ಎನ್.ಎಸ್.ಶ್ರೀಧರ ಮೂರ್ತಿ ಅವರು ಗಿರೀಶ್ ಕಾಸರವಳ್ಳಿಯವ ಕನಸೆಂಬೋ ಕುದುರೆಯನ್ನೇರಿ ಚಿತ್ರದ ಕುರಿತು ತಮ್ಮ ನೋಟಗಳನ್ನು ಟಿಪ್ಫಣಿ ಮಾಡಿ ಕಳುಹಿಸಿದ್ದಾರೆ. ಡಿಸೆಂಬರ್ 15 ರಿಂದ 22 ರವರೆಗೆ ಬೆಂಗಳೂರಿನಲ್ಲಿ ನಡೆದ 4 ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಈ ಚಿತ್ರ ಪ್ರದರ್ಶಿತವಾಗಿತ್ತು. ಅಮರೇಶ ನುಗಡೋಣಿಯವರ ಕಥೆಗೆ ಗಿರೀಶ್ ಕಾಸರವಳ್ಳಿಯವರು ದೃಶ್ಯರೂಪ ನೀಡುವ ಚಿತ್ರವೇ ಇದು.

ಸೃಜನಶೀಲ ಕೃತಿಯೊಂದು ಚಲನಚಿತ್ರವಾದಾಗ ತನ್ನ ಪರಿವರ್ತನೆಯಲ್ಲಿ ಎಂತಹ ನೆಲೆಗಳನ್ನು ಉಳಿಸಿಕೊಳ್ಳ ಬೇಕು ಮತ್ತು ಕಳೆದುಕೊಳ್ಳ ಬೇಕು ಎನ್ನುವುದು ನನ್ನನ್ನು ಬಹುಕಾಲದಿಂದಲೂ ಕಾಡುತ್ತಿರುವ ಪ್ರಶ್ನೆ. ಪನ್ನಾಲಾಲ್ ಪಟೇಲರ `ಮಳೇಲಿ ಜೀವ’ ಕಾದಂಬರಿಯ ಸರಳ ಎಳೆಗಳನ್ನು ಹಿಡಿದು ಟಿ.ಎಸ್.ನಾಗಾ ಭರಣ `ಜನುಮದ ಜೋಡಿ’ ಚಲನಚಿತ್ರವನ್ನು ಮಾಡಿದಾಗ ಇಂತಹ ಪ್ರಶ್ನೆ ಸೃಜನಶೀಲತೆಯ ನೆಲೆಯನ್ನು ಕುರಿತಂತೆ ನನ್ನನ್ನು ಕಾಡಿತ್ತು. ಈಗ ಅಂತಹದೇ ಪ್ರಶ್ನೆ ಡಾ.ಅಮರೇಶ್ ನುಗುಡೋಣಿಯವರ `ಸವಾರಿ’ ಸಣ್ಣಕಥೆಯನ್ನು ಗಿರೀಶ್ ಕಾಸರವಳ್ಳಿ `ಕನಸೆಂಬೋ ಕುದುರಿಯನ್ನೇರಿ’ ಎಂಬ ಚಲನಚಿತ್ರವಾಗಿಸಿದ್ದನ್ನು ನೋಡಿದರೆ ಕಾಡುತ್ತಿದೆ.

