ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಗುರುಸ್ವಾಮಿ ಕಾಲಂ’ Category

ವಂಶವೃಕ್ಷದಲ್ಲಿ ವಿಷ್ಣುವರ್ಧನ್ ಮೊದಲು ಅಭಿನಯಿಸಿದ್ದು

without comments

ಪರಮೇಶ್ ಗುರುಸ್ವಾಮಿಯವರು ವಿಷ್ಣುವರ್ಧನ್ ಅವರ ಬಗೆಗಿನ ಒಂದು ಅನುಭವವನ್ನು ಸಾಂಗತ್ಯದೊಂದಿಗೆ ಹಂಚಿಕೊಂಡಿದ್ದಾರೆ. ಓದಿ, ನಿಮ್ಮ ಅನುಭವಗಳಿದ್ದರೂ ಹಂಚಿಕೊಳ್ಳಿ.

ಈ ಅನುಭವವನ್ನು ನನಗೆ ವಿವರಿಸಿದ್ದು ಪಿ.ವಿ. ನಂಜರಾಜ ಅರಸ್.
‘ಸಂಸ್ಕಾರ’ ವನ್ನು ಪಟ್ಟಾಭಿರಾಮರೆಡ್ಡಿ ನಿರ್ದೇಶಿಸುತ್ತಿದ್ದ ಸಂದರ್ಭ. ಗಿರೀಶ ಕಾರ್ನಾಡರು ಚಿತ್ರಕಥೆ ಬರೆದಿದ್ದರು. ಆದರೂ ಒಟ್ಟೂ ನಿರ್ಮಾಣದಲ್ಲಿ ತೊಡಗಿಸಿಕೊಂಡಿದ್ದ ಉತ್ಸಾಹವನ್ನು ಕಂಡು ಜಿ.ವಿ. ಅಯ್ಯರ್ ಅವರು ಒಂದು ಅವಕಾಶ ಕೊಟ್ಟರು. ಅಯ್ಯರ್ ಬಗ್ಗೆ ಇಲ್ಲಿ ಒಂದು ಮಾತು ಉಲ್ಲೇಖಿಸಬೇಕು. ಚಿತ್ರರಂಗದ ಎಲ್ಲ ಹಂತಗಳಲ್ಲೂ ದುಡಿದವರು. ಚಿತ್ರಕಥೆಯಿಂದ ಹಿಡಿದು ಅಭಿನಯ, ನಿರ್ದೇಶನ, ನಿರ್ಮಾಣದವರೆಗೂ ಸಾಗಿದವರು. ಬೇರೆಯವರಿಗೆ, ಅದರಲ್ಲೂ ಹೊಸಬರಿಗೆ ಅವಕಾಶ ಕೊಟ್ಟವರು. ಕನ್ನಡ ಚಿತ್ರರಂಗದ ಅತ್ಯಂತ ಪ್ರಯೋಗಶಾಲಿ ನಿರ್ದೇಶಕರು. ಅತ್ಯುತ್ತಮ ಚಿತ್ರಗಳನ್ನು ಕೊಟ್ಟಷ್ಟೇ ಅತ್ಯಂತ ತೋಪಾದ ಚಿತ್ರವನ್ನು ಅವರೇ ಕೊಟ್ಟವರು.ಇದು ಅವರ ನಿರಂತರ ಪ್ರಯೋಗಶಾಲಿತನಕ್ಕೆ ಉದಾಹರಣೆಯಾಗುತ್ತದೆ. ಅಂದರೆ ಒಂದು ಚಿತ್ರ ಯಶಸ್ವಿಯಾದ ಮೇಲೆ, ಅದೇ ಸೂತ್ರಗಳನ್ನು ಆಧರಿಸಿ ಸಾಲು ಸಾಲಾಗಿ ಚಿತ್ರಗಳನ್ನು ನಿರ್ಮಿಸುವುದು ಸುಲಭವಾದ ಮಾರ್ಗವಾಗಿತ್ತು. ಆದರೆ ಅಯ್ಯರ್, ಸವಾಲುಗಳನ್ನು ಸ್ವೀಕರಿಸಿ ಹೊಸ ನಡೆ ಹಾಕುತ್ತಿದ್ದರು.

ಅದೇ ‘ವಂಶವೃಕ್ಷ’ ಚಿತ್ರದ ನಿರ್ದೇಶನ. ಬಿ.ವಿ. ಕಾರಂತ ಹಾಗೂ ಗಿರೀಶ್ ಕಾರ್ನಾಡರು ಜಂಟಿಯಾಗಿ ನಿರ್ದೇಶಿಸಿದ ಚಿತ್ರವಿದು. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೆಲವು ರೂಢಿಗತ ಕಲ್ಪನೆಗಳನ್ನು ಕಳೆದು ಹೊಸತನ ತುಂಬಲಾಯಿತು. ಚಿತ್ರ ತಯಾರಿಕೆಯ ವಿಧಾನ, ಖ್ಯಾತನಾಮರನ್ನು ಆಶ್ರಯಿಸಿರಲಿಲ್ಲ. ಹೀಗೆ ಹಲವು ಹೊಸತನವಿತ್ತು.

ಇದರಲ್ಲಿ ಒಂದು ಚಿಕ್ಕಪಾತ್ರ ಚಿಕ್ಕಗೌಡರದ್ದು. ಅದರಲ್ಲಿ ನಟಿಸಿದ್ದು ಕುಮಾರ್ ಎಂಬಾತ. ಅಂದರೆ ಅವನೇ ನಾಗರಹಾವಿನ ರಾಮಾಚಾರಿ, ಈಗಿನ ವಿಷ್ಣುವರ್ಧನ್.

ಇಡೀ ಪಾತ್ರದಲ್ಲಿ ಮಾತಿರಲಿಲ್ಲ. ತನ್ನ ತಂದೆಯ ರೂಢಿಗತ ನಿಲುವಿಗೆ ವಿರೋಧ ವ್ಯಕ್ತಪಡಿಸುವ, ಆತನ ಬಗ್ಗೆ ತಾತ್ಸಾರ ಹೊಂದಿರುವ, ಪ್ರತಿರೋಧ ವ್ಯಕ್ತಿತ್ವದ ಪಾತ್ರವದು. ಅದಕ್ಕೆ ಬಹಳ ಸಮರ್ಥನೀಯವಾಗಿ ಅಭಿನಯದ ಮೂಲಕವೇ ಜೀವ ತುಂಬಬೇಕಿತ್ತು. ಹುಡುಗ ನೋಡಲು ಚೆನ್ನಾಗಿದ್ದ, ಒಳ್ಳೆ ಕಟ್ಟುಮಸ್ತಾದ ದೇಹ. ಈ ಎಲ್ಲ ಕಾರಣಗಳಿಂದ ಪಾತ್ರಕ್ಕೆ ಆಯ್ಕೆಯಾಗಿದ್ದ ಕುಮಾರ್. Read the rest of this entry »

Written by saangatya

December 30, 2009 at 8:25 am

ಶಂಕರನಾಗ್ ರೊಂದಿಗೆ ಕೆಲಸ ಮಾಡುವುದೇ ಒಂದು ಖುಷಿ

with one comment

ಶಂಕರನಾಗ್‌ರ ಬೇರೆ ವಿಶೇಷತೆ ಬಗ್ಗೆ ನಾನು ಇಲ್ಲಿ ಉಲ್ಲೇಖಿಸುವುದಿಲ್ಲ. ಆದರೆ ಅವರೊಂದಿಗೆ ಕೆಲಸ ಮಾಡುವುದಿದೆಯಲ್ಲ, ಅದೇ ಒಂದು ಅದ್ಭುತವಾದ ಅನುಭವ.

ಯಾರನ್ನೂ ತನ್ನತ್ತ ಸೆಳೆದುಬಿಡುವ ಅವರ ಕತೃರ್ತ್ವ ಶಕ್ತಿಯನ್ನು ಮರೆಮಾಚಲಾರದು. ಬಹುಶಃ ಶಂಕರನಾಗ್ ಇಂದು ಇದ್ದಿದ್ದರೆ ಕನ್ನಡ ಚಿತ್ರರಂಗದಲ್ಲಿ ಇನ್ನೂ ಎಂಥೆಂಥ ಸಾಧ್ಯತೆಗಳು ಮೂರ್ತರೂಪ ಪಡೆಯುತ್ತಿದ್ದವೇನೋ ಗೊತ್ತಿಲ್ಲ. ಪ್ರತಿಯೊಬ್ಬರನ್ನೂ ಪ್ರೀತಿಸುವ ಮನೋಭಾವದ ಶಂಕರ್, ಸದಾ ಕಾರ‍್ಯ ತತ್ಪರರು.

ಸಾಕಷ್ಟು ವೀಡಿಯೊ ಸಂಕಲನಗಳಲ್ಲಿ ಅವರೊಂದಿಗೆ ತೊಡಗಿಸಿಕೊಂಡಿದ್ದೆ. 1986 ರ ಕಾಲ. ನಾನು ಕೆಲಸ ಮಾಡುತ್ತಿದ್ದ ಸ್ಟುಡಿಯೋವೊಂದೇ ಇಡೀ ಕರ್ನಾಟಕಕ್ಕೆ. ಎಲ್ಲ ಖಾಸಗಿಯವರು, ದೂರದರ್ಶನಕ್ಕೆ ಕಾರ್ಯಕ್ರಮ ರೂಪಿಸುವವರು, ಬಹುತೇಕ ಮಂದಿ ಇಲ್ಲಿಗೇ ಬರಬೇಕಿತ್ತು. ಅದರಂತೆಯೇ ಶಂಕರನಾಗ್ ಸಹ ಬರುತ್ತಿದ್ದರು.

ಅವರು ತಮ್ಮ ಅಣ್ಣ ಅನಂತನಾಗರಿಗೆ ಕೊಡುತ್ತಿದ್ದ ಗೌರವ ಕಂಡೇ ನಾನು ದಿಗಿಲಾಗಿದ್ದೆ. ಹಾಗೆಯೇ ಅನಂತನಾಗರಿಗೂ ತಮ್ಮನ ಬಗ್ಗೆ ಅತೀವ ಕಾಳಜಿ. ಒಮ್ಮೆ ನನ್ನೆದುರೇ ನಡೆದ ಘಟನೆಯದು. ಅಂದು ರಾತ್ರಿ ಎಷ್ಟೊತ್ತಾದರೂ ಸಂಕಲನದಲ್ಲಿ ಬ್ಯುಸಿಯಾಗಿದ್ದರು. ಅಷ್ಟೊತ್ತಿಗೆ ಫೋನ್ ಬಂದಿತು. ನಾನೇ ಹೋಗಿ ತೆಗೆದುಕೊಂಡೆ. ಅನಂತನಾಗ್ ಅವರ ಕಂಚಿನಕಂಠ, “ಶಂಕರ್ ಇದಾನಾ’ ಎಂದು ಕೇಳಿತು. “ನಾನು ಇದ್ದಾರೆ’ ಎಂದು ಹೇಳಿ ಶಂಕರನಾಗರಿಗೆ, “ಸಾರ್, ನಿಮ್ಮ ಅಣ್ಣನವರ ಫೋನ್’ ಎಂದೆ. Read the rest of this entry »

Written by saangatya

December 11, 2009 at 7:04 am

ಒಗ್ಗರಣೆಯ ಲಯಕ್ಕೆ “ಅಚ್ಚರಿ” ತುಂಬಿದ ರಿತ್ವಿಕ್ ಮತ್ತು ಭೀಮಸೇನ ಜೋಷಿ

without comments

ಕಾರ್ಯ ಒತ್ತಡದ ಮಧ್ಯೆ ಪರಮೇಶ್ ಗುರುಸ್ವಾಮಿಯವರು ಕೆಲ ದಿನಗಳು ಬರೆದಿರಲಿಲ್ಲ. ಈಗ ಮತ್ತೆ ಬರೆದಿದ್ದಾರೆ. ಅವರಲ್ಲಿ ಹುದುಗಿಸಿಕೊಂಡಿರುವ ಸರಕು ಕಂಡರೆ ಅಚ್ಚರಿಯಾಗುತ್ತದೆ. ಈ ಬಾರಿಯ ಲೇಖನವೂ ಒಂದು ಅಚ್ಚರಿಯೇ.

ಇಷ್ಟೆಲ್ಲಾ ವರ್ಷದ ಮಧ್ಯೆಯೂ ನನ್ನ ಕುತೂಹಲದ ಹಾಗೂ ಅಧ್ಯಯನದ ಸಂಗತಿಯೆಂದರೆ ನಾವು ನಮ್ಮ ಚಲನಚಿತ್ರಗಳಲ್ಲಿ ಎಷ್ಟರಮಟ್ಟಿಗೆ ಭಾರತೀಯತೆಯನ್ನು ದುಡಿಸಿಕೊಂಡಿದ್ದೇವೆ. ಅಂದರೆ ಇಂಡಿಯನೈಸ್ ಮಾಡಿದ್ದೇವೆ ಎಂಬುದು. ವಾಣಿಜ್ಯ ನೆಲೆಯ ಚಿತ್ರಗಳೆಲ್ಲಾ ಬರೀ ಪಾಶ್ಚಾತ್ಯರ ನಕಲು ಎನ್ನುವಂತೆ ಕೇಳಿಬರುವ ಟೀಕೆಯ ನಡುವೆಯೂ, ಹೊಸ ಅಲೆಯ ಚಿತ್ರಗಳೆಂದು “ಹೊಸ ಮಾರ್ಗ’ ವನ್ನು ಹುಟ್ಟು ಹಾಕಿದ ಸಂಭ್ರಮದಲ್ಲಿದ್ದ ಮಂದಿಯೂ ಎಷ್ಟರಮಟ್ಟಿಗೆ ಭಾರತೀಯ ನೆಲೆಯನ್ನು ಬಳಸಿಕೊಂಡಿದ್ದಾರೆ ಎಂಬುದೂ ಅಚ್ಚರಿಯ ಸಂಗತಿ.

ಕೇವಲ ಸಂಗೀತದ ವಿಷಯವೇ ತೆಗೆದುಕೊಳ್ಳಿ. ನನಗೆ ಅನ್ನಿಸುವುದೆಂದರೆ, ವಾಣಿಜ್ಯ ನೆಲೆಯ (ಜನಪ್ರಿಯ) ಚಿತ್ರಗಳೇ ಅಂಥದೊಂದು ಪ್ರಯತ್ನ ಎಸಗಿವೆಯೇ ಹೊರತು ಹೊಸ ಅಲೆಯ ಚಿತ್ರಗಳಲ್ಲ ಎಂದೆನಿಸುತ್ತದೆ. ಇಂಗ್ಲಿಷರಲ್ಲಿ ಊಟ,ತಿಂಡಿಯಿಂದ ಹಿಡಿದು ಎಲ್ಲದಕ್ಕೂ ತಮ್ಮದೇ ಆದ ಹೊಸ ಹೆಸರು ಕೊಟ್ಟಿರುತ್ತಾರೆ. ಅದು ಫ್ರೆಂಚ್ ಹೆಸರು ಏನಾಗಿರುತ್ತದೋ ಅದು ಇಂಗ್ಲಿಷರ ಟೇಬಲ್ಲಿನಲ್ಲಿ ಅದಾಗಿರದು. ಅಂದರೆ ಹೂರಣ ಅದೇ, ಹೆಸರು ಮಾತ್ರ ಬೇರೆ. ಆ ಮೂಲಕ ಹೊಸತು ಎಂದು ಬೆಚ್ಚಿಬೀಳಿಸುವ ಪ್ರಯತ್ನ. ಈ ಮಾತು ತಿಂಡಿ ತಿನಿಸುಗಳಿಂದ ಹಿಡಿದು ಬಹಳ ದೂರದವರೆಗೂ ನಡೆಯುತ್ತದೆ. ಆದರೆ ಭಾರತಕ್ಕೆ, ಭಾರತೀಯತೆಗೆ, ಭಾರತೀಯರಿಗೆ ಅಂಥ ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿಯಿದೆ. ನಮ್ಮ ಮೇಲೆ ಹೆಚ್ಚು ಆಕ್ರಮಣ ನಡೆಸಿದ್ದು ಪಾಶ್ಚಾತ್ಯ ಸಂಸ್ಕೃತಿ.

