ಇದು “ಮಂಗ”ನಾಟವಯ್ಯ, delhi6 !

ರವಿರಾಜ್ ಗಲಗಲಿ ಅವರೂರಿನಲ್ಲಿ ಡೆಲ್ಲಿ6 ಚಿತ್ರ ನೋಡಿದ್ದಾರೆ. ತಮ್ಮ ಮೊದಲ ಅನಿಸಿಕೆಯನ್ನು ಇಲ್ಲಿ ವ್ಯಕ್ತಪಡಿಸಿದ್ದಾರೆ. ನೀವೂ ನೋಡಿದ್ದರೆ ನಿಮ್ಮ ಅಭಿಪ್ರಾಯವನ್ನು saangatya@gmail.comಗೆ ಕಳುಹಿಸಿ. ನಮ್ಮಲ್ಲಿ ಪ್ರಕಟಿಸುತ್ತೇವೆ.
*
ದಿಲ್ಲಿ ದೇಶದ ರಾಜಧಾನಿಯಷ್ಟೇ ಅಲ್ಲ, ಸಂಸ್ಕೃತಿಗಳ ರಾಜಧಾನಿಯೂ ಹೌದು. ಮೊಘಲರ ಕಲೆ, ಸೂಫಿ ಹಾಡುಗಾರಿಕೆ, ನಾನಾ ಧರ್ಮಗಳ ದೇವರು ದಿಂಡರು, ಬಳೆ, ಜಿಲೇಬಿ, ಆ ಕಾಲದ ಟಾಂಗಾ…ಹೀಗೆ ಅದು ಹಲವು ಸಂಸ್ಕೃತಿಗಳ, ಭಾವನೆಗಳ ರಂಗಭೂಮಿ. ಇಂತಹ ವಿಶಾಲ ಮಿಶ್ರ ಸಂಸ್ಕೃತಿಯನ್ನು ಬಗೆ, ಬಗೆಯಾಗಿ ತೆಗೆದಿಟ್ಟಿದ್ದಾರೆ ನಿರ್ದೇಶಕ ರಾಕೇಶ್ ಓಂ ಪ್ರಕಾಶ್ ಮೆಹ್ರಾ.
ಪ್ರತಿ ಮನುಷ್ಯನಲ್ಲೂ ಮಂಗನ ಸ್ವಭಾವವಿರುತ್ತದೆ, ಅದು ಆಗಾಗ ಇಣುಕಿ ನೋಡಲೂ ಪ್ರಯತ್ನ ಪಡುತ್ತಿರುತ್ತದೆ. ಇಂತಹ ಮನವೆಂಬ ಮರ್ಕಟದ ಕೈಗೆ ಮಾಣಿಕ್ಯ ಕೊಟ್ಟರೆ ಏನಾಗಬಹುದು ? ಚಿತ್ರದಲ್ಲಿ ಈ ಪ್ರಶ್ನೆಗೆ ಉತ್ತರ ಹುಡುಕಿದ್ದಾರೆ ನಿರ್ದೇಶಕ. ನಾನಾ ಧರ್ಮಗಳ, ಸಂಸ್ಕೃತಿಯ ಹಳೆಯ ದಿಲ್ಲಿಯಲ್ಲಿ ಅಜ್ಞಾತ ಮಂಗವೊಂದು ದಾಳಿ ನಡೆಸಿದೆ ಎನ್ನುವ ಸುದ್ದಿ ವಾಹಿನಿಗಳ ಮೂಲಕ ಬೆಳಕು ಕಾಣುತ್ತದೆ. ಮಂಗದ ಸಾಕ್ಷಾತ್ ದರ್ಶನ ಯಾರಿಗೂ ಆಗಿರುವುದಿಲ್ಲವಾದರೂ, ಮಂಗನ ಬಗ್ಗೆ ಭಯ ಅದರ ಬಾಲದಷ್ಟೇ ವ್ಯಾಪಕವಾಗುತ್ತದೆ. ವಿದೇಶದಲ್ಲಿರುವ ನಾಯಕ ರೋಶನ್ ಹೃದಯಾಘಾತಕ್ಕೊಳಗಾದ ಅಜ್ಜಿಗೆ ಭಾರತ ದರ್ಶನಕ್ಕಾಗಿ ಕರೆದುಕೊಂಡು ಬರುತ್ತಾನೆ.
