ಒಂದು ಒಳ್ಳೆಯ ಪ್ರಶ್ನೆಯೊಂದಿಗೆ ಲೇಖನ ಪ್ರಾರಂಭಿಸಿರುವ ಶಿವು. ಕೆ. ಬರೆದಿರುವುದು ಇರಾನಿ ಚಿತ್ರ “ದಿ ಮಿರರ್” ಕುರಿತು. ಜಾಫರ್ ಫನಾಹಿ ರೂಪಿಸಿದ ಚಿತ್ರಗಳೆಲ್ಲಾ ವಿಶೇಷವಾದವೇ. ಈ ಹಿಂದೆ ನಮ್ಮಲ್ಲೇ ಅವರ ಮತ್ತೊಂದು ಚಿತ್ರ “ವೈಟ್ ಬಲೂನ್’ ಬಗ್ಗೆ ಲೇಖನ ಪ್ರಕಟಿಸಲಾಗಿತ್ತು.

ಬದುಕಲ್ಲಿ ನಟಿಸಲು ಸಾಧ್ಯವೇ?

ಇಂಥದೊಂದು ಪ್ರಶ್ನೆಯನ್ನು ನಿಮ್ಮಲ್ಲಿ ಕೇಳಿದರೆ ಎಂಥ ಉತ್ತರ ಸಿಗಬಹುದು? ಕೆಲವರು ಸಾಧ್ಯವಿಲ್ಲವೆಂದರೆ ಇನ್ನೂ ಕೆಲವರು ಅಸಾಧ್ಯವೆನ್ನಬಹುದು.

ಇಷ್ಟಕ್ಕೂ ಈ ಪ್ರಶ್ನೆ ಮೂಡಲು ಕಾರಣ ಇತ್ತೀಚೆಗೆ ನಾನು ನೋಡಿದ ಒಂದು ಅದ್ಬುತ ಸಿನಿಮಾ!
ಅದ್ಭುತವೆಂದ ಮಾತ್ರಕ್ಕೆ ಆತ್ಯುಕೃಷ್ಟ ತಾಂತ್ರಿಕತೆ ಹೊಂದಿದ ದುಬಾರಿ ವೆಚ್ಚದ ಅವತಾರ್ ಟೈಟಾನಿಕ್, ಡೈನೋಸಾರ್…ಸಾಲಿನ ಸಿನಿಮಾಗಳಾಗಲಿ,ಅಥವಾ ಅತ್ಯುತ್ತಮ ಕತೆ, ಚಿತ್ರಕತೆ, ಉತ್ತಮ ನಟನೆಯಿಂದಲೇ ಕಲಾಕೃತಿಗಳೆನಿಸಿದ ನೂರಾರು ಸಿನಿಮಾಗಳು ನಮ್ಮ ನೆನಪಿಗೆ ಬಂದುಬಿಡಬಹುದು. ಆದ್ರೆ ಅವುಗಳನ್ನು ಒಮ್ಮೆ ಬದಿಗೆ ಸರಿಸಿಬಿಡಿ. ಯಾವುದೇ ಅದ್ಧೂರಿ ಸೆಟ್‍ಗಳಿಲ್ಲದೇ, ತಾಂತ್ರಿಕತೆಯ ಅಷ್ಟೇನೂ ಕಸರತ್ತಿಲ್ಲದ, ತೀರಾ ಸರಳವೆನಿಸುತ್ತಾ, ನೇರವಾದ, ಅದಕ್ಕಿಂತ ಸಹಜತೆಯನ್ನೇ ಕೃತಿಯನ್ನಾಗಿಸಿ, ಇರಾನಿನ ಪ್ರಖ್ಯಾತ ನಿರ್ದೇಶಕ ಜಾಫರ್ ಫನಾಯ್’ನ “ದಿ ಮಿರರ್” ಚಿತ್ರವನ್ನು ನೋಡಿದಾಗ ನನಗೆ ಮೂಡಿದ ಪ್ರಶ್ನೆಯಿದು.

