ಟೀನಾ ಹೇಳ್ತಾರೆ- ಅವರ್ ನೋಡ್ದಂಗೆ ಸ್ಲಂಡಾಗ್ ಪಿಚ್ಚರ್ !
ನಮ್ಮ ಸಂವಾದವನ್ನು ಈಗ ಬೆಳೆಸಿರುವವರು ಟೀನಾ. ತಮ್ಮ ಕಣ್ಣಕೋಟೆಯ ಕಿಟಕಿಯಿಂದಲೇ ಸ್ಲಂಡಾಗ್ ಮಿಲಿನೇರ್ ಚಿತ್ರವನ್ನು ದೃಷ್ಟಿಸಿ, ಅದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಅವರ ನೋಟ ಈ ಬರಹ ರೂಪದಲ್ಲಿದೆ. ಚರ್ಚೆ ಮುಂದುವರಿಸುವವರು ತಮ್ಮ ಬರಹಗಳನ್ನು www.saangatya@gmail.com ಗೆ ಕಳಿಸಿ.
*
I Fly Like Paper Get High Like Planes
If You Catch Me At The Border I Got Visas In My Name
If You Come Around Here I Make ‘ Em All Day
I Get One Down In A Second If You Wait..
..”ಸ್ಲಮ್‌ಡಾಗ್ ಮಿಲಿಯನೇರ್ ” ನ ಹಾಡುಗಳಲ್ಲೊಂದಾದ ‘ಪೇಪರ್ ಪ್ಲೇನ್ಸ್’ ನ ಸಾಲುಗಳಿವು. ಪೂರ್ತಾ ಎಂಟು ಬಾರಿ (ಹಾ!! ನನ್ನ ಸಿನಿಪ್ರೇಮವೆ!!) ‘ಸ್ಲಮ್‌ಡಾಗ್ ಮಿಲಿಯನೇರ್ ’ ಅನ್ನು ನೋಡಿದಾಗ ಪುನಾ ನನಗೆ ಎಲಿಯಟ್ ನ “ದ ವೇಸ್ಟ್‌ಲ್ಯಾಂಡ್” ಕವಿತೆಯ ಕೊನೆಯಲ್ಲಿ ಬರುವ ‘ದತ್ತ, ದಮ್ಯತ, ದಯಧ್ವಂ’ ಕಿವಿಯಲ್ಲಿ ರಿಂಗಣಿಸಿದ ಹಾಗನಿಸಿತು. ಹೈಸ್ಕೂಲಿನಲ್ಲಿ ಕದ್ದುನೋಡಿದ ಮೀರಾ ನಾಯರರ ‘ಸಲಾಮ್ ಬಾಂಬೆ’ ಮನಸ್ಸಿನಲ್ಲಿ ಸುಳಿದುಹೋಯಿತು. ನನಗೇನೆ ಗೊತ್ತಿಲ್ಲದಂತೆ ಕೈ ಯಾಂತ್ರಿಕವಾಗಿ ನೋಟ್ಸು ಮಾಡುತ್ತ ಹೋಗುತ್ತಿತ್ತು. ಹೇಗೆ ಇಷ್ಟೊಂದನ್ನ ಹಿಡಿದಿಡಲಿ ಪದಗಳಲ್ಲಿ ಅಂತ ಯೋಚಿಸುತ್ತ ಕೂತೆ. ಎಲ್ಲ ಬ್ಲಾಗೀ ಸ್ನೇಹಿತರು ಈ ಪಿಚ್ಚರಿನ ಬಗ್ಗೆ ತಮ್ಮದೆ ಆದ ರೀತಿಯಲ್ಲಿ ಅದ್ಭುತ ವಿಶ್ಲೇಷಣೆಗಳನ್ನ ಮಾಡಿದಾರೆ. ನಾನು ಕೂಡ ಎಲ್ಲಿಂದಲಾದರು ಶುರುಹಚ್ಚಲೆಬೇಕು. ಈ ಹಲ್ಲುನೋವು ಗವಾಕ್ಷಿಯಿಂದ ಮರಳಿದ ಪಿಶಾಚಿಯ ಥರ ಕಾಡುತ್ತಿದೆ.
ನಾನು ಇಡೀ ಪಿಚ್ಚರು ನೋಡಿದ್ದು ಅದರ ಸೆಂಟ್ರಲ್ ಥೀಮು ಎನಿಸುವ ‘ಆಯ್ಕೆ’ಯ ಮೂಲಕ. ಇಡೀ ಪಿಚ್ಚರಿನಲ್ಲಿ ಆಯ್ಕೆ ಬಹಳ ಮುಖ್ಯ ಪಾತ್ರವನ್ನ ವಹಿಸಿದೆ. ಪಿಚ್ಚರಿನುದ್ದಕ್ಕೂ ಜಮಾಲ್ ಭಾಗವಹಿಸುವ ಆಯ್ಕೆಗಳ ಆಟವಾದ ಗೇಮ್ ಶೋ ‘ಹೂ ವಾಂಟ್ಸ್ ಟು ಬಿ ಅ ಮಿಲಿಯನೇರ್ ‘ ರಾರಾಜಿಸುತ್ತದೆ. ಜಮಾಲ್ ಮಲಿಕನ ಆಯ್ಕೆಗಳು ಹಾಗೂ ಸಲೀಮನ ಆಯ್ಕೆಗಳು ಅವರನ್ನ ಬೇರೆಬೇರೆ ದಾರಿಗಳೆಡೆ ಕರೆದೊಯ್ಯುತ್ತವೆ. ಇಲ್ಲಿ ಅಣ್ಣತಮ್ಮಂದಿರು ತಮ್ಮ ಆಯ್ಕೆಗಳಿಂದಾಗಿ ತಮ್ಮ ವಿಧಿ ಕಂಡುಕೊಳ್ಳುವುದು ಹಿಂದೀ ಸಿನೆಮಾದ ಮಹಾ ‘ಕ್ಲೀಷೆ’ ಆದರು ನಮಗೆ ಹಾಗನ್ನಿಸದ ಹಾಗೆ ಕಥೆ ಸಾಗುತ್ತದೆ. ಎಲ್ಲ ಹಣೆಬರಹ, ವಿಧಿಲಿಖಿತ ಅನ್ನಿಸಿದರು ಗ್ರೀಕ್ ನಾಟಕಗಳಲ್ಲಿ ಬರುವ ಹಾಗೆ ಸಲೀಮ ಹಾಗೂ ಜಮಾಲರ ಆಯ್ಕೆಗಳು ಅವರ ಭವಿಷ್ಯ ನಿರ್ಧರಿಸುತ್ತವೆ. ಸಲೀಮ ಮಾಮನ್‌ನನ್ನು ಕೊಂದು ಲತಿಕಾಳನ್ನು ಪಾರುಮಾಡಿದ ರಾತ್ರಿಯೇ ಭೂಗತ ಪ್ರಪಂಚವನ್ನು ಆಯ್ದುಕೊಂಡರೆ, ಜಮಾಲ್ ಬಾಲ್ಯದಲ್ಲಿಯೆ ಲತಿಕಾಳನ್ನು ಆಯ್ಕೆಮಾಡಿಕೊಂಡು ಅದರ ಪರಿಣಾಮಗಳನ್ನು ಅನುಭೋಗಿಸುತ್ತಾನೆ. ಸಲೀಮನ ಅನುಭವಗಳು ಬದುಕಿನ ಮುಳ್ಳುಹಾದಿಯ ಮೇಲೆ ಹಾದುಬಂದವು, ಜಮಾಲನವು ಸಲೀಮನ ಮೂಲಕ ಹಾದುಬಂದು ಕಂಡುಕೊಂಡಂಥವು. ಜಮಾಲನ ಆಯ್ಕೆಯ ಹಿಂದೆ ಭೋಳೆತನ, ಭಯ, ಅಸಹಾಯಕತೆಗಳಿದ್ದರೆ ಸಲೀಮನ ಆಯ್ಕೆಗಳ ಹಿಂದೆ ಬದುಕುವ ಆಸೆ, ಕೋಪ, ಸುಪೀರಿಯಾರಿಟಿ ಕಾಂಪ್ಲೆಕ್ಸ್ ಅನ್ನುತ್ತೇವಲ್ಲ, ಅದು ಇದೆ. ಭಿಕ್ಷೆಬೇಡಲು ಲತಿಕಾಳ ಸುಪರ್ದಿಗೆ ಮಗುವೊಂದನ್ನು ಬಲವಂತವಾಗಿ ಒಪ್ಪಿಸುವ ಸಲೀಮ ಹೇಳುತ್ತಾನೆ “ರೋತೇ ಹುಯೆ ಬಚ್ಚೇ, ಟ್ರಿಪ್ಪಲ್ ದಾಮ್ !!”
