಬರುವ ಅತಿ ಮುಖ್ಯ ಎಳೆಯಿದು. Read the rest of this entry »
ನನಗಿಷ್ಟವಾದ ಬ್ಲ್ಯಾಕ್ ಅಂಡ್ ವೈಟ್
ರಾಕೇಶ್ ಎನ್.ಎಸ್. ಧರ್ಮಸ್ಥಳದ ಎಸ್ ಡಿಎಂ ಉಜಿರೆ ಕಾಲೇಜಿನ ಸಮೂಹ ಸಂವಹನ ವಿದ್ಯಾರ್ಥಿ. ಸಿನಿಮಾ ನೋಡುವುದಕ್ಕಿಂತಲೂ ಬರೆಯುವುದನ್ನು ಆರಂಭಿಸಿರುವ ಅವರು ಸುಭಾಷ್ ಘಾಯ್ ಅವರ “ಬ್ಲ್ಯಾಕ್ ವೈಟ್” ಚಿತ್ರದ ಬಗ್ಗೆ ಬರೆದಿದ್ದಾರೆ. ಓದಿ ಅಭಿಪ್ರಾಯಿಸಿ.
ಉಗ್ರವಾದದ ಮತ್ತೇರಿಸಿಕೊಂಡ ಮನಸ್ಸು ಅದೇಷ್ಟು ಸ್ಪಂದನಹೀನ? ತಮ್ಮ ಧರ್ಮವೇ ಶ್ರೇಷ್ಟವೆಂದುಕೊಂಡರೆ… ಅದನ್ನೇ ಜಗತ್ತಿನಾದ್ಯಂತ ಹೇರುವ ಪ್ರಯತ್ನ ಮಾಡಿದರೆ… ತಮ್ಮ ಮತದವರನ್ನು ಬಿಟ್ಟು ಬೇರೆಯವರಿಗೆ ಈ ಭೂಮಿ ಮೇಲೆ ಬದುಕುವ ಹಕ್ಕಿಲ್ಲವೆಂದುಕೊಂಡರೆ… ಜಗತ್ತನ್ನು ಆವರಿಸಿಕೊಳ್ಳುವುದು ಬರೀ ಕರ್ರನೆಯ ಕತ್ತಲು…ಕೆಂಪು ಕೆಂಪು ರಕ್ತ…
ಆತ ನುಮೇರ್ ಖಾಜಿ. ಅಪ್ಘಾನಿಸ್ತಾನದಲ್ಲಿ ತರಬೇತಿ ಪಡೆದ ಉಗ್ರಗಾಮಿ. ಉದ್ದೇಶ, ಆಗಸ್ಟ್ 15 ರಂದು ನಮ್ಮ ದೇಶದ ರಾಜಧಾನಿ ನವದೆಹಲಿಯಲ್ಲಿನ ಕೆಂಪುಕೋಟೆಯಲ್ಲಿ ನಡೆಯುವ ಧ್ವಜಾರೋಹಣದ ಸಂದರ್ಭ ಬಾಂಬ್ ಸ್ಫೋಟಿಸುವುದು. ಅದಕ್ಕಾಗಿ ಅಗಸ್ಟ್ 1 ರಂದೇ ದೆಹಲಿಗೆ ಆಗಮನ. ಇಲ್ಲಿನ ಕೆಲವರಿಂದ ಅವನಿಗೆ ಸಹಕಾರ ಮತ್ತು ಸಹಯೋಗ.

ಕೆಂಪುಕೋಟೆಯೊಳಗೆ ಸುಲಭವಾಗಿ ಹೋಗಲು ರಾಜನ್ ಮಾಥುರ್ ಎಂಬ ಉರ್ದು ಪ್ರಾಧ್ಯಾಪಕನ ಮುಂದೆ ಮುಗ್ಧನ ಸೋಗು. ಈ ನಟನೆಯಲ್ಲಿ ಯಶ, ಅಗಸ್ಟ್ 15 ರಂದು ಕೆಂಪುಕೋಟೆಯೊಳಗೆ ಪ್ರವೇಶ. ಇನ್ನೇನು ಬಾಂಬ್ ಸಿಡಿಸಬೇಕು… ಮನಸ್ಸಿಗೆ ಪಿಚ್ಚೆನಿಸುವ ಭಾವ, ಏನೋ ಹಿಂಜರಿತ… ಇತ್ಯಾದಿ…ಇತ್ಯಾದಿ.
ಬ್ಲ್ಯಾಕ್ ಅಂಡ್ ವೈಟ್, ಸುಭಾಷ್ ಘಾಯ್‌ರ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಚಿತ್ರ ಆರಂಭವಾಗುವುದು ಪುಟ್ಟ ಬಾಲಕನೊಬ್ಬ ಇನ್ನೇನು ಕ್ಯಾಂಡಲ್ ಉರಿಸುತ್ತಾನೆ ಎನ್ನುವಾಗಲೇ ಬಾಂಬ್ ಸ್ಫೋಟದ ಶಬ್ದಕ್ಕೆ ಹೆದರಿ ಕೈಯಲ್ಲಿರುವ ಕ್ಯಾಂಡಲ್ ಕೂಡ ಆರಿ ಹೋಗುವುದರ ಮೂಲಕ. ಇಂಥದೊಂದು ಅಮೂರ್ತದೊಂದಿಗೆ ಆರಂಭ.
ನುಮೇರ್ ಖಾಜಿ, ಒಬ್ಬ ಧರ್ಮಾಂಧ ಭಯೋತ್ಪಾದಕ. ಆತನಿಗೆ ತಾನೊಬ್ಬ ಫಿದಾಯಿನ್ ಆಗಬೇಕೆಂಬ ಹುಚ್ಚು ಆವೇಶ. ತಾನು ಗುಜರಾತಿನ ಕೋಮುದಳ್ಳುರಿಯಲ್ಲಿ ತಂದೆ ತಾಯಿಯನ್ನು ಕಳೆದುಕೊಂಡೆ ಎಂದು ಬೊಗಳೆ ಬಿಟ್ಟು ಕನಿಕರ ಗಿಟ್ಟಿಸಿಕೊಳ್ಳುವುದರಲ್ಲಿ ನಿಪುಣ. ತನ್ನ ಈ ‘ಧರ್ಮರಕ್ಷಣೆ’ಯ ಕೈಂಕರ್ಯದಲ್ಲಿ ಹಿಂಬಾಲಕರು ಒಂಚೂರು ಮೈ ಮರೆತರೂ ಅವರ ಉಸಿರು ಅಲ್ಲಿಗೆ ನಿಂತುಬಿಡುತ್ತದೆ. ಅದ್ದರಿಂದ ಚಿತ್ರದಲ್ಲಿ ಅನಿರೀಕ್ಷಿತವಾಗಿ ಗುಂಡುಗಳು ಹಾರುತ್ತವೆ. Read the rest of this entry »
ಕಮೀನೆ ಕುರಿತು ಅನಂತ ಮಾಧವರ ಅನಿಸಿಕೆ
ಕಮೀನೆ ಚಿತ್ರದ ಬಗ್ಗೆ ಅನಂತ ಮಾಧವ ಕಳಿಸಿಕೊಟ್ಟಿರುವ ಅನಿಸಿಕೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ವಿಶಾಲ್ ಭಾರದ್ವಾಜ್ ಹೊಸ ಪ್ರಯೋಗಗಳಿಂದ ವಿಶ್ವಾಸ ಮೂಡಿಸಿದವರು. ಈ ಚಿತ್ರದ ಬಗ್ಗೆಯೂ ಭಿನ್ನ ಧ್ವನಿಗಳೂ ಕೇಳಿಬರುತ್ತಿವೆ. ನೀವೂ ನಿಮ್ಮ ಧ್ವನಿಯನ್ನು ಸೇರಿಸಬಹುದು.
ಚಾರ್ಲಿ ಮತ್ತವನ ಸಹಚರರು, ಕುದುರೆ ರೇಸ್ ನ ಫಿಕ್ಸಿಂಗ್ನಲ್ಲಿ ಸಹಕರಿಸಲಿಲ್ಲವೆಂದು ಜಾಕಿಯೊಬ್ಬನನ್ನು ಮುಂಬೈನ ರೈಲ್ವೆ ಟ್ರ್ಯಾಕುಗಳ ಮಧ್ಯೆ ಅಟ್ಟಿಸಿಕೊಂಡು ಹೋಗುತ್ತಿರುತ್ತಾರೆ. ಕಮಿನೆ ಚಿತ್ರ ಪ್ರೇಕ್ಷಕನ ಮುಂದೆ ತೆರೆದುಕೊಳ್ಳುವುದು ಈ ದೃಶ್ಯದಿಂದಲೇ. ಕಥೆ ಹಾಗೂ ನಿರ್ದೇಶಕ ಪ್ರೇಕ್ಷಕನನ್ನು ಹಿಡಿದಿಡುವ ಮೊದಲೇ ಛಾಯಾಗ್ರಾಹಕ ತಸಾದುಕ್ ಹುಸ್ಸೇನ್ ಆ ಕೆಲಸವನ್ನು ಮಾಡಿ ಮುಗಿಸಿ ಕಥೆಯ ಮುಂದಿನ ತಿರುವುಗಳಿಗೆ ಹಾಗೂ ಕಥೆ ಹೇಳುವ ಮುಂದಿನ ತಂತ್ರಗಳಿಗೆ ನೆರವಾಗುತ್ತಾ ಹೋಗುತ್ತಾರೆ.
ಚಾರ್ಲಿ ಮುಂಬೈನ ಕುದುರೆ ರೇಸ್ ನ ಬೆಟ್ಟಿಂಗ್ ಹಾಗೂ ಫಿಕ್ಸಿಂಗ್ನ ವ್ಯವಸ್ಥಿತ ಜಾಲವೊಂದರ ಪ್ರಮುಖ ಸದಸ್ಯ. ಅವನೇ ಹೇಳುವಂತೆ, ಆತನಿಗೆ ಹಣ ಮಾಡಲು ಗೊತ್ತಿರುವ ಎರಡೇ ವಿಧಾನಗಳೆಂದರೆ ಮೊದಲನೆಯದು ಶಾರ್ಟ್ ಕಟ್, ಎರಡನೆಯದು ಚಿಕ್ಕ ಶಾರ್ಟ್ ಕಟ್! ಇದು ಅವನ ಉಸೂಲ್. ಹಾಂ.. ಹೇಳುವುದು ಮರೆತೆ, ಈತ ‘ಸ’ ವನ್ನು ‘ಫ’ ಎಂದು ತೊದಲುತ್ತಾನೆ.
ಇನ್ನು ಚಾರ್ಲಿಯ ಅವಳಿ ಸೋದರ ಗುಡ್ಡು ಏಡ್ಸ್ ನಿಯಂತ್ರಣ ಕಾಯಕದಲ್ಲಿ ತೊಡಗಿಸಿಕೊಂಡಿರುವ ಎನ್ ಜಿ ಓ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಗುಡ್ಡು ಉಗ್ಗ; ಅವನಿಗೆ ಅವನ ಉಗ್ಗುತನದ ಕೀಳರಿಮೆಯಿಂದ ಪಾರು ಮಾಡಲೆಂದೇ ಉಗ್ಗಿಯಂತೆ ನಟಿಸುವ ಸ್ವೀಟಿ (ಪ್ರಿಯಾಂಕ ಚೋಪ್ರ) ಆತನ ಗರ್ಲ್ ಫ್ರೆಂಡ್.
