ಸಾಂಗತ್ಯ

ಚಿತ್ರ ಭಾಷಾ ಕಾವ್ಯ

Archive for January 2009

ವೈಟ್ ಟೈಗರ್, ಸ್ಲಂಡಾಗ್ ಮತ್ತು ದೇಶಪ್ರೇಮ

without comments

ಟೀನಾ ಅವರು ಕಳಿಸಿದ ಅಲೆಮಾರಿಯ ಕುಮಾರ್ ಅವರ “ಒಳಗೂ-ಹೊರಗೂ’ ಬ್ಲಾಗ್ ನಲ್ಲಿದ್ದ ಸ್ಲಂಡಾಗ್ ಮಿಲೇನರ್ ಕುರಿತಾದ ಬರಹದೊಂದಿಗೆ ಈ ಸಂವಾದವನ್ನು ಮುಗಿಸುತ್ತಿದ್ದೇವೆ. ಒಂದು ಚಿತ್ರವನ್ನು ಭಿನ್ನ ಭಿನ್ನ ನೆಲೆಯಲ್ಲಿ ಅರ್ಥೈಸಲು, ವ್ಯಾಖ್ಯಾನಿಸಲು ಸಾಧ್ಯ ಎಂಬುದನ್ನು ಈ ಸಂವಾದ ಸಾಧ್ಯವಾಗಿಸಿದೆ. ಇಷ್ಟೊಂದು ದಿನದ ಚರ್ಚೆಯ ನಂತರವೂ, ಇಷ್ಟೆಲ್ಲಾ ಆಯಾಮದ ಬರಹಗಳನ್ನುಓದಿದ ಮೇಲೂ ನಿಮ್ಮೊಳಗೇ ಉಳಿದುಕೊಂಡಿರಬಹುದಾದ ಪ್ರಶ್ನೆಗಳಿದ್ದರೆ saangatya@gmail.com ಕಳಿಸಿ. ಅದೇ ನಿಜವಾದ ಉಪಸಂಹಾರ.

*

ತುಂಬಾ ದಿನಗಳೇನಾಗಿಲ್ಲ. ಕಳೆದ ವರ್ಷ ನವೆಂಬರ್ನಲ್ಲಿ ಭಾರತೀಯ ಲೇಖಕ ಅರವಿಂದ ಅಡಿಗ ಬರೆದ ದಿ ವೈಟ್ ಟೈಗರ್ಗೆ ಬೂಕರ್ ಪ್ರಶಸ್ತಿ ಗಳಿಸಿತು. ಆಗ ಒಂದಿಷ್ಟು ಮಂದಿ ಭಾರತವನ್ನು ಭ್ರಷ್ಟರಾಷ್ಟ್ರವೆಂದು ಕೆಟ್ಟದಾಗಿ ಬಿಂಬಿಸಿ ವಿದೇಶಿಯರಿಂದ ಭೇಷ್ ಅನ್ನಿಸಿಕೊಳ್ಳುತ್ತಾರೆ, ಪ್ರಶಸ್ತಿ ಗಿಟ್ಟಿಸಿಕೊಳ್ಳುತ್ತಾರೆಂದು ಟೀಕಿಸಿದರು.

10-15 ದಿನಗಳ ಹಿಂದೆ ಬ್ರಿಟನ್ನಿನ ಚಿತ್ರ ನಿರ್ದೇಶಕ ಡ್ಯಾನಿ ಬೋಯ್ಲ್ ಚಿತ್ರ ಸ್ಲಮ್ ಡಾಗ್ ಮಿಲೇನಿಯರ್ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪಡೆಯಿತು. ಆಗಲೂ ಅಂಥದ್ದೇ ಟೀಕೆ, ಬೊಬ್ಬೆ. ; ಭಾರತವನ್ನು ಕೀಳಾಗಿ ಬಿಂಬಿಸುತ್ತಾರೆ.

 

ಈ ಬೊಬ್ಬೆಯ ಹಿಂದಿನ ಉದ್ದೇಶ ಭಾರತ ಅತಿ ಸುಸಂಸ್ಕೃತರು ಇರುವ ದೇಶ. ಸಾಂಸ್ಕೃತಿಕವಾಗಿ, ಬೌದ್ಧಿಕವಾಗಿ ಬೆಳೆದಿರುವ ದೇಶ. ಇದು ಜಗತ್ತಿನಲ್ಲಿ ಅಪಾರ ಸಾಧನೆ ಮಾಡಿದೆ. ಜಗತ್ತಿಗೆ ವಿಶಿಷ್ಟ ಕೊಡುಗೆ ನೀಡಿದೆ. ಇಂಥ ರಾಷ್ಟ್ರವನ್ನು ಕೆಟ್ಟದಾಗಿ ಬಿಂಬಿಸಿದರೆ ಅದನ್ನು ವಿರೋಧಿಸಬೇಕು ಎಂಬುದಷ್ಟೇ.

ನಮ್ಮ ಸಾಧನೆಗಳಷ್ಟೇ ಜಗತ್ತಿಗೆ ಗೊತ್ತಾಗಬೇಕು. ನಮ್ಮೊಳಗಿರುವ ನ್ಯೂನ್ಯತೆಗಳಲ್ಲ ಎಂಬುದು ಇಂಥ ವಾದದ ನಿಲವು. ಇದಕ್ಕೆ ರಾಷ್ಟ್ರಪ್ರೇಮ, ರಾಷ್ಟ್ರೀಯತೆಯ ಮುಖವಾಡ.

ನಾನು ದಿ ವೈಟ್ ಟೈಗರ್ ಓದಿದ್ದೇನೆ. ಸ್ಲಮ್ ಡಾಗ್ ನೋಡಿದ್ದೇನೆ. ಎರಡರಲ್ಲೂ ಸುಳ್ಳಿಲ್ಲ. ಎರಡೂ ವಾಸ್ತವವನ್ನು ವೈಭವೀಕರಿಸೋಲ್ಲ.

ಈ ಎರಡು ಭಿನ್ನ ಮಾಧ್ಯಮದ ಕಲಾಕೃತಿಗಳಲ್ಲಿ ಕಾಣಿಸುವ ನಾಯಕರು ಮತ್ತು ಅವರ ಕಥೆ ನಿರ್ಲಕಷಿತ ಸಮುದಾಯದ ಪ್ರತಿನಿಧಿಯಾಗಿ ನಮ್ಮನ್ನು ಎದುರಾಗುತ್ತವೆ. ಮತ್ತು ಅವರಲ್ಲೂ ಇರುವ ಮಹಾತ್ವಾಕಾಂಕ್ಷೆ, ಅದನ್ನು ಸಾಧಿಸಿಯೇ ತೀರುವ ಛಲವನ್ನು ನಮ್ಮ ಅರಿವಿಗೆ ಮುಟ್ಟಿಸುತ್ತವೆ.

ವೈಟ್ ಟೈಗರ್ನಲ್ಲಿ ರಿಕ್ಷಾವಾಲನ ಮಗನೊಬ್ಬ ಸಮಾಜದ ಭಾಗವಾಗಿ ತನ್ನ ಸಂಪರ್ಕಕ್ಕೆ ಬಂದ ಜನರನ್ನು ನೋಡಿ, ಅವರ ಮಾತು, ಕೆಲಸಗಳನ್ನೇ ಅನುಸರಿಸುತ್ತಾ, ಕಲಿಯುತ್ತಾ ಬೆಳೆಯುತ್ತಾನೆ. ದೊಡ್ಡದೊಂದು ಕಾರ್ಪೋರೇಟ್ ಕಂಪನಿ ಕಟ್ಟುತ್ತಾನೆ. ಈ ಸುದೀರ್ಘ ಹಾದಿಯಲ್ಲಿ ತಾನು ಕಂಡ ರಾಜಕಾರಣಿಗಳು, ತನ್ನನ್ನು ಸಾಕಿದ ಮಾಲಿಕರು, ಡ್ರೈವರ್ಗಳು.. ಹೀಗೆ ಎಲ್ಲ ವರ್ಗಗಳ ವ್ಯಕ್ತಿಗಳನ್ನು, ಭಾರತವನ್ನು, ಬಡತನವನ್ನು ವಿವರಿಸುತ್ತಾನೆ. ಇಂಥದ್ದೊಂದು ಪಾತ್ರವನ್ನು ವಸ್ತುನಿಷ್ಠವಾಗಿ ನಮ್ಮ ಮುಂದಿಡುತ್ತಾರೆ ಕಾದಂಬರಿಕಾರ ಅರವಿಂದ. ನಾಯಕ ಪ್ರತಿಯೊಂದು ಕೆಲಸದ ಹಿಂದೆ ಒಂದು ವರ್ಗದ ಒತ್ತಡ ಮತ್ತು ಶೋಷಣೆ ಎಲ್ಲವನ್ನೂ ಸೂಕ್ಷ್ಮವಾಗಿ ಹೇಳುತ್ತಾರೆ.

ಮುಂಬೈನ ಧಾರಾವಿಯಂಥ ಸ್ಲಮ್ಗಳಿಗೆ ಹೋದರೆ ನಿಕೃಷ್ಟ ಜೀವನದಿಂದ ಮೇಲೆ ಬಂದ ಹತ್ತಾರು ಮಂದಿ ಅನುಭವ ಹಂಚಿಕೊಳ್ಳುತ್ತಾರೆ.

ಇನ್ನು ಸ್ಲಮ್ ಡಾಗ್ ಮಿಲೇನಿಯೇರ್. ಇಲ್ಲೂ ಅಷ್ಟೇ. ಇಂದಿಗೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕೊಳಗೇರಿಗಳ ಬಗ್ಗೆ ಅಲ್ಲಿ ವಾಸಿಸುವವರ ಬಗ್ಗೆ, ಅವರ ಆಸೆ, ಆಕಾಂಕ್ಷೆಗಳ ಬಗ್ಗೆ ಹೇಳುತ್ತದೆ. ಅದನ್ನೇ ಬಿಂಬಿಸುತ್ತದೆ. ವಿದೇಶಿ ನಿರ್ದೇಶಕನೊಬ್ಬ ಚಿತ್ರಿಸಿದ್ದು ಸೋಕಾಲ್ಡ್ ದೇಶಪ್ರೇಮಿಗಳಿಗೆ ಮತ್ತಷ್ಟು ಕೋಪ ತರಿಸಿದ್ದು ಟೀಕೆಗಳು ಹೆಚ್ಚಾಗಲು ಕಾರಣ. ಇರಲಿ.

ವೈಟ್ ಟೈಗರ್ ಮತ್ತು ಸ್ಲಮ್ ಡಾಗ್ ಮೂಕವಾಗಿ ಪ್ರತಿಪಾದಿಸುವ ಒಂದು ದೊಡ್ಡ ಸಂಗತಿ ಎಂದರೆ; ಅಲ್ಪ ಅಕ್ಷರ ಜ್ಞಾನ, ಅಪಾರ ಲೋಕಜ್ಞಾನ. ವೈಟ್ ಟೈಗರ್ನ ನಾಯಕ ಬಲ್ರಾಮ್ ಆಗಲೀ, ಸ್ಲಮ್ಡಾಗ್ ಜಮಾಲ್ ಮಲಿಕ್ ಇಬ್ಬರೂ ಅಷ್ಟೇ. ಶಾಲೆಗೆ ಹೋಗಲಾಗದೇ ದಾರಿಯಲ್ಲಿ, ಕೆಲಸ ಮಾಡುವಲ್ಲಿ ಸಿಕ್ಕ, ಕಂಡ ಜನರಿಂದ ಕಲಿತು ಬೆಳೆಯುತ್ತಾರೆ.

ವೈಟ್ ಟೈಗರ್ನ ಕಾದಂಬರಿಕಾರ ಮತ್ತು ಸ್ಲಮ್ ಡಾಗ್ ಚಿತ್ರದ ನಿರ್ದೇಶಕರ ಇಬ್ಬರೂ ಸುಳ್ಳು ಹೇಳಿದ್ದಾರೆಂದು ಪುಸ್ತಕ ಓದಿದ, ಸಿನಿಮಾ ನೋಡಿದ ಯಾರಿಗೂ ಅನ್ನಿಸುವುದಿಲ್ಲ.

ಯಾಕೆಂದರೆ ಅವರು ಬಡತವನ್ನು ರಮ್ಯವಾಗಿಸುವುದಿಲ್ಲ. ಭಾರತೀಯರು ಆರ್ಥಿಕವಾಗಿ ಬಡವರಿರಬಹುದು. ಆದರೆ ಭಾವನೆಗಳಲ್ಲಿ ಶ್ರೀಮಂತರು ಎಂದು ಆತ್ಮವಂಚನೆಯ, ಬಡತನವನ್ನು ರಮ್ಯವಾಗಿಸುವ ಮಾತುಗಳನ್ನು ಹೇಳುವುದಿಲ್ಲ.
ಸುಳ್ಳಲ್ಲ…!

ಸ್ಲಮ್ಡಾಗ್ ನೆಪದಲ್ಲಿ ದೇಶ ಪ್ರೇಮ, ರಾಷ್ಟ್ರೀಯತೆಯ ಮಾತನಾಡುತ್ತಿರುವವರದ್ದು ಒಂದೇ ವಾದ. ಭಾರತವನ್ನು ಬಡ ಹಾಗೂ ಸ್ಲಮ್ಗಳಿಂದ ಕೂಡಿದ ರಾಷ್ಟ್ರವೆಂದು ಬಿಂಬಿಸಲಾಗುತ್ತಿದೆ.

ಹಾಗಾದರೆ ಭಾರತದಲ್ಲಿ ಸ್ಲಮ್ಗಳೇ ಇಲ್ಲವೆ? ಯೋಜನಾ ಆಯೋಗದ ಇತ್ತೀಚಿನ ಅಂಕಿ ಅಂಶಗಳು ಹೇಳುತ್ತವೆ, ಭಾರತದ ೧.೨ ಶತಕೋಟಿ ಜನಸಂಖ್ಯೆಯ ಪೈಕಿ ೬೮ ಕೋಟಿ ಮಂದಿ ಸ್ಲಮ್ಗಳಲ್ಲಿ ವಾಸಿಸುತ್ತಿದ್ದಾರೆ. ಇವರಲ್ಲಿ ಅರ್ಧಕ್ಕೂ ಹೆಚ್ಚು ಜನರಿಗೆ ದಿನದ ಆಹಾರ ಒದಗಿಸಿಕೊಳ್ಳುವುದೂ ಕಷ್ಟ.

ಏಷ್ಯಾದ ಅತಿ ದೊಡ್ಡ ಕೊಳಗೇರಿ ಮುಂಬೈನ ಧಾರಾವಿಯಲ್ಲಿ ವಾಸಿಸುವವರ ಸಂಖ್ಯೆ 6 ಲಕ್ಷ. ದೇಶದ ರಾಜಧಾನಿ ದೆಹಲಿಯಲ್ಲಿ ಸುಮಾರು ಸ್ಲಮ್ಗಳಿವೆ. ಇಲ್ಲಿ ಸುಮಾರು ೪೦ ಲಕ್ಷ ಮಂದಿ ವಾಸಿಸುತ್ತಿದ್ದಾರೆ.

ಇಂಥ ಹುಣ್ಣನ್ನು ಅಂಗೈಯಲ್ಲೇ ಇಟ್ಟುಕೊಂಡು, ಇದು ಯಾರಿಗೂ ಗೊತ್ತಾಗಬಾರದು ಎನ್ನುತ್ತಿದ್ದಾರೆ ಮಹಾನ್ ದೇಶಪ್ರೇಮಿಗಳು.

ಇದರಿಂದ ಸಾಧಿಸುವುದಾದರೂ ಏನು? ಕೊಳಗೇರಿಗಳಿಲ್ಲ ಎಂದು ಹೇಳಿ ದೇಶವನ್ನು ಪ್ರಕಾಶಿಸುವ ಮೂರ್ಖತನದಿಂದ ಭಾರತದ ಅಭಿವೃದ್ಧಿ ರಾಷ್ಟ್ರವೋ, ವಿಶ್ವದ ಶಕ್ತಿಕೇಂದ್ರವೋ ಆಗಿ ಬಿಡುತ್ತದೋ?

ಆರ್ಥಿಕವಾಗಿ ಜರ್ಝರಿತವಾಗಿರುವ ಅಮೆರಿಕ, ಲಾಭದ ಆಸೆ ತೋರಿಸಿ ಮುಳುಗುತ್ತಿರುವ ಸತ್ಯಂ ಮಾಡಿದ್ದು ಇಂಥದ್ದೇ ಕೆಲಸ. ಈಗ ಅವುಗಳಿಗೆ ಒದಗಿದಿ ಸ್ಥಿತಿ ನಮ್ಮ ಮುಂದೆ ಕಣ್ಣ ಮುಂದೆ..

ರ್ ಯಾ ಗ್ ಟು ರಿಚಸ್…

ಸ್ಲಮ್ ಡಾಗ್ನಲ್ಲೇ ಆಗಲಿ, ವೈಟ್ ಟೈಗರ್ನಲ್ಲೇ ಆಗಲಿ ನಮಗೆ ಕಾಣುವುದು ಬೇರೆ…

ತಮ್ಮೆಲ್ಲಾ ಮಿತಿಗಳ ನಡುವೆ ಏನನ್ನಾದರೂ ಸಾಧಿಸಲು ಪ್ರಯತ್ನ ಮಾಡುವವರಿದ್ದಾರೆ ಎನ್ನುವುದು. ರಿಕ್ಷಾವಾಲಾನ ಮಗ, ಅಲ್ಪ- ಅಕ್ಷರ- ಜ್ಞಾನಿ, ಬೆಂಗಳೂರಿನಲ್ಲಿ ಒಂದು ಕಾರ್ಪೋರೇಟ್ ಕಂಪನಿ ಕಟ್ಟಿ, ಚೀನಾದ ಪ್ರಧಾನಿಗೆ ಪತ್ರ ಬರೆಯುವಷ್ಟು ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಕೊಳಗೇರಿಯ ಹುಡುಗ ಲಕ್ಷಾಂತರ ಪ್ರೇಕ್ಷಕರ ಮುಂದೆ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾ ಕೋಟಿ ಒಡೆಯನಾಗುವುದಕ್ಕೆ ಸಾಧ್ಯವಾಗುತ್ತದೆ.

ಹೀಗೆ ರ್ಯಾಗ್ ಟು ರಿಚಸ್ ತತ್ವವನ್ನು ಇವು ಪ್ರತಿಪಾದಿಸುತ್ತವೆ. ಇದನ್ನು ಅಮೆರಿಕನ್ನರು ಅಮೆರಿಕನ್ ಡ್ರೀಮ್, ಹೋರೇಷಿಯೋ ಆಲ್ಗರ್ ಮಿಥ್ ಎನ್ನುತ್ತಾರೆ.

ಏನೂ ಇಲ್ಲದ, ಏನೂ ಅಲ್ಲದ ಸ್ಥಿತಿಯಿದ ಮಹತ್ವದ ಸಾಧನೆ ಮಾಡುವುದು ಈ ಅಮೆರಿಕದ ಕಾದಂಬರಿಕಾರ ಹೊರೇಷಿಯಾ ಆಲ್ಗರ್ನ ತತ್ವ. ಈತನ ಕಾದಂಬರಿಗಳ ಪ್ರತಿ ನಾಯಕನೂ ಹೀಗೆ ಚಿಂದಿಯಿಂದ ಚಿನ್ನದ ಉಪ್ಪರಿಗೆ ಏರಿದವನೇ. ಹಾಗಾದರೆ ಹೊರೇಷಿಯೋ ಅಮೆರಿಕದ ದ್ರೋಹಿಯೇ? ಅಲ್ಲ ಅಮೆರಿಕದ ಆತ್ಮಸ್ಥೈರ್ಯ ಹೆಚ್ಚಿಸಿದ, ಆತ್ಮವಿಶ್ವಾಸದ ತುಂಬಿದ ಬರಹಗಾರನೆಂದು ಇವತ್ತಿಗೂ ಅಮೆರಿಕ ಸ್ಮರಿಸುತ್ತದೆ.

ಪ್ರಶ್ನಾರ್ಹ ರಾಷ್ಟ್ರೀಯತೆ…

ರಾಷ್ಟ್ರಪ್ರೇಮ, ರಾಷ್ಟ್ರೀಯತೆ ಕೂಡ ಇವತ್ತಿನ ಮಾರುಕಟ್ಟೆ ಸರಕು. ನೀವು ಎಸ್ಸೆಮ್ಮೆಸ್ ಮೂಲಕ ನಿಮ್ಮ ರಾಷ್ಟ್ರಪ್ರೇಮ ಸಾಬೀತು ಮಾಡಬಹುದು. ನಿಮ್ಮ ಎಸ್ಸೆಮ್ಮೆಸ್ ಸ್ವೀಕರಿಸುವವರು ಹಣ ಎಣಿಸಿಕೊಳ್ಳುತ್ತಾರೆ. ನಿಮ್ಮ ರಾಷ್ಟ್ರಪ್ರೇಮವನ್ನು ಯಾರನ್ನಾದರೂ ಕೊಂದು ಸಾಬೀತು ಮಾಡಬಹುದು. ನಿಮಗೆ ಪ್ರೇರೇಪಿಸಿದವರು ತಮ್ಮ ಬಲ ಪ್ರದರ್ಶಿಸಿ ರಾಜಕೀಯವಾಗಿ ಮೇಲೇರಬಹುದು. ಕಲ್ಪಿತ ಭಾವನೆಯೊಂದು ಏನೆಲ್ಲಾ ಮಾಡುತ್ತದೆ ನೋಡಿ.

ಇದು ರಾಷ್ಟ್ರಪ್ರೇಮ, ಅಥವಾ ರಾಷ್ಟ್ರೀಯತೆಯಾ? ನನಗಿನ್ನು ಅಸ್ಟಷ್ಟ.

ಬೆನೆಡಿಕ್ಟ್ ಆಂಡರ್ಸನ್ ಎನ್ನುವ ಚಿಂತಕ ರಾಷ್ಟ್ರೀಯತೆ ಕುರಿತು ಹೇಳುತ್ತಾರೆ: ” ಈ ಕಲ್ಪನೆಯ ಭಾವನಾತ್ಮಕತೆ ಎಷ್ಟು ಉದಾತ್ತವೆಂದರೆ ಅದೇ ಸಮುದಾಯದ ಒಳಗೇ ಇರುವ ಪರಸ್ಪರರ ನಡುವೆ ಇರಬಹುದಾದ ಅಸಮಾನತೆಗಳು, ಶೋಷಣೆಗಳು ಪರಿಗಣನೆಗೆ ಬಾರದ ಬಾರದೆ ರಾಷ್ಟ್ರೀಯತೆ ಎಂಬುದು ಗಾಢವಾಗಿ, ಢಾಳವಾಗಿ ಸಮಾನಂತರ ಸಂಗಾತಿತನವೆಂಬಂತೆ ಗ್ರಹಿಸಲ್ಪಡುತ್ತದೆ”.

ಕೊಳಗೇರಿಯವನ ಸಾಧನೆಗಿಂತ, ಕೊಳಗೇರಿ ಇದೆ ಎಂಬುದೇ ಅವಮಾನ ಉಂಟು ಮಾಡುತ್ತದೆ ಎಂಬುದು ಎಂಥ ರಾಷ್ಟ್ರೀಯತೆ, ದೇಶಪ್ರೇಮ?