ಜಮಾಲನ ಹಾದಿ ನೇರವಾದದ್ದು. ಆತನಿಗೆ ಕಾಣುವದು ಬರೆ ಸಲೀಮ ಇಲ್ಲವೇ ಲತಿಕಾ. ಆದರೆ ಸಲೀಮನ ಪ್ರಪಂಚ ಯಾರ ಸುತ್ತಲೂ ಸುತ್ತುವುದಿಲ್ಲ. “ಇಂಡಿಯಾ ಈಸ್ ಅಟ್ ದ ಸೆಂಟರ್ ಆಫ್ ದಿ ವರ್ಲ್ಡ್ ಅಂಡ್ ಐ ಆಂ ಅಟ್ ದಿ ಸೆಂಟರ್ ಆಫ್ ದಿಸ್ ಸೆಂಟರ್ “ಎನ್ನುವ ಆತನ ಹಸಿವು ಅಗಾಧವಾದದ್ದು. ಆತನಿಗೆ ‘ಪವರ್ ‘ ಬೇಕು. ಜಮಾಲನ ಮೇಲಿನ ಪ್ರೀತಿ, ದ್ವೇಷಗಳು ಕೂಡ ಆತನನ್ನು ನಮಗೆ ಇನ್ನಷ್ಟು ಹತ್ತಿರ ಅನ್ನಿಸುವ ಹಾಗೆ ಮಾಡುತ್ತವೆ. ಜಮಾಲನ ಅಮಿತಾಭ್ ಬಚ್ಚನನ ಪ್ರೇಮದ ಬಗ್ಗೆ ಗೊತ್ತಿರುವ ಸಲೀಮ ಅಮಿತಾಭನ ಹೆಲಿಕಾಪ್ಟರು ಬಂದಾಗ ಆತನನ್ನು ಟಾಯ್ಲೆಟ್ಟಿನಲ್ಲಿ ಕೂಡಿಹಾಕುತ್ತಾನೆ. ಜಮಾಲ್ ಕೊನೆಗೂ ಅಮಿತಾಭನ ಆಟೋಗ್ರಾಫು ಪಡೆದಾಗ ಅದನ್ನು ಮಾರಿಬಿಡುತ್ತಾನೆ. ಗಲಭೆಯಲ್ಲಿ ತಮ್ಮಂತೆಯ ನಿರ್ಗತಿಕಳಾದ ಲತಿಕಾಳನ್ನು ಜತೆಗಿರಿಸಿಕೊಳ್ಳಲು ಆತ ಒಪ್ಪುವದಿಲ್ಲ. ಕಣ್ಣುಕೀಳುವ ಮಾಮನ್‌ನ ಗ್ಯಾಂಗಿನಿಂದ ತಪ್ಪಿಸಿಕೊಳ್ಳುವಾಗ ತಮ್ಮೊಂದಿಗೆ ಟ್ರೈನು ಹತ್ತಲಿರುವ ಲತಿಕಾಳ ಕೈ ಬೇಕೆಂದೇ ಬಿಟ್ಟುಬಿಡುವ ಸಲೀಮ ಆಗ್ರಾದಲ್ಲಿ ಜಮಾಲ್ ಗೈಡ್ ಆಗಿರುವ ಅಮೆರಿಕನ್ ಟೂರಿಸ್ಟರ ಕಾರನ್ನು ಲೂಟಿಮಾಡಿ ಜಮಾಲ್ ಏಟು ತಿನ್ನುವಂತೆ ಮಾಡುತ್ತಾನೆ.
ವಾಪಾಸು ಮುಂಬಯಿಗೆ ಲತಿಕಾಳಿಗೋಸ್ಕರ ಜಮಾಲನೊಡನೆ ಬಂದರೂ ಪುನಹ ಲತಿಕಾಳನ್ನು ಜಮಾಲನಿಂದ ದೂರ ಮಾಡುತ್ತಾನೆ. ಜಮಾಲನನ್ನು ರೂಮಿನಿಂದ ಹೊರನೂಕಿ ಲತಿಕಾಳನ್ನು ಕೂಡುವ, ಆಕೆಯನ್ನು ಡಾನ್ ಜಾವೇದನಿಗೆ ಒಪ್ಪಿಸುವ ಜಮಾಲನ ವಿಕೃತಿ ಬೇಸರ ಹುಟ್ಟಿಸಿದರೆ, ಜಮಾಲನನ್ನು ಗಲಭೆಯ ವೇಳೆಯಲ್ಲಿ ಮತ್ತು ಕಣ್ಣುಕೀಳುವವರಿಂದ ಪಾರುಮಾಡುವ, ಲತಿಕಾಳನ್ನು ಕೊನೆಗೆ ಜಮಾಲನ ಬಳಿ ಕಳುಹಿಸುವ, ಕೊನೆಗೆ ಅವರಿಬ್ಬರಿಗಾಗಿ ತನ್ನ ಪ್ರಾಣವನ್ನೆ ಪಣಕ್ಕೊಡ್ಡುವ ಸಲೀಮನ ಆರ್ದ್ರತೆ ಆಶ್ಚರ್ಯ ಹುಟ್ಟಿಸುತ್ತದೆ. ಆತನ ’survival instincts’ ಆತನ ಹಸಿವಿನಿಂದ ಹುಟ್ಟಿರುವಂಥದು. ಜಮಾಲ್ ಸಲೀಮನಿಲ್ಲದೆ ಪೂರ್ಣವಾಗಲಾರ. ಸಲೀಮನಿಗೆ ಜಮಾಲ್ ಬೇಕಿಲ್ಲ, ಆದರು ಆತ ಜಮಾಲನ ರಕ್ಷಣೆಯ ಪಣ ತೊಟ್ಟವನಂತೆ ಆಡುವ. ಜಮಾಲ್ ತನ್ನ ವಿಧಿಲಿಖಿತವೆಂಬಂತೆ ಮಿಲಿಯಾಧಿಪತಿಯಾದರೆ ಸಲೀಮ ಕೊನೆಯುಸಿರೆಳೆಯುವದೂ ನೋಟುಗಳ ನಡುವೆಯೆ. ನನಗೆ ಪಿಚ್ಚರಿನಲ್ಲಿ ಅತಿ ಪ್ರಿಯವಾದ ಪಾತ್ರ ಸಲೀಮನದು.