ಇದರ ಕತೆಯೇ ಒಂದು ರೀತಿಯಲ್ಲಿ ವಿಭಿನ್ನಕ್ಕಿಂತ ವಿಭಿನ್ನ. ಮೊದಲ ತರಗತಿಯ ಒಂದು ಪುಟ್ಟ ಹುಡುಗಿ “ಮಿನಾ” ಮೇಲೆ ಕೇಂದ್ರಿಕೃತವಾಗಿ ಕೇವಲ ರಸ್ತೆಯ ಮೇಲೆ ಚಿತ್ರೀಕರಿಸಿದ ಚಿತ್ರವಿದು. ನೀವು ಸಿನಿಮಾವನ್ನು ನೋಡಲು ಪ್ರಾರಂಭಿಸಿದಾಗ ಆ ಪುಟ್ಟ ಹುಡುಗಿಯ ನಟನೆಯನ್ನು ನೋಡುತ್ತಾ ಆ ಪಾತ್ರದಲ್ಲಿ ಒಂದಾಗಿ ಹುಡುಗಿಯ ಎಲ್ಲಾ ಭಾವನೆಗಳು ನಿಮ್ಮಲ್ಲೂ ಉಂಟಾಗಿ ಆ ತನ್ಮಯತೆಯಿಂದ ಮೈಮರೆತಿರುವಾಗಲೇ, ಇನ್ನು ಮುಂದೆ ನಾನು ನಟಿಸೋಲ್ಲ, ನನಗಿಷ್ಟವಿಲ್ಲವೆಂದು ತನಗೆ ಕೃತಕವಾಗಿ ಕೈಗೆ ಹಾಕಿದ್ದ ಬ್ಯಾಂಡೇಜ್ ಕಿತ್ತು ಬಿಸಾಡಿ, ಅರ್ಧ ಸಿನಿಮಾ ಮಧ್ಯೆಯೇ ಇಡೀ ಸಿನಿಮಾ ತಂಡವನ್ನು ಬಿಟ್ಟು ಆ ಪುಟ್ಟ ಹುಡುಗಿ ಹೊರಬಂದಾಗ ನಿಮಗೆ ಹೇಗನ್ನಿಸಬಹುದು? ನೀವು ಕೂಡ ಮರುಕ್ಷಣವೇ ವಾಸ್ತವಕ್ಕೆ ಬಂದುಬಿಡುತ್ತೀರಿ.

ನನಗೆ ಇಂಥ ಅವಕಾಶ ಸಿಕ್ಕಿದ್ದರೆ ಹೀಗೆ ಅರ್ಧಕ್ಕೆ ಬರುತ್ತಿರಲಿಲ್ಲ. ಪೂರ್ತಿಯಾಗಿ ನಟಿಸುತ್ತಿದ್ದೆ. ಈ ಹುಡುಗಿಗೇನು ಪೆಚ್ಚಾ? ಅಂತ ನನಗನ್ನಿಸಿದಂತೆ ನಿಮಗೂ ಅನ್ನಿಸುತ್ತದೆ. ಆ ಮಗುವಿನಿಂದಾಗಿ ಅರ್ಧಕ್ಕೆ ನಿಂತ ಸಿನಿಮಾ ಬಗ್ಗೆ ನಿರ್ದೇಶಕ ಅಧೀರನಾಗುವುದಿಲ್ಲ. ಆದ್ರೆ ಇದೆಲ್ಲವನ್ನೂ ಮೀರಿ ಆ ಕ್ಷಣದಲ್ಲಿ ಆತನ ತಲೆ ಕ್ರಿಯಾಶೀಲವಾಗುತ್ತದೆ. ಇದುವರೆಗೂ ತನ್ನ ನಿಯಂತ್ರಣದಲ್ಲೇ ಇದ್ದ ಸಿನಿಮಾ ಕತೆಯನ್ನು, ಆ ಸನ್ನಿವೇಶದ ನಂತರ ಮುಂದೇನಾಗುತ್ತದೆಯೋ ನೋಡೇಬಿಡೋಣವೆಂದು ತನ್ನ ನಿಯಂತ್ರಣದಲ್ಲಿ ಇಲ್ಲದ ಮುಂದಿನ ಸನ್ನಿವೇಶಗಳನ್ನು ಯಥಾವತ್ತಾಗಿ ಚಿತ್ರೀಕರಿಸುವುದೇ ಆ ಚಿತ್ರದ ಸೊಬಗು. ಇಂಥ ಪ್ರಯತ್ನವನ್ನು ಕನ್ನಡ, ತಮಿಳು, ತೆಲುಗು…ಭಾರತದ ಯಾವುದೇ ಭಾಷೆಯಲ್ಲಿ ಮಾಡಲು ನಿರ್ದೇಶಕರು ನಮ್ಮ ಸಿದ್ಧರಾಗುತ್ತಾರ?

ಸಿನಿಮಾಗೆ ಹಣ ಹಾಕಿ ಹಣವನ್ನೇ ವಾಪಸ್ಸು ಪಡೆಯುವುದಕ್ಕಾಗಿಯೇ ನಮ್ಮ ನಿರ್ದೇಶಕರು, ನಿರ್ಮಾಪಕರೆಲ್ಲಾ ತಮ್ಮ ಆತ್ಮತೃಪ್ತಿಗಾದರೂ ಒಮ್ಮೆ ಇಂಥದೊಂದು ಸಿನಿಮಾವನ್ನು ನೋಡಬೇಕು.

