ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for the ‘ಅಲ್ಲಿಂದ ತಂದದ್ದು’ Category

ಸಾಹಸಮಯ ಜೀವನದ ಸಾಹಸಮಯಿ ಚಿತ್ರೀಕರಣ

without comments

ಮೊದಲ ಡಾಕ್ಯುಮೆಂಟರಿ ಬಗ್ಗೆ ಬರೆದಿರುವ ಅಭಯಸಿಂಹ, ಆ ಮೂಲಕ ಸಾಹಸಮಯಿ ಚಿತ್ರೀಕರಣದ ಯಶೋಗಾಥೆಯನ್ನೂ ಹೇಳಿದ್ದಾರೆ. ನಾನೂಕ್ ಆಫ್ ದಿ ನಾರ್ತ್ ಬಹುಶಃ ಮೊದಲ ಖಚಿತರೂಪದ ಡಾಕ್ಯುಮೆಂಟರಿ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಅದರ ಬಗ್ಗೆಯೇ ಈ ಬರಹ.

ಚಲನಚಿತ್ರ ಕ್ಯಾಮರಾ ತಯಾರಕರಲ್ಲಿ ಪ್ರಮುಖರಾದ ಲ್ಯುಮಿಯರ್ ಸಹೋದರರು, ಇದೊಂದು ಭವಿಷ್ಯವಿಲ್ಲದ ಉಪಕರಣ ಎಂದರು. ಮೊದಲು ಲ್ಯುಮಿಯರ್ ಸಹೋದರರು ತಮ್ಮ ಕ್ಯಾಮರಾವನ್ನು ದಾಖಲೀಕರಣ ಉಪಕರಣವಾಗಿ ಬಳಸಲಾರಂಭಿಸಿದರು. ಕ್ಯಾಮರಾ ಮಾರಾಟಕ್ಕೆ ಸಹಾಯವಾಗಲಿ ಎಂದು ಬೇರೆ ಬೇರೆ ದೇಶಗಳಲ್ಲಿ ಸಂಚರಿಸಿ ಅಲ್ಲಿನ ಕೆಲವು ದೃಶ್ಯಗಳನ್ನು ಸೆರೆಹಿಡಿದು ಅಲ್ಲಿನ ಜನಕ್ಕೆ ತೋರಿಸಿದರು. ಮೊತ್ತ ಮೊದಲಿನ ಸಾಕ್ಷ್ಯಚಿತ್ರಗಳು ಹೀಗೆ ನಿರ್ಮಾಣವಾದುವು!

ಇಂದು ಚಲನಚಿತ್ರ ಉದ್ಯಮ ದೈತ್ಯಾಕಾರದಲ್ಲಿ ಬೆಳೆದು ನಿಂತಿದೆ. ಸಾಕ್ಷ್ಯ ಚಿತ್ರಗಳು ಇಂದಿಗೂ ಒಂದು ದೃಶ್ಯ ಮಾಧ್ಯಮದ ಪ್ರಮುಖ ಅಂಗವಾಗಿವೆ. ಸಾಕ್ಷ್ಯಚಿತ್ರ ಎನ್ನುವುದರ ಸರಿಯಾದ ವಿವರಣೆ ಏನು ಎನ್ನುವುದು ಇಂದಿಗೂ ಚರ್ಚೆಯಲ್ಲಿದೆಯಾದರೂ ವಾಸ್ತವದ ಚಿತ್ರಣ ವಾಸ್ತವಕ್ಕೆ ಅತಿ ಹತ್ತಿರವಾಗಿ ಎಂದು ಸುಮಾರಾಗಿ ಸಾಕ್ಷ್ಯಚಿತ್ರಗಳನ್ನು ಗುರುತಿಸಲಾಗುತ್ತದೆ. ಕಥಾಚಿತ್ರ ಎನ್ನುವುದು ಕಲ್ಪನೆಯ ಕೂಸು ಎನ್ನುವುದಾದರೆ, ಸಾಕ್ಷ್ಯ ಚಿತ್ರಗಳು ವಾಸ್ತವದ ದೃಶ್ಯಗಳನ್ನು ಒಂದು ನಿರ್ದಿಷ್ಟ ಕ್ರಮದಿಂದ ಜೋಡಿಸಿ ಕಥೆಯನ್ನು ಹೇಳುವ ಕ್ರಮ ಎನ್ನಬಹುದು. ಆದರೆ ಈ ಕ್ರಮದಿಂದ ಜೋಡಿಸುವ ಪ್ರಕ್ರಿಯೆಯಿಂದಾಗಿ ಸಾಕ್ಷ್ಯಚಿತ್ರಗಳಲ್ಲೂ ಚಿತ್ರಕಾರನ ಬೇಕು-ಬೇಡಗಳು ಸೇರಿ ಅವೂ biased ಕಥನವೇ ಆಗುತ್ತವೆ. ಹಾಗಾಗಿ ಇವುಗಳೂ ಸತ್ಯದಿಂದ ದೂರವಾದವು ಎನ್ನುವ ವಾದವೂ ಇದೆ. ಈ ಸಂದರ್ಭದಲ್ಲಿ 1922 ರಲ್ಲಿ ತಯಾರಾದ ನಾನೂಕ್ ಆಫ್ ದಿ ನಾರ್ತ್ (Nanook of the North) ಎನ್ನುವ ಚಿತ್ರದ ಕಥೆ ಬಹಳ ಸ್ವಾರಸ್ಯಕರವೂ ಸಾಹಸಮಯವೂ ಆಗಿದೆ. Read the rest of this entry »

ಅಮಿತಾಬ್ ದಶಾವತಾರಿ

with one comment

ಸುಧನ್ವಾ ದೇರಾಜೆ ಬರೆದ ಅಮಿತಾಬ್ ಬಚ್ಚನ್ ಕುರಿತಾದ ಬರಹವಿದು. “ಪಾ’ ಚಿತ್ರ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಬರೆದದ್ದು. ಓದಿ ಅಭಿಪ್ರಾಯಿಸಿ.

ಬಾಲಿವುಡ್ ಶೆಹನ್‌ಶಾನಿಗೆ ವಯಸ್ಸಾಗಿದೆಯೆ? ಆಗಿದೆ ಅಂತ ನಮಗೆಲ್ಲ ಗೊತ್ತಾಗಿದ್ದು ಎರಡು ವರ್ಷಗಳ ಹಿಂದೆ. ಆ ಆಜಾನುಬಾಹು ಮುಂಬಯಿಯ ಲೀಲಾವತಿ ಆಸ್ಪತ್ರೆಗೆ ಗಾಲಿಮಂಚದಲ್ಲಿ ಅಂಗಾತ ಮಲಗಿಕೊಂಡು ಹೋದಾಗ. ಶೋಲೆಯ ಸೋಲೇ ಇಲ್ಲದ ಆ ಸರದಾರ, ಎಲ್ಲವನ್ನೂ ಎದುರಿಸುತ್ತಾ ಬಂದ. ರಾಜಾಠಾಕ್ರೆಯ ಎಂಎನ್‌ಎಸ್ ಪುಂಡರ ಮಾತಿನ ಬಾಣಗಳನ್ನು ಎದೆಯಲ್ಲಿ ಧರಿಸಿದ. ಮಗ ಅಭಿಷೇಕ, ಸೊಸೆ ಐಶ್ವರ್ಯಾರೊಂದಿಗೆ ದೇಶದೇಶಗಳನ್ನು ನೃತ್ಯ ಕಾರ್ಯಕ್ರಮಗಳಿಗಾಗಿ ಸುತ್ತಿದ. ತನ್ನ ಬ್ಲಾಗ್‌ನಲ್ಲಿ ಪತ್ರಕರ್ತರೊಂದಿಗೆ ತಿಕ್ಕಾಡಿದ. ವಯಸ್ಸು ಅರುವತ್ತಾದರೂ ಹಿರಿಯ ಕಲಾವಿದನೇ ಹೀರೋ ಎಂಬುದು ಇನ್ನು ಚಾಲ್ತಿಯ್ಲಿರುವಾಗ ಬಚ್ಚನ್ ಹಾಗೆ ಮಾಡಲಿಲ್ಲ. ಹಾಗಂತ ಪೋಷಕ ಕಲಾವಿದ ಅಂತಲೂ ಅನ್ನಿಸಲಿಲ್ಲ.