ಚಲನಚಿತ್ರ ಸಾಹಿತ್ಯಕ್ಕಿಂತ ಭಿನ್ನ ಮಾಧ್ಯಮ ಎಂಬ ಪ್ರಾಥಮಿಕ ಅರಿವು ನನಗೆ ಇದ್ದೇ ಇದೆ. ಚಲನಚಿತ್ರ ಸಾಹಿತ್ಯ ಕೃತಿಯ ದೃಶ್ಯಾತ್ಮಕ ಸಾಧ್ಯತೆ ಮಾತ್ರ ಅಲ್ಲವೆಂಬ ಸೈದ್ದಾಂತಿಕ ನೆಲೆಗಳ ಪರಿಚಯವೂ ನನಗಿದೆ. ಆದರೆ ಸೃಜನಶೀಲ ಕೃತಿಯಲ್ಲಿರುವ ದೃಶ್ಯಾತ್ಮಕ ಸಾಧ್ಯತೆಗಳನ್ನೇ ನಿರಾಕರಿಸಿದರೆ ಚಿತ್ರವಾಗಿಸಲು ಆ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆ ಕಾಡುತ್ತದೆ. ಜೊತೆಗೆ ಮಧ್ಯಮದ ಪಲ್ಲಟ ಸಂಕೀರ್ಣತೆಗಳು ಮಾಯವಾಗಲು ಕಾರಣವಾಗಬಾರದು ಎನ್ನುವುದು ಒಂದು ಸೃಜನಾತ್ಮಕ ಎಚ್ಚರ ಕೂಡ ಹೌದು. ನುಗುಡೋಣಿಯವರ ಹಲವು ಸೂಕ್ಷ್ಮ ನೆಲೆಗಳುಳ್ಳ ಕಥೆಯ ಸಂಕೀರ್ಣತೆಯನ್ನು ಕೈಬಿಟ್ಟು ಬೌದ್ದಿಕವಾದ ಕಥೆಯ ಗುಣವಲ್ಲದ ನೆಲಯ ಪ್ರತಿಪಾದನೆಯಾಗಿ ಚಿತ್ರ ಮೂಡಿ ಬಂದಿರುವುದು ಅಯ್ಕೆಯ ಉದ್ದೇಶವನ್ನೇ ಪ್ರಶ್ನಾರ್ಥಕವಾಗಿಸಿದೆ.ನುಗಡೋಣಿ ಮತು ಕಾಸರವಳ್ಳಿಯವರ ಅಭಿವ್ಯಕ್ತಿ ಕ್ರಮ ಕೂಡ ಇದಕ್ಕೆ ಕಾರಣವಿರಬಹುದು . ಏಕೆಂದರೆ ವಿವರಗಳ ಮೂಲಕ ಕಥೆ ಕಟ್ಟುವುದು ನುಗುಡೋಣಿಯವರ ಶ್ಯೆಲಿ, ಆದರೆ ವಿವರಗಳನ್ನು ವಾಚ್ಯ ಎಂಬ ಕಾರಣಕ್ಕೆ ಸಾಧ್ಯವಾದಷ್ಟು ಕೈಬಿಟ್ಟು ರೂಪಕಗಳ ಮೂಲಕ ಕಥೆ ಹೇಳುವುದು ಕಾಸರವಳ್ಳಿಯವರ ಶ್ಯೆಲಿ, ಇಂತಹ ನೆಲೆಗಳಲ್ಲೇ ವಿರೋಧಾತ್ಮಕತೆ ಇದೆ. ಚಿತ್ರದಲ್ಲೂ ಆ ಬಿಕ್ಕಟ್ಟಿನ ಸ್ವರೂಪವನ್ನು ಕಾಣಬಹುದಾಗಿದೆ.

ನುಗುಡೋಣಿಯವರ ಕಥೆಯಲ್ಲಿ ಬ್ಯಾಗರ ವಜ್ರಪ್ಪ ಸುಡುಗಾಡು ಸಿದ್ಧನನ್ನು ಕನಸಿನಲ್ಲಿ ಕಾಣವುದರ ಜೊತೆಗೆ ಕಥನ ಆರಂಭವಾಗುತ್ತದೆ. ಈಗೀಗ ಊರಲ್ಲಿ ಯಾರೇ ಯಾವ ಕಾರಣಕ್ಕೇ ಸತ್ತರೂ ಅಂದು ಗಂಡನಿಗೆ ಕನಸು ಬೀಳುತ್ತದೆ ಅದು ಪವಾಡದಂಗೆ ಸಾಬೀತಾಗುತ್ತದೆ ಎಂದು ಬಲ್ಲ ವಜ್ರಪ್ಪನ ಹೆಂಡತಿ ರುದ್ರವ್ವನಿಗೆ ವಜ್ರಪ್ಪನ ಕನ್ಸಿನಾಗೆ ಶಿವಪ್ಪ ಗೌಡರ ತಂದೆ ಮಲ್ಲಪ್ಪ ಗೌಡ ಸತ್ತಂತೆ ಬಿದ್ದ ಕನಸು ಹುಸಿಯಾಗಿ ನಿರಾಸೆಯಾಗುತ್ತದೆ. ಇದನ್ನೂ ಹಿಂಬಾಲಿಸಿ ಸುಡಗಾಡು ಸಿದ್ಧ ಬರುವ ಕಸನೂ ಹುಸಿಯಾದಾಗ ಅದು ಹತಾಶೆಗೆ ತಿರುಗುತ್ತದೆ. ವಜ್ರಪ್ಪನಿಗಾದರೂ ತನ್ನ ಕನಸುಗಳು ಹುಸಿಯಾದವು ಎಂಬುದು ಒಪ್ಪಲಾಗದ ಸತ್ಯವಾಗಿದೆ. ಅದನ್ನು ನಿಜವೆಂದೆ ಸಾಧಿಸಲು ಹೋಗಿ ಆತ ಜೀವ ಕಳೆದುಕೊಳ್ಳುತ್ತಾನೆ. ವಾಸ್ತವೆಂದರೆ ಅವೆರಡೂ ಸತ್ಯವಾಗಿರುತ್ತದೆ. ಅದನ್ನು ಸುಳ್ಳು ಎಂದು ಏಕೆ ನಂಬಿಸಲಾಯಿತು ಎಂಬುದು ಕಥೆಯ ಇನ್ನೊಂದು ನೆಲೆಯಲ್ಲಿ ಅನಾವರಣಗೊಳ್ಳುತ್ತದೆ. ಶಿವಪ್ಪ ಗೌಡ ತನ್ನ ರಾಜಕೀಯ ಕಾರಣಗಳಿಗೆ ತಂದೆಯ ಸಾವನ್ನು ಮುಚ್ಚಿಟ್ಟಿದ್ದರೆ, ಇದಕ್ಕೆ ನರೆವಾಗಲು ಹೋದ ಹಿರೇ ಮಠದಪ್ಪ ಸುಡುಗಾಡು ಸಿದ್ಧನನ್ನು ಬರದಂತೆ ತಡೆದಿರುತ್ತಾನೆ.

ಹುಟ್ಟು ಸಾವಿನ ಸಹಜ ವ್ಯಾಪಾರವನ್ನೂ ತನ್ನ ಅನುಕೂಲಕ್ಕೆ ತಕ್ಕಂತೆ ಬದಲಿಸಲು ಹೋಗುವ ಆಧುನಿಕ ಮಾನವನ ಅಹಂಕಾರ ಇಲ್ಲಿ ಧ್ವನಿತವಾಗಿದೆ. ಮೂರು ತಾಸಿನ ಚುಕ್ಕೆ ಕಾಣಿಸುತಿದ್ದಂತೆ ಸುಡುಗಾಡು ಸಿದ್ಧ ಸಾಕ್ಷತ್ ಶಿವನಂತೆ ಊರ ಅಗಡೆ ಬಾಗಿಲಿಗೆ ಕಾಲಿಟ್ಟು ಶಂಖ ಊದುತ್ತಿದ್ದನೋ ಅದೇ ಹೊತ್ತಿಗೆ ಶಿವನ ಗೌಡನ ತಂದೆ ಮಲ್ಲಪ್ಪ ಗೌಡ ಕೊನೆ ಊಸಿರೆಳೆದ ಎಂಬ ಸುದ್ದಿಯನ್ನು ಹಿರೇಮಠದಪ್ಪ ಹರಡಿ ಪವಾಡದಂತಹ ವಾತಾವರಣ ನಿರ್ಮಿಸುತ್ತಾನೆ, ಈ ಹಿಂದೆ ಶಿವರಾತ್ರಿಗೆ ಮಲ್ಲಪ್ಪ ಗೌಡನ ಸಾವಾದರೆ ಹೀಗೆ ಪವಾಡದಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂಬ ಪ್ರಯತ್ನವೂ ನಡದಿರುವುದನ್ನು ಕಥೆಯಲ್ಲೇ ಸೂಚಿಸಲಾಗಿದೆ. ಸಹಜತೆ ಮತ್ತು ಮಾನವ ನಿರ್ಮಿತ ಸಹಜತೆಗಳು ಕಥೆಯ ಉದ್ದಕ್ಕೂ ಮುಖಾಮುಖಿಯಾಗುವುದರಿಂದ ಹಲವು ನೆಲಗಳು ಲಭಿಸಿವೆ. ಕಥೆಯನ್ನು ವಿಮರ್ಶಿಸುವುದು ನನ್ನ ಉದ್ದೇಶವಲ್ಲವಾದ್ದರಿಂದ ಈ ನೆಲೆಯ ಟಿಪ್ಪಣಿಯನ್ನು ಇಲ್ಲಿಗೇ ನಿಲ್ಲಿಸುತ್ತೇನೆ.