ಬಾಲ್ಯದ ಕಹಿ ಘಟನೆಯೊಂದು ಅವಳಿ ಸೋದರರಿಬ್ಬರ ಮುಂದಿನ ಜೀವನದ ದಿಕ್ಕನ್ನು ನಿರ್ಧರಿಸುವುದಷ್ಟೇ ಅಲ್ಲದೆ ಅವರಿಬ್ಬರ ಮಧ್ಯೆ ಸೋದರ ಬಾಂಧವ್ಯವನ್ನೂ ಕಡಿದು ಹಾಕುತ್ತದೆ. ಹೀಗಿರಬೇಕಾದರೊಂದು ದಿನ, ನಡೆಯುವ ಘಟನೆಗಳ ಸರಪಳಿಯು ಬೇರೆ ಬೇರೆಯಾಗಿರುವ ಇವರಿಬ್ಬರನ್ನು ತಳುಕು ಹಾಕುತ್ತದೆ. ಅಥವಾ ಗಂಟು ಹಾಕುತ್ತಲೆನ್ನಲೂ ಅಡ್ಡಿಯಿಲ್ಲ. ಇಲ್ಲಿ ಗಂಟು ಹಾಕಿಕೊಳ್ಳುವುದು ಇವರಿಬ್ಬರ ಜೀವನ ಮಾತ್ರವಲ್ಲ, ಮಾತು ಮಾತಿಗೆ ‘ಜೈ ಮಹಾರಾಷ್ಟ್ರ’ ಎಂದು ಜೈಕಾರ ಹಾಕುವ ಗೊಡ್ಡು ಪ್ರಾದೇಶಿಕತಾವಾದಿ, ಲೋಕಲ್ ಡಾನ್ ಹಾಗೂ ಎಲೆಕ್ಷನ್ ಟಿಕೆಟ್ ಆಕಾಂಕ್ಷಿ ಭೋಪೆ ಭಾವು, ಕುದುರೆ ರೇಸ್ ಫಿಕ್ಸಿಂಗ್ ಜಾಲದ ಅಧಿಪತಿಗಳಾದ ಬೆಂಗಾಲಿ ಸೋದರರು, ಭ್ರಷ್ಟ ಪೋಲಿಸ್ ಅಧಿಕಾರಿ ಮತ್ತವನ ಸಹಾಯಕ, ತಾಶಿ ಎಂಬ ಮಾದಕ ದ್ರವ್ಯ ಕಳ್ಳ ಸಾಗಣಿಕೆ ಮಾಡುವ ಜಾಲದ ದೊರೆ, ಇವರು ಸಾಲದೆಂಬಂತೆ ಮಾದಕ ದ್ರವ್ಯ ಕಳ್ಳ ಸಾಗಣಿಕೆ ಮಾಡುವ ಇಬ್ಬರು ಆಫ್ರಿಕನ್ ಸೋದರರು. ಮತ್ತೆ ಇವರೆಲ್ಲರ ಬಂಟರು etc etc. 
ಸಿನೆಮಾದ ತುಂಬೆಲ್ಲಾ ಇಷ್ಟೆಲ್ಲಾ ಜನರ ಕಳ್ಳ ಪೋಲಿಸ್ ಆಟ ತೆರೆಯ ಮೇಲೆ ನಡೆಯುತ್ತಾ ಹೋಗುತ್ತದೆ. ಇದಕ್ಕೆ ಡಬಲ್ ಗೇಮ್, ಸುಳ್ಳುಗಳು, ಹಲವಾರು ಜಾಣ್ಮೆಯಿಂದ ಅಲ್ಲಲ್ಲಿ ಪೋಣಿಸಿರುವ ಆಕಸ್ಮಿಕಗಳು, ನಮ್ಮ ಬುಧ್ಧಿವಂತಿಕೆಯನ್ನು ಕೆಣಕೆಲೆಂದೇ ಇಟ್ಟಿರುವ ಸನ್ನಿವೇಷಗಳು, ಅಲ್ಲಲ್ಲಿ ನಗಿಸುವ ಡಾರ್ಕ್ ಹ್ಯೂಮರ್ ಇವೆಲ್ಲಾ ಮೆರುಗು ನೀಡುತ್ತಾ ಹೋಗುತ್ತವೆ ಮತ್ತು ಪ್ರೇಕ್ಷಕನನ್ನು ತನ್ನೊಂದಿಗೆ ತೊಡಗಿಸಿಕೊಳ್ಳುತ್ತಾ ಹೋಗುತ್ತದೆ. ಈ ಚಿತ್ರದ ಶಕ್ತಿಯಿರುವುದೇ ಚಿತ್ರ ಕಥೆಯಲ್ಲಿ. ಇದನ್ನು ಹೆಣೆಯಲು ೪ ಬರಹಗಾರರ (ಸುಪ್ರತಿಕ್ ಸೇನ್, ಅಭಿಷೇಕ್ ಚೌಬೆ*, ಸಬ್ರೀನ ಧವನ್ ಹಾಗೂ ವಿಶಾಲ್ ಭಾರದ್ವಾಜ್) ಶ್ರಮವಿರುವುದು ಎದ್ದು ಕಾಣುತ್ತದೆ. ಕಥೆಯ ಎಲ್ಲ ಎಳೆಗಳನ್ನೂ ಇಳಿ ಬಿಟ್ಟು, ತಕ್ಕುದಾದ ಹಾಗೂ ಸಂಭವನೀಯ ಸನ್ನಿವೇಶಗಳ ಮುಖಾಂತರ ಎಲ್ಲ ಎಳೆಗಳನ್ನೂ ಗಂಟು ಹಾಕಿಸಿ ಕೊನೆಗೆ ಚಿತ್ರ ಮುಗಿಯುವ ಹೊತ್ತಿಗೆ ರೋಮಾಂಚಕ ಕ್ಲೈಮ್ಯಾಕ್ಸ್ನೊಂದಿಗೆ ಎಲ್ಲ ಎಳೆಗಳ ಸಿಕ್ಕನ್ನೂ
ಜಾದೂ ಎಂಬಂತೆ ಬಿಡಿಸಿ ನಿರಾಳವಾಗಿಸುವ ಕರಾಮತ್ತು ನಿಜಕ್ಕೂ ಶ್ಲಾಘನೀಯ. Read the rest of this entry »
ಕಾಡುವ ಕಾಡ ಬೆಳಂದಿಗಳು !
“ಕಾಡ ಬೆಳಂದಿಗಳು” ನಮ್ಮ ಈಗಿನ ತ್ರಿಕರಣಗಳ ಚಿತ್ರ. ನಮ್ಮ ಪ್ರಸ್ತುತ ತಲ್ಲಣವಾದ ಈ ಕರಣಗಳ ಬಗ್ಗೆಯೇ ಮಾತನಾಡುತ್ತಾ, ನಮ್ಮ ಮೂಲ ನೆಲೆಗಳಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸೂಕ್ಷ್ಮವಾಗಿ ನೋಡಿರುವಂಥದ್ದು. ಕಾರ್ತಿಕ್ ಪರಾಡ್ಕರ್ ತನ್ನ ಬ್ಲಾಗಿನಲ್ಲಿ ಬರೆದಿದ್ದ ಈ ಲೇಖನವನ್ನು ಮರು ಪ್ರಕಟಿಸಿದೆ.
ನಗರ ಬಿಡಲು ಒಲ್ಲದ ಮಕ್ಕಳು, ಹಳ್ಳಿಯೇ ಮೂಲ ಬೇರು, ನೆಮ್ಮದಿಯ ಬೀಡು ಎಂದು ನಂಬಿಕೊಂಡ ತಂದೆ-ತಾಯಿ, ಅರ್ಥ ಕಳೆದುಕೊಳ್ಳುತ್ತಿರುವ ಸಂಬಂಧಗಳು, ಉರುಳಾಗುವ ನಂಬಿಕೆಗಳು. “ಕಾಡ ಬೆಳದಿಂಗಳು” ಸಿನಿಮಾ ನೋಡಿ ಹೊರಬಂದ ಮೇಲೂ ಕಾಡುವುದು ಹೀಗೆ.
ಹೆಸರಿಗೆ ತಕ್ಕಂತೆ ಅದು ’ಪುಟ್ಟ’ಳ್ಳಿ. ಅಲ್ಲಿ ಸದಾಶಿವ(ಲೋಕನಾಥ್) ಮೇಷ್ಟ್ರು. ಅವರಿಗೆ ಚಂದ್ರಶೇಖರಯ್ಯ(ದತ್ತಣ್ಣ) ಆತ್ಮೀಯ. ಇಬ್ಬರೂ ಮಕ್ಕಳಿಂದ ಮರುಗಿದವರೇ. ಅವರ ಹಿಡಿ ಪ್ರೀತಿಗೆ, ಸಾಂತ್ವನಕ್ಕೆ ಇಷ್ಟಪಟ್ಟವರು. ಆದರೆ ಅದ್ಯಾವುದೂ ಬಾಳ ಮುಸ್ಸಂಜೆಯಲ್ಲಿ ಬೆಳದಿಂಗಳಾಗುವುದಿಲ್ಲ. ಕಾಡುವುದು ಮಾತ್ರ ಒಂಟಿತನ. ಬಾಂಬ್ ಬ್ಲಾಸ್ಟ್ನಲ್ಲಿ ಮಗನನ್ನು ಕಳೆದುಕೊಳ್ಳುವ ಸದಾಶಿವಯ್ಯ, ಮಗನಿದ್ದರೂ ಸತ್ತಂತಿರುವ ಚಂದ್ರಶೇಖರಯ್ಯ ಇಬ್ಬರ ಪರಿಸ್ಥಿತಿಯೂ ಒಂದೇ. ಪುಟ್ಟಳ್ಳಿಯ ಡಾಕ್ಯುಮೆಂಟರಿ ಮಾಡಲು ಬೆಂಗಳೂರಿನಿಂದ ಬರುವ ಟಿವಿ ರಿಪೋರ್ಟರ್ ಸುದೀಷ್ಣೆ(ಅನನ್ಯಾ ಕಾಸರವಳ್ಳಿ)ಯೊಂದಿಗೆ ಚಿತ್ರ ಪ್ರಾರಂಭವಾಗುತ್ತದೆ. ಹಳ್ಳಿ ಜನರೊಂದಿಗೆ ಬೆರೆಯುತ್ತಾ ಆಕೆಯೆದುರು ಹಳ್ಳಿಯ ಸಮಸ್ಯೆಗಳ ವಿಶ್ವರೂಪ ತೆರೆದುಕೊಳ್ಳುತ್ತದೆ. ಇಲ್ಲಿ ಬಹಳ ಮುಖ್ಯವಾಗಿ ಚರ್ಚಿತವಾಗಿರುವುದು ಸುದ್ದಿಯ ನೈಜತೆಯನ್ನು ತಮಗೆ ಬೇಕಾದಂತೆ ತಿರುಚುವ ಇವತ್ತಿನ ಟಿವಿ ಮಾಧ್ಯಮಗಳ ಎಡಬಿಡಂಗಿತನ. ತನ್ನ ಸ್ವಂತಿಕೆಗೆ ಅಂಟಿಕೊಳ್ಳಬೇಕೋ ಅಥವಾ ಟಿವಿ ಆಫೀಸಿನ ಮರ್ಜಿಗೆ ಬಲಿ ಬೀಳಬೇಕೋ ಎಂದು ಒದ್ದಾಡುವ ಸುದೀಷ್ಣೆಯ ತಾಕಲಾಟ ಇವತ್ತಿನ ಮಾಧ್ಯಮ ಮಂದಿಯ ನಾಡಿಮಿಡಿತ ಹಿಡಿವ ಹಂಬಲ. ನಾವು ಹೇಳಿದ್ದೇ ಸತ್ಯ ಎಂದು ಡಂಗುರ ಹೊಡೆವ ಟಿವಿ ಚಾನೆಲ್ಗಳ ಉದ್ಧಟತನ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಚಿತ್ರಿತವಾಗಿದೆ. ಜಾಗತೀಕರಣದ ಈ ಕಾಲಘಟ್ಟದಲ್ಲಿ ಹಳ್ಳಿ, ನಗರಗಳ ನಡುವೆ ಹೆಚ್ಚುತ್ತಿರುವ ಅಂತರ, ಅದಕ್ಕೆ ಬಲಿಯಾಗುವ ಜನಾಂಗದ ಕಥೆಯನ್ನು “ಕಾಡ ಬೆಳದಿಂಗಳು” ಪ್ರಸ್ತುತಪಡಿಸುವ ರೀತಿ ಅನನ್ಯ. ಸಂಬಂಧಗಳಿಗಿಂತ ಸ್ವಾರ್ಥ ಮುಖ್ಯ ಹಾಗೂ ಅನಿವಾರ್ಯವಾಗುವುದು ಇಡೀ ಚಿತ್ರದಲ್ಲಿ ಕಂಡುಬರುವ ಅಂಶ.