Written by saangatya

January 28, 2009 at 11:43 am

ಸ್ಲಂಡಾಗ್ ಬಗ್ಗೆಯೇ ಶ್ರೀಯವರ ನೋಟ

with 3 comments

ಶ್ರೀದೇವಿ  ಡಿ.ಎನ್. ತಮ್ಮ ಬ್ಲಾಗ್ ನೂರುಕನಸಿನಲ್ಲಿ ಸ್ಲಂಡಾಗ್ ಬಗ್ಗೆ ಬರೆದಿದ್ದಾರೆ. ಅದನ್ನು ಇಲ್ಲಿ ಬಳಸುತ್ತಿರುವುದು ಚರ್ಚೆಯ ಬೆಳೆಸುವ ಉದ್ದೇಶದಿಂದಲೇ.
*
ಹೆಸರು ಕೇಳಿದಾಗ ಮೊದಲಿಗೆ ಅನಿಸಿದ್ದು… ಸ್ಲಂನಲ್ಲಿದ್ದ ಮಾತ್ರಕ್ಕೆ ಅಷ್ಟು derogatory ಆಗಿ ಸ್ಲಂಡಾಗ್ ಅಂತ ಯಾಕೆ ಕರೆಯಬೇಕು- ಅಂತ. ಇರಲಿ. ಎಲ್ಲರೂ ಚಿತ್ರ ಚೆನ್ನಾಗಿದೆ ಅಂತಿದಾರಲ್ಲ, ನೋಡಿಯೇ ಬಿಡುವ ಅಂದುಕೊಂಡೆ.ಈಗೆಲ್ಲ ಚಿತ್ರ ಬಿಡುಗಡೆಯಾಗುವವರೆಗೆ ಕಾಯಬೇಕೆಂದೇನಿಲ್ಲವಲ್ಲ, ಇನ್ನೂ ಥಿಯೇಟರಿಗೆ ಬರುವ ಮೊದಲೇ ಚಿತ್ರದ ಒಳ್ಳೆ ಗುಣಮಟ್ಟದ ಸಿಡಿ ಸಿಕ್ಕಿತು, ನೋಡಿಯೇ ಬಿಟ್ಟೆ.
*
ನೋಡುವಾಗ ತನ್ಮಯಳಾಗಿ ಹೋದೆ. ಚಂದಚಂದದ ಶಾಟ್-ಗಳು… ಸ್ಲಂ ಚಿಣ್ಣರ ಮುಗಿಲು ಮುಟ್ಟುವ ಸಂಭ್ರಮಕ್ಕೂ, ಹೃದಯ ತಟ್ಟುವ ನೋವುಗಳಿಗೂ ಜತೆಯಾಗುವ, ಖುಷಿಕೊಡುವ ಸಂಗೀತ… ಬದುಕನ್ನೇ ಶಾಲೆಯಾಗಿಸಿದ ಚಿಣ್ಣರ ಜೀವನಪ್ರೀತಿ…. ಭಾರತದಲ್ಲಿ ಯಾವುದೂ ಅಸಾಧ್ಯವಲ್ಲ ಅಂತ ತೋರಿಸುವ ಕಥೆ… ಎಲ್ಲಾ ಚೆನ್ನಾಗಿತ್ತು. ಆದರೆ ಕೊನೆಗೆ ಬರುವ ದೊಡ್ಡ ಹುಡುಗಿಯ ಪಾತ್ರ ಮಾತ್ರ ಅದ್ಯಾಕೋ irritable ಆಗಿತ್ತು. ಅದೊಂದು ಬಿಟ್ರೆ, ನನ್ನ ಮಟ್ಟಿಗೆ ಚಿತ್ರ ಚೆನ್ನಾಗಿತ್ತು. ಪ್ರಶ್ನೆಗಳಿಗೆ ತಪ್ಪು ತಪ್ಪು ಉತ್ತರಗಳನ್ನ ಕೊಟ್ಟಿದ್ರಂತೆ, ಎಡಿಟಿಂಗ್-ನಲ್ಲಿ ಕೆಲವು ತಪ್ಪುಗಳಿತ್ತು.. ಆದರೆ ಇವೇನೂ ಬೇಗನೆ ಗೊತ್ತಾಗುವಂಥ ದೇನಲ್ಲವಾದ್ದರಿಂದ ಪರವಾಗಿಲ್ಲ. ಪುಟ್ಟ ಮಕ್ಕಳ ಪಾತ್ರ ಮಾಡಿದ ಹುಡುಗರು ತುಂಬಾ ಇಷ್ಟವಾದರು.
ಒಂದೇ ಬಿಂದುವಿನಿಂದ ಹೊರಡುವ ಇಬ್ಬರು ಚಿಣ್ಣರು… ಬದುಕಿಗಾಗಿ ಆಯ್ದುಕೊಳ್ಳುವ ವಿಭಿನ್ನ ದಾರಿಗಳು… ಭಾರತದಲ್ಲಿ ಕೆಟ್ಟ ರೀತಿಯಲ್ಲಾದರೂ ಬದುಕಬಹುದು, ಒಳ್ಳೆಯ ರೀತಿಯಲ್ಲಿಯೂ ಬದುಕಲು ಸಾಧ್ಯ ಎಂಬುದರ ಸಂಕೇತವೇನೋ, ಅನಿಸಿತು. ಬೀದಿ ದೀಪದಡಿ ಕೂತು ಓದಿ ಮೇಲೆ ಬಂದ ಮಹನೀಯರು… ಚಿಕ್ಕ ವ್ಯಾಪಾರದಿಂದ ಶುರು ಮಾಡಿ ಕರೋಡ್-ಪತಿಗಳಾದವರು… ದೊಡ್ಡ ದೊಡ್ಡ ಗ್ಯಾಂಗ್-ಸ್ಟರ್-ಗಳು… ಹೆಚ್ಚು ಓದದಿದ್ದರೂ ಬದುಕನ್ನೇ ಪಾಠಶಾಲೆಯಾಗಿಸಿಕೊಂಡವರು… ಹೀಗೆ ಎಲ್ಲರನ್ನೂ ನೆನಪಿಸಿತು ಚಲನಚಿತ್ರ. ಪುಟ್ಟ ಹುಡುಗರ ಜೀವನಪ್ರೀತಿ ನಮ್ಮೆಲ್ಲರೊಳಗೆ ಅಡಗಿರುವ ಆಶಯಕ್ಕೆ ರೆಕ್ಕೆ ಮೂಡಿಸುವಂತಿತ್ತು… ಅನಿಲ್ ಕಪೂರ್ ಪಾತ್ರ ನಮ್ಮೆಲ್ಲರೊಳಗಿನ ಸಿನಿಕತನದ ಪ್ರತಿಬಿಂಬದಂತಿತ್ತು…  ಲಗಾನ್ ಚಿತ್ರ ನೋಡುವವರೆಲ್ಲ ಅಮೀರ್ ಖಾನ್ ಟೀಮು ವಿನ್ ಆಗಲೆಂದು ಆಶಿಸುತ್ತಾರಲ್ಲ, ಹಾಗೆಯೇ ಜಮಾಲ್ ಗೆದ್ದರೆ ಸಾಕು ಅಂತ ಕಾಯಿಸಿತು. ಒಟ್ಟಿನಲ್ಲಿ ಚಿತ್ರ ಖುಷಿ ತಂದಿತು.
ಒಂದು ಸಿನಿಮಾ ಮನಸ್ಸಿನಲ್ಲುಳಿದರೆ, ಪದೇಪದೇ ನಮ್ಮ ಆಂತರ್ಯವನ್ನು ಕೆಣಕಿದರೆ ಆ ಸಿನಿಮಾ ಯಶಸ್ವಿಯಾದಂತೆ ಅಂತ ಬಲ್ಲವರು ಹೇಳುತ್ತಾರೆ. ಸ್ಲಂ ಡಾಗ್ ಮಿಲಿಯನೇರ್ ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿವೆ, ಆದರೆ ಭಾರತದ ಒಳಗಿದ್ದುಕೊಂಡು ನೋಡುವ ನನ್ನ ಮಟ್ಟಿಗೆ, ಕಥೆ ಅಷ್ಟೇನೂ ಕಾಡಲಿಲ್ಲ. ಬದುಕಬೇಕೆನ್ನುವ ಛಾತಿಯಿರುವ ಎಲ್ಲರಿಗೂ ಬದುಕಲು ಬಿಡುವ ಮುಂಬೈ ಚಿತ್ರದ ನಿಜವಾದ ಹೀರೋ.
*
ಈಗ ಚಿತ್ರ ಐದು ಗೋಲ್ಡನ್ ಗ್ಲೋಬ್ ಬಹುಮಾನಗಳಿಗೆ ಪಾತ್ರವಾಗಿದೆ… ಇದು ವೈಟ್ ಟೈಗರ್-ಗೆ ಬುಕರ್ ಸಿಕ್ಕಿದ ನಂತರ ಭಾರತದ ಬಡವರ ಕಥೆಗೆ ಸಿಕ್ಕಿದ ಮತ್ತೊಂದು ಬಹುಮಾನ. ಹೌದೂ… ಪಾಶ್ಚಾತ್ಯರಿಗೆ ಬಡ ಅಥವಾ ಮಧ್ಯಮ ವರ್ಗದ ಭಾರತವೇ ಯಾಕಿಷ್ಟ? ಸುಮ್ಮನೆ ಯೋಚಿಸುವಾಗ, ಇದೇ ರೀತಿಯ ಭಾರತೀಯರ ಕಥೆಗಳಿರುವ, ಪಾಶ್ಚಿಮಾತ್ಯರ ಪ್ರೊಡಕ್ಷನ್ ಅಥವಾ ನಿರ್ದೇಶನವಿರುವ ಹತ್ತುಹಲವು ಚಿತ್ರಗಳು ಕಣ್ಮುಂದೆ ತೆರೆದುಕೊಳ್ಳುತ್ತವೆ. ಎಲ್ಲಾ ಚಿತ್ರಗಳಲ್ಲೂ ಹೆಚ್ಚುಕಡಿಮೆ, ತಮ್ಮ ಸಾಂಪ್ರದಾಯಿಕ ಕೋಟೆಗಳನ್ನು ದಾಟಿ ಗ್ಲೋಬಲ್ ಆಗುವತ್ತ ಸಾಗುವ ಭಾರತೀಯರ ಕಥೆಗಳೇ ಇರುತ್ತವೆ. ಒಂದು ರೀತಿಯಲ್ಲಿ universal ಎನಿಸುವಂತಹ value system ಕಡೆಗೆ ಹೆಜ್ಜೆ ಹಾಕುವ ಭಾರತೀಯರ ಕಥೆಗಳು. ಹೆಚ್ಚುಕಡಿಮೆ ಎಲ್ಲವೂ ಬಡ ಅಥವಾ ಮಧ್ಯಮ ವರ್ಗದ ಬದುಕಲ್ಲಿ ಹುಟ್ಟಿದ ಕಥೆಗಳು.
ಮಿಸ್ಟ್ರೆಸ್ ಆಫ್ ಸ್ಪೈಸಸ್… ಐಶ್ವರ್ಯಾ ಅಭಿನಯದ ಚಿತ್ರ.  ಕೇರಳದ ಮೂಲೆಯಲ್ಲಿ ಮಾಯಾಶಕ್ತಿಯಿರುವ ಅಜ್ಜಿಯ ಜತೆ ಬೆಳೆದ ಹುಡುಗಿ, ಪಾಶ್ಚಾತ್ಯ ದೇಶದಲ್ಲಿ ಬದುಕಬೇಕಾಗುತ್ತದೆ. ಅಲ್ಲಿ ಆಕೆ ಮಾರುವ ಸ್ಪೈಸ್ ಅಥವಾ ಸಂಭಾರ ಪದಾರ್ಥಗಳಿಗೆ ಔಷಧೀಯ ಗುಣ. ಈ ದೈವೀ ಶಕ್ತಿಯನ್ನು ಆಕೆಗೆ ನೀಡಿದ ಅಜ್ಜಿ, ಜನ್ಮಪೂರ್ತಿ ಆಕೆಗೆ ಯಾರಿಗೂ ಮನಸೋಲದಂತೆ, ಮತ್ತು ಮದುವೆಯಾಗದಂತೆ ಶರತ್ತು ವಿಧಿಸಿರುತ್ತಾಳೆ. ಒಂದು ವೇಳೆ ಹಾಗೇನಾದರೂ ಆದರೆ, ಆಕೆಯ ಕೈಗುಣ ಕೆಟ್ಟು ಸಂಭಾರ ಪದಾರ್ಥಗಳ ಔಷಧೀಯ ಗುಣ ಹೊರಟುಹೋಗುತ್ತದೆ. ಹೀಗೆ ಬದುಕುವ ಅನಿವಾರ್ಯತೆಯ ನಡುವೆ, ಹೃದಯದ ಎಳೆತಸೆಳೆತಗಳಿಗೆ ಸೋತು, ಕೊನೆಗೆ ಮನಗೆದ್ದವನನ್ನೂ ತನ್ನವನಾಗಿಸಿಕೊಳ್ಳುವ ಜತೆಗೆ ಸಂಭಾರ ಪದಾರ್ಥಗಳನ್ನೂ ತನ್ನ ಪಾಲಿಗೆ ಒಲಿಸಿಕೊಳ್ಳುವ ಕಥೆ. ಭಾರತೀಯರ ಪ್ರಕಾರ ಅಡಿಗೆ ಮನೆ ಎಂತಹ ಔಷಧಾಲಯ ಎಂಬುದನ್ನು ತೋರಿಸುವ ಜತೆಗೆ, ಒಂದೊಂದು ಸಂಭಾರ ಪದಾರ್ಥದ ಗುಣವನ್ನೂ ವಿವರಿಸುತ್ತದೆ… ಜತೆಗೆ ಚಿತ್ರವಿಡೀ ಕಾಡುವ ವರ್ಣವೈವಿಧ್ಯ… ತಾಕಲಾಟಗಳು… ಕೆಂಪು ಬಣ್ಣವೆಂದರೇನು ಅಂತ ಈ ಚಿತ್ರ ನೋಡಿ ತಿಳಿದುಕೊಳ್ಳಬೇಕು ಅಂತ ಸಾವಿರ ಸಾರಿ ಅಂದುಕೊಂಡಿದ್ದೇನೆ ನಾನು.
ವರ್ಣವೈವಿಧ್ಯ ಎಂದ ಕೂಡಲೇ ನನಗನಿಸುತ್ತಿದೆ… ಭಾರತೀಯ ಕಥೆ ಹೊಂದಿದ ಚಿತ್ರಗಳ ಬಂಡವಾಳವೇ ಇದು. ಬದುಕಿನ ಬಣ್ಣಗಳು… ಕಣ್ಣಿಗೆ ಕಾಣಿಸುವ ಬಣ್ಣಗಳು… ಮನಸನ್ನು ಕಾಡುವ ಬಣ್ಣಗಳು… ಒಟ್ಟಿನಲ್ಲಿ ಬಣ್ಣಗಳೆಂದರೆ ನಮಗೆಲ್ಲ ಬಲು ಪ್ರೀತಿ… ಅದು ಚಿತ್ರಗಳಲ್ಲೂ ಕಾಣಿಸುತ್ತದೆ. ಸ್ಲಂಡಾಗ್ ಮಿಲಿಯನೇರ್ ಕೂಡ ಇದಕ್ಕೆ ಹೊರತಲ್ಲ.
*
ಶ್ರೀಮಂತಿಕೆ ಕೆಲವರ ಕೈಲಿ ಸಿಕ್ಕಿ ನರಳುತ್ತಿರುವ ನಮ್ಮ ದೇಶದಲ್ಲಿ ಬಡವರು ಹಾಗೂ ಮಧ್ಯಮವರ್ಗದ ಜನರೇ ಹೆಚ್ಚು. ಬದುಕಿನ ವಿಧವಿಧದ ಛಾಯೆಗಳನ್ನು ತೆರೆದಿಡುವ ವರ್ಣವೈವಿಧ್ಯ ಕೂಡ ಬಡವರಲ್ಲಿ ಮತ್ತು ಮಧ್ಯಮವರ್ಗದಲ್ಲೇ ಜಾಸ್ತಿ. ಬದುಕುವ ರೀತಿಗಳು, ಚಟುವಟಿಕೆಗಳು, ಉಡುಗೆತೊಡುಗೆಗಳು – ಎಲ್ಲವೂ ಇಲ್ಲಿ visually rich. ಮತ್ತು ಈ ಬದುಕಿನಲ್ಲಿ ಹೊಟ್ಟೆಪಾಡಿಗೆ, ದಿನಕಳೆಯಲು ಬೇಕಾದ ಚಟುವಟಿಕೆಗೆ ಹೆಚ್ಚು ಪ್ರಾಮುಖ್ಯ. ಸೂಕ್ಷ್ಮತೆಗೆ, ಸಂವೇದನೆಗಳಿಗೆ ನಂತರದ ಸ್ಥಾನ. ಈ ದೊಡ್ಡ ದೇಶದ ಒಂದು ಮೂಲೆಯಲ್ಲಿರುವ ಬಡವರಿಗಿಂತ ಇನ್ನೊಂದು ಮೂಲೆಯಲ್ಲಿ ಬದುಕುವ ಬಡವರಿಗೆ ಅಜಗಜಾಂತರವಿರುತ್ತದೆ. ಒಂದು ಬಿಲಿಯನ್ ಜನಸಂಖ್ಯೆಯಿರುವ, 26ಕ್ಕೂ ಹೆಚ್ಚು ಮುಖ್ಯ ಭಾಷೆಗಳ ಮತ್ತು ಅವುಗಳೊಳಗೆ ಉಪಭಾಷೆಗಳ ವೈವಿಧ್ಯ ವಿರುವ, ಮರಳುಗಾಡಿನಿಂದ ಹಿಡಿದು ಹಸಿರು ಕಾಡಿನ ತನಕ ಎಲ್ಲಾ ರೀತಿಯ ಭೂವೈವಿಧ್ಯವಿರುವ, ಸಾವಿರಾರು ಜಾತಿಗಳಿರುವ, ಅವುಗಳೊಳಗೆ ಸಾವಿರಾರು ಪರಂಪರೆ-ಆಚರಣೆಗಳಿರುವ ನಮ್ಮ ದೇಶದಲ್ಲಿ ಬಡವರ ಬದುಕು ಸಾವಿರ ರೀತಿಗಳಲ್ಲಿ ತೆರೆದುಕೊಳ್ಳುತ್ತದೆ. ಹಾಗಾಗಿ, ಸಹಜವಾಗಿಯೇ ಕಥೆ ಬರೆಯುವವರಿಗೂ ಚಿತ್ರ ನಿರ್ದೇಶಕರಿಗೂ ಬಡಭಾರತದಲ್ಲಿ ಹೆಚ್ಚಿನ ವಿಷಯಗಳು, ವಿಚಾರಗಳು ಸಿಗುತ್ತವೆ.
ಆದರೆ ಶ್ರೀಮಂತರಾಗತೊಡಗಿದಂತೆ ಭಾಷೆ-ಉಡುಗೆ-ತೊಡುಗೆ-ಆಚರಣೆ ಎಲ್ಲವೂ ಯೂನಿವರ್ಸಲ್ ಆಗುತ್ತವೆ. ಬದುಕು ಕಾರ್ಪೋರೆಟೈಸ್ ಆಗಿ ಹೋಗುತ್ತದೆ, ಎಲ್ಲವೂ ಬ್ರಾಂಡೆಡ್ ಆಗುತ್ತದೆ, ಬದುಕಿನ ರೀತಿನೀತಿಗಳೆಲ್ಲವೂ ನಮಗೆ ಬೇಕಾಗಿಯೋ ಬೇಡದೆಯೋ ಪ್ರಿಡಿಫೈನ್ಡ್, ಮತ್ತು ಇಂಟರ್-ನ್ಯಾಶನಲ್ ಆಗಿಹೋಗುತ್ತವೆ. ಒಬ್ಬ ಶ್ರೀಮಂತನಿಗೂ ಮತ್ತೊಬ್ಬ ಶ್ರೀಮಂತನಿಗೂ ಬದುಕಿನ ರೀತಿಗಳಲ್ಲಾಗಲೀ, ನೀತಿಗಳಲ್ಲಾಗಲೀ ಹೆಚ್ಚು ವ್ಯತ್ಯಾಸವಿರುವುದಿಲ್ಲ. ಉಡುಗೆ-ತೊಡುಗೆಗಳಲ್ಲಿ, ನೋವು-ನಲಿವುಗಳಲ್ಲಿ ಹೆಚ್ಚು ಭಿನ್ನತೆಯಿರುವುದಿಲ್ಲ. ಕಾಸ್ಮಾಪಾಲಿಟನ್ ಸಂಸ್ಕೃತಿಗೆ ಕಾಲಿಡುವ ಕಾರಣ, ಒಬ್ಬನಿಗೆ ಇನ್ನೊಬ್ಬನನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಕಷ್ಟವಾಗುವುದಿಲ್ಲ. ಈ ಜಗತ್ತಿನ ಸುತ್ತ ಕಥೆ ಹೆಣೆಯಹೊರಟಾಗ ನಾವು ಈವರೆಗೆ ನೋಡಿನೋಡಿ ಬೇಜಾರಾದ ಚಿತ್ರಗಳ ಹಾಗಿನವೇ ಮತ್ತೆ ಹುಟ್ಟಿಕೊಳ್ಳುತ್ತವೆ.
ಬರಿಯ thrill, action, epics, romance, emotionsಗಳಲ್ಲೇ ಕಾಲಕಳೆಯುವ ಪಾಶ್ಚಾತ್ಯ ಜಗತ್ತಿಗೆ ಈ ದೃಶ್ಯವೈವಿಧ್ಯಗಳು, ಇಲ್ಲಿನ ಬದುಕಿನ ಭಿನ್ನತೆಗಳು, ಹೋರಾಟಗಳು ಇಷ್ಟವಾಗುವುದರಲ್ಲಿ ಆಶ್ಚರ್ಯವಿಲ್ಲ. ಶುಭಂ ಹೇಳುವ ಮುಂಚೆ ಹೀರೋ-ಹೀರೋಯಿನ್ನು ಒಂದಾಗುವ ಅದೇ ಹಳೇ ಲವ್ವು, ಅದೇ ಕಥೆಗಳು, ಅದೇ ಜಡ್ಡುಗಟ್ಟಿದ ಮರಸುತ್ತೋ ಸಾಂಗುಗಳು, ಅದೇ ಅದೇ ಲೊಕೇಶನ್ನು, ಅದೇ ಆರ್ಟಿಸ್ಟು, ಅದೇ ಕ್ಯಾಮರಾ ವರ್ಕು, ಅದೇ ಎಡಿಟಿಂಗು ನೋಡಿನೋಡಿ ಬರಗೆಟ್ಟು ಬೇಜಾರಾಗಿದ್ದ ನಮಗೆಲ್ಲ, ಮುಂಗಾರುಮಳೆ ಹೊಸತನದ ಜಡಿಮಳೆ ಸುರಿಸಿತಲ್ಲ, ಅವಾಗ ನಾವೆಲ್ಲ ಅದನ್ನು ಮತ್ತೆ ಮತ್ತೆ ನೋಡಿ, ಸಿಕ್ಕವರಿಗೆಲ್ಲಾ ರೆಕಮೆಂಡ್ ಮಾಡಿ ಸೂಪರ್ ಹಿಟ್ ಮಾಡಿದ್ದೆವಲ್ಲ… ಪಾಶ್ಚಾತ್ಯ ಜಡ್ಜುಗಳಿಗೆ ಭಾರತೀಯ ಚಿತ್ರಗಳು ಇಷ್ಟವಾಗುವುದು ಇಷ್ಟೇ ಸಹಜವೇನೋ… ಅದಲ್ಲದೇ ಭಾರತದ ಬಡತನವನ್ನೇ ನೋಡಲು ಬಯಸುವ ಸೈಕಿಕ್-ಗಳು ಅವರಾಗಿರಲಿ ಕ್ಕಿಲ್ಲ. ಇದು ನನಗನಿಸಿದ್ದು.
*
ನಂತರ ಯೋಚಿಸುವಾಗ, ಒಂದು ಸರ್ಕಾರ್-ಗೆ, ಒಂದು ತಾರೇ ಝಮೀಂ ಪರ್-ಗೆ, ಒಂದು ರಂಗ್ ದೇ ಬಸಂತೀಗೆ, ಒಂದು 1947-ಅರ್ಥ್-ಗೆ ಅಥವಾ ಒಂದ್ ಲಗಾನ್-ಗೆ ಸಿಗದ ಅವಾರ್ಡುಗಳು ಸ್ಲಂ ಡಾಗ್ ಚಿತ್ರಕ್ಕೆ ಹೇಗೆ ಬಂದವಪ್ಪಾ ಅಂತ ಯೋಚನೆ ಸಹಜವಾಗಿಯೇ ಆಯಿತು. ಖಂಡಿತವಾಗಿಯೂ ಭಾರತೀಯರೇ ನಿರ್ದೇಶಿಸಿದ ಹಲವಾರು ಚಿತ್ರಗಳು ಇದಕ್ಕಿಂತ ಎಷ್ಟೋ ಚೆನ್ನಾಗಿದ್ದವು. ಇನ್ನೂ ಹೆಚ್ಚು ಖುಷಿ ಕೊಟ್ಟಿದ್ದವು. ಹೆಚ್ಚು ಸಿಂಬಾಲಿಕ್ – ಹೆಚ್ಚು ಅರ್ಥಪೂರ್ಣವಾಗಿದ್ದವು. ಹೆಚ್ಚು ಯೋಚನೆಗೆ ಹಚ್ಚಿದ್ದವು. ಭಾರತೀಯ ವರ್ಣವೈವಿಧ್ಯದ ಜತೆಗೆ ಜಾಗತಿಕವೆನ್ನಬಹುದಾದ ಗುಣಮಟ್ಟವನ್ನೂ ಹೊಂದಿದ್ದವು. ರೆಹಮಾನ್ ಇದಕ್ಕಿಂತ ಉತ್ತಮ ಸಂಗೀತ ಕೊಟ್ಟ ಚಿತ್ರಗಳು ಇನ್ನೂ ಬೇಕಾದಷ್ಟಿವೆ. ಬಹುಶ: ಅಂತರ್ರಾಷ್ಟ್ರೀಯ ಪ್ರಶಸ್ತಿಗಳ ಮಾನದಂಡವೇನು ಅಂತ ಅರ್ಥವಾಗಬೇಕಾದರೆ  ಭಾರತದ ಹೊರಗಿದ್ದು ಚಿತ್ರ ನೋಡಬೇಕೇನೋ ಅಂತ ನನಗನಿಸಿದ್ದು ಮಾತ್ರ ಸುಳ್ಳಲ್ಲ.

ಪೊಯೆಟಿಕ್ ಫ್ರೀಡಂ ಇಲ್ಲಿ ಸುಳ್ಳು : ಅಭಯ್ ರ ವ್ಯಾಖ್ಯಾನ

with 3 comments

ಎಲ್ಲರಿಗೂ ನಮಸ್ಕಾರ. ಸ್ಲಂಡಾಗ್ ಮಿಲಿನೇರ್ ಕುರಿತಾದ ಚರ್ಚೆಯನ್ನು ಅಭಯಸಿಂಹ ಅವರ ಬ್ಲಾಗಿನ ಬರಹ ಮುಂದುವರಿಸಿದೆ. ಮತ್ತಷ್ಟು ಆಯಾಮಗಳಲ್ಲಿ ಅಭಯಸಿಂಹ ಅವರು ಚರ್ಚಿಸಿರುವುದರಿಂದ ಅದನ್ನು ಇಲ್ಲಿ ಪ್ರಕಟಿಸಿದ್ದೇವೆ. ಈ ಚರ್ಚೆಯನ್ನು ಮತ್ತಷ್ಟು ಬೆಳೆಸುವ ಬರಹಗಳಿಗೆ ಸ್ವಾಗತ. ನಿಮ್ಮ ಬರಹಗಳನ್ನು saangatya@gmail.com ಗೆ ಕಳಿಸಿ.

*

ಸ್ಲಂಡಾಗ್ ಮಿಲಿಯನೇರ್ ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಬಂತು ಹಾಗೂ ಈಗ ಆಸ್ಕರ್ ಓಟದಲ್ಲೂ ಹನ್ನೊಂದು ಕ್ಷೇತ್ರಗಳಿಗೆ ಅದು ಆಯ್ಕೆಯಾಗಿದೆ. ಇತ್ತೀಚೆಗೆ ಈ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. (ಹೇಗೆ ಅಂತ ಕೇಳಬೇಡಿ… ಅದೆಲ್ಲಾ ಹೇಳಲಿಕ್ಕಾಗುವುದಿಲ್ಲ ಹ… ಹ್ಹ… ಹ್ಹ… ) ಎ.ಆರ್. ರೆಹಮಾನಿಗೆ ಗೋಲ್ಡನ್ ಗ್ಲೋಬ್ ಬಂದದ್ದು ಸಂತೋಷ. ಅವರ ಸಂಗೀತ ಮೊದಲು ಕೇಳಿದಾಗ ನನಗೆ ಅದು ಚೆನ್ನಾಗಿದೆ ಎನಿಸಿತು. ಆದರೆ ಅದ್ಭುತ ಎಂದು ಅನಿಸಿರಲಿಲ್ಲ. ಆದರೆ ಚಿತ್ರದಲ್ಲಿ ಅದನ್ನು ನೋಡಿದಾಗ ಆ ಸಂಗೀತವೂ ಅದರ ಚಿತ್ರೀಕರಣವೂ ಸೇರಿ ಸಂಗೀತಕ್ಕೆ ಹೊಸ ಬೆಲೆ ಬಂದಿತ್ತು. ಚಿತ್ರಕ್ಕೆ ಇಷ್ಟು ನಿಷ್ಟನಾಗಿ ಸಂಗೀತ ಕೊಡುವುದು ಎ.ಆರ್. ರೆಹಮಾನ್ ಎಂಬ ಮಹಾನುಭಾವನಿಂದ ಮಾತ್ರ ಸಾಧ್ಯ ಎನಿಸಿತು. ಏನೇ ಇರಲಿ ಅವರಿಗೆ ಗೋಲ್ಡನ್ ಗ್ಲೋಬ್ ಬಂದಿದ್ದಂತೂ ಸಂತೋಷದ ವಿಷಯ ಹಾಗೂ ಅದಕ್ಕೆ ಅವರು ಸಂಪೂರ್ಣ ಅರ್ಹರೂ ಕೂಡಾ.