ಪಿಚ್ಚರಿನುದ್ದಕ್ಕೂ ಜಮಾಲನ ಉತ್ತರಗಳು ಹಾಗೂ ಆತನ ಅನುಭವಗಳಿಗೆ ಕಲ್ಪಿಸಿರುವ ಸಂಪರ್ಕಗಳು ಅದ್ಭುತವಾಗಿ ಕೆಲಸ ಮಾಡಿವೆ. ನೋಡುತ್ತ ನೋಡುತ್ತ ನನಗೆ ಅರವಿಂದ ಅಡಿಗರ ‘ದಿ ವ್ಹೈಟ್‌ಟೈಗರ್ ’ ನ ಹರಿವಿಗೂ ‘ಸ್ಲಮ್‌ಡಾಗ್…’ ಚಿತ್ರಕಥೆಯ ಹರಿವಿಗೂ ಒಂದೇ ರೀತಿಯ ಕ್ವಾಲಿಟಿ ಇದೆ ಅನ್ನಿಸುತ್ತ ಹೋಯಿತು. ಎರಡು ಕಥೆಗಳಿಗೂ ಭಾರತದ ಕರಾಳ ಮುಖವನ್ನು ತೋರಿ ಪ್ರಶಸ್ತಿ ಗೆದ್ದುಕೊಂಡ ಆರೋಪ. ಎರಡರಲ್ಲೂ ನಾಯಕರು ಕತ್ತಲೆಯಲ್ಲಿ ಹುಟ್ಟಿದವರು. ಜಮಾಲ್ ತನ್ನ ಕಥೆಯನ್ನ ಪೊಲೀಸಿನವನಿಗೆ ಹೇಳಿದರೆ ಬಲ್ರಾಂ ಹಲ್ವಾಯಿ ತನ್ನ ಕಥೆಯನ್ನ ಚೀನಾದೇಶದ ಪ್ರಮುಖಪ್ರಜೆಗೆ ಹೇಳುವ. ಇಬ್ಬರೂ ತಮ್ಮದೇ ರೀತಿಯಲ್ಲಿ ವಿಜಯಿಗಳು. ಎರಡೂ ಕಥೆಗಳಲ್ಲಿ ಹೆಸರಿನ ಸುತ್ತ ವ್ಯಂಗ್ಯ ಕಾಣಬರುತ್ತದೆ. ‘ದಿ ವ್ಹೈಟ್ ಟೈಗರ್ ‘ನ ಬಲರಾಮ್ ತಾನು ಕೊಂದ ಯಜಮಾನ ಅಶೋಕನ ಹೆಸರನ್ನು ಇಟ್ಟುಕೊಂಡು ಹೊಸಹುಟ್ಟು ಪಡೆಯುತ್ತಾನೆ. ‘ಸ್ಲಂ ಡಾಗ್..’ನಲ್ಲಿ ಅಂಧಕವಿ ಸೂರದಾಸನ ‘ದರ್ಶನ್ ದೋ ಘನಶ್ಯಾಮ್ ಆಜ್ ಮೆರಿ ಅಖಿಯಾಂ ಪ್ಯಾಸೀರೇ’ ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಹುಡುಗ ಅರವಿಂದನ (ಹೆಸರಿನ ಅರ್ಥ ಕಮಲ – ಕಣ್ಣನ್ನು ಬಣ್ಣಿಸಲು ಬಳಸುವ ಇಮೇಜು) ಕಣ್ಣನ್ನು ಆಸಿಡ್ ಹಾಕಿ ಸುಡಲಾಗುತ್ತದೆ. ಜಮಾಲನನ್ನು ಅಷ್ಟು ವರುಷಗಳ ಮೇಲೂ ಗುರುತು ಹಿಡಿವ ಅರವಿಂದ ಆತನಿಗೆ ಇನ್ನು ನಾನು ನಿನ್ನ ಹೆಣ ಹೋಗುವಾಗ್ಲೇ ಹಾಡೋದು!! ಅನ್ನುತ್ತಾನೆ.
ಇನ್ನು ನಾನು ಯಾವುದೇ ಪಿಚ್ಚರು ನೊಡಿದರೂ ಮೊದಲು ಗಮನಿಸುವ ವಿಷಯ ಅಂದರೆ ಬಣ್ಣಗಳ ಬಳಕೆ. ಇಡೀ ಪಿಚ್ಚರಿನಲ್ಲಿ ಹಳದಿ ಬಣ್ಣದ ಬಳಕೆ ಹೇರಳ. ತಮಾಷೆ ಅಂದರೆ ಹೆಚ್ಚೂ ಕಡಿಮೆ ಇದರ ಜತೆಗೇ ರಿಲೀಸ್ ಆದ ಇನ್ನೊಂದು ಪಿಚ್ಚರು ‘ರಬ್ ನೆ ಬನಾದೀ ಜೋಡಿ’ಯಲ್ಲೂ ಕೂಡ ಹಳದಿ ಬಣ್ಣದ ಬಳಕೆ ಆಗಿರುವುದು. ಅಲ್ಲಿ ಹಳದಿ ಬಣ್ಣವನ್ನು ಟ್ರಾಫಿಕ್ ಸಿಗ್ನಲಿನ ಹಳದಿ ಬಣ್ಣ ಸೂಚಿಸುವ ಕಾಯುವಿಕೆ ಮತ್ತು ತಾಳ್ಮೆಯನ್ನು ಬಿಂಬಿಸಲು ಬಳಸಲಾಗಿದೆ ಅನ್ನಿಸುತ್ತದೆ. ‘ರಬ್‌ನೆ ಬನಾದೀ ಜೋಡಿ’ಯ ಮೊದಲನೆ ದೃಶ್ಯದಲ್ಲೇ ನಾಯಕ ನಾಯಕಿ ರೈಲಿನಿಂದ ಇಳಿದಾಗ ನಾಯಕ ಹಳದಿ ಬಣ್ಣದ ಸೂಟ್‌ಕೇಸು ಹಿಡಿದಿರುತ್ತಾನೆ. ಅಲ್ಲಿಂದಾಚೆಗೆ ಆತನ ಊಟದ ಬಾಕ್ಸು, ಕಾರು, ಉಡುಗೆ ಎಲ್ಲದರಲ್ಲೂ ಹಳದಿಯನ್ನು ಜಾಣ್ಮೆಯಿಂದ ಬಳಸಲಾಗಿದೆ. ‘ಸ್ಲಮ್‌ಡಾಗ್..’ನಲ್ಲಿ ಹಳದಿಯಷ್ಟೇ ಅಲ್ಲ, ಅದರ ವಿವಿಧ ಶೇಡುಗಳನ್ನು ಕೂಡ ಸುಂದರವಾಗಿ ಬಳಸಲಾಗಿದೆ. ಇಡೀ ಪಿಚ್ಚರು ಹಳದಿಯಲ್ಲಿ ಸ್ನಾನ ಮಾಡಿ ಎದ್ದಿದೆಯೇನೊ ಎಂಬಂತೆ ಭಾಸವಾಗುತ್ತದೆ. ಸ್ಲಮ್ಮಿನ ರಾಚುವ ಹಳದಿ ಬಣ್ಣ, ಗಲಭೆಗಳ ಬೆಂಕಿಯ ಹಳದಿ ರಂಗು, ಮಕ್ಕಳನ್ನು ಪುಸಲಾಯಿಸಿ ಭಿಕ್ಷಾಟನೆಗೆ ಕರೆದೊಯ್ಯುವ ಮಾಮನನ ಹಳದಿ ವ್ಯಾನು, ಜಮಾಲ್ ಲತಿಕಾಳನ್ನು ಹರೆಯದಲ್ಲಿ ಕಂಡುಹಿಡಿವ ವೇಶ್ಯಾವಾಟಿಕೆಯ ಜಾಗ ಪೀಲಾ ಸ್ಟ್ರೀಟ್, ಜಮಾಲನನ್ನು ಕಾಣಲು ರೇಲ್ವೇಸ್ಟೇಶನ್ನಿಗೆ ಬರುವ ಲತಿಕಾ ತೊಟ್ಟಿರುವ ಹಳದಿ ಕಮೀಜು, ಕೊನೆಯ ಪ್ರಶ್ನೆ ಉತ್ತರಿಸುವ ಜಮಾಲನನ್ನು ಕಾಣಲು ಧಾವಿಸುವ ಲತಿಕಾಳ ಹಳದಿ ಶಾಲು, ಜೈಹೋ! ಹಾಡಿನಲ್ಲಿ ನರ್ತಿಸುವ ಲತಿಕಾಳ ಮಗುವಿನ ಪಾತ್ರಧಾರಿ ತೊಟ್ಟಿರುವ ಹಳದಿ ಅಂಗಿ.. ಇಲ್ಲಿ ಹಳದಿ ಬಣ್ಣ ಕಾಯುವಿಕೆಯ ಜತೆಗೇ ಭಾರತದ ಬಣ್ಣವಾಗಿಯೂ ಕೂಡ ಕೆಲಸಮಾಡುತ್ತದೆ.
