ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಖಜಾನೆ ಲೇಖನ’ Category

“ಸಿರಿವಂತ”ನಾದ ಕನ್ನಡ ಕುವರ !

with one comment

ಕನ್ನಡದ ಹಿರಿಯ ನಿರ್ದೇಶಕ ಎನ್ನುವುದಕ್ಕಿಂತಲೂ “ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ” ಹಾಡಿನ ರಚನಾಕಾರ ಎಂದರೆ ಸಿ. ವಿ. ಶಿವಶಂಕರ್ ಜನಕ್ಕೆ ಥಟ್ಟನೆ ನೆನಪಾಗುತ್ತಾರೆ. ಅವರು ನಿರ್ಮಿಸಿದ ಕನ್ನಡದ್ದೇ ಚಿತ್ರ “ಕನ್ನಡ ಕುವರ” ಹದಿನಾಲ್ಕು ವರ್ಷಗಳ ಹಿಂದೆ ಸಿದ್ಧವಾಗಿ ಈಗ ಬಿಡುಗಡೆ ಕಾಣುತ್ತಿದೆ. ಇಂಥ ಸಂದರ್ಭದಲ್ಲಿ ಮುರಳೀಧರ ಖಜಾನೆ ಅವರು ಬರೆದ ಲೇಖನವಿದು.

ಕನ್ನಡ ಚಲನಚಿತ್ರ ಜಗತ್ತಿನಲ್ಲಿ ಒಂದು ಪರಿಪೂರ್ಣವಾದ ಕನ್ನಡ ಚಲನಚಿತ್ರವನ್ನು ಬಿಡುಗಡೆ ಮಾಡುವುದೆಂದರೆ ದೊಡ್ಡ ಸಾಹಸದ ಸಂಗತಿ. ಅದರಲ್ಲೂ ಈ ವರ್ತಮಾನದಲ್ಲಂತೂ ಅಸಾಧ್ಯದ ಸಂಗತಿಯೆಂದೇ ಹೇಳಬಹುದು. ಕಾರಣವೆಂದರೆ, ಈ ಹೊತ್ತು ರೀಮೇಕ್ ಚಿತ್ರಗಳನ್ನು ಮಾಡಿ ರಾಜ್ಯ ಸರಕಾರ ನೀಡುವ ಸಬ್ಸಿಡಿಗಾಗಿ ಹೊಡೆದಾಡುತ್ತಿರುವ ಕಾಲ. ನನ್ನ ಮಾತಿನ ಅರ್ಥವನ್ನು ಇನ್ನಷ್ಟು ಸ್ಪಷ್ಟಗೊಳಿಸಿಕೊಳ್ಳಬೇಕಾದರೆ ನೀವು “ಸಿ.ವಿ. ಶಿವಶಂಕರ್’ ಅವರನ್ನೇ ಕೇಳಬೇಕು. ಅಂಥದೊಂದು ಸಾಹಸಕ್ಕೆ ಕೈ ಹಾಕಿ “ಕನ್ನಡ ಕುವರ’ ವನ್ನು ನಿರ್ಮಿಸಿ ಈ ಸಂತೆಯ ಮಧ್ಯೆ ಬಿಡುಗಡೆಗೊಳಿಸಲು “ಹದಿನಾಲ್ಕು ವರ್ಷ’ ಯೋಚನೆ ಮಾಡಿದರು. ಒಂದು ಬಗೆಯಲ್ಲಿ ವನವಾಸದಂತೆಯೇ.

ಏನೇ ಆಗಲೀ, 75 ವರ್ಷದ ಶಿವಶಂಕರ್ (ನಮ್ಮ ಕನ್ನಡ ಚಿತ್ರ ಜಗತ್ತಿಗೂ ಅಷ್ಟೇ ವರ್ಷ) ಕನ್ನಡದ ಮೇಲಿನ ಅತೀವ ಪ್ರೀತಿ ಹೊಂದಿದಂಥ ಮನುಷ್ಯ. ಒಬ್ಬ ಕನ್ನಡ ಶಿಕ್ಷಕನ ಸಂಕಷ್ಟವನ್ನು ಹೇಳುವ ಅವರ “ಕುವರ’ ಡಿಸೆಂಬರ್‌ನಲ್ಲಿ ವೀಕ್ಷರಿಗೆ ಲಭ್ಯವಾಗುತ್ತಿದ್ದಾನೆ ಎಂಬುದು ಹರ್ಷದ ಸಂಗತಿ. ಮೈಸೂರಿನ ಹಂಚಿಕೆದಾರರಿಗೆ ನಿಜವಾಗಲೂ ಧನ್ಯವಾದ ಹೇಳಬೇಕು. ಯಾಕೆಂದರೆ ಮೈಸೂರು, ಮಂಡ್ಯ, ಹಾಸನ ಮತ್ತು ಕೊಡಗು ಭಾಗಗಳಲ್ಲಿ ಸಿನಿಮಾ ಬಿಡುಗಡೆಗೆ ಒಪ್ಪಿದ್ದಾರೆ.