ಇನ್ನು ಈ ಚಿತ್ರದ ಕುರಿತಾಗಿ ಅನೇಕ ಪರ-ವಿರೋಧ ಮಾತುಗಳು ಎದ್ದಿವೆ. ಭಾರತವನ್ನು ಕೀಳಾಗಿ ತೋರಿಸಿದಾಗಲೆಲ್ಲಾ ಕೃತಿಗಳಿಗೆ ವಿದೇಶೀ ಬಹುಮಾನ ಬರುತ್ತೆ ಎಂದು ಅನೇಕರು ಹೇಳಿಕೊಂಡರು. ಅರವಿಂದ ಅಡಿಗರ ಪುಸ್ತಕ ಬಂದಾಗಲೂ ಇಂಥದ್ದೇ ಮಾತುಗಳನ್ನು ಆಡಿದ್ದುಂಟು. ಅದರ ಸತ್ಯಾಸತ್ಯತೆಯ ಶೋಧಕ್ಕೆ ನಾನು ಇಲ್ಲಿ ಇಳಿಯುತ್ತಿಲ್ಲ. ಕೇವಲ ಇದನ್ನು ಒಂದು ಚಿತ್ರವಾಗಿ ಪರಿಗಣಿಸಿ ನನ್ನ ಅನಿಸಿಕೆ ದಾಖಲಿಸುತ್ತಿದ್ದೇನೆ. ಆದರೂ… ಮುಂದುವರಿಯುವ ಮೊದಲು… ಗಿರೀಶ್ ಕಾಸರವಳ್ಳಿ, ಅಡೂರು ಗೋಪಾಲ ಕೃಷ್ಣ ಇತ್ಯಾದಿ ಭಾರತದ ಒಂದು ದೊಡ್ಡ ಗುಂಪು ಚಿತ್ರ ನಿರ್ದೇಶಕರ ಚಿತ್ರಗಳು ವಿದೇಶಗಳಲ್ಲಿ ಭಾರೀ ಮಾನ್ಯತೆ ಪಡೆದಿವೆ. ಇವುಗಳ ಕುರಿತಾಗಿ ಹೊರದೇಶಗಳಲ್ಲಿ ಗಂಭೀರ ಅಧ್ಯಯನಗಳು ನಡೆದಿವೆ. ಆದರೆ ಇವರ್ಯಾರೂ ಭಾರತವನ್ನು ಕೀಳಾಗಿ ತೋರಿಸಿ ಈ ಅರ್ಹತೆಯನ್ನು ಪಡೆದವರಲ್ಲ. ಅನಂತ ಮೂರ್ತಿಯಂಥ ಕೆಲ ಗಣ್ಯ ಕನ್ನಡ ಲೇಖಕರ ಪುಸ್ತಕಗಳು ಯೂರೋಪಿನ ನಾಲ್ಕೈದು ಭಾಷೆಗಳಿಗೆ ಭಾಷಾಂತರವಾಗಿ ಅನೇಕ ಮುದ್ರಣವನ್ನು ಕಂಡಿದೆ… ಅವರೂ ಭಾರತವನ್ನು ಕೀಳಾಗಿ ತೋರಿಸಲಿಲ್ಲ.

ಇಷ್ಟಾಗಿಯೂ ಸ್ಲಂ ಡಾಗ್ ಮಿಲಿಯನೇರಿನಲ್ಲಿ ತೋರಿಸಿದ ಸ್ಲಂಗಳು, ಭೂಗತ ಜಗತ್ತು ನಮ್ಮಲ್ಲಿ ಇರುವುದೇ ತಾನೆ? ಗೋಲ್ಡನ್ ಗೋಬ್ ಬರದೇ ಇರುತ್ತಿದ್ದರೆ ಆ ಸಿನೆಮಾ ಒಳ್ಳೆಯ ಸಿನೆಮಾವಾಗಿರುತ್ತಿತ್ತೇ, ಹಾಗಾದರೆ? ಈ ವಾದ ನನಗೆ ಅಷ್ಟು ಸಮಂಜಸವೆನಿಸದು.

ಸ್ಲಂ ಡಾಗ್ ಮಿಲಿಯನೇರಿನಲ್ಲಿ, ಮುಂಬೈಯ ಸ್ಲಂಗಳ ಕೊಚ್ಚೆಯಲ್ಲಿ ಈಜು ಹೊಡೆಯುವ ಪೋರನೊಬ್ಬ ‘ಕೌನ್ ಬನೇಗಾ ಕರೋಡ್ ಪತಿ’ ಎಂಬ ಒಂದು ಟೆಲಿವಿಷನ್ ಆಟದಲ್ಲಿ ಆಡಿ ಗೆಲ್ಲುವ ಕಥೆ ಇದೆ. ಇದು ಕಥೆಯ ಬೆನ್ನುಹುರಿ ಎನ್ನಬಹುದು. ಆ ಆಟದಲ್ಲಿ ಕೇಳುವ ಪ್ರತಿಯೊಂದು ಪ್ರಶ್ನೆಯೂ ಪರಸ್ಪರ ಸಂಬಂಧವಿಲ್ಲದಿದ್ದರೂ, ಹೇಗೆ ಆ ಸಂಗತಿಗಳು ವಿಚಿತ್ರ ಕಾರಣಗಳಿಂದಾಗಿ ಈ ಸ್ಲಂ ಒಡನಾಡಿಗೆ ತಿಳಿಯಿತು ಎನ್ನುವುದು ಚಿತ್ರದ ಜೀವಾಳ. ಇಲ್ಲಿ ಸ್ಲಮ್ ಜೀವನದ ನಿಗೂಢ ಮಗ್ಗುಲುಗಳನ್ನು ಪರಿಚಯಿಸುತ್ತಲೇ ಜೀವನದಲ್ಲಿ ಒಂದು ಆಸೆಯನ್ನು ಹುಟ್ಟಿಸುವ ಪ್ರಯತ್ನ ನಡೆಯುತ್ತದೆ. ಇದಿಷ್ಟು ಕಥಾ ಭಾಗ. ಆದರೆ ಚಿತ್ರದ ಕಥೆಯು ಒಟ್ಟಾರೆಯಾಗಿ ಒಂದು ಕಾಲ್ಪನಿಕ ಜಗತ್ತಿನಲ್ಲಿ ನಡೆದಂತೆ ಭಾಸವಾಗುತ್ತದೆ. ಇದಕ್ಕೆ ಭಾರತೀಯರಾದ ನಾವು ನಂಬಲಾರದ ವಿಷಯಗಳು ಚಿತ್ರದ ಕಥೆಗೆ ತಿರುವುಗಳನ್ನು ಕೊಡುವಲ್ಲಿ ಗಮನಾರ್ಹ ಭಾಗಗಳಾಗಿದ್ದು ಮುಖ್ಯ ಕಾರಣವಾಗಿರ ಬಹುದು. ಕಥೆಯಲ್ಲಿ ಮೂಲಭೂತ ಅನೇಕ ದೋಷಗಳಿವೆ.

ಮೊದಲನೆಯದಾಗಿ ‘ಕೌನ್ ಬನೇಗಾ ಕರೋಡ್ ಪತಿ’ ಎಂಬ ಆಟದಲ್ಲಿ ಈ ಹುಡುಗ ಆಡುತ್ತಿರುತ್ತಾನೆ. ಅದನ್ನು ದೇಶಾದ್ಯಂತ ಜನರು ಕಾತುರದಿಂದ ಕಾಯುತ್ತಿರುತ್ತಾರೆ. ಆದರೆ ಮೂಲತಃ ಈ ಆಟವು ಎಂದೂ ನೇರ ಪ್ರಸಾರದಲ್ಲಿ ನಡೆಯುವುದೇ ಇಲ್ಲ. ಅವೆಲ್ಲವೂ ಮೊದಲೇ ಚಿತ್ರೀಕರಿಸಿಕೊಂಡು ತೋರಿಸಲ್ಪಡುವ ಕಾರ್ಯಕ್ರಮಗಳು. ಈ ಗೇಮ್ ಶೋ ಪ್ರಪಂಚದ 64 ದೇಶಗಳಲ್ಲಿ ಯಶಸ್ವಿಯಾಗಿ ನಡೆದಿದೆಯಂತೆ! ಎಲ್ಲೂ ನೇರಪ್ರಸಾರ ನಡೆದಿಲ್ಲ… ಇಲ್ಲಿಗೆ ಚಿತ್ರದಲ್ಲಿ ಟೆನ್ಶನ್ ಕಟ್ಟಲು ಬಳಸಿರುವ ಅತಿ ದೊಡ್ಡ ಪರಿಕರವೇ ಸುಳ್ಳು ಎಂದಂತಾಯಿತು.

ಅದಂತಿರಲಿ… ಅದನ್ನು ಪೊಯೆಟಿಕ್ ಫ್ರೀಡಂ ಎನ್ನೋಣ ಎನ್ನುತ್ತೀರಾ? ಆದರೆ ಅಂಥಾ ಅನೇಕ ಪೊಯೆಟಿಕ್ ಫ್ರೀಡಂ ಬಳಸಿಕೊಂಡು ಇಲ್ಲಿ ಕಥೆ ಬೆಳೆಯುತ್ತಾ ಹೋಗುತ್ತದೆ. ಮತ್ತೆ ಅಲ್ಲಿ ಹೇಳಲಿಕ್ಕೆ ಹೊರಟಿರುವ ಕಥೆ ವಾಸ್ತವದ ಹತ್ತಿರದ್ದು ಎನ್ನುವ ಪ್ರಯತ್ನವನ್ನು ಚಿತ್ರ ಮಾಡುತ್ತದೆ. ಇಲ್ಲಿಯೇ ಈ ಪೊಯೆಟಿಕ್ ಫ್ರೀಡಂ ತೊಂದರೆ ಕೊಡುವುದು. ಇನ್ನು ಕಥೆಯಲ್ಲಿನ ಅತಿ ದೊಡ್ಡ ತೊಂದರೆ ಎಂದರೆ ಅದರಲ್ಲಿ ಬಳಸಿರುವ ಭಾಷೆ. ಅನೇಕ ಪಾತ್ರಗಳು ಹಿಂದಿಯಲ್ಲಿ ಮಾತನಾಡುತ್ತವೆ. ಮತ್ತೆ ಕೆಲವು ಭಾರತೀಯ ಇಂಗ್ಲೀಷಿನಲ್ಲಿ ಮಾತನಾಡುತ್ತವೆ. ಆದರೆ ಕಥಾ ನಾಯಕ, ಕಾಲ್ ಸೆಂಟರಿನಲ್ಲಿ ಟೀ ಕೊಡುತ್ತಿದ್ದ ಹುಡುಗ ಬ್ರಿಟೀಷ್ ಇಂಗ್ಲೀಷಿನಲ್ಲಿ ಮಾತನಾಡುತ್ತಾನೆ. ಅವರ ಉಚ್ಚರಣೆ ಸಹಿತವಾಗಿ! ಇದು ಮತ್ತೆ ಆ ಹುಡುಗನೊಂದಿಗೆ ಸಹೃದಯರಾಗುವಲ್ಲಿ ನಮಗೆ ತೊಂದರೆಯನ್ನು ತಂದುಕೊಡುತ್ತದೆ. ಹಾಗೆ ನೋಡಿದರೆ ಈ ಹುಡುಗನ ಬಾಲ್ಯವನ್ನು ತೋರಿಸುವಾಗ ನಿಜವಾದ ಸ್ಲಂ ಹುಡುಗನೊಬ್ಬನನ್ನು ಬಳಸಿಕೊಂಡಿದ್ದಾರೆ. ಅವನು ಅಸಾಧ್ಯ ನೈಜತೆಯೊಂದಿಗೆ ನಟಿಸಿದ್ದಾನೆ. ಆದರೆ ಹುಡುಗ ದೊಡ್ಡವನಾಗುತ್ತಾ ಅವನಿಂದ ನಮ್ಮ ಮನಸ್ಸು ಇನ್ನೊಂದೆಡೆಗೆ ಹೋಗಿಬಿಡುತ್ತದೆ.

ಚಿತ್ರದಲ್ಲಿ ಹುಡುಗನಿಗೆ ಅವನ ಬಾಲ್ಯದ ಘಟನಾವಳಿಗಳಿಂದಾಗಿ ‘ಕೌನ್ ಬನೇಗಾ ಕರೋಡ್ ಪತಿ’ ಆಟದಲ್ಲಿ ಕೇಳುವ ಪ್ರಶ್ನೆಗಳಿಗೆ ಉತ್ತರಗಳು ಗೊತ್ತಿರುತ್ತವೆ ಎನ್ನುವುದು ಕಥೆಯ ಸಾರ. ಆದರೆ ಆ ಸನ್ನಿವೇಶಗಳಲ್ಲಿ ಅವನಿಗೆ ಉತ್ತರ ಗೊತ್ತಾಗುವ ಪ್ರಕ್ರಿಯೆ ಮತ್ತಷ್ಟು ಜಾಳಾಗಿವೆ. ಮತೀಯ ಗಲಭೆಗಳ ನಡುವೆ ಒಬ್ಬ ಹುಡುಗ ರಾಮನ ವೇಷ ಧರಿಸಿ ಯಾಕೆ ನಿಂತಿರುತ್ತಾನೆ? ಇದು ಕನಸೇ ವಾಸ್ತವವೇ? ಒಬ್ಬ ಕೇವಲ ಸ್ಲಂ ಹುಡುಗನ ಕೈಯಲ್ಲಿ ಕೋಲ್ಟ್ 45 ಎಂಬ ಆಧುನಿಕ ರಿವಾಲ್ವರ್ ಹೇಗೆ ಬರುತ್ತದೆ? (ಯಾವುದೇ ಲೋಕಲ್ ರೌಡಿಯ ಕೈಯಲ್ಲಿ ರಿವಾಲ್ವರ್ ಇರುವುದು ಸುಲಭವಲ್ಲ. ಹಾಗೆ ಬಂದರೂ ಅದು ಯಾವುದೋ ದೇಸೀ ಪಿಸ್ತೂಲಾಗಿರುವುದು ಸಹಜ ಅಲ್ಲವೇ? ಅಷ್ಟಕ್ಕೂ ಇವನು ಬರೇ ಒಬ್ಬ ಸಣ್ಣ ಹುಡುಗ!) ಕಾಲ್ ಸೆಂಟರಿನಲ್ಲಿ ಟೀ ಕೊಡುವ ಹುಡುಗ ಬ್ರಿಟಷ್ ಇಂಗ್ಲೀಷ್ ಕಲಿಯಲು ಹೇಗೆ ಸಾಧ್ಯ? ಅಮರಿಕನ್ ದಂಪತಿಗಳು ಎಷ್ಟೇ ಕರುಣಾಮಯಿಗಳಾಗಿದ್ದರೂ, ಭಾರತದಲ್ಲಿ ಒಬ್ಬ ಹುಡುಗನಿಗೆ ದಾನ ಕೊಡುವಾಗ ನೂರು ಡಾಲರ್ ನೋಟು ಕೊಟ್ಟಾರೇ? (ಅದೂ ಡಾಲರ್! ಹುಡುಗ ಪಾಪ ಅದನ್ನು ಹೇಗೆ ರೂಪಾಯಿಗೆ ಪರಿವರ್ತಿಸಿಕೊಂಡಾನು ಎನ್ನುವ ಪರಿವೆಯಾದರೂ ಅವರಿಗೆ ಬೇಡವೇ?!) ತಾಜ್ ಮಹಲ್ ನೋಡಲು ಬರುವ ವಿದೇಶೀಯರು ಅಲ್ಲಿನ ಒಬ್ಬ ಹುಡುಗನಿಂದ ಇದೊಂದು ಪಂಚತಾರಾ ಹೋಟೇಲ್ ಎಂದು ನಂಬುವಷ್ಟು ಮುಠ್ಠಾಳರೇ? ಗೇಮ್ ಶೋ ನಡೆಸುತ್ತಿರುವ ಅನಿಲ್ ಕಪೂರ್ ಗೆ ಯಾಕೆ ಈ ಹುಡುಗನ ಮೇಲೆ ದ್ವೇಷ? ಹೀಗೆ ಕಥೆಯ ತುಂಬಾ ನಮ್ಮಲ್ಲಿಯ ರಸ್ತೆಗಳಂತೆ ಗುಂಡಿಗಳಿವೆ.

ಚಿತ್ರಕ್ಕೆ ರೆಹಮಾನ್ ಸಂಗೀತ ಮೆರುಗನ್ನು ಕೊಟ್ಟಿದೆ ಸಂಶಯವಿಲ್ಲ. ಆದರೆ ಇದಕ್ಕಿಂತ ಉತ್ತಮ ಕೆಲಸವನ್ನು ಇದೇ ರೆಹಮಾನ್ ಭಾರತೀಯ ಚಿತ್ರಗಳಿಗೇ ಮಾಡಿದ್ದಾರೆ. ಆಗ ಯಾಕೆ ಗೋಲ್ಡನ್ ಗ್ಲೋಬ್ ಅವರಿಗೆ ಬರಲಿಲ್ಲ?! ಆಸ್ಕರ್ ಗೆ ಯಾಕೆ ಹೆಸರು ಸೂಚಿತವಾಗಲಿಲ್ಲ?! ಗೊತ್ತಿಲ್ಲ. ಹೀಗೆ ಈ ಚಿತ್ರ ಅನೇಕ ಸಂಶಯಗಳನ್ನು ಹುಟ್ಟು ಹಾಕಿಸುತ್ತಾ, ಚೆನ್ನಾಗಿ ಚಿತ್ರೀಕರಿಸಿರುವ ಮಾಮೂಲು ಹಿಂದೀ ಚಿತ್ರದಂತೆ ಉಳಿದು ಬಿಡುತ್ತದೆ. ಇದಕ್ಕೆ ಆಸ್ಕರ್ ಸಿಕ್ಕುವುದು ನನಗೆ ಸಂಶಯದ ವಿಷಯ. ಸಿಕ್ಕಿದರೆ, ಆ ಪ್ರಶಸ್ತಿಯ ನಿಜ ರೂಪ ಅರಿವಿಗೆ ಬಂದಂತೆ!

ಹಿಂದೆ ಒಮ್ಮೆ ಮೂರು ಬಾರಿ ಆಸ್ಕರ್ ಪಡೆದಿರುವ ವಾಲ್ಟರ್ ಮರ್ಚ್ ಎನ್ನುವ ಸಂಕಲನಕಾರರನ್ನು ಭೇಟಿಯಾಗಿದ್ದೆ. ಅವರು ಗಾಡ್ ಫಾದರ್ ಎನ್ನುವ ಕ್ಲಾಸಿಕ್ ಸಿನೆಮಾದ ಸಂಕಲನಕಾರರು ಹಾಗೂ ಧ್ವನಿ ಸಂಯೋಜಕರು! ಅವರನ್ನು ಸರ್, ಆಸ್ಕರ್ ಸಿಗುವುದು ಎಂಥಾ ಅನುಭವ ಎಂದು ಕೇಳಿದೆ. ಅವರು ಸಣ್ಣಕೆ ನಕ್ಕರು. “ಮೊದಲ ಬಾರಿ ನಂಬಲಾರದಷ್ಟು ಸಂತಸವಾಯಿತು. ಎರಡನೇ ಬಾರಿ ಬಹಳ ಸಂತೋಷವಾಯಿತು. ಮೂರನೇ ಬಾರಿ ಸಂತೋಷವಾಯಿತು…. ಮತ್ತೆ…. ಹ… ಹ್ಹ….” “ಮತ್ತೆ ಏನಾಯ್ತು ಸಾರ್?” “ಮತ್ತೆ ಮುಂದಿನ ಬಾರಿ ನಾನು ಆಯ್ಕೆ ಸಮಿತಿಯಲ್ಲಿದ್ದೆ. ಅಲ್ಲಿ ಅವರು – ಇವನಿಗೆ ಕಳೆದ ವರ್ಷ ಕೊಟ್ಟಿದ್ದೇವೆ. ಈ ವರ್ಷ ಬೇಡ… ಅವನು ಪಾಪ ಸುಮಾರು ವರ್ಷಗಳಿಂದ ಕಾಯುತ್ತಿದ್ದಾನೆ. ಅವನಿಗೆ ಕೊಡೋಣ – ಹೀಗೆ ಮಾತನಾಡಿಕೊಂಡು ಪ್ರಶಸ್ತಿಗಳನ್ನು ನಿರ್ಧರಿಸುತ್ತಿದ್ದರು. ಇದನ್ನು ಕಂಡು ನನಗೆ ಬಂದ ಪ್ರಶಸ್ತಿಗಳ ಬಗ್ಗೆ ಗೌರವವೇ ಹೋಯಿತು” ನಾನು ಬೆಕ್ಕಸ ಬೆರಗಾಗಿ ನಿಂತಿದ್ದೆ! ಆಸ್ಕರ್ ಅಂದರೆ ಇಷ್ಟೇನಾ? ಮತ್ತೆ ಯಾಕೆ ನಮ್ಮಲ್ಲಿ ಈ ಆಸ್ಕರ್, ಗೋಲ್ಡನ್ ಗ್ಲೋಬ್ ಬಗ್ಗೆ ಇಷ್ಟೊಂದು ವ್ಯಾಮೋಹ? ಬೂಕರ್ ಬಗ್ಗೆ ವ್ಯಾಮೋಹ? ಇವೆಲ್ಲವೂ ಒಂದು ವಿಷ ವೃತ್ತ. ಅಲ್ಲಿ ಗುಣ ಮಟ್ಟ ಇಲ್ಲ, ಬರೇ ರಾಜಕೀಯ ಎಂದಲ್ಲ ನಾನು ಹೇಳುತ್ತಿರುವುದು. ಆದರೆ ಅಲ್ಲಿ ಗುಣ ಮಟ್ಟ ಮಾತ್ರ ಅಲ್ಲ ರಾಜಕೀಯವೂ ಇದೆ ಎನ್ನುವುದು ನನ್ನ ಮಾತಿನ ಅರ್ಥ. ಅದರ ಕುರಿತಾಗಿ ಇನ್ನೊಮ್ಮೆ ಎಂದಾದರೂ ಬರೆಯುತ್ತೇನೆ.

ನಿರಂಜನರ ಇನ್ನೊಂದಿಷ್ಟು ನೋಟ ಸ್ಲಂಡಾಗ್ ನ ಮೇಲೆ

with one comment

ಬೆಂಗಳೂರು ಮಿರರ್ ನ ಪತ್ರಕರ್ತ ನಿರಂಜನ್ ಕಗ್ಗೆರೆ ಸ್ಲಂಡಾಗ್ ಮಿಲಿನೇರ್ ಬಗ್ಗೆ ಇನ್ನಷ್ಟು ಭಿನ್ನ ನೆಲೆಯ ನೋಟಗಳನ್ನು ಕೊಟ್ಟಿದ್ದಾರೆ. ಅಂದಹಾಗೆ ಸಾಂಗತ್ಯದ ಈ ಚರ್ಚೆ ಒಂದು ಚಿತ್ರದ ವಿವಿಧ ಆಯಾಮಗಳನ್ನು ಅನಾವರಣಗೊಳಿಸಲಿ. ಆ ಮೂಲಕ ಚಿತ್ರ ನೋಡುವ ಬಗೆಯನ್ನು ಹೆಚ್ಚು ವೈವಿಧ್ಯಮಯಗೊಳಿಸಬಹುದೆಂಬುದು ಸಾಂಗತ್ಯದ ಉದ್ದೇಶ.  ಅದಕ್ಕಾಗಿ ಇನ್ನಷ್ಟು ದಿನ ಈ ಸಂವಾದ ಚಾಲೂ ಇದೆ. ನಿಮ್ಮ ಬರಹಗಳನ್ನು ನಮಗೆ ಕಳುಹಿಸಬಹುದು.

*

ಸ್ಲಂಡಾಗ್ ಮಿಲಿಯನೇರ್ ಬಗ್ಗೆ ಇದುವರೆವಿಗೂ ಮೂಡಿಬಂದಿರುವ ಪ್ರತಿಕ್ರಿಯೆಗಳು, ಅನಿಸಿಕೆಗಳು ಆ ಸಿನೆಮಾದಲ್ಲಿ ಚರ್ಚಿಸಬೇಕಾದ ಬಹುತೇಕ ಮಜಲುಗಳ ಬಗ್ಗೆ ಈಗಾಗಲೇ ವಿಸ್ತೃತವಾಗಿ ಚರ್ಚೆ ಮಾಡಿ ಮುಗಿಸಿಬಿಟ್ಟಿವೆಯಾದರೂ, ನನ್ನ ಅಭಿಪ್ರಾಯ ಅಳಿದುಳಿದ ಕೆಲವೇ ಕೆಲವು ಸಂಗತಿಗಳ ಬಗ್ಗೆ.

ದೂರದ ಬೆಳಗಾವಿಯಲ್ಲಿ ನಡೆಯುತ್ತಿರುವ ಸದನದ ಕಲಾಪಗಳ ವರದಿಗಾರಿಕೆಯ ತಲೆಬಿಸಿಯ ನಡುವೆಯೂ ನಾನು ಬಿಟ್ಟು ಬಿಡದೆ ನೋಡಿದ ಸಿನಿಮಾ. ಹಾಗೆಂದ ಮಾತ್ರಕ್ಕೆ ಇದು ಅತ್ಯತ್ತಮ ಸಿನಿಮಾ ಅಥವಾ classic ಎಂದೇನೂ ಅಲ್ಲ. ಬದಲಿಗೆ Art for Art Sake  ಎನ್ನುವ ಥಿಯರಿಯ ನೆಲೆಯಲ್ಲಿ ಚಿತ್ರದ ಬಹುತೇಕ ಅಂಶಗಳು ಅದ್ಭುತವೆನಿಸುತ್ತವೆ.dev-and-freida

ನಾವು ಬೆಳೆದುಬಂದ ಮನಸ್ಥಿತಿಯೋ ಅಥವಾ ನಮ್ಮಗಳ ಗುಣವೇ ಅಂಥದೋ ತಿಳಿಯದು. ಗಲೀಜು,  ಅಥವಾ ನೇತ್ಯಾತ್ಮಕವಾಗಿ ನಮ್ಮ ದೇಶವನ್ನು ಕಲ್ಪಿಸಿಕೊಳ್ಳಲಾಗದ ಮನಸ್ಥಿತಿ. ಬಹುಷಃ ಈ ಹಿನ್ನೆಲೆಯಲ್ಲಿಯೇ ನಮ್ಮಲ್ಲಿ ಬಹುತೇಕರಿಗೆ ಸ್ಲಂಡಾಗ್ ಮಿಲಿಯನೇರ್ ಒಂದು ಭಾರತ ವಿರೋಧಿ ಚಿತ್ರ. ಆದರೆ ಅವನ್ನೆಲ್ಲ ಬದಿಗಿರಿಸಿ ಬರೀ ಸಿನೆಮಾ ಮಾಧ್ಯಮದ ಹಿನ್ನೆಲೆಯಲ್ಲಿ, ಸ್ಲಂಡಾಗ್ ಮಿಲಿಯನೇರ್ ನಾವು ನೋಡದ ಭಾರತವೊಂದರ ಸಚಿತ್ರ ವರದಿಯನ್ನು ಬಿಚ್ಚಿಡುತ್ತಾ ಸಾಗುತ್ತದೆ. 

