ಸಾಂಗತ್ಯ

ಚಿತ್ರ ಭಾಷಾ ಕಾವ್ಯ

ಪಿಟೀಲು ಚೌಡಯ್ಯನವರು ನಾಯಕನಾಗಿ ಅಭಿನಯಿಸಿದ್ದು ಗೊತ್ತೇ?

leave a comment »

ಪಿಟೀಲು ಟಿ. ಚೌಡಯ್ಯನವರು ಅಭಿನಯಿಸಿದ ಚಿತ್ರದ ಹೆಸರು “ವಾಣಿ”. ಅದರಲ್ಲಿ ಅವರೇ ನಾಯಕ. ವಿಶೇಷವೆಂದರೆ ಪಂಡರೀಬಾಯಿ ಮತ್ತು ಮುಸುರಿ ಕೃಷ್ಣಮೂರ್ತಿಯವರ ಮೊದಲ ಚಿತ್ರವೂ ಅದೇ.

ಮೈಸೂರಿನ ಪಿಟೀಲು ಚೌಡಯ್ಯನವರ ಹೆಸರು ತಿಳಿಯದವರಿಲ್ಲ. ತಮ್ಮ ಸಂಗೀತ ಪಾಂಡಿತ್ಯ ಮತ್ತು ಹೆಚ್ಚುಗಾರಿಕೆಯಿಂದ ಹೆಸರಾದವರು. ಇಂದಿಗೂ ಕರ್ನಾಟಕದಲ್ಲಿ ಪಿಟೀಲಿನೊಂದಿಗೆ ಜೋಡಿಸಿದ ಹೆಸರೆಂದರೆ ಚೌಡಯ್ಯನವರದ್ದೇ. ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನ “ಪಿಟೀಲಿನ’ ಆಕಾರದಲ್ಲೇ ಇದೆ.

ಇಂಥ ಸಂಗೀತ ವಿದ್ವಾಂಸ ನಾಯಕ ನಟನಾಗಿ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಅಂಶ ಬಹಳಷ್ಟು ಮಂದಿಗೆ ತಿಳಿದಿರಲಾರದು. ನಟ ಅಂಬರೀಷನ ತಾತನವರಾದ ಚೌಡಯ್ಯನವರು 1943 ರಲ್ಲಿ ಬಿಡುಗಡೆಯಾದ “ವಾಣಿ’ ಚಿತ್ರದ ನಾಯಕ. ಅದರ ಇಂಗ್ಲಿಷ್ ನ ಟೈಟಲ್ “violinist’. ಸಂಗೀತ ಪ್ರಧಾನವಾದ ಚಿತ್ರ. ಇದರಲ್ಲಿನ ಹಾಡಿಗೆ ಸ್ವತಃ ಅವರೇ ಸಂಗೀತ ಸಂಯೋಜಿಸಿದ್ದರು. ಇಡೀ ಚಿತ್ರದ ಸಂಗೀತ ನಿರ್ದೇಶನವನ್ನು ಮತ್ತೊಬ್ಬ ಸಹಾಯಕನೊಂದಿಗೆ ಪೂರೈಸಿದ್ದರು.

guruswamy coloumn copyಇವರೂ ಸೇರಿದಂತೆ ಒಟ್ಟು ಐದು  ಮಂದಿ ನಿರ್ಮಾಪಕರು. ಆ ಪೈಕಿ  ಶಿವಬಸವಯ್ಯ, ಮಾಸ್ಟರ್  ಹಿರಣ್ಣಯ್ಯನವರ ತಂದೆ ಕೆ. ಹಿರಣ್ಣಯ್ಯ,  ಜಿ. ಆರ್. ರಾಮಯ್ಯ ಹಾಗೂ ಛಾಯಾಗ್ರಾಹಕ ಗೋಪಾಲ್ ಉಳಿದವರು. ಬಹಳ ವಿಶೇಷವೆಂದರೆ ನಾಡಿನ ಚಿತ್ರರಂಗದಲ್ಲಿ ಮಿಂಚಿದ ಇಬ್ಬರು ನಟರಿಗೆ ಇದು ಚೊಚ್ಚಲ ಚಿತ್ರ.

ಒಂದು ಅಮ್ಮ ಎಂದೇ ಪ್ರಖ್ಯಾತಿಯಾದ ಪಂಡರೀಬಾಯಿ, ಮತ್ತೊಂದು ಹಾಸ್ಯದ ಮೂಲಕವೇ ಜನಜನಿತವಾದ ಮುಸುರಿ ಕೃಷ್ಣಮೂರ್ತಿ. ಚೌಡಯ್ಯನವರು ನಾಯಕನಾದರೆ, ಕೆ. ಹಿರಣ್ಣಯ್ಯ ಖಳನಾಯಕನ ಪಾತ್ರದಲ್ಲಿ ಮಿಂಚಿದರು. ಆ ಸಂದರ್ಭದಲ್ಲಿ ಚಲನಚಿತ್ರರಂಗವನ್ನು ಆವರಿಸಿಕೊಂಡಿದ್ದ ಕಥಾ ಮಾದರಿಗಳೆಂದರೆ ಪೌರಾಣಿಕ ಹಾಗೂ ಜನಪದ. ಆ ನೆಲೆಯನ್ನು ಬಿಟ್ಟು ಹೊಸದಾಗಿ ಸಾಮಾಜಿಕ ನೆಲೆಯಲ್ಲಿ ಹಾಗೂ ಸಂಗೀತ ಪ್ರಧಾನವಾದ ಚಿತ್ರವೆಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು.

