Archive for the ‘ಅನಿಮೇಷನ್’ Category
ಹೌದು..ಇಂಥ ಸಿನಿಮಾಗಳನ್ನು ಹೇಗೆ ರೂಪಿಸುತ್ತಾರೆ ?
ಶಿವು .ಕೆ. ಅವರು ಅನಿಮೇಷನ್ ಸಿನಿಮಾದ ಬಗ್ಗೆ ಹೇಳುತ್ತಲೇ ಅದನ್ನು ರೂಪಿಸುವಂಥ ಮಾದರಿ ಬಗ್ಗೆಯೂ ಅತ್ಯಂತ ವಿಷದವಾಗಿ ಮಾಹಿತಿಪೂರ್ಣ ಲೇಖನವನ್ನು ಕಳಿಸಿದ್ದಾರೆ. ಇದನ್ನು ಓದಿ ಪ್ರತಿಕ್ರಿಯಿಸಿ.
ಅವತ್ತು ಬಿಡುವಿತ್ತು. ನಾನು ತುಂಬಾ ದಿನದಿಂದ ಕಾಯುತ್ತಿದ್ದ ಆ ಸಿನಿಮಾ ಡಿವಿಡಿ ಸಿಕ್ಕಿತ್ತು. ಅದೊಂದು ತೀರ ಸರಳ ಕತೆಯಿರುವ ಸಿನಿಮವಾದರೂ ಅಂಥ ಸಿನಿಮಗಳಂದ್ರೆ ನನಗೆ ತುಂಬಾ ಇಷ್ಟ. ತನ್ಮಯತೆಯಿಂದ ನೋಡುತ್ತೇನೆ. ಅದರ ಕತೆ ಹೀಗಿದೆ.
ಅದೊಂದು ಮಂಜಿನ ಲೋಕ. ಅರ್ಧಾತ್ ಮಂಜುಗಡ್ಡೆಯದೇ ಲೋಕ. ಆನೆ ದಂಪತಿಗಳ ಜೊತೆ ಒಂದು ಸಿಂಹ, ಕಾಡುಕುರಿ, ಮುಂಗುಸಿ ಮರಿಗಳ ಜೋಡಿ, ಇವುಗಳ ಜೊತೆ ಎಲ್ಲಾ ರೀತಿಯ ಕಾಡು ಪ್ರಾಣಿಗಳು ಜೊತೆಯಾಗಿ ಸಂತೋಷದಿಂದ ಜೀವಿಸುತ್ತಿರುತ್ತವೆ. ಒಮ್ಮೆ ಮೂರು ದೊಡ್ಡ ಗಾತ್ರದ ಮೊಟ್ಟೆಗಳು ಸಿಕ್ಕಿ ಅವುಗಳಿಂದ ಮರಿಗಳು ಹೊರಬರುತ್ತವೆ. ಅವು ಡೈನಾಸಾರ್ ಮರಿಗಳು. ಇತರೆಲ್ಲಾ ಮರಿಗಳ ಜೊತೆಗೆ ಆಡಿ ಬೆಳೆಯುತ್ತಾ ಎಲ್ಲ ಪ್ರಾಣಿಗಳಿಗೂ ಕಾಟ ಕೊಡುತ್ತಾ ಬೆಳೆಯುತ್ತಿರುವಾಗ ಮೊಟ್ಟೆಗಳನ್ನು ಕಳೆದುಕೊಂಡ ದೊಡ್ಡ ಡೈನೋಸಾರ್ ಹುಡುಕಿಕೊಂಡು ಅಲ್ಲಿಗೆ ಬರುತ್ತದೆ. ಅಲ್ಲಿರುವ ಪ್ರಾಣಿ ಪಕ್ಷಿಗಳಿಗೆಲ್ಲಾ ಭಯ ಮತ್ತು ಅಚ್ಚರಿ. ಎಲ್ಲವು ತಮಗೆ ದೊಡ್ಡ ವಿಪತ್ತು ಬಂತು ಅಂತ ದಿಗಿಲುಪಟ್ಟುಕೊಂಡಿರುವಾಗ ಎಲ್ಲಾ ಪ್ರಾಣಿಗಳನ್ನು ಎದುರಿಸಿ ದೈತ್ಯ ಡೈನೋಸಾರ್ ತನ್ನ ಮೂರು ಮರಿಗಳನ್ನು ಜೊತೆಯಲ್ಲಿರುವ ಕಾಡುಕುರಿಯನ್ನು ಎತ್ತಿಕೊಂಡು ಹೋಗಿಬಿಡುತ್ತದೆ. ಆದುವರೆವಿಗೂ ತಮ್ಮದೇ ಲೋಕದಲ್ಲಿ ಸುಖವಾಗಿದ್ದ ಈ ಪ್ರಾಣಿಗಳಿಗೆ ಈ ಡೈನೋಸಾರುಗಳ ಆಗಮನದಿಂದ ತಾವು ಬದುಕುವುದು ಕಷ್ಟವಾಗುತ್ತದೆ. ನಡುವೆ ಇತರ ಡೈನೋಸಾರುಗಳಿಂದ ಆಕ್ರಮಣಕ್ಕೆ ತಮ್ಮದೇ ತಂತ್ರಗಳಿಂದ ತಪ್ಪಿಸಿಕೊಳ್ಳುವುದು. ನಡುವೆ ದೊಡ್ಡ ರಾಕ್ಷಸ ಗಾತ್ರದ ಮಾಂಸಹಾರಿ ಗಿಡಗಳಿಂದ ಆನೆ, ಸಿಂಹದಂತ ಪ್ರಾಣಿಗಳ ಮೇಲೆ ಆಕ್ರಮಣ, ರಾಕ್ಷಸಾಕಾರದ ಕೀಟಗಳು, ಹುಳುಗಳು, ಅದರಿಂದ ತಪ್ಪಿಸಿಕೊಳ್ಳುವುದು, ಹಾಗೆ ಸಾಗುತ್ತಾ ಜಾರುವ ದೊಡ್ಡ ದೊಡ್ಡ ಬಂಡೆಗಳ ನಡುವೆ ಸಾಗುವಾಗ ಬಂಡೆಗಳು ಜರುಗಿ ಎಲ್ಲಾ ಪ್ರಾಣಿಗಳು ಅಲ್ಲೋಲ ಕಲ್ಲೋಲ. ಇಷ್ಟೆಲ್ಲದರ ನಡುವೆ ಹೆಣ್ಣಾನೆಗೆ ಒಂದು ಮರಿಯಾನೆ ಹುಟ್ಟುತ್ತದೆ.

ಮತ್ತೊಂದು ಕಡೆ ಮರಿ ಡೈನಾಸಾರುಗಳ ಜೊತೆ ದೊಡ್ಡ ಡೈನಾಸರ್ ಮತ್ತೊಂದು ಅದಕ್ಕಿಂತ ದೊಡ್ಡದಾದ ಡೈನಸರ್ ಬಂದಾಗ ಅದರಿಂದ ತಪ್ಪಿಸಿಕೊಳ್ಳುವುದು. ಆಷ್ಟು ದೊಡ್ಡ ಡೈನಸರನ್ನು ಒಂದು ಪುಟ್ಟ ಜಂಬದ ನರಿ ಸೋಲಿಸಿ ಕಟ್ಟಿಹಾಕುವುದು ಆ ಸಮಯದಲ್ಲಿ ಆನೆಗಳು ಸಿಂಹ, ಇತರ ಪ್ರಾಣಿಗಳು ಅದರಿಂದ ತಪ್ಪಿಸಿಕೊಳ್ಳುವುದು ಹೀಗೆ ಸಾಗುತ್ತ ಕೊನೆಗೆ ಅಷ್ಟು ದೊಡ್ಡ ಡೈನಾಸರ್ ಜಾರಿ ಪ್ರಪಾತಕ್ಕೆ ಬಿದ್ದು ಸಾಯುವಂತೆ ಮಾಡುವುದು ಈ ಜಂಬದ ಬುದ್ಧಿವಂತ ನರಿ. ಅಲ್ಲಿಗೆ ಕತೆ ಸುಖಾಂತ್ಯವಾಗುತ್ತದೆ.
ಇದು ಐಸ್ ಎಜ್ 3 ಅನಿಮೇಶನ್ ಸಿನಿಮಾದ ಕತೆ. ಇದರ ಮೊದಲ ಎರಡು ಭಾಗಗಳಲ್ಲಿ ಒಂದು ಅಳಿಲು ಮತ್ತು ಒಂದು ಗೇರುಬೀಜದೊಂದಿಗೆ ಪ್ರಾರಂಭವಾದರೆ ಇಲ್ಲಿ ಅಳಿಲಿಗೊಂದು ಹೆಣ್ಣ ಅಳಿಲು ಜೊತೆಯಾಗುವುದರೊಂದಿಗೆ ಕತೆ ಪ್ರಾರಂಭವಾಗುತ್ತದೆ. ಮತ್ತು ಕತೆ ಅಂತ್ಯವಾಗುವುದು ಈ ಅಳಿಲುಗಳಿಂದಲೇ. Read the rest of this entry »
ಜಾಜ್ ಹಿಮ್ಮೇಳಕ್ಕೆಗಾನ- ಸೀತಾ ಸಿಂಗ್ಸ್ ದ ಬ್ಲೂಸ್ !