ಚಿತ್ರದುದ್ದಕ್ಕೂ ಗಮನ ಸೆಳೆಯುವ ಅಂಶವೆಂದರೆ -ಜೀವನಾನುಭವ. ಯಾವೊಂದು ಶಾಲೆ-ಕಾಲೇಜು, ವಿಶ್ವವಿದ್ಯಾಲಯಗಳು ಕಲಿಸದ ಪಾಠವನ್ನು, ಮುಂಬೈನ ಸ್ಲಂ ಜಗತ್ತು ಜಮಾಲನಿಗೆ ಕಲಿಸುತ್ತದೆ. ಜೀವನದಲ್ಲಿ ಕಲಿತ ಪಾಠವನ್ನು ಕ್ಲುಪ್ತ ಸಮಯದಲ್ಲಿ ಬಳಸಿಕೊಂಡು, ಹಂತ-ಹಂತವಾಗಿ ಮೇಲೇರುವುದು ಚಿತ್ರದ ಪ್ರಮುಖ ಅಂಶ. ಉಳಿದೆಲ್ಲ ಸ್ಲಂ ಕುರಿತಾದ ಚಿತ್ರಗಳಲ್ಲಿ, ಬರೀ ಸ್ವೇಚ್ಛಾಚಾರವನ್ನೋ ಅಥವಾ ಕಿತ್ತು ತಿನ್ನುವ ಬಡತನವನ್ನೋ, ಅನಕ್ಷರತೆಯನ್ನು ವಿಜೃಂಭಿಸಿದರೆ, ಇಲ್ಲಿ ಸ್ಲಂ ಜಗತ್ತಿನ ಜೀವನಪಾಠವನ್ನೇ ಬಂಡವಾಳ ಮಾಡಿಕೊಂಡ ಚಾಯ್ವಾಲಾ, ಸುಂದರ ಬದುಕೊಂದನ್ನು ಕಟ್ಟಿಕೊಳ್ಳುವ ಪಾಠ, ನಮ್ಮ ಶಿಕ್ಷಣನೀತಿ ರೂಪಿಸುವ ನಾಯಕರಿಗೆ ಮಾದರಿ. ಅಲ್ಲದೇ ಇಂದಿನ ಸ್ಲಂ ಜಗತ್ತಿನೊಳಗೆ ಅಡಗಿರುವ ಅದೆಷ್ಟೋ ಜಮಾಲ್ನಂತ ಪ್ರತಿಭೆಗಳಿಗೆ ಸ್ಲಮ್ಡಾಗ್ ಮಿಲಿಯನೇರ್ ಮಾದರಿಯಾಗಿ, ಸಮಾಜದ ‘ದೇವರಿಗೆ’ ಸ್ಲಂ ಕೆಸರಿನ ‘ಕಮಲಗಳೂ’ ಅರ್ಹ ಎಂಬ ಸಂದೇಶವಂತೂ ಸ್ಫುಟವಾಗಿ ಬಿಂಬಿತವಾಗಿದೆ. ಬದುಕನ್ನ ಅರ್ಥೈಸಿಕೊಳ್ಳುವ ರೀತಿಯಲ್ಲಿ, ಜಮಾಲ ಟೈಟಾನಿಕ್ ಚಿತ್ರದ ಜಾಕ್ನಂತೆ. ಜೀವನದಲ್ಲಿ ಬಂದದನ್ನು ಬಂದಹಾಗೇ ತೆಗೆದುಕೊಂಡು, .. to me every day counts ಎನ್ನುವ ಶೈಲಿ, ಬೆರಗು ಹುಟ್ಟಿಸುವಂತದ್ದು.

ಬಹುಷಃ, ಒಂದು ದೃಷ್ಟಿಕೋನದಲ್ಲಿ, ಇಡೀ ಚಿತ್ರವನ್ನು ಬ್ರೆಜಿಲ್ ನ ಸಿಟಿ ಆಫ್ ಗಾಡ್ಸ್ ಮಾದರಿಯಲ್ಲೇ ತೆಗೆಯಲಾಗಿದ್ದರು, ಸ್ಲಂಡಾಗ್ ಮಿಲಿಯನೇರ್, ಸಿಟಿ ಆಫ್ ಗಾಡ್ಸ್ ತೋರಿಸಿದ ಸ್ಲಂಗಿಂತ, ಅದರೊಳಗಿನ ವಿಭಿನ್ನ ಜಗತ್ತೊಂದನ್ನು ಪರಿಚಯಿಸುತ್ತದೆ. ಜಮಾಲ್ ಮತ್ತು ಸಲೀಮ್ ಜೊತೆಗೆ ಲತಿಕಾ, ಒಂದೇ ಸ್ಲಂನ ಹಿನ್ನೆಲೆ ಹೊಂದಿದ್ದರು, ಮೂರು ಪಾತ್ರಗಳು ವಿಭಿನ್ನ ವ್ಯಕ್ತಿತ್ವಗಳ ಬೆನ್ನು ಹತ್ತಿ ಹೊರಟವರು. ಸಲೀಮನಿಗೆ ವರ್ತಮಾನದ ಚಿಂತೆಯಾದರೆ (ಪ್ರಾಕ್ಟಿಕಲ್), ಜಮಾಲನ ಚಿತ್ತ ಭವಿಷ್ಯದತ್ತ. ಇವೆರಡರ ನಡುವೆ ಅಸ್ಥಿತ್ವ ಮತ್ತು ಪ್ರೀತಿಗಾಗಿ ಹಾತೊರೆಯುವ ಪಾತ್ರ ಲತಿಕಾ. ಆದರೆ ಸಿಟಿ ಆಫ್ ಗಾಡ್ಸ್ ನ ಬಹುತೇಕ ಫ್ರೇಮ್ನಲ್ಲಿ ವಿಜೃಂಭಿಸುವುದು ಹಿಂಸೆ ಮತ್ತು ಕೌರ್ಯ. ಆ ಮಟ್ಟಿಗೆ ಸಮಾಧಾನದ ವಿಷಯವೆಂದರೆ, ನಮ್ಮ ಸ್ಲಂಗಳ ಕತ್ತಲ ಬದುಕನ್ನು ಹಲವು ಹಂತಗಳಲ್ಲಿ ತೋರಿಸಿ ಪ್ರಶಂಸೆ ಗಳಿಸಿದ ಸಲಾಂ ಬಾಂಬೆ ಅಥವಾ ಸಿಟಿ ಆಫ್ ಜಾಯ್ ಚಿತ್ರಗಳಿಗಿಂತ, ಸ್ಲಂಡಾಗ್ ಮಿಲಿಯನೇರ್ ಒಪ್ಪಬಹುದಾದ ಸ್ಲಂ ಪ್ರಪಂಚವನ್ನು ತೋರಿಸಿದೆ.

ಇತರೆ ಸ್ಲಂಗಳಲ್ಲಿ ಸಾಮಾನ್ಯವೆನಿಸಬಹುದಾದ ಡ್ರಗ್ಸ್, ಧೂಮಪಾನ, ಕುಡಿತ, ಲೈಂಗಿಕ ಶೋಷಣೆ, ಮೂಲಭೂತ ಹಕ್ಕುಗಳ ಉಲ್ಲಂಘನೆ ಮುಂಬೈನ ಸ್ಲಂಗಳಲ್ಲಿ ಇದೆಯಾದರೂ, ಅದ್ಯಾವುದು ಚಿತ್ರದಲ್ಲಿ ನೇರವಾಗಿ ಪ್ರಸ್ತಾಪವಾಗಿಲ್ಲ. ಆ ಮಟ್ಟಿಗೆ ಸ್ಲಮ್ಡಾಗ್ ಮಿಲಿಯನೇರ್ ನಮ್ಮ ರೀತಿ-ರಿವಾಜುಗಳನ್ನು ಸರಿ ರೀತಿಯಲ್ಲೇ ಅರ್ಥೈಸಿಕೊಂಡಿದೆ. ಏರ್ಪೋರ್ಟ್ ಪೋಲೀಸರು ಅಟ್ಟಿಸಿಕೊಂಡು ಬರುವಾಗ ತೋರಿಸುವ ಸ್ಲಂನ ಓಣಿಗಳ ಅಚ್ಚುಕಟ್ಟು, ರೈಲುಹಳಿಗಳ ಬದಿಯ ದೋಭಿಘಾಟ್ ನ ಸ್ವಚ್ಚ ಪರಿಸರ, ಕಿಷ್ಕಿಂಧೆಯಂತೆ ಕಂಡುಬಂದರೂ, ಕೊಳಕಿಲ್ಲದೆ ಅಚ್ಚುಕಟ್ಟಾಗಿ ಬಿಂಬಿತವಾಗಿವೆ.

ಇನ್ನು ಭಾರತ 21ನೇ ಶತಮಾನದ ಹೊಸ ಅರ್ಥಿಕ ಸೂಪರ್ ಪವರ್ ಎಂದು ಬಿಂಬಿತವಾಗುತ್ತಿರುವ ಸಮಯದಲ್ಲಿ, ಸ್ಲಂಡಾಗ್ ಮಿಲಿಯನೇರ್ ನ ಚಿತ್ರಣ, ಚಿತ್ರಕಥೆ ಭಾರತದ ಸೂಪರ್ ಪವರ್ ಇಮೇಜಿನ ಸಮಗ್ರ ವಿಶ್ಲೇಷಣೆ ಎನ್ನಬಹುದು. ಪಾಶ್ಚಿಮಾತ್ಯ ದೇಶಗಳು, ಕೊಂಚ ಕೌತುಕದಿಂದಲೇ ಪೌರಾತ್ಯ ದೇಶಗಳ ಮುನ್ನಡೆಯನ್ನು ಗಮನಿಸುತ್ತಿರುವ ಸಂದರ್ಭದಲ್ಲಿ, ಭಾರತೀಯರು ಬರೀ ಜೀವನಕ್ರಮದಿಂದಲೇ ಬದುಕಿನ ಸವಾಲುಗಳನ್ನು ಯಾರ ಹಂಗಿಲ್ಲದೇ ನಿಭಾಯಿಸಬಲ್ಲ ಚಾಣಾಕ್ಷರು ಮತ್ತು ತೀರ ನಿಕೃಷ್ಟವೆಂದು ತಳ್ಳಿಹಾಕುವ ಭಾರತದ ಸ್ಲಂಗಳಲ್ಲೂ ಪ್ರತಿಭೆಯ ಭಾರೀ ನಿಕ್ಷೇಪದ ಸದುಪಯೋಗವನ್ನು ಸೂಕ್ಷ್ಮವಾಗಿ ಚಿತ್ರ ಪ್ರಸ್ತಾಪಿಸಿದೆ.

ಇನ್ನು ಈ ರೀತಿ ತೆಗೆದ ಚಿತ್ರ ಎಂದೇ ಪರಿಗಣಿತವಾಗಿ ಪ್ರಶಸ್ತಿ ಗಳಿಸಿದೆ ಎಂಬ ವಿತಂಡವಾದ ಮಂಡಿಸುವವರು, ಸ್ವಲ್ಪ ಗಮನಿಸಬೇಕಾದ ಅಂಶವೆಂದರೆ, ಇನ್ಯಾವ ರೀತಿಯಲ್ಲಿ ಚಿತ್ರ ತೆಗೆಯಬೇಕಿತ್ತು ಅನ್ನುವುದು. ನಮ್ಮ ಕನ್ನಡ, ಹಿಂದಿ ಭಾಷಾ ಚಿತ್ರಗಳ ಚೆಲ್ಲು,ಚೆಲ್ಲು ಶೈಲಿಯ, ಅಸಂಗತ ಚಿತ್ರಕಥೆಗಳಿಗಿಂತ, ನೈಜತೆ ಮತ್ತು ಸಂದೇಶ ಹೊತ್ತ, ಸ್ಲಂಡಾಗ್ ಮಿಲಿಯನೇರ್ ಅದೆಷ್ಟೋ ಪಾಲು ಮೇಲು. ಟೀನಾ ಮೇಡಮ್ ಹೇಳಿದಂತೆ, ಬಣ್ಣದ ಬಳಕೆಯ ಬಗ್ಗೆ ಹೇಳುವುದಾದರೆ, ಅದೇ ಏಲಿಯಟ್ ನ The Waste Landನ ಮೊದಲ ಕೆಲ ಸಾಲುಗಳು ನೆನಪಿಗೆ ಬರುತ್ತದೆ. ಚಿತ್ರದ ಉದ್ದಕ್ಕೂ ಕಂಡುಬರುವ ಹಳದಿ ಬಣ್ಣವನ್ನು ಅಥೈಸಿಕೊಳ್ಳುವುದಾದರೆ, ಫ್ರಾಯ್ಡ್ನ ಥಿಯರಿ ಸಹಕಾರಿ. ಆತನ ಪ್ರಕಾರ ಹಳದಿ ಒಂದು ರೀತಿಯ ರೋಗಗ್ರಸ್ಥ ಅಥವಾ ಅಸ್ಪಷ್ಟ ಬದುಕಿನ, ನಿರೀಕ್ಷೆಯ ಸಂಕೇತ, ಅದೇರೀತಿ ಆ ಬಣ್ಣವನ್ನು ಬಳಸಿಕೊಳ್ಳಲಾಗಿದೆ.

ಸ್ಲಂ ಮಕ್ಕಳು ಬರೀ ಕಳ್ಳರು, ಪೋಲಿಗಳು, ಶುಚಿಯಲ್ಲದ ಜೀವನಶೈಲಿ ಹೊಂದಿರುವವರು ಎಂಬ ಬಹುತೇಕ ಭಾರತೀಯರ ಭಾವನೆಯನ್ನು ನಿರಚನೆ ಮಾಡುವ ಹೊಸ ಪ್ರಯೋಗ. But ಇದನ್ನು ಒಪ್ಪಿಕೊಂಡು ಅರಗಿಸಿಕೊಳ್ಳಬೇಕಷ್ಟೆ. ನೆನಪಿರಲಿ-ಸತ್ಯ ಯಾವತ್ತಿದ್ದರೂ ಕಹಿ. ಅದು ಪಾಶ್ಚಾತ್ಯ ನಿರ್ದೇಶಕನ ಆಲೋಚನೆಯಲ್ಲಿ ಬಂದಿದೆಯೊ ಅಥವಾ ನಮ್ಮದೇ ನಿರ್ದೇಶಕರ ಕಲ್ಪನೆಯೋ ಎಂಬುದಕ್ಕಿಂತ, ನಾವು ಕಂಡುಕೊಳ್ಳದ ಹೊಸತನವನ್ನು ತೋರಿಸಿಕೊಟ್ಟದಷ್ಟೇ ಮುಖ್ಯ. ಎಷ್ಟೋ ಭಾರತೀಯ ನಿರ್ದೇಶಕರ objectionable ಸಿನಿಮಾಗಳಿಗಿಂತ ಸಾವಿರ ಪಾಲು ಮೇಲು.

Written by saangatya

January 24, 2009 at 2:54 pm

ಪ್ರಶಸ್ತಿ ಬಂದದ್ದಕ್ಕೇ ಒಳ್ಳೆ ಚಿತ್ರವೇ ? ಇಷ್ಟೊಂದು ಚರ್ಚೆಯೇ ? -ವಿಕಾಸರ ಪ್ರಶ್ನೆ

with 8 comments

ವಿಕಾಸ್ ಹೆಗಡೆ ಅವರ ಅನಿಸಿಕೆ ಚಿತ್ರದ ಕುರಿತಲ್ಲ. ಆದರೆ ಚಿತ್ರದ ಕುರಿತು ನಡೆದಿರುವ ವಿಮರ್ಶೆ ಹಾಗೂ ಅದನ್ನು ಗ್ರಹಿಸುವ ವಿಭಿನ್ನ ನೆಲೆಗಳ ವ್ಯಾಖ್ಯಾನದ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳುವ ಮೂಲಕ ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಚರ್ಚೆಯ ಇನ್ನೊಂದು ಆಯಾಮವೆನ್ನುವ ಕಾರಣಕ್ಕೆ ಇಲ್ಲಿ ಕೊಡಲಾಗಿದೆ. ಇದು ವಿಕಾಸವಾದ.
*
ನಾವು ಭಾರತೀಯರೇ ಹೀಗೆ. ನಮ್ಮಲ್ಲಿರುವುದನ್ನು ಪಾಶ್ಚಾತ್ಯ ಜಗತ್ತು ಗುರುತಿಸಿದ ಮೇಲೆ ಅದರ ಬೆಲೆ ನಮಗೆ ತಿಳಿಯುವುದು. ಮತ್ತೊಂದೆಂದರೆ ಪಶ್ಚಿಮದಿಂದ ಗುರುತಿಸಲ್ಪಟ್ಟ ಪ್ರತಿಯೊಂದೂ ನಮಗೆ ಅದ್ಭುತವಾಗಿಬಿಡುವುದು. ಅದು ನಿಜವಾಗಿಯೂ ಯೋಗ್ಯವಾಗಿದೆಯಾ ಅಥವಾ ಪಶ್ಚಿಮವು ಅದನ್ನು ಗುರುತಿಸಲು ಬಳಸಿದ ಮಾನದಂಡವೇನು, ಅದೇ ಜಾಗತಿಕ ಮಟ್ಟದ ಮಾನದಂಡವಾದುದು, ಪರಮಶ್ರೇಷ್ಠವಾದುದಾದರೂ ಹೇಗೆ ಎಂದು ಕಿಂಚಿತ್ತೂ ಯೋಚಿಸದೇ ತಲೆ ಮೇಲೆ ಹೊತ್ತುಕೊಂಡು ಕುಣಿಯುವುದು ನಮ್ಮ ಜಾಯಮಾನ.
 
ಅದಕ್ಕೆ ಜೀವಂತ ಉದಾಹರಣೆ ಈಗಿನ ಸ್ಲಂಡಾಗ್ ಮಿಲೇನಿಯರ್ ಎಂಬ ಸಿನೆಮಾ. ಸ್ವಲ್ಪ ಸಮಯದ ಹಿಂದೆ ಚಾಲ್ತಿಗೆ ಬಂದ ಈ ಸಿನೆಮಾ ಈಗ ಸದ್ಯಕ್ಕೆ ಚರ್ಚೆಯ ವಿಷಯ. ಭಾರತದ ಬಡ ಹುಡುಗನೊಬ್ಬ ಟೀವಿ ಸ್ಪರ್ಧೆಯೊಂದರಲ್ಲಿ ಕೋಟಿ ಹಣ ಗೆಲ್ಲುವುದು ಇದರ ಕಥಾವಸ್ತುವಾದರೂ ಅದರಲ್ಲಿರುವ  ಭಾರತದ ನೆಗೆಟಿವ್ ಬದಿಯ ಅನಾವರಣವೇ ಮುಖ್ಯ ಅಂಶವಾಗುತ್ತದೆ.  ಅದೇ ಕೂಡ ಪರ ಹಾಗೂ ವಿರೋಧಗಳಿಗೆ ಕಾರಣವಾಗುತ್ತದೆ. ಮೊದಲಿಂದಲೂ ಕೂಡ  ಭಾರತದ ಬಡತನ, ಸ್ಲಂ ಜೀವನ ಮುಂತಾದ ಎಲ್ಲವನ್ನೂ ಈ ಚಿತ್ರಕ್ಕಿಂತಲೂ ಪರಿಣಾಮಕಾರಿಯಾಗಿ ತೋರಿಸುವ ಹಲವು ಚಿತ್ರಗಳು ಬಂದು ಹೋಗಿವೆ. ಆದರೆ ಅದಕ್ಯಾವ ವಿರೋಧವಾಗಲೀ ವ್ಯಕ್ತವಾಗಿರಲಿಲ್ಲ. ಕಾರಣ ಅವು ಇದ್ದದ್ದು ಭಾರತೀಯ ಭಾಷೆಗಳಲ್ಲಿ ಮತ್ತು ಅವಕ್ಕೆ ಬೇರೆ ದೇಶಗಳು ಕೊಡುವ ಪ್ರಶಸ್ತಿಗಳ್ಯಾವುವೂ ಬಂದಿರಲಿಲ್ಲ.
 
ಇಲ್ಲಿ ಸ್ಲಂಡಾಗ್ ಮಿಲೇನಿಯರ್ ಎಂಬ ಚಿತ್ರದ ಬಗ್ಗೆ ಚರ್ಚೆ ಮಾಡುವುದಕ್ಕಿಂತ ಚರ್ಚೆಯಾಗಬೇಕಾಗಿರುವುದು ಭಾರತೀಯರ ಮನಃಸ್ಥಿತಿಯ ಬಗ್ಗೆ. ಈ ಸಿನೆಮಾವನ್ನು ಸುಮ್ಮನೇ ಸಿನೆಮಾದ ರೀತಿಯಲ್ಲಿ ನೋಡಿದರೆ ಚೆನ್ನಾಗಿಯೇ ಇದೆ ಎಂಬುದು ನಿಜ.  ಇವತ್ತು ಸುಮಾರು ಬ್ಲಾಗ್ ಗಳೂ, ಪತ್ರಿಕೆಗಳೂ ಇದರ ಬಗ್ಗೆ ಬರೆಯುತ್ತಿವೆ. ಆದರೆ ವಿಷಯ ಏನೆಂದರೆ ಆ ಪ್ರಶಸ್ತಿ ಬರದೆ ಹೋಗಿದ್ದರೆ ಇದರ ವಿಷಯ ಇಷ್ಟು ಚರ್ಚಿತವಾಗುತ್ತಿರಲಿಲ್ಲ. ಭಾರತವನ್ನು ಕೀಳಾಗಿ ತೋರಿಸಲಾಗಿದೆ ಎಂದು ಯಾರೂ ವಿರೋಧಿಸುತ್ತಲೂ ಇರಲಿಲ್ಲ. ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ನಂತಹ ಪ್ರಶಸ್ತಿಗಳಂತಹ ಪ್ರಶಸ್ತಿಗಳು ಬಂದಿವೆ ಎಂದಾಕ್ಷಣ ಆ ಸಿನೆಮಾದಲ್ಲಿ ಇಲ್ಲದ ಅದ್ಭುತಗಳು ಕೂಡ ಕಾಣಲು ಶುರುವಾಗಿಬಿಡುತ್ತವೆ. ಅದರಲ್ಲಿರುವ ಪಾತ್ರಗಳಿಗೆ ಅಧ್ಬುತ ಗುಣಗಳನ್ನು ನಾವು ನಾವಾಗೇ ಆರೋಪಿಸುತ್ತಾ ಹೋಗಿಬಿಡುತ್ತೇವೆ. ನಮಗೆ ಒಂದೊಂದು ಪಾತ್ರಗಳೂ ಅಪ್ಯಾಯಮಾನವಾಗಿ ಕಾಣಲು ಶುರುವಾಗಿಬಿಡುತ್ತವೆ. ಅದಕ್ಕೆ ಪ್ರಶಸ್ತಿ ಎಂಬ ಪೂರ್ವಗ್ರಹವು ಕಾರಣವಾಗಿರುತ್ತದೆ.  ಈ ಸ್ಲಂಡಾಗ್ ವಿಷಯದಲ್ಲೂ ಹಾಗೇ ಆಗಿದೆ. ಅನಿಲ್ ಕಪೂರನ ಪಾತ್ರ ನಮ್ಮಲ್ಲಿರುವ ತಿಕ್ಕಲುತನದ ಪ್ರತಿನಿಧಿ ಅಂತ ಒಬ್ಬರಿಗನಿಸಿದರೆ, ಭಾರತದ ಬದುಕಿನ ನಿಜವಾದ ಚಿತ್ರಣವಿದು ಅಂತ ಇನ್ನೊಬ್ಬರಿಗನಿಸಿದೆ. ಪಾಪ , ಆ  ನಿರ್ದೇಶಕ ಕೂಡ ಆ ರೀತಿ ಅಂದುಕೊಂಡಿರುತ್ತಾನೋ ಗೊತ್ತಿಲ್ಲ.
 
ಪತ್ರಿಕೆಗಳು, ಮಾಧ್ಯಮಗಳೂ ಕೂಡ ಇದಕ್ಕೆ ಪ್ರಶಸ್ತಿ ಬಂದಿದೆ ಎಂದಾಕ್ಷಣದಿಂದ ಹೊಗಳಿ ಹೊಗಳಿ ಬರೆದು ಧನ್ಯರಾಗುತ್ತಿದ್ದಾರೆಯೇ ಹೊರತು ಆಸ್ಕರ್ ಪ್ರಶಸ್ತಿಗಾಗಲೀ, ಗೋಲ್ಡನ್ ಗ್ಲೋಬ್ ಗಾಗಲೀ ಮಾನದಂಡವೇನು, ಅದು ನಿಜವಾಗಿಯೂ ಜಾಗತಿಕ ಮಟ್ಟದ ಶ್ರೇಷ್ಠ ಪ್ರಶಸ್ತಿಗಳಾ ಎಂದು ತಲೆಕೆಡಿಸಿಕೊಂಡಿಲ್ಲ. ಒಟ್ಟಿನಲ್ಲಿ ಎಲ್ಲರಿಗೂ ಪಶ್ಚಿಮವೆಂಬ ಶಂಖದಿಂದ ಬಂದದ್ದೇ ತೀರ್ಥವಾಗಿಬಿಟ್ಟಿದೆ!
 
ಈ ಚಿತ್ರವನ್ನು ಭಾರತವನ್ನು ಪ್ರತಿನಿಧಿಸುವ ಚಿತ್ರ ಎಂದು ನೋಡಬೇಕಾದು ಹೇಗೆ ಅಗತ್ಯವಿಲ್ಲವೋ ಹಾಗೆಯೇ ಗೋಲ್ಡನ್ ಗ್ಲೋಬ್ ಬಂದ ಮಾತ್ರಕ್ಕೆ ಇದು ‘ಅದ್ಭುತ’ ಚಿತ್ರವೆನಿಸಿಕೊಳ್ಳಬೇಕಾದ ಅಗತ್ಯವೂ ಇಲ್ಲ. ಈ ಪ್ರಶಸ್ತಿ, ಸನ್ಮಾನಗಳಲ್ಲೂ ಕೂಡ ಮಾರ್ಕೆಟಿಂಗ್ ತಂತ್ರಗಳ ಪಾಲಿದೆ ಎಂದು ತಿಳಿದುಕೊಂಡಾಗ ಮಾತ್ರ ಭಾರತದ ಪ್ರತಿಯೊಂದು ಸ್ಲಂಡಾಗೂ ಕೂಡ ಮಿಲೇನಿಯರ್ ಆದಂತೆ. 

ಟೀನಾ ಹೇಳ್ತಾರೆ- ಅವರ್ ನೋಡ್ದಂಗೆ ಸ್ಲಂಡಾಗ್ ಪಿಚ್ಚರ್ !

with 18 comments

ನಮ್ಮ ಸಂವಾದವನ್ನು ಈಗ ಬೆಳೆಸಿರುವವರು ಟೀನಾ. ತಮ್ಮ ಕಣ್ಣಕೋಟೆಯ ಕಿಟಕಿಯಿಂದಲೇ ಸ್ಲಂಡಾಗ್ ಮಿಲಿನೇರ್ ಚಿತ್ರವನ್ನು ದೃಷ್ಟಿಸಿ, ಅದನ್ನು ಇಲ್ಲಿ ವಿಶ್ಲೇಷಿಸಿದ್ದಾರೆ. ಅವರ ನೋಟ ಈ ಬರಹ ರೂಪದಲ್ಲಿದೆ. ಚರ್ಚೆ ಮುಂದುವರಿಸುವವರು ತಮ್ಮ ಬರಹಗಳನ್ನು www.saangatya@gmail.com ಗೆ ಕಳಿಸಿ.

*

I Fly Like Paper Get High Like Planes

If You Catch Me At The Border I Got Visas In My Name

If You Come Around Here I Make ‘ Em All Day

I Get One Down In A Second If You Wait..

