Archive for July 18th, 2009
ಮದುವೆಯಾಗದೇ ಹುಚ್ಚು ಬಿಡದು…!
ಕನ್ನಡ ಚಲನಚಿತ್ರರಂಗದ ಚರ್ಚಿಸಲಾರ(ಗ)ದ ಸಂಗತಿಗಳ ಬಗ್ಗೆ ಬರೆದ ಲೇಖನಕ್ಕೆ ಬಂದ ಹಲವು ಅಭಿಪ್ರಾಯಗಳನ್ನು ಇಲ್ಲಿ ಹಾಕಿರುವುದು ಸಂವಾದದ ಉದ್ದೇಶ. ನೀವೂ ಬೆಳೆಸಿ.
ತಾರೇ ಜಮೀನ್ ಪರ್ ಚಿತ್ರ ಉತ್ತಮ ಎನ್ನಲಾರೆ
ಕನ್ನಡ ಚಿತ್ರಗಳು ಕಳಪೆಯಾಗಿವೆ ಅನ್ನುವದು ಸರಿಯೇ. ಆದರೆ ‘ತಾರೇ ಜಮೀನ್ ಪರ’ ಎನ್ನುವದು ಉತ್ತಮ ಚಿತ್ರವೆನ್ನುವದನ್ನು ಒಪ್ಪಲು ಸಾಧ್ಯವಿಲ್ಲ. ಯಾಕೆಂದರೆ, ಓರ್ವ ಶಿಕ್ಷಕನು ವಿದ್ಯಾರ್ಥಿಗಳ ಜೊತೆಗೆ ಹೇಗೆ ವರ್ತಿಸಬೇಕೆಂಬುದನ್ನು ಇಲ್ಲಿ ಬಹಳ ಸರಳೀಕರಿಸಲಾಗಿದೆ. ಆಮೀರಖಾನನು ತನ್ನ ತರಗತಿಗೆ ಮೊದಲನೆಯ ದಿವಸ, clown ತರಹ ಬರೋದು ಹಾಸ್ಯಾಸ್ಪದ. ಅವನ ಪಾತ್ರವನ್ನು glorify ಮಾಡಲು ಅಥವಾ romantic ಮಾಡಲು ಅವನನ್ನು ಆರಾಧಿಸುವ heroine ಒಬ್ಬಳು ಬೇಕೇ ಬೇಕು.
ಈ ಚಿತ್ರವನ್ನು ಮತ್ತೊಂದು ಹಳೆಯ ಇಂಗ್ಲಿಶ್ ಚಿತ್ರ (To Sir with love)ದ ಜೊತೆಗೆ ಹೋಲಿಸಿ ನೋಡಿದರೆ, ವ್ಯತ್ಯಾಸ ಗೊತ್ತಾಗುವದು…..ಸುನಾಥ
ನಮ್ಮಲ್ಲೂ ಪ್ರಯೋಗಗಳಾಗುತ್ತಿವೆ …!