ಐವತ್ತೈದು ವರ್ಷಗಳಲ್ಲಿ ಶಿವಶಂಕರ್, ಸುಮಾರು 15 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 60 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ, ಹಾಡು, ಸಂಭಾಷಣೆ ನೀಡಿದ್ದಾರೆ. ಜತೆಗೆ ತಾವೇ ಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. “ಮನೆಕಟ್ಟಿ ನೋಡು’, “ಮಹಡಿಯ ಮನೆ’, “ಮಹಾತಪಸ್ವಿ’, “ನಮ್ ಊರು’ ಅವರ ಚಿತ್ರಗಳು. ನಂತರ ವರನಟ ಡಾ. ರಾಜ್ ಕುಮಾರ್ ರೊಂದಿಗೆ “ಭಕ್ತ ಕನಕದಾಸ’, “ಸಂತ ತುಕಾರಾಂ’ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಕೂಡ. ರಂಗಭೂಮಿಯ ದಿಗ್ಗಜ ಸುಬ್ಬಯ್ಯ ನಾಯ್ಡುರಂಥವರಲ್ಲಿ ತರಬೇತಿ ಪಡೆದ ಶಿವಶಂಕರ್, ಹುಣಸೂರು ಕೃಷ್ಣಮೂರ್ತಿಯವರಂಥ ಒಳ್ಳೆಯ ನಿರ್ದೇಶಕರಲ್ಲಿ ಸಹಾಯಕರಾಗಿ ದುಡಿದವರು. ಅದಲ್ಲದೇ, ನಮ್ಮ ಕನ್ನಡ ಜಗತ್ತಿಗೆ ಕೊಟ್ಟ ಅವರ ಕೊಡುಗೆಯೆಂದರೆ ದ್ವಾರಕೀಶ್, ಕಲ್ಪನಾ, ತೂಗುದೀಪ ಶ್ರೀನಿವಾಸ್, ಶಕ್ತಿ ಪ್ರಸಾದ್, ರಾಜೇಶ್, ಮಂಜುಳಾ ಮುಂತಾದ ಹಲವರನ್ನು ನಟರಾಗಿ ಪರಿಚಯಿಸಿದ್ದು. ಚಿತ್ರಜಗತ್ತಿನಲ್ಲಿ ನೀಡುವ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಪ್ರಶಸ್ತಿಯೂ ಸೇರಿದಂತೆ ಹಲವುಗಳಿಗೆ ಕೀರ್ತಿ ಭಾಜನರಾಗಿದ್ದಾರೆ. Read the rest of this entry »

ಬೆಳಕಿಗೆ ಭಾಷ್ಯ ಬರೆದವರಲ್ಲ ; ಭಾಷೆ ಬರೆದವರು ಭಾಸ್ಕರ್ !

with 5 comments

ಜಿ.ಎಸ್. ಭಾಸ್ಕರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಬ್ಬ ಒಳ್ಳೆಯ ಛಾಯಾಗ್ರಾಹಕರು. ಬೆಳಕಿನ ಸಾಧ್ಯತೆಯನ್ನು ದುಡಿಸಿಕೊಳ್ಳುತ್ತಾ ಚಿತ್ರದ ಸನ್ನಿವೇಶಗಳಿಗೆ ಅರ್ಥ ಕಲ್ಪಿಸುವ ಬಗೆ ಅವರೊಳಗಿನದು. ಅನ್ವರ್ಥಕ ಎಂಬಂತೆ ತಮ್ಮೊಳಗೆ ಬೆಳಗುವ ಸೂರ್ಯನನ್ನು ಇಟ್ಟುಕೊಂಡು ಅವನನ್ನೇ ದುಡಿಸಿಕೊಂಡವರು ಎನ್ನುತ್ತಾರೆ ಪತ್ರಕರ್ತ ಮುರಳೀಧರ ಖಜಾನೆ.