ಕೊನೆಯದಾಗಿ ಪಿಚ್ಚರಿನ ಸುತ್ತಲ ಗಲಾಟೆ. ಅಮಿತಾಭ್ ಬಚ್ಚನರಿಗೆ ಪಿಚ್ಚರು ಹಿಡಿಸಿಲ್ಲ. ಬಿಡಿ, ಅವರಿಗೆ ಇಷ್ಟವಾಗಿದ್ದೇ ನಮಗೂ ಸಲ್ಲಬೇಕೂ ಅಂತಿಲ್ಲವಲ್ಲ!! ‘ಕೌನ್ ಬನೇಗಾ ಕರೋಡ್ಪತಿ’ ಯ ಅಮಿತಾಭ್ ಮ್ಯಾನರಿಸಮ್ಮನ್ನು ಅನಿಲ್ ಕಪೂರ್ ಸಖತ್ತಾಗಿ ಅನುಕರಿಸಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಅಂತ ಕೇಳಿದೀರ? ರೆಹಮಾನರ ಸಂಗೀತ ಅಷ್ಟಕ್ಕಷ್ಟೆ ಅನ್ನಿಸೋ ಹಾಗಿದೆ ಅನ್ನೋದು ಎರಡನೇ ಅಪವಾದ. ಸಂಗೀತ ಇಲ್ಲಿ ಸ್ವರ್ಗಸದೃಶವಾಗಿರಬೇಕಾದ ಅವಶ್ಯವೇನೂ ಇರಲಿಲ್ಲ. ಇಲ್ಲಿ ರೆಹಮಾನ್ ಬಳಸಿರೋದು ಪಿಚ್ಚರಿನ ಜತೆಗೆ ಬ್ಲೆಂಡ್ ಆಗುವಂಥ ಪಾಪ್ಯುಲರ್ ಸಂಗೀತವನ್ನ. ಇಲ್ಲಿ ‘ರೋಜಾ’ಥರದ್ದೇನನ್ನೂ ನಾವು ಬಯಸಲಿಕ್ಕಾಗದು. ವೇಶ್ಯಾವಾಟಿಕೆಯ ಜಾಗದಲ್ಲಿ ‘ರಿಗರಿಗ ರಿಂಗಾ’ ಸರಿಯೆನ್ನಿಸಬಹುದು, ದಿಲ್ ಸೇ ರೇ.. ಅಲ್ಲ!! ಮೂರನೇದು ಭಾರತದ ‘ಕೆಟ್ಟ’ ಚಿತ್ರಣವನ್ನು ಅವಾರ್ಡಿಗಾಗಿ ಬಳಸಿಕೊಳ್ಳಲಾಗಿದೆ ಅಂತ. ಅದಕ್ಯಾಕೆ ಬೇಸ್ರ? ಮತ್ತೆ ನಮ್ಮ ಫೈಸ್ಟಾರ್ ಹೋಟ್ಲುಗಳು, ಮಾಲುಗಳು, ಮಲ್ಟಿಪ್ಲೆಕ್ಸು, ಸಾಫ್ಟ್ವೇರ್ ಪಾರ್ಕುಗಳು, ಕಾಫಿಡೇ ಔಟ್ಲೆಟ್ಟುಗಳನ್ನೆ ತೋರಿಸಿ ಒಂದು ಸೂಪರ್ ಪಿಚ್ಚರು ಮಾಡಪ್ಪಾ ಅಂತ ನಿರ್ದೇಶಕ ಡ್ಯಾನಿ ಬಾಯ್ಲ್‌ಗೆ ಅಪೀಲು ಮಾಡೋಣ. ‘ಒಳ್ಳೆ’ ಭಾರತವನ್ನೇ ತೋರಿಸಿ ಅವಾರ್ಡು ಗಿಟ್ಟಿಸೋಣ. ಸರಿಯೆ? ಸದ್ಯಕ್ಕೆ ಜಮಾಲ್, ಸಲೀಮರಂಥ ಸಾವಿರಾರು ಸ್ಲಂ-ಮಕ್ಕಳ ಅಳಿವು-ಉಳಿವುಗಳ ಎಡೆಬಿಡದ ಹೋರಾಟಕ್ಕೆ ತಲೆಬಾಗಿ ಬರೆದಂತಿರುವ ‘ಪೇಪರ್ ಪ್ಲೇನ್ಸ್ ‘ ನ ಮತ್ತೂ ಕೆಲವು ಸಾಲುಗಳು, ನಿಮಗಾಗಿ.
Sometimes I Think Sitting On Trains
Every Stop I Get To I’ m Clocking That Game
Everyone’ s A Winner Now We’ re Making That Fame..





hey Tina,
Very good review of the film. I am amazed to know that you already saw the film 8 times. Great!!!
I am really happy that Saangatya has given a wonderful platform for the FILM culture. Look how differently views are emerging and its a good collective material for any serious film buff.
thanks.
ಹೇಮಶ್ರೀ
January 22, 2009 at 9:16 pm
ಬರಹ ಚೆನ್ನಾಗಿದೆ.
ಸಿನೆಮಾವನ್ನು 4ನೇ ಸಾರ್ತಿ ನೋಡುವ ನಿರ್ಧಾರ ಮಾಡಿದೇನೆ!!
chetana chaitanya
January 23, 2009 at 4:21 am
ಹೇಮಾ,
ಇನ್ನು ನಾನು ನನ್ನ ಬಾಕಿ ಫಿಲಮ್ಮುಗಳ ಲಿಸ್ಟು ಎಷ್ಟುಸಾರಿ ನೋಡಿದೀನಂತ ಹೇಳಿದ್ರೆ ಬೈದೇಬಿಡ್ತೀರಿ ಕಣ್ರಿ!!
ನನಗೂ ಸಾಂಗತ್ಯ ಈ ರೀತಿಯ ಒಂದು ದಿಸ್ಕೋರ್ಸ್ ಅನ್ನ ಹುಟ್ಟುಹಾಕಿದ್ದರ ಬಗ್ಗೆ ಬಹಳ ಸಂತಸ. ಹೀಗೇ ಹಲವಾರು ಒಳ್ಳೆಯ ಮೂವೀಗಳ ಬಗ್ಗೆ ಚರ್ಚೆ ನಡೀಲಿ, ನಾವೂ ಎಲ್ಲರಜತೆ ವಿಚಾರಗಳನ್ನ ಹಂಚಿಕೊಳ್ಳೊ ಹಾಗಾಗಲಿ ಅಂತ ಹಂಬಲ. ಓದಿದ್ದಕ್ಕೆ ಧನ್ಯವಾದ.