ಶಾಲೆ ಬಿಟ್ಟ ಕೂಡಲೇ ಗೇಟು ತೆರೆದುಕೊಂಡು ಹೊರಬರುವ ಮಕ್ಕಳು ರಸ್ತೆ ದಾಟುವುದರೊಂದಿಗೆ ಸಿನಿಮಾ ಪ್ರಾರಂಭ. ಕಾಂಪೌಂಡ್ ಹೊರಗೆ ಕಾದು ಕುಳಿತ ಮಕ್ಕಳನ್ನು ಅವರವರ ಪೋಷಕರು ಕರೆದುಕೊಂಡು ಹೋಗುತ್ತಿದ್ದರೂ ಆ ಪುಟ್ಟ ಹುಡುಗಿ ಹಾಗೇ ಕುಳಿತಿರುತ್ತದೆ. ನಿತ್ಯವೂ ಸರಿಯಾದ ಸಮಯಕ್ಕೆ ಬಂದು ಕರೆದೊಯ್ಯುವ ಆ ಮಗುವಿನ ತಾಯಿ ಇನ್ನೂ ಬಂದಿಲ್ಲವಾದ್ದರಿಂದ ಕಾಯುತ್ತಿರುತ್ತಾಳೆ. ಎಡಗೈ ಮುರಿದಿದ್ದರಿಂದಲೇ ಏನೋ ಬ್ಯಾಂಡೇಜ್ ಹಾಕಿಸಿಕೊಂಡಿದ್ದ ಆ ಮಗು ಸ್ಕೂಲ್ ಕಾಂಪೌಂಡ್ ಬಳಿ ನಿಂತು ತನ್ನ ತಾಯಿಗಾಗಿ ಕಾಯುವ ಕೆಲ ಕ್ಷಣಗಳನ್ನು ನೋಡುತ್ತಿದ್ದರೆ ನೀವೂ ಪಾತ್ರದಲ್ಲಿ ಒಂದಾಗುತ್ತೀರಿ. ಚಿತ್ರದಲ್ಲಿನ ಆ ಕ್ಷಣಗಳಲ್ಲಿ ಆ ಮಗು ಅನುಭವಿಸುವ ಆತಂಕ, ಕಾಯುವಿಕೆ, ಇನ್ನೂ ಬರದಿದ್ದಲ್ಲಿ ನಾನು ತಪ್ಪಿಸಿಕೊಂಡು ಬಿಡುತ್ತೇನಾ? ಮರುಕ್ಷಣದಲ್ಲಿ ಇಲ್ಲ, ಅಮ್ಮ ಬಂದೇ ಬರ್ತಾಳೆ ಅನ್ನುವ ಭರವಸೆ ಇದೆಲ್ಲವನ್ನು ಸಹಜವಾಗಿ ಕಣ್ಣಿನಲ್ಲೇ ವ್ಯಕ್ತಪಡಿಸುವ ಆ ಮಗುವಿನ ನಟನೆ ನಮ್ಮ ಬಾಲ್ಯದ ನೆನಪಿಗೆ ತಳ್ಳಿಬಿಡುತ್ತದೆ. ಅಮ್ಮ,ಇನ್ನೇನು ಬಂದುಬಿಡುತ್ತಾರೆ ಅಲ್ಲಿಯವರೆಗೆ ಸ್ವಲ್ಪ ಕಾಯುತ್ತಿರು ಅಂತ ಹೇಳುವ ಆಕೆಯ ಟೀಚರ್, ಆ ಟೀಚರನ್ನೇ ನೋಡಲು ಬರುವ ವ್ಯಾಪಾರಿ, ಅವರಿಬ್ಬರ ನಡುವೆ ವ್ಯಾಪಾರದ ವಿಚಾರದ ದಾಕ್ಷಿಣ್ಯಕ್ಕೆ ಮಗುವನ್ನು ಮನೆಗೆ ತಲುಪಿಸುತ್ತೇನೆ ಎಂದು ಒಪ್ಪಿಕೊಳ್ಳುವ ಆತನ ಮೊಪೆಡ್ ಮೇಲೆ ಆ ಮಗು ಜಾಗಮಾಡಿ ಕುಳಿತುಕೊಳ್ಳುವ ಪರಿ, ದಾರಿಯುದ್ದಕ್ಕೂ ಸಾಗುವ ಅವರಿಬ್ಬರ ಸಂಭಾಷಣೆ, ಅಷ್ಟರಲ್ಲಿ ಒಂದು ಬಸ್ ಸ್ಟ್ಯಾಂಡ್ ಕಂಡು ನನ್ನಮ್ಮ ಇಲ್ಲೇ ಬಸ್ ಹತ್ತೋದು ಅಂತ ಆ ಪುಟ್ಟ ಹುಡುಗಿ ಇಳಿಯುತ್ತಾಳೆ. ಮತ್ತೆ ಅಲ್ಲಿಗೆ ಬಂದ ಬಸ್ಸನ್ನು ಹತ್ತುತ್ತಾಳೆ.