ಕಾಸರವಳ್ಳಿಯವರ ಚಿತ್ರದಲ್ಲಿ ಅಮರೇಶ್ ನುಗುಡೋಣಿಯವರ ಕಥೆಯಲ್ಲಿ ಬಿಂಬಿತವಾಗಿರುವ ಪ್ರಮುಖ ನೆಲೆಗಳಲ್ಲಿ ಸರಳವಾದ ನೆಲೆಯನ್ನು ಮಾತ್ರ ಆಯ್ದು ಕೊಳ್ಳಲಾಗಿದೆ. ವಜ್ರಪ್ಪ ಇಲ್ಲಿ ಈರ್‍ಯನಾಗಿದ್ದಾನೆ, ಕೇವಲ ಹೆಸರಿನಲ್ಲಿ ಮಾತ್ರವಲ್ಲ ಸ್ವರೂಪದಲ್ಲೂ ಬದಲಾವಣೆಗಳಾಗಿವೆ. ಇಲ್ಲಿ ಮುಖ್ಯವಾಗಿ ಕಥೆಯಂತೆ ಈರ್‍ಯ ಸಾಯುವುದಿಲ್ಲ, ಈ ಎಲ್ಲಾ ಘಟನಾವಳಿಗಳ ನಂತರವೂ ಜೀವನೋತ್ಸಾಹವನ್ನು ಉಳಿಸಿಕೊಂಡು ಗಿಡಗಳನ್ನು ನೆಟ್ಟು ತೋಟ ಮಾಡುವ ಕನಸು ಕಾಣುತ್ತಾನೆ. ಅದಕ್ಕೆ ಸುಡುಗಾಡು ಸಿದ್ಧನೇ ಮಾರ್ಗದರ್ಶಿಯಾಗುತ್ತಾನೆ. ಮುನ್ಸೂಚನೆಯಂತೆ ಬರುವ ಕನಸು ಮತ್ತು ತಾನೇ ಸಿದ್ಧಿಸಿಕೊಳ್ಳಲು ಹೊರಡುವ ಕನಸು ಇವೆರಡೂ ನೆಲೆಗಳನ್ನು ಬಳಸಿಕೊಂಡು ಕಾಸರವಳ್ಳಿ ಕನಸನ್ನು ರೂಪಕವಾಗಿ ಮಾರ್ಪಡಿಸಿಕೊಂಡಿದ್ದಾರೆ ಈ ಮಟ್ಟಿಗೆ ಚಿತ್ರಕ್ಕೆ ಹೊಸ ನೆಲೆ ಸಿಕ್ಕಿದೆ. ಕಥೆಯಲ್ಲಿನ ಎರಡು ಕನಸುಗಳು ಇಲ್ಲಿ ಈರನ ಪಾಲಿಗೆ ಮತ್ತು ರುದ್ರಿಯ ಪಾಲಿಗೆ ಹಂಚಿ ಹೋಗಿವೆ. ಚಿತ್ರದ ನಿರೂಪಣೆಯಲ್ಲಿ ನಾನ್ ಲೀನಿಯರ್ ನಿರೂಪಣಾ ಕ್ರಮವನ್ನು ಕಾಸರವಳ್ಳಿ ಬಳಸಿದ್ದಾರೆ. ಇವೆರಡೂ ಕನಸುಗಳು ಅದಕ್ಕೆ ಚಾಲಕ ಕೇಂದ್ರಗಳಾಗಿ ಬಳಕೆಯಾಗಿ ಕಥನ ಶಕ್ತಿಯನ್ನು ಹೆಚ್ಚಿಸಿವೆ.