ಚೇತನಾ,
ಇನ್ಮುಂದೆ ಕಾಂಪಿಟಿಸನ್ನು. ಓಕೆ?
ಟೀನಾ
January 23, 2009 at 8:31 am
T Na Ji
Slum Dog ge 10 Oscar Nominie
ok applaoud irli
Vastava oppikollona alwa
Nan heltini jai Ho slum Dog
http://www.maiya.tumblr.com
Madhukara Maiya
January 23, 2009 at 9:36 am
ಮಧುಕರ್ ಅವ್ರೆ,
ನಾನು ಮೂವೀ ನೋಡೋವಾಗ ಇದು ನಮ್ಮ ಬಗ್ಗೆ ನಾವು ಮಾಡಿದ್ದು, ನಮ್ಮ ಬಗ್ಗೆ ಹೊರಗಿನೋರು ಮಾಡಿದ್ದು ಅಂತೆಲ್ಲ ಹಿಂಸೆ ಮಾಡಿಕೊಳ್ಳೋಕೆ ಹೋಗೊಲ್ಲ. ಅದ್ಕೇ ಆರಾಮಾಗಿರ್ತೀನಿ. ವಾಸ್ತವ ಅಂದರೆ ಅದು ಭಾರತದ ಬಗ್ಗೆ ಅಮೆರಿಕನ್ ಕಂಪೆನಿಯೊಂದು ಪ್ರೊಡ್ಯೂಸು ಮಾಡಿದ, ಐರಿಶ್-ಇಂಗ್ಲೀಷ್ ಮೂಲದ ನಿರ್ದೇಶಕನೊಬ್ಬನ, ಕೆಲವು ಎನ್.ಆರ್.ಐ ಹಾಗು ಕೆಲವು ಭಾರತೀಯ ನಟರುಗಳನ್ನೊಳಗೊಂಡ, ಭಾರತೀಯನೊಬ್ಬ ಸಂಗೀತನಿರ್ದೇಶನ ಮಾಡಿದ ಚಿತ್ರ. ಸ್ಲಂಡಾಗ್..ನಲ್ಲಿ ಕೊರತೆಗಳಿಲ್ಲವೆಂತಲ್ಲ..ಆದರೆ ಅವು ಮುಚ್ಚಿಹೋಗುವಷ್ಟು ಸ್ಕ್ರೀನ್ ಪ್ಲೇ, ನಟನೆಗಳು ಚೆನ್ನಾಗಿದೆ. ಬರೆ ಒಂದು ’ಫೀಲ್ ಗುಡ್’ ಮೂವೀಯಾಗಿ ಹೋಗಬಹುದಿದ್ದನ್ನ ಬೇರೆಯೆ ನಿಟ್ಟಿನಲ್ಲಿ (ಇಷ್ಟೆಲ್ಲ ಚರ್ಚೆ ನಡೆವ ಹಾಗೆ!) ನಿರ್ದೇಶಿಸಲಾಗಿದೆ ಅನ್ನುವುದೆ ವಿಶೇಷ. ಓದಿದ್ದಕ್ಕೆ, ಕಮೆಂಟಿಸಿದ್ದಕ್ಕೆ ನಿಮಗೆ ಧನ್ಯವಾದ.
ನಿಮ್ಮ ಬ್ಲಾಗು ನೋಡಿದೆ. ಕುಪ್ಪಳಿಯ ಚಿತ್ರಗಳು ಬಲು ಚೆನ್ನಾಗಿವೆ.
-ಟೀನಾ
ಟೀನಾ
January 23, 2009 at 10:23 am
i agree with u. v.good observations.
sudhanva
January 23, 2009 at 11:17 am
ಟೀನ್,
ಇನ್ಮುಂದೆ ಕಾಂಪಿಟೇಸನ್ನು…
ವಾಕೆ!!
- ಚೇತನಾ
chetana chaitanya
January 23, 2009 at 11:24 am
ಟೀನಾ, ಇಲ್ಲಿವರೆಗೆ ನಾನು ಓದಿದ ವಿಷ್ಲೇಷಣೆಗಳಲ್ಲಿ ಇದು THE BEST !
ಧನ್ಯವಾದ…
ಶ್ರೀ
January 23, 2009 at 12:08 pm
ನಾನಿನ್ನೂ ಮೂರೇ ಸಲ ನೋಡಿರೋದು..
ಸುಶ್ರುತ ದೊಡ್ಡೇರಿ
January 23, 2009 at 12:10 pm
ಸುಧನ್ವ,
ನನಗೆ ನೀವು ಬರೆದ ನೋಟ ತುಂಬ ಹಿಡಿಸಿದ್ದು. ನಾಕೈದು ಸಾರೆ ಓದಿಕೊಂಡೆ ಮಾರಾಯರೆ.
ಚೇತನಾ,
ಆಗೇಬಿಡಲಿ ನಡಿ..ರೆಡಿ, ಸ್ಟೆಡೀ, ಗೋಓಓಓಓಓಓಓ!!!!
ಶ್ರೀ,
ತ್ಯಾಂಕು. ಹಲ್ನೋವಿಲ್ಲದಿದ್ರೆ ಮಂಡೆಗೆ ಇನ್ನೂ ಏನಾದ್ರು ಹೊಳೀತಿತ್ತೇನೊ. ನೀವು ಯಾವಾಗ ಬರೀತೀರಿ?
ಸುಶ್ರುತ,
ನೀವೂ ಎನ್ರೋಲ್ ಮಾಡಿಸಿಕೊಂಡುಬಿಡಿ ನಮ್ಮ ಪಿಚ್ಚರ್ ರಿಪೀಟರ್ಸ್ ಕ್ಲಬ್ಬಿಗೆ!! ಸ್ವಾಗತ, ಸುಸ್ವಾಗತ!!
-ಟೀನಾ
Tina
January 23, 2009 at 1:15 pm
Tina,
Thank u 4 the nice review.
Deepa Hiregutti.
deepa hiregutti
January 26, 2009 at 7:36 am
ದೀಪಾ,
ಖುಶಿ ಅನ್ನಿಸ್ತು, ನೀವು ಓದಿದೀರ ಅಂತ ತಿಳಿದ ಮೇಲೆ. ಧನ್ಯವಾದ!! ಮಾತನಾಡುತ್ತ ಇರೋಣ ಇನ್ನು ಮುಂದೆ.
-ಟೀನಾ
Tina
January 27, 2009 at 11:11 am
ಸಲೀಮ ಆಗ್ರಾದಲ್ಲಿ ಜಮಾಲ್ ಗೈಡ್ ಆಗಿರುವ ಅಮೆರಿಕನ್ ಟೂರಿಸ್ಟರ ಕಾರನ್ನು ಲೂಟಿಮಾಡಿ ಜಮಾಲ್ ಏಟು ತಿನ್ನುವಂತೆ ಮಾಡುತ್ತಾನೆ.
My interpretations for the above line
Jamal was on coverup duty. His job was to engage tourists. the loot follows. he was party to that.
i have not seen acny comment on one sequence.
In police station Jamal answers the Police Inspector- I just answer the questions.
sadananda adiga
January 27, 2009 at 1:51 pm
Hey sadananda,
Nice to hear from you after Kuppali. Hope you are doing fine.