ಕುರುಡಿ ರಾಣಿಮುಖರ್ಜಿಯ ಗುರುವಾಗಿ ‘ಬ್ಲ್ಯಾಕ್’ ಸಿನಿಮಾದಲ್ಲಿ ಅಮಿತಾಬ್ ಕಾಣಿಸಿಕೊಂಡಾಗ, ಜನ ಕಣ್ಣರಳಿಸಿ ನೋಡಿದರು. ‘ಕೌನ್ ಬನೇಗಾ ಕರೋಡ್‌ಪತಿ’ ಅಂತ ದಪ್ಪ ಸ್ವರದಲ್ಲಿ ನಮ್ಮ ಮನೆ ಟಿವಿಯೊಳಗೆ ಬಂದಾಗ ಜನ ಹುಚ್ಚಾದರು. 2006ರಲ್ಲಿ ಕರಣ್‌ಜೋಹರ್ ನಿರ್ದೇಶನದ ‘ಕಭಿ ಅಲ್ವಿದಾ ನಾ ಕೆಹನಾ’ ದಲ್ಲಿ ‘ಸೆಕ್ಸಿ ಸ್ಯಾಮ್’ ಆಗಿ ಕಂಗೊಳಿಸಿದ ಈ ಮಹಾಪುರುಷ, 2007ರಲ್ಲಿ ‘ಭೂತನಾಥ್’ ಸಿನಿಮಾದಲ್ಲಿ ರೋಗಿಷ್ಠ ಮುದುಕನಾಗಿ ಮಕ್ಕಳೊಂದಿಗೆ ಮಾತಾಡಿದ. ಟಿವಿ ಕಡೆ ಬಚ್ಚನ್ ಬಾರದೆ ತುಂಬ ದಿನವಾಯಿತು ಅಂತ ಜನ ಅಂದುಕೊಂಡರೆ, ‘ಬಿಗ್‌ಬಾಸ್-3′ರ ನಿರೂಪಕನಾಗಿ ಬಂದ. ಇಂತಹ ಭಾರತ ನಾಯಕ ಅಮಿತಾಬ್ ಬಚ್ಚನ್ ಈಗ ಅಭಿಷೇಕನ ಸೊಂಟದಲ್ಲಿ ತೂಗುತ್ತಿರುವ ಚಿತ್ರ ಎಲ್ಲೆಡೆ ಹರಿದಾಡಹತ್ತಿದೆ. ಅಮಿತಾಬ್‌ಗೆ ಏನಾಗಿದೆ?!

67 ವರುಷದ ಅಮಿತಾಬ್ 13 ವರುಷದ ಹುಡುಗನಾಗಿದ್ದಾನೆ. ಅಭಿಷೇಕ್ ಬಚ್ಚನ್ ಸದ್ಗುಣವಂತ ರಾಜಕಾರಣಿಯಾಗಿ ಅಮಿತಾಬ್ ಅಪ್ಪನಾಗಿದ್ದಾನೆ. ಆರ್. ಬಾಲಕೃಷ್ಣನ್ ನಿರ್ದೇಶನದಲ್ಲಿ ಇಳಯರಾಜಾ ಸಂಗೀತದಲ್ಲಿ ಡಿಸೆಂಬರ್ ಮೊದಲ ವಾರ ಬಿಡುಗಡೆಗೆ ಸಿದ್ಧವಾಗುತ್ತಿರುವ (ಡಿ.4ರಂದು ಬಿಡುಗಡೆಯಾಯಿತು) ‘ಪಾ’ ಎಂಬ ಹೊಸ ಚಿತ್ರದ ತುಣುಕೊಂದು, ಮೊನ್ನೆ ನ.೪ರಂದು ಬಿಡುಗಡೆಯಾಯಿತು. ಅರೋ ಎಂಬ ಆ ಹುಡುಗನ ತಾಯಿ (ವಿದ್ಯಾ ಬಾಲನ್) ಸ್ತ್ರೀ ರೋಗ ತಜ್ಞೆ. ಕಣ್ತುಂಬ ಕನಸುಗಳ ಅಮೋಲ್ ಅರ್ತೆ (ಅಭಿಷೇಕ್ ಬಚ್ಚನ್), ರಾಜಕೀಯವೊಂದು ಕೊಳಕು ಗುಂಡಿ ಅಲ್ಲವೆಂದು ತೋರಿಸಲು ಹೊರಟವನು. ಆದರೆ ಹುಡುಗ ಆರೋ, ಹದಿಮೂರರ ವಯಸ್ಸಿಗೇ ಮುದುಕನಂತೆ ಕಾಣುವ ಆನುವಂಶಿಕ ಕಾಯಿಲೆಗೆ ತುತ್ತಾಗಿದ್ದಾನೆ. 1886ರಲ್ಲಿ ಜೊನಾಥನ್ ಹಚಿನ್‌ಸನ್ ಎಂಬಾತ ಮೊದಲ ಬಾರಿಗೆ ಈ ‘ಪ್ರೊಜೇರಿಯಾ’ ಕಾಯಿಲೆಯ ಬಗ್ಗೆ ಬೆಳಕು ಚೆಲ್ಲಿದ. ಆದರೆ ಇಂದಿನವರೆಗೂ ಅದಕ್ಕೆ ಸೂಕ್ತವಾದ ಚಿಕಿತ್ಸೆಯ ದಾರಿ ಸಿಕ್ಕಿಲ್ಲ. ೪೦ ಲಕ್ಷದಲ್ಲಿ ಒಬ್ಬರಿಗೆ ತಗಲುವ ಕಾಯಿಲೆ ಇದು. Read the rest of this entry »

Written by saangatya

December 8, 2009 at 4:10 am

ಮೆಲ್ ಗಿಬ್ಸನ್ ನ “ಅಪೊಕ್ಯಾಲಿಪ್ಟೊ”

with 2 comments

ಟೀನಾರು ಬರೆದ “ಅಪೋಕ್ಯಾಲಿಪ್ಟೊ” ಚಿತ್ರದ ಬರಹವನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. “ಅಪೊಕ್ಯಾಲಿಪ್ಟೊ” ಒಂದು ವಿಭಿನ್ನವಾದ ಚಿತ್ರ. ರಕ್ತಪಾತದ ದೃಶ್ಯಕ್ಕೂ ಕಲಾತ್ಮಕತೆಯ ಚೌಕಟ್ಟನ್ನು ನೀಡಿ ಮೆರೆಯುವ ಮೆಲ್ ಗಿಬ್ಸನ್ ನ ವಿಶೇಷವಾದ ಚಿತ್ರವಿದು.