ಉರ್ದು ಎನ್ನುವುದು ಸಂಸ್ಕೃತ ಮತ್ತು ಅರೇಬಿಕ್ ಸಮ್ಮಿಶ್ರಗೊಂಡು ರೂಪುಗೊಂಡಿತು. ಹೀಗೇ ಹೊರಗಿನದನ್ನು ತನ್ನೊಳಗೆ ಬೆಳೆಸಿಕೊಂಡು ಹೊಸ ಚಿಗುರಾಗಿ ಸಂಭ್ರಮಿಸಿತು. ಆದರೆ ಬ್ರಿಟಿಷರು, ಭಾರತದಲ್ಲೆವನ್ನೂ ನಿಕೃಷ್ಟವಾಗಿ ಕಾಣುತ್ತಿದ್ದರು. ಅದಕ್ಕೆ ಮೆಕಾಲೆಯ ಪ್ರಸಿದ್ಧ ಹೇಳಿಕೆಯೇ ಸಾಕ್ಷಿ. ಇಂಥದ್ದಕ್ಕೆ ಬೃಹತ್ ನೆಲೆಯಲ್ಲಿ ಬಲಿಯಾದವರು ನಮ್ಮ ನವ್ಯ ಸಾಹಿತಿಗಳು. ಕಮು, ಕಾಪ್ಕಾ, ಸಾತ್ರೆ ಮುಂತಾದವರೆಲ್ಲಾ ಸಾಹಿತ್ಯದಲ್ಲಿ ಅಸ್ತಿತ್ವವಾದದ ಬಗ್ಗೆ ಸಾಕಷ್ಟು ಬರೆದರು. ಅದು ಅವರಿಗೆ ಸರಿಯಾಗಿತ್ತು. ಪ್ರಪಂಚದ ಮಹಾಯುದ್ಧ, ಕೈಗಾರಿಕೆ ಕ್ರಾಂತಿ, ಬಂಡವಾಳಶಾಹಿಯ ಔನ್ನತ್ಯ ಇತ್ಯಾದಿಗಳೆಲ್ಲಾ ಅನುಭವವನ್ನು ಕಟ್ಟಿಕೊಟ್ಟಿದ್ದವು. ಆದರೆ, ಅದ್ಯಾವುದೂ ನಮಗೆ ಪ್ರಸ್ತುತವಾಗಿರಲಿಲ್ಲ. ಶಂಕರಮೊಕಾಶಿ ಪುಣೇಕರರು ಇದನ್ನು ಅತ್ಯಂತ ಸಮರ್ಥವಾಗಿ ಹಿಡಿದುಕೊಟ್ಟಿದ್ದಾರೆ. ತೇಜಸ್ವಿ, ಲಂಕೇಶ್‌ರಂಥ ಹಲವರು ನವ್ಯದಿಂದ ಹೊರಬಂದು ತಮ್ಮ ಬೇರುಗಳನ್ನು ಹುಡುಕಿಕೊಂಡು ಹೊರಟರು. Read the rest of this entry »

“ಬೆಳ್ಳಿಮೋಡ”ದ ಮೂಡಲ ಮನೆಯ ಹಾಡನ್ನು ಸರಿಯಾಗಿ ನೋಡಿದ್ದೀರಾ?

with 7 comments

ಪರಮೇಶ್ ಗುರುಸ್ವಾಮಿಯವರು ಈ ಬಾರಿ ವಿಶ್ಲೇಷಿಸಿರುವುದು “ಬೆಳ್ಳಿಮೋಡ’ ಚಿತ್ರದ ಬಗ್ಗೆ. ತಾಂತ್ರಿಕವಾಗಿ ಸಾಕಷ್ಟು ಆಳಜ್ಞಾನ ಹೊಂದಿದ್ದ ಪುಟ್ಟಣ್ಣರ ಈ ಚಿತ್ರ ತಾಂತ್ರಿಕವಾಗಿ ಹಲವು ದೋಷಗಳನ್ನು ಹೊಂದಿದೆ ಏಕೆ ?

ಪುಟ್ಟಣ್ಣ ಕಣಗಾಲ್ ಒಬ್ಬ ಅದ್ಭುತ ನಿರ್ದೇಶಕ. ಅದರಲ್ಲೂ ತಾಂತ್ರಿಕ ಅಂಶಗಳನ್ನು ಚೆನ್ನಾಗಿ ಅರಿತಿದ್ದವರು. ಈ ಹಿಂದೆ ಒಂದು ಲೇಖನದಲ್ಲಿ ಇವರ ಬಗ್ಗೆ ಪ್ರಸ್ತಾಪಿಸಿದ್ದೆ. ಈಗಿನದು “ಬೆಳ್ಳಿಮೋಡ’ ಚಿತ್ರದ ಬಗ್ಗೆ.

ಕಥಾವಸ್ತು ಮತ್ತು ಅಂತ್ಯದ ಬಗ್ಗೆ ಈ ಚಿತ್ರ ಹೊಸ ಮಾದರಿಗಳನ್ನು ಸೃಷ್ಟಿಸಿದ್ದು, ಅನುಮಾನಗಳೇ ಇಲ್ಲ. ಅಂಥದೊಂದು ಹೊಸದನ್ನು ಸೃಷ್ಟಿಸಿ ಅದನ್ನು ಉಳಿಸಿಕೊಳ್ಳಲು ಪುಟ್ಟಣ್ಣರು ಪಟ್ಟ ಪಾಡನ್ನೂ ವಿವರಿಸಿದ್ದೆ. ಈ ದೃಷ್ಟಿಯಲ್ಲೇ ಬೆಳ್ಳಿಮೋಡವನ್ನು ತಾಂತ್ರಿಕವಾಗಿ ನೋಡಲಾರಂಭಿಸಿದೆ. ಬಹಳ ಬಾರಿ ನೋಡಿದಾಗ ನನಗೆ ಆಘಾತವಾದದ್ದು ತಾಂತ್ರಿಕವಾಗಿ ದೋಷಗಳಿದ್ದದ್ದನ್ನು ಕಂಡು. ವಾಸ್ತವವಾಗಿ ಆಶ್ಚರ್ಯವೆನಿಸಲಿಲ್ಲ ; ಆಘಾತವಾಯಿತು. ಕಾರಣವಿಷ್ಟೇ…ಹಲವು ಮೂಲಭೂತ ತಪ್ಪುಗಳು ಘಟಿಸಿದ್ದವು. ತಾಂತ್ರಿಕವಾಗಿಯೂ ತಿಳಿದಿದ್ದ ಒಬ್ಬ ಒಳ್ಳೆಯ ನಿರ್ದೇಶಕ ಇಂಥ ತಪ್ಪುಗಳನ್ನು ಹೇಗೆ ಒಪ್ಪಿಕೊಳ್ಳುತ್ತಾನೆ ? ಹಾಗಾದರೆ ಈ ತಪ್ಪುಗಳು ಘಟಿಸಿದ್ದು ಹೇಗೆ? ಇತ್ಯಾದಿ ನೂರಾರು ಪ್ರಶ್ನೆಗಳು ಹುಟ್ಟಿಕೊಂಡಿದ್ದು ನಿಜ.

ಅಂದು ಲಭ್ಯವಿದ್ದ ಸಿನಿಮಾ ತಾಂತ್ರಿಕ ಅಂಶಗಳಿಂದ ನೋಡಿದರೆ, ಸಮರ್ಪಕವಾಗಿರಲಿಲ್ಲ ಬೆಳ್ಳಿಮೋಡ ಸಿನಿಮಾ. ಪುಟ್ಟಣ್ಣನವರು ಮೊದಲೇ ತಮಿಳು ಮತ್ತು ಮಲಯಾಳಂನಲ್ಲಿ ಚಿತ್ರ ನಿರ್ದೇಶಿಸಿದ್ದರು. ಯಾವುದೇ ಕಲಾವಿದನಿಗೆ ಭಾಷೆಯ ಗಡಿ ಇಲ್ಲ. ಅವರು ಭಾಷಾತೀತರು. ಸೃಜನಶೀಲತೆ ಎಂಬುದು ಭಾಷೆಯ ಮಿತಿ-ನೆಲೆಯಲ್ಲಿ ಹುಟ್ಟಿಕೊಳ್ಳುವುದಲ್ಲ . ಅದಕ್ಕೆ ಅಂಥದೊಂದು ನಿರ್ಬಂಧವೂ ಸರಿಯಲ್ಲ. ಮಣಿರತ್ನಂ ಇಂದು ತಮಿಳಿನಲ್ಲಿ ಹೆಸರಾಂತ ನಿರ್ದೇಶಕ. ಆದರೆ ಮೊದಲು ನಿರ್ದೇಶಿಸಿದ್ದು ಕನ್ನಡ ಚಿತ್ರ. ಇಂಥ ಉದಾಹರಣೆ ಎಲ್ಲ ಭಾಷೆಗಳಲ್ಲೂ ಇದೆ. ಕಲಾವಿದರು ಭಾಷೆಯ ಎಲ್ಲೆ ಮೀರಿಯೇ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ. ಹಾಗೆಯೇ ಪುಟ್ಟಣ್ಣ ತಮಿಳು (ಚಿತ್ರ : ಟೀಚರಮ್ಮ ), ಮಲಯಾಳಂನಲ್ಲಿ (ಚಿತ್ರ : ಪೂಚಿಕಣ್ಣು) ನಿರ್ದೇಶಿಸಿ ಕನ್ನಡದಲ್ಲಿ “ಬೆಳ್ಳಿಮೋಡ’ ಮಾಡಲು ಬಂದರು.
guruswamy coloumn copy ನೀವು “ಬೆಳ್ಳಿಮೋಡ’ ವನ್ನು ಅಧ್ಯಯನದ ದೃಷ್ಟಿಯಿಂದಲೇ  ಸರಿಯಾಗಿ ನೋಡಿ. ಹಲವು ಚಿತ್ರಿಕೆಗಳೇ (ಶಾಟ್ಸ್) ತಪ್ಪಾಗಿವೆ.  ಅವುಗಳ ಸಂಕಲನವೂ ಸಹ. ಅತ್ಯಂತ ಪ್ರಸಿದ್ಧವಾದ ಹಾಡು  ”ಮೂಡಲ ಮನೆಯ’ (ರಚನೆ : ದ.ರಾ.ಬೇಂದ್ರೆ) ಹಾಡಿರುವುದು  ಸೂರ್ಯೋದಯದ ಬಗ್ಗೆ. ಸಾಮಾನ್ಯವಾಗಿ ಸೂರ್ಯೋದಯದ ವಿವಿಧ ಹಂತಗಳು ( ಆರೋಹಣ ಕ್ರಮವಾಗಿ) ಪ್ರಕಟಗೊಳ್ಳಬೇಕು.  ಕಾರಣ, ಆ ಗೀತೆ ಇರುವುದೇ ಹಾಗೆ. ಆದರೆ ಮೊದಲನೇ ಚಿತ್ರಿಕೆ (ಶಾಟ್)ಯಲ್ಲಿ ಸೂರ್ಯ ಪೂರ್ತಿ ಕಾಣುತ್ತಾನೆ; ಬೆಳಕೂ ಹೆಚ್ಚು. ಎರಡನೇ ಚಿತ್ರಿಕೆಯಲ್ಲಿ ಸೂರ‍್ಯ ಚಿಕ್ಕದಾಗುತ್ತಾನೆ. ಹಾಗೆಯೇ ಕಲ್ಪನಾಳ ಚಿತ್ರಿಕೆಗಳಲ್ಲೂ ಅವಳ ನೆರಳುಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ವಾಸ್ತವವಾಗಿ ಬೆಳಗ್ಗೆ ಚಿತ್ರೀಕರಿಸುವ ಚಿತ್ರಿಕೆಗಳಲ್ಲಿ ನೆರಳು ಸಿಗದು. ಮಧ್ಯಾಹ್ನವಾದರೆ ಮಾತ್ರ ಆ ಸಮಸ್ಯೆ. ಇದನ್ನು ಚಿತ್ರಿಕೆಗಳ ಸಂಯೋಜನೆಯ ಅವಘಡ ಎನ್ನುತ್ತೇವೆ. ಇಂಥ ಕೆಲವು ತಪ್ಪುಗಳಿವೆ.

ಇದು ಏಕೆಂದು ಪುಟ್ಟಣ್ಣನವರ ಆಪ್ತರಾಗಿದ್ದು, ಅವರ ಬಲಗೈ ಬಂಟರಂತೆ ಕೆಲಸ ಮಾಡಿದ್ದ ಸುಂದರಕೃಷ್ಣ ಅರಸ್ ಹಾಗೂ ಮೈಸೂರಿನ ಆರ್. ಜಯರಾಮು ಅವರನ್ನು ಕೇಳಿದ್ದೆ. ಆಗ ನಿಜವಾದ ಸಂಗತಿ ನನಗೆ ತಿಳಿದದ್ದು. ವಾಸ್ತವವಾಗಿ ಜಯರಾಂ “ಬೆಳ್ಳಿಮೋಡ’ ಕ್ಕೆ ಪುಟ್ಟಣ್ಣರೊಂದಿಗೆ ಕೆಲಸ ಮಾಡಿರಲಿಲ್ಲ. ಅವರು ಪುಟ್ಟಣ್ಣರೊಂದಿಗೆ ಸೇರಿದ್ದು ಚದುರಂಗರ “ಸರ್ವಮಂಗಳ’ದಿಂದ. ಆದರೆ ಅವರೂ ಸೇರಿದಂತೆ ಆಪ್ತರ ಬಳಿ ಪುಟ್ಟಣ್ಣರೇ ಹೇಳಿಕೊಂಡ ಮಾಹಿತಿ ನನಗೆ ದಕ್ಕಿದ್ದು. Read the rest of this entry »

ಟ್ರಿಕ್ ಫೋಟೋಗ್ರಫಿಯ “ನಾಗಕನ್ನಿಕಾ”

with one comment

ಈ ಲೇಖನ ಎರಡು ಸಂಗತಿಗಳಲ್ಲಿ ಮುಖ್ಯವಾದುದು. ಒಂದು, ಕನ್ನಡ ಚಲನಚಿತ್ರರಂಗದಲ್ಲಿ ಹೆಣ್ಣಿನ ಮೈಮಾಟ ಬಳಸಿದ್ದ ಬಗ್ಗೆ ಹಾಗೂ ಟ್ರಿಕ್ ಫೋಟೋಗ್ರಫಿ ತಂತ್ರ ನಮಗೆ ಪರಿಚಯವಾದ ಬಗ್ಗೆ. ಎರಡರ ಬಗ್ಗೆಯೂ ಮಾಹಿತಿಪೂರ್ಣವಾಗಿದೆ. ಅಂದ ಹಾಗೆ ಟ್ರಿಕ್ ಫೋಟೋಗ್ರಫಿ ತಂತ್ರ ಶೋಧಿಸಿದ್ದಲ್ಲ ; ಅದಾಗಿಯೇ ಘಟಿಸಿದ್ದು ಎನ್ನುತ್ತಾರೆ ಪರಮೇಶ್ ಗುರುಸ್ವಾಮಿ.

ನಟಿಯ ಮೈಮಾಟವನ್ನೇ ಕೇಂದ್ರೀಕರಿಸಿ “ಉತ್ಪನ್ನ” ವಾಗಬಹುದೇ ಎಂದು ಪ್ರಯೋಗ ಮಾಡಿದ್ದು ಇತ್ತೀಚಿನದ್ದಲ್ಲ.ಅದಕ್ಕೂ ಇತಿಹಾಸವಿದೆ. ಈಗ ತುಸು ಹೆಚ್ಚಾಗಿರಬಹುದು, ಅಷ್ಟೇ.

ಲಭ್ಯ ಮಾಹಿತಿ ಪ್ರಕಾರ ಕನ್ನಡ ಚಲನಚಿತ್ರರಂಗದ ಮೊದಲ ಎಕ್ಸ್‌ಪೋಸ್ ನಟಿ ಜಯಶ್ರೀ. 1949 ರಲ್ಲಿ ಬಿಡುಗಡೆಯಾದ “ನಾಗಕನ್ನಿಕಾ’ ಚಿತ್ರದಲ್ಲಿ ಈಕೆಯದ್ದೇ ಪ್ರಧಾನ ಪಾತ್ರ. ಹೆಣ್ಣಿನ ದೇಹವನ್ನು ಉತ್ಪನ್ನದ ರೀತಿಯಲ್ಲಿ ಬಳಸಬಹುದೇ ಎಂಬ ಪ್ರಯತ್ನವಾಗಿ ಮೈಮಾಟವನ್ನೇ ಪ್ರಧಾನವಾಗಿಸಿದ್ದು ಇಲ್ಲಿನ ವಿಶೇಷ. ಅನಂತರ ಜಯಶ್ರೀ ಕೊಯಮತ್ತೂರಿಗೆ ಹೋದರು. ಅಲ್ಲಿಯೇ ಚಿತ್ರ ನಿರ್ಮಾಣ ಕಾರ‍್ಯ ನಡೆಯುತ್ತಿದ್ದರಿಂದ ಅಲ್ಲೇ ಇದ್ದು, ಹಲವು ಚಿತ್ರಗಳಲ್ಲಿ ನಟಿಸಿದರು. Read the rest of this entry »

ಕೆಂಪರಾಜ ಅರಸ್ ಕನ್ನಡ ಚಿತ್ರರಂಗದ ಮೊದಲ ಶೋ ಮ್ಯಾನ್

without comments

ಕನ್ನಡ ಚಲನಚಿತ್ರರಂಗದ ಈಗಿನ ಶೋ ಮ್ಯಾನ್ ರವಿಚಂದ್ರನ್. ಆದರೆ ಮೊದಲ ಶೋ ಮ್ಯಾನ್ ಯಾರು ಗೊತ್ತೇ ? ಕೆಂಪರಾಜ ಅರಸ್. ಅಂದರೆ ರಾಜಾ ವಿಕ್ರಮದ ರಾಜ.ಇದೇ ಈ ವಾರದ ವಿಶೇಷ ಗುರುಸ್ವಾಮಿ ಕಾಲಂನಲ್ಲಿ.