..”ಸ್ಲಮ್‌ಡಾಗ್ ಮಿಲಿಯನೇರ್ ” ನ ಹಾಡುಗಳಲ್ಲೊಂದಾದ ‘ಪೇಪರ್ ಪ್ಲೇನ್ಸ್’ ನ ಸಾಲುಗಳಿವು. ಪೂರ್ತಾ ಎಂಟು ಬಾರಿ (ಹಾ!! ನನ್ನ ಸಿನಿಪ್ರೇಮವೆ!!) ‘ಸ್ಲಮ್‌ಡಾಗ್ ಮಿಲಿಯನೇರ್ ’ ಅನ್ನು ನೋಡಿದಾಗ ಪುನಾ ನನಗೆ ಎಲಿಯಟ್ ನ “ದ ವೇಸ್ಟ್‌ಲ್ಯಾಂಡ್” ಕವಿತೆಯ ಕೊನೆಯಲ್ಲಿ ಬರುವ ‘ದತ್ತ, ದಮ್ಯತ, ದಯಧ್ವಂ’ ಕಿವಿಯಲ್ಲಿ ರಿಂಗಣಿಸಿದ ಹಾಗನಿಸಿತು. ಹೈಸ್ಕೂಲಿನಲ್ಲಿ ಕದ್ದುನೋಡಿದ ಮೀರಾ ನಾಯರರ ‘ಸಲಾಮ್ ಬಾಂಬೆ’ ಮನಸ್ಸಿನಲ್ಲಿ ಸುಳಿದುಹೋಯಿತು. ನನಗೇನೆ ಗೊತ್ತಿಲ್ಲದಂತೆ ಕೈ ಯಾಂತ್ರಿಕವಾಗಿ ನೋಟ್ಸು ಮಾಡುತ್ತ ಹೋಗುತ್ತಿತ್ತು. ಹೇಗೆ ಇಷ್ಟೊಂದನ್ನ ಹಿಡಿದಿಡಲಿ ಪದಗಳಲ್ಲಿ ಅಂತ ಯೋಚಿಸುತ್ತ ಕೂತೆ. ಎಲ್ಲ ಬ್ಲಾಗೀ ಸ್ನೇಹಿತರು ಈ ಪಿಚ್ಚರಿನ ಬಗ್ಗೆ ತಮ್ಮದೆ ಆದ ರೀತಿಯಲ್ಲಿ ಅದ್ಭುತ ವಿಶ್ಲೇಷಣೆಗಳನ್ನ ಮಾಡಿದಾರೆ. ನಾನು ಕೂಡ ಎಲ್ಲಿಂದಲಾದರು ಶುರುಹಚ್ಚಲೆಬೇಕು. ಈ ಹಲ್ಲುನೋವು ಗವಾಕ್ಷಿಯಿಂದ ಮರಳಿದ ಪಿಶಾಚಿಯ ಥರ ಕಾಡುತ್ತಿದೆ.

ನಾನು ಇಡೀ ಪಿಚ್ಚರು ನೋಡಿದ್ದು ಅದರ ಸೆಂಟ್ರಲ್ ಥೀಮು ಎನಿಸುವ ‘ಆಯ್ಕೆ’ಯ ಮೂಲಕ. ಇಡೀ ಪಿಚ್ಚರಿನಲ್ಲಿ ಆಯ್ಕೆ ಬಹಳ ಮುಖ್ಯ ಪಾತ್ರವನ್ನ ವಹಿಸಿದೆ. ಪಿಚ್ಚರಿನುದ್ದಕ್ಕೂ ಜಮಾಲ್ ಭಾಗವಹಿಸುವ ಆಯ್ಕೆಗಳ ಆಟವಾದ ಗೇಮ್ ಶೋ ‘ಹೂ ವಾಂಟ್ಸ್ ಟು ಬಿ ಅ ಮಿಲಿಯನೇರ್ ‘ ರಾರಾಜಿಸುತ್ತದೆ. ಜಮಾಲ್ ಮಲಿಕನ ಆಯ್ಕೆಗಳು ಹಾಗೂ ಸಲೀಮನ ಆಯ್ಕೆಗಳು ಅವರನ್ನ ಬೇರೆಬೇರೆ ದಾರಿಗಳೆಡೆ ಕರೆದೊಯ್ಯುತ್ತವೆ. ಇಲ್ಲಿ ಅಣ್ಣತಮ್ಮಂದಿರು ತಮ್ಮ ಆಯ್ಕೆಗಳಿಂದಾಗಿ ತಮ್ಮ ವಿಧಿ ಕಂಡುಕೊಳ್ಳುವುದು ಹಿಂದೀ ಸಿನೆಮಾದ ಮಹಾ ‘ಕ್ಲೀಷೆ’ ಆದರು ನಮಗೆ ಹಾಗನ್ನಿಸದ ಹಾಗೆ ಕಥೆ ಸಾಗುತ್ತದೆ. ಎಲ್ಲ ಹಣೆಬರಹ, ವಿಧಿಲಿಖಿತ ಅನ್ನಿಸಿದರು ಗ್ರೀಕ್ ನಾಟಕಗಳಲ್ಲಿ ಬರುವ ಹಾಗೆ ಸಲೀಮ ಹಾಗೂ ಜಮಾಲರ ಆಯ್ಕೆಗಳು ಅವರ ಭವಿಷ್ಯ ನಿರ್ಧರಿಸುತ್ತವೆ. ಸಲೀಮ ಮಾಮನ್‌ನನ್ನು ಕೊಂದು ಲತಿಕಾಳನ್ನು ಪಾರುಮಾಡಿದ ರಾತ್ರಿಯೇ ಭೂಗತ ಪ್ರಪಂಚವನ್ನು ಆಯ್ದುಕೊಂಡರೆ, ಜಮಾಲ್ ಬಾಲ್ಯದಲ್ಲಿಯೆ ಲತಿಕಾಳನ್ನು ಆಯ್ಕೆಮಾಡಿಕೊಂಡು ಅದರ ಪರಿಣಾಮಗಳನ್ನು ಅನುಭೋಗಿಸುತ್ತಾನೆ. ಸಲೀಮನ ಅನುಭವಗಳು ಬದುಕಿನ ಮುಳ್ಳುಹಾದಿಯ ಮೇಲೆ ಹಾದುಬಂದವು, ಜಮಾಲನವು ಸಲೀಮನ ಮೂಲಕ ಹಾದುಬಂದು ಕಂಡುಕೊಂಡಂಥವು. ಜಮಾಲನ ಆಯ್ಕೆಯ ಹಿಂದೆ ಭೋಳೆತನ, ಭಯ, ಅಸಹಾಯಕತೆಗಳಿದ್ದರೆ ಸಲೀಮನ ಆಯ್ಕೆಗಳ ಹಿಂದೆ ಬದುಕುವ ಆಸೆ, ಕೋಪ, ಸುಪೀರಿಯಾರಿಟಿ ಕಾಂಪ್ಲೆಕ್ಸ್ ಅನ್ನುತ್ತೇವಲ್ಲ, ಅದು ಇದೆ. ಭಿಕ್ಷೆಬೇಡಲು ಲತಿಕಾಳ ಸುಪರ್ದಿಗೆ ಮಗುವೊಂದನ್ನು ಬಲವಂತವಾಗಿ ಒಪ್ಪಿಸುವ ಸಲೀಮ ಹೇಳುತ್ತಾನೆ “ರೋತೇ ಹುಯೆ ಬಚ್ಚೇ, ಟ್ರಿಪ್ಪಲ್ ದಾಮ್ !!”

ಜಮಾಲನ ಹಾದಿ ನೇರವಾದದ್ದು. ಆತನಿಗೆ ಕಾಣುವದು ಬರೆ ಸಲೀಮ ಇಲ್ಲವೇ ಲತಿಕಾ. ಆದರೆ ಸಲೀಮನ ಪ್ರಪಂಚ ಯಾರ ಸುತ್ತಲೂ ಸುತ್ತುವುದಿಲ್ಲ. “ಇಂಡಿಯಾ ಈಸ್ ಅಟ್ ದ ಸೆಂಟರ್ ಆಫ್ ದಿ ವರ್ಲ್ಡ್ ಅಂಡ್ ಐ ಆಂ ಅಟ್ ದಿ ಸೆಂಟರ್ ಆಫ್ ದಿಸ್ ಸೆಂಟರ್ “ಎನ್ನುವ ಆತನ ಹಸಿವು ಅಗಾಧವಾದದ್ದು. ಆತನಿಗೆ ‘ಪವರ್ ‘ ಬೇಕು. ಜಮಾಲನ ಮೇಲಿನ ಪ್ರೀತಿ, ದ್ವೇಷಗಳು ಕೂಡ ಆತನನ್ನು ನಮಗೆ ಇನ್ನಷ್ಟು ಹತ್ತಿರ ಅನ್ನಿಸುವ ಹಾಗೆ ಮಾಡುತ್ತವೆ. ಜಮಾಲನ ಅಮಿತಾಭ್ ಬಚ್ಚನನ ಪ್ರೇಮದ ಬಗ್ಗೆ ಗೊತ್ತಿರುವ ಸಲೀಮ ಅಮಿತಾಭನ ಹೆಲಿಕಾಪ್ಟರು ಬಂದಾಗ ಆತನನ್ನು ಟಾಯ್ಲೆಟ್ಟಿನಲ್ಲಿ ಕೂಡಿಹಾಕುತ್ತಾನೆ. ಜಮಾಲ್ ಕೊನೆಗೂ ಅಮಿತಾಭನ ಆಟೋಗ್ರಾಫು ಪಡೆದಾಗ ಅದನ್ನು ಮಾರಿಬಿಡುತ್ತಾನೆ. ಗಲಭೆಯಲ್ಲಿ ತಮ್ಮಂತೆಯ ನಿರ್ಗತಿಕಳಾದ ಲತಿಕಾಳನ್ನು ಜತೆಗಿರಿಸಿಕೊಳ್ಳಲು ಆತ ಒಪ್ಪುವದಿಲ್ಲ. ಕಣ್ಣುಕೀಳುವ ಮಾಮನ್‌ನ ಗ್ಯಾಂಗಿನಿಂದ ತಪ್ಪಿಸಿಕೊಳ್ಳುವಾಗ ತಮ್ಮೊಂದಿಗೆ ಟ್ರೈನು ಹತ್ತಲಿರುವ ಲತಿಕಾಳ ಕೈ ಬೇಕೆಂದೇ ಬಿಟ್ಟುಬಿಡುವ ಸಲೀಮ ಆಗ್ರಾದಲ್ಲಿ ಜಮಾಲ್ ಗೈಡ್ ಆಗಿರುವ ಅಮೆರಿಕನ್ ಟೂರಿಸ್ಟರ ಕಾರನ್ನು ಲೂಟಿಮಾಡಿ ಜಮಾಲ್ ಏಟು ತಿನ್ನುವಂತೆ ಮಾಡುತ್ತಾನೆ.
ವಾಪಾಸು ಮುಂಬಯಿಗೆ ಲತಿಕಾಳಿಗೋಸ್ಕರ ಜಮಾಲನೊಡನೆ ಬಂದರೂ ಪುನಹ ಲತಿಕಾಳನ್ನು ಜಮಾಲನಿಂದ ದೂರ ಮಾಡುತ್ತಾನೆ. ಜಮಾಲನನ್ನು ರೂಮಿನಿಂದ ಹೊರನೂಕಿ ಲತಿಕಾಳನ್ನು ಕೂಡುವ, ಆಕೆಯನ್ನು ಡಾನ್ ಜಾವೇದನಿಗೆ ಒಪ್ಪಿಸುವ ಜಮಾಲನ ವಿಕೃತಿ ಬೇಸರ ಹುಟ್ಟಿಸಿದರೆ, ಜಮಾಲನನ್ನು ಗಲಭೆಯ ವೇಳೆಯಲ್ಲಿ ಮತ್ತು ಕಣ್ಣುಕೀಳುವವರಿಂದ ಪಾರುಮಾಡುವ, ಲತಿಕಾಳನ್ನು ಕೊನೆಗೆ ಜಮಾಲನ ಬಳಿ ಕಳುಹಿಸುವ, ಕೊನೆಗೆ ಅವರಿಬ್ಬರಿಗಾಗಿ ತನ್ನ ಪ್ರಾಣವನ್ನೆ ಪಣಕ್ಕೊಡ್ಡುವ ಸಲೀಮನ ಆರ್ದ್ರತೆ ಆಶ್ಚರ್ಯ ಹುಟ್ಟಿಸುತ್ತದೆ. ಆತನ ’survival instincts’ ಆತನ ಹಸಿವಿನಿಂದ ಹುಟ್ಟಿರುವಂಥದು. ಜಮಾಲ್ ಸಲೀಮನಿಲ್ಲದೆ ಪೂರ್ಣವಾಗಲಾರ. ಸಲೀಮನಿಗೆ ಜಮಾಲ್ ಬೇಕಿಲ್ಲ, ಆದರು ಆತ ಜಮಾಲನ ರಕ್ಷಣೆಯ ಪಣ ತೊಟ್ಟವನಂತೆ ಆಡುವ. ಜಮಾಲ್ ತನ್ನ ವಿಧಿಲಿಖಿತವೆಂಬಂತೆ ಮಿಲಿಯಾಧಿಪತಿಯಾದರೆ ಸಲೀಮ ಕೊನೆಯುಸಿರೆಳೆಯುವದೂ ನೋಟುಗಳ ನಡುವೆಯೆ. ನನಗೆ ಪಿಚ್ಚರಿನಲ್ಲಿ ಅತಿ ಪ್ರಿಯವಾದ ಪಾತ್ರ ಸಲೀಮನದು.

ಪಿಚ್ಚರಿನುದ್ದಕ್ಕೂ ಜಮಾಲನ ಉತ್ತರಗಳು ಹಾಗೂ ಆತನ ಅನುಭವಗಳಿಗೆ ಕಲ್ಪಿಸಿರುವ ಸಂಪರ್ಕಗಳು ಅದ್ಭುತವಾಗಿ ಕೆಲಸ ಮಾಡಿವೆ. ನೋಡುತ್ತ ನೋಡುತ್ತ ನನಗೆ ಅರವಿಂದ ಅಡಿಗರ ‘ದಿ ವ್ಹೈಟ್‌ಟೈಗರ್ ’ ನ ಹರಿವಿಗೂ ‘ಸ್ಲಮ್‌ಡಾಗ್…’ ಚಿತ್ರಕಥೆಯ ಹರಿವಿಗೂ ಒಂದೇ ರೀತಿಯ ಕ್ವಾಲಿಟಿ ಇದೆ ಅನ್ನಿಸುತ್ತ ಹೋಯಿತು. ಎರಡು ಕಥೆಗಳಿಗೂ ಭಾರತದ ಕರಾಳ ಮುಖವನ್ನು ತೋರಿ ಪ್ರಶಸ್ತಿ ಗೆದ್ದುಕೊಂಡ ಆರೋಪ. ಎರಡರಲ್ಲೂ ನಾಯಕರು ಕತ್ತಲೆಯಲ್ಲಿ ಹುಟ್ಟಿದವರು. ಜಮಾಲ್ ತನ್ನ ಕಥೆಯನ್ನ ಪೊಲೀಸಿನವನಿಗೆ ಹೇಳಿದರೆ ಬಲ್ರಾಂ ಹಲ್ವಾಯಿ ತನ್ನ ಕಥೆಯನ್ನ ಚೀನಾದೇಶದ ಪ್ರಮುಖಪ್ರಜೆಗೆ ಹೇಳುವ. ಇಬ್ಬರೂ ತಮ್ಮದೇ ರೀತಿಯಲ್ಲಿ ವಿಜಯಿಗಳು. ಎರಡೂ ಕಥೆಗಳಲ್ಲಿ ಹೆಸರಿನ ಸುತ್ತ ವ್ಯಂಗ್ಯ ಕಾಣಬರುತ್ತದೆ. ‘ದಿ ವ್ಹೈಟ್‌ ಟೈಗರ್ ‘ನ ಬಲರಾಮ್ ತಾನು ಕೊಂದ ಯಜಮಾನ ಅಶೋಕನ ಹೆಸರನ್ನು ಇಟ್ಟುಕೊಂಡು ಹೊಸಹುಟ್ಟು ಪಡೆಯುತ್ತಾನೆ. ‘ಸ್ಲಂ ‌ಡಾಗ್..’ನಲ್ಲಿ ಅಂಧಕವಿ ಸೂರದಾಸನ ‘ದರ್ಶನ್ ದೋ ಘನಶ್ಯಾಮ್ ಆಜ್ ಮೆರಿ ಅಖಿಯಾಂ ಪ್ಯಾಸೀರೇ’ ಎಂಬ ಹಾಡನ್ನು ಸುಶ್ರಾವ್ಯವಾಗಿ ಹಾಡುವ ಹುಡುಗ ಅರವಿಂದನ (ಹೆಸರಿನ ಅರ್ಥ ಕಮಲ – ಕಣ್ಣನ್ನು ಬಣ್ಣಿಸಲು ಬಳಸುವ ಇಮೇಜು) ಕಣ್ಣನ್ನು ಆಸಿಡ್ ಹಾಕಿ ಸುಡಲಾಗುತ್ತದೆ. ಜಮಾಲನನ್ನು ಅಷ್ಟು ವರುಷಗಳ ಮೇಲೂ ಗುರುತು ಹಿಡಿವ ಅರವಿಂದ ಆತನಿಗೆ ಇನ್ನು ನಾನು ನಿನ್ನ ಹೆಣ ಹೋಗುವಾಗ್ಲೇ ಹಾಡೋದು!! ಅನ್ನುತ್ತಾನೆ.

ಇನ್ನು ನಾನು ಯಾವುದೇ ಪಿಚ್ಚರು ನೊಡಿದರೂ ಮೊದಲು ಗಮನಿಸುವ ವಿಷಯ ಅಂದರೆ ಬಣ್ಣಗಳ ಬಳಕೆ. ಇಡೀ ಪಿಚ್ಚರಿನಲ್ಲಿ ಹಳದಿ ಬಣ್ಣದ ಬಳಕೆ ಹೇರಳ. ತಮಾಷೆ ಅಂದರೆ ಹೆಚ್ಚೂ ಕಡಿಮೆ ಇದರ ಜತೆಗೇ ರಿಲೀಸ್ ಆದ ಇನ್ನೊಂದು ಪಿಚ್ಚರು ‘ರಬ್ ನೆ ಬನಾದೀ ಜೋಡಿ’ಯಲ್ಲೂ ಕೂಡ ಹಳದಿ ಬಣ್ಣದ ಬಳಕೆ ಆಗಿರುವುದು. ಅಲ್ಲಿ ಹಳದಿ ಬಣ್ಣವನ್ನು ಟ್ರಾಫಿಕ್ ಸಿಗ್ನಲಿನ ಹಳದಿ ಬಣ್ಣ ಸೂಚಿಸುವ ಕಾಯುವಿಕೆ ಮತ್ತು ತಾಳ್ಮೆಯನ್ನು ಬಿಂಬಿಸಲು ಬಳಸಲಾಗಿದೆ ಅನ್ನಿಸುತ್ತದೆ. ‘ರಬ್‌ನೆ ಬನಾದೀ ಜೋಡಿ’ಯ ಮೊದಲನೆ ದೃಶ್ಯದಲ್ಲೇ ನಾಯಕ ನಾಯಕಿ ರೈಲಿನಿಂದ ಇಳಿದಾಗ ನಾಯಕ ಹಳದಿ ಬಣ್ಣದ ಸೂಟ್‌ಕೇಸು ಹಿಡಿದಿರುತ್ತಾನೆ. ಅಲ್ಲಿಂದಾಚೆಗೆ ಆತನ ಊಟದ ಬಾಕ್ಸು, ಕಾರು, ಉಡುಗೆ ಎಲ್ಲದರಲ್ಲೂ ಹಳದಿಯನ್ನು ಜಾಣ್ಮೆಯಿಂದ ಬಳಸಲಾಗಿದೆ. ‘ಸ್ಲಮ್‌ಡಾಗ್..’ನಲ್ಲಿ ಹಳದಿಯಷ್ಟೇ ಅಲ್ಲ, ಅದರ ವಿವಿಧ ಶೇಡುಗಳನ್ನು ಕೂಡ ಸುಂದರವಾಗಿ ಬಳಸಲಾಗಿದೆ. ಇಡೀ ಪಿಚ್ಚರು ಹಳದಿಯಲ್ಲಿ ಸ್ನಾನ ಮಾಡಿ ಎದ್ದಿದೆಯೇನೊ ಎಂಬಂತೆ ಭಾಸವಾಗುತ್ತದೆ. ಸ್ಲಮ್ಮಿನ ರಾಚುವ ಹಳದಿ ಬಣ್ಣ, ಗಲಭೆಗಳ ಬೆಂಕಿಯ ಹಳದಿ ರಂಗು, ಮಕ್ಕಳನ್ನು ಪುಸಲಾಯಿಸಿ ಭಿಕ್ಷಾಟನೆಗೆ ಕರೆದೊಯ್ಯುವ ಮಾಮನನ ಹಳದಿ ವ್ಯಾನು, ಜಮಾಲ್ ಲತಿಕಾಳನ್ನು ಹರೆಯದಲ್ಲಿ ಕಂಡುಹಿಡಿವ ವೇಶ್ಯಾವಾಟಿಕೆಯ ಜಾಗ ಪೀಲಾ ಸ್ಟ್ರೀಟ್, ಜಮಾಲನನ್ನು ಕಾಣಲು ರೇಲ್ವೇಸ್ಟೇಶನ್ನಿಗೆ ಬರುವ ಲತಿಕಾ ತೊಟ್ಟಿರುವ ಹಳದಿ ಕಮೀಜು, ಕೊನೆಯ ಪ್ರಶ್ನೆ ಉತ್ತರಿಸುವ ಜಮಾಲನನ್ನು ಕಾಣಲು ಧಾವಿಸುವ ಲತಿಕಾಳ ಹಳದಿ ಶಾಲು, ಜೈಹೋ! ಹಾಡಿನಲ್ಲಿ ನರ್ತಿಸುವ ಲತಿಕಾಳ ಮಗುವಿನ ಪಾತ್ರಧಾರಿ ತೊಟ್ಟಿರುವ ಹಳದಿ ಅಂಗಿ.. ಇಲ್ಲಿ ಹಳದಿ ಬಣ್ಣ ಕಾಯುವಿಕೆಯ ಜತೆಗೇ ಭಾರತದ ಬಣ್ಣವಾಗಿಯೂ ಕೂಡ ಕೆಲಸಮಾಡುತ್ತದೆ.

ಕೊನೆಯದಾಗಿ ಪಿಚ್ಚರಿನ ಸುತ್ತಲ ಗಲಾಟೆ. ಅಮಿತಾಭ್ ಬಚ್ಚನರಿಗೆ ಪಿಚ್ಚರು ಹಿಡಿಸಿಲ್ಲ. ಬಿಡಿ, ಅವರಿಗೆ ಇಷ್ಟವಾಗಿದ್ದೇ ನಮಗೂ ಸಲ್ಲಬೇಕೂ ಅಂತಿಲ್ಲವಲ್ಲ!! ‘ಕೌನ್ ಬನೇಗಾ ಕರೋಡ್ಪತಿ’ ಯ ಅಮಿತಾಭ್ ಮ್ಯಾನರಿಸಮ್ಮನ್ನು ಅನಿಲ್ ಕಪೂರ್ ಸಖತ್ತಾಗಿ ಅನುಕರಿಸಿದ್ದಾರೆ. ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು ಅಂತ ಕೇಳಿದೀರ? ರೆಹಮಾನರ ಸಂಗೀತ ಅಷ್ಟಕ್ಕಷ್ಟೆ ಅನ್ನಿಸೋ ಹಾಗಿದೆ ಅನ್ನೋದು ಎರಡನೇ ಅಪವಾದ. ಸಂಗೀತ ಇಲ್ಲಿ ಸ್ವರ್ಗಸದೃಶವಾಗಿರಬೇಕಾದ ಅವಶ್ಯವೇನೂ ಇರಲಿಲ್ಲ. ಇಲ್ಲಿ ರೆಹಮಾನ್ ಬಳಸಿರೋದು ಪಿಚ್ಚರಿನ ಜತೆಗೆ ಬ್ಲೆಂಡ್ ಆಗುವಂಥ ಪಾಪ್ಯುಲರ್ ಸಂಗೀತವನ್ನ. ಇಲ್ಲಿ ‘ರೋಜಾ’ಥರದ್ದೇನನ್ನೂ ನಾವು ಬಯಸಲಿಕ್ಕಾಗದು. ವೇಶ್ಯಾವಾಟಿಕೆಯ ಜಾಗದಲ್ಲಿ ‘ರಿಗರಿಗ ರಿಂಗಾ’ ಸರಿಯೆನ್ನಿಸಬಹುದು, ದಿಲ್ ಸೇ ರೇ.. ಅಲ್ಲ!! ಮೂರನೇದು ಭಾರತದ ‘ಕೆಟ್ಟ’ ಚಿತ್ರಣವನ್ನು ಅವಾರ್ಡಿಗಾಗಿ ಬಳಸಿಕೊಳ್ಳಲಾಗಿದೆ ಅಂತ. ಅದಕ್ಯಾಕೆ ಬೇಸ್ರ? ಮತ್ತೆ ನಮ್ಮ ಫೈಸ್ಟಾರ್ ಹೋಟ್ಲುಗಳು, ಮಾಲುಗಳು, ಮಲ್ಟಿಪ್ಲೆಕ್ಸು, ಸಾಫ್ಟ್ವೇರ್ ಪಾರ್ಕುಗಳು, ಕಾಫಿಡೇ ಔಟ್ಲೆಟ್ಟುಗಳನ್ನೆ ತೋರಿಸಿ ಒಂದು ಸೂಪರ್ ಪಿಚ್ಚರು ಮಾಡಪ್ಪಾ ಅಂತ ನಿರ್ದೇಶಕ ಡ್ಯಾನಿ ಬಾಯ್ಲ್‌ಗೆ ಅಪೀಲು ಮಾಡೋಣ. ‘ಒಳ್ಳೆ’ ಭಾರತವನ್ನೇ ತೋರಿಸಿ ಅವಾರ್ಡು ಗಿಟ್ಟಿಸೋಣ. ಸರಿಯೆ? ಸದ್ಯಕ್ಕೆ ಜಮಾಲ್, ಸಲೀಮರಂಥ ಸಾವಿರಾರು ಸ್ಲಂ-ಮಕ್ಕಳ ಅಳಿವು-ಉಳಿವುಗಳ ಎಡೆಬಿಡದ ಹೋರಾಟಕ್ಕೆ ತಲೆಬಾಗಿ ಬರೆದಂತಿರುವ ‘ಪೇಪರ್ ಪ್ಲೇನ್ಸ್ ‘ ನ ಮತ್ತೂ ಕೆಲವು ಸಾಲುಗಳು, ನಿಮಗಾಗಿ.

Sometimes I Think Sitting On Trains

Every Stop I Get To I’ m Clocking That Game

Everyone’ s A Winner Now We’ re Making That Fame..

Written by saangatya

January 22, 2009 at 12:50 pm

ಮಿಲಿನೇರ್-ವೈಶಾಲಿಯವರ ಬರಹ

without comments

ನಿಜಕ್ಕೂ ಖುಷಿಯಾಗುತ್ತಿದೆ. ಸಾಂಗತ್ಯ ಆರಂಭಿಸಿರುವ ಒಂದು ಚರ್ಚೆಗೆ ಒಳ್ಳೆ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಹಲವರು ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ.  ಒಂದು ಚಿತ್ರದ ಭಿನ್ನ ನೆಲೆಗಳನ್ನು ಹಿಡಿದು ಕೊಡುವುದೇ ನಮ್ಮ ಪ್ರಯತ್ನ. ವೈಶಾಲಿ ಅವರು ಚರ್ಚೆಯನ್ನು ಮುಂದುವರಿಸಿದ್ದಾರೆ ತಮ್ಮ ಬರಹವನ್ನು ನಮಗೆ ಕಳುಹಿಸುವ ಮೂಲಕ.

ಹಾಗೆಯೇ ನಮ್ಮ ಈ ಚರ್ಚೆಯ ಪ್ರಯತ್ನವನ್ನು ಚೇತನಾ ತೀರ್ಥಹಳ್ಳಿಯವರು ತಮ್ಮ ಬ್ಲಾಗ್ ನಲ್ಲಿ ಚಿಕ್ಕಟಿಪ್ಪಣಿ ಬರೆದ ಸಾಂಗತ್ಯದ ಚರ್ಚೆಗೆ ಸಂಪರ್ಕ ಕೊಟ್ಟಿದ್ದಾರೆ.   ಇಬ್ಬರಿಗೂ ಧನ್ಯವಾದ.

