ಅಕಿರಾ ಕುರೋಸಾವಾನ ಡ್ರೀಮ್ಸ್- ನಮ್ಮೆಲ್ಲರ “ಕನಸು”!
ಡ್ರೀಮ್ಸ್ ಚಿತ್ರದಲ್ಲಿ ಹಾದು ಹೋಗುವ ವಿನ್ಸೆಂಟ್ ವ್ಯಾಂಗೋನ ಪೇಂಟಿಂಗ್
ಕನಸಿನ ಸುತ್ತ ಮೇರೆ ಎಂಬ ಗೆರೆಗಳಿಲ್ಲ. ಆದರೆ ಕನಸಿನ ತುಂಬ ಗೆರೆಗಳೇ. ಅಮೂರ್ತ ಶೈಲಿಯನ್ನು ನೆಚ್ಚಿಕೊಂಡ ಕಲಾವಿದನು ಎಳೆದ ಅಡ್ಡ, ಉದ್ದದ ರೇಖೆಗಳೇ ಕನಸಿನ ತಾತ್ಪರ್ಯ. ಜಗತ್ತಿನ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರಾದ ಅಕಿರಾ ಕುರೋಸಾವಾ ಇಂಥ ಕಲಾವಿದ. ತನು ಕಂಡ ಕನಸುಗಳನ್ನು ಬದಲಾಯಿಸದೇ ಹಾಗೆಯೇ ಚಿತ್ರ ಮಾಡಿದರೆ ಹೇಗೆ ಎಂಬ ಆಲೋಚನೆಯಡಿ ರೂಪುಗೊಂಡಿದ್ದು “ಡ್ರೀಮ್ಸ್’. ಬಿಡಿ ಬಿಡಿಯಾದ ಎಂಟು ಕನಸುಗಳ ಗುಚ್ಛದಲ್ಲಿ ಕೆಲವನ್ನು “ಸಾಂಗತ್ಯ’ ಕುಪ್ಪಳ್ಳಿಯಲ್ಲಿ ಆಯೋಜಿಸಿದ್ದ ಚಿತ್ರೋತ್ಸವದಲ್ಲಿ ಪ್ರದರ್ಶಿಸಿತು. ಆ ಕುರಿತ ಬರಹ ವಿಜಯ ಕರ್ನಾಟಕದ ಬಾಗಲಕೋಟೆಯ ವರದಿಗಾರ ರವಿರಾಜ್ ಗಲಗಲಿ ಅವರದ್ದು.
*
ಅಕಿರಾ ಕುರೋಸಾವಾ ಹೆಸರು ಜಾಗತಿಕ ಚಿತ್ರರಂಗದಲ್ಲಿ ದೊಡ್ಡ ಹೆಸರು. ಅವರು ನಿರ್ದೇಶಿಸಿದ ಚಿತ್ರಗಳು ಪ್ರೇಕ್ಷಕರಿಗೆ ಹೊಸ ಅನುಭವ, ವಾಸ್ತವದ ದರ್ಶನ ಮಾಡಿಸಿವೆ. “ರೊಶೊಮನ್’ ನಿಂದ ಹಿಡಿದು ಎಲ್ಲ ಚಿತ್ರಗಳೂ ಒಂದಕ್ಕಿಂತ ಒಂದು ಭಿನ್ನ. ರೊಶೊಮನ್ ಅನ್ನೇ ಉದಾಹರಿಸುವುದಾದರೆ “ಒಂದು ಕೊಲೆ’ ಯ ಸುತ್ತ ಇರುವ ಹಲವು ನೆಲೆ-ಅದರಲ್ಲೂ ಮನೋನೆಲೆ- ಗಳನ್ನು ಪ್ರಸ್ತಾಪಿಸುತ್ತಾ ಹೋಗುತ್ತಾನೆ.