ಕೆಂಪರಾಜ ಅರಸ್ ಗೊತ್ತಿರಲಿಕ್ಕೆ ಸಾಕು. ಕನ್ನಡ ಚಿತ್ರರಂಗದ ಮೊದಲ ಶೋಮ್ಯಾನ್ ಎಂದರೆ ಅವರೇ. ಅಂದರೆ ವಿಜೃಂಭಣೆಯ, ವೈಭವ ಪ್ರತೀಕ. ಈಗ ನೆನೆಸಿಕೊಳ್ಳಿ, ರವಿಚಂದ್ರನ್ ಅಂದರೆ ಹೇಗೆ ? ಅವರ ಸಿನಿಮಾ ಎಂದರೆ ಹೇಗೆ ? ಅದ್ಧೂರಿತನ. ಹಾಗೆಯೇ ಕೆಂಪರಾಜ ಅರಸ್ ಸಹ. ವರ್ಣರಂಜಿತವಾದ ವ್ಯಕ್ತಿತ್ವ, ಎಲ್ಲರ ಗಮನಸೆಳೆಯುವ ನಿಲುವು.

ಕನ್ನಡ ಚಿತ್ರರಂಗ ಮರೆಯಲಾರದ ಹೆಸರು. ಮುಖ್ಯಮಂತ್ರಿಯಾಗಿದ್ದ ಡಿ. ದೇವರಾಜ ಅರಸ್‌ರ ಅಣ್ಣ. ಹುಣಸೂರಿನವರು. ಹೇಗೋ ಸಿನಿಮಾದ ಹುಚ್ಚು ಹತ್ತಿ ಚಿತ್ರರಂಗಕ್ಕೆ ಬಂದರು. ಒಳ್ಳೊಳ್ಳೆ ಚಿತ್ರ ರೂಪಿಸಿದರು, ಚೆನ್ನಾದ ನಟನೆ ಮಾಡಿದರು, ಹೆಸರೂ ಮಾಡಿದರು…ಹೀಗೇ ಬೇಡ ಎನಿಸಿ ಬದಿಗೆ ಸರಿದರು. Read the rest of this entry »

ಪಿಟೀಲು ಚೌಡಯ್ಯನವರು ನಾಯಕನಾಗಿ ಅಭಿನಯಿಸಿದ್ದು ಗೊತ್ತೇ?

without comments

ಪಿಟೀಲು ಟಿ. ಚೌಡಯ್ಯನವರು ಅಭಿನಯಿಸಿದ ಚಿತ್ರದ ಹೆಸರು “ವಾಣಿ”. ಅದರಲ್ಲಿ ಅವರೇ ನಾಯಕ. ವಿಶೇಷವೆಂದರೆ ಪಂಡರೀಬಾಯಿ ಮತ್ತು ಮುಸುರಿ ಕೃಷ್ಣಮೂರ್ತಿಯವರ ಮೊದಲ ಚಿತ್ರವೂ ಅದೇ.

ಮೈಸೂರಿನ ಪಿಟೀಲು ಚೌಡಯ್ಯನವರ ಹೆಸರು ತಿಳಿಯದವರಿಲ್ಲ. ತಮ್ಮ ಸಂಗೀತ ಪಾಂಡಿತ್ಯ ಮತ್ತು ಹೆಚ್ಚುಗಾರಿಕೆಯಿಂದ ಹೆಸರಾದವರು. ಇಂದಿಗೂ ಕರ್ನಾಟಕದಲ್ಲಿ ಪಿಟೀಲಿನೊಂದಿಗೆ ಜೋಡಿಸಿದ ಹೆಸರೆಂದರೆ ಚೌಡಯ್ಯನವರದ್ದೇ. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನ “ಪಿಟೀಲಿನ’ ಆಕಾರದಲ್ಲೇ ಇದೆ.

ಇಂಥ ಸಂಗೀತ ವಿದ್ವಾಂಸ ನಾಯಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಅಂಶ ಬಹಳಷ್ಟು ಮಂದಿಗೆ ತಿಳಿದಿರಲಾರದು. ನಟ ಅಂಬರೀಷನ ತಾತನವರಾದ ಚೌಡಯ್ಯನವರು 1943 ರಲ್ಲಿ ಬಿಡುಗಡೆಯಾದ “ವಾಣಿ’ ಚಿತ್ರದ ನಾಯಕ. ಅದರ ಇಂಗ್ಲಿಷ್ ನ ಟೈಟಲ್ “violinist’. ಸಂಗೀತ ಪ್ರಧಾನವಾದ ಚಿತ್ರ. ಇದರಲ್ಲಿನ ಹಾಡಿಗೆ ಸ್ವತಃ ಅವರೇ ಸಂಗೀತ ಸಂಯೋಜಿಸಿದ್ದರು. ಇಡೀ ಚಿತ್ರದ ಸಂಗೀತ ನಿರ್ದೇಶನವನ್ನು ಮತ್ತೊಬ್ಬ ಸಹಾಯಕನೊಂದಿಗೆ ಪೂರೈಸಿದ್ದರು.

guruswamy coloumn copyಇವರೂ ಸೇರಿದಂತೆ ಒಟ್ಟು ಐದು  ಮಂದಿ ನಿರ್ಮಾಪಕರು. ಆ ಪೈಕಿ  ಶಿವಬಸವಯ್ಯ, ಮಾಸ್ಟರ್  ಹಿರಣ್ಣಯ್ಯನವರ ತಂದೆ ಕೆ. ಹಿರಣ್ಣಯ್ಯ,  ಜಿ. ಆರ್. ರಾಮಯ್ಯ ಹಾಗೂ ಛಾಯಾಗ್ರಾಹಕ ಗೋಪಾಲ್ ಉಳಿದವರು. ಬಹಳ ವಿಶೇಷವೆಂದರೆ ನಾಡಿನ ಚಿತ್ರರಂಗದಲ್ಲಿ ಮಿಂಚಿದ ಇಬ್ಬರು ನಟರಿಗೆ ಇದು ಚೊಚ್ಚಲ ಚಿತ್ರ. Read the rest of this entry »

ಹಾಲಿವುಡ್‌ನ ಮೊದಲ ಭಾರತೀಯ ಹೀರೋ ಸಾಬು ದಸ್ತಗೀರ್

with 5 comments

imm

ನಾವು “ಜಂಗಲ್ ಬುಕ್” ನೋಡಿದ್ದೇವೆ. ಅದರಲ್ಲಿ ಮರದಿಂದ ಮರಕ್ಕೆ ಜಿಗಿಯುವ ಹುಡುಗನ ಕಂಡು ಖುಷಿಯಾಗಿತ್ತು. ಯಾರೆಂದು ತಿಳಿದಿರಲಿಲ್ಲ, ಭಾರತೀಯನಂತೆ ತೋರಿತ್ತು. ಆದರೆ, ಅವನು ಬರಿಯ ಭಾರತೀಯನಲ್ಲ. ನಮ್ಮೂರಿನವನೇ…ಅಂದರೆ ಕರ್ನಾಟಕದ ಮೈಸೂರಿನವನು.

ಹಾಲಿವುಡ್ ನ ಹೆಸರಾಂತ ನಟ “ಸಾಬು ದಸ್ತಗೀರ್’ ಭಾರತೀಯ. ಅದರಲ್ಲೂ ನಮ್ಮ ರಾಜ್ಯದ ಮೈಸೂರಿನವನು. ಅಮೆರಿಕದ ಹಾಲಿವುಡ್ ಸಾಮ್ರಾಜ್ಯದಲ್ಲಿ ರಾಜನಂತೆಯೇ ಮರೆದ ಈತ, ಮಾವುತನ ಮಗ. ಮೈಸೂರು ಜಿಲ್ಲೆಯ ಕಾರಾಪುರದ ಕಾಡಿನಲ್ಲಿ 1927 ರಲ್ಲಿ ಹುಟ್ಟಿದವ. Read the rest of this entry »

ಲಕ್ಷ್ಮೀಬಾಯಿಗೆ ಏಟು ಕೊಟ್ಟು ಅಳಿಸಿದರು !

with 3 comments

ಮೂಕಿ ಚಿತ್ರ “ವಸಂತ ಸೇನ’ ಬಿಡುಗಡೆಯಾದ ವರ್ಷವೇ ೧೯೨೯ ರಲ್ಲಿ ಮತ್ತೊಂದು ಚಿತ್ರ “ರಾಜಾ ಹೃದಯ’ಪ್ರದರ್ಶನಗೊಂಡಿತು. ಇವುಗಳ ಮಧ್ಯೆ ಇರುವ ವಿಶೇಷವೆಂದರೆ ಎರಡೂ ಭಿನ್ನ ಧಾರೆಯವು. “ವಸಂತ ಸೇನ’ದಲ್ಲಿ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್ ತಾಂತ್ರಿಕ ನಿಪುಣರು. ಉಳಿದಂತೆ ಎಲ್ಲರೂ ಹವ್ಯಾಸಿಗಳು. ಆದರೆ “ರಾಜಾ ಹೃದಯ’ ಸಂಪೂರ್ಣ ಉಲ್ಟಾ.
ಈ ಚಿತ್ರ ನಿರ್ದೇಶಿಸಿದ ಹರಿಭಾಯಿ ದೇಸಾಯಿಯಿಂದ ಹಿಡಿದು ಚಿತ್ರ ನಿರ್ಮಿಸಿದ ಸೂರ‍್ಯ ಫಿಲಂಸ್ ಸಂಪೂರ್ಣ ವೃತ್ತಿಪರವಾದ ತಂಡ. ಮುಂಬಯಿಯಿಂದ ದಕ್ಷಿಣ ಭಾರತದ ದೇವಸ್ಥಾನ, ಪಾರಂಪರಿಕ ತಾಣಗಳನ್ನೆಲ್ಲಾ ಚಿತ್ರೀಕರಣಕ್ಕೆ ಬಳಸಿಕೊಳ್ಳಲು ಅರಸಿ ಬಂದವರು ಬೆಂಗಳೂರಿಗೂ ಬಂದರು. ಅಲ್ಲಿನ ಸೌಂದರ‍್ಯ ನೋಡಿ ಠಿಕಾಣಿ ಹೂಡಿದರು.  ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಬಂಗಲೆಯೊಂದನ್ನ್ನು ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಬಾಡಿಗೆಗೆ ಪಡೆದು “ಸೂರ‍್ಯ ಫಿಲಂಸ್’ನ ಸ್ಟುಡಿಯೋ ಆರಂಭಿಸಿದರು.

ಹಲವು ವಿಶೇಷಗಳ “ವಸಂತ ಸೇನ”

with 3 comments

ಮತ್ತೊಂದು ವಿಶೇಷವೆಂದರೆ, ನಿರ್ದೇಶಕ, ಛಾಯಾಗ್ರಾಹಕರು ಬಿಟ್ಟರೆ ಉಳಿದ ಬಹುತೇಕರು ಸಿನಿಮಾ ಕ್ಷೇತ್ರದವರೇ ಅಲ್ಲ. ಆದರೆ, ಎಲ್ಲರೂ ತಮ್ಮ ಕ್ಷೇತ್ರದಲ್ಲಿ ಅದ್ವಿತೀಯರೇ. ಅವರನ್ನೆಲ್ಲಾ ಗುಡ್ಡೆ ಹಾಕಿ ಚಿತ್ರ ಮಾಡಿದ್ದೇ ದೊಡ್ಡ ಸಾಹಸ ಮತ್ತು ಪ್ರಯೋಗ. 

guruswamy coloumn copy

  ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯ    ಚಿತ್ರಗಳು ಬಂದದ್ದೇ ಹೊಸತಲ್ಲ .  ಆದರೆ ಪ್ರಯೋಗಶೀಲತೆ ಎಂಬುದು  1929 ರಲ್ಲೇ ಆರಂಭವಾಗಿತ್ತು.  ”ಮೃಚ್ಛಕಟಿಕ’ ಕಥೆ ಆಧರಿಸಿದ ಚಿತ್ರ “ವಸಂತಸೇನ’ ಕನ್ನಡದ ನೆಲದಲ್ಲಿ ನಿಜವಾದ ಹೊಸತನವನ್ನು ಪ್ರೇರೇಪಿಸಿದ ಚಿತ್ರ. 

ವಸಂತ ಸೇನೆಯ ಒಂದು ದೃಶ್ಯ

ವಸಂತ ಸೇನೆಯ ಒಂದು ದೃಶ್ಯ

ಈಗ ಗುರುತಿಸುತ್ತಿರುವ ವಾಣಿಜ್ಯ ನೆಲೆಯ ಹಾಗೂ ಕಲಾತ್ಮಕ ಸೆಲೆಯ ಚಿತ್ರಗಳೆಂಬ (ನಾನು ಹಾಗೆ ಪ್ರತ್ಯೇಕಿಸಲಾರೆ) ಎರಡು ಪ್ರಮುಖ ಧಾರೆ ಆರಂಭವಾಗಿದ್ದೇ ಅಂದು. ಅದರ ಒಂದು ನೆಲೆಯ ಬಗ್ಗೆ, ಅಂದರೆ ಪ್ರಯೋಗಶೀಲತೆಯ ಬಗ್ಗೆ ಹೇಳುತ್ತೇನೆ. ಕನ್ನಡದಲ್ಲಿ ಮೊದಲನೇ ಬಾರಿಗೆ ನಡೆದ ಪ್ರಯತ್ನವದು. “ಮೃಚ್ಛಕಟಿಕ’ ನಾಟಕ “ವಸಂತ ಸೇನ’ ವಾಗಿ 1929 ರಲ್ಲಿ ಬಿಡುಗಡೆಗೊಂಡಿತು. ಅದು ಮೂಕಿ ಚಿತ್ರ. 

ಇಷ್ಟೇ ಇದರ ವಿಶೇಷವೇ ? ಎಂದರೆ ಇಷ್ಟೇ ಅಲ್ಲ. ಇದರಲ್ಲಿನ ಎಲ್ಲವೂ ವಿಶೇಷವೇ. ಬಹಳ ವಿಶಿಷ್ಟವಾದ ಹಲವು ಸಂಗತಿಗಳು ಇಲ್ಲಿವೆ. ನಾವು ಯಾರನ್ನು ನಿರೀಕ್ಷಿಸಿರುವುದಿಲ್ಲವೋ ಸಾಮಾನ್ಯವಾಗಿ, ಅವರೆಲ್ಲರೂ ಇದರಲ್ಲಿ ನಟಿಸಿದ್ದಾರೆ. ಒಂದರ್ಥದಲ್ಲಿ ಭಾರತೀಯ ಸಾಂಸ್ಕೃತಿಕ ರಂಗದ ಅದ್ವಿತೀಯ ಪ್ರತಿಭೆಗಳ ಸಂಗಮ ಎಂದು ಹೇಳಿದರೆ ಅಚ್ಚರಿಯ ಸಂಗತಿಯಲ್ಲ.

ಟಿ. ಪಿ. ಕೈಲಾಸಂ ನಾಟಕ ಬರೆದದ್ದನ್ನು ಕೇಳಿದ್ದೀರಿ, ಆದರೆ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದನ್ನು. ಈ ಚಿತ್ರದಲ್ಲಿ “ಶಕಾರ’ ನ ಪಾತ್ರ ಅಭಿನಯಿಸಿದವರು ಅವರೇ. ಮೈಸೂರು ವಿವಿ ಯಲ್ಲಿ ಪ್ರಾಧ್ಯಾಪಕಿಯಾಗಿದ್ದ ಯೇಣಾಕ್ಷಿ ರಾಮರಾವ್,  ಕಮಲಾದೇವಿ ಚಟ್ಟೋಪಾಧ್ಯಾಯ, ನಿಘಂಟಿನ ಮೂಲಕವೇ ಈಗಿನ ತಲೆಮಾರುಗಳಿಗೆ ಪರಿಚಯವಿರುವ ಡಿ. ಕೆ. ಭಾರದ್ವಾಜ್, ಕಥೆಗಾರ ಅಜ್ಜಂಪುರ ಸೀತಾರಾಂ, ಮೈಸೂರಿನ ಆಸ್ಥಾನ ನರ್ತಕಿ ಜಟ್ಟಿತಾಯಮ್ಮ…ಎಲ್ಲರೂ ಅಭಿನಯಿಸಿದವರು. ಇದನ್ನು ನಿರ್ದೇಶಿಸಿದವರು ಮುಂಬಯಿಯ ಮೋಹನ್ ಭವನಾನಿ. ಇವರು ಮುಂಬಯಿಯ ಅಜಂತಾ ಸಿನಿಟೋನ್‌ನ ಮಾಲೀಕ.

