ವಸಂತ ಎನ್ನುವವರು ತಮ್ಮ ಬ್ಲಾಗ್ ನಲ್ಲಿ ಬರೆದ ಪುಟ್ಟ ಬರಹವಿದು. ಇಂದಿನ ಕನ್ನಡ ಚಿತ್ರರಂಗದ ಚರ್ಚಿತ ವಿಷಯವೇ ಇಲ್ಲಿಯ ಚರ್ಚೆಯ ಸಂಗತಿ. ಚರ್ಚೆ ಬೆಳೆಸುವವರು ತಮ್ಮ ಲೇಖನಗಳನ್ನು ಕಳಿಸಿ, ಚರ್ಚೆ ನಡೆಸಲೆಂದೇ ಇದನ್ನು ಇಲ್ಲಿ ಹಾಕುತ್ತಿದ್ದೇವೆ. ನೀವು ನಮ್ಮ ಇಮೇಲ್ ಗೆ ಕಳಿಸಿಕೊಡಿ.
ಇವತ್ತು ಡೆಕ್ಕನ್ ಹೆರಾಲ್ಡ್ ಓದ್ತಾ ಇದ್ದೆ. ಒಂದು ಚಿಕ್ಕ ಸುದ್ಧಿ ಕಣ್ಣಿಗೆ ಬಿತ್ತು. ಗದಗನಲ್ಲಿ ಒಬ್ಬ ಚಲನಚಿತ್ರ ಪ್ರದರ್ಶಕರು ಹೇಳಿಕೆ ಒಂದನ್ನು ನೀಡಿ, ಎಲ್ಲ ಪ್ರದರ್ಶಕರು ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿ (KFCC) ಯ ಸದಸ್ಯರಾಗಬೇಕು ಅನ್ನುವ ಸರ್ಕಾರದ ನಿರ್ಧಾರ ಅವೈಜ್ಞಾನಿಕವಾದುದು, ಇದನ್ನ ಈ ಕೂಡಲೇ ಹಿಂಪಡೆಯಬೇಕು ಅಂದರು. ಅದನ್ನ ನೋಡಿದಾಗ ಕರ್ನಾಟಕದ ಒಂದು ಭಾಗದ ಪ್ರದರ್ಶಕರೊಬ್ಬರು, ಕರ್ನಾಟಕದ ಚಿತ್ರಮಂಡಳಿಯ ಸದಸ್ಯತ್ವವೇ ಬೇಡ ಅಂತ ಯಾಕಂತಾರೆ ಅಂತಾ ವಿಚಾರ ಮಾಡ್ತಾ ಇದ್ದೆ. ಯೋಚನೆ ಮಾಡಿದಾಗ, ಚಿತ್ರ ರಂಗದ ಒಂದಿಬ್ಬರು ಗೆಳೆಯರನ್ನು ಮಾತನಾಡಿಸಿದಾಗ ಕಂಡದ್ದು:
ಈ ಎಲ್ಲ ಪ್ರದರ್ಶಕರು ಉತ್ತರ ಕರ್ನಾಟಕದಲ್ಲಿ ತೆಲುಗು/ಹಿಂದಿ ಚಿತ್ರಗಳ ಪ್ರದರ್ಶಕರಾಗಿದ್ದು, ಕರ್ನಾಟಕದಲ್ಲಿ ತೆಲುಗು/ಹಿಂದಿ ಚಿತ್ರಗಳ ಪ್ರದರ್ಶನದಿಂದ ಹಣ ಮಾಡುತ್ತಿರುವವರು. ಕನ್ನಡ ಚಿತ್ರರಂಗದ ಉಳಿವು, ಬೆಳೆವಿಗಾಗಿ KFCC ತೆಗೆದುಕೊಳ್ಳುವ ನೀತಿ ನಿಯಮಗಳು ( ಉದಾ: ಇಷ್ಟೇ ಪ್ರತಿ ಹಿಂದಿ / ತೆಲುಗು ಚಿತ್ರಗಳನ್ನು ಪ್ರದರ್ಶಿಸಬೇಕು ಅನ್ನೋದು ಇರಬಹುದು, ಇಲ್ಲವೇ ಪ್ರದರ್ಶಕರ ಮತ್ತು ನಿರ್ಮಾಪಕರ ಮಧ್ಯ ಆದಾಯ ಹಂಚಿಕೆಗೆ ಇಂತಹದು ಅಂತ ಒಂದು ನಿಯಮದನ್ವಯ ನಡೆಯಬೇಕು ಅನ್ನೋದು ಇರಬಹುದು) ಇವರ ಹಿತಾಸಕ್ತಿಗೆ ಮಾರಕವಾಗಿ ಪರಿಣಮಿಸುವುದರಿಂದ ಇವರು ಈ ರೀತಿ ವರ್ತಿಸುತ್ತಿದ್ದಾರೆ ಅನ್ನಿಸುತ್ತೆ.