ಹಾಗೆಯೇ ಸದಾ ಬಣ್ಣ ಬಣ್ಣವಾಗಿ ಕಾಡುವ ಅವನ ಚಿತ್ರ “ಡ್ರೀಮ್ಸ್’. ಕನಸು ಹೇಗೆ ಅಮೂರ್ತವೋ ಹಾಗೆಯೇ ಇವನ ಡ್ರೀಮ್ಸ್ ಸಹ ಅಮೂರ್ತವೇ. ಅಂದರೆ ಕಂಡ ಕನಸನ್ನೇ ಯಥಾವತ್ತಾಗಿ ಚಿತ್ರೀಕರಿಸುವ ಪ್ರಯತ್ನವಿದು.
ನಾವಾದರೂ ಅಷ್ಟೇ. ರಾತ್ರಿ ಕಂಡ ಕನಸನ್ನು ಬೆಳಗ್ಗೆ ವಿವರಿಸುವಾಗ ಪಡೆಯುವ ರೂಪವೇ ಬೇರೆ. ಜತೆಗೆ ಹಾಗೆ ಯಥಾವತ್ತಾಗಿ ಪ್ರಕಟಿಸಿದಾಗ ಒಂದಕ್ಕೊಂದು ಅರ್ಥ-ಸಂಬಂಧ ಇದೆಯೇ ಎನಿಸುವ ಪ್ರಶ್ನೆಯೂ ಹುಟ್ಟುವುದುಂಟು. ಆದರೆ ಅಕಿರಾನ “ಡ್ರೀಮ್ಸ್’ ನಲ್ಲಿ ಎಲ್ಲೂ ತಾಳ ತಪ್ಪುವುದಿಲ್ಲ. ಎಲ್ಲವೂ ಸುಂದರ ಕನಸುಗಳು.
ಆ ಸರಣಿಯಲ್ಲಿ ನನಗೆ ಮನತಟ್ಟಿದ್ದು “ವಾಟರ್‌ಮಿಲ್ ವಿಲೇಜ್’. ಅದೊಂದು ಹಳ್ಳಿ, ಅಕ್ಕಪಕ್ಕ ನೀರೆತ್ತುವ ಯಂತ್ರಗಳು, ನಡುವೆ ನದಿ, ಆಚೆ ಈಚೆ ಸುಂದರ ಗಿಡಗಳು. ಊರಿಗೆ ಭೇಟಿ ನೀಡುವ ಯುವ ಪ್ರವಾಸಿಗನೊಬ್ಬ ಆ ಊರನ್ನು ಕಂಡು ಹುಟ್ಟಿಕೊಂಡ ಕೌತುಕದ ಪ್ರಶ್ನೆಗಳಿಗೆ ಗ್ರಾಮದ ಹಿರಿಯಜ್ಜನಲ್ಲಿ ಉತ್ತರ ಹುಡುಕಿಕೊಳ್ಳುತ್ತಾನೆ. ಅಜ್ಜಹೇಳುವ ಮಾತುಗಳೆಲ್ಲ ಮುತ್ತು. ಅವನ ಮಾತಿನಲ್ಲಿ “ತನ್ನ ಅಭಿವೃದ್ಧಿಯ ಆಯ್ಕೆ’ ಯನ್ನು ತಣ್ಣಗೆ ವಿವರಿಸುತ್ತಾನೆ.
ಇಂದು ಅಭಿವೃದ್ಧಿಯ ಪಥ ಹಿಡಿದಿರುವ ನಾವು, ಅದರಿಂದಾಗುತ್ತಿರುವ ವಿನಾಶದ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಇರುವುದನ್ನೂ ಉಳಿಸಿಕೊಂಡು, ಹೊಸದಕ್ಕೆ ಮಾರ್ಪಾಡುಗೊಳ್ಳುವ-ಸ್ವೀಕರಿಸುವ ಪ್ರಯತ್ನ- ಸುಸ್ಥಿರ ಅಭಿವೃದ್ಧಿ- ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಅಂಥ ನಮ್ಮ ಪ್ರಶ್ನೆಗಳಿಗೆ ಅಜ್ಜನೇ ಉತ್ತರಿಸುತ್ತಾನೆ. ಪರಿಸರದೊಂದಿಗಿನ ಬದುಕೇ ಕ್ಷೇಮ-ಸುಗಮ ಎನ್ನುವುದು ಅವನ ಹಿತವಚನವೂ ಹೌದು.