ಮತ್ತೊಂದು ವಿಶೇಷವೆಂದರೆ, ನಿರ್ದೇಶಕ, ಛಾಯಾಗ್ರಾಹಕರು ಬಿಟ್ಟರೆ ಉಳಿದ ಬಹುತೇಕರು ಸಿನಿಮಾ ಕ್ಷೇತ್ರದವರೇ ಅಲ್ಲ. ಆದರೆ, ಎಲ್ಲರೂ ತಮ್ಮ ಕ್ಷೇತ್ರದಲ್ಲಿ ಅದ್ವಿತೀಯರೇ. ಅವರನ್ನೆಲ್ಲಾ ಗುಡ್ಡೆ ಹಾಕಿ ಚಿತ್ರ ಮಾಡಿದ್ದೇ ದೊಡ್ಡ ಸಾಹಸ ಮತ್ತು ಪ್ರಯೋಗ. 

ಚಿತ್ರದ ಭಿತ್ತಿಪತ್ರ

ಚಿತ್ರದ ಭಿತ್ತಿಪತ್ರ

ಅಂದಹಾಗೆ, ಇದರ ಚಿತ್ರೀಕರಣವೆಲ್ಲಾ ಬೇಲೂರು, ಹಳೇಬೀಡು, ಸೋಮನಾಥಪುರ, ಬೆಂಗಳೂರಿನ ಟಿಪ್ಪು ಅರಮನೆ, ಲಾಲ್ ಬಾಗ್‌ನಲ್ಲಿ ಪೂರೈಸಲಾಗಿತ್ತು. ಜತೆಗೆ ಮತ್ತೊಂದು ವಿಶಿಷ್ಟ ಕೇಳಿ. ಈ ಸಿನಿಮಾವನ್ನು ಕಪ್ಪು ಬಿಳುಪಿನಲ್ಲಿ ಚಿತ್ರೀಕರಿಸಿ, ಜರ್ಮನಿಗೆ ಕೊಂಡೊಯ್ದು ಹ್ಯಾಂಡ್ ಕಲರ್ ಹಾಕಿಸಿದ್ದರು. ಅಂದರೆ ಪ್ರತಿ ಫ್ರೇಮ್‌ಗೂ ಬಣ್ಣ ಹಚ್ಚುವುದು !

1929 ರಲ್ಲಿ ನಮ್ಮಲ್ಲಿ ಬಿಡುಗಡೆಗೊಂಡಿತು. ನಂತರ ಜರ್ಮನಿಯಲ್ಲೂ 1931 ರಲ್ಲಿ ಕ್ರಿಸ್‌ಮಸ್ ಸಂದರ್ಭ ದಲ್ಲಿ ಬಿಡುಗಡೆಗೊಂಡು ಜನಪ್ರಿಯವಾಯಿತು. ಮಾತಿಲ್ಲದ ಚಿತ್ರವಾದ್ದರಿಂದ ಭಾಷೆಯ ತೊಡಕು ಎದುರಾಗಲಿಲ್ಲ. 

ಇನ್ನೊಂದು ಅರ್ಥದಲ್ಲಿ ಇದು ಟ್ರೆಂಡ್ ಸೆಟ್ಟರ್ ಚಿತ್ರ ಸಹ. ಅದುವರೆಗೂ ಸಾಮಾನ್ಯವಾಗಿ ರಾಜರ ಮನೆತನ ಆಧರಿಸಿದ, ಸಾಹಸ ಪ್ರಧಾನವಾದ ಚಿತ್ರಗಳೇ ಹೆಚ್ಚಾಗಿದ್ದವು. ಇಲ್ಲವಾದರೆ, ಪೌರಾಣಿಕ ಕಥೆಗಳನ್ನು ಆಧರಿಸಿದ್ದು ಹೆಚ್ಚು. ಅಂಥ ಹೊತ್ತಿನಲ್ಲಿ ಸಾಹಿತ್ಯ ಕೃತಿಯಾದ ಮೃಚ್ಛಕಟಿಕವನ್ನು ಸಿನಿಮಾ ಮಾಡಿದರು. “ಮೃಚ್ಛಕಟಿಕ’ ರಾಜರ ಕಥೆಯಲ್ಲ ; ಜನರ ಹೋರಾಟದ ಕಥೆ, ಕ್ರಾಂತಿಕಾರಿಯ ಕಥೆ. ಮತ್ತೆ ಹಳತಿಗೇ ಮೊರೆ ಹೋಗದೇ, ಹೊಸತನಕ್ಕೆ ಮುಂದಾದದ್ದು  ವಿಶೇಷ. ಕಥಾ ವಸ್ತುವಿನಲ್ಲ್ಲೂ ಹೊಸತನವೇ. 

ನನಗನ್ನಿಸುವುದೇನೆಂದರೆ, ನಮ್ಮ ನೆಲದಲ್ಲಿ ಹುಟ್ಟಿಕೊಂಡ ಆಫ್‌ಬೀಟ್ (ಅಂದರೆ ಜನಪ್ರಿಯ ನೆಲೆಗಿಂತ ಭಿನ್ನವಾದದ್ದು) ಚಿತ್ರವಿದು. ನಾವು ಹೇಳುವ ಹೊಸ ಅಲೆಯ ಚಿತ್ರಗಳು (ಸಂಸ್ಕಾರ) ಸಹ ಮೂಲವಾಗಿ ಭಾರತೀಯ ಅಥವಾ ಕನ್ನಡದ ನೆಲದ ಸೊಗಡಿನಿಂದ ಮೂಡಿದ್ದಲ್ಲ. ಅದರ ಕತೆ ಸಂರಚನೆಯಿಂದಲೂ ಪಾಶ್ಚಾತ್ಯ ಪ್ರಭಾವಕ್ಕೆ ಒಳಗಾಗಿರುವಂಥದ್ದು. ಆದರೆ ನಮ್ಮ ನೆಲದ, ಭಾರತೀಯ ಸೊಗಡಿನ ಅಂದರೆ ನಮ್ಮ ಮಣ್ಣಿನ ಅನುಭವವನ್ನೇ ದೃಶ್ಯ ಕಾವ್ಯವಾಗಿಸಿದ್ದು ಇದರ ಹೆಗ್ಗಳಿಕೆ ಮತ್ತು ಇದರ ವಿಶೇಷ. ತಾಂತ್ರಿಕತೆ ಮತ್ತು ನಮ್ಮ ನೆಲದ ಅನುಭವಗಳನ್ನು ಮುಖಾಮುಖಿಗೊಳಿಸಿದ ಪ್ರಯತ್ನ. 

ಮತ್ತೊಂದು ಸಂಗತಿ-ಕನ್ನಡದಲ್ಲಿ ಹೀಗೆ ಸಾಹಿತ್ಯ ಕ್ಷೇತ್ರದಿಂದ ದಿಢೀರನೆ ಚಿತ್ರ ಜಗತ್ತಿಗೆ ಬಂದವರು ಬಹಳಷ್ಟು ಮಂದಿಯಿದ್ದಾರೆ. ಪಿ. ಲಂಕೇಶ್, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡರು, ಚಂದ್ರಶೇಖರ ಕಂಬಾರರು, ಬರಗೂರು ರಾಮಚಂದ್ರಪ್ಪ… ಹೀಗೆ..ಆದರೆ ನನಗನ್ನಿಸುವ ಸಂಗತಿಯೆಂದರೆ ಎಲ್ಲರಿಗೂ ಸ್ವಲ್ಪವಾದರೂ ಸಿನಿಮಾ ಕ್ಷೇತ್ರದ ಹಿನ್ನೆಲೆ ಬೇಕು. ಇಲ್ಲದಿದ್ದರೆ ಕಷ್ಟ.

ಟಿ. ಪಿ. ಕೈಲಾಸಂ ಅವರ ನವರಸ ಅಭಿವ್ಯಕ್ತಿಯ, ಭಾವಭಂಗಿಯ ಭಾವಚಿತ್ರಗಳನ್ನು ನೋಡಿರಬಹುದು. “ಶಕಾರ’ ಪಾತ್ರ ಮಾಡುವ ಮುನ್ನವೂ ಎಲ್ಲರೆದುರೂ ಹಾಗೆಯೇ ಹೇಳುತ್ತಿದ್ದರಂತೆ. “ಈ ಪಾತ್ರವೇನು ? ಸೂಪರ್ ಆಗಿ ಮಾಡ್ತೀನಿ…’ ಎನ್ನುತ್ತಲೇ ಇದ್ದಾಗ ಎದುರಿಗೆ ಕ್ಯಾಮೆರಾ ಬಂದು ಬಿಟ್ಟಿತಂತೆ. ಅಂದರೆ ಅಭಿನಯಿಸುವ ಸಮಯವೇ ಬಂದಿತು. ಕ್ಯಾಮೆರಾ ಎದುರು ಬೆವತು ನೀರಾಗಿ ಬಿಟ್ಟರಂತೆ ಕೈಲಾಸಂ. ಅದನ್ನು ಕಂಡವರು “ಅಯ್ಯೋ…’ ಎಂದರಂತೆ. ಇದನ್ನು ರಾ. ಶಿ. ಅವರೂ ತಮ್ಮ ಲೇಖನದಲ್ಲಿ ದಾಖಲಿಸಿದ್ದಾರಂತೆ. ವಾಣಿಜ್ಯ ನೆಲೆಯ ಪ್ರಯೋಗಶೀಲ ಚಿತ್ರದ ಬಗ್ಗೆ ಮುಂದಿನ ವಾರ ಹೇಳುತ್ತೇನೆ.

“ಅನಂತ ನಾಗರಕಟ್ಟೆ ಫಿಲ್ಮ್ ಗೆ ಎಂಟ್ರಿ ಕೊಟ್ಟಿದ್ದು ಹೀಗೆ…”

without comments

ಅನಂತನಾಗ್ ಇಂದು ಖ್ಯಾತ ಅಭಿನೇತ್ರಿ. ಅವರು ಮೊದಲು ಎಂಟ್ರಿ ಕೊಟ್ಟ ಫಿಲ್ಮ್ ಯಾವುದು ಗೊತ್ತೇ ? ಎಂದರೆ ನೂರಾರು ಉತ್ತರ ದೊರಕಬಹುದು. ಆದರೆ ಸರಿ ಉತ್ತರವೆಂದರೆ “ಸಂಕಲ್ಪ’. 