ಬಸ್ಸಿನಲ್ಲಿ ಆವಳ ಅಮ್ಮ ಇರುವುದಿಲ್ಲ. ಆದ್ರೆ ಚಲಿಸುವ ಬಸ್ಸಿನಲ್ಲಿ ತಕ್ಷಣಕ್ಕೆ ಇಳಿಯುವಂತಿಲ್ಲ. ಆ ಬಸ್ಸು ಎಲ್ಲಿಗೋ ಕರೆದುಕೊಂಡು ಹೋಗುತ್ತದೆ. ಅಷ್ಟರಲ್ಲಿ ಈ ಹುಡುಗಿ ದಾರಿ ತಪ್ಪಿರುತ್ತಾಳೆ. ಅಮ್ಮ ಕಾಣುತ್ತಾಳ ಅಂತ ಆಗಾಗ ಕಿಟಕಿಯಲ್ಲಿ ನೋಡುತ್ತಿರುವಂತೆಯೇ ಬಸ್ಸಿನ ಕೊನೆ ನಿಲ್ದಾಣ ಬರುತ್ತದೆ. ಆ ಬಸ್ ಚಾಲಕ ಈ ಹುಡುಗಿಯನ್ನು ಮತ್ತೊಬ್ಬ ಬಸ್ ಚಾಲಕನಿಗೆ ಮನೆತಲುಪಿಸುವಂತೆ ಹೊಣೆ ವಹಿಸುವುದು, ಆತನು ಮತ್ತೊಂದು ಬಸ್ಸಿನಲ್ಲಿ ಈಕೆಯನ್ನು ಕರೆದೊಯ್ಯುವುದು…ಹೀಗೆ ಆ ಹುಡುಗಿ ದಾರಿತಪ್ಪಿದ ಪುಟ್ಟ ಹುಡುಗಿಯಾಗಿ ಬಿಡುತ್ತಾಳೆ.

ಇಷ್ಟೆಲ್ಲದರ ಮಧ್ಯೆ ನಿರ್ದೇಶಕರು ರಸ್ತೆಯಲ್ಲಿ, ಟ್ರಾಫಿಕ್ಕಿನಲ್ಲಿ, ಬಸ್ಸಿನಲ್ಲಿ, ನಡೆಯುವ ಸಂಭಾಷಣೆ, ಶಬ್ದಗಳನ್ನು ಯಥಾವತ್ತಾಗಿ ಸೇರಿಸಿರುವುದರಿಂದ ಚಿತ್ರಕ್ಕೆ ಮತ್ತಷ್ಟು ಸಹಜತೆಯನ್ನು ತಂದುಕೊಡುತ್ತಾರೆ. ಬಸ್ಸಿನಲ್ಲಿ ಜ್ಯೋತಿಷ್ಯ ಹೇಳುವ ಹೆಂಗಸು, ತನ್ನ ಸೊಸೆಯ ಮೇಲೆ ದೂರನ್ನು ಹೇಳುತ್ತಲ್ಲೇ ಮಗನನ್ನು ಹೊಗಳುತ್ತಾ ದಾರಿಯುದ್ದಕ್ಕೂ ವಟಗುಟ್ಟುವ ಮುದುಕಿ, ಆಗಾಗ ಇರಾನ್ ಕೊರಿಯಾ ಫುಟ್‍ಬಾಲ್ ಆಟದ ಬಗ್ಗೆ ಚರ್ಚೆಗಳು, ಬಸ್ಸಿನಲ್ಲಿ ಬರುವ ಭಿಕ್ಷುಕನ ಹಾಡು…ಇಂಥ ಅನೇಕ ವಾಸ್ತವ ಚಿತ್ರಣವನ್ನು ಹಾಗೇ ಕಟ್ಟಿಕೊಡುತ್ತಲೇ…ಆ ಮಗು ಬಸ್ಸಿನಲ್ಲಿ ಆನುಭವಿಸುವ ಮುಗ್ದತೆ, ಆತಂಕ, ಗೊಂದಲ, ಭಯ, ಅದಕ್ಕೆ ತೀವ್ರತೆಯನ್ನು ತಂದು ಕೊಡುವಂತೆ ನಡುವೆ ಆ ಹುಡುಗಿಯನ್ನು ಬಸ್ಸಿಂದ ಇಳಿಸಿಬಿಡುವ ನಿರ್ವಾಹಕ, ಗೊತ್ತಿಲ್ಲದ ಜಾಗದಲ್ಲಿ ಆ ಹುಡುಗಿ ಕಳೆದುಹೋಗಿರುವೆನೆಂಬ ಭಾವದಲ್ಲಿ ಅನುಭವಿಸುವ ಆತಂಕ, ಅದರ ಕಡೆಗೆ ಗಮನ ಕೊಡದೇ ತಮ್ಮದೇ ಲೋಕದಲ್ಲಿರುವ ಜನರು, ಅಮ್ಮ ಸಿಕ್ಕಿ ಇನ್ನೂ ನನ್ನನ್ನು ಮನೆಗೆ ಕರೆದುಕೊಂಡು ಹೋಗಲಿಲ್ಲವಲ್ಲ ಎನ್ನುವ ದಿಗಿಲಿಗೆ ಇನ್ನೇನು ಅವಳ ಕಣ್ಣಂಚಿನಿಂದ ಒಂದು ಹನಿ ಕೆನ್ನೆಯ ಮೇಲೆ ಇಳಿಯಬೇಕು ಎನ್ನುವಷ್ಟರಲ್ಲಿ ನೋಡುತ್ತಾ ಅನುಭವಿಸುತ್ತಾ ನಮ್ಮ ಕಣ್ಣಲ್ಲೂ ಹನಿಯೊಂದು ಜಾರಿರುತ್ತದೆ.