ಎರಡನೆಯದಾಗಿ, ತೆಲುಗು/ಹಿಂದಿ ಚಿತ್ರರಂಗಕ್ಕೆ ಕರ್ನಾಟಕ ಅನ್ನೋದು ತಮ್ಮ core ಮಾರ್ಕೆಟ್ ಅಲ್ಲ. ಅದೇನಿದ್ದರೂ extra income. ಬಂದಷ್ಟು ಬರಲಿ ಅನ್ನೋ ಭಾವನೆ ಅವರದ್ದು. ಹೀಗಾಗಿಯೇ ತಮ್ಮ ಚಿತ್ರಗಳ ಇಲ್ಲಿನ ಪ್ರದರ್ಶಕರಿಗೆ ಕನ್ನಡ ನಿರ್ಮಾಪಕರಿಗಿಂತ ಹೆಚ್ಚು ಮಾರ್ಜಿನ್ ಕೊಡುತ್ತಾರೆ. ಆ ದುಡ್ಡಿನ ಆಸೆಗೆ ಈ ಪ್ರದರ್ಶಕರು ಈ ರೀತಿ ಈ ನೆಲದ ಕಾನೂನು ತಮಗನ್ವಯವಾಗುವುದು ಬೇಡ ಅನ್ನೋದು.
ಇಂತಹ ವಿರೋಧಕ್ಕೆಲ್ಲ ಸರ್ಕಾರ ತಲೆ ಕೆಡಿಸಿಕೊಳ್ಳಬಾರದು. ಒಂದು ದೊಡ್ಡ ಸಮುದ್ರದಲ್ಲಿ ಒಂದು ಶಾರ್ಕ್ ಮೀನು, ಒಂದು ಚಿಕ್ಕ ಮೀನು ಒಟ್ಟಿಗೆ ಇದ್ದಾಗ, ಎರಡು ಒಂದೇ, ಎರಡು ಸಮುದ್ರದ ಪ್ರಾಣಿಗಳೇ ಅಂತ ಬಿಟ್ರೆ ಏನಾಗುತ್ತೆ? ಶಾರ್ಕ್ ಮೀನು ಚಿಕ್ಕ ಮೀನನ್ನ ತಿಂದೇ ತಿನ್ನುತ್ತೆ. ಇವತ್ತು ಕರ್ನಾಟಕದಲ್ಲೂ ಇದೇ ಸ್ಥಿತಿ ಇದೆ. ಕನ್ನಡ ಚಿತ್ರರಂಗಕ್ಕೆ ತೆಲುಗು/ಹಿಂದಿ/ತಮಿಳಿನಿಂದ ತೀವ್ರ ಮಟ್ಟದ ಸ್ಪರ್ಧೆ ಇದ್ದು, ಇಲ್ಲಿ ಕನ್ನಡ ಚಿತ್ರರಂಗ ಉಳಿದು ಬೆಳೆಯಲು, ಬೇರೆ ಚಿತ್ರಗಳ ಹಾವಳಿಯನ್ನು ಒಂದು ಮಟ್ಟಕ್ಕೆ ನಿಯಂತ್ರಿಸಲೇಬೇಕು.
ಹಾಗಾಗಿ, ಎಲ್ಲ ಪ್ರದರ್ಶಕರು KFCCಯ ವ್ಯಾಪ್ತಿಗೊಳಪಟ್ಟು, ಸರ್ಕಾರದ ನೀತಿ ನಿಯಮಗಳನ್ವಯ ನಡೆಯುವಂತೆ ಸರ್ಕಾರ/ಚಿತ್ರ ಮಂಡಳಿ ಮಾಡಬೇಕು. ಇದೇ ಸಮಯದಲ್ಲಿ KFCC ಕೂಡಾ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳದೇ, ಕನ್ನಡ ಚಿತ್ರರಂಗದಲ್ಲಿ ಹೊಸತನ ತುಂಬಲು, ತಾಂತ್ರಿಕವಾಗಿ ಇನ್ನಷ್ಟು ಮೇಲಕ್ಕೇರಲು, ಒಳ್ಳೆ ರೀತಿಯಲ್ಲಿ ಮಾರುಕಟ್ಟೆ ಕಲ್ಪಿಸಲು ಏನು ಮಾಡಬೇಕೋ ಅದನ್ನೆಲ್ಲ ಮಾಡಬೇಕು. ಚಿತ್ರ ರಂಗ ಶುರುವಾಗಿ 75 ವರ್ಷ ಆಯ್ತು..ಇನ್ನೂ ಅಳ್ತಾ ಕೂರೋದ್ರಲ್ಲೇ ಸಮಾಧಾನ ಪಟ್ಕೊಂಡ್ರೆ ಹೇಗೆ ? ಅಲ್ವಾ ಗೆಳೆಯರೇ?