ವಾಸ್ತವವಾಗಿ ಈ ಚಿತ್ರ ನಿರ್ಮಾಣದಿಂದ ಆದ ಲಾಭ ಮತ್ತೊಂದಿದೆ. ಅದು ಪರೋಕ್ಷ ಎನಿಸಬಹುದು. ಆದರೆ ಹಲವು ಚಿತ್ರ ನಿರ್ಮಾಣಕ್ಕೆ ಭೂಮಿಕೆಯಾಗಿದ್ದು ನಿಜ. “ವಾಣಿ’ ಚಿತ್ರ ರೂಪಿತಗೊಂಡಿದ್ದು ಕೊಯಮತ್ತೂರಿನ ಸ್ಟುಡಿಯೋದಲ್ಲಿ. ನಿರ್ಮಾಪಕರಲ್ಲಿ ಒಬ್ಬರಾದ ಶಿವಬಸವಯ್ಯ ಆ ಸ್ಟುಡಿಯೋ ಕಂಡು ಕನಸು ಕಂಡರು. ಅದು ನನಸಾಗಿದ್ದು ಮೈಸೂರಿನ ಮೊದಲ ಸ್ಟುಡಿಯೋ ನವಜ್ಯೋತಿ. ಇದಕ್ಕೆ ಒಂಬತ್ತು ಮಂದಿ ಹಣ ಹೂಡಿದ್ದರು. ಹಾಗಾಗಿ ಅದು “ನವಜ್ಯೋತಿ’ ಯಾಯಿತು. ಪ್ರಸ್ತುತ ಮೈಸೂರಿನ ಸರಸ್ವತಿಪುರಂನ ಈಜುಕೊಳ ಬಳಿ ಇರುವ ಜೆಎಸ್‌ಎಸ್ ಮಹಿಳಾ ಕಾಲೇಜಿನ ಜಾಗವೇ ಅಂದಿನ ಸ್ಟುಡಿಯೋ.

ಸ್ಟುಡಿಯೋ ಆರಂಭವಾದ ಕೆಲವೇ ತಿಂಗಳುಗಳಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ಸುಸಜ್ಜಿತ ಸ್ಟುಡಿಯೋ ಇದೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಚಿತ್ರ ನಿರ್ಮಾಣ ಚಟುವಟಿಕೆಗಳೆಲ್ಲಾ ಮದರಾಸಿನಲ್ಲಿ ಕ್ರೋಡೀಕರಣಗೊಂಡಿದ್ದಾಗ ಒಬ್ಬ ಕನ್ನಡಿಗನ ಸ್ಟುಡಿಯೋ ಸಹ ಹೆಸರು ಮಾಡಿತು. ಇದರಲ್ಲಿ ಒಮ್ಮೆಲೆ ಮೂರು ಚಿತ್ರಗಳ ಚಿತ್ರೀಕರಣಕ್ಕೆ ಅನುಕೂಲವಾಗುವಂತೆ ಫ್ಲೋರ್‌ಗಳನ್ನು ನಿರ್ಮಿಸಲಾಗಿತ್ತು.

ಚೌಡಯ್ಯನವರು ನಂತರ ಯಾವುದೇ ಸಿನಿಮಾ ಮಾಡಲಿಲ್ಲ. “ವಾಣಿ’ ಚಿತ್ರ ನಿರ್ಮಾಣವಾಗುವ ಸಂದರ್ಭದಲ್ಲಿ ತಮಿಳಿನಲ್ಲಿ ಖ್ಯಾತ ಸಂಗೀತಗಾರರೆಲ್ಲಾ ಚಿತ್ರದಲ್ಲಿ ನಟಿಸುತ್ತಿದ್ದರು. ಹಾಗಾಗಿ ಚೌಡಯ್ಯನವರಿಗೂ ಉಮೇದು ಬಂದಿತು. ಹಾಗಾಗಿ ಸಂಗೀತ ಪ್ರಧಾನವಾದ ಮೊದಲ ಚಿತ್ರ ರೂಪುಗೊಂಡಿತು. ಈ ಚಿತ್ರದಲ್ಲಿ ಕರ್ನಾಟಕ ಸಂಗೀತದ ಆಗಿನ ದಿಗ್ಗಜ ಚೆಂಬೈ ವೈದ್ಯನಾಥ ಭಾಗವತರ್, ರಂಗಭೂಮಿ ಕ್ಷೇತ್ರದಲ್ಲಿ ಹೆಸರು ಮಾಡಿದ ಬಳ್ಳಾರಿ ಲಲಿತಾ ಎಲ್ಲ ನಟಿಸಿದ್ದು ಮಗದೊಂದು ವಿಶೇಷ.

Leave a Reply