ಇಂತಹದೊಂದು ಸೂಕ್ಷ್ಮ ಕಥೆ ಬರೆದವರು ಪತ್ರಕರ್ತ ಜೋಗಿ. ಅಂಕಣವೊಂದರಲ್ಲಿ ಪ್ರಕಟವಾಗಿದ್ದ ಅವರ ”ಚಂದ್ರಹಾಸ, 32″ ಕಥೆಯ ಎಳೆಯನ್ನು ಚಿತ್ರಕ್ಕೆ ಬಳಸಲಾಗಿದೆ. ಚಿತ್ರಕಥೆ ಮತ್ತು ಸಂಭಾಷಣೆಗೆ ಜೋಗಿ ಜೊತೆ ಪತ್ರಕರ್ತ ಉದಯ ಮರಕಿಣಿ ಸೇರಿಕೊಂಡಿದ್ದಾರೆ. ಇಡೀ ಚಿತ್ರವನ್ನು ಎತ್ತಿ ಹಿಡಿಯುವುದೇ ಈ ಮೂರು ಅಂಶಗಳು. ಅದರಲ್ಲೂ ಬಿಗಿ ಚಿತ್ರಕಥೆ ಸಿನಿಮಾಕ್ಕೊಂದು ಓಘವನ್ನು ನೀಡುತ್ತದೆ. ಸದಾಶಿವಯ್ಯ ಮಗ ಸತ್ತ ಸಂದರ್ಭದಲ್ಲಿ ಮಣ್ಣು ಕಿತ್ತು ಹೋಗಿರುವ ಬೇರನ್ನು ದಿಟ್ಟಿಸುವುದು, ಸುದೀಷ್ಣೆ ಕೆಲಸ ಬಿಡುತ್ತೇನೆ ಎನ್ನುವಾಗ ಜೋರಾಗಿ ಬೀಸುವ ಗಾಳಿ ಇಂತಹ ಅನೇಕ ಸಾಂಕೇತಿಕ ಸೂಕ್ಷ್ಮಗಳು ಚಿತ್ರಕಥೆಯಲ್ಲಿವೆ. “ಅವ್ರ ಪಾಲಿಗೆ ಹಳ್ಳಿ ಸತ್ತಿದೆ. ಹಳ್ಳಿ ಪಾಲಿಗೆ ಅವ್ರು ಸತ್ತಿದ್ದಾರೆ”, “ಹುಲಿ ಇಲ್ಲ. ಆದ್ರೂ ಹೊರಕ್ಕೆ ಹೋಗೋದಿಕ್ಕೆ ಆಗೋದಿಲ್ಲ” ಮುಂತಾದ ಅಪೂರ್ವ ಸಂವೇದನಾಶೀಲ ಸಾಲುಗಳು ಚಿತ್ರಕ್ಕೆ ಪ್ಲಸ್ಪಾಯಿಂಟ್. ಜಾಗತೀಕರಣದಿಂದಾಗಿ ಹಳ್ಳಿಗಳ ಸ್ಥಿತ್ಯಂತರದ ನಡುವೆ ಆಶಾವಾದದ ಬದುಕು ಇನ್ನೂ ಜೀವಂತವಾಗಿರುವುದು ಪಾತ್ರಗಳ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ಸಂಭಾಷಣೆಗಳಲ್ಲಿ ಹಳ್ಳಿಯ ಭಾಷಾ ಸೊಗಡಿನ ಕೊರತೆ ಎದ್ದು ಕಾಣುತ್ತದೆ. ಇದು ಸಂಭಾಷಣೆಕಾರರಿಗೆ ತಟ್ಟಿದ ಜಾಗತೀಕರಣದ ಪ್ರಭಾವವೇನೋ!
ಎಚ್.ಎಂ.ರಾಮಚಂದ್ರ ಸಿಕ್ಕ ಬೆಳಕಲ್ಲೇ ಮೋಡಿ ಮಾಡಿದ್ದಾರೆ. ಚಿತ್ರದ ಪ್ರತಿ ಫ್ರೇಮನ್ನು ಪ್ರೀತಿಸಲು ಸಾಧ್ಯವಾದರೆ ಅದಕ್ಕೆ ಅವರ ಕ್ಯಾಮರಾ ಕಣ್ಣು ಕಾರಣ. ಕಾಡ ಬೆಳದಿಂಗಳಿಗೆ ನಿಜವಾದ ’ಅಮಾವಾಸ್ಯೆ’ ರಾಜೇಶ್ ರಾಮನಾಥ್!! ಅವರ ಹಿನ್ನೆಲೆ ಸಂಗೀತವನ್ನು ಮೊದಲ 20 ನಿಮಿಷ ಸಹಿಸಿಕೊಳ್ಳಬೇಕಷ್ಟೇ. ನಂತರದ್ದು ಸರಿ-ಸುಮಾರು. ಕೆಲವೊಂದು ಸನ್ನಿವೇಶಗಳಲ್ಲಿ ಮೌನ ಮಾತಾಗಬೇಕಿತ್ತು. ಆದರೆ ಹಿನ್ನೆಲೆ ಸಂಗೀತ ಅದಕ್ಕೆ ಅವಕಾಶವನ್ನೇ ಕೊಡುವುದಿಲ್ಲ. ಕೆಲವು ಫ್ರೇಮುಗಳು ರಾಮನಾಥ್ ಸಂಗೀತದಲ್ಲಿ ಮರುಗುತ್ತವೆ. ಕೊರಗುವ ಸರದಿ ಪ್ರೇಕ್ಷಕನದ್ದು! ಇಡೀ ಚಿತ್ರದಲ್ಲಿ ಗಮನ ಸೆಳೆಯುವುದು ದೃಶ್ಯ ಜೋಡಣೆ ಮತ್ತು ನಿರೂಪಣೆ. ಕಮರ್ಶಿಯಲ್ ಸಿನಿಮಾಗಳ ನಿರೂಪಣಾ ವೇಗ ಸ್ವಲ್ಪ ಮಟ್ಟಿಗೆ ಎದ್ದು ಕಾಣುತ್ತದೆ. ಅನಿಲ್ ನಾಯ್ಡು ಸಂಕಲನ ಅದಕ್ಕೆ ತಕ್ಕಮಟ್ಟಿಗೆ ಸಹಕರಿಸಿದೆ. ನಟನೆಯಲ್ಲಿ ಗೆಲ್ಲುವುದು ದತ್ತಣ್ಣ ಹಾಗೂ ಲೋಕನಾಥ್. ಇಬ್ಬರದ್ದೂ ಪೈಪೋಟಿಯ ಅಭಿನಯ.

ಸತ್ತ ಕಪ್ಪೆಯನ್ನು ತದೇಕಚಿತ್ತದಿಂದ ದಿಟ್ಟಿಸುತ್ತಾ ಕಣ್ಣಾಲಿಗಳಲ್ಲಿ ವಿಶಾದವನ್ನು ಕರಗಿಸುವ ಲೋಕನಾಥ್ಗೆ ಲೋಕನಾಥೇ ಸರಿಸಾಟಿ. ಇವರಿಬ್ಬರ ನಡುವೆ ಅನನ್ಯಾ ಕಾಸರವಳ್ಳಿ ಪೇಲವ. ನಟನೆಯ ಲೋಪಗಳನ್ನು ಆಕೆಯ ಬೊಗಸೆ ಕಣ್ಣುಗಳು ಬ್ಯಾಲೆನ್ಸ್ ಮಾಡುತ್ತವೆ! ಲಿಂಗದೇವರು ನಿರ್ದೇಶನ ಹಳಿ ತಪ್ಪಿದ ರೈಲಿನಂತೆ ಅಲ್ಲಲ್ಲಿ ಹಿಡಿತ ಕಳೆದುಕೊಂಡಿದೆ. ಕೆಲವೆಡೆ ಅವಸರ ಎದ್ದು ಕಾಣುತ್ತದೆ. ಟಿವಿ ರಿಪೋರ್ಟರೇ ಟೀಂ ಲೀಡರ್, ಕ್ಯಾಮರಾಮೆನ್ ಲೆಕ್ಕಕ್ಕಿಲ್ಲ ಅಂತ ನಿರ್ದೇಶಕರಿಗೆ ಯಾಕನ್ನಿಸಿತೋ ದೇವರೇ ಬಲ್ಲ. ಚಿತ್ರದಲ್ಲಿ ಕ್ಯಾಮರಾಮೆನ್ಗೆ ಕೂಡಿಸಿ, ಕಳೆದು ಅವಕಾಶ ಕೊಟ್ಟಿದ್ದಾರೆ ಲಿಂಗದೇವರು. ಕೆಲವು ಸನ್ನಿವೇಶಗಳಲ್ಲಿ ಮುಂದಿನ ಡೈಲಾಗ್ ಏನು ಅನ್ನೋದು ಪ್ರೇಕ್ಷಕನಿಗೇ ಗೊತ್ತಾಗಿಬಿಡುತ್ತದೆ. ಉದಾಹರಣೆಗೆ; ಹಳ್ಳಿ ಹುಡುಗನೊಬ್ಬ ಪೇಟೆಗೆ ಹೋಗಲು ಬಸ್ಸು ಹತ್ತುವುದು. ಆ ಸಂದರ್ಭದಲ್ಲಿ ಸುದೀಷ್ಣೆ ಮಾತಾಡದಿದ್ದರೇನೇ ಒಳ್ಳೆಯದಿತ್ತು. ಲಿಂಗದೇವರು ಧಾರಾವಾಹಿ ನಿರ್ದೇಶನದ ಹ್ಯಾಂಗೋವರ್ನಿಂದ ಇನ್ನೂ ಹೊರಬಂದಿಲ್ಲ ಎನ್ನುವುದಂತೂ ಕಠೋರ ಸತ್ಯ. ಆದರೂ ತಮಗಿರುವ ಸೀಮಿತ ಅವಕಾಶದಲ್ಲೇ ಕಥೆಯನ್ನು ಸತ್ವಶಾಲಿಯಾಗಿ ಹೇಳಲು ಪ್ರಯತ್ನಪಟ್ಟಿದ್ದಾರೆ. ಆಯ್ದುಕೊಂಡ ಬಸರೀಕಟ್ಟೆ ಪಕ್ಕದ ಲೊಕೇಶನ್ಗಳು ಸಹ ಕಥೆಗೆ ಬೆನ್ನೆಲುಬು.
ಕ್ಲೈಮ್ಯಾಕ್ಸ್ ಪ್ರೇಕ್ಷಕ ಊಹಿಸುವುದಕ್ಕಿಂತ ಮೊದಲೇ ಬಂದು ಅಚ್ಚರಿ ಹುಟ್ಟಿಸುತ್ತದೆ. ಇಷ್ಟವಾಗುತ್ತದೆ ಕೂಡಾ. ನಕ್ಸಲಿಸಂ ಸಮಸ್ಯೆಯೂ ಚಿತ್ರದಲ್ಲಿ ಬಂದು ಹೋಗುತ್ತದೆ. ಅಂದ ಹಾಗೆ ಸಿನಿಮಾ ನಿರ್ಮಿಸಿರುವುದು ‘ಬೆಂಗಳೂರು ಕಂಪೆನಿ’.
