ಯುಗಾದಿಗೆ ಸಾಂಗತ್ಯ ಮ್ಯಾಗಜೈನ್
ಗೆಳೆಯರೇ, ಸಾಂಗತ್ಯ ಹೊಸ ಸಾಹಸಕ್ಕೆ ಕೈ ಹಾಕಲೊರಟಿರುವುದು ತಮಗೇ ತಿಳಿದೇ ಇದೆ. ಸಾಂಗತ್ಯ ಮ್ಯಾಗಜೈನ್ ಬಗ್ಗೆ ಇಲ್ಲಿ ಪ್ರಕಟಿಸಿ ಸಲಹೆಯನ್ನೂ ಕೇಳಿದ್ದೆವು. ಕೆಲವರು ಮ್ಯಾಗಜೈನ್ ಅಗತ್ಯವಿಲ್ಲ ಎಂದು ಹೇಳಿದರೆ, ಇನ್ನು ಕೆಲವರು ತನ್ನಿ, ಒಳ್ಳೆಯದು ಎಂದರು. ಜತೆಗೆ ಆರ್ಥಿಕ ನೆಲೆ ಕುರಿತೂ ಸಲಹೆ ನೀಡಿದರು.
ಎಲ್ಲದಕ್ಕೂ ಧನ್ಯವಾದಗಳು. ಈಗಾಗಲೇ ಲೆಕ್ಕಾಚಾರ ಮುಗಿದಿದೆ ಆರ್ಥಿಕ ನೆಲೆಯದ್ದು. ಇನ್ನು ಸಂಪನ್ಮೂಲ ವ್ಯಕ್ತಿಗಳ ಲೆಕ್ಕಾಚಾರ ಆರಂಭವಾಗಿದೆ. ಒಂದು ಮ್ಯಾಗಜೈನ್ ಎಷ್ಟು ಚೆನ್ನಾಗಿ ತರಬಹುದೆಂಬ ಲೆಕ್ಕಾಚಾರವೂ ಪ್ರಾರಂಭವಾಗಿದೆ. ವಿನ್ಯಾಸ, ಹೂರಣ ಎಲ್ಲದರ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಈ ಬಗ್ಗೆಯೂ ನಿಮ್ಮ ಸಲಹೆಗಳಿದ್ದರೆ saangatyamagazine@gmail.com ಗೆ ಕಳುಹಿಸಬಹುದು. ನಿಮ್ಮಲ್ಲಿ ಏನಾದರೂ ಮಾದರಿಗಳಿದ್ದರೆ ಅದನ್ನೂ ಕಳಿಸಬಹುದು.
ಎಲ್ಲ ಲೆಕ್ಕಾಚಾರ ಸರಿ ಹೋಗುತ್ತದೆ ಅನ್ನಿ. ಸರಿ ಹೋದರೆ ಯುಗಾದಿಗೆ ನಮ್ಮ ಮ್ಯಾಗಜೈನ್ ಬಿಡುಗಡೆಗೆ ಸಿದ್ಧವಾಗಲಿದೆ. ಅಂದರೆ ಅಂದು ನಿಮಗೆ ಲಭ್ಯ. ಆಸಕ್ತರಿಗೆ ಹೇಗೆ ಮುಟ್ಟಿಸಬೇಕೆಂಬ ಯೋಜನೆಯೂ ನಡೆಯುತ್ತಿದೆ. ನಿಮ್ಮಲ್ಲಿ ಏನಾದರೂ ಹೊಸ ಐಡಿಯಾ ಇದ್ದರೆ ಹೇಳಿ. ಚಂದಾದಾರರನ್ನು ಆಶ್ರಯಿಸುವುದು ಇದ್ದೇ ಇದೆ. ಜತೆಜತೆಗೆ ಮಾರುಕಟ್ಟೆಯತ್ತಲೂ ಮುಖ ಮಾಡಲಿದೆ ಸಾಂಗತ್ಯ.
ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ರೂಪಿಸಬೇಕೆಂದು ಹೊರಟಿದೆ ಸಾಂಗತ್ಯ ಬಳಗ. ನಿಮ್ಮೆಲ್ಲರ ಬೆಂಬಲವಿದೆಯೆಂಬ ಭರವಸೆಯೇ ಇಂಥದೊಂದು ಸಾಹಸಕ್ಕೆ ಮುನ್ನುಗ್ಗುವಂತೆ ಮಾಡಿರುವುದು. ಈ ಮಾತು ಖಂಡಿತಾ ಅತಿಶಯೋಕ್ತಿಯದ್ದಲ್ಲ.
ಕಾರಣ, ಸಾಂಗತ್ಯ ಜನವರಿ 3 ರಂದು 2009 ರಲ್ಲಿ ಸಮೂಹ ಬ್ಲಾಗ್ ಆರಂಭವಾದಾಗಲೂ ಬಹಳಷ್ಟು ಮಂದಿ ಒಂದು ತಿಂಗಳು ಅಪ್ ಟು ಡೇಟ್ ಆಗಬಹುದು, ನಂತರ ಅಷ್ಟಕಷ್ಟೇ ಎಂದು ಊಹಿಸಿದ್ದರು. ಎಲ್ಲರ ಸಹಕಾರದಿಂದ ಆ ಊಹೆ ಸುಳ್ಳಾಗಿದೆ. ಸುಮಾರು ಹತ್ತು ತಿಂಗಳಿಂದ ತಿಂಗಳಿಗೆ ಕನಿಷ್ಠ 15 ಒಳ್ಳೆಯ ಲೇಖನಗಳನ್ನು ಪ್ರಕಟಿಸುತ್ತಿದೆ. ನಿತ್ಯವೂ ಒಂದು ಹೊಸ ಲೇಖನ ಪ್ರಕಟಿಸಬೇಕೆಂಬ ಇಚ್ಛೆ ಇದೆ. ಅದಕ್ಕೆ ಬರೆದುಕೊಡುವವರ ಸಂಖ್ಯೆಯೂ ಜಾಸ್ತಿ ಆಗಬೇಕಿದೆ. ಸಾಂಗತ್ಯ ಆ ದಿಕ್ಕಿನತ್ತಲೇ ಮುಖ ಮಾಡಿದೆ.
ಈ ಮಧ್ಯೆ ಎಂದಿನಂತೆ ಜನವರಿಯಲ್ಲಿ ಮೂರನೇ ಚಿತ್ರೋತ್ಸವಕ್ಕೆ ತಣ್ಣಗೆ ಆಲೋಚನೆ ಶುರುವಾಗಿದೆ. ಬಹಳ ವಿಭಿನ್ನವಾಗಿ ಮಾಡಬೇಕೆಂಬ ಆಸೆಯೂ ಇದೆ. ಅದಕ್ಕೆ ನಿಮ್ಮೆಲ್ಲರ ಲೆಕ್ಕಾಚಾರವೂ ಸೇರಿದರೆ ಅನುಕೂಲ.ನಮ್ಮ ಹೊಸ ಸಾಹಸವನ್ನು ಬೆಂಬಲಿಸಿ, ಲೇಖನ ಕಳಿಸಿ.




