ಕೇವಲ ಪೌರಾಣಿಕ ಚಿತ್ರಗಳೇ ಆಳುತ್ತಿದ್ದ ಸಮಯದಲ್ಲಿ ಗೂಡಪಲ್ಲಿ ರಾಮಬ್ರಹ್ಮ ಏಕಾಏಕಿ ಮಾಲಪಿಲ್ಲ (ಹರಿಜನ ಹುಡುಗಿ) ಸಿನಿಮಾ ನಿರ್ಮಿಸಿ ನಿರ್ದೇಶಿಸಿ ದೊಡ್ಡ ಕ್ರಾಂತಿ ಮಾಡಿದ್ದರು. ಬೂಜಲ ಹಿಡಿದ ಹಳೆಯ ಸಂಪ್ರದಾಯಗಳ ವಿರುದ್ಧ ಸಿಡಿದೆದ್ದ ಸಿನಿಮಾ ಮಾಲಪಿಲ್ಲ.
ಸಾರಥಿ ಫಿಲ್ಮ್ ಒಡೆಯಾದ ರಾಮಬ್ರಹ್ಮಂ ಚಿಂತಕರು ಮತ್ತು ಸಾಮಾಜಿಕ ಚೈತನ್ಯದ ಬಗ್ಗೆ ತೀವ್ರ ಕಳಕಳಿ ಉಳ್ಳವರಾಗಿದ್ದರು. ಅವರು ಸಿನಿಮಾ ಇಂಥದ್ದಕ್ಕೆ ಬಲವಾದ ಅಸ್ತ್ರವೆಂದೇ ನಂಬಿದ್ದರು. 1936 ರ ಸಮಯದಲ್ಲಿ ಗಾಂಧೀಜಿಯವರು ಅಸ್ಪೃಶ್ಯತೆ ವಿರುದ್ಧ, ಹರಿಜನರಿಗೆ ದೇವಾಲಯ ಪ್ರವೇಶಗಳಂಥ ಚಳವಳಿಗಳು ಆರಂಭಗೊಂಡಿದ್ದವು. ಸಮಕಾಲೀನ ರಾಜಕೀಯ ಸಾಮಾಜಿಕ ಮಾಲಪಿಲ್ಲ ನಿರ್ಮಿಸಲು ರಾಮಬ್ರಹ್ಮಂ ಸಿದ್ಧರಾದರು.
ಸನಾತನ ಬ್ರಾಹ್ಮಣನೊಬ್ಬ ಹರಿಜನ ಹುಡುಗಿಯೊಬ್ಬಳ್ಳನ್ನು ಪ್ರೀತಿಸಿ ಮದುವೆಯಾಗೋದು ಸಿನಿಮಾದ ಥೀಮು. 70 ವರ್ಷಗಳ ಹಿಂದೆ ಈ ರೀತಿಯ ಸಬ್ಜೆಕ್ಟ್‌ನಿಂದ ಸಿನಿಮಾ ಮಾಡೋದು ನಿಜಕ್ಕೂ ಸಾಹಸವೇ ಸರಿ. ವಿಜಯವಾಡದಂಥ ಸಾಹಿತಿಗಳ, ಪ್ರಕಾಶಕರ ತವರಾದ ಅದ್ಭುತ ನಗರದಲ್ಲಿ ಸನಾತನ ಬ್ರಾಹ್ಮಣರೆಲ್ಲರೂ ಬಹಿರಂಗ ಸಭೆ ನಡೆಸಿ ಈ ಚಿತ್ರವ ನ್ನು ಯಾರೂ ವೀಕ್ಷಿಸಬಾರದೆಂದು ವಿನಂತಿಸಿದ್ದರು.
ರಾಮಬ್ರಹ್ಮಂರ ತಕ್ಷಣದ ಪ್ರತಿಕ್ರಿಯೆಯೆಂದರೆ ಶ್ರೋತ್ರಿಯ ಬ್ರಾಹ್ಮಣರಿಗೆಲ್ಲಾ ಮಾಲಪಿಲ್ಲ ಸಿನಿಮಾಕ್ಕೆ ಉಚಿತ ಪಾಸುಗಳನ್ನು ಹಂಚಲು ಸಿದ್ಧರಾದರು. ಕೆಲವು ಬ್ರಾಹ್ಮಣರಂತೂ ಈ ಸಿನಿಮಾ ನೋಡಿ ಬಂದ ಮೇಲೆ ಮನೆಯಲ್ಲಿ ಸ್ನಾನ ಮಾಡಿದ್ದರು.