ಸಿನಿಮಾ ಮುಗಿದ ನಂತರವೂ ನಮ್ಮೊಳಗೆ ಬೆಳೆಯುತ್ತಾ, ಕಾಡುವ ದೃಶ್ಯವೆಂದರೆ ಸುದೀಷ್ಣೆ ಕೊನೆಯಲ್ಲಿ ಬೆಟ್ಟದ ಮೇಲಿಂದ ಮೊಬೈಲ್ ಎಸೆಯುವುದು. ಜೊತೆಗೆ ಆ ಎಸೆತ ಹುಟ್ಟುಹಾಕುವ ಪ್ರಶ್ನೆಗಳು ಸಹ ಹಲವು. ಆ ಎಸೆತ ಜಾಗತೀಕರಣ ಹುಟ್ಟಿಸಿದ ನಿರ್ಲಿಪ್ತತೆಯ ಸಂಕೇತವಾ? ನಂಬಿಕೊಂಡ ನಂಬಿಕೆಗಳು ಕುಸಿದಾಗ ಅದರಿಂದ ಹೊರಬಂದು ನಿರುಮ್ಮಳವಾಗಿ ಸ್ವತಂತ್ರಗೊಳ್ಳುವ ತವಕವಾ? ಪರಿಸ್ಥಿತಿಯ ಒತ್ತಡಕ್ಕೆ ಜೈ ಎನ್ನದೆ ತನ್ನತನವನ್ನು ಹುಡುಕಿಕೊಂಡು ಹೊರಟವಳ ಹಾದಿಯಾ? ತನ್ನ ನಿತ್ಯ ನೈಮಿತ್ತಿಕಗಳ ಹೊರತಾಗಿ ತನಗಿರುವ ನೈಜ ಬದುಕು ಬೇರೆಯೇ ಎನ್ನುವ ಸ್ಪಷ್ಟನೆ ಆಕೆಗೆ ಸಿಕ್ಕಿತಾ? ಪ್ರತೀ ಬದಲಾವಣೆ ಗಾಳಿಯೂ ಇದೇ ರೀತಿ ಇರುತ್ತದೆಯಾ? ಜಾಗತೀಕರಣದ ಗೊಂದಲದ ಗೂಡಲ್ಲಿ ಸಿಕ್ಕಿ ಹಾಕಿಕೊಂಡ ನಮ್ಮ ಗೊಂದಲಗಳು ಇವೇ ಇರಬಹುದೇ? ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಹುಟ್ಟಿಸುತ್ತಾ ಗೊಂದಲದ ಗೂಡು ನಮ್ಮಲ್ಲಿ ಉಳಿಯುತ್ತದೆ, ಬೆಳೆಯುತ್ತದೆ. ಬೆಳದಿಂಗಳ ತಂಪು ಕಾಡುವುದು ಇದೇ ಕಾರಣಕ್ಕೆ!
ಚಿತ್ರಕೃಪೆ : ಜೋಗಿಮನೆ
ಚಿತ್ರ ‘ಆಮೀರ್’ ಕುರಿತು ಹರೀಶ್ ರ ಅನಿಸಿಕೆ
ಏರ್‌ಪೋರ್ಟ್‌ನಿಂದ ಹೊರಗೆ ಬಂದರೆ ಆತನನ್ನು ರಿಸೀವ್ ಮಾಡಬೇಕಾದ ಮನೆಯವರಿಲ್ಲ. ಫೋನ್ ಮಾಡಿದರೆ ಮನೆಯಲ್ಲೂ ಯಾರೂ ಇಲ್ಲ. ಅಪರಿಚಿತನೊಬ್ಬ ಆತನೆಡೆಗೊಂದು ಮೊಬೈಲ್ ಎಸೆಯುತ್ತಾನೆ. ಅದಕ್ಕೆ ಬಂದ ಕರೆ, ತಾನು ಹೇಳಿದ್ದನ್ನು ಮಾಡುವಂತೆ ಆಮಿರ್‌ಗೆ ಆದೇಶಿಸುತ್ತದೆ. ಆಮಿರ್‌ನ ಎಲ್ಲ ವಿವರಗಳೂ ಆ ದನಿಗೆ ಗೊತ್ತು. ಆಮಿರ್ ಮನೆಯವರು ಆ ಧ್ವನಿಯ ಒಡೆಯನ ಹಿಡಿತದಲ್ಲಿದ್ದಾರೆ.
ಅಲ್ಲಿಂದ ಬಳಿಕ ಫೋನ್ ಕರೆಯ ನಿರ್ದೇಶನದಂತೆ ಆಮಿರ್ ನಡೆಯಬೇಕಾಗುತ್ತದೆ. ಆತನನ್ನು ಮುಂಬಯಿಯ ಬಡ ಮುಸ್ಲಿಂ ಜನತೆ ವಾಸಿಸುವ ಪ್ರದೇಶಗಳಲ್ಲಿ ಸುತ್ತಾಡಿಸುತ್ತದೆ ಆ ದನಿ. “ನೋಡಿದೆಯಾ ನಿನ್ನ ಸಮುದಾಯದವರು ಎಂಥ ಹೀನ ಬಾಳು ಬದುಕುತ್ತಿದ್ದಾರೆ ಎಂಬುದನ್ನು ?” ಎಂದು ಆ ಧ್ವನಿ ಇರಿಯುತ್ತದೆ. “ನಾನೂ ಬಡ ಕುಟುಂಬದವನೇ. ಆದರೆ ಸಾಧನೆಯ ಮೂಲಕ ಮೇಲೆ ಬಂದೆ. ಇವರೆಲ್ಲ ಹೀಗೇ ಉಳಿಯಬೇಕೆಂದು ಯಾರು ನಿರ್ಬಂಧಿಸಿದ್ದರು?” ಎಂದು ಆಮಿರ್ ಮರು ಪ್ರಶ್ನಿಸುತ್ತಾನಾದರೂ ಅವನಿಗೆ ಉತ್ತರ ದೊರೆಯುವುದಿಲ್ಲ.
ಕೊನೆಗೆ ಆತನಿಗೊಂದು ಸೂಟ್‌ಕೇಸ್ ನೀಡಿ ಬಸ್‌ನಲ್ಲಿ ಅದನ್ನು ಕೊಂಡೊಯ್ಯುವಂತೆ ಹೇಳಲಾಗುತ್ತದೆ. ಅದರಲ್ಲಿ ಬಾಂಬ್ ಇದೆ. ಅದನ್ನು ಜನ ತುಂಬಿದ ಬಸ್‌ನಲ್ಲಿ ಇಟ್ಟು ಆತ ಇಳಿಯಬೇಕು. ಅದು ಸೋಟಿಸಲು ಎರಡೇ ನಿಮಿಷಗಳಿವೆ. ಈ ಕೆಲಸ ಮಾಡದಿದ್ದರೆ ಆಮಿರ್‌ನ ಮನೆಯವರು ಉಳಿಯುವುದು ಅನುಮಾನ.
ನಿಮಗೀಗಾಗಲೇ ಗೊತ್ತಾಗಿರಬಹುದು. ಇದು ಹಿಂದಿಯ ‘ಆಮಿರ್’ ಚಲನಚಿತ್ರದ ಕತೆ. ಕತೆಯ ಅಂತಸ್ಸತ್ವ ಇರುವುದೇ ಕೊನೆಯ ಎರಡು ನಿಮಿಷಗಳಲ್ಲಿ. ಅಲ್ಲಿಯವರೆಗೂ ಈ ಚಿತ್ರ ನಿಮ್ಮನ್ನು ಕುರ್ಚಿಯ ತುದಿಯಲ್ಲಿ ಕೂರಿಸುತ್ತದೆ. ಆಮಿರ್ ಹಾಗೂ ಭೂಗತ ನಾಯಕ ಎರಡೇ ಇದರ ಪ್ರಮುಖ ಪಾತ್ರಗಳು. ಉಳಿದವೆಲ್ಲಾ ಕ್ಷಣಮಾತ್ರದಲ್ಲಿ ಹಾದು ಹೋಗುವ ಪಾತ್ರಗಳಾದುದರಿಂದ ಚಿತ್ರಕ್ಕೊಂದು ಶೀಘ್ರಗತಿ ಸಿಕ್ಕಿದೆ. ಸೂಕ್ಷ್ಮ ಸಂವೇದಿ ಕತೆ, ಬಿಗಿಯಾದ ನಿರೂಪಣೆ, ಅಭಿನಯ- ಇವೆಲ್ಲವುಗಳ ಬಗ್ಗೆ ಹೇಳಬೇಕಾಗಿಯೇ ಇಲ್ಲ.
ನಾನು ಈ ಫಿಲಂ ನೋಡಿದ್ದು ಬೆಂಗಳೂರಿನಲ್ಲಿ ಸರಣಿ ಬಾಂಬ್ ಸೋಟ ನಡೆದ ಆಸುಪಾಸಿನಲ್ಲಿ. ಆಮೇಲೆ ಅಹಮದಾಬಾದ್‌ನಲ್ಲಿ ಸೋಟ, ಸಾವುನೋವು, ಸೂರತ್‌ನಲ್ಲಿ ಆತಂಕದ ಗುಮ್ಮ. ಇವೆಲ್ಲ ‘ಕೆಂಪಾಗಿ’ರುವಾಗಲೇ ನಾನು ಇದನ್ನು ನೋಡಿದ್ದು. ಈ ಫಿಲಂ ಹಾಗೂ ಅದರ ಸಂದರ್ಭಗಳು ಒಂದು ವಿಲಕ್ಷಣವಾದ ತಲ್ಲಣ ಉಂಟುಮಾಡಿದವು. ಚಿತ್ರದ ಶೀರ್ಷಿಕೆಯಡಿ ಇರುವ “ಮನುಷ್ಯ ತನ್ನ ಭವಿಷ್ಯ ತಾನೇ ಬರೆದುಕೊಳ್ಳುತ್ತಾನೆ ಎಂದು ಹೇಳಿದವರ್‍ಯಾರು ?” ಎಂಬ ಉಪಶೀರ್ಷಿಕೆಯ ಅನೇಕ ಅರ್ಥಗಳು ಹೊಳೆಯತೊಡಗಿದವು.
ಈ ಚಲನಚಿತ್ರದ ಆಮಿರ್‌ನಂತೆ ನಾವೂ ಅಸಂಗತ ಪರಿಸ್ಥಿತಿಯಲ್ಲಿ ಇದ್ದೇವೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಬಾಂಬುಗಳು ಬಂದು ನಮ್ಮ ನಿಮ್ಮ ಮನೆಯ ಪಕ್ಕದಲ್ಲೇ ಸೋಟಿಸುತ್ತವೆ. ಅದರಲ್ಲಿ ಸಾಯುವ ಅಥವಾ ಗಾಯಗೊಳ್ಳುವವರ ಪಟ್ಟಿಯಲ್ಲಿ ನಾನೂ ನೀವೂ ಸೇರಿಸಿದಂತೆ ಯಾರೂ ಇರಬಹುದು. ಕೊಲ್ಲವವರಿಗೆ ತಾವು ಯಾರನ್ನು ಯಾಕೆ ಕೊಲ್ಲುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಸಾಯುವವರಿಗೂ ತಾವು ಯಾರಿಂದ ಯಾಕೆ ಸಾಯಿಸಲ್ಪಡುತ್ತಿದ್ದೇವೆ ಎಂಬುದು ಗೊತ್ತಿಲ್ಲ. ಇದಕ್ಕಿಂತ ಅಸಂಗತ ವಿವರ ಇನ್ನೊಂದಿರಲು ಸಾಧ್ಯವೆ ?