ನನಗೆ ನೆನಪಿರುವಂತೆ 1992ರ ಸಂದರ್ಭ. ಪ್ರಸಿದ್ಧ ಚಿತ್ರ ನಿರ್ದೇಶಕಿ ಸಾಯಿ ಪರಾಂಜಪೆ ತಮ್ಮ “ಪಪೀಹಾ’ ಚಿತ್ರವನ್ನು ನಾಗಪುರ ಅರಣ್ಯ ಪ್ರದೇಶದಲ್ಲಿ ಚಿತ್ರಿಸಲು ಸಜ್ಜಾಗಿದ್ದರು. ತಂಡವೂ ಸಿದ್ಧವಾಗಿತ್ತು, ದುರದೃಷ್ಟವಶಾತ್, ಚಿತ್ರೀಕರಣ ಸ್ಥಳಕ್ಕೆ ಬರಬೇಕಿದ್ದ ಅವರ ಉಪಕರಣಗಳನ್ನು ಹೊತ್ತ ವಾಹನ ಅಪಘಾತಕ್ಕೆ ಒಳಗಾದ ಸುದ್ದಿ ಸಿಕ್ಕಿತು. ಯಾವುದೇ ಬದಲಿ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳೇ ಇರಲಿಲ್ಲ. ಗುಡ್ಡಗಾಡು ಸಮುದಾಯದ ಕುರಿತಾದ ಚಿಕ್ಕ ಬಜೆಟ್‌ನ ಚಿತ್ರವದು. ಅಷ್ಟೇ ಅಲ್ಲ, ಚಿತ್ರದ ಕೆಲ ಭಾಗಗಳನ್ನು ಚಿತ್ರೀಕರಿಸಿ ಅದನ್ನು ಆಧರಿಸಿಯೇ ಚಿತ್ರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸುವ ಉದ್ದೇಶ ಹೊಂದಿದ್ದರು.
bhaskar
ಸರಿ, ವಾಪಸು ಹೋಗುವಂತಿರಲಿಲ್ಲ. ಏನಾದರೂ ಆಗಲಿ ಎಂದು ಹೊಸ ಪ್ರಯತ್ನಕ್ಕೆ ಮುಂದಾದರು. ಅಲ್ಲೇ ಇದ್ದ ಯುವ ಕ್ಯಾಮೆರಾಮ್ಯಾನ್‌ಗೆ ಕರೆದು “ನಮ್ಮಲ್ಲಿ ಈಗ ಲಭ್ಯವಿರುವ ಉಪಕರಣಗಳಲ್ಲೇ ಚಿತ್ರೀಕರಣ ಶುರು ಮುಗಿಸೋಣ. ಒಂದುವೇಳೆ ಸಾಧ್ಯವಾಗದಿದ್ದರೆ ಈ ಯೋಜನೆಗೇ ಅಂತ್ಯ ಹಾಡೋಣ’ ಎಂದರು. ಈ ಯುವ ಕ್ಯಾಮೆರಾಮ್ಯಾನ್ ಇದ್ದ ಆಯ್ಕೆಗಳು ಎರಡೇ.

“ಇಲ್ಲ ರಿಸ್ಕ್ ತೆಗೆದುಕೊಂಡು ಚಿತ್ರೀಕರಣ ಮುಗಿಸಬೇಕು. ಇಲ್ಲವೇ ಇಡೀ ಯೋಜನೆ ಕೈ ಬಿಡಲು ಕಾರಣಕರ್ತನಾಗಬೇಕು’. ಆದರೆ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನ ಗರಡಿಯಲ್ಲಿ ತರಬೇತಾದ ಆ ಯುವಕ “ರಿಸ್ಕ್’ ತೆಗೆದುಕೊಳ್ಳಲು ನಿರ್ಧರಿಸಿದ. ಒಂದು ಪುಟ್ಟ ಲೈಟು ಮತ್ತು ಕೆಲವು ಥರ್ಮೋಕೋಲ್ ತುಂಡುಗಳನ್ನು ಬಳಸಿಕೊಂಡು ಚಿತ್ರೀಕರಣಕ್ಕೆ ಸಜ್ಜಾದ. ಅರಣ್ಯದಲ್ಲೇ ಪ್ರಕೃತಿ ದತ್ತವಾಗಿ ಲಭ್ಯವಾದ ಬೆಳಕಿನ ಸಾಧ್ಯತೆಯನ್ನೇ ದುಡಿಸಿಕೊಂಡು ಥರ್ಮೋಕೋಲ್ ಬಳಸಿಕೊಂಡು ಹಗಲಿನ ಬೆಳಕಿನ ವಿನ್ಯಾಸವನ್ನು ರೂಪಿಸಿಕೊಂಡ. ಮೂರು ಹಂತದಲ್ಲಿ ಒಂದೇ ಚಿತ್ರಿಕೆ (ಶಾಟ್) ಯನ್ನು ಚಿತ್ರೀಕರಿಸುವ ಸಂದರ್ಭದಲ್ಲಿ, ಈ ಪುಟ್ಟ ಲೈಟ್ ಸಹಾಯಕ್ಕೆ ಬಂದಿತು. ಹಲವು ಅಡ್ಡಿಗಳ ಮಧ್ಯೆಯೂ ಹೊಸದನ್ನು ಹುಡುಕಿಕೊಂಡ. ಪೆಟ್ರೋಮ್ಯಾಕ್ಸ್ ದೀಪಗಳನ್ನು ಬಳಸಿಕೊಂಡ…ಹೀಗೆ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿದ. Read the rest of this entry »