*

ನಾನು ಸ್ಲಮ್ ಡಾಗ್ ಮಿಲೆನಿಯರ್ ಎರಡನೇ ಬಾರಿಗೆ ನೋಡಿದೆ. ವಿಮರ್ಶಗಳನ್ನು ಓದಿದ ನಂತರ. 

ಯಾವುದೇ ಪ್ರಶಸ್ತಿ ಪುರಸ್ಕ್ರತ ಚಿತ್ರವಾಗಿ ಬೇಡ. ಒಮ್ಮೆ ಹಾಗೆ ಸುಮ್ಮನೆ ಕುಳಿತು ಸ್ಲಮ್ ಡಾಗ್ ಮಿಲ್ಲೆನಿಯರ್ ಚಿತ್ರ ನೋಡಬೇಕು. ಚಿತ್ರದ ಆರಂಭವಾಗಿ ಸ್ವಲ್ಪ ಹೊತ್ತಿಗೆ ನಾಯಕ ಜಮಾಲ್ ಕೌನ್ ಬನೇಗ ಕರೋಡಪತಿ ಯಲ್ಲಿ ಭಾಗವಹಿಸುವ ದೃಶ್ಯ ಬರುತ್ತದೆ. ಆತ ತನ್ನನ್ನು ಚಹಾ ಮಾರುವ ಹುಡುಗ ಎಂದು ಪರಿಚಯಿಸಿಕೊಂಡಾಗ ಅಲ್ಲಿರುವ ವೀಕ್ಷಕರು ಅಪಹಾಸ್ಯದ ನಗು ನಗುತ್ತಾರೆ. ಕಾರ್ಯಕ್ರಮದ ನಿರೂಪಕ ಪ್ರೇಂ ಕುಮಾರ್( ಅನಿಲ್ ಕಪೂರ್) ಕೂಡ ಜಮಾಲ್ ನನ್ನು ಚಾಯ್ ವಾಲಾ ಚಾಯ್ ವಾಲಾ ಅನ್ನುವಾಗ ಅಚ್ಚರಿಗಿಂತ ಅಪಹಾಸ್ಯ, ಗೇಲಿಯ ದ್ವನಿಯೇ ಇರುತ್ತದೆ…. 

ಇನ್ನು ಬಾಲಕ ಜಮಾಲ್ ಅಮಿತಾಬ್ ನ ಹಸ್ತಾಕ್ಷರದ ಸಲುವಾಗಿ ಮಲದ ಗುಂಡಿಯಲ್ಲಿ ಬಿದ್ದೇಳುವ ಸೀನ್. ಅಬ್ಬಾ … ನಿಜಕ್ಕೂ ನನಗೆ ಆ ದೃಶ್ಯ ನೋಡಲಾಗಲಿಲ್ಲ. ಮಲ ಹೊರುವ ಪದ್ಧತಿ ಭಾರತದಲ್ಲಿ ಇನ್ನು ಒಂದೆಡೆ ಜೀವಂತವಾಗಿದೆ ಅನ್ನುವ ಬಗ್ಗೆ ಕೇಳಿದ್ದೇನೆ. ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಅದೂ ಕೂಡ ಒಂದು ಬಲವಂತದ ಕೆಲಸದಲ್ಲಿ ಸೇರುತ್ತದೆ. ತೀರ ಈ ಮಟ್ಟಕ್ಕೆ ಅದನ್ನು ತೋರಿಸಿ ವಾಸ್ತವದ ಚಿತ್ರಣ ಅಂತ ಖುಷಿಪಟ್ಟುಕೊಳ್ಳುವ ಕರ್ಮ ಯಾಕೆ ನಮಗೆ? ನನಗೆ ನೆನಪಿದ್ದಂತೆ ಸ್ಲಮ್ ಡಾಗ್ ಮಿಲ್ಲೆನಿಯರ್ ಚಿತ್ರದ ನಿರ್ದೇಶಕ ಡ್ಯಾನಿ ಬೋಯ್ಲೆ ಯ ಉಳಿದಾವ ಚಿತ್ರಗಳಲ್ಲೂ ವಾಸ್ತವದ ಚಿತ್ರಣಗಳು ಈ ರೀತಿಯದ್ದಲ್ಲ. ( Trainspotting, The Beach, 28 Days Later, Millions…)

 ಕೌನ್ ಬನೇಗ ಕರೋಡಪತಿಯಂತಹ ಕಾರ್ಯಕ್ರಮದಲ್ಲಿ ಕೇಳಿದ ಪ್ರಶ್ನೆಗಳಿಗೆಲ್ಲ ಸಮಯೋಚಿತವಾಗಿ ಉತ್ತರಿಸಿ ಕೋಟಿ ಗೆದ್ದ ಹುಡುಗನೊಬ್ಬನನ್ನು ಆ ನಂತರದಲ್ಲಿ ನೀನು ಮೋಸ ಮಾಡಿ ಗೆದ್ದಿದ್ದೀಯ ಎಂದು ಪೋಲಿಸ್ ವಿಚಾರಣೆಗೊಳಪಡಿಸಿ ಹಿಂಸಿಸುವ ಕಾನ್ಸೆಪ್ಟೆ ನನಗೆ ವಿಚಿತ್ರ ಅನ್ನಿಸಿತು.  

ವಾಸ್ತವ ಎಂದರೆ ಟೀವಿ ಕಾರ್ಯಕ್ರಮಗಳನ್ನೂ ಸೇರಿಸಿ ಭಾರತದ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಜಮಾಲ್ ನಂತಹ ಪ್ರತಿಭಾವಂತ ವ್ಯಕ್ತಿತ್ವದ ಒಬ್ಬ ಹುಡುಗ ಸ್ಪರ್ದೆಗಿಳಿದರೆ ನಾವು ಅವನ ವೃತ್ತಿಯ ಕಾರಣದಿಂದಾಗಿ ಗೇಲಿ ಮಾಡುತ್ತೇವೆಯೇ ? ಮಾದ್ಯಮದ ಯಾವುದೇ ಒಂದು ಸಣ್ಣ ಸ್ಪರ್ಧೆಯಲ್ಲಿ ಗೆದ್ದ ಮಕ್ಕಳೂ ಕೂಡ ಜನರ ದೃಷ್ಟಿಯಲ್ಲಿ ಹೀರೋ ಆಗುವ ಪರಿಸ್ಥಿತಿ ಇಂದು ಭಾರತದಲ್ಲಿದೆ. ಅಷ್ಟು ಸಹಕಾರ, ಪ್ರೋತ್ಸಾಹ ಬೇಡವೆಂದರೂ ಸಿಗುತ್ತದೆ. 

ಸ್ಲಮ್ ಗಳು ಭಾರತದ ವಾಸ್ತವ ಹೌದು. ಮುಂಬೈನ ಸ್ಲಮ್ ಗಳು ಏಷ್ಯಾದಲ್ಲೇ ಅತಿ ದೊಡ್ಡ ಕೊಳಚೆ ಪ್ರದೇಶಗಳು. ಅದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಆದರೆ ಅದೊಂದೇ ಭಾರತ ಅಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಕೊಳಚೆ ಪ್ರದೇಶಗಳ ಭಾರತದ ಚಿತ್ರಣ ಬದಲಾಗಿದೆ. ಸ್ವಲ್ಪ ಮಟ್ಟಿಗಾದರೂ ಗೌರವ ಹುಟ್ಟಿಕೊಂಡಿದೆ. ಬಡತನ, ದಾರಿದ್ರ್ಯದಷ್ಟೇ ವಾಸ್ತವ ಐಟಿ ಸಿಟಿಗಳು, ಕೈಗಾರಿಕೆಗಳು.. ಸಂಸ್ಕೃತಿ, ಪದ್ಧತಿಗಳು ಕೂಡ ಅಲ್ಲವೇ? ಇವೆಲ್ಲವನ್ನೂ ಹೊರತಾಗಿಸಿ ತಯಾರಾದ ‘ತಾರೆ ಜಮೀನ್ ಪರ್’ ಕೂಡ ಉತ್ತಮ ಚಿತ್ರ. ಆದರೆ ಅದು ಅಂತರರಾಷ್ಟ್ರೀಯ ಪ್ರಶಸ್ತಿಗೆ ಸ್ಪರ್ಧಿಸಿರುವ ಚಿತ್ರಗಳ ಪಟ್ಟಿಯಿಂದ ಹೊರಗೆ ಬಿತ್ತು. ಅದರ ಹಿಂದಿನ ‘ಲಗಾನ್’ ಕೂಡ. 

ಇದೇ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗಳಿಸಿದ ಚಿತ್ರವೊಂದಿದೆ. ‘ಡಾರ್ಕ್ ನೈಟ್’. ಕ್ರಿಸ್ಟೋಫರ್ ನೋಲನ್ ನಿರ್ದೇಶನದ ಇದು ಸಂಪೂರ್ಣವಾಗಿ ಕಾಲ್ಪನಿಕ ಚಿತ್ರ. ತಾಂತ್ರಿಕವಾಗಿ ಹಾಗೂ ಉಳಿದೆಲ್ಲ ವಿಷಯಗಳಲ್ಲೂ ಇದೊಂದು ಅದ್ಭುತ ಕಲಾಕೃತಿ. ಯಾವ ವಾಸ್ತವಗಳನ್ನು ಹೇಳದೆ ಸಂಪೂರ್ಣವಾಗಿ ನಮ್ಮನ್ನು ತನ್ನೊಳಗೆ ಎಳೆದುಕೊಳ್ಳುವ ಶಕ್ತಿ ಈ ಚಿತ್ರಕ್ಕಿದೆ.. ಪ್ರಶಸ್ತಿಗಳನ್ನೆಲ್ಲ ಮೀರಿದ ಚಿತ್ರ ಅನ್ನುವ ಭಾವನೆ ಕೊಡುತ್ತದೆ. ಅಷ್ಟೆಲ್ಲಾ ನಿರೀಕ್ಷೆ ಬೇಡ ಬಿಡಿ. ಆದರೆ ಭಾರತವನ್ನು ಒಂದು ಪ್ರಶಸ್ತಿಗಾಗಿ ಇಷ್ಟು ಕನಿಷ್ಟವಾಗಿಸುವ ಜರೂರತ್ತಿದೆಯೇ? ಭಾರತವನ್ನು ಕೀಳಾಗಿ ತೋರಿಸಿ ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಳ್ಳುವ ಪ್ರಯತ್ನ ಇದೆ ಮೊದಲೇನಲ್ಲ. ಆದರೆ ಇದನ್ನು ವಿರೋಧಿಸುವ ಮನಸ್ಸು ಬಾರದೇ ಇದು ವಾಸ್ತವದ ಚಿತ್ರಣ ಎಂದು ಸಂತಸಪಡುವ ಮನಸ್ಸನ್ನು ನಾವು ಬೆಳೆಸಿಕೊಳ್ಳುತ್ತಿರುವುದು ಬೇಸರ ಹುಟ್ಟಿಸುತ್ತಿದೆ. . 

ಈ ಚಿತ್ರದಲ್ಲಿ ನಾನು ಮೆಚ್ಚಿದ ಏಕೈಕ ಅಂಶವೆಂದರೆ ನಾಯಕ ಜಮಾಲ್ ಕಾರ್ಯಕ್ರಮದಲ್ಲಿ ಪ್ರಶ್ನೆಗಳಿಗೆ ಉತ್ತರಿಸುತ್ತ ಹೋದಂತೆ ಹಂತ ಹಂತವಾಗಿ ಬಿಚ್ಚಿಕೊಳ್ಳುವ ಆತನ ಅನುಭವಗಳು, ಆ ಹಿನ್ನೆಲೆಯಲ್ಲಿ ದೃಶ್ಯಗಳು ತೆರೆದುಕೊಳ್ಳುವ ರೀತಿ. ಕೆಲವು ಶಾಟ್ ಗಳು ತುಂಬ ಚೆನ್ನಾಗಿವೆ ಅನ್ನುವುದು ನಿಜ.

ಭಾರತವನ್ನು ಅಥವಾ ಯಾವುದೇ ದೇಶದ ಸಂಸ್ಕ್ರತಿಯ ಒಂದೇ ಮುಖದ ಚಿತ್ರಣವನ್ನು ಬಿಂಬಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆಯುವುದು ಅಷ್ಟು ಕಷ್ಟದ ಕೆಲಸವೇನಲ್ಲ. ಅಲ್ಲೂ ಕೂಡ ದೊಡ್ಡ ಮಟ್ಟದಲ್ಲಿ ಲಾಬಿಗಳು ನಡೆಯುತ್ತವೆ ಎಂಬುದು ನಮಗೆ ಗೊತ್ತಿರಬೇಕಷ್ಟೇ. ಯಾವುದೇ ದೇಶದ ಸ್ಪಷ್ಟ ಚಿತ್ರಣ ಬೇಕೆಂದರೆ ಅತ್ಯುತ್ತಮ ಡಾಕ್ಯುಮೆಂಟರಿಗಳು ಸಿಗುತ್ತವೆ. ಅಷ್ಟಕ್ಕೂ ಒಂದು ಚಲನಚಿತ್ರ ನಿರ್ದೇಶಕನ ದೃಷ್ಟಿಕೋನದಿಂದ ವೀಕ್ಷಕನೆದುರು ತೆರೆದುಕೊಳ್ಳುವುದೇ ವಿನಃ ಸಂಪೂರ್ಣ ಸತ್ಯದ ಅನಾವರಣವಲ್ಲ ಅಲ್ಲವೇ? ಯಾವ ದೃಷ್ಟಿಕೋನದಿಂದ ಇದು ಗೋಲ್ಡನ್ ಗ್ಲೋಬ್ ನಂತಹ ಪ್ರತಿಷ್ಠಿತ ಪ್ರಶಸ್ತಿ ಪಡೆಯಿತು ಎಂಬುದು ನನಗಿನ್ನೂ ಅರ್ಥವಾಗದ ವಿಷಯವೇ. ಕೊಳಚೆ, ಬಡತನ ಮಾತ್ರ ಭಾರತದ ವಾಸ್ತವ ಎನ್ನುವುದಾದರೆ, ಅದನ್ನೇ ಜಗತ್ತಿನ ಎದುರು ಇಡಬೇಕೆಂಬ ಆಸೆಯಿದ್ದರೆ ಈ ಚಿತ್ರ, ಅದರ ನಿರೂಪಣೆ, ಉದ್ದೇಶ ಯಾರನ್ನು ಭಾದಿಸದೇನೋ…

ಈ ಚಿತ್ರ ಭಾರತೀಯ ನಿರ್ದೇಶಕನ, ಭಾರತಕ್ಕಷ್ಟೇ ಸೀಮಿತವಾದ, ಕೇವಲ ನಾವು ಮಾತ್ರ ವೀಕ್ಷಿಸುವ ಚಲನಚಿತ್ರವಾಗಿದ್ದರೆ ವಾಸ್ತವ, ಅದ್ಭುತ ಅಂತೆಲ್ಲ ಹೊಗಳಿ ಸಮಾಧಾನ ಪಡಬಹುದಿತ್ತೇನೋ … ಆದರೆ ಈ ಚಿತ್ರವನ್ನು ಇಡೀ ಜಗತ್ತು ವೀಕ್ಷಿಸುತ್ತಿದೆ. ನಮ್ಮ ಮನೆಯಲ್ಲಿ ಕೆಲವೇ ಜಾಗದಲ್ಲಿರುವ ಕೊಳಕನ್ನು ಜಗತ್ತಿಗೆ ತೋರಿಸಿ ಇದು ನಮ್ಮ ಮನೆಯ ನೈಜ ಚಿತ್ರಣ, ಇದು ವಾಸ್ತವ ಅನ್ನುವ ಮನಸ್ಸು ಇದೆಯೇ? ಅಥವಾ ಮೂರನೆಯವನೊಬ್ಬ ಬಂದು ತೋರಿಸಿದಾಗ ಹೌದು, ಇದೇ ವಾಸ್ತವ ಅಂತ ಖುಷಿಪಡುವುದು ಒಳ್ಳೆಯದೇ? ಆ ಮನಸ್ಸು ನಮಗಿದ್ದರೆ ಸ್ಲಮ್ ಡಾಗ್ ಮಿಲ್ಲೆನಿಯರ್ ಚಿತ್ರ ಸುಂದರವಾಗಿದೆ! ಅಡಿಗರ ವೈಟ್ ಟೈಗರ್ ಕೃತಿ ಕೂಡ…..

ಎಷ್ಟು ಕುತೂಹಲ, ನಿರೀಕ್ಷೆ, ಹೆಮ್ಮೆಯಿಂದ ನಾನು ಮೊದಲ ಸಲ ಸ್ಲಮ್ ಡಾಗ್ ಮಿಲೆನಿಯರ್ ಚಿತ್ರವನ್ನು ವೀಕ್ಷಿಸಿದ್ದೇನೋ ಅಷ್ಟೆ ಬೇಸರ, ಅಸಹ್ಯ ,ಚಡಪಡಿಕೆಯಿಂದ ಎದ್ದು ಹೊರಹೋಗಿದ್ದೇನೆ. ಯಾವುದೇ ಪೂರ್ವಾಗ್ರಹವಿಲ್ಲದೆಯೇ ಈ ಚಿತ್ರ ನೋಡಿದರೂ ಕೂಡ ಇದು ಹಿಂಸೆಯೇ. 

ರಾಷ್ಟ್ರೀಯತೆಯ ಇಮೇಜ್ ಮ್ಯಾನೇಜರ್ ಗಳು ಮತ್ತು ‘ಸ್ಲಂಡಾಗ್’

with 7 comments

ಸ್ಲಂಡಾಗ್ ಮಿಲಿನೇರ್ ಕುರಿತ ಚರ್ಚೆಯನ್ನು ಬೇಳೂರು ಸುದರ್ಶನರ ಬರಹದ ಮೂಲಕ ಮುಂದುವರಿಸಿದ್ದೇವೆ. ಒಬ್ಬೊಬ್ಬರು ಒಂದೊಂದು ಹೊಸ ನೋಟವನ್ನು ಹರಿಸುತ್ತಿದ್ದಾರೆ. ಅವರ ಬರಹದ ಸ್ವಲ್ಪ ಭಾಗವನ್ನು ಸಾಂಗತ್ಯದಲ್ಲಿ ಹಾಕಿದ್ದೇವೆ. ಪೂರ್ಣ ಬರಹಕ್ಕೆ ಅವರ ವೆಬ್ ಪೇಜ್ ಗೆ ಸಂಪರ್ಕ ಕಲ್ಪಿಸಲಾಗಿದೆ.

*

ಸ್ಲಮ್‌ಡಾಗ್ ಮಿಲೆಯನೇರ್ ಸಿನೆಮಾ ಒಳ್ಳೆಯದೋ, ಕೆಟ್ಟದ್ದೋ? 

ಎ ಆರ್ ರಹಮಾನ್‌ಗೆ ಗೋಲ್ಡನ್ ಗ್ಲೋಬ್ ಅವಾರ್ಡ್ ಬಂದಿದ್ದಕ್ಕೆ ಖುಷಿಪಡಬೇಕೋ, ಬೇಜಾರು ಮಾಡಿಕೊಳ್ಳಬೇಕೋ? ದಿ ವೈಟ್ ಟೈಗರ್ ಕಾದಂಬರಿಯನ್ನು ಹೊಗಳಬೇಕೋ, ತೆಗಳಬೇಕೋ? 

ಭಾರತ ಬರೀ ದರಿದ್ರರ ದೇಶ ಎಂದೇ ಚಿತ್ರಿತವಾಗಿರೋ ಸಾಹಿತ್ಯ, ಸಿನೆಮಾ, ನಾಟಕ ಎಲ್ಲವನ್ನೂ ನಾವು ವಿರೋಧಿಸಬೇಕು ಎಂದು ನಮ್ಮ ಹಲವು ಲೇಖಕರು ಹೇಳುತ್ತಾರೆ.

ಹಾಗಾದರೆ ವಾಸ್ತವ ಏನು? ಭಾರತದಲ್ಲಿ ದಾರಿದ್ರ್ಯ ಇಲ್ಲವೆ? ಭ್ರಷ್ಟಾಚಾರ ಇಲ್ಲವೆ? ಅದನ್ನೆಲ್ಲ ಒಪ್ಪಿಕೊಳ್ಳಲೇಬೇಕಲ್ಲವೆ? – ಹಾಗಂತ ಇನ್ನೊಂದು ಬಣ ವಾದಿಸುತ್ತದೆ. 

ಎಲ್ಲಕ್ಕಿಂತ ಮುಖ್ಯ ವಾದ ಎಂದರೆ ವಿದೇಶಗಳಲ್ಲಿ ಭಾರತವನ್ನು ಕೆಟ್ಟ ದೇಶ ಎಂದು ಚಿತ್ರಿಸಬಾರದು ಎನ್ನುವುದು. ಇದನ್ನು ಅಪ್ಪಟ ಭಾರತೀಯತೆ ಎಂದೇ ಒಪ್ಪೋಣ. 

ಭಾರತೀಯರ ಸಾಧನೆಗಳನ್ನು ಮಾತ್ರ ಹೊರಗಡೆ ಬಿಂಬಿಸಬೇಕು ಎಂಬುದು ಮೂಲಭೂತವಾದ ಎಂದೇ ನನ್ನ ಅನಿಸಿಕೆ. ಭಾರತದ ಭದ್ರತಾ ವ್ಯವಸ್ಥೆಯ ಬಗ್ಗೆಯೋ, ಆಂತರಿಕ ಸುರಕ್ಷತೆ ವಿಷಯಗಳ ಬಗ್ಗೆಯೋ ಬಹಿರಂಗವಾಗಿ ಚರ್ಚೆಯಾಗಬಾರದು ಎಂಬುದಷ್ಟೇ ನನ್ನ ಕಾಳಜಿ. 

ಇವತ್ತು ನಮ್ಮ ಬಾಲಿವುಡ್, ಹಾಲಿವುಡ್ ಕಲ್ಪನೆಗಳೇ ಜುಜುಬಿ ಎನ್ನುಂತೆ ವಾಸ್ತವ ಘಟನೆಗಳು (ನವೆಂಬರಿನ ಮುಂಬಯಿ ಭಯೋತ್ಪಾದನೆ ಘಟನೆ, 9/11 ವಿಶ್ವ ಟ್ರೇಡ್ ಸೆಂಟರ್‌ಗೆ ವಿಮಾನಗಳ ಡಿಕ್ಕಿ) ನಡೆದಿರುವಾಗ, ಈ ಸಿನೆಮಾಗಳಲ್ಲಿ ದಾರಿದ್ರ್ಯವನ್ನು ವೈಭವೀಕರಿಸಲಾಗಿದೆ ಎಂದೋ, ಪುಸ್ತಕದಲ್ಲಿ ಭಾರತೀಯರನ್ನು ಹೀಗಳೆ ಯಲಾಗಿದೆ ಎಂದೋ ವಾದಿಸುವುದು ಮೂರ್ಖತನ. ಭ್ರಷ್ಟಾಚಾರದಲ್ಲಿ ಭಾರತ ಎಷ್ಟು ಮುಂದಿದೆ ಎಂದೋ, ಕರ್ನಾಟಕದಲ್ಲಿ ಭ್ರಷ್ಟಾಚಾರ ಎಷ್ಟು ನಡೆದಿದೆ ಎಂದೋ ವರದಿಗಳು ವಿಶ್ವಸಂಸ್ಥೆಯಿಂದ ಹಿಡಿದು ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಕಟವಾಗುತ್ತವೆ. ಅವನ್ನೆಲ್ಲ ನಾವು ಬಹಿಷ್ಕರಿಸಲಾದೀತೆ? ಹಾಗೆ ನೋಡಿದರೆ ನಮ್ಮ ಮಾಧ್ಯಮಗಳು ಈ ವರದಿಗಳನ್ನು (ಅವುಗಳಲ್ಲಿ ಹಲವು ಖಾಸಗಿ ಅಂತಾರಾಷ್ಟ್ರೀಯ ಸಂಸ್ಥೆಗಳು) ಬಾಯಿ ಚಪ್ಪರಿಸಿಕೊಂಡು ಬರೆಯುತ್ತವೆ. ಭ್ರಷ್ಟಾಚಾರ: ಭಾರತಕ್ಕೆ ಇಷ್ಟನೇ ಸ್ಥಾನ ಎಂದು ಹೆಡಿಂಗ್ ನೀಡುತ್ತವೆ. ಆಗ ಮಾತ್ರ ನಮ್ಮ ಭಾರತೀಯತೆಯ ಭ್ರಷ್ಟತೆಯ ಬಗ್ಗೆ ನಮಗೆ ಹೆಮ್ಮೆಯಾಗುತ್ತದೆ!

ಇಷ್ಟಕ್ಕೂ ಸ್ಲಮ್‌ಡಾಗ್ ಮಿಲಿಯನೇರ್ ಸಿನೆಮಾವನ್ನು ನಾನೂ ನೋಡಿದೆ. ಮೊದಲು ನನಗೆ ಇದೊಂದು ಬಾಲಿವುಡ್ ನಿರ್ಮಾಣ ಎಂದೇ ಅನ್ನಿಸಿತ್ತು. ಆದರೆ ಬ್ರಾಂಡ್ ಮಾತ್ರ ಅಂತಾರಾಷ್ಟ್ರೀಯ. ಹಾಗೆ ನೋಡಿದರೆ ಈ ಸಿನೆಮಾದಲ್ಲಿ ಭಾರತದ ಮುಂಬಯಿಯ ದೃಶ್ಯಾವಳಿಗಳನ್ನು ಕಟ್ಟಿಕೊಡಲಾಗಿದೆ ಎನ್ನುವುದು ವಾಸ್ತವ. ಪ್ರಮೋದ್ ಮಹಾಜನ್‌ನಂಥ ರಾಜಕಾರಣಿಯ ದುರಂತ ಕಥೆಯೇನೂ ಅಲ್ಲಿಲ್ಲ; ನತದೃಷ್ಟ ಹುಡುಗರ ಅನಿ ವಾರ್ಯ ಕ್ರೌರ್ಯದ ಕಥೆಯಿದೆ. ಅದಕ್ಕಿಂತ ಹೆಚ್ಚಾಗಿ ಮಿಲಿಯನೇರ್ ಆದ ಹುಡುಗ ಹೇಗೆ ಉತ್ತರಗಳನ್ನು ಮೊದಲೇ ಕಂಡುಕೊಂಡಿದ್ದ ಎಂಬ ಸಸ್ಪೆನ್ಸ್ ಕೂಡಾ ಹಾಲಿವುಡ್ ಶೈಲಿಯಲ್ಲಿ ಚಿತ್ರಣಗೊಂಡಿದೆ. ರಹಮಾನ್ ಸಂಗೀತ ನನಗಂತೂ ‘ಎಂದಿನಂತೆ’ ಅನಿಸಿತ್ತು. ಆದರೆ ಸಿನೆಮಾ ನೋಡಿದ ಮರುದಿನವೇ ಪತ್ರಿಕೆಯಲ್ಲಿ ಅವರು ಗೋಲ್ಡನ್ ಗ್ಲೋಬ್ ಪಡೆದ ಸುದ್ದಿಯಿತ್ತು! ಇರಲಿ ಬಿಡಿ, ಹೇಗೂ ರಹಮಾನ್ ಅಂಥ ಪ್ರತಿಷ್ಠಿತ ಪ್ರಶಸ್ತಿಗೆ ಅರ್ಹವಾಗಿದ್ದರು ತಾನೆ?…..