ಇಂಥ ಅಸಂಗತ ಪರಿಸ್ಥಿಯ ಬಗ್ಗೆ ಕನ್ನಡದಲ್ಲಿ ಸೊಗಸಾಗಿ ಬರೆದವರು ಪೂರ್ಣಚಂದ್ರ ತೇಜಸ್ವಿ. ಅವರ ‘ಜುಗಾರಿ ಕ್ರಾಸ್’ ನೋಡಿ. ಒಂದಕ್ಕೊಂದು ಸಂಬಂಧವಿಲ್ಲದ ಘಟನಾವಳಿಗಳು ಹಾಗೂ ಪಾತ್ರಗಳು ಕಾದಂಬರಿಯ ಹಂದರವನ್ನು ಕಟ್ಟುತ್ತವೆ. ‘ಚಿದಂಬರ ರಹಸ್ಯ’ದಲ್ಲೂ ಇದೇ ಆಗುವುದು. ಕಾದಂಬರಿಯ ಕೊನೆಗೆ ಬೆಟ್ಟ ಹತ್ತಿ ಪಾರಾಗಿ ಏದುಸಿರು ಬಿಡುವ ರಫೀಕ್ ಮತ್ತು ಜಯಂತಿಯರಿಗೆ ತಮ್ಮ ಪ್ರೇಮಕ್ಕೂ ತಮ್ಮೂರಿನ ಬೆಂಕಿಗೂ ಹಿಂದೆ ಘಟನಾ ಪರಂಪರೆಯೊಂದು ಇದೆ ಎಂಬುದು ಗೊತ್ತೇ ಇಲ್ಲ. ‘ನಿಗೂಢ ಮನುಷ್ಯರು’ ಕತೆಯ ಜಗನ್ನಾಥ, ರಂಗಣ್ಣ, ಗೋಪಾಲಯ್ಯ ಎಲ್ಲರೂ ಇಂಥ ನಿಗೂಢ ಅಸಂಗತ ಪ್ರವಾಹವೊಂದರ ಸುಳಿಯಲ್ಲಿ ಸಿಲುಕಿದವರೇ.
ಇದನ್ನು ‘ಅಸಂಗತ’ ಎನ್ನುವುದಕ್ಕಿಂತ ಬೇರೊಂದು ಬಗೆಯಲ್ಲೂ ವ್ಯಾಖ್ಯಾನಿಸಬಹುದು. ಯಾವುದೋ ರೀತಿಯಲ್ಲಿ ಒಂದಕ್ಕೊಂದು ಹೆಣೆದುಕೊಂಡ, ಆದರೆ ಅರ್ಥೈಸಲು ಜಟಿಲವಾದ ಘಟನಾವಿನ್ಯಾಸದಲ್ಲಿ ಆಧುನಿಕ ಮನುಷ್ಯನ ಬದುಕು ಹೆಣೆದುಕೊಂಡಿದೆ. ಇದನ್ನು ಕನ್ನಡದಲ್ಲಿ ಎಲ್ಲರಿಗಿಂತ ಮೊದಲು ಗುರುತಿಸಿ, ಬರೆದವರು ತೇಜಸ್ವಿ.
ವಾಸ್ತವ ಬದುಕಿನ ಭಯಾನಕತೆಯನ್ನು ಸ್ಪಷ್ಟಪಡಿಸಿಕೊಳ್ಳಲು ನಾವು ಸಿನೆಮಾ, ಸಾಹಿತ್ಯದ ಮೊರೆ ಹೋಗಲೇಬೇಕು !
ಸೈಲೆನ್ಸ್-ನೋಡಲೇಬೇಕಾದ ಚಿತ್ರ
ಈ ಚಿತ್ರ ನೋಡಲೇಬೇಕಾದದ್ದು. ಅದರಲ್ಲೂ ಮೌನದೊಳಗಿನ ಮಧುರ ಸ್ವರಕ್ಕೆ ಕ್ಯಾಮೆರಾ ಹಿಡಿದು ಕಟ್ಟಿ ಕೊಟ್ಟದ್ದು ಇರಾನಿ ನಿರ್ದೇಶಕ ಮೊಹ್ಸಿನ್ ಮಕ್ಮಲ್ಭಫ್ ನ ಯಶಸ್ಸು. ಸಾಂಗತ್ಯ ಚಿತ್ರೋತ್ಸವದಲ್ಲೂ ಪ್ರದರ್ಶಿತವಾದ ಚಿತ್ರ.
ನಾನು ಹೇಗೆ ಅನುಭವಿಸುತ್ತಿದ್ದೇನೆ ಎಂದು ಕೇಳಬೇಡ…
ಎಂಥಾ ಚೆಂದದ ಮಾತು. ಇರಾನಿಯನ್ ನಿರ್ದೇಶಕ ಮೊಹ್ಸೀನ್ ಮಖ್ಮಲ್ಬಫ್‌ನ ದಿ ಸೈಲೆನ್ಸ್ (ಸೊಕೋಟ್) ಚಿತ್ರ ಕಂಡ ಮೇಲೆ ಸದಾ ಉಳಿದುಕೊಳ್ಳುವ ಮಾತು.

ಬದುಕನ್ನು ಪ್ರತಿಯೊಬ್ಬರೂ ಅನುಭವಿಸುತ್ತಾರೆ, ಅವರದ್ದೇ ಆದ ಮಾದರಿಗಳಲ್ಲಿ, ಸಾಧನ-ವಿಧಾನಗಳಲ್ಲಿ. ಆದರೆ ಅನುಭವದ ತೀವ್ರತೆ, ಅನುಸರಿಸಿದ ವಿಧಾನ, ಬಳಸಿಕೊಂಢ ಸಾಧನ, ಮಾರ್ಗ ಮತ್ತು ಬಗೆ ಒಬ್ಬರಿಂದ ಮತ್ತೊಬ್ಬರಿಗೆ ವಿಭಿನ್ನ. ಅದು ಸಹಜವೂ ಸಹ. ಅದನ್ನು ಪ್ರಶ್ನಿಸಕೂಡದು. ಅವನು ಅನುಭವಿಸಿದ್ದಾನೆ, ಅನುಭವಿಸುತ್ತಿದ್ದಾನೆ ಎಂಬುದಷ್ಟೇ ಮುಖ್ಯ. ಅದು ಹೇಗೆ ಎಂಬುದು ಗೌಣ. ಆದ್ದರಿಂದ ನನ್ನೊಳಗಕಿನ ಅನುಭವದ ಕ್ಷಣವನ್ನು ಬಣ್ಣಿಸಲಾಗದು.
“ದಿ ಸೈಲೆನ್ಸ್’ ಹಿಡಿದು ಹೋಗುವ ಜಾಡು ಇದನ್ನೇ. ಒಮ್ಮೊಮ್ಮೆ ಮತ್ತೊಬ್ಬ ಇರಾನಿ ನಿರ್ದೇಶಕ ಮಜಿದ್ ಮಜ್ದಿಯ “ಕಲರ್ ಆಫ್ ಫ್ಯಾರಡೈಸ್’ ಮಾದರಿ ಎನಿಸುವುದಿದೆ. ಆದರೆ ಈ ಚಿತ್ರ ತೀರಾ ಭಿನ್ನ. ಏನನ್ನೋ ಹೇಳಬೇಕೆಂದು ಬಂದವ ಮಾತನ್ನು ಗಂಟಲಲ್ಲೇ ಉಳಿಸಿಕೊಂಡು ಮೌನದ ವ್ಯಾಖ್ಯಾನಕ್ಕೆ ತೊಡಗಿ ಮಾತಿಗಿಂತ ಹೆಚ್ಚಿನ ಅರ್ಥವನ್ನು ಅನಾವರಣಗೊಳಿಸುವ ಪರಿ ಈ ಚಿತ್ರದ್ದು. ಹಾಗಾಗಿ ನನಗೆ ಬಹಳ ಇಷ್ಟವಾಯಿತು. ಇದು ನನ್ನ ವಿಮರ್ಶೆಯಲ್ಲ. ನನಗೆ ಚಿತ್ರ ಇಷ್ಟವಾದ ಪರಿ ಮತ್ತು ಅದರೊಳಗಿನ ನೂರು ಸ್ವರಗಳನ್ನು ಬಿಡಿಸುವ ಪ್ರಯತ್ನವಷ್ಟೇ.
ಮಧುರ ಸ್ವರಗಳಲ್ಲಿ ಕಳೆದುಹೋಗುವವನ ಕಥೆ. ಖುರ್ಷದ್ ಪುಟ್ಟ ಬಾಲಕ ; ಅಂಧ. ಅವನ ತಾಯಿಯೊಂದಿಗೆ ತಜ್ ಕಿಸ್ತಾನದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸ. ಚಿಕ್ಕಂದಿನಲ್ಲೇ ಮನೆ ನಿಭಾಯಿಸುವ ಹೊಣೆ. ಆತನಿಗೆ ಪಟ್ಟಣದ ಸಂಗೀತ ಉಪಕರಣಗಳಿಗೆ ಶ್ರುತಿ ಕೂಡಿಸುವ ಕೆಲಸ. ಅತ್ಯಂತ ಮಧುರವಾಗಿ ಹೇಳುವುದಾದರೆ ಉಪಕರಣಗಳಿಗೆ ಕಂಠ ತುಂಬುವವನು. ಐದು ದಿನದೊಳಗೆ ಬಾಡಿಗೆ ಕಟ್ಟದಿದ್ದರೆ ಮನೆಯಿಂದ ಹೊರ ಹಾಕುವುದಾಗಿ ಮಾಲೀಕ ಎಚ್ಚರಿಸಿರುತ್ತಾನೆ.
ಮಧುರ ಸ್ವರವೆಂದರೆ (ದನಿ) ಇವನಿಗೆ ಎಲ್ಲಿಲ್ಲದ ಹುಚ್ಚು. ಎಲ್ಲಿಯಾದರೂ ಮಧುರ ದನಿಯೊಂದು ಕೇಳಿಬಂದರೆ ಅದರ ಹಿಂದೆ ಹೋಗುತ್ತಾನೆ. ಅಕ್ಷರಶಃ ಕಳೆದುಹೋಗುತ್ತಾನೆ. ನಾನಿಲ್ಲಿ ಕಥೆಯನ್ನು ಪೂರ್ತಿಯಾಗಿ ಹೇಳುವುದಿಲ್ಲ.
ಚೆಂದದ ಒಂದೆರಡು ಚಿತ್ರಿಕೆ (ಇಮೇಜಸ್) ಗಳನ್ನಷ್ಟೇ ಹೇಳುತ್ತೇನೆ. ಅದು ನಿರ್ದೇಶಕನ ಸಾಮರ್ಥ್ಯವನ್ನು, ಸೂಕ್ಷ್ಮ ಗ್ರಹಿಕೆಯನ್ನು, ಮಾತುಗಳನ್ನು ಮೊಗೆ ಮೊಗೆದು ಮೌನವಾಗಿಸಿಬಿಡುವ ಕುಸುರಿಗಾರಿಕೆಯನ್ನು ಹೇಳುತ್ತದೆ.
ಚಿತ್ರಿಕೆ ಒಂದು-ಉಪಕರಣಗಳಿಗೆ ಕಂಠ ತುಂಬುವ ಕೆಲಸಕ್ಕೆ ಸಹಾಯ ಮಾಡುವಾಕೆ ಮತ್ತೊಬ್ಬಳು ಪುಟ್ಟ ಚೆಂದದ ಹುಡುಗಿ ನದೀರಾ. ಶ್ರುತಿ ಶುದ್ಧ ಪಡಿಸುವಾಗ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸರಿಯಿದೆಯೇ ? ಇಲ್ಲವೇ ? ಎಂದು ಹೇಳುವವಳು ನದೀರಾ. ಕಿವಿಗೆ ಜೋಡಿ ಚೆರಿ ಹಣ್ಣುಗಳನ್ನು ಜೋತು ಬಿಟ್ಟುಕೊಂಡು, ಮುಂದೆರೆಡು, ಹಿಂದೆರೆಡು ಉದ್ದದ ಜಡೆ ಹಾಕಿಕೊಂಡ ಮಧುರ ದನಿಯ ಹುಡುಗಿಯನ್ನು ನೋಡಲೇ ಚೆಂದ. ಅಂಥ ಎರಡು ಸನ್ನಿವೇಶಗಳನ್ನು ನೋಡಿಯೇ ಆನಂದಿಸಬೇಕು.