ಹಾಂಗಲ್ಲಾರೀ… ನೀವ್ಯಾಕೆ ಆ ಸಿನ್ಮಾ ತೋರ್ಸೋನ್ ಬಗ್ಗೆ ಮಾತಾಡ್ತೀರ್ರೀ? ಅವಂ ಮಾಡೋದು ಅವನ ಹೊಟ್ಟೇ ಪಾಡಲ್ಲೇನ್ರೀ? ಅವಂಗೆ ಹಿಂದೀ ಸಿನ್ಮಾ ತೋರ್ಸೇ ಹೊಟ್ಟೆ ತುಂಬೋದು ಅಂತಾದ್ಮ್ಯಾಲೆ ಅವಂ ಯಾಕ್ರೀ ಕನ್ನಡಾ ಸಿನ್ಮಾ ತೋರ್ಸ್ಯಾನು? ಇವತ್ತಾ ಕನ್ನಡ ಸಿನ್ಮಾ ನೋಡೂ ಜನ್ರೇ ಕಡ್ಮೆ ಆಗಿದಾರಾ ಅಂದ್ ಮ್ಯಾಗೆ ಅದಕ್ಕೇನೋ ಬೇರೆ ಕಾರಣ ಇರ್ಬೇಕಲ್ಲೇನ್ರೀ? ನಮ್ಮ ಸಿನ್ಮಾಗಳನ್ನ ಉಳ್ಸೋಕ್ಕಂತ ಅದ್ಯಾವನೋ ಗದಗ್ದೋನ್ ಹೊಟ್ಟೆಗೊಡ್ಯೋದು ಏನು ನ್ಯಾಯಾ ಕಣ್ರೀ? ಅದಕ್ಕೆ ಕಾನೂನು ಮಾಡಿದ್ರಾ… ಅದು ಅನ್ಯಾಯದ್ ಕಾನೂನಲ್ಲೇನ್ರೀ?
ಎಲ್ರೂ ಮಾಡೋದೂ ಹೊಟ್ಟೆಪಾಡಿಗಾಗಿ ಸ್ವಾಮಿ. ಹಾಗಂತ ಉದಾಹರಣೆಗೆ, ಕಳ್ಲಭಟ್ಟಿ ಮಾಡೋರ್ನ, ಕಳ್ಳಸಾಗಾಣಿಕೆ ಮಾಡೋರ್ನ ಒಪ್ಪೋದಿಕ್ಕೆ ಸಾಧ್ಯಾನಾ? ಒಬ್ಬರು ಮಾಡೋ ಕೆಲಸ ಆ ನಾಡಿನ ಜನರ ಏಳಿಗೆಗೆ ಪೂರಕವಾಗಿರಬೇಕು ಅಲ್ಲವಾ? ಕಾನೂನು ಇರೋದೂ ಸಹಾ ಆಯಾ ನಾಡಿನ ಜನರ ಏಳಿಗೆಗಾಗಿಯೇ ಅಲ್ಲವಾ? ಕಾನೂನು ಮಾಡೋದು ಆಯಾ ನಾಡಿನ ಜನರ ರಕ್ಷಣೆಗಾಗಿ ಅಲ್ಲವಾ?
vasant avara baraha chennagide..
enguru anno blog alli ondolle baraha nodide,,
http://enguru.blogspot.com/2009/12/kannada-chitraranga-aatakuntu.html
saangatyadalli idara bagge charche aagbeku annisutte..