ಮೊದಲ ಸಾರೆ ನಾವು ವಿಸ್ಮಯವೊಂದಕ್ಕೆ ಸಾಕ್ಷಿಗಳಾದೆವೆಂದಿಟ್ಟುಕೊಳ್ಳಿ,. ಆಗ ನಮಗೆ ಆಗಬಹುದಾದ ಆಘಾತ, ಆಶ್ಚರ್ಯ ಅಪಾರ. ಇದಾದ ಮೇಲೆ ಪುನಃ ಇನ್ನೊಂದು ವಿಸ್ಮಯ ನಮಗೆದುರಾದರೆ ಸ್ವಲ್ಪ ತಣ್ಣಗೆ ಆದರೆ ಅಷ್ಟೇ ಗೌರವದಿಂದ ಪ್ರತಿಕ್ರಿಯಿಸುತ್ತೇವೆ. ಅದೇ ರೀತಿ ಮೆಲ್ ಗಿಬ್ಸನ್ನನ ‘ದ ಪ್ಯಾಶನ್ ಆಫ್ ದ ಕ್ರೈಸ್ಟ್’ ‘ಬ್ರೇವ್ ಹಾರ್ಟ್’ ಚಲನಚಿತ್ರಗಳನ್ನು ನೋಡಿದವರಿಗೆ ಆತನದೇ ನಿರ್ದೇಶನದ ‘ಅಪೋಕ್ಯಾಲಿಪ್ಟೋ’ ನೋಡಿದಾಗ ಅಂತಹ ಆಶ್ಚರ್ಯವೆನಿಸುವುದಿಲ್ಲ. ಆದರೆ ಮೆಲ್ ಗಿಬ್ಸನ್ನನ ನಿರ್ದೇಶನದ ಬಗ್ಗೆ, ಆತನ ಚಿತ್ರಗಳ ‘ಅಥೆಂಟಿಕ್’ ಕ್ವಾಲಿಟಿಯ ಬಗ್ಗೆ ಗೌರವ ಇಮ್ಮಡಿಯಾಗದಿರದು.
apo1
ಪ್ರೇಕ್ಷಕನ ಕುತೂಹಲ ಕೆಡದಂತೆ, ರಕ್ತಪಾತದ ದೃಶ್ಯಗಳನ್ನೂ ಕ್ಲಾಸಿಕ್ ರೀತಿಯಲ್ಲಿ ನೀಡುವ, ತನ್ನೆಲ್ಲ ಚಿತ್ರಗಳಲ್ಲೂ ವೈವಿಧ್ಯಮಯ ವಿಷಯಗಳನ್ನಾಯ್ದುಕೊಂಡು ಸಫಲರಾಗಿರುವ ಹಲವೇ ನಿರ್ದೇಶಕರಲ್ಲಿ ಮೆಲ್ ಗಿಬ್ಸನ್ ಒಬ್ಬ.’ಅಪೋಕ್ಯಾಲಿಪ್ಟೋ’ವನ್ನು ಕೇವಲ ಆಕ್ಷನ್ ಚಲನಚಿತ್ರವೆನ್ನಲಾಗದು. ಅನೇಕ ಚಾರಿತ್ರಿಕ ಘಟನೆಗಳು ವಿವರಗಳೂ ಕೂಡ ಇದರ ಕಥೆಯೊಡನೆ ಹೆಣೆದುಕೊಂಡಿವೆ. ಚಲನಚಿತ್ರದ ನಾಯಕ ‘ಜಗ್ವಾರ್ ಪಾ’ ತನ್ನ ಬುಡಕಟ್ಟಿನ ನಾಯಕನ ಪ್ರೀತಿಯ ಮಗ. ಬಲಶಾಲಿ. ಬೇಟೆಯಲ್ಲಿ ನಿಪುಣ. ತನ್ನ ಗರ್ಭಿಣಿ ಮಡದಿ ಸೆವೆನ್ ಹಾಗೂ ಪುಟ್ಟ ಮಗನ ಮೇಲೆ ಅಪಾರ ಪ್ರೀತಿ ಹೊಂದಿದವ. ಅರಣ್ಯದ ಬಗ್ಗೆ ತನ್ನ ಅನುಭವೀ ತಂದೆ ಹೇಳುವ, “ಈ ಅರಣ್ಯ ನನ್ನದು, ಇಲ್ಲಿ ನನ್ನ ಪೂರ್ವಜರು ಬೇಟೆಯಾಡಿದ್ದಾರೆ. ನಾಳೆ ನನ್ನ ಮಕ್ಕಳೂ ಬೇಟೆಯಾಡುತ್ತಾರೆ” ಎಂಬ ಮಾತಿನಲ್ಲಿ ನಂಬಿಕೆಯಿಟ್ಟವ. ಇಂಥವನ ನೆಮ್ಮದಿಯ ಜೀವನ ಒಂದು ಮುಂಜಾವ ಮಾಯನ್ ಬುಡಕಟ್ಟಿನ ಯೋಧರಿಂದ ಬುಡಮೇಲಾಗುತ್ತದೆ. ತಮ್ಮ ಸೂರ್ಯದೇವತೆಗೆ ನರಬಲಿ ನೀಡಲು ಮಾಯನ್ನರು ಸಣ್ಣಪುಟ್ಟ ಬುಡಕಟ್ಟುಗಳ ಮಧ್ಯವಯಸ್ಕರನ್ನು ಅಪಹರಿಸುತ್ತಾ ಜಗ್ವಾರನ ಗ್ರಾಮಕ್ಕೂ ದಾಳಿಯಿಡುತ್ತಾರೆ. ರಕ್ತಪಾತ ನಡೆಯುತ್ತದೆ. ತನ್ನ ಮಗ, ಹೆಂಡತಿಯನ್ನು ಜಗ್ವಾರ್ ಬಾವಿಯೊಂದರಲ್ಲಿ ಅವಿಸಿಡುತ್ತಾನೆ. ಆದರೆ ತಾನು ಕಾಳಗದಲ್ಲಿ ಸೆರೆಯಾಗುವುದಲ್ಲದೆ ತನ್ನ ಪ್ರೀತಿಯ ತಂದೆ ತನ್ನ ಕಣ್ಣೆದುರೇ ಕ್ರೂರವಾಗಿ ಕೊಲೆಯಾಗುವುದನ್ನು ನೋಡುತ್ತಾನೆ. ಉಕ್ಕಿಬಂದ ಕ್ರೋಧವನ್ನು ತನ್ನ ಜೊತೆ ಸೆರೆಯಾಗುವ ತಮ್ಮಂದಿರನ್ನು ನೋಡಿ ತಡೆದುಕೊಳ್ಳಬೇಕಾಗುತ್ತದೆ. ಸೆರೆಯಾದವರನ್ನು ಹಿಂಬಾಲಿಸುವ ಮಕ್ಕಳ ಅಸಹಾಯಕತೆ, ಕೊನೆಗೆ ಅವರು ತಮ್ಮ ತೊಂದರೆಗಳಲ್ಲಿ ಒಂದಾಗುವ ರೀತಿ ಮಾರ್ಮಿಕವಾಗಿದೆ. Read the rest of this entry »

“ಹುಡುಕುವ ಹಾದಿಯಲ್ಲಿ”-ಗುಲಾಬಿ ಟಾಕೀಸ್ ಕುರಿತು ಬಿ. ಸುರೇಶರ ಬರಹ

with 6 comments

ಬಿ. ಸುರೇಶ ನಮ್ಮ ನಡುವೆ ಇರುವ ಒಬ್ಬ ಸಂವೇದನಾಶೀಲ ನಿರ್ದೇಶಕ. ಒಂದು ಚಿತ್ರವನ್ನು ಪೂರ್ಣವಾಗಿ ಗ್ರಹಿಸುತ್ತಲೇ, ನೋಡುತ್ತಲೇ ಅದರ ಸಾಧ್ಯತೆ-ಅಸಾಧ್ಯತೆಗಳನ್ನು ಇಡಿಯಾಗಿ ಕಟ್ಟಿಕೊಡುವುದು ಅವರ ವಿಶೇಷತೆ. ಅವರ ಬ್ಲಾಗ್ ನಲ್ಲಿದ್ದ “ಗುಲಾಬಿ ಟಾಕೀಸ್” ಕುರಿತಾದ ಬರಹವನ್ನು ಎಲ್ಲರ ಓದಿಗೆ ಮರು ಪ್ರಕಟಿಸುತ್ತಿದ್ದೇವೆ. ಇದಕ್ಕೆ ಒಪ್ಪಿದ ಬಿ. ಸುರೇಶರಿಗೆ ಧನ್ಯವಾದಗಳು.