ಕನಸು ಕಾಣ್ಕೆಯಾಗುವ ಪರಿವರ್ತನೆ ಈ ಮೂಲಕ ಸಾಧ್ಯವಾಗಿದೆ ಕಡು ಬಡತನದ ಜೀವನದಲ್ಲೂ ಇರುವ ಉತ್ಸಾಹವನ್ನು ಬಿಂಬಿಸುವ ಅದನ್ನು ಹಣವುಳ್ಳ ಮಂದಿಯ ಬದುಕಿಗೆ ಹೋಲಿಕೆ ಮಾಡುತ್ತ ಆಧುನಿಕ ಬದುಕಿನ ಕೃತಕತೆಯನ್ನು ಹೇಳುವ ಕಾಸರವಳ್ಳಿಯವರ ಪ್ರಯತ್ನ ಪರಿಣಾಮಕಾರಿಯಾಗಿ ಬಿಂಬಿತವಾಗಿದೆ. ಕಾಸರವಳ್ಳಿಯವರ ಉಳಿದ ಚಿತ್ರಗಳಲ್ಲಿ ಅಗುವಂತೆ ಇಲ್ಲಿಯೂ ರೂಪಕಗಳು ಕಥನವನ್ನು ಧ್ವನಿಸಿವೆ. ಈರ್ಯನ ಅಂಗಿಗೆ ಮೆತ್ತಿಕೊಳ್ಳುವ ಬಣ್ಣ, ತನ್ನ ಕನಸಿಗೆ ಅನುಗುಣವಾಗಿ ಗುಂಡಿ ತೋಡುವ ಈರ್ಯನ ಕ್ರಿಯೆ, ಸಾವಿನ ಮನೆಯಲ್ಲಿ ಸುತ್ತಿ ಕೊಳ್ಳುವ ವಾಸನೆಯನ್ನು ಮಗು ಪರಿಭಾವಿಸಿಕೊಳ್ಳುವ ರೀತಿ ಎಲ್ಲವೂ ಅರ್ಥಪೂರ್ಣವಾಗಿದೆ. ಈ ಎಲ್ಲಾ ಘಟನಾವಳಿಗಳ ನಂತರ ಈರ್‍ಯ ಸಾವಿಗೆ ಕುಣಿ ತೋಡುವ ಬದಲು ತೋಟ ಮಾಡಲು ಕುಣಿ ತೋಡುತ್ತಾನೆ ಆ ಮೂಲಕ ಸೃಷ್ಠಿಯ ಕನಸನ್ನು ಕಾಣುತ್ತಾನೆ, ಇದು ಚಿತ್ರಕ್ಕೆ ಹೊಸ ಆಯಾಮವನ್ನು ನೀಡಿದೆ ಎಂಬುದು ನಿಜ, ಅದರೆ ಕಥನದ ಸಾವಯವ ನೆಲೆಗೆ ಈ ಅಂಶ ಹೊರತಾಗಿಯೇ ಬಿಂಬಿತವಾಗಿದೆ, ಒಂದು ಮಾದರಿಯಲ್ಲಿ ಬೌದ್ದಿಕ ಜಿಗಿತವಾಗಿಯೂ ಇದನ್ನು ನೋಡಬಹುದಾಗಿದೆ.