ಸಿನಿಮಾದಲ್ಲಿ ನಾಯಕನಾಗಿ ಗಾಲಿ ವೆಂಕಟೇಶ್ವರರಾವ್, ಅವನ ತಂದೆಯಾಗಿ ಕೆಂಡಾಮಂಡಲ ಶಾಸ್ತ್ರಿಗಳಾಗಿ ಗೋವಿಂದರಜುಲ ಸುಬ್ಬಾರಾವು ನಟಿಸಿದ್ದರು. ಹರಿಜನ ಹುಡುಗಿಯಾಗಿ ಅಂದಿನ ಡ್ರೀಮ್ ಗರ್ಲ್ ಕಾಂಚನಮಾಲ ನಟಿಸಿದ್ದರು.

ಮದರಾಸಿನ ಮೋಶನ್ ಪಿಕ್ಚರ್ ಪ್ರೊಡ್ಯೂಸರ್ ಕಂಬೈನ್ ಸ್ಟುಡಿಯೋದಲ್ಲಿ 40 ಕಾಲ್‌ಶೀಟ್‌ಗಳೊಂದಿಗೆ ಪ್ರಾರಂಭಗೊಂಡ ಸಿನಿಮಾ ವೆಚ್ಚ ಒಂದು ಲಕ್ಷ ರೂ. ಈ ಚಿತ್ರಕ್ಕೆ ಬಸವರಾಜು ಅಪ್ಪಾರಾವ್, ತಾಪಿ ಧರ್ಮಾರಾವ್ ಹಾಗೂ ಚಲಂ ಚಿತ್ರ ಸಂಭಾಷಣೆಯನ್ನು ಬರೆದಿದ್ದರು. ಒಬ್ಬೊಬ್ಬ ಲೇಖಕರಿಂದ ( ಆ ಕಾಲದ ಕ್ರಾಂತಿಕಾರಿ ಲೇಖಕರು) ಒಂದೊಂದು ದೃಶ್ಯ ಹಾಗೂ ಒಂದೊಂದು ಹಾಡು ಬರೆಸಿದ ಕ್ರೆಡಿಟ್ ರಾಮಬ್ರಹ್ಮಂರಿಗೆ ಸಲ್ಲಬೇಕು.
ಚಿತ್ರದ ಸಂಗೀತ ನಿರ್ದೇಶಕರು ಬಿಎನ್ ಆರ್ (ಬಿ.ನರಸಿಂಹರಾವ್). ಬಹುಶಃ ಈ ಸಿನಿಮಾದಿಂದಲೇ ಸಾಮಾಜಿಕ ಸಿನಿಮಾದ ಹಾಡುಗಳು ಜನಪ್ರಿಯವಾಗಲು ಆರಂಭಿಸಿದ್ದು. ನಲ್ಲವಾಡೇ ಗೊಲ್ಲಪಿಲ್ಲವಾಡೇ ಇಂದಿಗೂ ಸಖತ್ ಹಿಟ್ ಹಾಡು.
ಮಾಲಪಿಲ್ಲ 12 ಕೇಂದ್ರಗಳಲ್ಲಿ ಸೆಪ್ಟೆಂಬರ್ 25, 1938 ರಲ್ಲಿ ಬಿಡುಗಡೆಯಾಯಿತು. ಒಂದು ವರ್ಗದ ಜನ ಚಿತ್ರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರೂ ಉಳಿದ ಪ್ರೇಕ್ಷಕ ವರ್ಗದಿಂದ ಸಿನಿಮಾ ಹೆಚ್ಚು ಸುದ್ದಿಯಾಗಿ ಹಿಟ್ ಆಯಿತು.
ಆ ದಿನಗಳಲ್ಲಿ ತಿರುವಾಂಕೂರ್ ಮಹಾರಾಜರು ಹರಿಜನರಿಗೆ ದೇವಾಲಯ ಪ್ರವೇಶವನ್ನು ಮಾಡಿಸಿದ್ದರ ಸಂತೋಷಕ್ಕೆ ರಾಮಬ್ರಹ್ಮಾಂರು ಪ್ರಶಂಸಾಪೂರ್ವಕವಾಗಿ ಈ ಸಿನಿಮಾವನ್ನು ತಿರುವಾಂಕೂರ್ ರಾಜರಿಗೆ ಅರ್ಪಿಸಿದ್ದಾರೆ.







1 comment
Comments feed for this article
February 9, 2010 at 1:09 pm
Pramod
ಕನ್ನಡದ ‘ಹೇಮಾವತಿ’ ಚಿತ್ರ ಕೂಡ ಇದೇ ಥೀಮು ಅನಿಸುತ್ತೆ.