ಈ ಚಿತ್ರ ಆ ಕಾಲದಲ್ಲಿ ಹೊಸ ಅಲೆಯ ಚಿತ್ರಗಳಿಗೆ ಒಂದು ವೇಗ ಕೊಟ್ಟಂತದ್ದು. ಬಹಳಷ್ಟು ಜನ ಹೊಸ ಅಲೆಯ ಚಿತ್ರವೆಂದ ಕೂಡಲೇ “ಸಂಸ್ಕಾರ’ದ ನೆರಳಿಗೆ ಹೋಗುತ್ತಾರೆ. ಆದರೆ ಅದಕ್ಕಿಂತ ಭಿನ್ನ ನೆಲೆಯ ಚಿತ್ರ “ಸಂಕಲ್ಪ’ ೧೯೭೨ ರಲ್ಲಿ ನಿರ್ಮಾಣವಾದದ್ದು. 
೧೯೭೨-೭೩ ರ ಸಾಲಿನಲ್ಲಿ ಆರು ಪ್ರಶಸ್ತಿಗಳನ್ನು ಪಡೆದ ಚಿತ್ರ. ಬಹಳ ತಮಾಷೆಯೆಂದರೆ ಇದಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ ವಿಜಯಭಾಸ್ಕರ್ ಬಿಟ್ಟರೆ ಮತ್ತೆಲ್ಲರೂ ಹೊಸಬರೇ.  ಮೈಸೂರಿನ ಪಿ.ವಿ. ನಂಜರಾಜೇ ಅರಸ್ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ. ಇದಕ್ಕೆ ಛಾಯಾಗ್ರಹಣ ಒದಗಿಸಿದ ಎಸ್. ರಾಮಚಂದ್ರ ಐತಾಳ, ಧ್ವನಿ ಮುದ್ರಣ ಹೊಣೆ ಹೊತ್ತ ಸೀತಾರಾಂ, ಮೋಹನಸುಂದರಂ, ಸಂಕಲನ ಪೂರೈಸಿದ ಉಮೇಶ ಕುಲಕರ್ಣಿ, ಬಾಲನಟಿಯಾಗಿ ಅಭಿನಯಿಸಿದ ಬೇಬಿ ಬೃಂದಾ- ಎಲ್ಲರೂ ಹೊಸಬರು. ವಿವಿಧ ನೆಲೆಗಳಲ್ಲಿ ಒಟ್ಟೂ ಆರು ಪ್ರಶಸ್ತಿ ಪಡೆದ ಚಿತ್ರ. 
ಒಂದೂ ಹಾಡಿರಲಿಲ್ಲ. ಜತೆಗೆ ಮೂಢನಂಬಿಕೆ ಮತ್ತು ಆಧುನಿಕ ಚಿಂತನೆ ಪರಸ್ಪರ ಮುಖಾಮುಖಿಯಾಗುವಂಥ ಕಥಾವಸ್ತು. ಮಂತ್ರದಿಂದ ಕಾಯಿಲೆಗಳನ್ನು ವಾಸಿ ಮಾಡುತ್ತೇನೆ ಎನ್ನುವವ ಮತ್ತು ಎಂಬಿಬಿಎಸ್ ಓದಿ ಬಂದ ವೈದ್ಯನ ಮಧ್ಯೆ ನಡೆಯುವ ಸವಾಲ್ ಜವಾಬ್ ಚಿತ್ರದ ಹೂರಣ.
ಎಂಟ್ರಿ ಪಡೆದದ್ದು ಹೀಗೆ
ಮಂಗಳೂರಿನ ಉಮರಬ್ಬ (ನಂತರ ಶಾಸಕರೂ ಆದರು) ಆಗ ಮೈಸೂರಿನ ಮಹಾರಾಜ ಕಾಲೇಜಿನ ಪದವಿ ವಿದ್ಯಾರ್ಥಿ. “ಸಂಕಲ್ಪ’ ಚಿತ್ರಕ್ಕಾಗಿ ಪಿ.ವಿ. ನಂಜರಾಜೇಅರಸ್, ಉಮರಬ್ಬರನ್ನೇ ನಾಯಕನೆಂದು ಆಯ್ಕೆ ಮಾಡಿದ್ದರು. ಚಿತ್ರೀಕರಣ ಮುಹೂರ್ತಕ್ಕೆ ಸಿದ್ಧತೆ ನಡೆದಿತ್ತು. ಮುಹೂರ್ತದ ಹಿಂದಿನ ದಿನವೂ ಅರಸ್ ಹಲವರಿಗೆ ಆಮಂತ್ರಣ ಪತ್ರಿಕೆ ವಿತರಿಸಬೇಕಿತ್ತು. ಅದಕ್ಕಾಗಿ ಉಮರಬ್ಬರ ಕಾರಿನಲ್ಲಿ ತಮ್ಮ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದರು.
ಅವರು…ಇವರು…ಎನ್ನುತ್ತಾ ಎಲ್ಲರಿಗೂ ಆಮಂತ್ರಣ ವಿತರಿಸಲಾಯಿತು. ಕೊನೆಗೆ, ಬೆಂಗಳೂರಿನ ಹೋಟೆಲೊಂದರಲ್ಲಿ (ಹೆಸರು ನೆನಪಿಲ್ಲ) ನಾಟಕಕಾರ ಗಿರೀಶ್ ಕಾರ್ನಾಡ್ ವಾಸ್ತವ್ಯವಿದ್ದರು. ಅವರಿಗೊಂದು ಪತ್ರಿಕೆ ನೀಡಲೆಂದು ಅರಸರು ಅತ್ತ ಹೊರಟರು. ಎಲ್ಲೂ ಕುಳಿತು ಚರ್ಚಿಸುವಷ್ಟು ಪುರಸೊತ್ತು ಅವರಿಗಿರಲಿಲ್ಲ. ಹಾಗಾಗಿ ಕಾರ್ನಾಡರಿದ್ದ ಹೋಟೆಲ್ ಎದುರು ಕಾರು ನಿಂತ ಕೂಡಲೇ, “ನೀವು ಇಲ್ಲೇ ಇರಿ, ನಾನು ಕಾರ್ಡ್ ಕೊಟ್ಟು ಬರುತ್ತೇನೆ’ ಎಂದು ಅರಸರು ಸರಸರನೆ ಹೊರಟರು.
ಹೋಟೆಲ್‌ನೊಳಗೆ ಬಂದು ಲಿಫ್ಟ್‌ನತ್ತ ಕಣ್ಣು ಹಾಯಿಸಿದರು. ಮೇಲಿದ್ದ ಅದು ಬರುವಷ್ಟೂ ತಾಳ್ಮೆಯಿರಲಿಲ್ಲ. ತಕ್ಷಣವೇ ಮೆಟ್ಟಿಲೇರತೊಡಗಿದಾಗ ಎದುರಿಗೆ ಒಬ್ಬ ಕೈಯಲ್ಲಿ ಬ್ರೀಪ್‌ಕೇಸ್ ಹಿಡಿದು ಒಮ್ಮೆಲೆ ಎರಡೆರಡು ಮೆಟ್ಟಿಲು ಇಳಿಯುತ್ತಿದ್ದ. ಅಚ್ಚರಿ ಎನಿಸಿತು, ಇವರಿಗೆ. ಒಂದಷ್ಟು ಮೇಲೆ ಹೋದ ಅವರು, ತಕ್ಷಣವೇ ಕೆಳಗಿಳಿದು ಬಂದರು. 
ಆತ ಅಲ್ಲಿ ದಣಿವಾರಿಸಿಕೊಳ್ಳಲು ನಿಂತಿದ್ದ. “ಏನಪ್ಪಾ, ನಿನ್ನ ಹೆಸರೇನು?’ ಎಂದು ಕೇಳಿದರು ಅರಸ್. 
ಅದಕ್ಕೆ ಆತ, “ನನ್ನ ಹೆಸರು ಅನಂತ್ ನಾಗರಕಟ್ಟೆ’ ಎಂದು ಉತ್ತರಿಸಿದ. “ಸರಿ, ಏನ್ ಮಾಡ್ತಾ ಇದ್ದೀಯಾ’ ಎಂಬ ಮತ್ತೊಂದು ಪ್ರಶ್ನೆಗೆ, “ಮುಂಬಯಿಯಲ್ಲಿ ಬ್ಯಾಂಕ್ ಕೆಲಸ ಮಾಡ್ಕೊಂಡಿದ್ದೇನೆ. ಹೀಗೇ ಬಂದಿದ್ದೆ’ ಎಂದು ವಿವರಿಸಿದ.
“ಅದಿರಲಿ, ಫಿಲ್ಮ್ ನಲ್ಲಿ ಮಾಡ್ತೀಯಾ?’ ಎಂದು ಕೇಳೇಬಿಟ್ಟರು ಅರಸ್. ಹೊರಗೆ ಕಾರಿನಲ್ಲಿ ಒಬ್ಬ ಹೀರೋ ಕುಳಿತಿದ್ದ. ಇಲ್ಲಿ ಮತ್ತೊಬ್ಬ ಹೀರೋನ ಆಯ್ಕೆ. 
ಕೊಂಚ ವಿಚಲಿತನಾದ ಅನಂತನಾಗ್, “ಫಿಲ್ಮ್ ನಲ್ಲಿ ಮಾಡೋದಿಕ್ಕಂತಲೇ ಕಾರ್ನಾಡರ ಬಳಿ ಬಂದಿದ್ದೆ. ಮುಂದಿನ ಪ್ರಾಜೆಕ್ಟ್‌ನಲ್ಲಿ ಅವಕಾಶ ಸಿಗಬಹುದು ಅಂದ್ಕೊಂಡಿದ್ದೀನಿ. ಇವತ್ತಿನವರೆಗೆ ಕೆಲಸಕ್ಕೆ ರಜೆ ಹಾಕಿದ್ದೆ. ನಾಳೆ ಹೋಗಬೇಕು’ ಎಂದ ಆತನಿಗೆ ಸಿಕ್ಕ ಉತ್ತರವೇನು ಗೊತ್ತೇ ? “ನೀನೇ ನನ್ನ ಫಿಲ್ಮ್ ಹೀರೋ. ನಾಳೆ ಬೆಳಗ್ಗೆ ಮುಹೂರ್ತ ಇದೆ. ಬಂದ್ಬಿಡು’ ಎಂದವರೇ ಮೆಟ್ಟಿಲೇರಿ ಕಾರ್ನಾಡರ ಬಳಿ ಬಂದರು ಅರಸ್.
ಆಮಂತ್ರಣ ಪತ್ರ ನೀಡಿದ ಬಳಿಕ, “ಆ ಹುಡುಗ (ಅನಂತ್ ನಾಗರಕಟ್ಟೆ) ಹೇಗೆ?’ ಎಂದು ಕೇಳಿದರು ಅರಸ್ ಕಾರ್ನಾಡರ ಬಳಿ. ಅದಕ್ಕೆ, “ಅವಕಾಶ ಕೊಡಿ, ಕೊಡಿ ಅಂತಾ ಸುತ್ತಾಡ್ತಿದ್ದಾನೆ’ ಎಂದರಂತೆ. “ನನ್ನ ಚಿತ್ರಕ್ಕೆ ಅವನನ್ನೇ ಹೀರೋ ಮಾಡ್ತಿದ್ದೀನಿ ಎಂದಾಗ ಕಾರ್ನಾಡರು, “ನಿಮಗೇನ್ರಿ ತಲೆಗಿಲೆ ಕೆಟ್ಟಿದೆಯೇನ್ರೀ? ಅವನ ಸಾಮರ್ಥ್ಯ ಏನೂ ತಿಳ್ಕೊಳ್ಳದೇ ಯಾಕೆ ಈ ನಿರ್ಧಾರ ಕೈಗೊಂಡಿರಿ?’ ಎಂದು ಪ್ರಶ್ನಿಸಿದರಂತೆ. “ಇಲ್ಲ. ನಾನು ನಿರ್ಧರಿಸಿದ್ದೇನೆ. ಅವನತ್ರವೇ ಪಾತ್ರ ಮಾಡಿಸ್ತೇನೆ’ ಎಂದು ಉತ್ತರಕ್ಕೂ ಕಾಯದೇ ಕೆಳಗಿಳಿದು ಬಂದರಂತೆ ಅರಸ್.
 
ಹೇಗೋ ಹೊಸ ಹೀರೋ ಸೆಲೆಕ್ಟ್ ಆಗಿದ್ದ. ಆದರೆ ಹಳೆ ಹೀರೋ ಎದುರು ಸ್ವತಃ ನಿರ್ದೇಶಕರೇ ವಿಲನ್ ಆಗಬೇಕಿತ್ತು. ಕಾರು ಹತ್ತಿದ ಅರಸ್, ಮಂಡ್ಯದವರೆಗೂ ಏನೂ ಹೇಳಲಿಲ್ಲ. ಒಳಗೆ ಒಂದು ರೀತಿಯ ಭಯ. “ಈತನೇ ಹೀರೋ ಎಂದು ಇಷ್ಟು ದಿನ ಹೇಳಿದ್ದೆ. ಒಂದಿಷ್ಟು ಸುತ್ತಾಡಿದ್ದ. ನಾಳೆಯೇ ಮುಹೂರ್ತ, ಈಗ ನೀನಲ್ಲ, ಬೇರೆಯವನು ಎಂದರೆ ಹೇಗಾದೀತು?’ ಎಂಬುದು ಅವರೊಳಗಿನ ತುಮುಲಕ್ಕೆ ಕಾರಣ.
ಮಂಡ್ಯದ ಸಂಜಯ ಟಾಕೀಸಿನ ಹತ್ತಿರ ಕಾರು ಕ್ಷಣಕಾಲ ನಿಂತಾಗ ಹೊಸ ನಿರ್ಧಾರವನ್ನು ಪ್ರಕಟಿಸಿ ಬಿಟ್ಟರು. ಹೀರೋ ಏನೂ ಹೇಳದೇ ಕಾರು ಓಡಿಸುತ್ತಿದ್ದ. ಆದರೆ ಅರಸರ ಪತ್ನಿ, ತಮ್ಮ ಪತಿಯನ್ನು ತರಾಟೆಗೆ ತೆಗೆದುಕೊಳ್ಳಲು ಮರೆಯಲಿಲ್ಲವಂತೆ. 
ಅನಂತನಾಗ್ ಅಷ್ಟೊಂದು ಇಂಪ್ರೆಸ್ ಮಾಡಿದ್ರಾ, ಹೇಗೆ ಕಾಣ್ತಾ ಇದ್ರು ಅಂತಾ ಅರಸರನ್ನು ಕೇಳಿದ್ದಕ್ಕೆ, “ಜುಟ್ಟು ಬಿಟ್ಟಿದ್ದ. ಹುಮ್ಮಸ್ಸು ಪುಟಿಯುತ್ತಿತ್ತು. ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು. ಅವನನ್ನು ನೋಡಿದ ಕೂಡಲೇ ಯಾಕೋ ಇಷ್ಟವಾದ. ನನ್ನ ಪಾತ್ರಕ್ಕೆ ಯೋಗ್ಯ ಅನಿಸಿತು, ಆಯ್ಕೆ ಮಾಡಿ ಬಿಟ್ಟೆ’ ಎಂದರು. 
ಸಂಕಲ್ಪ ನನಗೆ ಅತ್ಯಂತ ಖುಷಿ ಕೊಟ್ಟ ಚಿತ್ರ. ಅಧ್ಯಯನ ಮಾಡಬಹುದಾದದ್ದು.

ಅನಂತನಾಗ್ ಇಂದು ಖ್ಯಾತ ಅಭಿನೇತ್ರಿ. ಅವರು ಮೊದಲು ಎಂಟ್ರಿ ಕೊಟ್ಟ ಫಿಲ್ಮ್ ಯಾವುದು ಗೊತ್ತೇ ? ಎಂದರೆ ನೂರಾರು ಉತ್ತರ ದೊರಕಬಹುದು. ಆದರೆ ಸರಿ ಉತ್ತರವೆಂದರೆ “ಸಂಕಲ್ಪ’. 

ಈ ಚಿತ್ರ ಆ ಕಾಲದಲ್ಲಿ ಹೊಸ ಅಲೆಯ ಚಿತ್ರಗಳಿಗೆ ಒಂದು ವೇಗ ಕೊಟ್ಟಂತದ್ದು. ಬಹಳಷ್ಟು ಜನ ಹೊಸ ಅಲೆಯ ಚಿತ್ರವೆಂದ ಕೂಡಲೇ “ಸಂಸ್ಕಾರ’ದ ನೆರಳಿಗೆ ಹೋಗುತ್ತಾರೆ. ಆದರೆ ಅದಕ್ಕಿಂತ ಭಿನ್ನ ನೆಲೆಯ ಚಿತ್ರ “ಸಂಕಲ್ಪ” 1972 ರಲ್ಲಿ ನಿರ್ಮಾಣವಾದದ್ದು.

ಪಿ.ವಿ. ನಂಜರಾಜೇ ಅರಸ್

ಪಿ.ವಿ. ನಂಜರಾಜೇ ಅರಸ್

1972-73 ರ ಸಾಲಿನಲ್ಲಿ ಆರು ಪ್ರಶಸ್ತಿಗಳನ್ನು ಪಡೆದ ಚಿತ್ರ. ಬಹಳ ತಮಾಷೆಯೆಂದರೆ ಇದಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ ವಿಜಯಭಾಸ್ಕರ್ ಬಿಟ್ಟರೆ ಮತ್ತೆಲ್ಲರೂ ಹೊಸಬರೇ.  ಮೈಸೂರಿನ ಪಿ.ವಿ. ನಂಜರಾಜೇ ಅರಸ್ ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ. ಇದಕ್ಕೆ ಛಾಯಾಗ್ರಹಣ ಒದಗಿಸಿದ ಎಸ್. ರಾಮಚಂದ್ರ ಐತಾಳ, ಧ್ವನಿ ಮುದ್ರಣ ಹೊಣೆ ಹೊತ್ತ ಸೀತಾರಾಂ, ಮೋಹನಸುಂದರಂ, ಸಂಕಲನ ಪೂರೈಸಿದ ಉಮೇಶ ಕುಲಕರ್ಣಿ, ಬಾಲನಟಿಯಾಗಿ ಅಭಿನಯಿಸಿದ ಬೇಬಿ ಬೃಂದಾ- ಎಲ್ಲರೂ ಹೊಸಬರು. ವಿವಿಧ ನೆಲೆಗಳಲ್ಲಿ ಒಟ್ಟೂ ಆರು ಪ್ರಶಸ್ತಿ ಪಡೆದ ಚಿತ್ರ. 

ಒಂದೂ ಹಾಡಿರಲಿಲ್ಲ. ಜತೆಗೆ ಮೂಢನಂಬಿಕೆ ಮತ್ತು ಆಧುನಿಕ ಚಿಂತನೆ ಪರಸ್ಪರ ಮುಖಾಮುಖಿಯಾಗುವಂಥ ಕಥಾವಸ್ತು. ಮಂತ್ರದಿಂದ ಕಾಯಿಲೆಗಳನ್ನು ವಾಸಿ ಮಾಡುತ್ತೇನೆ ಎನ್ನುವವ ಮತ್ತು ಎಂಬಿಬಿಎಸ್ ಓದಿ ಬಂದ ವೈದ್ಯನ ಮಧ್ಯೆ ನಡೆಯುವ ಸವಾಲ್ ಜವಾಬ್ ಚಿತ್ರದ ಹೂರಣ.

ಎಂಟ್ರಿ ಪಡೆದದ್ದು ಹೀಗೆ

ಮಂಗಳೂರಿನ ಉಮರಬ್ಬ (ನಂತರ ಶಾಸಕರೂ ಆದರು) ಆಗ ಮೈಸೂರಿನ ಮಹಾರಾಜ ಕಾಲೇಜಿನ ಪದವಿ ವಿದ್ಯಾರ್ಥಿ. “ಸಂಕಲ್ಪ’ ಚಿತ್ರಕ್ಕಾಗಿ ಪಿ.ವಿ. ನಂಜರಾಜೇಅರಸ್, ಉಮರಬ್ಬರನ್ನೇ ನಾಯಕನೆಂದು ಆಯ್ಕೆ ಮಾಡಿದ್ದರು. ಚಿತ್ರೀಕರಣ ಮುಹೂರ್ತಕ್ಕೆ ಸಿದ್ಧತೆ ನಡೆದಿತ್ತು. ಮುಹೂರ್ತದ ಹಿಂದಿನ ದಿನವೂ ಅರಸ್ ಹಲವರಿಗೆ ಆಮಂತ್ರಣ ಪತ್ರಿಕೆ ವಿತರಿಸಬೇಕಿತ್ತು. ಅದಕ್ಕಾಗಿ ಉಮರಬ್ಬರ ಕಾರಿನಲ್ಲಿ ತಮ್ಮ ಪತ್ನಿಯೊಂದಿಗೆ ಬೆಂಗಳೂರಿಗೆ ಬಂದಿದ್ದರು.

ನಟ  ಅನಂತನಾಗ್

ನಟ ಅನಂತನಾಗ್

ಅವರು…ಇವರು…ಎನ್ನುತ್ತಾ ಎಲ್ಲರಿಗೂ ಆಮಂತ್ರಣ ವಿತರಿಸಲಾಯಿತು. ಕೊನೆಗೆ, ಬೆಂಗಳೂರಿನ ಹೋಟೆಲೊಂದರಲ್ಲಿ (ಹೆಸರು ನೆನಪಿಲ್ಲ) ನಾಟಕಕಾರ ಗಿರೀಶ್ ಕಾರ್ನಾಡ್ ವಾಸ್ತವ್ಯವಿದ್ದರು. ಅವರಿಗೊಂದು ಪತ್ರಿಕೆ ನೀಡಲೆಂದು ಅರಸರು ಅತ್ತ ಹೊರಟರು. ಎಲ್ಲೂ ಕುಳಿತು ಚರ್ಚಿಸುವಷ್ಟು ಪುರಸೊತ್ತು ಅವರಿಗಿರಲಿಲ್ಲ. ಹಾಗಾಗಿ ಕಾರ್ನಾಡರಿದ್ದ ಹೋಟೆಲ್ ಎದುರು ಕಾರು ನಿಂತ ಕೂಡಲೇ, “ನೀವು ಇಲ್ಲೇ ಇರಿ, ನಾನು ಕಾರ್ಡ್ ಕೊಟ್ಟು ಬರುತ್ತೇನೆ’ ಎಂದು ಅರಸರು ಸರಸರನೆ ಹೊರಟರು.