ಚಿತ್ರದ ನಿಜವಾದ ಬಿಕ್ಕಟ್ಟು ಇರುವುದು ಶಿವಪ್ಪ ಗೌಡನ ಸಂಸಾರವನ್ನು ಚಿತ್ರಿಸಿರುವುದರಲ್ಲಿ, ಕಥೆಯಲ್ಲಿ ಮಲ್ಲಪ್ಪ ಗೌಡ ಊರಮಂದಿಯ ಕಣ್ಣಿಗೆ ರಾಕ್ಷಸ ಎನ್ನಿಸಿಕೊಂಡಿದ್ದಾನೆ. ಅಂತಹವನು ಪವಾಡದ ಸಾವನ್ನು ಕಂಡಿದ್ದು ಅವರಿಗೆಲ್ಲಾ ಸೋಜಿಗವೆನ್ನಿಸಿದೆ. ಇಂತಹ ಸೋಜಿಗ ಸಾಧಿಸಿದ ಹಿರೇಮಠದಪ್ಪನ ಮಾನಸಿಕ ತಾಕಲಾಟಗಳೇ ಕಥೆಯ ಪ್ರಧಾನ ನೆಲೆಯನ್ನು ನಿರ್ವಹಿಸಿವೆ. ಸಾವಿನಲ್ಲಿ ಪವಾಡ ಮೂಡಿಸುವ ಪ್ರಯತ್ನ ಉತ್ತರ ಕರ್ನಾಟಕದ ಜನಜೀವನದಲ್ಲಿ ಹಾಸುಹೊಕ್ಕಾಗಿರುವುದನ್ನು ಕಾಸರವಳ್ಳಿ ಗಂಭೀರವಾಗಿ ಪರಿಗಣಿಸಿಲ್ಲ ಇದರಿಂದ ಚಿತ್ರದ ಸಾಮಾಜಿಕ ನೆಲೆ ದುರ್ಬಲವಾಗಿದೆ. ಚಿತ್ರದಲ್ಲಿ ಮಲ್ಲಪ್ಪ ಗೌಡನ ಮತ್ತು ಮಠದಪ್ಪನ ಪಾತ್ರಗಳು ಗೌಣವಾಗಿ ಚಿತ್ರಿತವಾಗಿವೆ. ಹೀಗಾಗಿ ಸೋಜಿಗದಂತಹ ಸೆಟೈರ್ ರೂಪುಗೊಂಡಿಲ್ಲ. ಶಿವಪ್ಪ ಗೌಡ ಇಲ್ಲಿ ಕಾಲೇಜ್ ಪ್ರಿನ್ಸಿಪಾಲ್ ಆಗಿದ್ದಾನೆ, ಅವನು ಕಾನ್ವಂಟ್ ಮಾಡಲು ಭೂಮಿಯನ್ನು ಮಾರ ಬೇಕಾಗಿದೆ. ಕಥೆಯಲ್ಲಿರುವ ರಾಜಕೀಯದ ನೆಲೆಗಳು ಇಲ್ಲಿಲ್ಲ. ಇದರಿಂದ ಉದ್ದೇಶ ಸರಳೀಕರಣಗೊಂಡಿದೆ.

ಚಿತ್ರದಲ್ಲಿನ ಶಿವಪ್ಪ ಗೌಡರ ಪಾತ್ರವೇ ಕೃತಕವಾಗಿದೆ. ಕಥೆಯ ಪ್ರಮುಖ ಪಾತ್ರ ಗೌರಮ್ಮ ಇಲ್ಲಿ ಆಧುನಿಕ ಸಮಾಜದ ಸರಳ ಚಿತ್ರಣವಾಗಿ ಬಂದಿದ್ದಾಳೆ. ಈ ನೆಲೆಯ ಪಾತ್ರಗಳ ಕ್ರಿಯಾತ್ಮಕತೆಯನ್ನು ಕಡೆಗಣಿಸುವ ಮೂಲಕ ಕಾಸರವಳ್ಳಿ ಸಂಕೀರ್ಣತೆಗಳನ್ನು ಕಳೆದುಕೊಂಡಿದ್ದಾರೆ. ಭೂಮಿಯನ್ನು ಮಾರುವ ವಿವರ ದೃಶ್ಯಾತ್ಮಕವಾಗಿ ಕೂಡ ತೀರಾ ದುರ್ಬಲವಾಗಿ ಬಂದಿದೆ. ಅದಕ್ಕೆ ವಿರೋಧ ವ್ಯಕ್ತವಾಗುವುದು ಕೂಡ ಮಾಹಿತಿಯಷ್ಟು ಚಿಕ್ಕ ನೆಲೆಯಲ್ಲಿದೆ, ಕಾಸರವಳ್ಳಿ ಜಾಗತೀಕರಣವನ್ನು ಬೆಂಬಲಿಸುತ್ತಿದ್ದಾರೆಯೇ ಎಂಬ ಆತಂಕ ಹುಟ್ಟುವಷ್ಟು ಈ ವೈಚಾರಿಕ ನೆಲೆ ದುರ್ಬಲವಾಗಿದೆ. ಭೂಮಿ ಮಾರಲು ವಿರೋಧವಾಗಿರುವುದು ಒಂಟಿ ಧ್ವನಿಮಾತ್ರ, ಆ ಬಸಣ್ಣಪ್ಪ ಕೂಡ ಹೂವನ್ನು ಬೆಳಯುತಿದ್ದಾನೆ. ಅವನಿಗೆ ಬೆಂಬಲವಾದವನು ಮುಸ್ಲಿಂ ಆಗಿದ್ದಾನೆ.