ಆ ಊರಿನಲ್ಲಿ ಮೃತಪಟ್ಟವರ ಅಂತ್ಯಯಾತ್ರೆಯಲ್ಲಿ ಯಾರೂ ಅಳುವುದಿಲ್ಲ, ನಗು ನಗುತ್ತ ಕಳಿಸಿಕೊಡುತ್ತಾರೆ. ಆ ಊರಿನ ಜನರ ಆಯುಷ್ಯವೂ ಹೆಚ್ಚೇನಿಲ್ಲ ಕೇವಲ ೧೦೩, ೧೦೪ ಅಷ್ಟೇ. ಅಂದ ಹಾಗೆ ಪ್ರವಾಸಿಗನೊಂದಿಗೆ ಸಂಭಾಷಣೆ ನಡೆಸುವ ಅಜ್ಜನ ವಯಸ್ಸೂ ಕೇವಲ ೧೦೩. ಅಂದರೆ ಬದುಕು ಬರೀ ದುಃಖಿಸುವುದಲ್ಲ ; ಸುಖಿಸುವಂಥದ್ದೂ ಎಂದು ಹೇಳುತ್ತಲೇ ಕಟ್ಟಿಕೊಡುವ ದೃಶ್ಯಗಳು ಅದ್ಭುತ. “ನಮ್ಮ ಹೃದಯ ಸ್ವಚ್ಛವಾಗಿದ್ದರೆ ಜಗತ್ತು ಸ್ವಚ್ಛ’-ಚಿತ್ರ ಮುಗಿದ ಮೇಲೂ ಮನಸ್ಸಿನಲ್ಲಿ ಉಳಿಯುವ ಮಾತು. ಮಲೆನಾಡಿನ ಒದ್ದೆ ಒದ್ದೆ ಪರಿಸರ, ಹಸಿರು ಬಣ್ಣ ಹೊದ್ದ ಪರ್ವತ, ಝರಿ, ಹೂವಿನ ತೋಟ- ಹೀಗೆ ಇದು ಬಣ್ಣದ ಹೋಳಿ. ಇದರ ಛಾಯಾಗ್ರಹಣವಂತೂ ಅದ್ಭುತ.
ಮತ್ತೊಂದು ಅಂಥದೇ ಚಿಂತನೆಗೀಡು ಮಾಡುವಂಥದ್ದು “ದಿ ಟನಲ್’. ಯುದ್ಧದ ಪರಿಣಾಮವನ್ನು ತೀಕ್ಷ್ಣವಾಗಿ ಹೇಳುವ ಈ ಕನಸು, ಸೇನಾಧಿಕಾರಿಯೊಬ್ಬ ಆತ್ಮಾವಲೋಕನಕ್ಕೀಡಾಗುವಂಥದ್ದು. ಅಲ್ಲದೇ ಪ್ರಸಿದ್ಧ ಕಲಾವಿದ “ವ್ಯಾನ್‌ಗೋ’ ಕುರಿತಾದ “ಕ್ರೌಸ್’ಸಹ ಪ್ರಮುಖವೇ. “ದಿ ಡಿಪಾರ್ಟೆಡ್’ ಚಿತ್ರದ ನಿರ್ದೇಶಕ ಮಾರ್ಟಿನ್ ಸೊರ್ಸೆಸೆ ಇಲ್ಲಿ ವ್ಯಾನ್‌ಗೋ ಪಾತ್ರಧಾರಿ. ಇದಲ್ಲದೇ, ಸನ್‌ಶೈನ್ ಥ್ರೂ ದ ರೇನ್, ಮೌಂಟ್ ಫಿಜಿ ಇನ್ ರೆಡ್ ಇತ್ಯಾದಿ ಕನಸುಗಳಿವೆ. ನಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬಹುದಾದ ಚಿತ್ರ.