Well, my interpretation went in a different direction altogether. Jamal is trying to do something decent like guiding the tourists, while Salim is always into some illegal business. While Jamal takes his tourists to a special place where clothes are dyed, in order to show them ‘true India’, Salim siezes the oppurtunity, comes out with his gang and dismantles the car. jamal’s Shock is evident in his exclamation of horror when he returns with the couple and the Driver. It is he who has to bear the brunt of the driver’s wrath. There is no clear indication that he was an accomplice in Salim’s theft. For salim, snatching from Jamal is an obsession. He does not care as to how it may affect Jamal. Everytime, Jamal has to suffer.
This was my understanding.
As to the sequence you have pointed out, why don’t you put forward your views on that particular scene? I’m sure we will find it useful.
regards, Tina.
Tina
January 28, 2009 at 7:31 am
[...] ನಾಯಿ’ ಯನ್ನು ನೋಡಿ ಆನಂದಿಸಿ, ಅದರ ಬಗ್ಗೆ ಸಾಂಗತ್ಯದಲ್ಲಿ ಬರೆದು, ನನ್ನ ಬ್ಲಾಗೆಳೆಯರ ಬರಹಗಳನ್ನೂ ಓದಿ [...]
ಮಾಯ್ಸನೂ ಸ್ಲಮ್ಮಿನ ಒಂದು ನಾಯಿಯೂ « Tinazone-ಕಣ್ಣ ಕೋಣೆಯ ಕಿಟಕಿ…
January 28, 2009 at 7:49 am
ಮೊನ್ನೆ ಮೈಲ್ ಒಪನ್ ಮಾಡಿದಾಗ ಒಂದು ದೇಶ ಪ್ರೇಮದ ಫಾರ್ವಡ್ ಇತ್ತು.
ಹಾಗಾಗಿ ಕತೆ ಬಗ್ಗೆ ಹೇಳದೆ ನನಗನ್ನಿಸಿದ ಕೆಲವು ವಿಚಾರಗಳನ್ನ ಹಂಚಿಕೊಳ್ಳುವ ಅಂತ ಎರಡು ಸಾಲು ಬರೆಯುತ್ತೇನೆ.
ಸ್ಲಂಡಾಗ್ ಮಿಲೆನೇರ್ ಮತ್ತು ಅದರ ನಿರ್ದೇಶಕನನ್ನು ಭಾರತದ ದ್ರೋಹಿಯನ್ನಾಗಿ ಮಾಡಿ ಕೊನೆಗೆ ಭಾರತಮಾತೆಗೆ ಜೈ ಅಂದಿದ್ದರು. ಭಾರತವನ್ನು ಒಬ್ಬ ಬ್ರಿಟೀಷ್ ಪ್ರಜೆ ಬಹಳ ಕೆಟ್ಟದಾಗಿ ಚಿತ್ರಿಸಿ, ಅವನ ಕೆರಿಯರ್ ಉತ್ತಮಮಾಡಿಕೊಂಡ, ಆಸ್ಕರ್ ಗಿಟ್ಟಿಸಿ ಕೊಂಡ ಅಂಬುದು ಅವರ ಆರೋಪ. ನಿಜ ಹೇಳಬೇಕಂದ್ರೆ ಆ ಚಿತ್ರದ ಮೊದಲರ್ಧದ ಚಿತ್ರಣ, ಸರಿಯಾಗಿ ಊಟ ಮಾಡಿ ಚಿತ್ರ ನೋಡಲು ಹೋದವರಿಗೆ ವಾಕರಿಕೆ ಬರಿಸಿದರೂ ಆಶ್ಚರ್ಯವಿಲ್ಲ. ವಿಪರ್ಯಾಸ ಅಂದ್ರೆ ಹಾಗೆ ಮಾಡುವುದರಲ್ಲಿ ಎಶಸ್ವಿ ಆಗಿ, ರಿಯಾಲಿಟಿಗೆ ಹತ್ತಿರ ಬರುವ ವಿಷಯದಲ್ಲಿ ನಿರ್ದೇಶಕ ಗೆದ್ದುಬಿಡುತ್ತಾನೆ. ನಮ್ಮ ಕಂಪ್ಲೇಂಟುಗಳನ್ನೆಲ್ಲಾ ಗುಡ್ಡೆ ಹಾಕಿಕೊಂಡು, ಅದರಲ್ಲಿ ಬಂದ ತೀಕ್ಷಣ ಪ್ರತಿಕ್ರಿಯೆಗಳನ್ನು ನೋಡಿ, ಒಬ್ಬ ಕಲಾವಿಧನಾಗಿ ಗೆಲುವಿನ ನಗೆ ನಗುತ್ತಿರಬೇಕು ನಿರ್ದೇಶಕ ಮತ್ತು ಚಿತ್ರದ ಛಾಯಾಗ್ರಾಹಕ.
ಟೀನ ಅವರ ಬರಹ ಬಹಳ ವಿವರವಾಗಿದೆ. ಅಲ್ಮೋಷ್ಟ್ ಚಿತ್ರಕತೆನೇ ಇನ್ನೋಂದು ಫಾರ್ಮ್ ನಲ್ಲಿದೆ ಅನ್ನಬಹುದು
ಈ ಸ್ಲಂಡಾಗ್ ನಮ್ಮವರ ದೇಶಪ್ರೇಮವನ್ನು ಕಚ್ಚುವ ಬಹಳ ವರ್ಷಗಳ ಮುಂಚೆಯೇ ಇನ್ನೊಬ್ಬ ವೆಕ್ತಿ ಭಾರತವನ್ನು ಬಡದೇಶವೆಂಬಂತೆ ಬಿಂಬಿಸಿ, ಅದೇ ಚಿತ್ರಣ ಬಹಳಷ್ಟು ಪಾಸ್ಚಾತ್ಯರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿ “ಅನ್ಯಾಯ” ಮಾಡಿದ್ದಾನೆ ಅನ್ನಬಹುದು. ದುಂಡು ಮೇಜಿನ ಸಮ್ಮೇಳನದಂತಹ ಕಾರ್ಯಕ್ರಮಕ್ಕೆ ಲಂಡನ್ ಗೆ ಹೋಗುವಾಗ ಎರಡು ತುಂಡು ಬಟ್ಟೆ, ಧೊತಿ,ವಸ್ತ್ರ ಹಾಕಿಕೊಂಡು ಹೋಗಿ, ಚರ್ಚಿಲ್ ಮೂಗು ಮುರಿಯುವಹಾಗೆ ಮಾಡಿದ್ದ ಆತ. ಆಗ ರಾಜ ಮಹಾರಾಜರುಗಳು ಗಲ್ಲಿಗೊಂದರಂತೆ ಆಳುತಿದ್ದ ದೇಶ ಭಾರತ, ಅವರಂತೆಯೇ ದಿರಿಸು ಧರಿಸಿ ಹೋಗಬಹುದಾಗಿತು,ಲಂಗೋಟಿಯಲ್ಲಿ ಹೋಗಿ ಮಾನ ತೆಗೆದ, ಗಾಂದಿ, ಮೋಹನದಾಸ ಕರಮ ಚಂದ ಗಾಂದಿ. ನಮ್ಮ ದೇಶದ ದೇಶದ ಭಕ್ತರು ಈತನನ್ನೂ ಬಯ್ಯಬೇಕಾಗಬಹುದು, ಡ್ಯಾನಿ ಬಾಯ್ಲ್ ನ ಜೊತೆಗೆ.