ಸಿನಿಮಾ ಎಂಬುದು ಪ್ರತಿಮೆಗಳ (ಇಮೇಜಸ್) ಸಮುದ್ರ. ಪ್ರತಿಕ್ಷಣವೂ ಕಣ್ಣ ಮುಂದೆ ಸುಳಿಯುವ ದೃಶ್ಯವು ಮಿದುಳಿಗೆ ರವಾನಿಸುವ ವಿವರಗಳು, ಅದರೊಂದಿಗೆ ತಲುಪುವ ಶ್ರವ್ಯ ವಿವರಗಳೂ ಸೇರಿ, ಚಲನಚಿತ್ರದ ಪ್ರತಿ ‘ಪ್ರತಿಮೆ’ಯು ಮೂಡಿಸುವ ಅರ್ಥ ವಿನ್ಯಾಸವೂ ಸಹ ದೊಡ್ಡದು. ಈ ಹಿನ್ನೆಲೆಯಲ್ಲಿಯೇ ಪ್ರತೀ ಚಿತ್ರ ನಿರ್ದೇಶಕನೂ ಚಿತ್ರಗಳನ್ನ ಕಟ್ಟುತ್ತಾನೆ. ಪ್ರತಿ ಚಿತ್ರಿಕೆಯು ಅನುಭವವಾಗಿ ನೋಡುಗನ ಮನಸ್ಸಿನಲ್ಲಿ ಇಳಿಯುತ್ತಾ ಸಾಗಿದಂತೆ ಚಿತ್ರ ಕಟ್ಟುವವನ ಮತ್ತು ಚಿತ್ರ ನೋಡುವವನ ನಡುವೆ ಒಂದು ಅವಿನಾಭಾವ ಸಂಬಂಧ ಉಂಟಾಗುತ್ತದೆ. ಈ ಸಂಬಂಧ ಕಣ್ಣಿಗೆ ಕಾಣದ್ದು. ಆದರೆ ಮನಸ್ಸಿಗೆ ತಿಳಿಯುವಂತಹದು. ಆದ್ದರಿಂದಲೇ ನಾವು ನೋಡುವ ಪ್ರತಿ ಚಿತ್ರವನ್ನೂ ಇದು ಇಂತಹವರದು ಎಂದು ಗುರುತಿಸಿಕೊಳ್ಳುವ ಶಕ್ತಿ ಪಡೆಯುತ್ತೇವೆ. ಹಾಗೆಯೇ ನಮಗೆ ‘ಇದು ವ್ಯಾನ್‌ಗೋದು’, ‘ಇದು ಡಾಲಿಯದು’, ‘ಇದು ರವಿವರ್ಮನದು’, ‘ಇದು ವಾಸುದೇವ್‌ದು’ ಎಂಬುದು ತಿಳಿಯುತ್ತದೆ. ಇದನ್ನ ಸಿಗ್ನೆಚರ್ ಆಫ್ ದ ಆರ್‍ಟಿಸ್ಟ್ ಎಂದು ಹೇಳುತ್ತಾ ನಮ್ಮ ಚಲನಚಿತ್ರಗಳನ್ನು ನೋಡುವುದಾದರೆ, ನಮ್ಮ ಕನ್ನಡದ ಸಂದರ್ಭದಲ್ಲಿ ಗಿರೀಶ್ ಕಾಸರವಳ್ಳಿಯವರ ಸಿನಿಮಾಗಳನ್ನ ಅವರು ಸೃಷ್ಟಿಸುವ ಪ್ರತಿಮೆಯನ್ನ ನೋಡಿದ ಕೂಡಲೇ ಗುರುತಿಸಬಹುದು. ಮನೆಯ ಬಾಗಿಲು ಹಿಡಿದು ಯಾವುದೋ ಕಾತುರದಲ್ಲಿ ನಿಂತ ಹೆಣ್ಣು, ಅವಳ ಪಕ್ಕದಲ್ಲಿ ಒಬ್ಬ ಕುತೂಹಲದ ಕಣ್ಣಿನ ಬಾಲಕನ ಪ್ರತಿಮೆ ‘ಘಟಶ್ರಾದ್ಧ’ವನ್ನು ನೆನಪಿಸುತ್ತದೆ. ದೈನೇಸಿಯಂತೆ ಅಂಗಲಾಚುವ ಮುದುಕನ ಪ್ರತಿಮೆ ‘ತಬರನಕಥೆ’ಯ ನೆನಪನ್ನು ತರುತ್ತದೆ. ದೋಣಿಯನ್ನ ತಾನೇ ನಡೆಸುವ ಹೆಣ್ಣಿನ ಚಿತ್ರ ‘ದ್ವೀಪ’ವನ್ನ, ಮನೆಯ ಬಾಗಿಲಿಗೆ ಹಾಕಿದ ತೆರೆಯನ್ನ ಹಿಡಿದು ಯಾವುದೋ ಆತಂಕದಲ್ಲಿ ನೋಡುತ್ತಿರುವ ಹೆಣ್ಣು ‘ಹಸೀನಾ’ವನ್ನ… ಹೀಗೆ ಗಿರೀಶರು ಒಂದು ಪ್ರತಿಮೆಯ ಮೂಲಕ ಒಂದು ಅನುಭವವನ್ನ ನೋಡುಗನ ಕಪಾಟಿನಲ್ಲಿ ಇರಿಸುವ ಪ್ರಯತ್ನ ಮಾಡುತ್ತಲೇ ಬಂದಿದ್ದಾರೆ. ಈಚೆಗಿನ ಅವರ ಚಿತ್ರ ‘ಗುಲಾಬಿಟಾಕೀಸು’ ಕೂಡ ಅಂಥಾದ್ದೇ ಒಂದು ಗಿರೀಶ್ ಚಿತ್ರ ಎಂದು ಗುರುತಿಸಬಹುದಾದ್ದು. ತಗಡಿನ ಟ್ರಂಕಿನ ಮೇಲೆ ಭದ್ರವಾಗಿ ಭೂಮಿಗೆ ಬೇರಿಳಿಸುತ್ತಾ ಇದ್ದೇನೆ ಎಂಬಂತೆ ಕೂತಿರುವ ಹೆಂಗಸು ‘ಗುಲಾಬಿ’ ಯಾಗಿ ನೋಡುಗನ ಮನಸ್ಸಲ್ಲಿ ಉಳಿಯುತ್ತಾಳೆ. ಪ್ರಾಯಶಃ ಹೋರಾಟ ಮಾಡುವ ಎಲ್ಲಾ ಹೆಂಗಸರಿಗೆ ಸೂಚಿಯಾಗಿ ಇದನ್ನೇ ಮುಂದೊಮ್ಮೆ ಬಳಸಬಹುದೇನೋ?
allinda tandaddu 1
ಇಷ್ಟು ಪೀಠಿಕೆಯೊಂದಿಗೆ ಗಿರೀಶರ ಹೊಸಚಿತ್ರ ‘ಗುಲಾಬಿ ಟಾಕೀಸು’ ಕುರಿತ ನನ್ನ ಭಾವಲೋಕಕ್ಕೆ ಪ್ರವೇಶಿಸುತ್ತೇನೆ. ಇಲ್ಲಿ ‘ನನ್ನ ಭಾವಲೋಕ’ ಎಂಬುದಕ್ಕೆ ಕಾರಣವನ್ನು ಹೇಳಿಬಿಡುತ್ತೇನೆ. ಪ್ರತಿ ಪ್ರತಿಮೆಯೂ ಪ್ರತಿ ನೋಡುಗನಿಗೆ ತಾಗಿ ಅವನದ್ದೇ ಆದ ಒಂದು ಲೋಕವನ್ನು ಸೃಷ್ಟಿಸುತ್ತದೆ. ಹಾಗಾಗಿಯೇ ಕಾಣಿಸುವ ಸತ್ಯಕ್ಕೂ, ಮನಸ್ಸಿನಲ್ಲಿ ಮೂಡುವ ಭಾವಕ್ಕೂ ಅಂತರಗಳು ಉಂಟಾಗುತ್ತವೆ ಎನ್ನುತ್ತಾನೆ ಸಾಷರ್. ಆ ಮಾತು ನಿಜ. ಅಂತೆಯೇ ಪ್ರತಿ ನೋಡುಗನ ಮನಸ್ಸಲ್ಲಿ ‘ಗುಲಾಬಿ’ ಮೂಡಿಸಿರಬಹುದಾದ ಭಾವಕ್ಕಿಂತ ನನ್ನ ಅನುಭವ ಭಿನ್ನವಿರಬಹುದು. ಆ ಅನುಭವವನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಇಲ್ಲಿದೆ.

ವೈದೇಹಿ ಕನ್ನಡದ ಶ್ರೇಷ್ಟ ಕತೆಗಾರರಲ್ಲಿ ಒಬ್ಬರು. ಅವರು ಬರೆದ ಕಥೆಗಳಲ್ಲಿ ‘ಗುಲಾಬಿ ಟಾಕೀಸು’ ಒಂದು ವಿಶಿಷ್ಟ ಕತೆ. ಕನ್ನಡ ಹಳ್ಳಿಗಳಲ್ಲಿ ಬದುಕಿದ ಹೆಂಗಸರ 1970 ಮತ್ತು 80ರ ನಡುವಿನ ಕಾಲಘಟ್ಟವನ್ನು ಅತ್ಯಂತ ಸಮರ್ಪಕವಾಗಿ ಹಿಡಿದಿಟ್ಟ ಕತೆ. ಈ ಕತೆಯನ್ನು ಆಧರಿಸಿ ಗಿರೀಶ್ ಕಾಸರವಳ್ಳಿಯವರು ‘ಗುಲಾಬಿ ಟಾಕೀಸು’ ಎಂಬ ಚಿತ್ರ ತಯಾರಿಸಿದ್ದಾರೆ. ಆಧರಿಸಿ ಎಂದರೆ ವೈದೇಹಿ ಅವರ ಕತೆಯ ವಿವರವು ಈ ಚಿತ್ರದಲ್ಲಿ ಇದೆ ಎಂದಲ್ಲ. ಗಿರೀಶರು ತಾವು ಹೆಣೆದ ಕಥೆಯಲ್ಲಿ ವೈದೇಹಿಯವರ ಕತೆಯ ಪಾತ್ರಗಳನ್ನ ಹೆಸರಿಗಾಗಿ ಮಾತ್ರ ಬಳಸಿಕೊಳ್ಳುತ್ತಾರೆ, ಅಷ್ಟೆ. ಉಳಿದಂತೆ ಆ ಕತೆಯ ಹೂರಣವನ್ನೂ ಬಳಸದೆ ತಮ್ಮದೇ ಆದ ಮತ್ತೊಂದ ಲೋಕ ಸೃಷ್ಟಿಗೆ ಹೊರಡುತ್ತಾರೆ. ಇದು ಗಿರೀಶ್ ಕಾಸರವಳ್ಳಿಯವರ ಶಕ್ತಿಯೂ ಹೌದು, ಅವಗುಣವೂ ಹೌದು.