ಈ ಅನಿಮೇಷನ್ ಚಿತ್ರ ತಯಾರಾದದ್ದು 2009 ರಲ್ಲಿ. “ಸೀತಾ ಸಿಂಗ್ಸ್ ದ ಬ್ಯೂಸ್” ಚಿತ್ರದ ಬಗ್ಗೆ ಮಾಹಿತಿ ಒದಗಿಸಿರುವವರು ರವಿರಾಜ್ ಗಲಗಲಿ.
ಸ್ತ್ರೀ ಸಮಾನತೆ, ಸ್ತ್ರೀ ಶೋಷಣೆ ಕುರಿತ ನೂರಾರು ಚಿತ್ರಗಳು ಸಿನಿಮಾ ಇತಿಹಾಸದಲ್ಲಿ ದಾಖಲಾಗಿವೆ. ಅಂತಹ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ ಮತ್ತೊಂದು ಚಿತ್ರ, ಹೆಸರು ಸೀತಾ ಸಿಂಗ್ಸ್ ದ ಬ್ಲೂಸ್. ಭಾರತೀಯ ಸಂಜಾತೆ ನೀನಾ ಪೆಲೆ ನಿರ್ದೇಶಿಸಿರುವ ಇದು ಅನಿಮೇಶನ್ ಮೂವಿ. ರಾಮಾಯಣದ ಸೀತಾ ಅಗ್ನಿ ಪರೀಕ್ಷೆ ಕತೆಯ ಹಂದರವನ್ನಿಟ್ಟು ಚಿತ್ರ ನಿರ್ಮಿಸಲಾಗಿದೆ.

ಭಾರತೀಯ ತೊಗಲು ಬೊಂಬೆ, ಕಾರ್ಟೂನ್, ಅನಿಮೇಶನ್ ಸೇರಿ 2-ಡಿ ತಂತ್ರಜ್ಞಾನದಲ್ಲಿ ಸಿದ್ಧಗೊಂಡಿರುವ ಚಿತ್ರ ಎರಡು ಹಂತಗಳಲ್ಲಿದೆ. ಮೊದಲ ಹಂತದಲ್ಲಿ ಸೀತೆಯ ಅಪಹರಣ, ಅಗ್ನಿ ಪರೀಕ್ಷೆಯ ಯಥಾವತ್ತು ಕತೆ. ಎರಡನೇ ಹಂತದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಗಂಡನೊಂದಿಗೆ ವಾಸಿಸುವ ಗೃಹಿಣಿಯ ಕತೆ. ತನ್ನ ನೆಚ್ಚಿನ ಬೆಕ್ಕು, ಗಂಡನೊಂದಿಗೆ ಬದುಕುವ ಕಥಾನಾಯಕಿ.
ಚೆನ್ನೆಗೆ ಪ್ರಾಜೆಕ್ಟ್ ಗಾಗಿ ತೆರಳುವ ಸಾಫ್ಟವೇರ್ ಗಂಡ ತನ್ನ ಸಂಸ್ಥೆಯ ಕಾಂಟ್ರ್ಯಾಕ್ಟ್ ವಿಸ್ತರಣೆಯಾಗಿದೆ ಎಂದು ತಿಳಿಸುತ್ತಾನೆ. ಗಂಡನ ಭೇಟಿಗೆ ಭಾರತಕ್ಕೆ ಬರುವ ನಾಯಕಿಗೆ ಪತಿಯಿಂದ ತಕ್ಕ ಪುರಸ್ಕಾರ ದೊರೆಯುವುದಿಲ್ಲ, ಆತನ ನಿರ್ಲಕ್ಷ್ಯ, ನಿರಾಸೆಗೆ ಬೇಸತ್ತು ನಾಯಕಿ ಅಮೆರಿಕಕ್ಕೆ ವಾಪಸ್ಸಾಗುತ್ತಾಳೆ, ಅಲ್ಲಿ ಹೊಸ ಬೆಕ್ಕಿನೊಂದಿಗೆ ಹೊಸ ಮನೆ ತಲಾಶ್ ಮಾಡುತ್ತಾಳೆ, ಇದಿಷ್ಟು ಕತೆ.
ಅಗ್ನಿ ಪರೀಕ್ಷೆಗೆ ಮುಂದಾದಾಗ ಸೀತೆ ಅನುಭವಿಸುವ ಸಂಕಟ, ತಪನೆಯನ್ನು ಸಿನಿಮಾದಲ್ಲಿ ಪ್ರತಿಬಿಂಬಿಸಿದ್ದೇನೆ ಎನ್ನುವುದು ನಿರ್ದೇಶಕಿ ಅಭಿಮತ. ದಿ.ಆನೆಟ್ಟೆ ಹೆನ್‌ಶಾವ್ ಹಾಡಿದ ಜಾಜ್ ಹಾಗೂ ಬ್ಲೂಸ್ ಗೀತೆಗಳನ್ನು ಸೀತೆ ಹಾಡುತ್ತಾಳೆ, ಸಂಗೀತವೂ ಪಾಶ್ಚಾತ್ಯಮಯ. ಹೀಗಾಗಿ ಇದೊಂದು ವಿಭಿನ್ನ ಪ್ರಯತ್ನ ಎನ್ನುವುದು ನಿರ್ಮಾಪಕರ ಅಂಬೋಣ.