ಮುಂಬೈ ಏರ್ಪೊಟಿನಲ್ಲಿ ವಿಮಾನ ಇಳಿಯುವಾಗ ಒಮ್ಮೊಮ್ಮೆ ಗಾಬರಿಯಾಗುತ್ತದೆ. ಯಾವ ಕೊಳಚೆಪ್ರದೇಶದಲ್ಲಿ ತುರ್ತು ಇಳಿಯುತಿದ್ದಾನ ಹೇಗೆ? ಎಂದು. ಅಂಥಹ ದೊಡ್ಡ ಕೊಳಗೇರಿ ವಿಮಾನ ನಿಲ್ಧಾಣದ ಪಕ್ಕದಲ್ಲೇ ಇದೆ. ಇತ್ತೀಚಿಗೆ “ಮೇಲೇರಿರುವವರಿಗೆ” ಈ ಸತ್ಯವೂ ತಿಳಿಯಬೇಕು ಮತ್ತು ಒಪ್ಪಿಕೊಳ್ಳಬೇಕು. ಭಾರತ ಎಲ್ಲದರ ಸಂಮಿಶ್ರಣ. ಎಲ್ಲಾ ಸಾರಿಸಿ ಡಬ್ಬದಲ್ಲಿಟ್ಟು ಮುಚ್ಚಿಟ್ಟರೆ ವಾಸನೆ ಬಂದೀತು.
ಮತ್ತೆ ಮಿಕ್ಕಿದ್ದನ್ನೆಲ್ಲಾ ಬದಿಗಿಟ್ಟರೆ…ಸ್ಲಂಡಾಗ್, ಭಾರತೀಯನೇ ಬರೆದ ಪುಸ್ತಕವನ್ನು ಆದರಿಸಿ ತೆಗೆದ ಚಿತ್ರ. ಡ್ಯಾನಿ ಬಾಯ್ಲ್ ಅದಕ್ಕೋಂದು ಚಿತ್ರ ರೂಪ ಕೊಟ್ಟಿದ್ದಾನೆ ಅಷ್ಟೇ.
“ಸ್ಲಂಡಾಗ್ ಮಿಲೆನೇರ್” ಬಹಳಷ್ಟು “ಸಿನಿಮ್ಯಾಟಿಕ್ ಲಿಬರ್ಟಿ” ಗಳನ್ನು ಧಾರಳವಾಗಿ ತೆಗೆದುಕೊಂಡು ತೆಗೆದ ಒಂದು ಚಿತ್ರ.
ನಿಜ ಹೇಳಬೇಕೆಂದರೆ ನಮ್ಮ ರಾಮಣ್ಣನ “ಸತ್ಯ” ಹೆಚ್ಚು ಬೆಚ್ಚು ಬೀಳಿಸುತ್ತದೆ. ಹೊಲಸಿನ ಗುಂಡಿಯಲ್ಲಿ ಬಿದ್ದ ಹುಡುಗ ಸೂಪರ್ ಸ್ಟಾರ್ ನ ಹತ್ತಿರ ಹೋಗುವುದು, ಹೋಗುತ್ತಿರುವ ಟ್ರೈನಿ ನಿಂದ ಬಿದ್ದ ಹುಡುಗರು ಧೂಳು ಕರಗುವುದರಲ್ಲಿ ದೊಡ್ಡವರಾಗುವುದು, ದೂದ್ ಪೇಡದ ಹಾಗಿರುವ ಹೀರೋ, ಕೊಳಚೆ ಪ್ರದೇಶದವನ ಪಾತ್ರ ಮಾಡಿರುವುದು.. ಹೀಗೆ ಬಹಳಷ್ಟು ವಿಷಯಗಳು “ಫಿಲ್ಮಿ” ಅನ್ನಿಸುತ್ತದೆ. ಹಾಗಾಗಿ ಮಹೊನ್ನತ ಚಿತ್ರ ಅನ್ನಿಸುವ ಹೊಸ್ತಿಲಲ್ಲಿ ಮನಮುಟ್ಟವ ಚಿತ್ರಮಾತ್ರ ಆಗಿ ಉಳಿಯುತ್ತದೆ.
ಚಿತ್ರ ಬಂತು ಹೋಯಿತು….ಸ್ಲಂ ಅಂತು ಹಾಗೇ ಇದೆ.
Mahen simmha
March 17, 2009 at 4:10 pm
ಇವತ್ತು ಫೀಲ್ಮ್ ನೋಡಿದೆ. ನಂಗೂ ಸಹ ಸದಾನಂದ ಇವರ ತರಹನೇ ಅನ್ನಿಸಿತ್ತು. ರೈಲ್ವೆ ಗಾಡಿಯಲ್ಲಿ ಇಬ್ಬರೂ ಸೇರಿ ಕಳ್ಳತನ ಮಾಡುತ್ತಾರೆ. ಅಮೆಲೇ ಆಗ್ರಾಕ್ಕೆ ಬಂದ ಮೇಲೆ ಟೂರಿಸ್ಟ್ ಶೂ, ಪರ್ಸ್ ಕದಿಯುವ ಕೆಲಸ ಮಾಡುತ್ತಾರೆ. ಜಮಾಲ ಟೂರಿಸ್ಟ್ ಗಳಿಗೆ ಕಟ್ಟು ಕತೆ ಹೇಳ್ತಾ ಇದ್ದ ಹಾಗೇನೆ ಈ ಕಡೆಯಿಂದ ಸಲೀಮ ಮತ್ತವನ ಗ್ಯಾಂಗ್ ಶೂ ಕದಿಯುತ್ತದೆ. ಹಾಗೇನೆ ಕಾರನ್ನು ಲೂಟಿ ಮಾಡುವ ಪ್ರಕರಣ ಸಹ. ಕಾರಿನ ಡ್ರೈವರ್ ಹೊಡೆವಾಗ ನಾನೇನು ಮಾಡಿಲ್ಲ ಅನ್ನುವ ಆತ ಡೈಲೊಗ್ ಬಿಡ್ತಾನೆ, this is real India. ಆಗ ಅಮೇರಿಕನ್ ದಂಪತಿಗಳು ಡಾಲರ್ ಕೊಟ್ಟು ಸಮಧಾನ ಮಾಡ್ತಾರೆ. ದುಡ್ಡೂ ಕೈಯಲ್ಲಿ ಹಿಡಿದು ಆತ ಡ್ರೈವರ್ ಕಡೆ ನೋಡಿ ನಗೊದು ಆತನು ಇದರಲ್ಲಿ ಶಾಮೀಲು ಅನ್ನೊದು ತೋರಿಸುತ್ತೆ.
ಇನ್ನೊಂದಂದರೆ ನಮ್ಮಲ್ಲಿ ಟೂರೀಸ್ಟ್ ಜಾಗದಲ್ಲಿ ಈ ತರಹ ನಡೆತಾ ಇರುತ್ತೆ ಅಲ್ವಾ. ಕಟ್ಟು ಕತೆ ಹೇಳೊ ಗೈಡ್ ಗಳು, ಕ್ಷಣಾರ್ಧದಲ್ಲಿ ಮಾಯವಾಗೊ ಚಪ್ಪಲಿಗಳು, ಚೂರು ಮರೆತರೆ ಬ್ಯಾಗ್ (ಕಾರನ್ನೇ) ಎತ್ತೊಯ್ಯುವ ಜಾಣರು ಇಂತವರಿದ್ದಾರೆ. ಫಿಲ್ಮಲ್ಲಿ ಇವು ಕಾಮಿಕ್ ಟಚ್ ಕೊಡುತ್ತೆ.