ಶಕ್ತಿ ಯಾಕೆಂದರೆ ವೈದೇಹಿಯವರ ಸಾಹಿತ್ಯದ ಓದುಗನಾಗಿ ಒಬ್ಬಾತ ಪಡೆದುಕೊಂಡದ್ದನ್ನೆಲ್ಲಾ ಸುಳ್ಳಾಗಿಸಿ ಅದೇ ‘ವಿಳಾಸ’ ‘ಸ್ಥಳನಾಮ’ಗಳ ಜೊತೆಗೆ ಮತ್ತೊಂದು ಹೊಸಲೋಕದ, ಹೊಸ ಭಾವವಲಯದ ಸೃಷ್ಟಿ ಗಿರೀಶ್ ಅವರಿಗೆ ಸಾಧ್ಯವಾಗುತ್ತದೆ. ಕನ್ನಡದ ಅಥವ ಭಾರತೀಯ ಸಂದರ್ಭದಲ್ಲಿ ಶ್ರೇಷ್ಟವೆನಿಸುವ ಅಪರೂಪದ ಪ್ರಯೋಗ ಎನಿಸುವ ಸಿನಿಮಾವೊಂದನ್ನು ಗಿರೀಶರು ಕಟ್ಟಿಕೊಡುತ್ತಾರೆ.
b.suresha ಅವಗುಣ ಏನೆಂದರೆ ಮೂಲಕತೆಯ ಯಾವ ವಿವರವೂ ಇಲ್ಲದೆ, ಇಂತಹವರ ಕತೆ ಎಂದು  ಮಾತ್ರ ಹೇಳಿ, ಮತ್ತೇನನ್ನೋ ಉಣಬಡಿಸುವುದು ಮೂಲಕ್ಕೆ ಮಾಡಿದ ಅಪಮಾನ  ಎಂದು ನನ್ನ ಅಭಿಪ್ರಾಯ. ಕುದುರೆಯ ಚಿತ್ರ ಬರೆದು ಕೆಳಗೆ ಕಾಗೆ ಎಂದು ಬರೆದರೂ  ಮೂಲ ಚಿತ್ರವೇ ಸ್ವತಃ ಸಂವಾದಿಯಾದ್ದರಿಂದ ಕೆಳಗೆ ಬರೆದ ಅಕ್ಷರವು ಪ್ರಮಾದ  ಎನಿಸುವುದಿಲ್ಲ. ಇಲ್ಲಿ ಗಿರೀಶರು ಬರೆದಿರುವ ಚಿತ್ರಕ್ಕೆ ವೈದೇಹಿಯವರ ಹೆಸರನ್ನು  ಬಳಸುವುದು ಅಕ್ಷರದ ಮೂಲಕ್ಕೆ ಚಿತ್ರ ಪ್ರಕಾರ ಮಾಡಿದ ಅನ್ಯಾಯವಾಗುತ್ತದೆ.

ಇದು ಕೇವಲ ಗುಲಾಬಿ ಟಾಕೀಸು’ ಚಿತ್ರಕ್ಕೆ ಸೀಮಿತವಾದ ಮಾತಲ್ಲ. ‘ತಬರನಕಥೆ’ಯ ನಂತರ ಗಿರೀಶರು ಸೃಷ್ಟಿಸಿದ ಎಲ್ಲಾ ಕೃತಿಗಳಲ್ಲೂ ಇಂತಹ ಪ್ರಯೋಗವಾಗಿದೆ. ಇದನ್ನು ಪ್ರಯೋಗ ಪ್ರಿಯರು ಲಂಘನ ಎಂದು ಗುರುತಿಸುತ್ತಾರೆ. ಆದರೆ ಇದು… ? Read the rest of this entry »

Written by saangatya

September 17, 2009 at 10:03 am

ಚಿತ್ರೋತ್ಸವದ ಸವಿ ನೆನಪು

without comments

ಚಿತ್ರೋತ್ಸವ ಕುರಿತು ಶಿಬಿರದಲ್ಲಿ ಭಾಗವಹಿಸಿದ್ದ ಬಾಗಲಕೋಟೆಯ ರವಿರಾಜ್ ಗಲಗಲಿ ಬರೆದ ಲೇಖನದ ಸಂಪರ್ಕಕೊಂಡಿ ಇಲ್ಲಿ ಹಾಕಲಾಗಿದೆ. ಹಾಗೆಯೇ ಶಮ ನಂದಿಬೆಟ್ಟ ಹಾಕಿರುವ ಫೋಟೋಗಳೂ “ಮನಸಿನೊಳಗಿನ ಕುಸುಕುಸು” ವಿನಲ್ಲಿ ಹಾಕಿದ್ದಾರೆ. ನೋಡಿ-ಓದಿ

ಸ್ಥಳ : ರಾಷ್ಟ್ರಕವಿ ಕುವೆಂಪು ಅಧ್ಯಯನ ಕೇಂದ್ರದ ಮಿನಿ ಚಿತ್ರಮಂದಿರ, ಕುಪ್ಪಳ್ಳಿ.
ವೇಳೆ : ಬೆಳಗಿನ 9 ಗಂಟೆ.
ವಿಭಿನ್ನ ನೆಲೆಯ ಚಿತ್ರಗಳ ವೀಕ್ಷಣೆಗೆ ಮಂಗಳೂರು, ಬೆಂಗಳೂರು, ಮೈಸೂರುಗಳಿಂದ ಬಂದ ಚಿತ್ರಪ್ರೇಮಿಗಳದ್ದೆಲ್ಲ ಸಂಭ್ರಮ, ಸಡಗರ. ಇದಕ್ಕೆಲ್ಲ ಕಾರಣವಾಗಿದ್ದು ಸಾಂಗತ್ಯ ತಂಡದ ಎರಡನೇ ಚಿತ್ರೋತ್ಸವ. ಜನೆವರಿಯಲ್ಲಿ ನಡೆದ ಮೊದಲ ಚಿತ್ರೋತ್ಸವದಲ್ಲಿ ರಮ್ಯ ಚಿತ್ರಗಳನ್ನು ನೋಡಿದ್ದ ಚಿತ್ರಾಸಕ್ತರಿಗೆ ಈ ಬಾರಿ ನಾಲ್ಕು ಹಂತಗಳಲ್ಲಿ ಚಿತ್ರ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ತವಕ.  ಷೇಕ್ಸ್‌ಪಿಯರನ್ ಮ್ಯಾಕ್‌ಬೆತ್ ನಾಟಕ ಅಧರಿಸಿದ ಪೊಲೊನ್‌ಸ್ಕಿ ನಿರ್ದೇಶನದ ಮ್ಯಾಕ್‌ಬೆತ್ ಹಾಗೂ ಅಕಿರಾ ಕುರೊಸೊವಾ ನಿರ್ದೇಶಿಸಿದ ಥ್ರಾನ್ ಆಫ್ ಬ್ಲಡ್…ವಿವರಗಳಿಗೆ

Written by saangatya

August 11, 2009 at 12:17 pm

ಅದ್ಭುತವಾದ ಥ್ರಿಲ್ಲರ್ 13tzameti

with one comment

ಎಸ್. ಕುಮಾರ್ ಬರೆದ ಈ ಥ್ಲಿಲ್ಲರ್ ವಿಶಿಷ್ಟವಾದುದು. ಥ್ರಿಲ್ಲರ್ ಗಳೊಳಗಿನ ಸೌಂದರ್ಯವನ್ನು ಕಟ್ಟಿಕೊಡುವುದು ತೀರಾ ಕಷ್ಟವಾದುದು. ತೀರಾ ಹಿಂಸೆಯೆನಿಸದೇ, ನಮ್ಮೊಳಗೆ ಚಳಿ ಹುಟ್ಟಿಸುವ ಸಂಗತಿಯನ್ನು ನಮಗೆ ಬೇಕಾದ ರೀತಿಯಲ್ಲಿ ಸೃಷ್ಟಿಸಲಾಗದು. ಹಾಗಾಗಿ ಈ ಲೇಖನ.

ಥ್ರಿಲ್ಲರ್ ಗಳು ಅಂದ್ರೆ ಹಿಚ್ಕಾಕ್ ನೆನಪಾಗುತ್ತಾನೆ. ಆದರೆ ಇವತ್ತಿನ ಥ್ರಿಲ್ಲರಗಳೇ ಬೇರೆ. ಸಿನಿಮಾದಲ್ಲಿ ದೃಶ್ಯಕ್ಕಿಂತ ಹೆಚ್ಚಾಗಿ ಸಂಗೀತ, ಗ್ರಾಫಿಕ್ಗಳು ಬೆಚ್ಚಿ ಬೀಳಿಸುವ ಪ್ರಯತ್ನ ಮಾಡುತ್ತೇವೆ. ಥಿಯೇಟರ್ ನಲ್ಲಿ ಆದ ರೋಮಾಂಚನ ಹೊರಗೆ ಬರುವ ಹೊತ್ತಿಗೆ ಕರಿಗ ಹೋಗಿರುತ್ತದೆ. ನಮ್ಮ ರಾಮ್ಗೋಪಾಲ ವರ್ಮಾ ನಿರ್ದೇಶನದ ಇತ್ತೀಚಿನ ಚಿತ್ರ `ಫೂಂಕ್’ ಇದಕ್ಕೆ ಉತ್ತಮ ಉದಾಹರಣೆ. allinda tandaddu 1
ಅದರಲ್ಲಿ ಏನಿತ್ತು? ಕಿರುಚಾಟ, ಅಪ್ಪಳಿಸುವ ಸಂಗೀತವೇ ನಿಮ್ಮ ಎದೆ ಬಡಿತ ಜಾಸ್ತಿ ಮಾಡಿತ್ತು. ನಿಮಗೆ ನಿಜಕ್ಕೂ ಆತಂಕ ಉಂಟು ಮಾಡುವ, ಏನಾಗಬಹುದೆಂಬ ಭಯಮಿಶ್ರಿತ ಕುತೂಹಲ ಹುಟ್ಟಿಸುವ ಚಿತ್ರವಾಗಿರಲೇ ಇಲ್ಲ. ಹೀಗೆ ಪ್ರತಿ ಸಾರಿ ಥ್ರಿಲ್ಲರ್ ಚಿತ್ರಗಳನ್ನು ನೋಡಿದಾಗ ನೆನಪಾಗುವ ಒಂದು ಚಿತ್ರವಿದೆ; `13 ಝಮೇಟಿ’. ಅಂದರೆ `13 ಸ್ಪರ್ಧೆಗಳು’ ಅಂತಾ. ಜಾಜರ್ಯಾದಿಂದ ಫ್ರಾನ್ಸಿಗೆ ಭವಿಷ್ಯ ಅರಸಿ ಬಂದ ಯುವಕನೊಬ್ಬ ಲಕ್ಷಗಟ್ಟಲೆ ದುಡ್ಡು ಗೆದ್ದು, ಬದುಕು ಕಳೆದುಕೊಳ್ಳುವ ಕಥೆ ಇದು. Read the rest of this entry »