೧. ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಇಲ್ಲಿ ಬದುಕುವವರು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿ ನಡೆಯಬೇಕು. ಚಲನಚಿತ್ರ ವಾಣಿಜ್ಯ ಮಂಡಳಿ ಅನ್ನುವುದು ಇದೇ ಒಕ್ಕೂಟ ವ್ಯವಸ್ಥೆಯ ಅಡಿಯಲ್ಲಿ ರೂಪುಗೊಂಡಿರುವ ಸಂಸ್ಥೆ. ಇಲ್ಲಿ ಎಲ್ಲಾ ಭಾಷೆಯ ಸಿನಿಮಾದವರೂ ಸದಸ್ಯರಾಗಿದ್ದಾರೆ. ಇಂತಹ ವ್ಯವಸ್ಥೆಯೂ ರೂಪಿಸು ಕಟ್ಟುಪಾಡುಗಳನ್ನು ಕಾಪಾಡಿಕೊಂಡು ಸಾಗುವುದು ಸಿನಿಮಾ ಸಮಾಜದ / ಉದ್ಯಮದ ಏಳಿಗೆಗೆ ಅಗತ್ಯ. ಹಾಗಾಗಿ ಗದಗದ ಚಿತ್ರಮಂದಿರದವರು ನೀಡಿರುವ ಹೇಳಿಕೆಯನ್ನು ತಪ್ಪು ಎನ್ನಬೇಕಾಗುತ್ತದೆ.
೨. ಒಂದು ಉದ್ಯಮದ ಒಟ್ಟಂದದಲ್ಲಿ ಯಾವುದೇ ಕಟ್ಟುಪಾಡು ಯಾರಿಗಾದರೂ ಸರಿ ಇಲ್ಲ ಎನಿಸಿದರೆ, ಆ ಒಕ್ಕೂಟ ವ್ಯವಸ್ಥೆಯ ಒಳಗಡೆಯೇ ಇದ್ದು ಪ್ರಶ್ನಿಸಬೇಕು ಹಾಗೂ ಅಗತ್ಯ ತಿದ್ದುಪಡಿಗಳನ್ನು ಸೂಚಿಸಬೇಕು. ಹಾಗೆ ಮಾಡದೆ ದೂರ ಉಳಿದರೆ ಅಂತಹವರು ಎಲ್ಲಿಗೂ ಸಲ್ಲದವರಾಗುತ್ತಾರೆ. ವ್ಯವಸ್ಥೆಯೇ ಅಂತಹವರನ್ನು ದೂರ ಇಟ್ಟರೆ ಒಂಟಿಯಾಗಿ ಬದುಕುವುದು ಯಾರಿಗಾದರೂ ಕಷ್ಟವಾಗುತ್ತದೆ.
೩. ಎಲ್ಲರ ಸಹಕಾರದಿಂದ ಮಾತ್ರ ಆರೋಗ್ಯಕಾರಿಯಾದ ಸಮಾಜ ಕಟ್ಟುವುದು ಸಾಧ್ಯ.
೪. ಒಮ್ಮೊಮ್ಮೆ ಒಕ್ಕೂಟ ವ್ಯವಸ್ಥೆಯಲ್ಲಿ ಬಲವುಳ್ಳವರ ಮಾತುಗಳಿಗೆ ಪುಷ್ಟಿ ದೊರಕುವ ಸಾಧ್ಯತೆ ಇದೆ. ಹಾಗಾಗಿ ಶಕ್ತಿಪ್ರದರ್ಶನ ಮಾಡಲಾಗದವರ ಅಭಿಪ್ರಾಯಗಳಿಗೆ ಬೆಲೆಯೇ ಸಿಗದೆ ಹೋಗಬಹುದು. ಅಂತಹ ಪರಿಸ್ಥಿಯನ್ನು ನಿಭಾಯಿಸುವುದಕ್ಕೆ ಮಾರ್ಗೋಪಾಯಗಳನ್ನ ಕಂಡುಕೊಳ್ಳಬೇಕು.
ಗದಗದ ಚಿತ್ರಮಂದಿರದ ಮಾಲೀಕರನ್ನೂ ಒಲಿಸಿ, ಒಳಗೊಳ್ಳಬೇಕು. ಯಾರನ್ನೂ ದೂರ ಇಟ್ಟರೂ ಅದು ಮಾರಕವೇ.