ಹೋಟೆಲ್‌ನೊಳಗೆ ಬಂದು ಲಿಫ್ಟ್‌ನತ್ತ ಕಣ್ಣು ಹಾಯಿಸಿದರು. ಮೇಲಿದ್ದ ಅದು ಬರುವಷ್ಟೂ ತಾಳ್ಮೆಯಿರಲಿಲ್ಲ. ತಕ್ಷಣವೇ ಮೆಟ್ಟಿಲೇರತೊಡಗಿದಾಗ ಎದುರಿಗೆ ಒಬ್ಬ ಕೈಯಲ್ಲಿ ಬ್ರೀಪ್‌ಕೇಸ್ ಹಿಡಿದು ಒಮ್ಮೆಲೆ ಎರಡೆರಡು ಮೆಟ್ಟಿಲು ಇಳಿಯುತ್ತಿದ್ದ. ಅಚ್ಚರಿ ಎನಿಸಿತು, ಇವರಿಗೆ. ಒಂದಷ್ಟು ಮೇಲೆ ಹೋದ ಅವರು, ತಕ್ಷಣವೇ ಕೆಳಗಿಳಿದು ಬಂದರು. 

ಆತ ಅಲ್ಲಿ ದಣಿವಾರಿಸಿಕೊಳ್ಳಲು ನಿಂತಿದ್ದ. “ಏನಪ್ಪಾ, ನಿನ್ನ ಹೆಸರೇನು?’ ಎಂದು ಕೇಳಿದರು ಅರಸ್. 

ಅದಕ್ಕೆ ಆತ, “ನನ್ನ ಹೆಸರು ಅನಂತ್ ನಾಗರಕಟ್ಟೆ’ ಎಂದು ಉತ್ತರಿಸಿದ. “ಸರಿ, ಏನ್ ಮಾಡ್ತಾ ಇದ್ದೀಯಾ’ ಎಂಬ ಮತ್ತೊಂದು ಪ್ರಶ್ನೆಗೆ, “ಮುಂಬಯಿಯಲ್ಲಿ ಬ್ಯಾಂಕ್ ಕೆಲಸ ಮಾಡ್ಕೊಂಡಿದ್ದೇನೆ. ಹೀಗೇ ಬಂದಿದ್ದೆ’ ಎಂದು ವಿವರಿಸಿದ.

“ಅದಿರಲಿ, ಫಿಲ್ಮ್ ನಲ್ಲಿ ಮಾಡ್ತೀಯಾ?’ ಎಂದು ಕೇಳೇಬಿಟ್ಟರು ಅರಸ್. ಹೊರಗೆ ಕಾರಿನಲ್ಲಿ ಒಬ್ಬ ಹೀರೋ ಕುಳಿತಿದ್ದ. ಇಲ್ಲಿ ಮತ್ತೊಬ್ಬ ಹೀರೋನ ಆಯ್ಕೆ. 

ಕೊಂಚ ವಿಚಲಿತನಾದ ಅನಂತನಾಗ್, “ಫಿಲ್ಮ್ ನಲ್ಲಿ ಮಾಡೋದಿಕ್ಕಂತಲೇ ಕಾರ್ನಾಡರ ಬಳಿ ಬಂದಿದ್ದೆ. ಮುಂದಿನ ಪ್ರಾಜೆಕ್ಟ್‌ನಲ್ಲಿ ಅವಕಾಶ ಸಿಗಬಹುದು ಅಂದ್ಕೊಂಡಿದ್ದೀನಿ. ಇವತ್ತಿನವರೆಗೆ ಕೆಲಸಕ್ಕೆ ರಜೆ ಹಾಕಿದ್ದೆ. ನಾಳೆ ಹೋಗಬೇಕು’ ಎಂದ ಆತನಿಗೆ ಸಿಕ್ಕ ಉತ್ತರವೇನು ಗೊತ್ತೇ ? “ನೀನೇ ನನ್ನ ಫಿಲ್ಮ್ ಹೀರೋ. ನಾಳೆ ಬೆಳಗ್ಗೆ ಮುಹೂರ್ತ ಇದೆ. ಬಂದ್ಬಿಡು’ ಎಂದವರೇ ಮೆಟ್ಟಿಲೇರಿ ಕಾರ್ನಾಡರ ಬಳಿ ಬಂದರು ಅರಸ್.

ಆಮಂತ್ರಣ ಪತ್ರ ನೀಡಿದ ಬಳಿಕ, “ಆ ಹುಡುಗ (ಅನಂತ್ ನಾಗರಕಟ್ಟೆ) ಹೇಗೆ?’ ಎಂದು ಕೇಳಿದರು ಅರಸ್ ಕಾರ್ನಾಡರ ಬಳಿ. ಅದಕ್ಕೆ, “ಅವಕಾಶ ಕೊಡಿ, ಕೊಡಿ ಅಂತಾ ಸುತ್ತಾಡ್ತಿದ್ದಾನೆ’ ಎಂದರಂತೆ. “ನನ್ನ ಚಿತ್ರಕ್ಕೆ ಅವನನ್ನೇ ಹೀರೋ ಮಾಡ್ತಿದ್ದೀನಿ ಎಂದಾಗ ಕಾರ್ನಾಡರು, “ನಿಮಗೇನ್ರಿ ತಲೆಗಿಲೆ ಕೆಟ್ಟಿದೆಯೇನ್ರೀ? ಅವನ ಸಾಮರ್ಥ್ಯ ಏನೂ ತಿಳ್ಕೊಳ್ಳದೇ ಯಾಕೆ ಈ ನಿರ್ಧಾರ ಕೈಗೊಂಡಿರಿ?’ ಎಂದು ಪ್ರಶ್ನಿಸಿದರಂತೆ. “ಇಲ್ಲ. ನಾನು ನಿರ್ಧರಿಸಿದ್ದೇನೆ. ಅವನತ್ರವೇ ಪಾತ್ರ ಮಾಡಿಸ್ತೇನೆ’ ಎಂದು ಉತ್ತರಕ್ಕೂ ಕಾಯದೇ ಕೆಳಗಿಳಿದು ಬಂದರಂತೆ ಅರಸ್.

ಹೇಗೋ ಹೊಸ ಹೀರೋ ಸೆಲೆಕ್ಟ್ ಆಗಿದ್ದ. ಆದರೆ ಹಳೆ ಹೀರೋ ಎದುರು ಸ್ವತಃ ನಿರ್ದೇಶಕರೇ ವಿಲನ್ ಆಗಬೇಕಿತ್ತು. ಕಾರು ಹತ್ತಿದ ಅರಸ್, ಮಂಡ್ಯದವರೆಗೂ ಏನೂ ಹೇಳಲಿಲ್ಲ. ಒಳಗೆ ಒಂದು ರೀತಿಯ ಭಯ. “ಈತನೇ ಹೀರೋ ಎಂದು ಇಷ್ಟು ದಿನ ಹೇಳಿದ್ದೆ. ಒಂದಿಷ್ಟು ಸುತ್ತಾಡಿದ್ದ. ನಾಳೆಯೇ ಮುಹೂರ್ತ, ಈಗ ನೀನಲ್ಲ, ಬೇರೆಯವನು ಎಂದರೆ ಹೇಗಾದೀತು?’ ಎಂಬುದು ಅವರೊಳಗಿನ ತುಮುಲಕ್ಕೆ ಕಾರಣ.

ಮಂಡ್ಯದ ಸಂಜಯ ಟಾಕೀಸಿನ ಹತ್ತಿರ ಕಾರು ಕ್ಷಣಕಾಲ ನಿಂತಾಗ ಹೊಸ ನಿರ್ಧಾರವನ್ನು ಪ್ರಕಟಿಸಿ ಬಿಟ್ಟರು. ಹೀರೋ ಏನೂ ಹೇಳದೇ ಕಾರು ಓಡಿಸುತ್ತಿದ್ದ. ಆದರೆ ಅರಸರ ಪತ್ನಿ, ತಮ್ಮ ಪತಿಯನ್ನು ತರಾಟೆಗೆ ತೆಗೆದುಕೊಳ್ಳಲು ಮರೆಯಲಿಲ್ಲವಂತೆ. 

ಅನಂತನಾಗ್ ಅಷ್ಟೊಂದು ಇಂಪ್ರೆಸ್ ಮಾಡಿದ್ರಾ, ಹೇಗೆ ಕಾಣ್ತಾ ಇದ್ರು ಅಂತಾ ಅರಸರನ್ನು ಕೇಳಿದ್ದಕ್ಕೆ, “ಜುಟ್ಟು ಬಿಟ್ಟಿದ್ದ. ಹುಮ್ಮಸ್ಸು ಪುಟಿಯುತ್ತಿತ್ತು. ಮತ್ತೆ ಮತ್ತೆ ನೋಡಬೇಕೆನಿಸುತ್ತಿತ್ತು. ಅವನನ್ನು ನೋಡಿದ ಕೂಡಲೇ ಯಾಕೋ ಇಷ್ಟವಾದ. ನನ್ನ ಪಾತ್ರಕ್ಕೆ ಯೋಗ್ಯ ಅನಿಸಿತು, ಆಯ್ಕೆ ಮಾಡಿ ಬಿಟ್ಟೆ’ ಎಂದರು. 

ಸಂಕಲ್ಪ ನನಗೆ ಅತ್ಯಂತ ಖುಷಿ ಕೊಟ್ಟ ಚಿತ್ರ. ಅಧ್ಯಯನ ಮಾಡಬಹುದಾದದ್ದು.

ತಮ್ಮೊಳಗೆ ಸಿನಿಮಾ ಕಂಡು ಉಳಿದವರಿಗೆ ತೋರಿಸುತ್ತಿದ್ದರು !

with one comment

ಹುಣಸೂರು ಕೃಷ್ಣಮೂರ್ತಿ ಅದ್ವಿತೀಯ ಪ್ರತಿಭಾವಂತರು. ಸಿನಿಮಾದಲ್ಲಿ ತಾಂತ್ರಿಕವಾಗಿ ಬಹಳ ಪ್ರವೀಣರು. ಆ ಸಂಖ್ಯೆ ತೀರಾ ಕಡಿಮೆ. ಅವರೆಂದೂ ಬರಿಯ ನಿರ್ದೇಶಕರಲ್ಲ ; ತಂತ್ರಜ್ಞರು. ಅವರು ನಿರ್ದೇಶಿಸಿದ “ಸತ್ಯ ಹರಿಶ್ಚಂದ್ರ’ ಇದುವರೆಗೆ ಮೂರು ಬಾರಿ ತೆರೆ ಕಂಡಿದೆ. 

ಮೊದಲಿಗೆ ೧೯೬೫ ರಲ್ಲಿ. ಇದನ್ನು ನಿರ್ಮಿಸಿದ್ದು ವಿಜಯ್ ಪ್ರೊಡಕ್ಷನ್ಸ್. ಇದಕ್ಕೆ ಸಂಗೀತ ಒದಗಿಸಿದವರು ಪಿ.ಎಂ.ರಾವ್, ಛಾಯಾಗ್ರಹಣ-ಮಾಧವ್ ಬುಲ್‌ಬುಲೆ. ನಟಿಸಿದವರು ಡಾ. ರಾಜಕುಮಾರ್, ಪಂಡರಿಬಾಯಿ, ಬಾಲಕೃಷ್ಣ, ಉದಯ್‌ಕುಮಾರ್, ನರಸಿಂಹರಾಜು ಮತ್ತಿತರರು. ಆಗ ಅದು ಕಪ್ಪು ಬಿಳುಪಿನಲ್ಲಿತ್ತು. 

ಕಪ್ಪೂ ಸಹ ಒಂದು ಬಣ್ಣವಾಗಿದ್ದರೂ, ತಾಂತ್ರಿಕವಾಗಿ “ವರ್ಣ’ ದ ಗುಂಪಿಗೆ ಸೇರಿಸುವುದಿಲ್ಲ. ಆಗ ಮಾಡಿದ್ದು ೩೫ ಎಂ.ಎಂ. ನಲ್ಲಿ. ಅಂದರೆ ಅದಕ್ಕೆ ಅಕಾಡೆಮಿ ಫ್ರೇಮ್ ಎನ್ನುತ್ತಾರೆ. ಸಿನಿಮಾ ಬಿಡುಗಡೆಯಾಯಿತು, ಅತ್ಯಂತ ಅದ್ಭುತ ಯಶಸ್ಸು ಕಂಡಿತು.
 