ಟೀನಾರ “ದಿ ಗೋಲ್ಡನ್ ಕಾಂಪಾಸ್”

without comments

ಟೀನಾ ಶಶಿಕಾಂತ್ ಅವರು ಈ ಹಿಂದೆ ಬರೆದ ‘ದಿ ಗೋಲ್ಡನ್ ಕಾಂಪಾಸ್’ ಚಿತ್ರದ ಅನಿಸಿಕೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. ಇದೊಂದು ಒಳ್ಳೆಯ ಚಿತ್ರ ಎನ್ನುತ್ತಲೇ ಅದರ ಒಳ್ಳೆಯದನ್ನು ಹಿಡಿದುಕೊಡುವ ಪ್ರಯತ್ನ ಟೀನಾರದ್ದು.

‘ನನ್ನ ಕವಚ ನನ್ನ ಆತ್ಮವಿದ್ದ ಹಾಗೆ.. ನಿನ್ನ ಆತ್ಮವಿದೆಯಲ್ಲ, ಅದನ್ನ ಬದಲಾಯಿಸೋಕೆ ಸಾಧ್ಯವೆ? ಹಾಗೇ ನನಗೂ ನನ್ನ ಕವಚವನ್ನ ಬದಲಾಯಿಸೋಕೆ ಆಗದು.’ ವಿಸ್ಕಿ ಕುಡಿಕುಡಿದು ತನ್ನ ನೋವು ಮರೆಯಲೆತ್ನಿಸುವ ‘ಲೊರೆಕ್ ಬರ್ನಿಸನ್’ ಎಂಬ ಹಿಮಕರಡಿ ಪುಟ್ಟ ಲೈರಾ ಬೆಲಾಕ್ವಾಳಿಗೆ ಹೇಳುತ್ತದೆ. ತನ್ನನ್ನು ದಿಟ್ಟಿಸುವ ಬಂದೂಕು ಹಿಡಿದ ಜಿಪ್ಸಿಯೊಬ್ಬನನ್ನು ’ಹಾಗ್ಯಾಕೆ ನೋಡ್ತೀಯ?’ ಎಂದು ಗುರುಗುಟ್ಟುವ ಲೈರಾ ಒಂದೇ ಕ್ಷಣದಲ್ಲಿ ನಮ್ಮ ಮನೆಯ ತುಂಟಹುಡುಗಿ ಹುಟ್ಟಿಸುವಷ್ಟೇ ಅಕ್ಕರೆ ಮೂಡಿಸುತ್ತಾಳೆ. ಆಕೆಯ ನಾಲಗೆಯೋ, ಚಾವಟಿ. ಅದರ ಮೇಲೆ ನಿಜವಲ್ಲದೆ ಇನ್ನೇನೂ ಬರದು. ಆಕೆಯ ಮೆದುಳು ಈಗಿನ ಕಾಲದ ಮಕ್ಕಳ ಹಾಗೆ – ಬಲು ಚಾಲಾಕು. ಹಾಗಾಗೇ ಲೊರೆಕ್ ಬರ್ನಿಸನ್ ತನಗೇ ಅರಿವಿಲ್ಲದ ಹಾಗೆ ಲೈರಾಳ ಜತೆ ಒಪ್ಪಂದ ಮಾಡಿಕೊಳ್ಳುತ್ತದೆ. ತಾನು ಲೈರಾಳ ಸಮಯಪ್ರಜ್ನೆಯಿಂದ ವಾಪಾಸು ಹಿಮಕರಡಿಗಳ ರಾಜನಾದ ಮೇಲೂ ’ನನ್ನ ಹೆಸರು ಇನ್ನುಮುಂದೆ ಲೊರೆಕ್ ಬೆಲಾಕ್ವಾ, ನಾನು ನನ್ನ ಕೈಲಾಗುವವರೆಗೂ ನೀನು ಹೇಳಿದಂತೆ ಕೇಳುವೆ!’ ಎಂದೆನ್ನುತ್ತದೆ. ಲೈರಾಳ ಪಾತ್ರವೇ ಅಂಥದು. ಆಕೆ ಬರಿ ಪಾತ್ರವಾಗಿ ಉಳಿಯದೆ ನಮ್ಮ ಮನಸ್ಸುಗಳೊಳಗೆ ಅಚ್ಚೊತ್ತುವ ತುಂಟಹುಡುಗಿ. Read the rest of this entry »

ಪಥೇರ್ ಪಾಂಚಾಲಿಯ ಎರಡನೇ ಕಂತು

without comments

ಪಥೇರ್ ಪಾಂಚಾಲಿಯ ನಿರ್ಮಾಣದ ಬಗ್ಗೆ ಆನಂದ್ ಸಂಗ್ರಹಿಸಿ ಕೊಟ್ಟ ಲೇಖನದ ಎರಡನೇ ಭಾಗವನ್ನು ಪ್ರಕಟಿಸಲಾಗುತ್ತಿದೆ.

ಪತೇರ್ ಪಾಂಚಾಲಿಯ ದೃಶ್ಯಾವಳಿಗಳನ್ನು ಚಿತ್ರೀಕರಿಸುತ್ತಾ ಹೋದಂತೆ ತಮ್ಮ ಕಲಿಕೆ ಮುಂದುವರೆಯುತ್ತಿರುವುದನ್ನು ರೇ ಮನಗಂಡಿದ್ದರು. ಬಂಗಾಳಿ ಹಳ್ಳಿಯ ಸಂಜೆಯ ನೀರವತೆ, ಹನಿ ಹನಿ ಮಳೆಯಿಂದ ಕೆರೆಗಳಲ್ಲಿ ನೀರು ತುಂಬುವುದು, ಸೌದೆ ಒಲೆಗಳಿಂದ ಹೊಮ್ಮುವ ಹೊಗೆ ಹರಡಿರುವುದು, ದೂರದ ಮನೆಗಳಿಂದ ಕೇಳಿ ಬರುವ ವಿಷಾದಭರಿತ ಶಂಖನಾದಗಳು, ಕತ್ತಲಾಗುತ್ತಿದ್ದಂತೆ ಇದಕ್ಕೆ ಪಕ್ವವಾದ್ಯವಾಗಿ ಜೀರುಂಡೆಗಳ ಸದ್ದು, ಕತ್ತಲಲ್ಲಿ ಕಣ್ಣು ಹಾಯಿಸಿದಷ್ಟೂ ದೂರಕ್ಕೂ ಕಾಣುವ ನಕ್ಷತ್ರಗಳ ಮಿನುಗು ಇವೆಲ್ಲವನ್ನೂ ರೇ ಸಾಕ್ಷಾತ್ಕರಿಸಿಕೊಂಡರು.allinda tandaddu 1
ಅಂತೂ ಇಂತೂ ರೇ ಅವರಿಗೆ ಆನಾ ದತ್ತಾ ಅವರಲ್ಲಿ ಒಬ್ಬ ನಿರ್ಮಾಪಕರು ದೊರೆತಿದ್ದರು. ಅವರು ಸ್ವಲ್ಪ ಹಣಕಾಸು ನೀಡಿದರಲ್ಲದೆ ತಮ್ಮ ಇತ್ತೀಚಿನ ಚಲನಚಿತ್ರವನ್ನು ಬಿಡುಗಡೆ ಮಾಡಿ, ಫಲಿತಾಂಶಗಳನ್ನು ನೋಡಿದ ನಂತರ ಇನ್ನಷ್ಟು ಸಹಾಯದ ಮಾಡುವ ಭರವಸೆ ನೀಡಿದ್ದರು. ಮತ್ತಷ್ಟು ದೃಶ್ಯಗಳನ್ನು ಚಿತ್ರೀಕರಿಸುವ ಸಲುವಾಗಿ ರೇ ಅವರು ಒಂದು ತಿಂಗಳ ಸಂಬಳರಹಿತ ರಜೆ ತೆಗೆದುಕೊಂಡರು. Read the rest of this entry »

ಹೋಟೆಲ್ ರುವಾಂಡಾ- ಅತ್ಯಂತ ಕಳಕಳಿಯ ಚಿತ್ರ

with 5 comments

ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿಗಳ ವಿರುದ್ಧ ದಂಗೆ ಶುರುವಾಗಿದೆ. ಒಂದು ಬಗೆಯ ಅಶಾಂತಿ, ಅಭದ್ರತೆ. ಇಂಥ ಸಂದರ್ಭದಲ್ಲಿ “ಹೋಟೆಲ್ ರುವಾಂಡಾ” ನೆನಪಾಯಿತು. ಈ ಚಿತ್ರವೂ ಒಂದು ಬಗೆಯ “ರೇಸಿಸಂ” , ಜನಾಂಗೀಯ ಹಿಂಸೆಯೇ. ಇಂಥದೊಂದು ಅದ್ಭುತ ಚಿತ್ರದಲ್ಲಿ ರೂಪಿತನಾದ ನಾಯಕನ ಮನಃಸ್ಥಿತಿ ನಿಜಕ್ಕೂ ಅಚ್ಚರಿ ಹುಟ್ಟಿಸುವಂಥದ್ದು.  ಟೀನಾ ಶಶಿಕಾಂತ್ ಅವರ ಬ್ಲಾಗ್ ನಲ್ಲಿದ್ದ ಈ ಲೇಖನವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. 

allinda tandaddu 1

“ಎಂದು ಉದಯಿಸುವ ಆ ಸೂರ್ಯ?