ಆ ಮಗುವಿನ ಕಣ್ಣಿಂದ ಒಂದೂ ಹನಿಯನ್ನು ಧುಮುಕಿಸದೇ ಅದೇ ಭಾವದಿಂದ ನಿಮ್ಮ ಕಣ್ಣಂಚಲ್ಲಿ ಹನಿ ಧುಮುಕಿಸುವುದು ನಿರ್ದೇಶಕನ ಗೆಲುವು. ಇಷ್ಟರ ಮಟ್ಟಿಗೆ ನಿಮ್ಮನ್ನು ಮಗುವಾಗಿಸುವ ನಿರ್ದೇಶಕನನ್ನು ಮೀರಿ ಇಡೀ ಸಿನಿಮಾ ಇಲ್ಲಿಂದ ತಿರುವು ಪಡೆದುಕೊಳ್ಳುತ್ತದೆ. ಆಷ್ಟೊಂದು ಸಹಜವಾಗಿ ಅಭಿನಯಿಸಿದ್ದ ಆ ಪುಟ್ಟ ಹುಡುಗಿ ತನ್ನ ಎಡಗೈಗೆ ಕಟ್ಟಿದ್ದ ಬ್ಯಾಂಡೇಜ್ ಕಿತ್ತೆಸೆದು ನಾನು ಇನ್ನು ನಟಿಸೋಲ್ಲ ಅಂತ ನಡೆದುಬಿಡುತ್ತಾಳೆ. ಯಾರು ಎಷ್ಟು ಹೇಳಿದರೂ ಆಕೆ ಒಪ್ಪುವುದಿಲ್ಲ. ಕೆಲವೊಮ್ಮೆ ಮಕ್ಕಳು ಹಟ ಹಿಡಿದರೆ ಏನು ಮಾಡಿದರೂ ಒಪ್ಪಿಕೊಳ್ಳುವುದಿಲ್ಲ. ಇಲ್ಲೂ ಅದೇ. ಅಷ್ಟರಲ್ಲಿ ನಾವು ವಾಸ್ತವಕ್ಕೆ ಬಂದುಬಿಟ್ಬಿರುತ್ತೇವೆ. ಅರ್ಧಕ್ಕೆ ನಿಂತ ಸಿನಿಮಾ ಬಗ್ಗೆ ಎಲ್ಲರೂ ಯೋಚಿಸುತ್ತಿದ್ದರೆ, ನಿರ್ದೇಶಕ ಮುಂದೆ ಏನಾಗುತ್ತದೆಯೋ ನೋಡೋಣ, ಮತ್ತದೇ ಹುಡುಗಿಯನ್ನು ಹಿಂಬಾಲಿಸಿ ಶೂಟಿಂಗ್ ಮಾಡಲು ನಿರ್ಧರಿಸುತ್ತಾನೆ. ಇಲ್ಲಿಂದ ಮುಂದೆ ಸಿನಿಮಾವಲ್ಲದ ಸಿನಿಮಾ.

