ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for February 23rd, 2009

ಆಸ್ಕರ್ ಗೇನು ? ಜೀವನಕ್ಕೇ “ಪಿಂಕಿ ಸ್ಮೈಲ್” ಮಾಡಿದಳು !

with 6 comments

ಹೀಗೇ. ದೇಶವೆಲ್ಲಾ ಸ್ಲಂಡಾಗ್ ಮಿಲಿನಿಯೇರ್ ನ ಸಂಭ್ರಮದಲ್ಲಿ ಮುಳುಗಿದೆ. ದೊಡ್ಡ ಸಮುದ್ರದ ಅಲೆಯ ಸದ್ದಿನಲ್ಲಿ ಆ ಸಮುದ್ರಕ್ಕೇ ಸೇರಿ ದೊಡ್ಡದಾಗುವ “ಪುಟ್ಟ ನದಿ”ಯ ಸದ್ದು ಕೇಳಿಸದು. ಅದು ಸಹಜವೇ. ಹೆಮ್ಮೆಯ ಸಂಗೀತ ನಿರ್ದೇಶಕ ಎ. ಆರ್. ರೆಹಮಾನ್ ಜೈ ಹೋ ಎಂದು ಪ್ರಶಸ್ತಿ ಪಡೆದ ವೇದಿಕೆಯಲ್ಲೇ ಭಾರತೀಯ ಕಥಾವಸ್ತುವನ್ನೇ ಆಧರಿಸಿದ ಮತ್ತೊಂದು ಚಿತ್ರ ಸಾಕ್ಷ್ಯಚಿತ್ರದ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿ ಪಡೆಯಿತು. ಅದರ ಹೆಸರು “ಪಿಂಕಿ ಸ್ಮೈಲ್”. ಈ ಚಿತ್ರದ ಬಗ್ಗೆ ಮಾಹಿತಿಯನ್ನು ಚೈತನ್ಯ ಹೆಗಡೆ ಒದಗಿಸಿಕೊಟ್ಟಿದ್ದಾರೆ. ಅದನ್ನು ಇಲ್ಲಿ ಆ ಚಿತ್ರದ “ಟ್ರೈಲರ್” ನ ಸಂಪರ್ಕಕೊಂಡಿಯೊಂದಿಗೆ ಹಾಕಲಾಗಿದೆ.

DVD insert

ಪಿಂಕಿ ನಕ್ಕಿದ್ದನ್ನು ನೋಡುವಾಸೆಯೊಂದಿಗೆ….
ದಬಾಯ್, ಉತ್ತರ ಪ್ರದೇಶದ ಅಹುರಾ ಜಿಲ್ಲೆಯ ಚಿಕ್ಕ ಹಳ್ಳಿ. ಅಲ್ಲೊಬ್ಬಳು 6 ವರ್ಷದ ಬಾಲಕಿ. ಹೆಸರು ಪಿಂಕಿ. ಎಲ್ಲರಂತೆ ಶಾಲೆಗೆ ಹೋಗುವ ಭಾಗ್ಯ ಈಕೆಗಿಲ್ಲ. ಕಾರಣ ಅವಳ ಸೀಳು ತುಟಿ. ಈ ವೈಕಲ್ಯದಿಂದಾಗಿ ಇಡೀ ಸಮಾಜವೇ ಆಕೆಯನ್ನು ದೂರವಿಡುತ್ತದೆ. ಶಾಲೆಗೆ ಹೋದರೆ ಓರಗೆಯ ಮಕ್ಕಳಿಗೆ ಅವಳೊಂದು ಗೇಲಿಯ ವಸ್ತು. ಒಂದು ಸಾಮಾನ್ಯ ಶಸ್ತ್ರಚಿಕಿತ್ಸೆ ಆಕೆಯ ಬದುಕು ಬದಲಿಸಲು ಸಾಕು. ಆದರೆ ಬಡ ಕುಟುಂಬದಲ್ಲಿ ಹುಟ್ಟಿದ ಆಕೆಗೆ ಅದು ದುಬಾರಿ ಕನಸು. ಹೀಗಿರಲೊಂದು ದಿನ ಪಂಕಜ್ ಎಂಬ ಸಮಾಜ ಸೇವಕನ ಆಗಮನವಾಗುತ್ತದೆ.