ನಂತರ ಮತ್ತೊಮ್ಮೆ ಅದನ್ನು ಸಿಂಗಲ್ ಕಲರ್ (ಬ್ರೌನಿಶ್) ಗೆ ವರ್ಗಾಯಿಸಲಾಯಿತು. ಆಗಲೂ ಅದು ಆ ಹೊತ್ತಿನಲ್ಲಿ ಬಿಡುಗಡೆಯಾದ ಹೊಸ ಸಿನಿಮಾಗಳಿಗಿಂತಲೂ ಹೆಚ್ಚು ಹಣ ಮಾಡಿತು. ಮೂರನೇ ಬಾರಿ ೨೦೦೮ ರಲ್ಲಿ ಸಂಪೂರ್ಣ ವರ್ಣರಂಜಿತಗೊಂಡಿತು. ಆದರೆ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ. ಅದಕ್ಕೆ ಕಾರಣವೇನು ? 
ನನಗೆ ಅನ್ನಿಸುವುದು ತಾಂತ್ರಿಕವಾಗಿ ಕೃಷ್ಣಮೂರ್ತಿಯವರು ಹೊಂದಿದ್ದ ಲೆಕ್ಕಾಚಾರ ಈಗಿನವರಿಗೆ ಅರ್ಥವಾಗಲಿಲ್ಲ. ನಾವು ಸಿನಿಮಾಸ್ಕೋಪ್‌ಗೆ ಪುನರ್ ರೂಪಿಸುವಾಗ ಅಕಾಡೆಮಿ ಫ್ರೇಮ್‌ಗಳನ್ನು ಸಂಕಲಿಸ(ಎಡಿಟ್)ಲಾಯಿತು. ಅಸಲಿ ಫ್ರೇಮ್‌ನಲ್ಲಿ ಇದ್ದ ಅಂದ ನಾಶವಾಯಿತು. ಚಿತ್ರ ಬಣ್ಣ ಬಣ್ಣವಾಗಿ ರೂಪುಗೊಂಡಿತೇನೋ ನಿಜ, ಅದು ಕುಬ್ಜಗೊಂಡಿತು. ಫ್ರೇಮ್‌ನ ಒಂದಷ್ಟು ಭಾಗ (ಮೇಲೆ-ಕೆಳಗೆ) ಕತ್ತರಿಸಿದಂತಾಯಿತು. ಚಿತ್ರ ಸಿನಿಮಾಸ್ಕೋಪ್ ಗೆ ಅಳವಡಿಸಿದರೂ ಮೊದಲಿನ ರಸಾನುಭವ ಕೊಡಲಿಲ್ಲ. 
ಸದಾ ತಾಂತ್ರಿಕವಾಗಿ ಮಾಸ್ಟರ್‍ಸ್ ಆದವರು ಪ್ರತಿಯೊಂದನ್ನೂ ತೂಗಿ ಅಳೆದು, ಲೆಕ್ಕಾಚಾರದಿಂದ ಕೈಗೊಂಡಿರುತ್ತಾರೆ. ನಮಗೆ ಮೊದಲು ಅದರ ಸೂತ್ರ ಅರಿವಾಗಬೇಕು. ಪ್ರತಿ ಶಾಟ್ (ಚಿತ್ರಿಕೆ)ಗಳಲ್ಲೂ ಜೀವಂತಿಕೆ ತುಂಬುತ್ತಾ ರೂಪಿಸುತ್ತಿದ್ದ ಹುಣಸೂರು ಕೃಷ್ಣಮೂರ್ತಿಯವರ ಕುಸುರಿತನವನ್ನು ಯಾರೂ ಕಟ್ಟಿಕೊಡಲಾರರು. ಇದನ್ನು ಅರಿಯುವಲ್ಲಿ ಸೋತದ್ದರಿಂದಲೇ ವರ್ಣರಂಜಿತವಾಗಿ ಬಂದ ಹರಿಶ್ಚಂದ್ರ ಕಪ್ಪು ಬಿಳುಪಿನ ಸುಖವನ್ನು ಕೊಡಲಿಲ್ಲ. 
ಯಾವಾಗಲೂ ಮಾಸ್ಟರ್‍ಸ್ ಎನ್ನುವವರು ತಮ್ಮ ಸೃಷ್ಟಿಗಳನ್ನು ಬರಿದೇ ರೂಪಿಸಿರುವುದಿಲ್ಲ. ತಮ್ಮ ಸಾಮರ್ಥ್ಯವನ್ನು ಶಕ್ತಿಯಾಗಿಸಿರುತ್ತಾರೆ. ಆದ್ದರಿಂದಲೇ ಅದೊಂದು ಸೃಜನಶೀಲ ಸಾಧ್ಯತೆಯಾಗಿ ರೂಪುಗೊಂಡಿರುತ್ತದೆ. ಬರಿದೇ ತಾಂತ್ರಿಕ ಅಂಶಗಳಿಂದ ನೋಡುವುದಕ್ಕಿಂತಲೂ ಆ ಸೃಜನಶೀಲ ಪ್ರಯತ್ನದ ಪರಿಣಾಮದ ಸಾಧ್ಯತೆ ಹಾಗೂ ಸೃಷ್ಟಿಯ ಹಿಂದಿನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಒಂದು ಬಗೆಯಲ್ಲಿ “ಮಂತ್ರಶಕ್ತಿ’ ಎಂದೂ ಕರೆಯಬಹುದು. ಅದನ್ನು ಪುನರ್ ರೂಪಿಸುವಾಗ ಆ ಶಕ್ತಿ ಕಳೆದುಕೊಂಡು ಪೇಲವವಾಗುವುದೇ ಹೆಚ್ಚು. 
ಹುಣಸೂರು ಕೃಷ್ಣಮೂರ್ತಿ ಸೀನ್, ಸ್ಕ್ರಿಪ್ಟ್ ಅಂತಾ ಕಂತೆ ಕಂತೇ ಚಿತ್ರೀಕರಣ ಸ್ಥಳಕ್ಕೆ ಏನೂ ತರುತ್ತಿರಲಿಲ್ಲ. ಒಂದು ಹಾಳೆಯನ್ನು ಹನ್ನೆರಡು ಭಾಗವಾಗಿ ಮಾಡಿಕೊಂಡು, ಒಂದೊಂದರಲ್ಲಿ ಆ ದೃಶ್ಯ ಬರೆದಿಟ್ಟುಕೊಳ್ಳುತ್ತಿದ್ದರು. ಸ್ಥಳದಲ್ಲೇ ನಟರಿಗೆ ಹಾಗೂ ತಾಂತ್ರಿಕ ವರ್ಗದವರಿಗೆ ದೃಶ್ಯ ಕುರಿತು ವಿವರಿಸುತ್ತಿದ್ದರು. ಆ ದೃಶ್ಯದ ಎಲ್ಲ ಶಾಟ್‌ಗಳೂ (ಒಂದು ದೃಶ್ಯಕ್ಕೆ ಹಲವು ಶಾಟ್‌ಗಳಿರುತ್ತವೆ. ಅವೆಲ್ಲವನ್ನೂ ಬರೆದಿಟ್ಟುಕೊಳ್ಳುತ್ತಿರಲಿಲ್ಲ. ಬರೀ ದೃಶ್ಯ ಮಾತ್ರ) ಮುಗಿದ ಮೇಲೆ ಮತ್ತೊಂದು ಜೇಬಿಗೆ ಆ ಚೀಟಿಯನ್ನು ಹಾಕಿಕೊಳ್ಳುತ್ತಿದ್ದರು. 
ಇಷ್ಟೇ ಅಲ್ಲ. ಒಂದು ಚಿತ್ರದ ಕೊನೆ ಹೀಗೇ ಇರಬೇಕು…ಬರಬೇಕು…ಬಂದೇ ಬರುತ್ತೆ ಎನ್ನುವ ಖಚಿತ ವಿಶ್ವಾಸದ ವ್ಯಕ್ತಿ. ಅದಕ್ಕೆ ಅವರ ಕರಾರುವಾಕ್ ಲೆಕ್ಕಾಚಾರವೇ ಕಾರಣ. ಒಂದು ದೃಶ್ಯ ಇಷ್ಟೇ ನಿಮಿಷ, ಇಷ್ಟೇ ಸೆಕೆಂಡು ಎನ್ನುವಷ್ಟು ಖಚಿತತೆ. ಚಿತ್ರಭಾಷೆಯಲ್ಲಿ ಇಷ್ಟೇ ಫ್ರೇಮ್, ಇಷ್ಟೇ ಅಡಿಗಳಲ್ಲೇ ಪೂರ್ಣಗೊಳ್ಳಬೇಕು ಎಂಬ ಸ್ಪಷ್ಟತೆ. ಅದು ಉಳಿದ ಸಿಬ್ಬಂದಿಗೆ ಒಂದು ರೀತಿಯ ಆದೇಶವಿದ್ದಂತೆ. ಹಾಗಾಗಿಯೇ ಸಿನಿಮಾ ತಾಂತ್ರಿಕವಾಗಿ ರೂಪುಗೊಳ್ಳುವ ಮೊದಲೇ ಅವರ ಮನಸ್ಸಿನೊಳಗೆ ಸಿದ್ಧವಾಗಿರುತ್ತಿತ್ತು. ಎಷ್ಟು ವಿಚಿತ್ರ ? ತಮ್ಮೊಳಗೆ ಮೊದಲುಸಿನಿಮಾ ಕಂಡುಕೊಂಡು ಉಳಿದವರಿಗೆ ನಂತರ ಸಿನಿಮಾ ತೋರಿಸುತ್ತಿದ್ದರು !
ಒಂದು ಸನ್ನಿವೇಶ. 
ಹುಣಸೂರು ಕೃಷ್ಣಮೂರ್ತಿಯವರು ಚಿತ್ರರಂಗದಲ್ಲಿ  ”ಅಪ್ಪಾಜಿ’ ಎಂದೇ ಪ್ರಸಿದ್ಧ. ಎಲ್ಲರೂ ಕರೆಯುತ್ತಿದ್ದುದು ಹಾಗೆಯೇ. ಮೇರು ಕಲಾವಿದರಿಂದ ಹಿಡಿದು ಎಲ್ಲರೂ ಕರೆಯುತ್ತಿದುದು ಹಾಗೆಯೇ.  ಒಂದು ಸಾಮಾಜಿಕ ಸಿನಿಮಾದ ಚಿತ್ರೀಕರಣ. ಯಾವುದೋ ಕಾರಣಕ್ಕೆ ಆ ಚಿತ್ರ ಬಿಡುಗಡೆಯಾಗಲಿಲ್ಲ. 
ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಲವು ಫ್ಲೋರ್‌ಗಳಿದ್ದವು. ಒಂದೊಂದರಲ್ಲಿ ಒಂದೊಂದು ಚಿತ್ರದ ಚಿತ್ರೀಕರಣ. ಅದರಂತೆಯೇ ಅಪ್ಪಾಜಿಯವರು ಬೆಳಗ್ಗೆ ಬಂದವರೇ ಸಿದ್ಧರಾಗುವಂತೆ ಸಿಬ್ಬಂದಿಗೆ ಸೂಚಿಸಿದರು. ಕಲ್ಪನಾ ಆ ಸನ್ನಿವೇಶದಲ್ಲಿ ನಟಿಸಬೇಕಿತ್ತು. ಎಲ್ಲರೂ ಸಿದ್ಧರಾದರೂ ಕಲ್ಪನಾ ಗ್ರೀನ್ ರೂಂನಿಂದ ಬರಲೇ ಇಲ್ಲ. ಅವರನ್ನು ಕರೆಯಲು ಹೋದವ ಕೆಲ ಕ್ಷಣಗಳಲ್ಲಿ ವಾಪಸು ಬಂದು, “ಈಗ ಬರ್‍ತಾರಂತೆ’ ಎಂದ. ಮತ್ತಷ್ಟು ಸಮಯ ಕಾದರು. ಮಧ್ಯಾಹ್ನ ಹನ್ನೆರಡಾದರೂ ಒಂದೇ ಒಂದು ದೃಶ್ಯ ಚಿತ್ರೀಕರಣವಾಗಿರಲಿಲ್ಲ. ಸಾಮಾನ್ಯವಾಗಿ, ಆಗ ಇದ್ದ ಅವಕಾಶ ಕಡಿಮೆ. ದಿನಕ್ಕೆ ಆರು ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದರು. ಜತೆಗೆ ವೆಚ್ಚ ಮಿತಿಯಿಂದ ಕಾಲಹರಣ ಮಾಡುವಂತಿರಲಿಲ್ಲ.
ಮತ್ತೊಮ್ಮೆ ಕರೆ ಕಳುಹಿಸಿದರು ಅಪ್ಪಾಜಿ. “ತಲೆಗೆ ಎಣ್ಣೆ ಹಾಕಿದ್ದೇನೆ, ಸ್ನಾನ ಮಾಡಿಕೊಂಡು ಬರುತ್ತೇನೆ’ಎಂಬುದು ಕಲ್ಪನಾಳ ಉತ್ತರ. ಇಡೀ ಸಿಬ್ಬಂದಿಗೆ ಸಿಟ್ಟೋ ಸಿಟ್ಟು. ಆದರೆ ಅಪ್ಪಾಜಿ ಒಂದೂ ಮಾತು ಆಡಲಿಲ್ಲ.
ಸ್ಟುಡಿಯೋದ ಅಂಗಳದ ಅರಳಿಕಟ್ಟೆಯಲ್ಲಿ ಸದಾ ಒಂದಷ್ಟು ಮಂದಿ ಕುಳಿತು ಹರಟುತ್ತಿದ್ದುದು ಸಾಮಾನ್ಯ ದೃಶ್ಯ. ಅವರೆಲ್ಲಾ ಬೇರೆ ಬೇರೆ ಚಿತ್ರದ ಚಿತ್ರೀಕರಣದಲ್ಲಿ ತಮ್ಮ ಪಾಳಿಗೆ ಕಾಯುತ್ತಿದ್ದವರು. ಅವರ ಕಿವಿಗೂ ಆ ಸಮಾಚಾರ ಬಿದ್ದು, ಚರ್ಚೆಗೆ ಗ್ರಾಸವಾಯಿತು. ಇಷ್ಟೊತ್ತಾದರೂ ಒಂದೂ ಸನ್ನಿವೇಶ ಚಿತ್ರೀಕರಿಸದಿರುವುದು, ಕಲ್ಪನಾ ಅವರು ಅಪ್ಪಾಜಿಯವರಿಗೆ ಕಾಯಿಸುತ್ತಿರುವುದು-ಎಲ್ಲವೂ ಕೇಳಿಸಿಕೊಂಡ ಮಂದಿ ಈಕೆಯದ್ದು ಉದ್ಧಟತನ ಎಂದು ನಿರ್ಧರಿಸಿಬಿಟ್ಟರು.
ಸರಿ, ಕೊನೆಗೂ ಕಲ್ಪನಾ ಚಿತ್ರೀಕರಣ ಸ್ಥಳಕ್ಕೆ ಬಂದರು. “ಆಯಿತು ಅಪ್ಪಾಜಿ, ನಾನು ಏನು ಮಾಡಬೇಕು?’ ಎಂದು ಕೇಳಿದರು. ಅದಕ್ಕೆ ಅಪ್ಪಾಜಿ, “ನೀನು ಇಲ್ಲಿ ನಿಂತಿರು. ಈಕೆ (ಸಹನಟಿ) ಬಂದು ಚಾಕುವಿನಲ್ಲಿ ತಿವಿದ ಕೂಡಲೇ ಕುಸಿದು ಬೀಳು’ ಎಂದು ವಿವರಿಸಿದರು. ಅದೇ ಸನ್ನಿವೇಶ. ಕೆಲವೇ ಕ್ಷಣಗಳಲ್ಲಿ ಚಿತ್ರಿಕೆ (ಶಾಟ್) ಓಕೆ ಆಯಿತು. ನಿರ್ದೇಶಕರು “ಪ್ಯಾಕಪ್’ ಎಂದರು. ಅಲ್ಲಿಗೆ ಆ ಚಿತ್ರದಲ್ಲಿ ಕಲ್ಪನಾ ಪಾತ್ರವೇ ಮುಗಿಯಿತು !
ವಾಸ್ತವವಾಗಿ ಕಲ್ಪನಾಳಿಗೆ ಹತ್ತಿರವಿದ್ದವರು ಹೇಳಿದ ಮಾಹಿತಿ. ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚರ್ಮ ಪೊರೆ (ಮೇಲ್ಪದರ) ಬಿಟ್ಟಂತಾಗುತ್ತಿತ್ತು.(ಹುರುಪು-ಗ್ರಾಮೀಣಭಾಷೆಯಲ್ಲಿ ಅದು ಉರುಪೆ). ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು  ಅಭಿನಯಿಸಬೇಕಾದ ಸನ್ನಿವೇಶಗಳೆಲ್ಲಾ ಬಹಳ ಹಿಂಸೆ. ಗ್ಲ್ಯಾಮರ್ ನಟಿಗೆ, ಇದರ ಬಗ್ಗೆ ದುಃಖವೂ ಇತ್ತು. ಎಷ್ಟೋ ಬಾರಿ ಅತ್ತಿದ್ದೂ ಉಂಟು. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ. 
ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಅಂದೂ ಸಹ ಅದನ್ನು ಡ್ರೆಸಪ್ ಮಾಡಿಕೊಳ್ಳುವುದಕ್ಕೇ ಬಹಳ ಸಮಯ ತಗುಲಿತ್ತು. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್‍ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯ…ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು. 

ಹುಣಸೂರು ಕೃಷ್ಣಮೂರ್ತಿ ಅದ್ವಿತೀಯ ಪ್ರತಿಭಾವಂತರು. ಸಿನಿಮಾದಲ್ಲಿ ತಾಂತ್ರಿಕವಾಗಿ ಬಹಳ ಪ್ರವೀಣರು. ಆ ಸಂಖ್ಯೆ ತೀರಾ ಕಡಿಮೆ. ಅವರೆಂದೂ ಬರಿಯ ನಿರ್ದೇಶಕರಲ್ಲ ; ತಂತ್ರಜ್ಞರು. ಅವರು ನಿರ್ದೇಶಿಸಿದ “ಸತ್ಯ ಹರಿಶ್ಚಂದ್ರ’ ಇದುವರೆಗೆ ಮೂರು ಬಾರಿ ತೆರೆ ಕಂಡಿದೆ. 

satya-harischandra

ಮೊದಲಿಗೆ 1965 ರಲ್ಲಿ. ಇದನ್ನು ನಿರ್ಮಿಸಿದ್ದು ವಿಜಯ್ ಪ್ರೊಡಕ್ಷನ್ಸ್. ಇದಕ್ಕೆ ಸಂಗೀತ ಒದಗಿಸಿದವರು ಪಿ.ಎಂ.ರಾವ್, ಛಾಯಾಗ್ರಹಣ-ಮಾಧವ್ ಬುಲ್‌ಬುಲೆ. ನಟಿಸಿದವರು ಡಾ. ರಾಜಕುಮಾರ್, ಪಂಡರಿಬಾಯಿ, ಬಾಲಕೃಷ್ಣ, ಉದಯ್‌ಕುಮಾರ್, ನರಸಿಂಹರಾಜು ಮತ್ತಿತರರು. ಆಗ ಅದು ಕಪ್ಪು ಬಿಳುಪಿನಲ್ಲಿತ್ತು. 

ಕಪ್ಪೂ ಸಹ ಒಂದು ಬಣ್ಣವಾಗಿದ್ದರೂ, ತಾಂತ್ರಿಕವಾಗಿ “ವರ್ಣ’ ದ ಗುಂಪಿಗೆ ಸೇರಿಸುವುದಿಲ್ಲ. ಆಗ ಮಾಡಿದ್ದು 35 ಎಂ.ಎಂ. ನಲ್ಲಿ. ಅಂದರೆ ಅದಕ್ಕೆ ಅಕಾಡೆಮಿ ಫ್ರೇಮ್ ಎನ್ನುತ್ತಾರೆ. ಸಿನಿಮಾ ಬಿಡುಗಡೆಯಾಯಿತು, ಅತ್ಯಂತ ಅದ್ಭುತ ಯಶಸ್ಸು ಕಂಡಿತು.

ನಂತರ ಮತ್ತೊಮ್ಮೆ ಅದನ್ನು ಸಿಂಗಲ್ ಕಲರ್ (ಬ್ರೌನಿಶ್) ಗೆ ವರ್ಗಾಯಿಸಲಾಯಿತು. ಆಗಲೂ ಅದು ಆ ಹೊತ್ತಿನಲ್ಲಿ ಬಿಡುಗಡೆಯಾದ ಹೊಸ ಸಿನಿಮಾಗಳಿಗಿಂತಲೂ ಹೆಚ್ಚು ಹಣ ಮಾಡಿತು. ಮೂರನೇ ಬಾರಿ ೨೦೦೮ ರಲ್ಲಿ ಸಂಪೂರ್ಣ ವರ್ಣರಂಜಿತಗೊಂಡಿತು. ಆದರೆ ನಿರೀಕ್ಷಿಸಿದಷ್ಟು ಯಶಸ್ವಿಯಾಗಲಿಲ್ಲ. ಅದಕ್ಕೆ ಕಾರಣ? 