ಆದರೆ ಚಿತ್ರದ ಕಾರ್ಟೂನ್‌ಗಳು ದೇವತೆಯರನ್ನು ಕುಚೇಷ್ಟೆ ಮಾಡುವಂತಿವೆ, ಇದು ನಮ್ಮ ಸಂಪ್ರದಾಯಕ್ಕೆ ಒಗ್ಗುವಂತಹದ್ದಲ್ಲ ಎಂದು ಪ್ರತಿಭಟನೆಗಳೂ ನಡೆದಿವೆ. ಅನುಮತಿ ಇಲ್ಲದೇ ಜಾಜ್ ಹಾಡುಗಳನ್ನು ಬಳಸಿಕೊಂಡಿದ್ದಕ್ಕೆ ನಿರ್ದೇಶಕಿ ದಂಡವನ್ನೂ ತೆತ್ತಿದ್ದಾರೆ. ಕಾಪಿರೈಟ್ ಸಮಸ್ಯೆಯಿಂದಾಗಿ ಫ್ರೀ ಕಲ್ಚರ್ ಎನ್ನುವ ಹೊಸ ಸಂಸ್ಕೃತಿಯ ಉತ್ಥಾನಕ್ಕೂ ಕಾರಣರಾಗಿದ್ದಾರೆ.
ನೆಟ್‌ನಲ್ಲಿ, ಯೂ ಟ್ಯೂಬ್ ಅಥವಾ ನಿಮ್ಮದೇ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಂಡು ಚಿತ್ರ ನೋಡಬಹುದು, ಬೇಕಾದವರಿಗೂ ತೋರಿಸಬಹುದು. ನೀವು ಚಿತ್ರ ವೀಕ್ಷಿಸಿದ ನಂತರ ನಮ್ಮ ಸಂಸ್ಥೆಗೂ ಸ್ವಲ್ಪ ಧನಸಹಾಯ ಮಾಡಿ ಎನ್ನುವುದು ನಿರ್ಮಾಪಕರ ಅರಿಕೆ. ಸಂಜೀವ್ ಝವೇರಿ, ಅಲ್ಲಾದ್ದೀನ್ ಉಲ್ಲಾಹ್, ನಿತ್ಯಾ ವಿದ್ಯಾಸಾಗರ್ ಚಿತ್ರದ ಪಾತ್ರಧಾರಿಗಳಿಗೆ ಧ್ವನಿಯಾಗಿದ್ದಾರೆ. ಟಾಡ್ ಮಾರ್ಟಿನೆಜ್ ಸಂಗೀತ ಚಿತ್ರಕ್ಕಿದೆ. ಯೂ ಟ್ಯೂಬ್‌ನಲ್ಲಿ 10 ಭಾಗಗಳಲ್ಲಿ ಚಿತ್ರ ವೀಕ್ಷಣೆ ಸಾಧ್ಯ, ನೆಟ್‌ನಿಂದಲೂ ಡೌನ್ ಲೋಡ್ ಮಾಡಿಕೊಳ್ಳಬಹುದು, ಆದರೆ ವೇಗವರ್ಧಕ ಇಂಟರ್‌ನೆಟ್ ಸೌಲಭ್ಯ ಬೇಕು.
ವಿವಾದಾತ್ಮಕ ಚಿತ್ರಗಳಿಗೆ ಪ್ರಶಸ್ತಿ ದೊರಕುತ್ತವೆ ಎಂಬ ಮಾತಿಗೆ ಈ ಚಿತ್ರವೂ ಪುಷ್ಠಿ ನೀಡುತ್ತದೆ. ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಹಲವು ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ದೊರೆತಿದೆ. ಚಾನೆಲ್‌ವೊಂದರಲ್ಲಿ ದೊರೆತ ಮಾಹಿತಿಯೊಂದಿಗೆ ನೆಟ್ ಜಾಲಾಡಿದಾಗ ಇಷ್ಟು ಮಾಹಿತಿ ದೊರೆಯಿತು, ಚಿತ್ರ ವೀಕ್ಷಣೆಗೂ ಅವಕಾಶ ದೊರೆಯಿತು. ಹೆಚ್ಚಿನ ಮಾಹಿತಿಗೆ http://www.sitasingstheblues.com ನೋಡಬಹುದು. ಚಿತ್ರದ ಬಗ್ಗೆ ಮತ್ತಷ್ಟು ಮಾಹಿತಿ, ಪ್ರತಿಕ್ರಿಯೆಗೆ ಸ್ವಾಗತ.