ಇದುವರೆಗೂ ನಿರ್ದೇಶಕರ ಅಣತಿಯಂತೆ ದಾರಿತಪ್ಪಿದ ಹುಡುಗಿಯಂತೆ ನಟಿಸಿದ್ದ ಆ ಹುಡುಗಿ, ಸಿನಿಮಾದಿಂದ ಅರ್ಧಕ್ಕೆ ಹೊರಬಂದಮೇಲೆ ಈಗ ನಿಜಕ್ಕೂ ಮನೆಗೆ ವಾಪಸ್ ಹೋಗಲು ದಾರಿ ಗೊತ್ತಿರುವುದಿಲ್ಲ. ಆಕೆಯ ಬಳಿ ಆಡ್ರೆಸ್ ಇರುವುದಿಲ್ಲ. ಇಲ್ಲಿಂದ ಮುಂದೆ ನಟನೆಯನ್ನು ಮೀರಿದ ಬದುಕಿನ ಕ್ಷಣಗಳನ್ನು ಹಾಗೆಯೇ ಸೆರೆ ಹಿಡಿಯಲು ಆ ಮಗುವಿಗೆ ಗೊತ್ತಿಲ್ಲದಂತೆ ಕ್ಯಾಮೆರಾ ಹಿಡಿದು ಹಿಂಬಾಲಿಸುತ್ತಾರೆ…

ವಾಸ್ತವಕ್ಕೆ ತೀರಾ ಹತ್ತಿರವೆನ್ನುವಂತೆ ಸಿನಿಮಾ ತೆಗೆಯುವ ಇರಾನಿನ ನಿರ್ದೇಶಕರು ಇಲ್ಲಿ ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಆಗುವ ಅನಿರೀಕ್ಷಿತ ಘಟನೆಯಿಂದ ಕತೆ ತಮ್ಮನಿಯಂತ್ರಣ ತಪ್ಪಿದಾಗಲೂ ಮುಂದೇನು ಅಂತ ಪ್ರೇಕ್ಷಕನ ಕುತೂಹಲವನ್ನು ತಾವೂ ಅನುಭವಿಸುತ್ತಾ ಚಿತ್ರೀಕರಣಕ್ಕೆ ಪ್ರಾರಂಭಿಸುತ್ತಾರೆ.

ಒಂದು ಸಿನಿಮಾ ಅಂದರೆ ಹಣ ಎನ್ನುವ ಈಗಿನ ಪ್ರಪಂಚದಲ್ಲಿ, ಸಿನಿಮಾ ಎನ್ನುವ ಮಾಧ್ಯಮ ಕಲೆಯನ್ನು ಪ್ರತಿಕ್ಷಣದ ಕುತೂಹಲವನ್ನು ಅನುಭವಿಸುತ್ತಾ, ಮುಂದಾಗುವ ಪ್ರತೊಕ್ಷಣವನ್ನು ಮಗುವಿನಂತೆ ಆಸ್ವಾದಿಸುತ್ತಾ, ನಮ್ಮನ್ನೂ ಹಾಗೇ ಕರೆದೊಯ್ಯುವ ಜಾಫರ್ ಫನಾಯಿಗೆ ಹ್ಯಾಟ್ಸಪ್ ಹೇಳಲೇಬೇಕು. ಇಲ್ಲಿಂದ ಮುಂದೆ ತನಗೆ ಗೊತ್ತಿಲ್ಲದ ದಾರಿಯನ್ನು ಮಗು ಹುಡುಕಿಕೊಂಡು ಹೇಗೆ ಹೋಗುತ್ತದೆ?ಅದು ಮನೆ ತಲುಪುತೇ? ಸಿನಿಮಾಗೆ ನಟಿಸಿದಂತೆ ಅದರ ಭಾವನೆಗಳೂ ಇಲ್ಲೂ ವ್ಯಕ್ತವಾಗುತ್ತವಾ? ಅಥವಾ ಅದನ್ನು ಮೀರಿ ಮತ್ತೇನೋ ಹೊಸದು ನಮಗೆ ಕಾಣಸಿಗಬಹುದಾ? ಅನ್ನುವುದು ನನ್ನ ಕುತೂಹಲ. ಈ ಸಮಯದಲ್ಲಿ ನನಗೆ ಈ ಪ್ರಶ್ನೆ ಹುಟ್ಟಿದ್ದು.

ಹೌದು,ನಾವು ನಿಜಬದುಕಿನಲ್ಲಿ ನಟಿಸಲು ಸಾಧ್ಯವಾ? ಅಂತ. ಇದೇ ಪ್ರಶ್ನೆ ನಿರ್ದೇಶಕನಿಗೂ ಮೂಡಿರಬೇಕು. ಈಗ ನಮಗೂ ಮೂಡಿರಬೇಕಲ್ಲವೇ? ಮುಂದೇನಾಗುತ್ತದೆಯೋ ನೋಡೋಣ.