ಈ ಮಧ್ಯೆ ಮಂಗನ ಕಾಟ ವಿಪರೀತವಾಗುತ್ತದೆ, ಅದರೊಂದಿಗೆ ಧರ್ಮಗಳ ನಡುವಿನ ಬೇಧ, ಮತಾಂಧತೆ, ದ್ವೇಷದ ದರ್ಶನವೂ ಆತನಿಗಾಗುತ್ತದೆ. ದೆಹಲಿಯ ಸುಪ್ರಸಿದ್ಧ ರಾಮಲೀಲೆಯ ಮೂಲಕ ಮಾನವನೊಳಗಿನ ದ್ವೇಷ, ಅಹಂಕಾರ ಹಾಗೂ ಮೂಢ ನಂಬಿಕೆಗಳನ್ನು ಬಯಲಾಗಿಸುತ್ತ ನಾಯಕ ತನಗರಿವಿಲ್ಲದಂತೆ ವ್ಯವಸ್ಥೆಯ ಭಾಗವಾಗುತ್ತಾನೆ.
ಈ ಮಧ್ಯೆ ಪ್ರೀತಿಯಲ್ಲೂ ಬೀಳುವ ನಾಯಕ ಕೊನೆಗೆ ಮಂಗನಾಟದ ಬಗ್ಗೆ ಸಂಶೋಧನೆ ನಡೆಸುತ್ತಾನೆ. ಪ್ರೀತಿ ಮಾಡುವ ಭರದಲ್ಲಿ ‘ಮಂಗ’ನಾಗುವ ಮೂಲಕ ಎಲ್ಲ ಸಮಸ್ಯೆಗಳಿಗೂ ಅಂತ್ಯ ಕಾಣಿಸುತ್ತಾನೆ. ಮತಾಂಧತೆಯ ಬಗ್ಗೆ ಹಲವು ಚಿತ್ರಗಳು ಬಂದಿವೆ. ಆದರೆ ಡೆಲ್ಲಿ6 ಮಾತ್ರ ಇವುಗಳಲ್ಲಿ ಭಿನ್ನ, ವಿಭಿನ್ನ. ಕೈಲಾಶ್ ಖೇರ್ ಹಾಡಿರುವ ರಾಮಲೀಲಾ ಗೀತೆಗಳೊಂದಿಗೆ ಸೂಫಿ ಗಾಯಕಿಯ ಜುಗಲ್ ಬಂದಿ ನಡೆಸಿದ್ದಾರೆ.
ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್. ಅತ್ಯುತ್ತಮ ಸಂಭಾಷಣೆ, ವರ್ಣರಂಜಿತ ದಿಲ್ಲಿಯನ್ನು ಹಿಡಿದಿಡುವಲ್ಲಿ ಸಫಲವಾಗಿದೆ. ಚಿತ್ರದ ವಸ್ತುವಿನ ಪ್ರತಿಬಿಂಬದಂತೆ ಹುಚ್ಚನೊಬ್ಬ ಕೈಯಲ್ಲಿ ಕನ್ನಡಿ ಹಿಡಿದು ಎಲ್ಲರಿಗೂ ನಿಮ್ಮ ಮುಖ ತೋರಿಸಿ ಎಂದು ಗಂಟು ಬೀಳುತ್ತಿರುತ್ತಾನೆ. ಕೊನೆಗೆ ಮಂಗನಾಟದ ರಹಸ್ಯ ಬಯಲಾದಾಗ ಆತನ ಕೈಯಲ್ಲಿ ಕನ್ನಡಿಯಿರುವುದಿಲ್ಲ, ಬದಲು ಆತನನ್ನು ಹುಚ್ಚ ಎಂದು ಜರಿದವರು ಮನದ ಮಾತಿಗೆ ಕನ್ನಡಿ ಹಿಡಿದಿರುತ್ತಾರೆ. ಆತ ಹೇಳುವ ಮಾತು ಕೇಳಿ, ಜರ್ರೆ ಜರ್ರೆ ಪರ ಉಸಿ ಕಾ ನೂರ ಹೆ ಫಕೀರ್, ಬಂದೆ ತುಮ್ ಕ್ಯೂ ಝಗಡ್ ತೇ ಹೋ…ಕಣ ಕಣದಲ್ಲೂ ಭಗವಂತನಿದ್ದಾನೆ, ಆತನ ಹೆಸರಿನಲ್ಲಿ ನೀವೇಕೆ ಬಡಿದಾಡುತ್ತೀರಿ ?. ನಾಯಕಿ ಸಾಂಪ್ರದಾಯಿಕ ಕುಟುಂಬದಲ್ಲಿ ಬೆಳೆದವಳು, ಅವಳಿಗೋ ಸ್ಟಾರ್ ಆಗುವ ಆಸೆ, ಆದರೆ ತಂದೆಗೆ ಮಗಳ ಮದುವೆ ಮಾಡುವ ತವಕ. ಬಂಧನಗಳನ್ನೆಲ್ಲ ಮೀರಬೇಕು ಎನ್ನುವ ಆಕೆ ತಂದೆ ಸಾಕಿದ ಪಾರಿವಾಳ ಮಸಕ್ಕಲಿ ಬಗ್ಗೆ ಹೇಳುವ ಮಾತು , ಅದು ಹಾರಲು ಸಾಧ್ಯವಿಲ್ಲ, ಏಕೆಂದರೆ ಅದು ಅಪ್ಪನ ಪ್ರೀತಿಯ ಪಾರಿವಾಳ. ಅದರ ರೆಕ್ಕೆಗಳನ್ನೂ ಕಟ್ಟಿಹಾಕಲಾಗಿದೆ, ನನ್ನಂತೆ.