ಎಂದು ನಮಗೆ ‘ಅದರ’ ದರ್ಶನ ಮಾಡಿಸುವ?
   ರುವಾಂಡಾ ರುವಾಂಡಾ

ಹೌದು, ರುವಾಂಡಾ ರುವಾಂಡಾ

… ಅವರು ಹೇಳುವರು, ‘ಮನುಷ್ಯನ ಬೆಲೆ ಅವನ ಕೆಲಸದಿಂದ.’
ಹಾಗಿದ್ದರೆ ಹೇಳು ಆಫ್ರಿಕಾ, ನಿನ್ನ ಬೆಲೆಯೇನು?…”

hotel rwanda-3

-ಮಿಲಿಯನ್ ವಾಯ್ಸಸ್. OST:’ಹೋಟೆಲ್ ರುವಾಂಡಾ’, ಗಾಯಕ:  ವೈಕ್ಲೆಫ್ ಜೀನ್

 ***
 ಪಾಲ್ ರಸೀಬಗಿನಾ ತನ್ನ ಹೋಟೆಲಿಗೆಂದು ಆಹಾರವಸ್ತುಗಳನ್ನು  ಕೊಳ್ಳಲು ಸಹಾಯಕನೊಡನೆ ಜೀಪಿನಲ್ಲಿ  ಹೊರಟಿದ್ದಾನೆ. ದಂಗೆಯ  ಭೀತಿಯಿರುವುದರಿಂದ ಕಾಡಿನಿಂದ ಆಗಿಹೋಗುವ  ಮಾರ್ಗವೊಂದನ್ನು ಆಯ್ದುಕೊಂಡಿರುವ ಅವರು ಎಲ್ಲ ವಸ್ತುಗಳನ್ನು  ಜೀಪಿನಲ್ಲಿ ಹೇರಿಕೊಂಡು ಬಂದ ಮಾರ್ಗದಿಂದಲೇ ವಾಪಾಸು  ಹೋಗುತ್ತ ಇದ್ದಾರೆ. ಎಲ್ಲೆಡೆ ಮುಸುಕಿದ ಮಂಜು. ಅಷ್ಟರಲ್ಲಿ ಜೀಪಿನ  ಚಕ್ರಕ್ಕೆ ಗಟ್ಟಿಯಾದದ್ದೇನೋ ತಗುಲತೊಡಗಿ ಡ್ರೈವ್ ಮಾಡಲು  ತೊಂದರೆ. ಪಾಲ್ ತನ್ನ ಸಹಾಯಕನಿಗೆ ‘ನೀನು ಸರಿಯಾದ ದಾರಿಯಲ್ಲಿ ಹೋಗುತ್ತಿಲ್ಲ. ನಿಲ್ಲಿಸು!’ ಎಂದು ಗದರುತ್ತಾನೆ. ಜೀಪು ನಿಲ್ಲಿಸಿ ಕೆಳಗಿಳಿದರೆ ಕಾಲಡಿಗೆ ಮೆತ್ತಗಿನದೇನೋ ತಗುಲುತ್ತದೆ. ಬಗ್ಗಿ ನೋಡುತ್ತಾನೆ, ಕೆಲವು ಹೆಣಗಳು ಕಾಣುತ್ತವೆ. ಗಾಬರಿಯಾಗಿ ಮುಗ್ಗರಿಸಿ ಬೀಳುತ್ತಾನೆ, ಮುಟ್ಟಿದಲ್ಲೆಲ್ಲ ಹೆಣಗಳೇ ತಗುಲುತ್ತವೆ. ಅಷ್ಟರಲ್ಲಿ ಮುಸುಕಿದ ಮಂಜು ಎದ್ದೇಳುತ್ತದೆ. ಪಾಲ್ ಬಂದಾಗ ನಿರ್ಮಾನುಷ್ಯವಾಗಿದ್ದ ದಾರಿಯ ತುಂಬ ಈಗ ಹೆಣಗಳೇ ತುಂಬಿಕೊಂಡಿವೆ. ತಮ್ಮ ಜೀಪು ಇಲ್ಲಿಯವರೆವಿಗೂ ಚಲಿಸುತ್ತಿದ್ದುದು ಹೆಣಗಳ ಮೇಲೆ ಎಂದು ತಿಳಿದುಬಂದು ಪಾಲ್ ತತ್ತರಿಸಿಹೋಗುತ್ತಾನೆ.

hotel rwanda-2

ಇದು ಕೇವಲ ‘ಹೋಟೆಲ್ ರುವಾಂಡಾ’ ಎಂಬ ಚಲನಚಿತ್ರದ ದೃಶ್ಯವಾಗಿದ್ದರೆ ಪರವಾಗಿರಲಿಲ್ಲ. ಆದರೆ ಇದು ರುವಾಂಡಾ ದೇಶದ ಕಿಗಾಲಿ ಪಟ್ಟಣದ ಹಾದಿಯೊಂದರಲ್ಲಿ ನಿಜವಾಗಿ ನಡೆದ ಘಟನೆಯಾಗಿತ್ತು. 1994ರಲ್ಲಿ ಆಫ್ರಿಕಾ ಖಂಡದ ರುವಾಂಡಾ ದೇಶದಲ್ಲಿ ಹುಟು ಜನಾಂಗದವರು ಟೂಟ್ಸಿ ಜನಾಂಗದವರ ಮೇಲೆ ಬಂಡೆದ್ದು ನಡೆಸಿದ ಮಾರಣಹೋಮದಲ್ಲಿ ಕೇವಲ ಮೂರು ತಿಂಗಳಲ್ಲಿ ಒಂದು ಮಿಲಿಯನ್ ಜನ ಕೊಲೆಯಾದರು. ತಮ್ಮ ನ್ಯೂಯಾರ್ಕ್, ಲಂಡನ್ನುಗಳಲ್ಲಿ ಒಂದು ಬಾಂಬು ಸ್ಫೋಟವಾದರೆ ದೆವ್ವಬಂದವರಂತೆ ಆಡುವ ಅಮೆರಿಕಾ, ಯುನೈಟೆಡ್ ಕಿಂಗ್ಡಂಗಳು ಈ ಸಮಯದಲ್ಲಿ ರುವಾಂಡಾಗೂ ತಮಗೂ ಸಂಬಂಧವೇ ಇಲ್ಲವೇನೋ ಅನ್ನುವ ಹಾಗೆ ಮೂಕವಾಗಿದ್ದುಬಿಟ್ಟವು. ಈ ವಿಕೃತ ಜನಾಂಗೀಯ ಹತ್ಯೆಯ ಹಿನ್ನೆಲೆಯಲ್ಲಿ ನಿರ್ದೇಶಕ ಟೆರಿ ಜಾರ್ಜ್ ‘ಹೋಟೆಲ್ ರುವಾಂಡಾ’ವನ್ನು ಚಿತ್ರಿಸಿದ್ದಾನೆ.