ನಿಜ, ಕನ್ನಡದಲ್ಲಿ ಹೊಸ ಪ್ರಯೋಗಗಳ ಕೊರತೆಯಿದೆ. ಹಾಗಂತ ಆಗುತ್ತಲೇ ಇಲ್ಲ ಅಂತಲ್ಲ. `ಆ ದಿನಗಳು’ ಅಂಡರ್ವರ್ಲ್ಡ್ ಕತೆಯನ್ನು ಭಿನ್ನ ನೆಲೆಯಲ್ಲಿ ಕಟ್ಟಿಕೊಟ್ಟ ಚಿತ್ರವಾಗಿತ್ತು. ಅಲ್ಲಿ ಮಚ್ಚು, ಲಾಂಗುಗಳ ದರ್ಶನವಿದ್ದರೂ ರಕ್ತಪಾತವಿರಲಿಲ್ಲ. ಇನ್ನು, ಗೆಲ್ಲಲಿಲ್ಲ ಎಂಬುದು ಬಿಟ್ಟರೆ `ಸ್ಲಂಬಾಲಾ’ದಲ್ಲಿ ರಾಜಕಾರಣದ ವಿಡಂಬನೆ ಬಹಳ ಪರಿಣಾಮಕಾರಿಯಾಗಿ ಮೂಡಿಬಂದಿತ್ತು. `ಲಗಾನ್’, `ಚಕ್ದೇ ಇಂಡಿಯಾ’ ಚಿತ್ರಗಳೇ ಗ್ರೇಟ್ ಎನ್ನುವವರು ಮೊನ್ನೆ ಮೊನ್ನೆ ಕನ್ನಡದಲ್ಲಿ ತೆರೆಕಂಡ `ಕಬಡ್ಡಿ’ಯನ್ನು ನೋಡಬೇಕು. ಕನ್ನಡದ ಸೀಮಿತ ಮಾರುಕಟ್ಟೆಗೆ ಅದೊಂದು ಸುಂದರ ಅನುಭವ ನೀಡುವ ಚಿತ್ರ. ಕಬಡ್ಡಿ ಆಟದ ಹಿನ್ನೆಲೆಯಲ್ಲಿ ಒಂದು ಸುಂದರ ಪ್ರೇಮಕತೆ ಅಲ್ಲಿ ನಿರೂಪಿತವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ- ನಾನು ಈಗಾಗಲೇ ವಿಶೇಷ ಪ್ರದರ್ಶನವೊಂದರಲ್ಲಿ ವೀಕ್ಷಿಸಿದ್ದರಿಂದ- `ಎದ್ದೇಳು ಮಂಜುನಾಥಾ’ ಚಿತ್ರದ ಕುರಿತು ಹೇಳಲೇಬೇಕು ಅನಿಸುತ್ತಿದೆ. ಜಗ್ಗೇಶ್ ಇರುವುದರಿಂದ ಮತ್ತು `ಮಠ’ದ ಕಾಂಬಿನೇಷನ್ ಇರುವುದರಿಂದ ಚಿತ್ರ ಸಿಕ್ಕಾಪಟ್ಟೆ ನಗಿಸುತ್ತದೆ ಎಂಬುದನ್ನು ಸಹಜವಾಗಿ ನಿರೀಕ್ಷಿಸಿಬಿಡಬಹುದು. ಆದರೆ ಈ ಚಿತ್ರದ ನಿರೂಪಣೆಗೆ ಗುರುಪ್ರಸಾದ್ ಬಳಸಿರುವ ಟೆಕ್ನಿಕ್ ಮಾತ್ರ ಹೊಚ್ಚ ಹೊಸದು. ಇಲ್ಲಿ `ಸ್ಲಂಡಾಗ್ ಮಿಲಿಯನೇರ್’ ಥರ ಒಳಾಂಗಣದ ಪ್ರಶ್ನೆಗೆ ಹೊರಾಂಗಣದಲ್ಲಿ ಉತ್ತರದ ತಂತ್ರವಿದೆ. ಹಾಗಂತ ಈ ಥರದ ನಿರೂಣೆಗೆ `ಸ್ಲಂಡಾಗ್’ ಸ್ಫೂರ್ತಿ ಅಂತ ಯಾರೂ ಭಾವಿಸಬಾರದು. ಏಕೆಂದರೆ `ಸ್ಲಂಡಾಗ್ ಮಿಲಿಯನೇರ್’ ಬರುವುದಕ್ಕೂ ಮುನ್ನವೇ `ಎದ್ದೇಳು ಮಂಜುನಾಥಾ’ ಚಿತ್ರೀಕರಣ ಪೂರ್ಣಗೊಂಡಿತ್ತು. ಅಂದರೆ `ಸ್ಲಂಡಾಗ್…’ ಮಟ್ಟಕ್ಕೆ ಯೋಚಿಸುವ ಬುದ್ಧಿವಂತರು ನಮ್ಮಲ್ಲೂ ಇದ್ದಾರೆ ಎಂಬುದು ಸ್ಪಷ್ಟವಾಗುತ್ತದಲ್ಲ ?….ಸುರೇಶ್ ಕೆ.