ಬಸ್ಸಿಳಿದು ಹೊರಗೆ ಬಂದು ಕುಳಿತ ಆ ಹುಡುಗಿ ಏನು ಹೇಳಿದರೂ ಸಿನಿಮಾದಲ್ಲಿ ನಟಿಸಲು ಒಪ್ಪುವುದಿಲ್ಲ. ಕಾರಣ ಕೇಳಿದರೆ, “ನನಗೆ ಸಿನಿಮಾದಲ್ಲಿ ಅಳಲು ಹೇಳುತ್ತಾರೆ, ಇದನ್ನು ನನ್ನ ಗೆಳತಿಯರು ನೋಡಿದಾಗ ನನ್ನನ್ನು ಅಳುಮುಂಜಿ ಅಂತ ಹಂಗಿಸುತ್ತಾರೆ” ಅಂತ ಹೇಳುತ್ತಾಳೆ. ಅಲ್ಲಿಂದಾಚೆಗೆ ಅವಳೇ ತನಗೆ ಅಲ್ಲಲ್ಲಿ ಆಡ್ರೆಸ್ ಕೇಳುವುದು, ಯಾವುದೋ ಬಸ್ ಹತ್ತಿ ಮತ್ತೆಲ್ಲೋ ಇಳಿಯುವುದು, ಟ್ರಾಫಿಕ್ ಪೊಲೀಸಿನವನನ್ನು ಕೇಳುವುದು..ಹೀಗೆ ಅಲೆದು ಕೊನೆಗೊಮ್ಮೆ ಮನೆ ತಲುಪುತ್ತಾಳೆ. ಅಲ್ಲಲ್ಲಿ ನಿಂತು ತನಗೆ ಎಟುಕದ ಫೋನ್ ಬೂತ್ ಗೆ ನಾಣ್ಯವನ್ನು ಹಾಕಿ ಮನೆಗೆ ಫೋನ್ ಮಾಡುವುದು, ಟ್ಯಾಕ್ಸಿ ಹತ್ತಿ ತನ್ನಲ್ಲಿರುವ ಸ್ವಲ್ಪ ಹಣದಲ್ಲೇ ಟ್ಯಾಕ್ಸಿ ಹತ್ತಿ ಹೋಗುವುದು…ಹಲವು ದೃಶ್ಯಗಳು.

ಸಿನಿಮಾ ಅಂತ್ಯವಾದ ಮೇಲೆ ಬದುಕಿನಲ್ಲಿ ಖಂಡಿತಾ ನಟಿಸಲಾಗದು ಅನ್ಸುತ್ತೆ. ಸಿನಿಮಾ ನಟನೆಯಲ್ಲಿ ಎಲ್ಲಾ ಭಾವ ತೀವ್ರತೆಯನ್ನು ಬಯಸುತ್ತಾರೆ ನಿರ್ದೇಶಕರು. ಪ್ರಾರಂಭದಲ್ಲಿ ಉತ್ತಮವಾಗಿ ಎಲ್ಲಾ ಭಾವನೆಗಳನ್ನು ಅದ್ಬುತವಾಗಿ ಕಣ್ಣಲ್ಲೇ ಬಿಂಬಿಸುವ ಆ ಮಗುವಿಗೆ ಇದ್ದಕ್ಕಿದ್ದಂತೆ ಅವೆಲ್ಲ ಇಷ್ಟವಿಲ್ಲದಂತಾಗುವುದು, ಅದು ಕೃತಕವೆನಿಸಿ ಹೊರಬಂದು ಬಿಡುವುದು ನೋಡಿದಾಗ, ಎಲ್ಲೋ ಮಗುವಿನ ನಿರ್ಧಾರ ನಮ್ಮದೇ ಅನ್ನಿಸುತ್ತದೆ.

ನಾವೂ ನಿತ್ಯ ಜೀವನದಲ್ಲಿ ನಮ್ಮ ಸಹಜ ಭಾವನೆಗಳನ್ನು ನಮಗರಿವಿಲ್ಲದಂತೆ ಮರೆತು ಯಾವುದೋ ಒತ್ತಾಸೆಗೆ, ಒತ್ತಡಕ್ಕೆ, ಮರ್ಜಿಗೆ, ಓಲೈಕೆಗೆ, ಮಣಿದು ನಟಿಸಲಾರಂಭಿಸಿಬಿಡುತ್ತೇವಲ್ವಾ? ಇಲ್ಲಿ ಮಗು ನಟನೆಯನ್ನು ಧಿಕ್ಕರಿಸಿ ಹೊರಬಂದುಬಿಡುವುದು ನಮ್ಮನ್ನೆಲ್ಲಾ ಆ ಕ್ಷಣದಲ್ಲಿ ಎಚ್ಚರಿಸಿದಂತಾಗಿಬಿಡುತ್ತದೆ.