hotel rwanda-1

 ಪಾಲ್ ರಸೀಬಗಿನಾ ಕಿಗಾಲಿಯ  ಯುರೋಪಿಯನ್ ಒಡೆತನದ  ಹೋಟೆಲ್ ‘ಮಿಲ್ ಕಾಲಿನ್ಸ್’ನ  ಮ್ಯಾನೇಜರ್. ಆತ ದಂಗೆ  ಶುರುವಾದಾಗ ಎದೆಗೆಡುವುದಿಲ್ಲ.  ಆತ ಹಾಲಿವುಡ್ ಫ್ಯಾಂಟಸಿ  ಚಲನಚಿತ್ರಗಳ ಹೀರೋಗಳಂತೆ  ಚಿತ್ರವಿಚಿತ್ರವಾಗಿ  ಕಾದಾಡುವುದಿಲ್ಲ. ಆತ  ತೊಂದರೆಯಲ್ಲಿ ದಿಕ್ಕೆಟ್ಟು  ಓಡಾಡುವವನಲ್ಲ. ಪಾಲ್ ಒಬ್ಬ ನಾಜೂಕಯ್ಯ. ಆತನಿಗೆ ಯಾರ ಕೈಲಿ ಹೇಗೆ ಕೆಲಸ ತೆಗೆಯಬೇಕು, ಯಾರ ಕೈ ಬಿಸಿಮಾಡಿದರೆ ಕೆಲಸವಾಗುತ್ತದೆ, ಎಲ್ಲ ಗೊತ್ತು. ದಂಗೆಯ ವಿವಿಧ ಕ್ರೂರ ಮುಖಗಳನ್ನು ನೋಡುತ್ತ ಏಕಾಂತದಲ್ಲಿ ವಿಚಲಿತನಾದರು ತನ್ನ ಕುಟುಂಬ ಹಾಗೂ ಹೊಟೆಲಿನ ಕೆಲಸಗಾರರೆದುರು ಅದನ್ನು ತೋರ್ಪಡಿಸಿಕೊಳ್ಳುವುದಿಲ್ಲ. ತನ್ನ ಸುತ್ತಮುತ್ತಲ ಜನರನ್ನು ಆತ ಆಳವಾಗಿ ಅಭ್ಯಸಿಸಿದ್ದಾನೆ. ಹುಟು ಜನಾಂಗದವರ ಕ್ರೌರ್ಯ ಮಿತಿಮೀರಿದಾಗ ತನ್ನ ಹೊಟೆಲಿನಲ್ಲಿ ಸುಮಾರು 1200 ಟೂಟ್ಸಿಗಳನ್ನು ಅವಿಸಿಡುತ್ತಾನೆ. ತನ್ನ ಹೊಟೆಲಿನ ನಿರಾಶ್ರಿತರಿಗೋಸ್ಕರ ಆತ ಏನು ಮಾಡಲೂ ತಯಾರು. ಅವರು ಹೊರಹೋದರೆ ಹೆಂಗಸರು-ಮಕ್ಕಳೆನ್ನದೆ ಎಲ್ಲರೂ ಹುಟುಗಳ ಕೈಯಲ್ಲಿ ಕಗ್ಗೊಲೆಯಾಗುವುದು ಖಚಿತವಾಗಿ ಆತನಿಗೆ ತಿಳಿದಿದೆ. ಮಿಲಿಟರಿಯವರಿಗೆ ಲಂಚ ಕೊಡುವುದರಿಂದ ಹಿಡಿದು, ಅಮೆರಿಕದವರು ಸ್ಯಾಟೆಲೈಟ್ ಮೂಲಕ ಅವರನ್ನು ನೋಡುತ್ತಿದ್ದಾರೆಂದು ಬೆದರಿಸುವವರೆಗೂ, ತನ್ನ ಹೋಟೆಲಿನ ‘ಅತಿಥಿ’ಗಳಿಗಾಗಿ ಹುಟುಗಳ ನಾಯಕನಿಂದ ಆಹಾರವಸ್ತುಗಳನ್ನು ಇಸಿದುಕೊಂಡು ಬರುವವರೆಗೂ ಆತನ ವ್ಯವಹಾರಿಕಜ್ನಾನ ಬೇರೆಬೇರೆ ಮುಖಗಳನ್ನು ಪಡೆದುಕೊಳ್ಳುತ್ತ ಹೋಗುತ್ತದೆ. ನಾಳೆ ಸಾವು ಕಾದಿದೆ ಎಂದು ಖಚಿತವಾದಾಗ ಹೆಂಡತಿ ಟೆಸ್ಸಿಯಾನಾಳಿಗೆ ಕ್ಯಾಂಡಲ್ ಲೈಟ್ ಔತಣ ಏರ್ಪಡಿಸಿ ಆಕೆಯಿಂದ ಒಂದು ಭಾಷೆ ಪಡೆಯುತ್ತಾನೆ – ‘ನಾಳೆ ಹುಟುಗಳು ಇಲ್ಲಿಗೆ ದಾಳಿಮಾಡಿದರೆ ನೀನು ಮಕ್ಕಳನ್ನು ಕರೆದುಕೊಂಡು ಟೆರೇಸಿನಿಂದ ಕೆಳಹಾರಿ ಆತ್ಮಹತ್ಯೆ ಮಾಡಿಕೊಳ್ಳಬೇಕು. ನೀವು ಅವರ ಕೈಗೆ ಸಿಕ್ಕಿಹಾಕಿಕೊಂಡು ಸಾಯೋದಕ್ಕಿಂತ ಇದು ಮೇಲು.’ ತನ್ನ ಜನರನ್ನು ರಕ್ಷಿಸಲು ಆತ ವಿಶ್ವಸಂಸ್ಥೆಯ ಕರ್ನಲ್ ಒಬ್ಬನಿಂದ ಹಿಡಿದು, ತನ್ನ ವಿದೇಶೀ ಮಾಲೀಕ, ಲಂಚಕೋರ ಮಿಲಿಟರಿ ಅಧಿಕಾರಿ ಮತ್ತು  ತನಗೆ ತಿಳಿದ ಎಲ್ಲ ಪಾಶ್ಚಿಮಾತ್ಯ ಜನರನ್ನು ಸಂಪರ್ಕಿಸುವುದು ನಾಗರೀಕತೆಗೇ ನಾಚಿಕೆ ಬರಿಸುವಂತಿದೆ. ವಿಶ್ವಸಂಸ್ಥೆಯ ಕರ್ನಲನ ಅಸಹಾಯಕತೆ, ಕೋಪಗಳು, ಟೂಟ್ಸಿಗಳ ಹಾಡುಹಗಲ ಕೊಲೆಗಳನ್ನು ವಿಡಿಯೋಚಿತ್ರಣ ಮಾಡುವ ವಿದೇಶೀ ಪತ್ರಕರ್ತನ ನೋವು, ಇವೆಲ್ಲ ಮುಂದುವರಿದ ದೇಶಗಳ ಹಿಪಾಕ್ರಸಿಗೆ ಹಿಡಿದ ಕನ್ನಡಿ.

ಆ ಮಾರಣಹೋಮದ ಹೊತ್ತು ರುವಾಂಡಾದಲ್ಲಿ ತಾಂಡವವಾಡಿದ್ದು ರೌರವ ದ್ವೇಷ. ಮಾನವತೆಗೆ ಅಲ್ಲಿ ಸಾರಾಸಗಟಾಗಿ ಮಸಿ ಬಳಿಯಲಾಯಿತು. ಇವೆಲ್ಲದರ ವಿರುದ್ಧ ನಿಂತು ತನ್ನ ಹೋಟೆಲಿನ ನಿರಾಶ್ರಿತರನ್ನು ವಿಶ್ವಸಂಸ್ಥೆಯ ರೆಫ್ಯೂಜಿ ಕ್ಯಾಂಪಿಗೆ ತಲುಪಿಸುವಲ್ಲಿ ಯಶಪಡೆದ ಪಾಲ್ ರಸೀಬಗಿನಾನ ಕಥೆ ಸಾಮಾನ್ಯವಾದ್ದಲ್ಲ. ಇಂದಿಗೂ ಆತ ಬೆಲ್ಜಿಯಂ ದೇಶದಲ್ಲಿ ತನ್ನ ಹೆಂಡತಿ, ಮಕ್ಕಳು ಹಾಗೂ ತಾನು ಸಾಕುತ್ತಿರುವ ರುವಾಂಡಾದ ಇಬ್ಬರು ಅನಾಥ ಮಕ್ಕಳೊಡನೆ ವಾಸವಾಗಿದ್ದಾನೆ. ‘ಹೋಟೆಲ್ ರುವಾಂಡಾ’ ಆತನ ಕಥೆಯನ್ನು ತಣ್ಣಗೆ ಬಣ್ಣಿಸಿ ಹೇಳುತ್ತದೆ. ಪಾಲ್ ನ ಪಾತ್ರವನ್ನು ಅಭಿನಯಿಸಿರುವ ಡಾನ್ ಶೀಡ್ಲ್ ಇಂದಿನ ಅತ್ಯುತ್ತಮ ನಟರಲ್ಲೊಬ್ಬ. ಈ ಚಲನಚಿತ್ರಕ್ಕೋಸ್ಕರ ಗಾಯಕ ವೈಕ್ಲೆಫ್ ಜೀನ್ ಹಾಡಿರುವ ‘ಮಿಲಿಯನ್ ವಾಯ್ಸಸ್’ ಬಹಳ ಸರಳ ಸುಂದರ ಸೌಂಡ್ ಟ್ರಾಕ್. ಈ ಹಾಡಿನ ಯು-ಟ್ಯೂಬ್ ಲಿಂಕ್ ಈ ಕೆಳಗಿದೆ: http://www.youtube.com/watch?v=yT0l4VqH0ds