ನೊಡಿ ಸರ್ ಇದು ವೆರಿ ಸಿಂಪಲ್, KFCC ಯಾವುದೇ ಕಾರಣಕ್ಕೆ ಪ್ರದರ್ಶಕರ ಮೇಲೆ ಯಾವುದೇ ರೀತಿಯ ಒತ್ತಡ ಹೇರಬಾರದು. ಯಾಕೆಂದರೆ ಅವನದು ಖಾಸಗಿ ಆಸ್ತಿ. ಒಮ್ಮ ಆತ ಸಿನೆಮಪ್ರದರ್ಶನ ಬಿಟ್ಟು ತಿಯೇಟರ್ ಒಡೆದು ಕಾಂಪ್ಲೆಕ್ಸ ಕಟ್ಟಿಸಿದರೆ ಏನ್ ಮಾಡ್ತಿರ. KFCC ಗೆ ಅಷ್ಟೊಂದು ಕಾಳಜಿ ಇದ್ರೆ ಕನ್ನಡದಲ್ಲಿ ದರಿದ್ರ ಸಿನೆಮ ನೀಡುತ್ತಿರೊ ಮಂದಿಗೆ ನಿರ್ಬಂದ ಹಾಕಲು ಹೇಳಿ. ಇಲ್ಲಾ ಅಂದ್ರೆ KFCC ಕರ್ನಾಟಕದಲ್ಲೆಲ್ಲ ತನ್ನ ಹಣದಿಂದ ಚಿತ್ರಮಂದಿರ ಕಟ್ಟಿ ಚಿತ್ರ ಪ್ರದರ್ಶಿಸಲು ಹೇಳಿ. ಅದು ಬಿಟ್ಟು ಈ ಡುಬಾಕ್ ಐಡಿಯ ಕೈಬಿಡಿ. ಒಳ್ಳೆ ಸಿನೆಮ ಕೊಟ್ಟರೆ ಜನ ನೋಡೇ ನೋಡ್ತಾರೆ.
ಸುರೇಶ್ ಅವರೇ ನಿಮ್ಮ ಮಾತು ೧೦೦ಕ್ಕೆ ೧೦೦ ನಿಜ.
ಚಲನಚಿತ್ರ ಮಂಡಳಿ ಇರುವುದು ಈ ನೆಲದ ಭಾಷೆಯ ಚಿತ್ರರಂಗದ ಹಿತ ಕಾಪಾಡಲು. ನನ್ನ ಬರಹದಲ್ಲಿ ಹೇಳಿದ ಹಾಗೇ, ಶಾರ್ಕ್ ಮೀನು, ಸಣ್ಣ ಮೀನು ಎರಡು ಸಮುದ್ರದ್ದೇ, ಎರಡು ಸಮಾನವೇ,, ಹೀಗಾಗಿ ಯಾರು ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಇರಲಿ ಅಂತ ಬಿಟ್ರೆ, ಸಣ್ಣ ಮೀನಿನ ಗತಿ ಏನಾಗುತ್ತೆ ಅನ್ನುವುದು ನಮ್ಮಲ್ಲಿ ಎಲ್ಲರಿಗೂ ಗೊತ್ತು. ಅದಕ್ಕೆ ಅಂತಲೇ ಎಲ್ಲ ರಾಜ್ಯದಲ್ಲೂ, ಆಯಾ ಭಾಷೆಯ ಚಿತ್ರರಂಗದ ಉಳಿವು, ಬೆಳೆವಿಗೆ ಅಂತಲೇ ಚಿತ್ರ ಮಂಡಳಿ ಇರುವುದು.
ಒಳ್ಳೆಯ ಸಿನೆಮಾ ಮಾಡಿ, ಪ್ರೇಕ್ಷಕ ತಾನಾಗಿ ಬರುತ್ತಾನೆ ಅನ್ನುವುದು ಕೆಲ ಮಟ್ಟಿಗೆ ಮಾತ್ರ ನಿಜ. ಎಷ್ಟೋ ಒಳ್ಳೆಯ ಕನ್ನಡ ಚಿತ್ರ ಮಂದಿರಗಳಿಗೆ ಚಿತ್ರ ಮಂದಿರ ದೊರಕದೇ ಅವು ಫ್ಲಾಪ್ ಆದ ಉದಾಹರಣೆ ನಮ್ಮ ಮುಂದಿವೆ. ಉದಾ: ಕಳೆದ ವರ್ಷದ ಕಬಡ್ಡಿ, ನೀನ್ಯಾರೆ ಸಿನೆಮಾಗಳು.