ಕನ್ನಡದಲ್ಲಿ ಕುಹೂ ಕುಹೂ ಹಾಡಿದ ಮನ್ನಾಡೆ

with one comment

ಮನ್ನಾಡೆಯವರು ಹಿಂದಿ, ಬಂಗಾಳಿ, ಮಲಯಾಳಂನಲ್ಲದೇ ಮನ್ನಾಡೆಯವರು ಕನ್ನಡ ಚಿತ್ರಗಳಲ್ಲೂ ಹಾಡಿದ್ದಾರೆ. ಅವುಗಳೆಂದರೆ “ಕಲಾವತಿ” ಚಿತ್ರದಲ್ಲಿನ “ಕುಹೂ ಕುಹೂ’ ಗೀತೆ, “ಮಾರ್ಗದರ್ಶಿ’ ಚಿತ್ರದ “ಕಣ್ಣಿಲ್ಲವೇನೋ ನೆಲಕಾಣದೇನೋ’ ಹಾಗು “ಕಲ್ಪವೃಕ್ಷ’ ದಲ್ಲಿ “ಜಯತೇ ಜಯತೇ’ ಗೀತೆಗಳು. ಮನ್ನಾಡೆಯವರಿಗೆ ಫಾಲ್ಕೆ ಸನ್ಮಾನ ಸಲ್ಲುತ್ತಿರುವ ಸಂದರ್ಭದಲ್ಲಿ ಮುರಳೀಧರ ಖಜಾನೆಯವರು ಬರೆದ ಲೇಖನವಿದು. ಆಗಾಗ್ಗೆ ಖಜಾನೆಯವರು ಸಾಂಗತ್ಯಕ್ಕೆ ಇನ್ನು ಮುಂದೆ ಬರೆಯಲಿದ್ದಾರೆ.

ಬಹಳ ತಡವಾಯಿತು ಎಂದು ಹೇಳುವ ಮೊದಲು ಕೇಂದ್ರ ಸರಕಾರ ಕೊನೆಗೂ ಭಾರತದ ಒಂದು ಅತ್ಯಮೂಲ್ಯ ಗಾಯಕನಿಗೆ ಸಿನಿಮಾ ಜಗತ್ತಿನ ಸರ್ವ ಶ್ರೇಷ್ಠ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ಮನ್ನಾಡೆಯವರು ಸಿನಿಮಾ ಕ್ಷೇತ್ರಕ್ಕೆ ನೀಡಿದ ವೈಯಕ್ತಿಕ ಕೊಡುಗೆಗೆ ದಕ್ಕಿದ ಮಾನ-ಸಮ್ಮಾನವಿದು.

ಇಂಥ ಪ್ರಶಸ್ತಿ ದಕ್ಕುವುದೇ ಬಹಳ ತಡವಾಗಿ ಎಂಬ ಮಾತಿದೆ. ಆದರೆ ಮನ್ನಾಡೆಯವರ ಸಂದರ್ಭದಲ್ಲಿ ನಿಜವಾಗಲೂ ತಡವೇ. ಇದರಲ್ಲಿ ಎರಡು ಮಾತಿಲ್ಲ. ಮನ್ನಾಡೆಯವರು ಸಂಸ್ಥೆಯಂತೆ ಸಂಗೀತಕ್ಕೆ ದುಡಿದರು. ಎಲ್ಲ ಬಗೆಯ ರಸಗಳಲ್ಲೂ ಹಾಡಿದರು. ಹಾಸ್ಯವಿರಬಹುದು, ನಮ್ಮೊಳಗೆ ಕಾಡುವಂಥ ಭಾವನೆಗಳಿಗೆ ಜೀವ ತುಂಬುವುದಿರಬಹುದು, ವಿಷಾದ, ಒಲವಿನ ಹಾಗೂ ಶಾಸ್ತ್ರೀಯ ನೆಲೆಯ ಗೀತೆಗಳೆಲ್ಲವನ್ನೂ ಮಧುರವಾಗಿ ಹಾಡಿದರು. ನಿಜವಾಗಿಯೂ ಈ ಪ್ರಶಸ್ತಿ ಅವರಿಗೆ ಎಂದೋ ಸಿಗಬೇಕಿದ್ದ, ಆದರೆ ಚುಕ್ತಾವಾಗದೇ ಉಳಿದಿದ್ದ ಹಳೆಯ ಬಾಕಿ. ಈಗ ಸಂದಿದೆ. ಮನ್ನಾಡೆ, ಒಬ್ಬ ಶಾಸ್ತ್ರೀಯ ಸಂಗೀತಗಾರ. ಬರಿದೇ ಶಾಸ್ತ್ರೀಯ ಸಂಗೀತ ಕಲಿತದ್ದಷ್ಟೇ ಅವರ ಹೆಗ್ಗಳಿಕೆಯಲ್ಲ ; ಅದನ್ನು ಸಮರ್ಪಕವಾಗಿ ಮತ್ತು ಸಮರ್ಥವಾಗಿ ಜನಸಾಮಾನ್ಯನಿಗೆ ಮುಟ್ಟಿಸಿದ್ದು ಅವರ ಅಗ್ಗಳಿಕೆ.
mannadey