ನಿರ್ದೇಶನ : ಅಕಿರಾ ಕುರೋಸಾವಾ, ಛಾಯಾಗ್ರಹಣ : Takao Saito, Masaharu Ueda, ಇಸವಿ : 1990, ಭಾಷೆ : ಜಪಾನಿ, ಸಂಕಲನ : Tome Minami, ಕಾಲಾವಧಿ : 113 ನಿಮಿಷ





ಡ್ರೀಮ್ಸ್ ನ ಮೂರು ಕನಸುಗಳನ್ನ ಕಂಡೆವಲ್ಲ, ಅದು ಮರೆಯಲಾಗದಂಥದ್ದು. ಅದರಲ್ಲೂ ವಾಟರ್ ಮಿಲ್ಲುಗಳು, ಶವಯಾತ್ರೆಯಲ್ಲಿ ಕುಣಿಯುತ್ತ ಹೋಗುವ ಅಜ್ಜ, ರಾತ್ರಿಯೂ ಬೆಳಕಿರಬೇಕೆನ್ನುವುದಾದರೆ ರಾತ್ರಿಯೇಕಿರಬೇಕು ಅನ್ನುವ ವನ ಆ ಅಬ್ಗೆಯ ಮತ್ತಷ್ಟು ಮಾತುಗಳು… ಅಬ್ಬ! ನಾವ್ಯಾಕೆ ಅಷ್ಟೂ ನೋಡಲಿಲ್ಲ? ಈ ಪ್ರಶ್ನೆ ಈವಾಗ ಕಾಡ್ತಿದೆ!!
~ ಚೇತನಾ ತೀರ್ಥಹಳ್ಳಿ
chetana chaitanya
January 8, 2009 at 11:16 am
ಚೇತನಾರೇ,
ಬಣ್ಣಗಳಿರುವುದು ಪೂರ್ತಿ ಬದುಕಿಗೆ, ಒಮ್ಮೆಲೆ ಖಾಲಿಯಾಗಬಾರದಲ್ಲ,ಅದಕ್ಕೇ ತೋರಿಸಲಿಲ್ಲ. ಮುಂದಿನ ಚಿತ್ರೋತ್ಸವದಲ್ಲಿ ಮತ್ತಷ್ಟು ಕನಸುಗಳನ್ನು ನೋಡೋಣ. ಮಿಸ್ ಮಾಡ್ಬೇಡಿ.
ಸಾಂಗತ್ಯ
saangatya
January 8, 2009 at 11:38 am
ಓಹೋ! ಖಂಡಿತಾ ಆಗಬಹುದು.
ಅದಕ್ಕಾಗಿ ಕಾದಿದ್ದೇನೆ!
ಅಲ್ಲಾ… ನಾನೂ ಒಬ್ಬೊಬ್ಬಳೇ ಕುಂತು, ಆಪ್ತರೊಡನೆ ಕುಂತು , ಆಗದವರೊಡನೆಯೂ ಕುಂತು ಸಾಕಷ್ಟು ಸಿನೆಮಾ ನೋದಿದೇನೆ… ಸಾಂಗತ್ಯದ ಸಹವಾಸ ಕೊಟ್ಟ ಹಿತ ಈವರೆಗೆ ಸಿಕ್ಕಿರಲಿಲ್ವಲ್ಲ? ಇದರ ಕಾರಣವನ್ನ ಯೋಚಿಸ್ತಿದ್ದೇನೆ ಇನ್ನೂ…
chetana chaitanya
January 8, 2009 at 12:25 pm
exlent.dinesh patwardhan, journalist. chikmagalur
dinesh patwardhan
January 8, 2009 at 4:59 pm
houdu madem nija a chitrvanna estu bari nodidaroo matte matte nodabekenisutte, adonthare mayee…
raviraj
January 9, 2009 at 6:11 am
[...] ಜಗತ್ತಿನ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಅಕಿರಾ ಕುರಸೋವಾ ಅವರ ‘ಡ್ರೀಮ್ಸ್’ ಸಿನೆಮಾವನ್ನು ನೋಡುವ [...]
ಕನಸು ‘ನೋಡೋಣ’ ಬನ್ನಿ! « ಓ ನನ್ನ ಚೇತನಾ…
February 23, 2009 at 9:16 am