ಎರಡು-ಇವನು ಆಗಾಗ್ಗೆ ಹೊರಗಿನ ಸ್ವರಗಳಿಂದ ವಿಚಲಿತನಾಗುವುದರಿಂದ ಸರಿಯಾಗಿ ಶ್ರುತಿ ಮಾಡಲಾರ. ಇದರಿಂದ ಉಪಕರಣ ಕೊಳ್ಳುವವರೇ ಇರುವುದಿಲ್ಲ. ಮಾಲೀಕ ಅಂಗಡಿ ಮುಚ್ಚುತ್ತಾನೆ. ಆಗ ಖುರ್ಷದ್ ಮತ್ತು ನದೀರಾ ಅಲೆಮಾರಿಯೊಡನೆ (ದಾಸಯ್ಯ ಮಾದರಿ) ನದಿ ತಟಕ್ಕೆ ಹೋಗುತ್ತಾರೆ. ನಂತರದ ಸನ್ನಿವೇಶವೂ ಹೇಳದಿದ್ದರೇ ಚೆಂದ. ಕೊನೆಗೆ ಖುರ್ಷದ್ ಎಲ್ಲವನ್ನೂ ಬಿಟ್ಟು ತನ್ನ ಲೋಕದೊಳಗೆ (ಮಧುರ ಸ್ವರ) ಮತ್ತೆ ಕಳೆದುಹೋಗುತ್ತಾನೆ. ಆ ಅಂತ್ಯ (ಕ್ಲೈಮ್ಯಾಕ್ಸ್) ವನ್ನು ಸಂಯೋಜಿಸಿರುವುದೇ ದೊಡ್ಡ ಸೊಗಸು.
ಮೂರು- ಸಂಗೀತ ಶಾಲೆಯಿಂದ ಮಾಸ್ತರರು ಈ ವಾದ್ಯವನ್ನು ನಿಮ್ಮ ಮಾಲೀಕನಿಗೆ ಕೊಡು, ಇದು ಸರಿಯಿಲ್ಲ ಎಂದು ಹೇಳಿ ಕಳುಹಿಸುತ್ತಾನೆ. ಅದನ್ನು ಹೊತ್ತುಕೊಂಡು ಬರುವಾಗ ಮಳೆ ಆರಂಭವಾಗುತ್ತದೆ. ಇವನು ಮಳೆಯಿಂದ ರಕ್ಷಿಸಿಕೊಳ್ಳಲು ಓಡತೊಡಗುತ್ತಾನೆ. ಕಲ್ಲೊಂದು ಕಾಲಿಗೆ ತಾಗಿ ಎಡವಿ ಬಿದ್ದಾಗ ಸಂಗೀತ (ತಾನ್‌ಪುರಿ) ಉಪಕರಣ ಕೊಂಚ ದೂರ ಅಂಗಾತವಾಗಿ ಬೀಳುತ್ತದೆ. ಅ ತಂತಿಯ ಮೇಲೆ ಬೀಳುವ ಪ್ರತಿ ಹನಿಯೂ ಲಯಬದ್ಧವೇ.
ಖುರ್ಷದ್‌ಗೆ ಸದಾ ಕಾಡುವುದು ಬೊ…ಬೊ…ಬೊ…ಬೊಮ್ ಎಂಬ ಲಯ. ಇದು ಮನೆ ಮಾಲೀಕ ಬಂದಾಗಲೆಲ್ಲಾ ಬಾಗಿಲ ಬಡಿಯುವ ಸದ್ದು. ಅದೇ ಅವನನ್ನು ನಾದದತ್ತ ಸೆಳೆಯುವ ನಾದ ಸಹ. ಇದನ್ನು ನಿರ್ದೇಶಕ ಪ್ರತಿ ಹಂತದಲ್ಲೂ ಅನುರಣಿಸುತ್ತಾನೆ. ಅದಕ್ಕೆ ಕಳೆಗಟ್ಟುವಂತೆ ಕ್ಲೈಮಾಕ್ಸ್ ಇದೆ.
ಚಿತ್ರವನ್ನು ನೋಡುತ್ತಾ ಹೋದಂತೆ ಆವರಿಸಿಕೊಳ್ಳುತ್ತದೆ. ಅಂಧ ಬಾಲಕನೊಬ್ಬ ಹೇಗೆ ಶಬ್ದದ ಮೂಲಕ ಜಗತ್ತನ್ನು ಗ್ರಹಿಸುತ್ತಾ ಹೋಗುತ್ತಾನೆ ಎಂಬುದನ್ನು ಹೇಳುತ್ತದೆ ಎನ್ನಿಸುತ್ತದೆ ಚಿತ್ರ. ಆದರೆ ನೋಡಿದಷ್ಟು ಬಾರಿ ಹೊಸ ಅರ್ಥ ಸ್ಫುರಿಸುವ ಶಕ್ತಿ ಅದಕ್ಕಿದೆ.
ಫಿಲಾಸಫಿಕಲ್ ತಟಕ್ಕೂ ನಮ್ಮನ್ನು ಕರೆದೊಯ್ಯುವ ನಿರ್ದೇಶಕ, ಲಯದ (ರಿದಮ್) ನೆಲೆಯನ್ನೇ ಶೋಧಿಸುತ್ತಾ ಹೋಗುತ್ತಾನೆ. ಆವನ ಶೋಧನೆಯ ಬಗೆ ಹಲವು ಚಿತ್ರಿಕೆ (ಇಮೇಜ್) ಗಳಲ್ಲಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.
ಬಹಳ ಆಪ್ತವೆನಿಸುವುದು ಲಯದ ವಿವಿಧ “ಚಿತ್ರ’ಗಳು. ಪ್ರತಿಯೊಂದೂ ಲಯ ತಪ್ಪದೇ ಇವೆ ಎಂಬುದನ್ನು ಹೇಳಲು ಬಳಸಿಕೊಂಡ ಇಮೇಜ್‌ಗಳು ವಿಶಿಷ್ಟ ಹಾಗೂ ಆಪ್ತ.
ಹಲವು ಚಿತ್ರಿಕೆಗಳನ್ನೆಲ್ಲಾ ಒಟ್ಟು ಮಾಡಿಟ್ಟ ಗುಚ್ಚದಲ್ಲಿ ಎಷ್ಟೊಂದು ಬಣ್ಣ ? ಎಷ್ಟೊಂದು ಅರ್ಥ? ಅದಕ್ಕೆ ಖುರ್ಷದ್ ಸಂಕೇತವಷ್ಟೇ. ಅಂದರೆ ಬದುಕಿನಲ್ಲಿ ಪ್ರತಿಯೊಬ್ಬರೂ ಯಾವುದಾದರೊಂದು ಗುಂಗು-ನಾದ-ಹುಚ್ಚು (ಪ್ರಟ್ಟಿ ವಾಯ್ಸ್)ನ ಹಿಂದೆ ಹೊರಡುವವರೇ, ಕಳೆದು ಹೋಗುವವರೇ ಎಂಬುದನ್ನು ಹೇಳಲು ಯತ್ನಿಸುತ್ತಾನೆ.
ಅದೇ ಸಂದರ್ಭದಲ್ಲಿ ಕಣ್ಣಿನ ಚಂಚಲತೆಯನ್ನೂ ಹೇಳದೇ ಬಿಡುವುದಿಲ್ಲ. ದೃಶ್ಯ ನಮ್ಮನ್ನು ಚಂಚಲಗೊಳಿಸಬಲ್ಲದು, ಕಣ್ಣು ಮುಚ್ಚಿ ಜಗತ್ತನ್ನು ಅನುಭವಿಸುವುದು ಮತ್ತೂ ಚೆಂದ. ಅಂದರೆ ಬರೀ ಶಬ್ದ, ಸ್ಪರ್ಶದ ಗ್ರಹಿಕೆಯಲ್ಲಿ (ಬಸ್ಸಿನಲ್ಲಿ ಹೋಗುವಾಗ ಶಾಲಾ ಮಕ್ಕಳಿಬ್ಬರು ಮತ್ತು ಖುರ್ಷದ್ ನಡುವಿನ ಪ್ರಸಂಗ) ಸಾಧ್ಯ ಎಂಬ ಪ್ರಶ್ನೆಯೊಡ್ಡುತ್ತಾನೆ.
ಒಟ್ಟಂದದಲ್ಲಿ ಒಂದು ವಿಶಿಷ್ಟವಾದ ಅನುಭವವನ್ನು ನೀಡುವ ಚಿತ್ರ, ಲಾಲ್‌ಬಾಗ್‌ನಂಥ ಹೂದೋಟದಲ್ಲಿ ಅರಳಿ ನಿಂತ ಕುಸುಮಗಳ ಮಧ್ಯೆ ಒಂದು ಸುತ್ತು ಹಾಕಿ ಬಂದಂತೆ ಅನಿಸುತ್ತದೆ. ಅದೇ ಕೋಮಲ ಭಾವ ಮತ್ತು ಬಣ್ಣ ತುಂಬಿಕೊಂಡ ಕಣ್ಣುಗಳು !
ಮೂರ್ತವಾದುದು ವಾಚ್ಯ ಎನಿಸುತ್ತದೆ, ಅಮೂರ್ತ ಕಾವ್ಯದಂತೆ. ನಿರ್ದೇಶಕ ಮೊಹಿಸಿನ್, ಅಮೂರ್ತದ ಸೌಂದರ್ಯವನ್ನೇ ಉಳಿಸಿಕೊಂಡು ಅದಕ್ಕೊಂದು ಭಾಷ್ಯ ಬರೆಯಲು ಹೊರಡುತ್ತಾನೆ, ಅದೆಲ್ಲೂ ವಾಚ್ಯವಾಗಿಸುವುದಿಲ್ಲ ಎಂಬುದೇ ಅವನ ದೊಡ್ಢಸ್ಥಿಕೆ. ಮಧ್ಯೆ ಮಧ್ಯೆ ಬಳಸಿಕೊಂಡ ಸಂಗೀತವೂ ಸೂಕ್ತ, ಸಂಭಾಷಣೆ ಎಲ್ಲೂ ಬರಿಯ ಮಾತೆನ್ನಿಸುವುದಿಲ್ಲ, ಮನದ ಕವಿತೆಯಂತೆ ತೋರುತ್ತದೆ. ಪ್ರತಿಯೊಂದರಲ್ಲೂ ಲಯವನ್ನು ಬಯಸುವ ಖುರ್ಷದ್ ಸ್ವತಃ ನಿರ್ದೇಶಕನೇ ಎನ್ನಿಸಿಬಿಡುತ್ತಾನೆ.
ಛಾಯಾಗ್ರಹಣವೂ ಚೆನ್ನಾಗಿದೆ (ಇಬ್ರಾಹಿಂ ಗಫೋರಿ). ಖುರ್ಷದ್ ನಾಗಿ ತಹ್ಮಿನೆ ನರ್ಮಾತೊವ, ನದೀರಾಳಾಗಿ ನದೀರೆ ಅಬ್ದಲೇವ, ದಾಸಯ್ಯನಾಗಿ ಅರಜ್ ಎಂ. ಮೊಹಮ್ಮದಿ ನಟಿಸಿದ್ದಾರೆ.
ಚಿತ್ರ : ದಿ ಸೈಲೆನ್ಸ್ ಭಾಷೆ : ಇರಾನಿ
ಅವಧಿ : 76 ನಿಮಿಷ ಇಸವಿ : 1998
ದೇವರಾಣೆ…ಈ ಚಿತ್ರ ಚೆನ್ನಾಗಿದೆ !