ವ್ಯವಹಾರವಷ್ಟೇ…
ನಿಜ ಕಣ್ರೀ.. ಇಂದು ಸಿನಿಮಾ ಕೇವಲ ಒಂದು ವ್ಯವಹಾರವಾಗಿ ಬಿಟ್ಟಿದೆ…… ಪ್ರದೀಪ್
ಮದುವೆಯಾಗದೇ ಹುಚ್ಚು ಬಿಡೋಲ್ಲ
ಕನ್ನಡದಲ್ಲಿ ಇಂತ ಪ್ರಯೋಗಗಳನ್ನು ಮಾಡುವಷ್ಟು ಪ್ರತಿಭೆ ಇಲ್ಲಾ ಅಂತಿಲ್ಲ. ಆದರೆ ಆ ಒಳ್ಳೆಯ ಅಭಿರುಚಿಗಳಿಗೆ ಮಾರ್ಕೆಟ್ ಇಲ್ಲ. ಕಾರಣ ಇಲ್ಲಿನ ಬಹುಸಂಖ್ಯಾತ ನೋಡುಗರು ಪ್ರಬುದ್ಧರಾಗಿಲ್ಲ. ಅವರಿಗೆ ಇನ್ನೂ ಅತಿಮಾನುಷ ಹೀರೋ, ಬಿಳಿಮೈಯ ಹೀರೋಯಿನ್ ಮನರಂಜನೆಯಷ್ಟೆ ಬೇಕು. ಆದರೆ ಈ ರೀತಿ ಟ್ರೆಂಡ್ ಹುಟ್ಟು ಹಾಕಿ ನೋಡುಗರ ಅಭಿರುಚಿಯನ್ನು ಸೀಮಿತಗೊಳಿಸಿದ್ದ್ದೂ ಸಿನೆಮಾದವರೇ. ಇದೊಂಥರಾ ಹುಚ್ಚು ಬಿಡದೇ ಮದುವೆ ಆಗಲ್ಲ, ಮದುವೆಯಾಗದೇ ಹುಚ್ಚು ಬಿಡೋಲ್ಲ ಅನ್ನುವ ಪರಿಸ್ಥಿತಿ.
ವಿಕಾಸ್ ಹೆಗಡೆ
ವರ್ಕ್ ಶಾಪ್ ಮಾಡಬೇಕು
ನಮ್ಮ ಕನ್ನಡದ ನಿರ್ದೇಶಕರು ಒಳ್ಳೊಳ್ಳೆಯ ಚಿತ್ರಗಳನ್ನು ನೋಡೋದೇ ಇಲ್ಲ ಅನಿಸುತ್ತದೆ. ಬೇರೆಯವರ ಚಿತ್ರ ಅ೦ತಾ ಅಹ೦ ಇರಬಹುದು. ಅದೇ ಕಾಲೇಜ್ ಲವ್, ರೌಡಿಸ್೦ ಚಿತ್ರಗಳನ್ನು ಮಾಡ್ತಾ ಕೊಳೆಯುತ್ತಾ ಬಿದ್ದಿದ್ದಾರೆ, ಚಿತ್ರರ೦ಗಕ್ಕೆ ಅವಮಾನ ಮಾಡುತ್ತಾ ಇದ್ದಾರೆ.
ಸೊ ಕಾಲ್ಡ್ ‘ನಿರ್ದೇಶಕರಿಗೆ’ ಉನ್ನತ ಮಟ್ಟದ ಚಿತ್ರಗಳನ್ನು ಪ್ರದರ್ಶನ/ವರ್ಕ್ ಶಾಪ್ ಮಾಡಿದ್ರೆ ಎರಡು ಕಾಸು ಉಪಯೋಗಕ್ಕೆ ಬರಬಹುದೇನೋ?! …..ಪ್ರಮೋದ