ಭಾರತೀಯ ಸಿನಿಮಾದಲ್ಲಿ ಒಬ್ಬ ಪ್ರಮುಖ ಹಿನ್ನೆಲೆ ಗಾಯಕನಾಗಿ ಮೆರೆದ ಮನ್ನಾಡೆಯವರು 1950 ರಿಂದ 70 ರಲ್ಲಿ ನಿಜವಾಗಿಯೂ ತಮ್ಮ ಮಧುರ ದನಿ ಮೂಲಕವೇ ಎಲ್ಲರನ್ನೂ ಆಕ್ರಮಿಸಿಕೊಂಡರು. ಸುಮಾರು 3,500 ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾದರು. ಅದೂ ಬರಿಯ ಹಿಂದಿಯಲ್ಲಲ್ಲ ; ಬಂಗಾಳಿ, ಮಲಯಾಳಂ ಸೇರಿದಂತೆ ಹತ್ತು ಹಲವು ಭಾಷೆಗಳಲ್ಲಿ. “ಪೂಚೋ ನ ಕೈಸೆ ಮೈನೆ ರೇನ್ ಬಿತಾಯೆ”, “ಎ ಮೆರೆ ವತನ್, ಎ ಮೆರೆ ಬಿಚಡೆ ಚಮನ್’, “ಪ್ಯಾರ್ ಹುವಾ, ಇಕರಾರ್ ಹುವಾ’, “ಲಗಾ ಚುನಾರಿ ಮೇ ದಾಗ್’, “ಎ ಮೆರಿ ಜೊಹರಾಜಬಿ’, “ಎ ಮೆರೆ ಪ್ಯಾರೆ ವತನ್’, “ಆಜಾ ಸನಮ್ ಮಧುರ ಚಾಂದಿನಿ ಮೇ ಹಂ’, “ದಿಲ್ ಕಾ ಹಾಲ್ #ನಾ ದಿಲ್ವಾಲೆ’, “ಯೇ ರಾತ್ ಭೀಗಿ ಭೀಗಿ’, “ಝನಕ್ ಝನಕ್ ತೆರಿ ಭಾಜೆ ಪೆಹಲಿಯಾ’, “ತೂ ಪ್ಯಾರ್ ಕಾ ಸಾಗರ್ ಹೈ”, “ಜಿಂದಗಿ ಕೈಸಿ ಹೈ ಪಹೆಲಿ’, “ಯಾರಿ ಹಿ ಇಮಾನ್ ಮೆರಾ’(ಚಿತ್ರ ಜಂಜೀರ್)-ಇಂಥ ಹಲವಾರು ಗೀತೆಗಳು ಕೇವಲ ಅವರ ಅಭಿಮಾನಿಗಳಿಗಷ್ಟೇ ಪ್ರಿಯವಾಗಿರಲಿಲ್ಲ. ಭಾರತೀಯ ಸಿನಿಮಾದ “ದ್ರೋಣಾಚಾರ್ಯ’ ಎಂಬಂತೆ ಅವರನ್ನು ಪರಿಗಣಿಸಿದ್ದ ಆ ಕಾಲದ ಹಲವು ಸಂಗೀತ ನಿರ್ದೇಶಕರಿಗೂ ಮೆಚ್ಚುಗೆಯಾಗಿದ್ದವು. Read the rest of this entry »

Written by saangatya

October 9, 2009 at 10:29 am