ಖುದಾಕೆ ಲಿಯೇ ಪಾಕಿಸ್ತಾನದ ಶೋಯಬ್ ಮಾನ್ಸೂರ್ ರೂಪಿಸಿರುವ ಚಿತ್ರ. ಜಿಹಾದ್ ಮತ್ತು ಕುರಾನ್ ನ ನಿಜ ತತ್ವಗಳ ಮಧ್ಯೆ ಅರ್ಥ ಹುಡುಕುವ ಪ್ರಯತ್ನ ನಡೆಸಿರುವ ಒಂದು ಉತ್ತಮ ಚಿತ್ರ ಎನ್ನುತ್ತಾರೆ ಪ್ರವೀಣರ ಅಭಿಪ್ರಾಯ.
ಚಿತ್ರವೊಂದನ್ನು ಒಂದೇ ಪೆಟ್ಟಿಗೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಎಂದು ನಿರ್ಧರಿಸಲು ಮಾನದಂಡಗಳಿಲ್ಲ. ಅತ್ಯುತ್ತಮ ಕಥೆ ಉಳಿದೆಲ್ಲಾ ದೋಷವನ್ನೂ ಸಹಿಸಿಕೊಳ್ಳುವಂತೆ ಮಾಡಬಲ್ಲದು, ಅಚ್ಚುಕಟ್ಟಾದ ಸಂಭಾಷಣೆ ಚಿತ್ರವನ್ನು ನೋಡುವಂತೆ ಮಾಡಬಹುದು. ಕಥೆ, ಚಿತ್ರ ಕಥೆ, ಸಂಭಾಷಣೆ ಹೇಗೇ ಇರಲಿ ಚಿತ್ರದ ಸಂಗೀತವೇ ನಮ್ಮನ್ನು ಹಿಡಿದಿಡಬಹುದು. ಅಥವಾ ಛಾಯಾಗ್ರಹಣ ವಾಹ್ ಎನ್ನುವಂತೆ ಇರಬಹುದು.

ಹೀಗೆ ಎಲ್ಲಾ ಅಂಶಗಳನ್ನೂ ಹದವಾಗಿ ಬೆರೆಸಿಟ್ಟರೆ ಅತ್ಯುತ್ತಮ ಪಾಕ ಸಿದ್ಧಗೊಳ್ಳಬಹುದು. ಸೆಪ್ಟೆಂಬರ್ ಹನ್ನೊಂದರಂದು ಅಮೆರಿಕದ ಎದೆಗೇ ಗುರಿಯಿಟ್ಟು ನಿಬ್ಬೆರಗಾಗುವಂತೆ ಮಾಡಿದ ಮಾನವತೆಯ ಪೈಶಾಚಿಕ ಕೃತ್ಯದ, ಸುತ್ತ ಹಬ್ಬಿದ ಬಿಳಲುಗಳೇ ‘ಖುದಾ ಕೇ ಲಿಯೇ’ (ಇನ್ ದಿ ನೇಮ್ ಆಫ್ ಗಾಡ್) ಚಿತ್ರದ ಹೂರಣ. ಭಯೋತ್ಪಾದಕತೆಯ ಕ್ರೂರ ಅಲಗಿಗೆ ಸಿಕ್ಕಿ ನಲುಗುವ ಪಾಕಿಸ್ತಾನಿ ಕುಟುಂಬವೊಂದರ ಬವಣೆಗಳಿಗೆ ‘ಖುದಾ ಕೇ ಲಿಯೇ’ ಸಾಕ್ಷಿಯಾಗುತ್ತದೆ.
2002 ರ ಚಿಕಾಗೋದ ಆಟಮ್ ಎಂಬಲ್ಲಿನ ಮಾನಸಿಕವಾಗಿ ತಾಳ ತಪ್ಪಿದವರ ಸ್ಥಳದಲ್ಲಿ ಮೊದಲ್ಗೊಳ್ಳುವ ಚಿತ್ರದ ಒಳಸುಳಿ ನಿಧಾನವಾಗಿ ಹರವಾಗುತ್ತಾ ಹೋಗುತ್ತದೆ. ಅದೊಂದೇ ದೃಶ್ಯದ ನಂತರ ಚಿತ್ರ ಮತ್ತೆ ಎರಡು ವರ್ಷ ಹಿಂದಕ್ಕೆ ಜಿಗಿಯುತ್ತದೆ. 2000 ನೇ ಇಸವಿಯ ಪ್ರಾರಂಭದ ಖುಷಿಗೆ ಏರ್ಪಡಿಸಿದ್ದ ಹೊಸ ವರ್ಷದ ಸಮಾರಂಭದ ಪೂರ್ವ ತಯಾರಿಯಲ್ಲಿ ಕೇಳಿ ಬರುವ
‘ನಾವು ಜಗತ್ತನ್ನು ನೋಡದಿದ್ದ ಮೇಲೆ
ಜಗತ್ತಿರುವುದರ ಹಕೀಕತ್ತೇನು?
ನಾವು ನೋಡಿಯೂ
ಅದನ್ನು ಪ್ರೀತಿಸದಿದ್ದರೆ
ನಮ್ಮ ಕಣ್ಣಿದ್ದೇನು ಫಲ?
ನೋಡಿ, ನೋಡಿ ಮತ್ತು ನೋಡಿ
ನಿಮ್ಮೆದೆಯ ಒಳಗನ್ನು…
ನಾವು ಕುಣಿಯುತ್ತೇವೆ’
ಇಡೀ ರಾತ್ರಿ ಕುಣಿಯುತ್ತೇವೆ…
ಸುರಿವ ಒಲುಮೆಯಾ ಮಳೆಯ ” ಬರನ್”
ಮಹೇಶ್ ಪಿ. ಎಡಕ್ಕಾನ ಬರೆದಿರುವ ಈ ಬರಹ ಚಿತ್ರ “ಬರನ್” ಕುರಿತಾದದ್ದು. ”ಬರನ್” ಚಿತ್ರದ ನಿರ್ದೇಶಕ ಮಜಿದ್ ಮಜಿದಿ. ತನ್ನ ಸೂಕ್ಷ್ಮ ಸಂವೇದನೆಯ ಚಿತ್ರಗಳಿಂದ ಹೆಸರಾಗಿರುವ ಮಜಿದ್ ಮಜಿದ್ ನಮ್ಮೊಳಗಿನ ಅಂತಃಕರಣ ವನ್ನು ಮತ್ತಷ್ಟು ಸೂಕ್ಷ್ಮಗೊಳಿಸುವವನು. ಆ ಬರಹವನ್ನು ಇಲ್ಲಿ ಕೊಡಲಾಗಿದೆ.
ಸಾಮಾಜಿಕ ಕಟ್ಟುಪಾಡುಗಳ ಮಧ್ಯೆ ಚಿತ್ರಿತವಾದ ಒಂದು ಸುಂದರ ಪ್ರೇಮಕಾವ್ಯವೇ ಬರನ್. ಪರ್ಷಿಯನ್ ಭಾಷೆಯಲ್ಲಿ ಬರನ್ ಎಂದರೆ ಮಳೆ ಎಂಬ ಅರ್ಥ. ಈ ಮಳೆ ಚಿತ್ರ ಇರಾನ್‌ನಲ್ಲಿ 2001 ರಲ್ಲೇ ಬಿಡುಗಡೆಗೊಂಡದ್ದು.

ಇದು ಎಂಗೇಜ್‌ಮೆಂಟ್ ಆಗಿರುವ ಹುಡುಗಿಯನ್ನು ಪ್ರೀತಿಸಿ, ಪ್ರೀತಿ ಮಧುರ ತ್ಯಾಗ ಅಮರ ಎಂದು ಸಂದೇಶ ಸಾರುವ ಚಿತ್ರವಂತೂ ಖಂಡಿತಾ ಅಲ್ಲ. ಇಲ್ಲಿ ಬರನ್ ನಾಯಕಿಯ ಹೆಸರು. ಆಕೆಗೆ ಹಲವಾರು ಸಾಮಾಜಿಕ ಕಟ್ಟುಪಾಡುಗಳಿವೆ. ಅಷ್ಟೇ ಏಕೆ ? ಹೆಣ್ಣಿಗೆ ಇಲ್ಲಿ ಮಾತನಾಡುವ ಸ್ವಾತಂತ್ರ್ಯವೂ ಇಲ್ಲ. ವೈಚಾರಿಕ ನೆಲೆಯಲ್ಲಿ ಚಿತ್ರ ನೋಡುಗನನ್ನು ಚಿಂತನೆಗೆ ಹಚ್ಚಿದರೆ, ಭಾವನಾತ್ಮಕವಾಗಿಯೂ ಮನ ಮುಟ್ಟುತ್ತದೆ. ಇದರಲ್ಲಿ ಹದಿಹರೆಯದ ಮನಸುಗಳ ತಲ್ಲಣವಿದೆ, ಪ್ರತಿಯೊಬ್ಬರ ಮನದಲ್ಲೂ ಸ್ನೇಹಿತನಿದ್ದಾನೆ, ಅವರೆಲ್ಲರಲ್ಲೂ ಸಹಕಾರಿ ಮನೋಭಾವವಿದೆ. ದೃಶ್ಯದಾಳದಲ್ಲಿ ಅಧ್ಯಾತ್ಮದ ಸೆಲೆಯೂ ಇದೆ. ಈ ಚಿತ್ರ ಹಲವಾರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತು ಪಡೆದಿದೆ.
ರಷ್ಯಾದ ಕಡೆಯಿಂದ ಯುದ್ಧ ಮತ್ತು ತಾಲಿಬಾನರ ಬೆದರಿಕೆಯಿಂದ ಅತಂತ್ರರಾದ ಅಫಘಾನಿಸ್ತಾನ ಪ್ರಜೆಗಳು ಇರಾನ್‌ಗೆ ವಲಸೆ ಬಂದು ಅಲ್ಲಿನ ನಿರಾಶ್ರಿತರ ಶಿಬಿರದಲ್ಲಿ ವಾಸಿಸುತ್ತಾ ತಮ್ಮ ಜೀವನದ ಬಂಡಿಯನ್ನು ಸಾಗಿಸಲು ಹೆಣಗಾಡುವ ಬಗೆ ಎಂಬುದು ಚಿತ್ರದ ಮೂಲ ಕಥಾವಸ್ತು.
ಈ ನಿರಾಶ್ರಿತರು ಅಧಿಕೃತ ಗುರುತಿನ ಚೀಟಿಯಿಲ್ಲದೆ ಶಿಬಿರದಿಂದ ಹೊರಹೋಗಬಾರದೆಂಬ ನಿಯಮ ಅಲ್ಲಿನದ್ದು. ಆದರೆ ಬದುಕು ಸಾಗಿಸಲು ದುಡಿಮೆ ಅನಿವಾರ್ಯ. ಇದರ ಲಾಭ ಪಡೆವ ಕಂಟ್ರ್ಯಾಕ್ಟರ್‌ಗಳು ಕಡಿಮೆ ಸಂಬಳಕ್ಕೆ ಈ ನಿರಾಶ್ರಿತರನ್ನು ದುಡಿಸಿಕೊಳ್ಳುತ್ತಾರೆ. ಅಂಥ ಒಬ್ಬ ಮೆಮರ್ ಎಂಬ ಕಟ್ಟಡ ನಿರ್ಮಾಣ ಕಂಟ್ರ್ಯಾಕ್ಟರ್ ಕೈಕೆಳಗೆ ಕೆಲ ನಿರಾಶ್ರಿತರು ದುಡಿಯುತ್ತಿರುತ್ತಾರೆ.