ಇನ್ನು ಸಲೀಮನ ಬಗ್ಗೆ ನಂಗೆ ಅನ್ನಿಸಿದ್ದು. ಆತನಿಗೆ ತಮ್ಮನ ಮೇಲೆ ವ್ಯಾಮೊಹ ಜಾಸ್ತಿ. ತಮ್ಮಿಬ್ಬರ ಮಧ್ಯ ಮೂರನೇ ಸೊಳ್ಳೆ ಬರಕೆ ಅವನಿಗೆ ಮೊದಲಿಂದಲೂ ಇಷ್ಟವಿರುವುದಿಲ್ಲ. ಆತನಿಗೆ ಲತಿಕಾ ಮೇಲೆ ಸಿಟ್ಟು. ಏಕೆಂದರೆ ತಮ್ಮನಿಗೆ ಇಷ್ಟೆಲ್ಲಾ ಮಾಡುವ ತನಗಿಂತ ಮೊನ್ನೆ ಮೊನ್ನೆ ಬಂದ ಲತಿಕಾ ಮೇಲೆ ಪ್ರಾಣ ಅಂತ. ಲತಿಕಾಗೂ ಅಷ್ಟೇ. ತಪ್ಪಿಸಿಕೊಂಡು ಓಡುವಾಗ ಲತಿಕಾ ಕೈ ಹಿಡಿದದ್ದು ಸಲೀಂ. ಆದರೆ ಲತಿಕಾ ಜಲಾಲ್, ಜಲಾಲ್ ಅಂತ ಕೂಗೊದು ಕೇಳಿ ಏಕ್ ದಮ್ ಕೈ ಬಿಟ್ಟು ಬಿಡ್ತಾನೆ. ಲತಿಕಾಳನ್ನು ಹುಡುಕಲು ಮತ್ತೆ ಜಮಾಲ್ ಜೊತೆಗೆ ವಾಪಸ್ಸು ಮುಂಬೈಗೆ ಬರುತ್ತಾನೆ. ವೈಶ್ಯಾವಾಟಿಕೆಯಿಂದ ಕೊಲೆ ಮಾಡಿ ಲತಿಕಾನ್ನು ಹೊರಗೆ ಕರೆದೊಯ್ಯುವನು ಅವನೇ. ಆದರೇ ಲತಿಕಾಗೆ ಜಮಾಲ್ ಕಂಡ್ರೆ ಮಾತ್ರ ಇಷ್ಟ. ಆಕೆ ಬಾತ್ ರೂಮಿನಿಂದ ಸಲೀಂ ಇದ್ದಾನೆ ಅನ್ನೊ ಕಾರಣಕ್ಕೆ ಹೊರಗೆ ಬರೋದೇ ಇಲ್ಲ. ಸಿಟ್ಟಿನಿಂದ ರೂಮಿನ ಹೊರಗೆ ಸಲೀಂ ಹೋಗ್ತಾನೆ. ಬಂದವನಿಗೆ ಇಬ್ಬರೂ ಮಲಗಿದ್ದು ಸಿಟ್ಟು ಬರುತ್ತೆ. ಲತಿಕಾಳ ಬಗ್ಗೆ ಅಸಭ್ಯವಾಗಿ ನಡೆದುಕೊಂಡಾಗ ಜಲಾಲ್ ಅಣ್ಣನ ಮೇಲೆ ಹೊಡೆದಾಟಕ್ಕೆ ಹೋಗುತ್ತಾನೆ. ಸಲೀಂ ನಿಗೆ ಇದು ಇಷ್ಟವಾಗೊಲ್ಲ. ಕೇವಲ ಲತಿಕಾ ಸಲುವಾಗಿ ತನ್ನ ಮೇಲೆ ತಮ್ಮ ಕೈ ಎತ್ತೊದೇ ಅಂತ. ಸಿಟ್ಟಲ್ಲಿ ಜಗಳವಾಗಿ ಜಲಾಲ್ ನನ್ನು ಮನೆ ಹೊರಗೆ ಹಾಕುತ್ತಾನೆ. ಲತಿಕಾ ಮತ್ತು ಜಲಾಲ್ ನನ್ನು ಬೇರೆ ಮಾಡಿ ತಮ್ಮ ಕೈ ಎತ್ತಿದ್ದಕ್ಕೆ ಸೇಡು ತೀರಿಸಿಕೊಳ್ಳೊದು. ಒಂಥರಾ ಹೊಟ್ಟೆಕಿಚ್ಚು. ತನಗೆ ಸಿಗದದ್ದು ನಿಂಗೂ ಬೇಡ ಅನ್ನೊ ತರಹ. ಸಣ್ಣವನಿರಬೇಕಾದಾಗ ಅಮಿತಾಭನ ಆಟೊಗ್ರಾಫ್ ಸಹ ಹೀಗೆ ಮಾರಿದ್ದು. ಟಾಯ್ಲೆಟ್ನಲ್ಲಿದ್ದ ತಮ್ಮ ಟಾಯ್ಲೇಟ್ ಮಾಡಲು ಗಿರಾಕಿ ಬಂದಾಗ ಬಾಗಿಲು ತೆಗೆಯದೇ ಆಟ ಆಡಿಸಿರುತ್ತಾನೆ. ಗಿರಾಕಿ ಕೊಟ್ಟ ಹಣ ವಾಪಸ್ಸು ತೆಗೆದುಕೊಂಡು ಹೋದ ಸಿಟ್ಟಿಗೆ ಅಮಿತಾಭ್ ನ ಹೆಲಿಕಾಪ್ಟರ್ ಬಂದಾಗ ಬಾಗಿಲಿಗೆ ಹೊರಗಡೆಯಿಂದ ಚಿಲಕ ಹಾಕಿ ಇವನಿಗೆ ಪಾಠ ಕಲಿಸ್ತೀನಿ ಅನ್ನೊ ತರಹ ಓಡಿ ಹೋಗ್ತಾನೆ. ಸಣ್ಣ ಮಕ್ಕಳಲ್ಲಿ ಈ ತರಹದ ಜಗಳ ಕಾಣಬಹುದು. ಆದರೆ ಲಾಸ್ಟ್ ನಲ್ಲಿ ಸಲೀಮ್ ಸಾಯೋ ತರಹ ಮಾಡಿದ್ದು ಇಷ್ಟ ಆಗಿಲ್ಲ. ಬೇರೆ ಏನಾದರೂ ಎಂಡಿಂಗ್ ಇರಬಹುದಾಗಿತ್ತು. ಸ್ಲಮ್ ಡಾಗ್ ಮಿಲಿನಿಯೇರ್ ಆಗೋದು ಸಹ ಸಲೀಮ್ ಗ್ರೇಟ್ ಅನ್ನೊ ಕಾರಣಕ್ಕೆ. ಲತಿಕಾ ಸೇಫ್ ಆಗಿ ಇದ್ದಾಳೆ ಅಂದಾಗ ಜಲಾಲ್ ಗೆ ಅರ್ಥ ಆಗುತ್ತೆ. ಅದಕ್ಕೆ ಮೂರು ಸೊಳ್ಳೆಗಳಲ್ಲಿ(ಸಲೀಂ, ಜಲಾಲ್, ಲತಿಕಾ) ಮೊದಲನೇ ಸೊಳ್ಳೆ ದೊಡ್ಡದು ಅನ್ನೊ ತರಹ ಅಂತ ಹೇಳೊದು ಎಂದು ಅಂದು ಕೊಂಡಿದ್ದೀನಿ.
neelanjala
March 19, 2009 at 7:22 pm
ಅನ್ನೊ ತರಹ A( option) ಅಂತ ಹೇಳೊದು ಎಂದು ಅಂದು ಕೊಂಡಿದ್ದೀನಿ.
neelanjala
March 19, 2009 at 7:28 pm