ಹೀಗೆ ಘೋಷಿತ ಪ್ರಗತಿಪರ ನೆಲೆಗಳನ್ನು ಸಂಚರಿಸುವ ಮೂಲಕ ಚಿತ್ರ ಇನ್ನಷ್ಟು ದುರ್ಬಲವಾಗಿದೆ. ಸಾವಿನ ಎದುರು ಜೀವನದ ಬಿಕ್ಕಟ್ಟುಗಳು ಹೊಸ ಅರ್ಥವನ್ನು ಪಡೆಯುವ ಸಾಧ್ಯತೆ ಇಲ್ಲಿ ಮಾಯವಾಗಿದೆ. ಚಿತ್ರ ದುರ್ಬಲವಾಗಲು ಈ ಅಂಶ ಕೂಡ ಕಾರಣವಾಗಿದೆ. ಮುಖ್ಯವಾಗಿ ಇಂತಹ ವಸ್ತುವನ್ನು ಸಮರ್ಥವಾಗಿ ಪ್ರತಿಪಾದಿಸಲು ಸಂಗೀತ ಮತ್ತು ಛಾಯಾಗ್ರಹಣ ಶಕ್ತವಾಗಿರ ಬೇಕು.`ಕನಸೆಂಬೋ’ ದಲ್ಲಿ ಅವೆರಡೂ ತೀರ ದುರ್ಬಲವಾಗಿವೆ. ಮಾತುಗಾರಿಕೆಯ ಬಗ್ಗ ನಂಬಿಕೆ ಇರಿಸದ ಕಾಸರವಳ್ಳಿ ಇಂತಹ ನೆಲೆಗಳೂ ದುರ್ಬಲವಾಗಿರುವುದರಿಂದ ಸಂಹವನದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ವೈಯಕ್ತಿಕವಾಗಿ ಹೇಳುವುದಾದರೆ ಕಾಸರವಳ್ಳಿಯವರ ಎಲ್ಲಾ ಚಿತ್ರಗಳನ್ನೂ ಬಿಡದೆ ನೋಡಿರುವ ನನಗೆ ಈ ಚಿತ್ರ ಅತ್ಯಂತ ನಿರಾಸೆಯನ್ನು ತಂದಿದೆ.

2 Responses »

  1. bsuresha says:

    ಅಮರೇಶ ನುಗಡೋಣಿಯವರ ‘ಸವಾರಿ’ ಕತೆಯ ಮೂಲಕ ಗಿರೀಶರ ‘ಕನಸೆಂಬೋ ಕುದುರೆಯನೇರಿ’ ಚಿತ್ರವನ್ನು ನೋಡ ಹೊರಟಿರುವುದು ಮೆಚ್ಚತಕ್ಕ ಅಂಶ. ಆದರೆ ಹೀಗೆ ಅಂತರ್‌ ಸಂಬಂಧಿ ಗುಣಗಳನ್ನು ಹುಡುಕುತ್ತಾ ಹೊರಡುವುದು ಆಯಾ ಸೃಜನಶೀಲ ಚಟುವಟಿಕೆಗೆ ಮಾಡುವ ಅಪಚಾರ ಆಗುತ್ತದೆ ಎಂದು ನನ್ನ ಅನಿಸಿಕೆ.