ಸ್ಥಳೀಯ ಯುವಕ ಲತೀಫ್‌ನನ್ನು ಆತನ ತಂದೆ ಕೆಲಸಕ್ಕೆಂದು ಮೆಮರ್ ಬಳಿ ಬಿಡುತ್ತಾನೆ. ಚಿತ್ರದ ನಾಯಕ ಲತೀಫ್ ನಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವವರಿಗೆ ಚಾ ಮಾಡಿಕೊಡುವ ಹಾಗೂ ಬ್ರೆಡ್ ಬನ್‌ಗಳನ್ನು ಅಂಗಡಿಯಿಂದ ತಂದುಕೊಡುವ ಆರಾಮದಾಯಕ ಕೆಲಸ. ಲತೀಫ್ ಬಿಸಿ ರಕ್ತದ ಯುವಕ, ವಾಚಾಳಿ. ಒಂದರ್ಥದಲ್ಲಿ ಅಖಾಡಕ್ಕಿಳಿಸಿದ ಕೊಬ್ಬಿದ ಹುಂಜದಂತೆ. ಆದರೆ ದುಡ್ಡಿನ ವಿಷಯದಲ್ಲಿ ಮಾತ್ರ ಬಹಳ ನಾಜೂಕು. ಪ್ರತಿಯೊಂದು ಪೈಸೆಯನ್ನೂ ಕೂಡಿಡುವ ಮನೋಭಾವದವ. ದುಡ್ಡಿನ ವಿಷಯದಲ್ಲಿ ಮೆಮರ್‌ಗೆ ಈತನ ಮೇಲೆ ನಂಬಿಕೆಯಿಲ್ಲ. ಎಲ್ಲಿ ಖರ್ಚು ಮಾಡಿಬಿಡುತ್ತಾನೋ ಎಂದು ಆತನ ವರ್ಷದ ಸಂಬಳವೆಲ್ಲವನ್ನೂ ತನ್ನಲ್ಲೇ ಇಟ್ಟುಕೊಂಡಿರುತ್ತಾನೆ.
ಆಫ್ಘನ್ ಪ್ರಜೆ ನಜಾಫ್ ಎಂಬಾತ ಕಟ್ಟಡದ ಎರಡನೇ ಮಹಡಿಯಿಂದ ಬಿದ್ದು ಕಾಲು ಮುರಿದುಕೊಳ್ಳುತ್ತಾನೆ. ಈ ನಜಾಫ್ ತನ್ನ ಬದಲಿಗೆ ಮಗ ರೆಯಮತ್ ನನ್ನು ಸ್ನೇಹಿತನೊಡನೆ ಮೆಮರ್ ಬಳಿ ಕಳುಹಿಸುತ್ತಾನೆ. ಹಮತ್ ತುಂಬಾ ಸಣಕಲು ವ್ಯಕ್ತಿ. ಕ್ಲಿಷ್ಟಕರ ಕೆಲಸ ಆತನಿಂದ ಸಾಧ್ಯವಾಗದು. ಹಾಗಾಗಿ ಮೆಮರ್ ಆತನಿಗೆ ಅಡಿಗೆ ಮಾಡಿ ಮುಸುರೆ ತಿಕ್ಕುವ ಲತೀಫ್‌ನ ಕೆಲಸ ಕೊಡುತ್ತಾನೆ. ತನ್ನ ಆರಾಮದಾಯಕ ಕೆಲಸ ಕಿತ್ತುಕೊಂಡನಲ್ಲ ಎಂದು ಲತೀಫ್‌ಗೆ ಕೋಪ ಬರುತ್ತದೆ. ಅಡಿಗೆ ಸಾಮಾನು ತರಲೆಂದು ಅಂಗಡಿಗೆ ಹೋಗುವಾಗ ರೆಹಮತ್ ಕೆನ್ನೆಗೊಂದು ಬಾರಿಸುತ್ತಾನೆ. ಅಷ್ಟೇ ಅಲ್ಲ, ಪದೇ ಪದೇ ತನ್ನ ಕುಚೇಷ್ಟೆಗಳಿಂದ ಒಂದಲ್ಲಾ ಒಂದು ರೀತಿಯಲ್ಲಿ ಸತಾಯಿಸುತ್ತಿರುತ್ತಾನೆ.
ಇದೇ ಸಂದರ್ಭದಲ್ಲಿ ಲತೀಫ್‌ಗೊಂದು ಸತ್ಯ ತಿಳಿಯುತ್ತೆ. ರೆಹಮತ್ ಆಗಿ ಬಂದವನು ನಜಾಫ್‌ನ ಮಗ ಅಲ್ಲ ಮಗಳು ‘ಬರನ್’. ಕೆಲಸಕ್ಕಾಗಿ ವೇಷಮರೆಸಿಕೊಂಡಿದ್ದಾಳೆ ಎಂಬುದು ತಿಳಿಯುತ್ತಿದ್ದಂತೆಯೇ ಈತನ ಮನದಲ್ಲಿ ಏನೋ ಒಂದು ರೀತಿಯ ತಳಮಳ, ತಲ್ಲಣ. ಆ ದ್ವೇಷದ ಭಾವನೆ ಹೋಗಿ ಅನುಕಂಪದ ಸೆಲೆಹುಟ್ಟಿಕೊಳ್ಳುತ್ತದೆ. ಆಕೆಗೆ ಬೆಂಗಾವಲಾಗಲು ನಿರ್ಧರಿಸುತ್ತಾನೆ. ಯಾರೇ ಆಕೆಯೊಡನೆ ಜಗಳಕ್ಕೆ ನಿಂತರೂ ಈತ ಅವಳ ಪರವೇ.
ಆದರೆ ಆಗಾಗ ಅಲ್ಲಿಗೆ ತಪಾಸಣೆಗೆಂದು ಇರಾನ್ ಇನ್ಸ್‌ಪೆಕ್ಟರ್ ಗಳು ಬರುತ್ತಿರುತ್ತಾರೆ. ಒಮ್ಮೆ “ರೆಹಮತ್” ಸಿಕ್ಕಿಬಿದ್ದ ಎನ್ನುವಷ್ಟರಲ್ಲಿ ಅವಳನ್ನು ರಕ್ಷಿಸಿದ ಲತೀಫ್ ಜೈಲಿಗೆ ಹೋಗಬೇಕಾಗುತ್ತದೆ. ಇದರಿಂದ ಆಫ್ಘನ್ ನಿರಾಶ್ರಿತರು ಕೆಲಸ ಮಾಡುತ್ತಿರುವುದನ್ನು ಪತ್ರೆ ಹಚ್ಚುವ ಇನ್ಸ್ ಪೆಕ್ಟರ್ , ಮೆಮನ್ ನಿಗೆ ಎಚ್ಚರಿಸುತ್ತಾರೆ. ಇದರ ಪರಿಣಾಮ ಮೆಮರ್ ಎಲ್ಲ ಆಫ್ಘನ್ ಕೆಲಸಗಾರನ್ನು ಕೆಲಸದಿಂದ ತೆಗೆದು ಹಾಕುತ್ತಾನೆ.
‘ಬರನ್’ ಬೇರೆಲ್ಲೋ ಕೆಲಸಕ್ಕೆ ಸೇರಿದ್ದಾಳೆ ಎಂಬ ಸುದ್ದಿ ನಜಾಫ್‌ನ ಸ್ನೇಹಿತನಿಂದ ಜೈಲಿನಿಂದ ವಾಪಸಾದ ಲತೀಫ್‌ಗೆ ತಿಳಿಯುತ್ತದೆ. ಈತ ಅವಳನ್ನು ಹುಡುಕಿಕೊಂಡು ನಿರಾಶ್ರಿತರ ಶಿಬಿರದತ್ತ ಬರುತ್ತಾನೆ. ಕೊನೆಗೂ ಆಕೆ ಕೆಲಸ ಮಾಡುವ ಜಾಗ ಕಂಡು ಹಿಡಿಯುತ್ತಾನೆ.
ನದಿಯಿಂದ ಕಲ್ಲು ಹೊತ್ತು ಹಾಕುವ ಕೆಲಸದಲ್ಲಿ ಆಕೆ ಕಷ್ಟಪಡುವುದನ್ನು ಕಂಡು ಮರುಗುತ್ತಾನೆ. ನಜಾಫ್‌ಗೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಮೆಮರ್ ಗೆ ಏನೋ ಸುಳ್ಳು ಹೇಳಿ ತನ್ನ ವರ್ಷದ ಸಂಬಳವನ್ನು ತಂದು ನಜಾಫ್‌ನ ಸ್ನೇಹಿತನ ಮೂಲಕ ನಜಾಫ್‌ಗೆ ಕೊಡುವಂತೆ ತಿಳಿಸುತ್ತಾನೆ. ಆದರೆ ಆತ ಲತೀಫ್‌ಗೆ ಪತ್ರ ಬರೆದಿಟ್ಟು ಹಣದೊಡನೆ ಆಫ್ಘನ್‌ಗೆ ಪರಾರಿಯಾಗುತ್ತಾನೆ. ಕೊನೆಗೆ ಲತೀಫ್ ತನ್ನ ಗುರುತಿನ ಚೀಟಿ ಮಾರಿ ಹಣ ಪಡೆದು ನಜಾಫ್‌ಗೆ ಕೊಡುತ್ತಾನೆ.
ಮರುದಿನವೇ ಅಫಘಾನಿಸ್ತಾನಕ್ಕೆ ತೆರಳುವುದೆಂದು ತೀರ್ಮಾನಿಸುತ್ತಾರೆ. ಬೆಳಗ್ಗೆ ಟ್ರಕ್‌ಗೆ ಸಾಮಾನು ಸರಂಜಾಮುಗಳನ್ನು ತುಂಬಿಸಲು ಲತೀಫ್ ನಜಾಫ್‌ಗೆ ಸಹಾಯ ಮಾಡುತ್ತಾನೆ. ಬರನ್‌ಗೆ ಆತನ ಸಹಕಾರಿ ಮನೋಭಾವ ಕಂಡು ಒಂದು ರೀತಿಯ ಒಲುಮೆ. ಅದೊಂದು ಕೊನೆಯ ದೃಶ್ಯ-ಬರನ್ ಟ್ರಕ್ ಹತ್ತಲು ಹೋಗುತ್ತಿರಬೇಕಾದರೆ ಕೆಸರಿನಲ್ಲಿ ಬೂಟು ಹೂತು ಹೋಗುತ್ತೆ. ಲತೀಫ್ ಅದನ್ನು ಎತ್ತಿ ಆಕೆ ಕಾಲಿಗೆ ತೊಡಿಸುತ್ತಾನೆ. ಆದರೆ ಬೂಟಿನ ಅಚ್ಚು ಕೆಸರಿನಲ್ಲಿ ಅಚ್ಚಾಗುತ್ತದೆ. ಲತೀಫ್ ಮನದಲ್ಲಿ ಅದು ಅಚ್ಚಳಿಯದ ನೆನಪಾಗುತ್ತದೆ. ಕೊನೆಯಲ್ಲಿ ಬರನ್ (ಮಳೆ) ಬರುವುದರೊಂದಿಗೆ ಇವರ ಪ್ರೀತಿಗೆ ಸಾಕ್ಷಿಯಾಗುತ್ತಾಳೆ.
ಚಿತ್ರ ನಮ್ಮನ್ನು ಆವರಿಸಿಕೊಳ್ಳುತ್ತದೆ. ಖುಷಿಯ ಸಂಗತಿಯೆಂದರೆ ಎಲ್ಲೂ ನಾಟಕೀಯ ಎನಿಸದೇ ಪ್ರತಿಯೊಬ್ಬರೂ ಪಾತ್ರಕ್ಕೆ ಜೀವ ತುಂಬಿದ್ದಾರೆ. ಬಡತನವನ್ನು ಕರುಣಾಜನಕವಾಗಿಸದೇ, ಬದುಕಿನ ನೆಲೆಯಾಗಿ ಚಿತ್ರಿಸುವ ಮಜಿದ್ ಮಜಿದ್ ಇಲ್ಲಿಯೂ ಯಶಸ್ವಿಯಾಗುತ್ತಾನೆ. ಒಂದು ಉತ್ತಮ ಚಿತ್ರ.
ನಿರ್ದೇಶಕ: ಮಜಿದ್ ಮಜಿದಿ ಭಾಷೆ: ಪರ್ಷಿಯನ್
ದೇಶ: ಇರಾನ್ ಅವಧಿ: 94 ನಿಮಿಷ