ಧರ್ಮಾಂಧತೆ, ಕೋಮು ಸಾಮರಸ್ಯದ ವಿಷಯವನ್ನು ಭಾಷಣ, ಗದ್ದಲ ಹಾಗೂ ಹೊಡೆದಾಟಗಳಿಲ್ಲದೆ ಶಾಂತವಾಗಿ ನಿರ್ವಹಿಸಿದ ಪರಿ ವಿಸ್ಮಯಕಾರಿ. ಸೋನಮ್ ಕಪೂರ್, ಓಂ ಪುರಿ, ವಹಿದಾ ರೆಹಮಾನ್, ಅತುಲ್ ಕುಲಕರ್ಣಿ, ಸೈರಸ್ ಸಾಹುಕಾರ್, ಪ್ರೇಮ್ ಚೋಪ್ರಾ ಮಿಂಚುತ್ತಾರೆ, ಆದರೆ ಮನಸ್ಸಿನಿಂದ ಮರೆಯಾಗುವುದಿಲ್ಲ.
ಮೊದಲ ಚಿತ್ರ ರಂಗ್ ದೇ ಬಸಂತಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೆಹ್ರಾ ತಮ್ಮ ಭೋರ್ಗರೆತ ಮುಂದುವರಿಸಿದ್ದಾರೆ. ಹಳೆ ದಿಲ್ಲಿಯ ಪಿನ್ ಕೋಡ್ ಸಂಖ್ಯೆ 6 ಆಗಿರುವುದರಿಂದ ಚಿತ್ರದ ಹೆಸರೂ ಹಾಗೆ ಇದೆ. ಈ ಚಿತ್ರ ಮಿಸ್ ಮಾಡಿಕೊಂಡರೆ ಮನದೊಳಗಿರುವ ಮಂಗನ ಕೈಯಲ್ಲಿ ನಾವೂ ಮಾಣಿಕ್ಯ ಕೊಡುವ ಸಾಧ್ಯತೆಗಳಿವೆ. ಒಮ್ಮೆ ನೋಡಬಹುದು, ಮತ್ತೊಮ್ಮೆ ನೋಡುವಂತಾದರೆ ಅದು ಮಂಗನ ತಪ್ಪಲ್ಲ !





I went this movie with lot of expectations, but came out with head ache.
The only good thing is , Director showed old Delhi beautifuuly. the gallies of chandani chowk were shown very realistically.
A very thin story line fails to hold audience
A good song MASAKKALI
Sadanand
February 23, 2009 at 6:13 am
i yet to watch the movie…initially after reading a few newspaper n website reviews, i had given up my plan to watch movie..but your review has again made me to rethink my decision….thank u raviraj
venu
February 23, 2009 at 11:30 am
thank you sadanand, venu keep watching moovies, jai ho !
raviraj
February 23, 2009 at 12:04 pm