ಇದು ನಿರ್ದೇಶಕನ ಉದ್ದೇಶವಾ? ಕುತೂಹಲವಾ? ಅವನಲ್ಲೂ ಮಗುವಿನಂತ ಆಸೆ ಮೊಳಕೆಯೊಡೆಯಿತಾ? ಇವೆಲ್ಲಾ ಸಿನಿಮಾ ನೋಡಿ ಮುಗಿದಾಗ ನನ್ನೊಳಗೆ ಮೂಡಿದ ಪ್ರಶ್ನೆ ಮತ್ತು ಅಭಿಪ್ರಾಯ. ಇಷ್ಟೊಂದು ವಿಚಾರಗಳನ್ನೊಳಗೊಂಡ ಸಿನಿಮಾದಲ್ಲಿ ತಪ್ಪುಗಳಿಲ್ಲವೇ ಅಂತ ಅನ್ನಿಸಬಹುದು. ಖಂಡಿತಾ ಅನೇಕ ತಪ್ಪುಗಳಿವೆ.

ಮೊದಲರ್ಧ ವಿಭಿನ್ನ ಚಿತ್ರಕತೆಯಿಂದ ಬಿಗಿಯಾಗಿ ಸಾಗುವ ಸಿನಿಮಾ, ನಂತರ ಸುಮ್ಮನೇ ಸಾಗುವುದರಿಂದ ಮೊದಲರ್ಧದಲ್ಲಿನ ಭಾವನೆಗಳ ತಾಕಲಾಟ ದ್ವಿತೀಯಾರ್ಧದಲ್ಲಿ ಇರದು. ಏಕೆಂದರೆ ಕ್ಯಾಮೆರಾ ಹುಡುಗಿಯನ್ನು ಹಿಂಬಾಲಿಸುವಾಗ ರಸ್ತೆಯ ನಡುವಿನ ಟ್ರಾಫಿಕ್ಕಿನಿಂದಾಗಿ ಅವಳು ಅನೇಕ ಸಲ ಮರೆಯಾಗಿಬಿಡುತ್ತಾಳೆ. ಅನೇಕ ಬಾರಿ ಅವಳನ್ನು ಕ್ಯಾಮೆರಾವೇ ಹುಡುಕಲಾರಂಭಿಸುತ್ತದೆ. ಆಗ ಅರೆರೆ ಇದೇನಿದು ಸಿನಿಮಾನಾ ಅನ್ನಿಸುತ್ತದೆ. ಸನ್ನಿವೇಶಗಳೇ ಆ ರೀತಿ ಇರುವಾಗ ಅವೆಲ್ಲಾ ತಪ್ಪುಗಳಲ್ಲವೆಂಬುದು ನನ್ನ ಭಾವನೆ. ಪ್ರತಿಸಿನಿಮಾದಲ್ಲೂ ಒಂದು ಕ್ಲೈಮ್ಯಾಕ್ಸ್ ಇರುತ್ತೆ ಎನ್ನೋದು ಎಲ್ಲರ ಭಾವನೆ. ಇದೊಂಥರ ಕ್ಲೈಮ್ಯಾಕ್ಸ್ ಇಲ್ಲದೇ ಅಂತ್ಯವಾಗುವ ಸಿನಿಮಾವೆಂದು ಹೇಳಬಹುದು. ಇವೆಲ್ಲಾ ಈ ” ದಿ ಮಿರರ್” ಸಿನಿಮಾ ನೋಡಿದಾಗ ಕಾಡಿದ ಅನುಭವಗಳು.

1997 ರಲ್ಲಿ ತಯಾರಾದ ಸಿನಿಮಾ ಇಸ್ತಾನ್‍ಬುಲ್ ಪಿಲ್ಮೊತ್ಸವದಲ್ಲಿ “ಗೋಲ್ಡನ್ ಟುಲಿಫ್, ಲೊಕಾರ್ನೋ ಫಿಲ್ಮ್ ಫೆಸ್ಟಿವಲ್‍ನಲ್ಲಿ “ಗೋಲ್ಡನ್ ಲೆಪ್ಪರ್ಡ್”, ಸಿಂಗಪೂರ್ ಫಿಲ್ಮ್ ಫೆಸ್ಟಿವಲ್‍ನಲ್ಲಿ “ಸಿಲ್ವರ್ ಸ್ಕ್ರೀನ್ ಆವರ್ಡ್”, ಬಹುಮಾನಗಳನ್ನು ಗೆದ್ದಿದೆ.

About these ads

One Response »

  1. manchale says:

    UTV Worldmovies channelನಲ್ಲಿ ಈ ಸಿನಿಮಾ ಬ೦ದಾಗಲೆಲ್ಲ ಕೂತು ನೋಡಿದ್ದೇ ನೋಡಿದ್ದು!
    The Mirror ಒ೦ದು ಅದ್ಭುತ experience!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Connecting to %s