ಹುಣಸೂರು ಕೃಷ್ಣಮೂರ್ತಿ

ಹುಣಸೂರು ಕೃಷ್ಣಮೂರ್ತಿ

ನನಗೆ ಅನ್ನಿಸುವುದು ತಾಂತ್ರಿಕವಾಗಿ ಕೃಷ್ಣಮೂರ್ತಿಯವರು ಹೊಂದಿದ್ದ ಲೆಕ್ಕಾಚಾರ ಈಗಿನವರಿಗೆ ಅರ್ಥವಾಗಲಿಲ್ಲ. ನಾವು ಸಿನಿಮಾಸ್ಕೋಪ್‌ಗೆ ಪುನರ್ ರೂಪಿಸುವಾಗ ಅಕಾಡೆಮಿ ಫ್ರೇಮ್‌ಗಳನ್ನು ಸಂಕಲಿಸ(ಎಡಿಟ್)ಲಾಯಿತು. ಅಸಲಿ ಫ್ರೇಮ್‌ನಲ್ಲಿ ಇದ್ದ ಅಂದ ನಾಶವಾಯಿತು. ಚಿತ್ರ ಬಣ್ಣ ಬಣ್ಣವಾಗಿ ರೂಪುಗೊಂಡಿತೇನೋ ನಿಜ, ಅದು ಕುಬ್ಜಗೊಂಡಿತು. ಫ್ರೇಮ್‌ನ ಒಂದಷ್ಟು ಭಾಗ (ಮೇಲೆ-ಕೆಳಗೆ) ಕತ್ತರಿಸಿದಂತಾಯಿತು. ಚಿತ್ರ ಸಿನಿಮಾಸ್ಕೋಪ್ ಗೆ ಅಳವಡಿಸಿದರೂ ಮೊದಲಿನ ರಸಾನುಭವ ಕೊಡಲಿಲ್ಲ. 

ಸದಾ ತಾಂತ್ರಿಕವಾಗಿ ಮಾಸ್ಟರ್‍ಸ್ ಆದವರು ಪ್ರತಿಯೊಂದನ್ನೂ ತೂಗಿ ಅಳೆದು, ಲೆಕ್ಕಾಚಾರದಿಂದ ಕೈಗೊಂಡಿರುತ್ತಾರೆ. ನಮಗೆ ಮೊದಲು ಅದರ ಸೂತ್ರ ಅರಿವಾಗಬೇಕು. ಪ್ರತಿ ಶಾಟ್ (ಚಿತ್ರಿಕೆ)ಗಳಲ್ಲೂ ಜೀವಂತಿಕೆ ತುಂಬುತ್ತಾ ರೂಪಿಸುತ್ತಿದ್ದ ಹುಣಸೂರು ಕೃಷ್ಣಮೂರ್ತಿಯವರ ಕುಸುರಿತನವನ್ನು ಯಾರೂ ಕಟ್ಟಿಕೊಡಲಾರರು. ಇದನ್ನು ಅರಿಯುವಲ್ಲಿ ಸೋತದ್ದರಿಂದಲೇ ವರ್ಣರಂಜಿತವಾಗಿ ಬಂದ ಹರಿಶ್ಚಂದ್ರ ಕಪ್ಪು ಬಿಳುಪಿನ ಸುಖವನ್ನು ಕೊಡಲಿಲ್ಲ. 

ಯಾವಾಗಲೂ ಮಾಸ್ಟರ್‍ಸ್ ಎನ್ನುವವರು ತಮ್ಮ ಸೃಷ್ಟಿಗಳನ್ನು ಬರಿದೇ ರೂಪಿಸಿರುವುದಿಲ್ಲ. ತಮ್ಮ ಸಾಮರ್ಥ್ಯವನ್ನು ಶಕ್ತಿಯಾಗಿಸಿರುತ್ತಾರೆ. ಆದ್ದರಿಂದಲೇ ಅದೊಂದು ಸೃಜನಶೀಲ ಸಾಧ್ಯತೆಯಾಗಿ ರೂಪುಗೊಂಡಿರುತ್ತದೆ. ಬರಿದೇ ತಾಂತ್ರಿಕ ಅಂಶಗಳಿಂದ ನೋಡುವುದಕ್ಕಿಂತಲೂ ಆ ಸೃಜನಶೀಲ ಪ್ರಯತ್ನದ ಪರಿಣಾಮದ ಸಾಧ್ಯತೆ ಹಾಗೂ ಸೃಷ್ಟಿಯ ಹಿಂದಿನ ಸಾಮರ್ಥ್ಯವನ್ನು ಅರ್ಥ ಮಾಡಿಕೊಳ್ಳಬೇಕು. ಅದನ್ನು ಒಂದು ಬಗೆಯಲ್ಲಿ “ಮಂತ್ರಶಕ್ತಿ’ ಎಂದೂ ಕರೆಯಬಹುದು. ಅದನ್ನು ಪುನರ್ ರೂಪಿಸುವಾಗ ಆ ಶಕ್ತಿ ಕಳೆದುಕೊಂಡು ಪೇಲವವಾಗುವುದೇ ಹೆಚ್ಚು. 

ಹುಣಸೂರು ಕೃಷ್ಣಮೂರ್ತಿ ಸೀನ್, ಸ್ಕ್ರಿಪ್ಟ್ ಅಂತಾ ಕಂತೆ ಕಂತೇ ಚಿತ್ರೀಕರಣ ಸ್ಥಳಕ್ಕೆ ಏನೂ ತರುತ್ತಿರಲಿಲ್ಲ. ಒಂದು ಹಾಳೆಯನ್ನು ಹನ್ನೆರಡು ಭಾಗವಾಗಿ ಮಾಡಿಕೊಂಡು, ಒಂದೊಂದರಲ್ಲಿ ಆ ದೃಶ್ಯ ಬರೆದಿಟ್ಟುಕೊಳ್ಳುತ್ತಿದ್ದರು. ಸ್ಥಳದಲ್ಲೇ ನಟರಿಗೆ ಹಾಗೂ ತಾಂತ್ರಿಕ ವರ್ಗದವರಿಗೆ ದೃಶ್ಯ ಕುರಿತು ವಿವರಿಸುತ್ತಿದ್ದರು. ಆ ದೃಶ್ಯದ ಎಲ್ಲ ಶಾಟ್‌ಗಳೂ (ಒಂದು ದೃಶ್ಯಕ್ಕೆ ಹಲವು ಶಾಟ್‌ಗಳಿರುತ್ತವೆ. ಅವೆಲ್ಲವನ್ನೂ ಬರೆದಿಟ್ಟುಕೊಳ್ಳುತ್ತಿರಲಿಲ್ಲ. ಬರೀ ದೃಶ್ಯ ಮಾತ್ರ) ಮುಗಿದ ಮೇಲೆ ಮತ್ತೊಂದು ಜೇಬಿಗೆ ಆ ಚೀಟಿಯನ್ನು ಹಾಕಿಕೊಳ್ಳುತ್ತಿದ್ದರು. 

ಇಷ್ಟೇ ಅಲ್ಲ. ಒಂದು ಚಿತ್ರದ ಕೊನೆ ಹೀಗೇ ಇರಬೇಕು…ಬರಬೇಕು…ಬಂದೇ ಬರುತ್ತೆ ಎನ್ನುವ ಖಚಿತ ವಿಶ್ವಾಸದ ವ್ಯಕ್ತಿ. ಅದಕ್ಕೆ ಅವರ ಕರಾರುವಾಕ್ ಲೆಕ್ಕಾಚಾರವೇ ಕಾರಣ. ಒಂದು ದೃಶ್ಯ ಇಷ್ಟೇ ನಿಮಿಷ, ಇಷ್ಟೇ ಸೆಕೆಂಡು ಎನ್ನುವಷ್ಟು ಖಚಿತತೆ. ಚಿತ್ರಭಾಷೆಯಲ್ಲಿ ಇಷ್ಟೇ ಫ್ರೇಮ್, ಇಷ್ಟೇ ಅಡಿಗಳಲ್ಲೇ ಪೂರ್ಣಗೊಳ್ಳಬೇಕು ಎಂಬ ಸ್ಪಷ್ಟತೆ. ಅದು ಉಳಿದ ಸಿಬ್ಬಂದಿಗೆ ಒಂದು ರೀತಿಯ ಆದೇಶವಿದ್ದಂತೆ. ಹಾಗಾಗಿಯೇ ಸಿನಿಮಾ ತಾಂತ್ರಿಕವಾಗಿ ರೂಪುಗೊಳ್ಳುವ ಮೊದಲೇ ಅವರ ಮನಸ್ಸಿನೊಳಗೆ ಸಿದ್ಧವಾಗಿರುತ್ತಿತ್ತು. ಎಷ್ಟು ವಿಚಿತ್ರ ? ತಮ್ಮೊಳಗೆ ಮೊದಲುಸಿನಿಮಾ ಕಂಡುಕೊಂಡು ಉಳಿದವರಿಗೆ ನಂತರ ಸಿನಿಮಾ ತೋರಿಸುತ್ತಿದ್ದರು !

ಒಂದು ಸನ್ನಿವೇಶ. 

ಹುಣಸೂರು ಕೃಷ್ಣಮೂರ್ತಿಯವರು ಚಿತ್ರರಂಗದಲ್ಲಿ  ”ಅಪ್ಪಾಜಿ’ ಎಂದೇ ಪ್ರಸಿದ್ಧ. ಎಲ್ಲರೂ ಕರೆಯುತ್ತಿದ್ದುದು ಹಾಗೆಯೇ. ಮೇರು ಕಲಾವಿದರಿಂದ ಹಿಡಿದು ಎಲ್ಲರೂ ಕರೆಯುತ್ತಿದುದು ಹಾಗೆಯೇ.  ಒಂದು ಸಾಮಾಜಿಕ ಸಿನಿಮಾದ ಚಿತ್ರೀಕರಣ. ಯಾವುದೋ ಕಾರಣಕ್ಕೆ ಆ ಚಿತ್ರ ಬಿಡುಗಡೆಯಾಗಲಿಲ್ಲ. 

ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಹಲವು ಫ್ಲೋರ್‌ಗಳಿದ್ದವು. ಒಂದೊಂದರಲ್ಲಿ ಒಂದೊಂದು ಚಿತ್ರದ ಚಿತ್ರೀಕರಣ. ಅದರಂತೆಯೇ ಅಪ್ಪಾಜಿಯವರು ಬೆಳಗ್ಗೆ ಬಂದವರೇ ಸಿದ್ಧರಾಗುವಂತೆ ಸಿಬ್ಬಂದಿಗೆ ಸೂಚಿಸಿದರು. ಕಲ್ಪನಾ ಆ ಸನ್ನಿವೇಶದಲ್ಲಿ ನಟಿಸಬೇಕಿತ್ತು. ಎಲ್ಲರೂ ಸಿದ್ಧರಾದರೂ ಕಲ್ಪನಾ ಗ್ರೀನ್ ರೂಂನಿಂದ ಬರಲೇ ಇಲ್ಲ. ಅವರನ್ನು ಕರೆಯಲು ಹೋದವ ಕೆಲ ಕ್ಷಣಗಳಲ್ಲಿ ವಾಪಸು ಬಂದು, “ಈಗ ಬರ್‍ತಾರಂತೆ’ ಎಂದ. ಮತ್ತಷ್ಟು ಸಮಯ ಕಾದರು. ಮಧ್ಯಾಹ್ನ ಹನ್ನೆರಡಾದರೂ ಒಂದೇ ಒಂದು ದೃಶ್ಯ ಚಿತ್ರೀಕರಣವಾಗಿರಲಿಲ್ಲ. ಸಾಮಾನ್ಯವಾಗಿ, ಆಗ ಇದ್ದ ಅವಕಾಶ ಕಡಿಮೆ. ದಿನಕ್ಕೆ ಆರು ಸನ್ನಿವೇಶಗಳನ್ನು ಚಿತ್ರೀಕರಿಸುತ್ತಿದ್ದರು. ಜತೆಗೆ ವೆಚ್ಚ ಮಿತಿಯಿಂದ ಕಾಲಹರಣ ಮಾಡುವಂತಿರಲಿಲ್ಲ.

ಮತ್ತೊಮ್ಮೆ ಕರೆ ಕಳುಹಿಸಿದರು ಅಪ್ಪಾಜಿ. “ತಲೆಗೆ ಎಣ್ಣೆ ಹಾಕಿದ್ದೇನೆ, ಸ್ನಾನ ಮಾಡಿಕೊಂಡು ಬರುತ್ತೇನೆ’ಎಂಬುದು ಕಲ್ಪನಾಳ ಉತ್ತರ. ಇಡೀ ಸಿಬ್ಬಂದಿಗೆ ಸಿಟ್ಟೋ ಸಿಟ್ಟು. ಆದರೆ ಅಪ್ಪಾಜಿ ಒಂದೂ ಮಾತು ಆಡಲಿಲ್ಲ.

ಸ್ಟುಡಿಯೋದ ಅಂಗಳದ ಅರಳಿಕಟ್ಟೆಯಲ್ಲಿ ಸದಾ ಒಂದಷ್ಟು ಮಂದಿ ಕುಳಿತು ಹರಟುತ್ತಿದ್ದುದು ಸಾಮಾನ್ಯ ದೃಶ್ಯ. ಅವರೆಲ್ಲಾ ಬೇರೆ ಬೇರೆ ಚಿತ್ರದ ಚಿತ್ರೀಕರಣದಲ್ಲಿ ತಮ್ಮ ಪಾಳಿಗೆ ಕಾಯುತ್ತಿದ್ದವರು. ಅವರ ಕಿವಿಗೂ ಆ ಸಮಾಚಾರ ಬಿದ್ದು, ಚರ್ಚೆಗೆ ಗ್ರಾಸವಾಯಿತು. ಇಷ್ಟೊತ್ತಾದರೂ ಒಂದೂ ಸನ್ನಿವೇಶ ಚಿತ್ರೀಕರಿಸದಿರುವುದು, ಕಲ್ಪನಾ ಅವರು ಅಪ್ಪಾಜಿಯವರಿಗೆ ಕಾಯಿಸುತ್ತಿರುವುದು-ಎಲ್ಲವೂ ಕೇಳಿಸಿಕೊಂಡ ಮಂದಿ ಈಕೆಯದ್ದು ಉದ್ಧಟತನ ಎಂದು ನಿರ್ಧರಿಸಿಬಿಟ್ಟರು.

ಸರಿ, ಕೊನೆಗೂ ಕಲ್ಪನಾ ಚಿತ್ರೀಕರಣ ಸ್ಥಳಕ್ಕೆ ಬಂದರು. “ಆಯಿತು ಅಪ್ಪಾಜಿ, ನಾನು ಏನು ಮಾಡಬೇಕು?’ ಎಂದು ಕೇಳಿದರು. ಅದಕ್ಕೆ ಅಪ್ಪಾಜಿ, “ನೀನು ಇಲ್ಲಿ ನಿಂತಿರು. ಈಕೆ (ಸಹನಟಿ) ಬಂದು ಚಾಕುವಿನಲ್ಲಿ ತಿವಿದ ಕೂಡಲೇ ಕುಸಿದು ಬೀಳು’ ಎಂದು ವಿವರಿಸಿದರು. ಅದೇ ಸನ್ನಿವೇಶ. ಕೆಲವೇ ಕ್ಷಣಗಳಲ್ಲಿ ಚಿತ್ರಿಕೆ (ಶಾಟ್) ಓಕೆ ಆಯಿತು. ನಿರ್ದೇಶಕರು “ಪ್ಯಾಕಪ್’ ಎಂದರು. ಅಲ್ಲಿಗೆ ಆ ಚಿತ್ರದಲ್ಲಿ ಕಲ್ಪನಾ ಪಾತ್ರವೇ ಮುಗಿಯಿತು !

ವಾಸ್ತವವಾಗಿ ಕಲ್ಪನಾಳಿಗೆ ಹತ್ತಿರವಿದ್ದವರು ಹೇಳಿದ ಮಾಹಿತಿ. ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚರ್ಮ ಪೊರೆ (ಮೇಲ್ಪದರ) ಬಿಟ್ಟಂತಾಗುತ್ತಿತ್ತು.(ಹುರುಪು-ಗ್ರಾಮೀಣಭಾಷೆಯಲ್ಲಿ ಅದು ಉರುಪೆ). ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು  ಅಭಿನಯಿಸಬೇಕಾದ ಸನ್ನಿವೇಶಗಳೆಲ್ಲಾ ಬಹಳ ಹಿಂಸೆ. ಗ್ಲ್ಯಾಮರ್ ನಟಿಗೆ, ಇದರ ಬಗ್ಗೆ ದುಃಖವೂ ಇತ್ತು. ಎಷ್ಟೋ ಬಾರಿ ಅತ್ತಿದ್ದೂ ಉಂಟು. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ. 

ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಅಂದೂ ಸಹ ಅದನ್ನು ಡ್ರೆಸಪ್ ಮಾಡಿಕೊಳ್ಳುವುದಕ್ಕೇ ಬಹಳ ಸಮಯ ತಗುಲಿತ್ತು. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯ…ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು.