Archive for the ‘ಉತ್ಸವ-FESTIVAL’ Category
ಅ.30 ರಿಂದ ವಾರಪೂರ್ತಿ ಚಿತ್ರೋತ್ಸವ-ನಿಜವಾದ ರಾಜ್ಯೋತ್ಸವ
ಸಮುದಾಯ ಬೆಂಗಳೂರಿನಲ್ಲಿ ಅ. 30 ರಿಂದ ನ. 5 ರವರೆಗೆ ಚಿತ್ರೋತ್ಸವ ಏರ್ಪಡಿಸಿದೆ. ಮಾಹಿತಿ ಹಾಗೂ ಇತರೆ ವಿವರಗಳಿಗೆ ಎಸ್. ಜಿ. ಸಿದ್ದರಾಮಯ್ಯ-94489 49737, ರವೀಂದ್ರ ಸಿರಿವರ- 98441 09706.
ಸಮುದಾಯ ಸಹಕಾರಿ ತತ್ವದಡಿ ಅ. 30 ರಿಂದ ನ. 5 ರವರೆಗೆ ಬೆಂಗಳೂರಿನ ಕೈಲಾಶ್ ಚಿತ್ರಮಂದಿರದಲ್ಲಿ ಚಿತ್ರೋತ್ಸವ ಏರ್ಪಡಿಸಿದೆ.
ಅಭಯಸಿಂಹರ ”ಗುಬ್ಬಚ್ಚಿಗಳು”, ಬಿ. ಸುರೇಶರ “ಅರ್ಥ”, ಕೆ. ಶಿವರುದ್ರಯ್ಯನವರ “ದಾಟು” ಹಾಗೂ ಉಮಾಶಂಕರ ಸ್ವಾಮಿಯವರ “ಬನದ ನೆರಳು” ಚಿತ್ರಗಳು ವಿವಿಧ ಷೋಗಳಲ್ಲಿ ಪ್ರದರ್ಶನಗೊಳ್ಳಲಿವೆ.
ಸಮುದಾಯ ತನ್ನ ಹೊಸ ವಿಸ್ತರಣೆಯ ಚಟುವಟಿಕೆಯಾಗಿ ಚಿತ್ರೋತ್ಸವ ಸಂಘಟನೆಯತ್ತ ಹೊರಟಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ನಡೆಯಲಿದ್ದು, ನಂತರ ತನ್ನ ಘಟಕಗಳಿರುವೆಡೆ ಚಿತ್ರೋತ್ಸವ ಸಂಘಟಿಸಲಿದೆ.
ಈ ವಿಷಯವನ್ನು ಸಾಂಗತ್ಯಕ್ಕೆ ತಿಳಿಸಿದ ಸಮುದಾಯ ಅಧ್ಯಕ್ಷ ಪ್ರೊ. ಎಸ್. ಜಿ. ಸಿದ್ದರಾಮಯ್ಯ, “ಈಗಾಗಲೇ ಚಿತ್ರೋತ್ಸವ ಸಂಘಟನೆ ಆರಂಭವಾಗಿದೆ. ತುಮಕೂರು ಸೇರಿದಂತೆ ರಾಜ್ಯಾದ್ಯಂತ 27 ಕಡೆ ನಮ್ಮ ಘಟಕಗಳಿದ್ದು, ಅಲ್ಲೆಲ್ಲ ಸ್ಥಳೀಯರ ಸಹಕಾರದಿಂದ ಚಿತ್ರೋತ್ಸವ ಸಂಘಟಿಸಲಾಗುವುದು. ಒಳ್ಳೆಯ ಚಿತ್ರಗಳನ್ನು ಜನ ಸಮುದಾಯಕ್ಕೆ ತಲುಪಿಸಬೇಕೆಂಬುದೇ ಉದ್ದೇಶ’ ಎಂದರು. Read the rest of this entry »
ಮೈಸೂರಿನ ನಟನದಲ್ಲಿ “ಗುಬ್ಬಚ್ಚಿಗಳು” ಮತ್ತು “ಗುಲಾಬಿ ಟಾಕೀಸ್”
ಮೈಸೂರಿನ ನಟನದಲ್ಲಿ ಮಾ. 8 ರ ಭಾನುವಾರ ಗುಬ್ಬಚ್ಚಿಗಳು’ ಹಾಗೂ ಮಾ. 10 ರಂದು ಕನ್ನಡ ಚಲನಚಿತ್ರೋತ್ಸವದ ಸಮಾರೋಪದಂದು ‘ಗುಲಾಬಿ ಟಾಕೀಸ್’ ಪ್ರದರ್ಶನಗೊಳ್ಳಲಿದೆ.

ಫೆ. 17 ರಂದು ನಿರ್ದೇಶಕ ಗಿರೀಶ್ ಕಾಸರವಳ್ಳಿಯವರಿಂದ ಉತ್ಸವಕ್ಕೆ ಚಾಲನೆ
ನಟನ ಮೈಸೂರಿನ ಒಂದು ರಂಗಸಂಸ್ಥೆ. ನಟ ಮಂಡ್ಯ ರಮೇಶ್ ನೇತೃತ್ವದಲ್ಲಿ ನಡೆಯುತ್ತಿರುವಂಥದ್ದು. ರಾಮಕೃಷ್ಣ ನಗರ ಬಡಾವಣೆಯಲ್ಲಿ ತಮ್ಮದೇ ಒಂದು ರಂಗಮಂದಿರ ಕಟ್ಟಿಕೊಂಡು ಅಲ್ಲಿ ಒಂದಿಷ್ಟು ರಂಗ ಚಟುವಟಿಕೆ, ಸಾಹಿತ್ಯ-ಸಿನಿಮಾ ಎನ್ನುತ್ತಾ ಖುಷಿಯನ್ನು ಹಂಚುವ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಲನಚಿತ್ರದ ಅಮೃತ ಮಹೋತ್ಸವ ಸಂದರ್ಭದಲ್ಲಿ ‘ನಟನ’ ತಮ್ಮ ರಂಗಮಂದಿರದಲ್ಲಿ ‘ಅಮೃತ ಬಿಂದು‘ ಚಲನಚಿತ್ರೋತ್ಸವವನ್ನು ಸಂಘಟಿಸಿದೆ.
ಫೆ. 17 ರಿಂದ ಆರಂಭವಾದ ಚಿತ್ರೋತ್ಸವದಲ್ಲಿ ‘ವಸಂತ ಸೇನಾ’, ‘ಕರುಣೆಯೇ ಕುಟುಂಬದ ಕಣ್ಣು’,‘ಭೂದಾನ’, ‘ಭೂತಯ್ಯನ ಮಗ ಅಯ್ಯು’, ‘ವಂಶವೃಕ್ಷ’, ‘ನಾಂದಿ’, ‘ಬೆಳ್ಳಿಮೋಡ’, ‘ಬರ’, ‘ಹಂಸಗೀತೆ’, ‘ಬೆಟ್ಟದ ಹೂ’, ‘ಕೊಟ್ರೇಶಿ ಕನಸು’ ಸೇರಿದಂತೆ ಇಪ್ಪತ್ತೈದು ಚಲನಚಿತ್ರಗಳನ್ನು ಪ್ರದರ್ಶಿಸುತ್ತಿದೆ. ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಉತ್ಸವಕ್ಕೆ ಚಾಲನೆ ನೀಡಿದರು.
ಮಾ. 10 ರಂದು ಬೆಳಗ್ಗೆ 10.30 ಕ್ಕೆ ಸಮಾರೋಪ. ಅಂದು ‘ಒಂದು ಅವಲೋಕನ’ ಕುರಿತಾದ ಚರ್ಚೆ. ಅದೇ ದಿನ ಸಂಜೆ 7 ಕ್ಕೆ ಗಿರೀಶ್ ಕಾಸರವಳ್ಳಿ ನಿರ್ದೇಶನದ ಪ್ರಶಸ್ತಿ ಪುರಸ್ಕೃತ ‘ಗುಲಾಬಿ ಟಾಕೀಸ್’ ಪ್ರದರ್ಶನವಾಗಲಿದೆ.
ಅದಕ್ಕಿಂತ ಮೊದಲು ಮಾ. 8 (ಭಾನುವಾರ) ಬೆಳಗ್ಗೆ 10.30 ಕ್ಕೆ ‘ಗುಬ್ಬಚ್ಚಿಗಳು’ ಪ್ರದರ್ಶನಗೊಳ್ಳಲಿದೆ. ಈ ಚಿತ್ರಕ್ಕೂ ಮತ್ತು ಮೈಸೂರಿಗೂ ನಂಟಿದೆ. ಇದರ ನಿರ್ದೇಶಕ ಅಭಯಸಿಂಹ ಮೈಸೂರಿನವರು. ಒಬ್ಬ ಉತ್ಸಾಹಿ ನಿರ್ದೇಶಕ. ಅವರ ಭರವಸೆಯ ಚಿತ್ರವನ್ನು ನೋಡುವುದಕ್ಕೆ ಸಕಾಲವಿದು. ವಿವರಗಳಿಗೆ ಸಂಪರ್ಕಿಸಿ : 0821-2562208, 9845270402, 94804 68327.
ಮಧುರ್ ಭಂಡಾರ್ಕರ್ ಉತ್ಸವ ಆರಂಭ
ಸಾಂಗತ್ಯದ ಉತ್ಸವ ಪ್ರಾರಂಭವಾಗಿದೆ. ಹಲವು ಗೆಳೆಯರು-ಬ್ಲಾಗಿಗರು ಮಧುರ್ ಭಂಡಾರ್ಕರ್ ಅವರ ಚಿತ್ರಗಳ ಬಗ್ಗೆ ತಮ್ಮ ಅನಿಸಿಕೆಯನ್ನು ಕಳುಹಿಸಿದ್ದಾರೆ. ನಿಜವಾಗಲೂ ಅಚ್ಚರಿಯೆಂದರೆ ಇಷ್ಟು ಬೇಗ ತಮ್ಮ ಬರಹಗಳನ್ನು ಕಳುಸಿಯಾರು ಎಂದು ನಿರೀಕ್ಷಿಸಿರಲಿಲ್ಲ. ಜತೆಯಾಗಿ ನಾಲ್ಕು ಹೆಜ್ಜೆ ಹಾಕುವ ಮಂದಿ ಉತ್ಸಾಹ ಕಂಡರೆ ನಾಲ್ಕೇಕೆ….ಇನ್ನೂ ಒಂದಿಷ್ಟು ಹೆಜ್ಜೆ ಇಡಬೇಕೆನ್ನಿಸುತ್ತದೆ.
ಇಂದಿನಿಂದ ಮಧುರ್ ಭಂಡಾರ್ಕರ್ ಉತ್ಸವಕ್ಕೆ ನಿಜವಾದ ಚಾಲನೆ ಸಿಕ್ಕಂತೆ. ಇಲ್ಲಿ ಬರುವ ವಿಮರ್ಶೆ, ಬರಹಗಳಿಗೆ ನಿಮ್ಮ ಅಭಿಪ್ರಾಯಗಳನ್ನೂ ಮುಕ್ತವಾಗಿ saangatya@gmail.com ಗೆ ಕಳುಹಿಸಬಹುದು. ಒಟ್ಟೂ ಮುಕ್ತವಾಗಿ ಒಬ್ಬ ನಿರ್ದೇಶಕನ ಪ್ರಯತ್ನ, ಪರಿಶ್ರಮ, ವಿಶಿಷ್ಟತೆ ಬಗ್ಗೆ ಆರೋಗ್ಯಕರವಾದ ಚರ್ಚೆಯಾಗಬೇಕೆಂಬುದೇ ಸಾಂಗತ್ಯದ ಆಶಯ. ನಿಮ್ಮೆಲ್ಲರ ಬೆಂಬಲವೇ ಮತ್ತಷ್ಟು ಉತ್ಸವಕ್ಕೆ ಹುರುಪು ತುಂಬಬಲ್ಲದು.
ಮಧುರ್ ಭಂಡಾರ್ ಕರ್ ಉತ್ಸವ…!
“ನನ್ನ ಚಿತ್ರಗಳು ಕ್ರಾಂತಿ ಮಾಡುವಂಥದ್ದಲ್ಲ ; ಆದರೆ ಸಮಾಜದ ಕನ್ನಡಿ. ಹಾಗೆಯೇ ನನ್ನ ಚಿತ್ರಗಳು ತೀರ್ಪು ನೀಡುವುದಿಲ್ಲ ; ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಬಿಂಬಿಸುತ್ತವೆ. ಕೆಲವೊಮ್ಮೆ ಪರಿಹಾರ ಇರಬಹುದು, ಇಲ್ಲದೆಯೂ ಇರಬಹುದು’- ಮಧುರ್ ಭಂಡಾರ್ಕರ್.
*
ನಮಸ್ಕಾರ.
“ಸಾಂಗತ್ಯ” ಹೊಸ ಸಂವಾದಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲೇ ಉತ್ಸವ ಆರಂಭಿಸುತ್ತಿದೆ. ಈ ಉತ್ಸವದ ಉದ್ದೇಶ ಒಬ್ಬ ಸಿನಿ ನಿರ್ದೇಶಕನ ಚಿತ್ರಗಳು, ಅವನ ಗ್ರಹಿಕೆ, ಅವನ ಶ್ರೇಷ್ಠತೆ ಎಲ್ಲವನ್ನೂ ಚರ್ಚಿಸುತ್ತಲೇ ಒಂದು ಅನೂಹ್ಯ ಚಿತ್ರಜಗತ್ತಿನೊಳಗೆ ಹೊಕ್ಕು ಅವಲೋಕಿಸುವುದು. ಒಟ್ಟೂ ಸಮಗ್ರವಾಗಿ ನೋಡುವಾಗ ವಿಶಿಷ್ಟ ಎನಿಸುತ್ತದೆ. ಒಂದೇ ಚಿತ್ರದ ಭಿನ್ನ ಭಿನ್ನ ಬರಹಗಳು, ಅವರ ಬಗೆಗೆ ವಿವಿಧ ವ್ಯಾಖ್ಯಾನಗಳನ್ನೆಲ್ಲಾ ಕಟ್ಟಿಕೊಡುವುದು ಇದರ ಉದ್ದೇಶ.
ಹಾಗಾಗಿ “ಮಧುರ್ ಭಂಡಾರ್ಕರ್”ಉತ್ಸವ ಆರಂಭವಾಗುತ್ತಿದೆ. ಅದರಲ್ಲಿ ನೀವೆಲ್ಲರೂ ಪಾಲ್ಗೊಳ್ಳಬಹುದು. ಇದು ಸಾಂಗತ್ಯದ ಹೆಮ್ಮೆಯ ಉತ್ಸವ. ಎಲ್ಲರೂ ಚಿತ್ರಗಳ ವಿಮರ್ಶೆ, ಅವರ ಬಗೆಗಿನ ಕುತೂಹಲದ ಸಂಗತಿ, ನಿರ್ದೇಶನ ರೀತಿ, ದೃಷ್ಟಿಕೋನ-ಹೀಗೆ ನಾನಾ ನೆಲೆಯ ಬರಹಗಳನ್ನು saangatya@gmail.com ಗೆ ಕಳುಹಿಸಿ.
*

ಮಧುರ್ ಭಂಡಾರ್ಕರ್ ಒಬ್ಬ ವಿಶಿಷ್ಟ ನೆಲೆಯ ನಿರ್ದೇಶಕ. ಆಧುನಿಕ ನೆಲೆಯನ್ನು ಅತ್ಯಂತ ಆಪ್ತವಾಗಿ ಚರ್ಚಿಸುತ್ತಲೇ ಹೊಸದೊಂದು ಚೌಕಟ್ಟು ಕೊಟ್ಟು ಕಲಾಕೃತಿಯನ್ನಾಗಿಸುವ ನೈಪುಣ್ಯತೆ ಅವರದ್ದು. ಜತೆಗೆ ಸ್ತ್ರೀ ಪಾತ್ರವನ್ನು ಅತ್ಯಂತ ಸಬಲಗೊಳಿಸುತ್ತಲೇ, ಅದನ್ನು ಔನ್ನತ್ಯದಲ್ಲಿರಿಸಿ ಅವಲೋಕಿಸುತ್ತಾರೆ.
ಭಂಡಾರ್ಕರ್ ಬಗ್ಗೆ ಹೇಳುವುದಾದರೆ, ಮಹಾರಾಷ್ಟ್ರದ ಖಾರ್ ಎಂಬಲ್ಲಿ ವೀಡಿಯೋ ಕ್ಯಾಸೆಟ್ ಅಂಗಡಿಯೊಂದನ್ನ್ನು ನಡೆಸುತ್ತಿದ್ದರು. ಹಾಗಾಗಿ ಹೆಚ್ಚು ಚಿತ್ರಗಳ ಸಂಗ್ರಹ ಹಾಗೂ ಅವುಗಳನ್ನು ನೋಡುವ ಮೂಲಕ ಅಧ್ಯಯನ ಸಾಧ್ಯವಾಯಿತು. ಹಾಗಾಗಿಯೇ ಸಿನಿಮಾದ ಬಗ್ಗೆ ಒಲವೂ ಬೆಳೆಯಿತು.
ಮೊದಲು ಹೆಸರಾಂತ ನಿರ್ದೇಶಕ ರಾಮ್‌ಗೋಪಾಲ್ ವರ್ಮರಿಗೆ ಸಹಾಯಕರಾಗಿ ದುಡಿದ ಭಂಡಾರ್ಕರ್, ರಂಗೀಲಾ ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನೂ ಅಭಿನಯಿಸಿದರು. ಆದರೆ ನಿರ್ದೇಶಕನಾಗಿ ಪರಿಚಯವಾಗಿದ್ದು “ತ್ರಿಶಕ್ತಿ (1999)”. ಅದು ಯಶಸ್ವಿಯಾಗಲಿಲ್ಲ. ಎರಡು ವರ್ಷಗಳ ನಂತರ “ಚಾಂದಿನಿಬಾರ್” (2001) ಚಿತ್ರವನ್ನು ನಿರ್ದೇಶಿಸಿದರು. ಟಬು ಮತ್ತು ಅತುಲ್ ಕುಲಕರ್ಣಿ ಪ್ರಧಾನ ಭೂಮಿಕೆಯಲ್ಲಿದ್ದರು. ಈ ಚಿತ್ರ ಹೆಸರನ್ನೂ ತಂದುಕೊಟ್ಟಿತಲ್ಲದೇ, ಇವರ ಬಗ್ಗೆ ಚಿತ್ರನಗರಿಯಲ್ಲಿ ಹೊಸ ವಿಶ್ವಾಸವನ್ನು ಬೆಳೆಸಿತು. ಇದೇ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಾಗ ಭಂಡಾರ್ಕರ್ ಅವರನ್ನು ಹಿಡಿಯುವವರೇ ಇರಲಿಲ್ಲ.
ಬಳಿಕ “ಸತ್ತಾ” (2003) ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಕೊಂಕಣಸೇನ್ ಅಭಿನಯದ “ಪೇಜ್ 3″ (2005) ಭಂಡಾರ್ಕರ್ ರತ್ತ ದೃಷ್ಟಿಹರಿಸುವಂತೆ ಮಾಡಿದ ಚಿತ್ರ. ವಿಮರ್ಶಕಾರರ ಒಲವು ಗಳಿಸಿತಲ್ಲದೇ, ಬಾಕ್ಸ್ ಆಫೀಸ್ ನಲ್ಲೂ ಜಯಗಳಿಸಿತು. ಜತೆಗೆ ಎರಡನೇ ಬಾರಿಗೆ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರನ್ನಾಗಿಸಿತು. ಮುಂದಿನ ಚಿತ್ರ “ಕಾರ್ಪೋರೇಟ್” (2007). ವಾಣಿಜ್ಯ ಜಗತ್ತಿನ ಕರಾಳ ಮುಖವನ್ನು ಪ್ರದರ್ಶಿಸಿದ್ದು ಈ ಚಿತ್ರದ ವಿಶೇಷ.
2007 ರಲ್ಲಿ ಬಿಡುಗಡೆಗೊಂಡಿದ್ದು ಟ್ರಾಫಿಕ್ ಸಿಗ್ನಲ್. ಈ ಚಿತ್ರ ಮತ್ತೆ ಗಳಿಸಿದ್ದು ರಾಷ್ಟೀಯ ಮನ್ನಣೆ. ಇತ್ತೀಚೆಗೆ ಜನಮನ್ನಣೆ ಗಳಿಸಿದ್ದೆಂದರೆ “ಫ್ಯಾಷನ್’. ಸಿದ್ಧಗೊಳ್ಳುತ್ತಿರುವ ಚಿತ್ರ (ಜೈಲ್). ಇದು ಇವರ ಬಗೆಗಿನ ಒಂದಿಷ್ಟು ಮಾಹಿತಿ.