ಪೂರ್ಣ ಬರಹಕ್ಕೆ ಮಿತ್ರ ಮಾಧ್ಯಮ ಕ್ಕೆ ಭೇಟಿ ಕೊಡಿ.

Written by saangatya

January 20, 2009 at 3:41 pm

ಮಿಲಿನೇರ್ ನ ಹೃದಯದ ಹಾದಿ- ಸುಧನ್ವರ ಹೊಸ ನೋಟ

with 3 comments

ಸ್ಲಂಡಾಗ್ ಮಿಲಿನೇರ್ ಕುರಿತಾದ ಚರ್ಚೆಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಒಂದು ಚಿತ್ರವನ್ನು ಹೇಗೆ ಹೇಗೆ ಭಿನ್ನವಾಗಿ ನೋಡಬಹುದೆಂಬುದಕ್ಕೂ ಈ ಬರಹಗಳೂ ಉದಾಹರಣೆಯಾಗುತ್ತಿವೆ. ಬೆಂಗಳೂರಿನಲ್ಲಿರುವ ಪತ್ರಕರ್ತ ಹಾಗೂ ಬ್ಲಾಗಿಗ ಸುಧನ್ವಾ ದೇರಾಜೆ ತಮ್ಮ ನೋಟವನ್ನು ಹರಿಸಿದ್ದಾರೆ.

*

ಜಮಾಲ್ ಎರಡು ಕೋಟಿ ರೂ ಗೆದ್ದಿದ್ದಾನೆ. ಅದಕ್ಕಿಂತ ಹೆಚ್ಚಿನ ಲತಿಕಾ ಕ್ಷೇಮವಾಗಿ ಅವನಿಗೆ ದೊರಕಿದ್ದಾಳೆ. ಸ್ಲಮ್ಮಿನ ಮಕ್ಕಳು ಕೊಳಚೆಗೆ ಹಾರಿ ಸಂಭ್ರಮಿಸುತ್ತಿದ್ದಾರೆ. ಬಾತ್‌ಟಬ್‌ನಲ್ಲಿ ನೋಟು ತುಂಬಿಕೊಂಡು ಮಲಗಿರುವ ಅಣ್ಣ ಸಲೀಂ, ಆ ಸಂತಸದ ಸುದ್ದಿ ಕೇಳುತ್ತಾ, ತನ್ನೊಡೆಯ ಭೂಗತ ಪಾತಕಿಗೆ ಗುಂಡಿಕ್ಕಿ, ತಾನೂ ಗುಂಡಿಗೆ ಬಲಿಯಾಗುತ್ತಿದ್ದಾನೆ . ಅವನು ಕೊನೆಗೆ ಆಡುವ ಮಾತು- ದೇಶವೇ ಕೊಂಡಾಡುತ್ತಿರುವ ‘ಜಮಾಲ್ ಈಸ್ ಗ್ರೇಟ್’ ಅಂತಲ್ಲ, ‘ಗಾಡ್ ಈಸ್ ಗ್ರೇಟ್ ’.

‘ಸ್ಲಮ್‌ಡಾಗ್ ಮಿಲಿಯನೇರ್’ನ ಒಡಲಾಳದಲ್ಲಿರುವುದು ನಂಬುಗೆ. ಅದು ಬಂದದ್ದು ಅನುಭವದಿಂದ. ಆದರೆ ಆ ನಂಬಿಕೆ ಎಲ್ಲೆಲ್ಲಿ ಕೆಡುತ್ತಿದೆ ಅನ್ನುವುದನ್ನೂ ಸಿನಿಮಾ ಹೇಳುತ್ತದೆ. ಹಿಂದೂ ರಾಕ್ಷಸರಿಂದ ತಪ್ಪಿಸಿಕೊಳ್ಳಲು ಪೊಲೀಸರ ಬಳಿ ಹೋದರೆ ಅವರು ಇಸ್ಪೀಟು ಆಡುತ್ತಿದ್ದಾರೆ, ಕೊಳೆಗೇರಿಯಲ್ಲಿ ಕೊಡುವ ಕೋಕಾಕೋಲ ಹುಡುಗರನ್ನು ಅಪಹರಿಸುತ್ತದೆ..ಹೀಗೆ ನಾನಾಕಡೆ. ಪೊಲೀಸ್ ಸ್ಟೇಷನ್‌ನಲ್ಲಿ ಇನ್ಸ್‌ಪೆಕ್ಟರ್ ವ್ಯಂಗ್ಯವಾಗಿ “The man who know all the answers” ಅಂತ ಜಮಾಲ್‌ಗೆ ಹೇಳುತ್ತಾನೆ. ಆದರೆ ಪಾಪ ಅವನಿಗೇನು ಗೊತ್ತಿದೆ? ಆತನಿಗೆ ಗೊತ್ತಿರುವುದು ಒಂದೇ-ಬಂದಂತೆ ಸ್ವೀಕರಿಸುವುದು. ಅವನು ಬದುಕಿನಲ್ಲಿ ಮಾಡಿದ್ದೂ ಅದನ್ನೇ.

ಅವನು ಹೇಳುವ ಉತ್ತರಗಳೆಲ್ಲ ಅನುಭವದಿಂದ ಬಂದದ್ದು. ಹಾಗಾಗಿ ಅವುಗಳ ಬಗ್ಗೆ ಅವನಿಗೆ ನಂಬಿಕೆ. ಒಂದು ಕೋಟಿ ರೂ. ತಂದುಕೊಡುವ ಪ್ರಶ್ನೆಗೆ, ತಪ್ಪುಉತ್ತರವನ್ನು ನಿಜವೆಂಬಂತೆ ಸುಳಿವು ಕೊಟ್ಟರೂ, ಅದನ್ನು ಧಿಕ್ಕರಿಸಿ ಹೃದಯದ ಹಾದಿ ಹಿಡಿಯುವ ಸತ್ಯವಂತ ಅವನು. ‘ಸತ್ಯಮೇವ ಜಯತೇ’ ಅನ್ನುವುದರ ಬಗ್ಗೆಯೂ ಅವನಿಗೆ ನಂಬಿಕೆಯಿಲ್ಲ, ಯಾಕೆಂದರೆ ಅದು ಅನುಭವಿಸಿ ಗೊತ್ತಿಲ್ಲ. ಅದಕ್ಕೆ ‘ಆಡಿಯನ್ಸ್ ಪೋಲ್’ ಬೇಕಲ್ಲ ! ಆದರೆ ನಿರ್ದೇಶಕನಿಗಂತೂ ಗೊತ್ತಿದೆ, ನಂಬಿಕೆಗೆ ಯಾವತ್ತೂ ದೈವದ ಬೆಂಬಲವಿದೆ. ಅಪನಂಬಿಕೆಗೆ ಇಲ್ಲ ! ಹೀಗೆ ಶುದ್ಧ ಭಾರತೀಯ ಮನಸ್ಸಿನ ಒಳಹೊಕ್ಕ ಸಿನಿಮಾ ಇದು. ಚಿತ್ರದ ಆರಂಭದಲ್ಲಿ ಪ್ರಶ್ನೆಯೊಂದು ತೆರೆಯ ಮೇಲೆ ಬರುತ್ತದೆ.

ಇಪ್ಪತ್ತು ಮಿಲಿಯನ್ ರೂಪಾಯಿ ಗೆಲ್ಲುವುದಕ್ಕೆ ಜಮಾಲ್ ಒಂದು ಪ್ರಶ್ನೆ ದೂರವಿದ್ದಾನೆ. ಆತ ಇಲ್ಲಿಯವರೆಗೆ ಗೆದ್ದದ್ದು ಹೇಗೆಂದು ನಿಮಗನಿಸುತ್ತದೆ? ನಾಲ್ಕು ಆಯ್ಕೆಗಳು- ೧.ಅವನು ಏನೋ ಮೋಸ ಮಾಡಿದ್ದಾನೆ, ೨. ಅವನು ಅದೃಷ್ಟವಂತ ೩.ಅವನು ಬಹಳ ಮೇಧಾವಿ ೪. ಅದು ವಿಧಿಲಿಖಿತ. ಈ ಆಯ್ಕೆಗಳಲ್ಲಿ ಒಂದೊಂದೆ ಉತ್ತರವನ್ನು ಅಲ್ಲಗಳೆಯುತ್ತಾ ಹೋಗುವ ಸಿನಿಮಾದ ಕೊನೆಗೆ, ನಿರ್ದೇಶಕ ಉಳಿಸಿ ತೋರಿಸುವುದು ಕೊನೆಯ ಆಯ್ಕೆಯನ್ನು . ಆತ ಹಾಗೆ ‘ನಂಬಿದ್ದಾನೆ ’.

ಎ.ಆರ್.ರೆಹಮಾನ್‌ರದ್ದು ಇದೇ ಅತ್ಯುತ್ತಮ ಸಂಗೀತ ಅಲ್ಲದಿದ್ದರೂ, ಅವರ ಸಾಮರ್ಥ್ಯ ಗೊತ್ತಾಗಿರುವುದು, ಸಂದರ್ಭಕ್ಕೆ ಬಹಳ ಸೂಕ್ತವಾದ ಸಂಗೀತ ಕೊಟ್ಟಿರುವುದರಲ್ಲಿ. ಅಭಿನಯ-ಚಿತ್ರಕಥೆ-ಸಂಭಾಷಣೆಗಳೆಲ್ಲ ಒಂದರೊಳಗೊಂದು ಸೇರಿ ಚಿತ್ರದಲ್ಲೊಂದು ಹದವಾದ ಪಾಕವಾಗಿದೆ. ಪ್ರತಿಯೊಂದು ದೃಶ್ಯದಲ್ಲೂ ತೋರುವ ವಿವರಗಳನ್ನು ಗಮನಿಸಿದರೆ, ಒಂದೊಂದು ಶಾಟ್‌ನ್ನೂ ಅದೆಂಥ ಲೆಕ್ಕಾಚಾರದಲ್ಲಿ ತೆಗೆದಿರಬಹುದೆಂದು ಊಹಿಸಬಹುದು. ವಿಮಾನನಿಲ್ದಾಣದಿಂದ ಪೊಲೀಸರು ಅಟ್ಟಿಸಿಕೊಂಡು ಹೋಗುವಾಗ , ಅಮಿತಾಬ್ ಆಟೊಗ್ರಾಫ್ ಉಳ್ಳ ಚಿತ್ರವನ್ನು ಮಾರಿದಾಗ, ಕಣ್ಣನ್ನು ಸುಡಲು ಜಮೀಲ್‌ನನ್ನು ಕರೆ ಎಂದಾಗ…ಹೀಗೆ ಎಲ್ಲೆಡೆಗಳಲ್ಲೂ ಮೊದಲನೇ ಸಲೀಂ-ಜಮಾಲ್ ಇಬ್ಬರೂ ಮನದುಂಬಿ ಅಭಿನಯಿಸಿದ್ದಾರೆ.

ರಾತ್ರಿ ಹೊತ್ತು ರಾಜಕುಮಾರಿ ಲತಿಕಾಗೆ, ಆ ಪುಟ್ಟ ರಾಜಕುಮಾರ ಜಮೀಲ್ ಕನಸು ತೋರುವ ದೃಶ್ಯವನ್ನೂ ನೆನಪಿಸಿಕೊಳ್ಳಿ. ರೈಲಿನಿಂದ ಉರುಳುರುಳಿ ಬಿದ್ದು ಆಗ್ರಾದಲ್ಲಿ ಎದ್ದಾಗ ಎರಡನೇ ಸಲೀಮ್ ಮತ್ತು ಜಮಾಲ್! ಅದೆಷ್ಟು ಸರಿಯಾದ ಸಮಯ-ಸಂದರ್ಭದಲ್ಲಿ ನಿರ್ದೇಶಕರು ಆ ಬದಲಾವಣೆ ಮಾಡಿದ್ದಾರೆಂದರೆ ಆ ಪರಿವರ್ತನೆ ಹಲವರ ಗಮನಕ್ಕೇ ಬರಲಿಕ್ಕಿಲ್ಲ.

ಅರೆ, ಆ ಎರಡನೇ ಜಮಾಲ್ ಅಂತೂ ತಾರೇ ಜಮೀನ್ ಪರ್’ನಲ್ಲಿ ದರ್ಶೀಲ್ ಸ್ನೇಹಿತನಾಗಿದ್ದ ಹುಡುಗ ! ಆಗ್ರಾದಲ್ಲಿ ಟೂರಿಸ್ಟ್ ಗೈಡ್‌ಗಳಾಗಿ, ಚಪ್ಪಲಿ ಕಳ್ಳರೂ ಮಾರಾಟಗಾರರೂ ಆಗಿ, ಬಳಿಕ ಮುಂಬಯಿಗೆ ಬಂದಾಗ ಅವರಿಬ್ಬರೂ ಪರಸ್ಪರ ಹಿಂದಿ ಮಾತಾಡುವುದಿಲ್ಲ, ಇಂಗ್ಲಿಷ್ ರೂಢಿಸಿಕೊಂಡಿದ್ದಾರೆ ! ವೇಶ್ಯೆಯರ ಕೂಟದಲ್ಲಿದ್ದ ಲತಿಕಾ ಜತೆ ಸಲೀಮ್-ಜಮಾಲ್ ಹಳೇ ಅಪಹರಣಕಾರನಿಗೆ ಸಿಕ್ಕಿಬಿದ್ದಾಗ ಆತ ಆಡುವ ಮಾತು “I never forget a face”. ಆಗ ಕಾಣುವುದು ಆತನ ಪಕ್ಕದಲ್ಲಿರುವ, ಸಲೀಮ್‌ನಿಂದ ಬಾಟಲಿಯೇಟು ತಿಂದಿದ್ದವನ ಮುಖ!

“How much this little virgin worth?” ಅಂತ ಆ ಮಕ್ಕಳ ಕಳ್ಳ; ಪ್ರಶ್ನಿಸುವುದಕ್ಕೂ ,ಕೊಂಚ ಮೊದಲು ಲತಿಕಾಳ ಎದೆಯ ಮಟ್ಟ ತೋರಿಸಿರುವುದಕ್ಕೂ ಎಂಥಾ ಕಾವ್ಯಾತ್ಮಕ ಸಂಬಂಧ ಇದೆಯಲ್ಲ. ಈ ನಿರ್ದೇಶಕ-ಕ್ಯಾಮರಾಮ್ಯಾನ್ ಜೋಡಿ, ಕಾರು ಹತ್ತುತ್ತಿರುವ ರೌಡಿ ಸಲೀಂನ ಮುಖದ ಮೊಡವೆಗಳನ್ನು ತೋರಿಸಬಲ್ಲರು. ೨ ಕೋಟಿಯ ಪ್ರಶ್ನೆಯಿದು ಅಂತ ಅನಿಲ್ ಕಪೂರ್ ಹೇಳುವಷ್ಟರಲ್ಲಿ, ಟಿವಿಯೆದುರು ಕುಳಿತ ಸಾಮಾನ್ಯನೊಬ್ಬ ಬಿಸ್ಕೆಟ್ ಬಾಯಿಗಿಡುವುದನ್ನು ಕಾಣಿಸಬಲ್ಲರು. ಇಷ್ಟೆಲ್ಲ ಸೂಕ್ಷ್ಮ ಮನಸ್ಸಿನ ಇವರು, ಭಾರತವನ್ನು ಕೊಳಕಾಗಿ ತೋರಿಸುವುದಕ್ಕೇ ಸಿನಿಮಾ ತೆಗೆದರು ಅಂದರೆ ನೀವು ನಂಬುತ್ತೀರಾ?

ಪ್ರಶಸ್ತಿಯ ರಾಜಕೀಯಗಳೇನೇ ಇರಲಿ ಇಲ್ಲದಿರಲಿ, ಒಳ್ಳೆಯ ಚಿತ್ರವೊಂದು ಬಂದಾಗ ಸಂಭ್ರಮಿಸುವ ಮನಸ್ಸೂ ನಮಗಿಲ್ಲದಿದ್ದರೆ, ಅದಕ್ಕಿಂತ ಬೇಜಾರಿನ ಸಂಗತಿ ಮತ್ತೊಂದಿಲ್ಲ. ಕಲೆಯಲ್ಲಿ, ಒಳ್ಳೆಯದ್ದನ್ನು ತೋರಿಸಿದರೆ ಮಾತ್ರ ಶ್ರೇಷ್ಠ , ಕೆಟ್ಟದ್ದನ್ನು ತೋರಿಸಿದರೆ ಕಳಪೆ ಎಂದಿದೆಯೆ? ಯಾವುದು ಕೂಡಾ ಎಲ್ಲ ಕೋನಗಳಿಂದಲೂ ಚೆಂದವಾಗಿ ಕಾಣುವುದಿಲ್ಲ ಅಥವಾ ಕೊಳಕಾಗಿಯೂ ಅಲ್ಲ. ಭಾರತದ ಬದುಕಿನ ನಾನಾ ಬಗೆಗಳನ್ನು ಸಮರ್ಥವಾಗಿ ತೋರಿಸಿದ ಸಿನಿಮಾ ಇದು. ನಾವೇ ಬೆಚ್ಚಿಬೀಳುವಂತೆ ನಮ್ಮ ದೇಶವನ್ನೇ ಆ ನಿರ್ದೇಶಕ ತೋರಿಸಿದ ರೀತಿ ದೊಡ್ಡದು. ತನ್ನ ಮುಂದಿನ ಚಿತ್ರದ ಶೂಟಿಂಗ್‌ನ್ನೂ ಮುಂಬಯಿಯಲ್ಲೇ ಮಾಡುತ್ತೇನೆಂದು ನಿರ್ದೇಶಕ ಹೇಳಿರಬೇಕಾದರೆ, ಅವನಿನ್ನು ಎಂಥದ್ದೆಲ್ಲಾ ನೋಡಿದ್ದಾನೋ !

ಒಟ್ಟಿನಲ್ಲಿ ಇದು, ಒಂದೊಂದು ದೃಶ್ಯವೂ ಮರೆತು ಹೋಗದಂತೆ, ನಾವೆಲ್ಲ ಮೈಮರೆಯುವ ಹಾಗೆ ಮಾಡಬಲ್ಲ ಸಿನಿಮಾ ಆಗಿದೆ. ಎಲ್ಲೆಡೆ ಪ್ರಶಂಸೆಗೆ ಪಾತ್ರವಾದ ಇದರಲ್ಲಿ ನಮ್ಮವರೂ ಇರುವುದಕ್ಕೆ ಸಂಭ್ರಮಿಸೋಣ. ಮೂಲ ಕಾದಂಬರಿಯಲ್ಲಿ ರಾಮ್ ಮಹಮ್ಮದ್ ಥಾಮಸ್ ಆಗಿದ್ದವನು ಇಲ್ಲಿ ಜಮಾಲ್ ಮಲ್ಲಿಕ್ ಯಾಕಾದ? ನಮಗೆ ಗೊತ್ತಿಲ್ಲ. ಯಾಕೆಂದರೆ ಮೂಲ ಕಾದಂಬರಿಯನ್ನೇ ನಾವು ಓದಿಲ್ಲ. ಆದರೂ ಸಿನಿಮಾಕ್ಕಿಂತ ಹೆಚ್ಚಾಗಿ ಅದರ ಸುತ್ತಲಿನ ರಾಜಕೀಯದ ಬಗ್ಗೆ ಮಾತಾಡುವುದನ್ನು ನಾವು ಬಿಡುವುದಿಲ್ಲ !

ಸಲೀಂ-ಜಮಾಲ್ ಇಬ್ಬರೂ ಹುಟ್ಟಿದ್ದು ಅಣ್ಣತಮ್ಮಂದಿರಾಗಿಯೇ. ಕೊನೆಗೆ ಒಬ್ಬ ನಾಯಕ, ಇನ್ನೊಬ್ಬ ದುರಂತನಾಯಕ ! ಡ್ಯಾನಿ ಬೋಯ್ಲೆ ತೋರಿಸಿರುವುದು ಕೊಳಕು-ಕ್ರೌರ್ಯದ ಭಾರತವನ್ನಷ್ಟೇ ಅಲ್ಲ, ಇಲ್ಲಿರುವ ವೈರುಧ್ಯವನ್ನು. ಹುಡುಗನೊಬ್ಬ ಹೇಲಿನಲ್ಲಿ ಮಿಂದೆದ್ದು ಬರುವುದನ್ನು-ಅಮಿತಾಬ್ ಹೆಲಿಕಾಪ್ಟರ್‌ನಲ್ಲಿ ಇಳಿಯುವುದನ್ನು. ಭೂಗತಪಾತಕಿಯ ಬಾತ್‌ಟಬ್‌ನಲ್ಲಿ ಅಣ್ಣ ಸಾಯುವುದನ್ನು-ತಮ್ಮ ಕೋಟ್ಯಾಧಿಪತಿಯಾಗುವುದನ್ನು . ನಿಜವಾದ ಉತ್ತರಗಳು ಗೊತ್ತಿರುವುದು ಇಬ್ಬರಿಗೇ. ಅನುಭವಿಸಿದವನಿಗೆ ಮತ್ತು ದೇವರಿಗೆ . ಈ ಸಿನಿಮಾ ಅನುಭವಿಸೋಣ, ಆಗದೇ?

ಸ್ಲಂಡಾಗ್ ಮಿಲಿಯನೇರ್ : ಭಾರತೀಯ ಮನಸ್ಥಿತಿಯ ನೈಜ ಮಿಶ್ರಣ

with one comment

ವಿದೇಶದಲ್ಲಿರುವ ಹೇಮಶ್ರೀ ಸ್ಲಂಡಾಗ್ ಮಿಲಿನಿಯೇರ್ ಚಿತ್ರದ ಬಗ್ಗೆ ತಮ್ಮ ವಿಮರ್ಶೆಯನ್ನು ಮಾಡುತ್ತಲೇ ಸಂವಾದವನ್ನು ಮುಂದುವರಿಸಿದ್ದಾರೆ. ಅದನ್ನು ಮತ್ತಷ್ಟು ನೀವು ಮುಂದುವರಿಸುವುದಾದರೆ ಬರಹಗಳನ್ನ ನಮ್ಮ ಸಾಂಗತ್ಯ ಇಮೇಲ್ ಐಡಿ ಗೆ ಕಳುಹಿಸಿ.

*

ಅದೊಂದು ಚಳಿ ಚಳಿ ಮಧ್ಯಾಹ್ನ. ಈ ಚಳಿಯಲ್ಲಿ ಹೇಗಪ್ಪಾ ಸಂಜೆ ವಾಕಿಂಗ್ ಹೋಗೋದು ಅಂತ ಅಂದ್ಕೊಂಡಿದ್ದೆ. ನನ್ನ ಸಂಗಾತಿ, ಹತ್ತಿರದ ಥಿಯೇಟರ್ ಒಂದರಲ್ಲಿ ಒಳ್ಳೇ ಸಿನಿಮಾ ಇದೆ ಹೋಗೋಣ್ವಾ ಅಂತ ಹೇಳಿದ್ದೇ ತಡ, ಸಿನಿಮಾ ನೋಡೋದಕ್ಕಾದ್ರೆ ರೆಡಿ ಅಂತ ಮುಂದಿನ ಶೋಗೆ ಟಿಕೆಟ್ ಬುಕ್ ಮಾಡೇ ಬಿಡು ಅಂದೆ. ಅಲ್ಲದೇ ಈ ಸಿನಿಮಾ, ಭಾರತದ ಅದರಲ್ಲೂ ಮುಂಬಯಿ ಮಹಾನಗರದಲ್ಲಿ ನಡೆಯುವ ಕತೆ; 2008ರ ಜಗತ್ತಿನ ಗಮನ ಸೆಳೆದ ಇಂಗ್ಲಿಷ್ ಚಿತ್ರ; ವಿಕಾಸ್ ಸ್ವರೂಪ್ ನ ಕಾದಂಬರಿ Q & A ಆಧಾರಿತ; ಈ ವರ್ಷದ ಆಸ್ಕರ್ ಗೂ ನಾಮಾಂಕಿತಗೊಂಡು ಪ್ರಶಸ್ತಿ ಪಡೆಯಬಲ್ಲ ಸಾಧ್ಯತೆ, ಎಲ್ಲವೂ ಈ ಚಿತ್ರದ ಕಡೆ ನಮ್ಮನ್ನು ಸೆಳೆಯುವಂತೆ ಮಾಡಿದ್ದವು. ಆ ಚಿತ್ರ ಸ್ಲಂಡಾಗ್ ಮಿಲಿಯನೇರ್.

ಬ್ರಿಟಿಷ್ ಚಿತ್ರ ನಿರ್ದೇಶಕ ಡಾನಿ ಬೋಯ್ಲೆ ಸೀದಾ ಪುಸ್ತಕದ ಪುಟಗಳಿಂದ ಮುಂಬಯಿ ಕೊಳಚೆಯ ಚಿಕ್ಕ ಚಿಕ್ಕ ಗಲ್ಲಿಯೊಳಗೆ ನಮ್ಮನ್ನು ತೂರಿಸಿಕೊಂಡು ಚಿತ್ರದೊಳಗೆ ಕರೆದುಕೊಂಡು ಹೋಗುತ್ತಾನೆ. ಒಂದು ವಿಮರ್ಶೆಯ ಪ್ರಕಾರ, ಈ ಚಿತ್ರ ಆರಂಭವಾದ ಕೆಲವೇ ನಿಮಿಷಗಳಲ್ಲೇ 2002ರ ಬ್ರೆಝಿಲ್ ನ ಕ್ಲಾಸಿಕ್ ಚಿತ್ರ, ಸಿಟಿ ಆಫ್ ಗಾಡ್ ತರಹ ಇದೆ ಅನ್ನಿಸುತ್ತದೆ, ಎಂದಿತ್ತು. ಸಿಟಿ ಆಫ್ ಗಾಡ್, ತುಂಬಾ ದಟ್ಟವಾದ, ಗಾಢವಾದ, ಕರಾಳ ಸತ್ಯದ ಮುಖವನ್ನು ಪರಿಚಯಿಸುತ್ತದೆ. ಆದರೆ ಸ್ಲಂಡಾಗ್ ಅಂತಹ ಅನುಭವವನ್ನು ನನಗೆ ನೀಡಲಿಲ್ಲ. ಅಲ್ಲದೆ ಈ ಚಿತ್ರದುದ್ದಕ್ಕೂ ಸಲಾಂ ಬಾಂಬೆಯ ನೆನಪು ಕಾಡಿತು ಮತ್ತೆ ಮತ್ತೆ. ಬಹುಶಃ ನನ್ನ ಭಾರತೀಯ ಮೂಲ ಮತ್ತು ನನ್ನ ಅನುಭವಗಳ ಸಾಂದ್ರತೆಯನ್ನು ಈ ಚಿತ್ರ ತಟ್ಟಲಿಲ್ಲ ಅಷ್ಟೆ. ಆದರೂ ಹಲವು ಸ್ತರಗಳಲ್ಲಿ ಸ್ಲಂಡಾಗ್ ಮಿಲಿಯನೇರ್ ಚಕಿತಗೊಳಿಸುತ್ತದೆ.