    ಸಿನಿಮಾ ವಿಮರ್ಶೆಯ ನೆಲೆಗಳಿಗೂ ಸಾಹಿತ್ಯ ಕೃತಿಯ ವಿಮರ್ಶೆಯ ನೆಲೆಗಳಿಗೂ ಇರುವ ವ್ಯತ್ಯಾಸ ದೊಡ್ಡದು. ಸಿನಿಮಾದಲ್ಲಿ ಕನಸು ಸಹ ವಾಸ್ತವ ಆಗಿಬಿಡುತ್ತದೆ. ಆದರೆ ಅಕ್ಷರಿತ ಸಾಹಿತ್ಯದಲ್ಲಿ ಹಾಗಾಗದು. ಅಲ್ಲಿ ಇಡಿಯಾಗಿ ಕತೆಯೇ ಕಲ್ಪಿತ ಆಗಬಹುದು. (ಉದಾಹರಣೆಗೆ ನಾಯರ್ ಅವರ ಮಲೆಯಾಳಂ ಕಾದಂಬರಿ ‘ಪಾಂಡವಪುರಂ’ ಗಮನಿಸಬಹುದು) ಸಿನಿಮಾದಲ್ಲಿ ಕಣ್ಣೆದುರು ಕಾಣುವುದೆಲ್ಲಾ ವಾಸ್ತವದ ನೆಲಗಟ್ಟಿನಲ್ಲಿಯೇ ಚಿತ್ರಿತವಾಗಬೇಕಾದ ಅನಿವಾರ್ಯತೆ (ಒಂದರ್ಥಕ್ಕೆ ಇದು ಮಿತಿಯೂ ಹೌದು) ಇರುತ್ತದೆ. ಹೀಗಾಗಿ ಗಿರೀಶರ ಮಾರ್ಗವಿಡೀ ಸಿನಿಮಾ ಎಂಬ ದೃಶ್ಯ ಮಾಧ್ಯಮದ ಒಳಗಡೆಯೇ ಹುಟ್ಟಿರುವಂತಹುದು. ನುಗಡೋಣಿಯವರದ್ದು ಅವರೆಲ್ಲಾ ಕತೆಗಳ ಹಾಗೆ ಮೌಖಿಕ ಸಂಪ್ರದಾಯದ ಕಥನದ ಮುಂದುವರಿಕೆ ಎಂಬಂತೆ ಬಂದಿರುವಂತಹುದು. ಈ ವ್ಯತ್ಯಾಸವನ್ನು ಸ್ಪಷ್ಟಗೊಳಿಸಿಕೊಂಡರೆ ಎರಡೂ ರೂಪಗಳು ತಮ್ಮಿಂದ ತಾವು ಸ್ವತಂತ್ರ ಎನಿಸುತ್ತದೆ. ಹೀಗಾಗಿ ಸ್ವತಂತ್ರ ಕೃತಿಗಳನ್ನು ತೌಲನಿಕ ಅಧ್ಯಯನಕ್ಕೆ ಒಳಪಡಿಸುವುದು ಆಯಾ ಕೃತಿಗಳಿಗೆ ಮಾಡಿದ ಅಪಚಾರ ಆಗುತ್ತದೆ.
    ಇಷ್ಟಾದರೂ ಶ್ರೀಧರಮೂರ್ತಿಯವರು ಮಾಡಿರುವ ಈ ಪ್ರಯತ್ನ ಮೆಚ್ಚುವಂತಹುದು.

  2. Sunaath says:

    ನುಗಡೋಣಿಯವರ ಕತೆ ಮತ್ತು ಕಾಸರವಳ್ಳಿಯವರ ಸಿನೆಮಾಗಳಲ್ಲಿಯ ವೈದೃಶ್ಯಗಳನ್ನು ಶ್ರೀಧರಮೂರ್ತಿಯವರು ಚೆನ್ನಾಗಿ ವಿಶ್ಲೇಷಿಸಿದ್ದಾರೆ. ಆದರೆ ನುಗಡೋಣಿಯವರ ಕತೆ ಸಿನೆಮಾ ಸೃಷ್ಟಿಸಲು ಕಾಸರವಳ್ಳಿಯವರಿಗೆ ಒಂದು ನೆಪ ಮಾತ್ರ ಎಂದು ಭಾವಿಸಿದರೆ ಈ ಸಮಸ್ಯೆ ಏಳಲಿಕ್ಕಿಲ್ಲ!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s