ಯಾವ ಭಾಷೆಯ ಚಿತ್ರ ಪ್ರದರ್ಶಿಸಬೇಕು ಅನ್ನುವ ಎಲ್ಲ ನಿರ್ಧಾರವನ್ನ ಚಿತ್ರ ಮಂದಿರದ ಮಾಲಿಕರ ಪಾಲಿಗೆ ಬಿಟ್ಟು ಕೊಟ್ಟರೆ, ಆಮೇಲೆ ಕನ್ನಡ ನಿರ್ಮಾಪಕರು ಚಿತ್ರ ಮಾಡೋದು ಬಿಟ್ಟು, ರಿಟೈರ್ ಆಗೋ ಹಂತ ಬಂದೀತು. ಅದಕ್ಕೆ ಕಾರಣವೂ ಇದೆ. ನನ್ನ ಬರಹದಲ್ಲಿ ಹೇಳಿದಂತೆ, ತೆಲುಗು-ತಮಿಳು-ಹಿಂದಿಯವರಿಗೆ ಕರ್ನಾಟಕ ಅನ್ನೋದು core market ಅಲ್ಲ. ಇದೇನಿದ್ರೂ extra income. ಸಿಕ್ಕಷ್ಟು ಬಾಚಿಕೊಂಡ್ರಾಯ್ತು ಅನ್ನೋದು ಅವರ ಧೋರಣೆ. ಹಾಗಾಗಿ, ಪ್ರದರ್ಶಕರಿಗೆ ಹೆಚ್ಚು ಮಾರ್ಜಿನ್ ಕೊಡುವುದಕ್ಕೆ ಅವರಿಗೆ ಯಾವುದೇ ತೊಂದರೆ ಇಲ್ಲ. ಹುಬ್ಬಳ್ಳಿಯ ಶೃಂಗಾರ, ಪದ್ಮ, ರೂಪಂ ಚಿತ್ರ ಮಂದಿರಗಳಲ್ಲಿ ತೆಲುಗು ಚಿತ್ರಗಳು ಬರಲು ಶುರುವಾಗಿದ್ದೇ ಇಂತಹದೊಂದು “ಹೆಚ್ಚು ಮಾರ್ಜಿನ್” ಅನ್ನೋ ಫಾರ್ಮುಲಾದಿಂದ. ಹುಬ್ಬಳ್ಳಿಯಲ್ಲಿ ಹುಡುಕಿದರೂ ತೆಲುಗರು ಸಿಗಲ್ಲ, ಅಲ್ಲಿ 50% ಚಿತ್ರ ಮಂದಿರ ತುಂಬೋ ಕನ್ನಡ ಚಿತ್ರ ಕೊಡೋ ಮಾರ್ಜಿನ್ ಗಿಂತ, 12% ತುಂಬೋ ತೆಲುಗು ಸಿನೆಮಾದಿಂದ ಮಾರ್ಜಿನ್ ಹೆಚ್ಚು ಸಿಗುತ್ತೆ ಪ್ರದರ್ಶಕನಿಗೆ. ಪ್ರದರ್ಶಕರಿಗೆ ಎಲ್ಲ ನಿರ್ಧಾರ ಬಿಟ್ರೆ, ನಾಳೆ ಶಕೀಲಾ ಸಿನೆಮಾ ಹಾಕ್ತೀನಿ, ಕನ್ನಡ ಸಿನೆಮಾ ಹಾಕಲ್ಲ ಅಂತಾನೆ. ಒಂದು ಕಾನೂನು, ಒಂದು ಕಟ್ಟಳೆ ಅಂತ ಇರದಿದ್ರೆ,, ನಾಳೆ ಊರ ತುಂಬಾ, ನಾಡ ತುಂಬಾ ಪರ ಭಾಷಾ ಚಿತ್ರಗಳೇ ಮೆರೆದಾವು !
ಒಳ್ಳೆಯ ಗುಣಮಟ್ಟದ ಸಿನೆಮಾಗಳು ಹೆಚ್ಚು ಬರಬೇಕು ,, ಜೊತೆಗೆ, ಕನ್ನಡ ಚಿತ್ರರಂಗವನ್ನು ಉಳಿಸಲು, ಬೆಳೆಸಲು KFCC ಕಾನೂನಿನ ಸಹಾಯವು ತೆಗೆದುಕೊಳ್ಳಬೇಕು.. ಅಷ್ಟಕ್ಕೂ ಇದೇನು ಕರ್ನಾಟಕ ಒಂದೇ ಮಾಡುತ್ತಿರುವ ಕೆಲಸ ಏನಲ್ಲ. ಎಲ್ಲ ರಾಜ್ಯದಲ್ಲೂ ಇಂತಹದೊಂದು ಕಟ್ಟಳೆ ಇದೆ.