ಹಳ್ಳಿಯಿಂದ ಹಳ್ಳಿಗೆ ತಿರುಗಿ ಬಡಜನರಿಗೆ ಉಚಿತ ಚಿಕಿತ್ಸೆ ನೀಡುವುದೇ ಆತನ ಕಾಯಕ. ಇವರ ಕಣ್ಣಿಗೆ ಬಿದ್ದ ಪಿಂಕಿ, ಡಾ. ಸುಬೋಧ್ ಕುಮಾರ್ ಎಂಬ ವೈದ್ಯರ ಬಳಿ ಉಚಿತ ಚಿಕಿತ್ಸೆ ಪಡೆದು ಗುಣಮುಖಳಾಗುತ್ತಾಳೆ.
ಇಷ್ಟೇ ಕತೆ. ಭಾರತದ ಹಳ್ಳಿಮೂಲೆಯೊಂದರಲ್ಲಿ ಸೀಳು ತುಟಿಯಿಂದಾಗಿ ಪರಿಪಾಟಲು ಪಟ್ಟ ಬಾಲಕಿಯ ಕಥನವನ್ನು 39 ನಿಮಿಷಗಳಲ್ಲಿ ಕಟ್ಟಿಕೊಟ್ಟ ಕಿರುಸಾಕ್ಷ್ಯಚಿತ್ರ ‘ಪಿಂಕಿ ಸ್ಮೈಲ್”. ಈ ಬಾರಿಯ ಆಸ್ಕರ್ ಪ್ರಶಸ್ತಿ ಗೆದ್ದಿದೆ. ನಿಜಕತೆಯನ್ನೇ ಆಧರಿಸಿ ತೆಗೆದ ಈ ಸಾಕ್ಷ್ಯಚಿತ್ರದ ನಿರ್ದೇಶಕಿ ಮಗಾನ್ ಮಿಲಾನ್. ಸ್ಲಮ್‌ಡಾಗ್‌ನಂತೆ ಇದೂ ವಿದೇಶಿ ನಿರ್ದೇಶಕರ ಕುಸುರಿಯಿಂದ ಹೊರಬಂದ ಚಿತ್ರ. ಆದರೆ ಸ್ಲಮ್‌ಡಾಗ್ ಬಗ್ಗೆ ಆದ ಯಾವ ಚರ್ಚೆಗಳೂ ಆಗಲಿಲ್ಲ. ಬಹುಶ: ಸಾಕ್ಷ್ಯಚಿತ್ರಕ್ಕೆ ಒಂದು ಫಿಕ್ಶನ್ ಸಿನಿಮಾ ವ್ಯಾಪ್ತಿ ಬಯಸುವುದು ತಪ್ಪಾಗಬಹುದು. ಆದರೂ, ಇದು ನಮ್ಮದೇ ಕತೆಯಾದ್ದರಿಂದ, ಆಸ್ಕರ್ ಬಂದಿದೆ ಎಂಬ ನೆಪದಲ್ಲಾದರೂ ಈ ಸಾಕ್ಷ್ಯಚಿತ್ರವನ್ನೊಮ್ಮೆ ನೋಡಬೇಕು. ಅಲ್ವಾ?

ಗಂಗಾನದಿಯ ತೀರದ ಸ್ನಾನ ದೃಶ್ಯದೊಂದಿಗೆ ಆರಂಭವಾಗುವ ಚಿತ್ರದಲ್ಲಿ ಸೀಳುತುಟಿಯ ಮಗುವನ್ನು ಸಮಾಜ ಕಾಣುವ ರೀತಿಯಿಂದ ಹಿಡಿದು ಅವಳ ಬದುಕಿನ ಪ್ರತಿಕ್ಷಣಗಳನ್ನೂ ಹಿಡಿಯುವ ಪ್ರಯತ್ನ ಸಾಕ್ಷ್ಯ ಚಿತ್ರದ್ದು. ಕೊನೆಗೆ ಸೀಳುತುಟಿಯ ಚಿಕಿತ್ಸೆ ಮೂಲಕ ಪಿಂಕಿ ನಗುತ್ತಾಳೆ…ಬರಿಯೇ ನಗುವುದಿಲ್ಲ…ಮತ್ತೊಂದು ಬದುಕನ್ನು ಪಡೆಯುತ್ತಾಳೆ.

ಸ್ಮೈಲ್ ಟ್ರೈನ್ ಎಂಬ ಸೇವಾ ಸಂಸ್ಥೆ ಇಂಥ ಸೀಳುತುಟಿ ಮಕ್ಕಳ ಚಿಕಿತ್ಸೆ ಅಭಿಯಾನವನ್ನು ಜೋರಾಗಿ ನಡೆಸುತ್ತಿದೆ. ತನ್ನ ಸಂಸ್ಥೆಯ ವೆಬ್ ಸೈಟ್ ನಲ್ಲಿ ಒದಗಿಸಿದ ಸಾಕ್ಷ್ಯಚಿತ್ರದ ತುಣುಕಿನ ಸಂಪರ್ಕಕೊಂಡಿಯನ್ನು ಇಲ್ಲಿ ನೀಡಲಾಗಿದೆ. ಅದಕ್ಕಾಗಿ ಇಲ್ಲಿ ಕ್ಕಿಕ್ಕಿಸಿ.

Written by saangatya

February 23, 2009 at 11:52 am