ಈ ಚಿತ್ರದ ಎಳೆಯನ್ನು ಚೆನ್ನಾಗಿಯೇ ಕುಸುರಿಕಟ್ಟಿದ್ದಾನೆ ಚಿತ್ರ ನಿರ್ದೇಶಕ. ಕತೆ ಹೆಣೆದಿರುವ ಅಂದವೇ ಬೇರೆ. ಇದೇ ಕಾರಣಕ್ಕೆ ಚಿತ್ರ ಮನಸ್ಸಿಗೆ ಮುಟ್ಟುತ್ತದೆ. ಕೆಲವು ಶಾಟ್ ಗಳಂತೂ ಅದ್ಭುತ ಎನ್ನುವಷ್ಟರ ಮಟ್ಟಿಗೆ ಕಣ್ಣು ಮನಸ್ಸಿನಲ್ಲಿ ನೆಲೆ ನಿಂತುಬಿಡುತ್ತವೆ. ಜಮಾಲ್ ಮಲ್ಲಿಕ್, ಒಬ್ಬ ಹದಿನೆಂಟು ವರ್ಷದ ಯುವಕ, ಜಾಕ್ ಪಾಟ್ 20 ಮಿಲಿಯನ್ ರೂಪಾರಿಗಳ ಮೊತ್ತವನ್ನು ಗೆಲ್ಲಲು ಕೇವಲ ಒಂದು ಪ್ರಶ್ನೆ ದೂರವಿದ್ದಾನೆ. ಆತ ಆಡುತ್ತಿರುವುದು, who wants to be a millionaire ಅನ್ನುವ TV ಕಾರ್ಯಕ್ರಮದ ಭಾರತೀಯ ರೂಪಾಂತರ ಕೌನ್ ಬನೇಗಾ ಕರೋಡ್ ಪತಿ ಎನ್ನುವ ಗೇಮ್ ಶೋ ನಲ್ಲಿ. ಚಿತ್ರ ಆರಂಭವಾಗುವುದು ಪೋಲೀಸ್ ಕಸ್ಟಡಿಯಲ್ಲಿರುವ ಜಮಾಲ್ ಮೂಲಕ. ಪೋಲೀಸ್ ಇನ್ ಸ್ಪೆಕ್ಟರ್ (ಇರ್ಫಾನ್ ಖಾನ್) ಜಮಾಲ್ ಮಲ್ಲಿಕ್ ನನ್ನು ವಿಚಾರಣೆಗೊಳಿಸುತ್ತಿರುತ್ತಾನೆ. ನಂತರ ಪರದೆ ಮೇಲೆ ತೆರೆದುಕೊಳ್ಳುವುದು ಕಣ್ಣುಮುಚ್ಚಾಲೆಯಾಟ. 

ಜಮಾಲ್ ಬದುಕಿನ ಚಿತ್ರ ಮತ್ತು ಗೇಮ್ ಶೋ ಪ್ರಶ್ನೋತ್ತರಗಳು. ಜಮಾಲ್, ಮೋಸದಿಂದ ಗೇಮ್ ಶೋನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾನೆ ಎನ್ನುವ ಆರೋಪ ಅವನ ಮೇಲೆ. ಜಮಾಲ್ ಅದನ್ನು ಅಲ್ಲಗಳೆಯುತ್ತಲೇ, ತನ್ನ ಬದುಕಿನ ಪ್ರತಿಯೊಂದು ಪ್ರಮುಖ ಘಟನೆಗೂ ಪ್ರಶ್ನೆಸರಣಿಗೂ ಸಾಮ್ಯವನ್ನು ಮುಂದಿಡುತ್ತಾನೆ. ತನ್ನ ಬಾಲ್ಯ, ಯೌವ್ವನದ ದಿನಗಳನ್ನು ಅನಾವರಣ ಮಾಡುತ್ತಾ, ಇದು ವಿಧಿ ಲಿಖಿತ ಎನ್ನುವುದನ್ನು ಮನದಟ್ಟು ಮಾಡುತ್ತಾನೆ. ಪೋಲೀಸ್ ಇನ್ ಸ್ಪೆಕ್ಟರ್ ಗೆ ಹಾಗೂ ಪ್ರೇಕ್ಷಕರಿಗೂ ಸಹ.

ಚಿತ್ರದ ಮೊದಲ ಫ್ಲಾಶ್ ಬ್ಯಾಕ್ ದೃಶ್ಯದಲ್ಲಿ ಒಬ್ಬ ಪೋಲಿಸ್ ಪೇದೆ, ಜಮಾಲ್ ಮತ್ತು ಸಲೀಂರನ್ನು ಅಟ್ಟಿಸಿಕೊಂಡು ಹೋಗುವ ಸನ್ನಿವೇಶವು ಚಿತ್ರದ ಒಟ್ಟು ವೇಗವನ್ನು ಧ್ವನಿಸುತ್ತದೆಯಾದರೂ, ಚಿತ್ರ ಮುಂದುವರೆದಂತೆ ಜಮಾಲ್‍ನ ಹೃದಯಸ್ಪರ್ಶಿ ಕಥಾನಕದೊಳಗೆ ನಿಧಾನವಾಗಿ ಪ್ರೇಕ್ಷಕನನ್ನು ಇಳಿಸುತ್ತದೆ. ಮುಂಬಯಿನ ಕೊಳಚೆ ಗಲ್ಲಿಗಳ ಇಂಚು ಇಂಚನ್ನೂ ಸಹ ದೊಡ್ಡ ಪರದೆಯ ಮೇಲೆ ಬಿಡಿಸಿಟ್ಟ ಈ ಚೇಸಿಂಗ್ ದೃಶ್ಯಾವಳಿ, ಸಿಟಿ ಆಫ್ ಗಾಡ್ ನ ಕೋಳಿ ಹಿಡಿಯುವ (hen chasing scene) ದೃಶ್ಯವನ್ನು ಬಹುವಾಗಿ ನೆನಪಿಸುತ್ತದೆ.

ಪುಟ್ಟ ಜಮಾಲ್ ತನ್ನ ಅಣ್ಣ ಸಲೀಂ ತನ್ನನ್ನು ಬಯಲು ಶೌಚಾಲಯದಲ್ಲಿ ಕೂಡಿಹಾಕಿಟ್ಟರೂ ಸಹ, ತನ್ನ ಫೇವರೆಟ್ ನಟನನ್ನು ಭೇಟಿಯಾಗಲು ಮಲದ ರಾಶಿಗೇ ಬಿದ್ದು ನಟನಿಂದ ಅಟೋಗ್ರಾಫ್ ಪಡೆಯುವ ದೃಶ್ಯವಂತೂ ಹೇಸಿಗೆ ಹುಟ್ಟಿಸಿದರೂ ಅದ್ಭುತ ಮತ್ತು ಅಷ್ಟೇ ಕರಾಳ ಸತ್ಯವನ್ನೂ ಬಿಂಬಿಸುತ್ತದೆ. ಸಲೀಂಗೆ ತನ್ನ ತಮ್ಮ ಜಮಾಲ್ ಮೇಲೆ ಪ್ರೀತಿಯಿದ್ದರೂ ಸೋದರ ಮಾತ್ಸರ್ಯದ ಎಳೆಯಿಂದ ಆತ ತಪ್ಪಿಸಿಕೊಳ್ಳಲಾರ. ಕೊಳಚೆ ಪ್ರದೇಶದಿಂದ ಅನಿರೀಕ್ಷಿತವಾಗಿ ಹೊರಬಿದ್ದ ಸಲೀಂ ಮತ್ತು ಜಮಾಲ್ ಗೆ ಲತಿಕಾ ಜತೆಯಾಗುತ್ತಾಳೆ. ಸಣ್ಣ ಮಕ್ಕಳನ್ನು ಭಿಕ್ಷುಕರನ್ನಾಗಿಸಿ ದಂಧೆಗೆ ಇಳಿಸುವ ಮಮ್ಮನ್ ಮತ್ತು ಅವನ ಸಹಚರರ ಬಲೆಗೆ ಈ ಮೂವರೂ ಬೀಳುತ್ತಾರೆ. ಅಲ್ಲಿಂದ ಮತ್ತೆ ತಪ್ಪಿಸಿಕೊಂಡು ಓಡುವಲ್ಲಿ ಸಫಲರಾಗುತ್ತಾರೆ.

ಸಲೀಂ ಮತ್ತು ಜಮಾಲ್, ಆಗ್ರಾದಲ್ಲಿ ಟೂರಿಸ್ಟ್ ಗೈಡ್‍ಗಳಾಗಿ ಜತೆಗೆ ಇನ್ನೂ ಸಣ್ಣ ಪುಟ್ಟ ಕೆಲಸಗಳನ್ನೂ ಮಾಡುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಇತ್ತ ಲತಿಕಾ, ಬಾರ್ ಒಂದರಲ್ಲಿ ಡಾನ್ಸರ್ ಆಗಿರುತ್ತಾಳೆ. ಮುಂದೆ ಸಲೀಂ, ಭೂಗತದೊರೆ ಜಾವೇದ್ ನ ಗ್ಯಾಂಗ್ ಸೇರಿದರೆ, ಜಮಾಲ್ ಕಾಲ್‍ಸೆಂಟರ್ ‍ನಲ್ಲಿ ಚಹಾ ವಿತರಿಸುವ ನೌಕರನಾಗುತ್ತಾನೆ. ಲತಿಕಾ ಜಾವೇದ್ ನ ದಂತದ ಗೊಂಬೆಯಾಗುತ್ತಾಳೆ. ಚಿತ್ರದುದ್ದಕ್ಕೂ ಪ್ರತಿ ಫ್ಲಾಶ್ ಬ್ಯಾಕ್‍ ನ ನಂತರ ಒಂದು ಪ್ರಶ್ನೆ ಜಮಾಲ್‍ನನ್ನು ಕಾದಿರುತ್ತದೆ. ಎಲ್ಲ ಉತ್ತರಗಳೂ ಪ್ರೇಕ್ಷಕನ ಬುದ್ಧಿವಂತಿಕೆಯನ್ನು ಹೆಚ್ಚೇನೂ ಒರೆಗೆ ಹಚ್ಚುವುದಿಲ್ಲವಾದರೂ, ಆ ಉತ್ತರಗಳ ಒಳಗೆ ಅಡಗಿರುವ ಜಮಾಲ್‍ನ ಬದುಕಿನ ಕಹಿ ಸತ್ಯಗಳ ಅನಾವರಣ ಆಶ್ಚರ್ಯಕರ ಮತ್ತು ನ್ಯಾಯಸಮ್ಮತ ಎಂದು ಭಾಸವಾಗುತ್ತದೆ.

ಸ್ಲಂಡಾಗ್ ಮಿಲಿಯನೇರ್ ಕೇವಲ ಬಡವ ವರ್ಸಸ್ ಶ್ರೀಮಂತ ಕತೆಯಲ್ಲ. ಅಥವಾ ಬಡಹುಡುಗನೊಬ್ಬನ ತಿರುಕನ ಕನಸೂ ಅಲ್ಲ. ಜಮಾಲ್‍ಗೆ ಇಲ್ಲಿ ಹಣ ಮುಖ್ಯವಾಗುವುದೇ ಇಲ್ಲ. ಆದರೆ ಪ್ರೀತಿಯ ಸೆಳೆತ ಆತನನ್ನು ಹಾಟ್ ಸೀಟ್‍ಗೆ ಕೊಂಡೊಯ್ಯುತ್ತದೆ. ಆ ಕಾರಣದಿಂದಲೇ ಇದು ಪ್ರೇಮಕತೆ ಅಷ್ಟೇ ಹೊರತು ವಿಧಿಲಿಖಿತ ಬದುಕಿನ ಗಾಥೆಯಾಗದು. ಕೆಲ ಸನ್ನಿವೇಶಗಳನ್ನು ತುಂಬಾ ನಾಟಕೀಯ ಅನ್ನಿಸುವಂತೆ ಹೆಣೆಯಲಾಗಿದೆ. ಜಮಾಲ್‍ಗೆ ಎಲ್ಲಾ ಪ್ರಶ್ನೆಗಳ ಉತ್ತರಗಳು ತಿಳಿದಿರುವುದು; ಬದಲಾಗಿ ಆ ಎಲ್ಲಾ ಉತ್ತರಗಳು ಆತನ ಬದುಕಿನಿಂದಲೇ ಹೆಕ್ಕಲ್ಪಟ್ಟವು ಎನ್ನುವುದು ಕಾಕತಾಳೀಯದ ಪರಮಾವಧಿ ಅಲ್ಲದೆ ಬೇರೇನೂ ಆಗಲು ಸಾಧ್ಯವಿಲ್ಲ.

ಕಾರ್ಯಕ್ರಮದ ನಿರೂಪಕ ಪ್ರೇಮ್ ಕುಮಾರ್  (ಅನಿಲ್ ಕಪೂರ್), ಜಮಾಲ್ ಗೆ ತಪ್ಪು ಉತ್ತರದ ಸುಳಿವು ನೀಡುವುದನ್ನು ಪುಷ್ಟೀಕರಿಸುವ ಕಾರಣಗಳನ್ನು ಚಿತ್ರದಲ್ಲಿ ಎಲ್ಲೂ ತೋರಿಸುವುದಿಲ್ಲ. ಪ್ರೇಮ್ ಕುಮಾರ್ ಹಾಗೆ ಮಾಡುವುದು ಕೇವಲ ಈರ್ಷ್ಯೆಯಿರಬಹುದು; ಅಥವಾ ಸೂಪರ್ ಸ್ಟಾರ್ ಪವರ್ ನ ಒಂದು ಸ್ಯಾಂಪಲ್ ಕೂಡ ಆಗಬಹುದು. ಚಿತ್ರದ ಕೊನೆ ಸಂತಸದಲ್ಲಿ ಮುಕ್ತಾಯವಾದರೂ ಅದು ವಿಷಾದದ ಕೊನೆ ಎಂದೇ ಅನ್ನಿಸುತ್ತದೆ.

ಪಕ್ಕಾ ಬಾಲಿವುಡ್ ಶೈಲಿಯ ಸಂಗೀತ ಮತ್ತು ನೃತ್ಯವಿರುವ ‘ ಜೈ ಹೋ ‘ ಹಾಡು ಕೇಳಲು ಹಿತವಾಗಿದೆಯಷ್ಟೇ ಹೊರತು ಚಿತ್ರದ ಕೊನೆಯಲ್ಲಿ, ಕ್ರೆಡಿಟ್ ರೋಲ್ ಬರುತ್ತಿರುವಾಗ ಖಂಡಿತಾ ಅಲ್ಲ. ಎ ಆರ್ ರೆಹಮಾನ್ ಸಂಗೀತ ಅಂದರೇನೇ ಒಂದು ತರಹದ ನಶೆ. ಚಿತ್ರದಲ್ಲಿರುವ ಸಂಗೀತದ ಹದಿಮೂರು ತುಣುಕುಗಳೂ ಸಹ ಚಿತ್ರವನ್ನು ಭಿನ್ನಸ್ಥಾಯಿಗೆ ತೆಗೆದುಕೊಂಡು ಹೋಗುವಲ್ಲಿ ಗೆದ್ದಿವೆ. ಗೋಲ್ಡನ್ ಗ್ಲೋಬ್ ಹಾಗೇ ಸುಮ್ಮನೆ ದಕ್ಕುತ್ತದೆಯೇ ??

ರೆಹಮಾನ್ ಇದಕ್ಕಿಂತಲೂ ಉತ್ತಮವಾದ ಸಂಗೀತವನ್ನು ಭಾರತೀಯ ಚಿತ್ರಗಳಲ್ಲಿ ಈ ಹಿಂದೆಯೇ ನೀಡಿದ್ದಾನೆ ಅನ್ನುವುದು ನಮ್ಮ ಹೆಗ್ಗಳಿಕೆ. ಚಿತ್ರದುದ್ದಕ್ಕೂ ಮನ ಸೆಳೆಯುವುದು ಕ್ಯಾಮರಾ ಕಣ್ಣು. ಜಗತ್ತಿನ ಅತಿ ದೊಡ್ಡ ಕೊಳಚೆ ಪ್ರದೇಶದೊಳಗೆ ಸಣ್ಣ ಡಿಜಿಟಲ್ ಕ್ಯಾಮರಾವನ್ನು ನುಗ್ಗಿಸಿ ಅಲ್ಲಿಯ ವಸ್ತುಶಃ ನಾರುವ ಚರಂಡಿಗಳನ್ನು, ಪೈಪು ನಳ್ಳಿಗಳ ನಡುವೆಯೇ ನೆಲೆ ಕಂಡುಕೊಂಡವರನ್ನು, ಮಹಾನಗರಗಳ ಕರಾಳ ಸತ್ಯ ಕಣ್ಣಿಗೆ ರಾಚುವ ಹಾಗೆ ಇಡೀ ಪರದೆಯ ಮೇಲೆ ಬೃಹತ್ತಾಗಿ ಕಾಣಿಸುವುದೆಂದರೆ ಸಾಹಸವೇ ಸರಿ.

ಚಿತ್ರದಲ್ಲಿ ನಟಿಸಿದ ಆಯುಶ್, ಅಝರುದ್ದೀನ್, ರುಬಿಯಾನಾ, ಈ ಪುಟ್ಟ ಮುಖಗಳು ಸ್ಲಂನಿಂದಲೇ ಬಂದಿವೆ. ತನಯ್, ಅಶುತೋಷ್, ತನ್ವಿ ಚೆನ್ನಾಗಿಯೇ ಪಾತ್ರವನ್ನು ನಿಭಾಯಿಸಿದ್ದಾರೆ. ಬ್ರಿಟನ್ನಿನ ಕಿರುತೆರೆಯ ನಟ ದೇವ್ ಪಟೇಲ್, ತುಂಬಾ ಪರಿಚಿತ ಮುಖ ಅನ್ನಿಸಿತು. ಆತನ ಮುಗ್ಧ ವ್ಯಕ್ತಿತ್ವ ಜಮಾಲ್‍ನ ಮನಸ್ಸಿನ ಒಳತೋಟಿಗಳನ್ನು ಚೆನ್ನಾಗಿ ಅಭಿವ್ಯಕ್ತಿಗೊಳಿಸಿದೆ.

ಫ್ರೀದಾ ಪಿಂಟೋ, ಮೂಲತಃ ಮಂಗಳೂರಿನವಳು ಎನ್ನುವ ಕಾರಣಕ್ಕೆ ನನಗೆ ಖುಷಿಯಾದಳು. ಆಕೆಯ ಸರಳ ಸೌಂದರ್ಯ ಬಾಲಿವುಡ್‍ನ ಮಸಾಲೆ ಚಿತ್ರಗಳಿಗೆ ಹೆಚ್ಚು ಉಪಕಾರಿಯಾಗಲಾರದು. ಆದರೂ ಸತ್ವವುಳ್ಳ ಪಾತ್ರಗಳಿಗೆ ಆಕೆ ಜೀವ ತುಂಬಬಲ್ಲಳು. ಮಧುರ್ ಮಿತ್ತಲ್ ಹೊಸ ಶೋಧ. ಆತನ ಪ್ರತಿಭೆಗೆ ಬಾಲಿವುಡ್‍ನಲ್ಲಿ ಒಳ್ಳೆಯ ಪಾತ್ರಗಳು ಸಿಕ್ಕಿದರೆ ಆತನ ಅದೃಷ್ಟ.

ಪ್ರೇಮ್‍ಕುಮಾರ್ ಪಾತ್ರಕ್ಕೆ ಬೇಕಾಗಿದ್ದ ಸ್ಟಾರ್ ಚರಿಶ್ಮಾ ಆಗಲೀ, ಮೋಡಿ ಮಾಡುವ ವ್ಯಕ್ತಿತ್ವವಾಗಲೀ ಅನಿಲ್ ಕಪೂರ್ ಗೆ ಇಲ್ಲವಾದ್ದರಿಂದ ಅಥವಾ ಹಿಂದಿ ಸಿನಿಮಾದ ಹೀರೋ ಪಾತ್ರಗಳಲ್ಲೇ ಹೆಚ್ಚು ಆತನನ್ನು ನಾನು ಗ್ರಹಿಸಿದ್ದರಿಂದಲೋ ಏನೋ ಅನಿಲ್ ಕಪೂರ್ ನಟನೆಯಾಗಲೀ, ಮ್ಯಾನರಿಸಂಗಳಾಗಲೀ ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಇರ್ಫಾನ್ ಖಾನ್, ಬಹುಚರ್ಚಿತ ನೇಮ್ ಸೇಕ್ ಮತ್ತು ಮೈಟಿ ಹಾರ್ಟ್ ಚಿತ್ರಗಳಿಂದಾಗಿ ಈ ಬ್ರಿಟಿಶ್ ಚಿತ್ರದ ಭಾಗವಾಗಿದ್ದು ಕೂಡ ದುರಂತ. ಇರ್ಫಾನ್ ಎಷ್ಟೋ ಒಳ್ಳೆಯ ಕಲಾವಿದ, ಸಹಜ ನಟ.

ಪೋಲೀಸ್ ಇನ್ ‍ಸ್ಪೆಕ್ಟರ್ ‍‍ನ ಏಕತಾನತೆಯ ಪಾತ್ರ ಮಾಡಲು ಯಾಕೆ ಒಪ್ಪಿಕೊಂಡ ಎನ್ನುವುದೇ ಅರ್ಥವಾಗಲಿಲ್ಲ. ಸೌರಭ್ ಶುಕ್ಲಾಗಂತೂ ಪೋಲೀಸ್ ಪೇದೆಯ stereotype ಹಾವಭಾವಗಳ ಪ್ರದರ್ಶನ ಬಿಟ್ಟರೆ ಬೇರೇನೂ ಕೆಲಸವಿರಲಿಲ್ಲ. ನನ್ನನ್ನು ಕಾಡಿದ್ದು ಮಮ್ಮನ್ ಪಾತ್ರಧಾರಿ, ಅಂಕುರ್ ವಿಕಲ್. ಕಣ್ಣಿನಿಂದಲೇ ಕ್ರೂರತೆಯ ತೀವ್ರ ಅನುಭವವನ್ನು ನೀಡುವಲ್ಲಿ ಆತ ಯಶಸ್ವಿಗಾಗಿದ್ದಾನೆ. ಸ್ಲಂಡಾಗ್ ಮಿಲಿಯನೇರ್‍‍ಗೆ ಪ್ರಶಸ್ತಿಗಳ ಮಹಾಪೂರ ಎಲ್ಲೆಡೆಯಿಂದ ಹರಿದುಬರುತ್ತಿದೆ.

ಕಳೆದ ವಾರ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ದಕ್ಕಿರುವುದಂತೂ, ಇನ್ನೇನು ಆಸ್ಕರ್ ಅಷ್ಟೇ ಬಾಕಿ ಎನ್ನುವಷ್ಟರ ಮಟ್ಟಿಗೆ ಇದು ಹಾಟ್ ಫೇವರೆಟ್. ಜತೆ ಜತೆಗೇ ಭಾರತದ ಚಿತ್ರಣ ಸರಿಯಾಗಿಲ್ಲ ಎನ್ನುವ ಟೀಕೆ, ವಾದಗಳೂ ಕೇಳಿ ಬರುತ್ತಿವೆ. ಹೆಸರಿಗೆ ಸೂಪರ್ ಸ್ಟಾರ್ ಅನ್ನಿಸಿಕೊಂಡವರಿಗೆ (ಅಮಿತಾಭ್ ನ ಬಚ್ಚನ್ ಬ್ಲಾಗ್ ಕಮೆಂಟ್ ಹಿನ್ನೆಲೆಯಲ್ಲಿ ) ನಮ್ಮ ನೆಲದ ಸತ್ಯಗಳು ಕಣ್ಣಿದ್ದೂ ಕಾಣದಂತೆ ಇರುವುದು ವಿಷಾದ. ತಾನು ಹೇಳಿದ್ದೆಲ್ಲವೂ ಸುದ್ದಿಯಾಗುವ ಸಂದರ್ಭದಲ್ಲಿ ಚಿತ್ರೋದ್ಯಮದ ಸಕ್ರಿಯ ಸದಸ್ಯನಾಗಿ ಇನ್ನೊಂದು ಚಿತ್ರದ ಬಗ್ಗೆ ಹೇಳಿಕೆ ನೀಡುವುದು ಎಷ್ಟು ಸೂಕ್ತ. ಪ್ರತಿಯೊಂದು ಚಿತ್ರವೂ ಅದರದ್ದೇ ಆದ ಸ್ಥಾಪಿತ ಉದ್ದೇಶಗಳಿಗೇ ತಯಾರಾಗಿರುತ್ತವೆ. ಸಿದ್ಧ ಸೂತ್ರಗಳ ಬಂಧನದಲ್ಲಿ ತಯಾರಾಗುವ ಚಲನಚಿತ್ರಗಳು ಕಲೆಯ ಅಭಿವ್ಯಕ್ತಿ ಎಷ್ಟೋ, ಅಷ್ಟೇ ಕಮರ್ಷಿಯಲ್ ಪ್ರಾಡಕ್ಟ್ ಕೂಡ ಎನ್ನುವ ವಿವೇಚನೆ ಅಗತ್ಯ.

ಆ ಹಿನ್ನೆಲೆಯಲ್ಲಿ ಟೀಕೆ ಮಾಡಿದರೆ ಒಳಿತು ಅಲ್ಲವೇ? ಜನವರಿ ಕೊನೆಯ ವಾರದಲ್ಲಿ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಪ್ರೇಕ್ಷಕರು ಹೇಗೆ ಸ್ಪಂದಿಸುತ್ತಾರೆ ಎನ್ನುವ ಕುತೂಹಲ ನನಗೆ. ಏಕೆಂದರೆ ಸ್ಲಂಡಾಗ್ ಮಿಲಿಯನೇರ್ ಚಿತ್ರ, ನಾಯಕನ ಹೋರಾಟ, ಮಧ್ಯಮ-ಬಡ ವರ್ಗಗಳ ಸಹಜ ಆಕಾಂಕ್ಷೆಗಳು, ವಿಧಿಲಿಖಿತ ಹಣೆಬರಹ, ತ್ರಿಕೋನ ಪ್ರೀತಿ – ಈ ಎಲ್ಲಾ ಅಂಶಗಳ ಮಿಶ್ರಣವಾಗಿ, ಭಾರತೀಯ ಮನಸ್ಥಿತಿಗೆ ಹೆಚ್ಚು ಹತ್ತಿರವಾಗಿದೆ.

Written by saangatya

January 17, 2009 at 9:49 am

ಆಸ್ಕರ್, ಗೋಲ್ಡನ್ ಗ್ಲೋಬ್ ನಂಥ ಪ್ರಶಸ್ತಿಗಳನ್ನು ತಿರಸ್ಕರಿಸಿ?

with 5 comments

untitled

ಸ್ಲಂಡಾಗ್ ಮಿಲಿನಿಯೇರ್ ಗೆ ಪ್ರಶಸ್ತಿ ಬಂದದ್ದಕ್ಕೆ ಯಾರಿಗೂ ಬೇಸರವಿಲ್ಲ.  ಆದರೆ ಅದನ್ನು ಆಯ್ಕೆ ಮಾಡಿರುವ ಕಾರಣದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಸೂಪರ್ ಪವರ್ ದೇಶವಾಗಿ ಹೊರಹೊಮ್ಮುತ್ತಿರುವ ಭಾರತವನ್ನು ಹೀಗಳೆಯುವ ರೀತಿಯಲ್ಲಿ ಬಿಂಬಿಸಿದ್ದಕ್ಕೇ ಪ್ರಶಸ್ತಿ ದೊರಕಿದೆಯೇ ? ಭಾರತದಲ್ಲಿನ ಕೊರತೆಯನ್ನೇ ಬಿಂಬಿಸುವ ಚಿತ್ರಗಳು ಮಾತ್ರ ಪ್ರಶಸ್ತಿಗೆ ಅರ್ಹವೇ ? ತಾರೇ ಜಮೀನ್ ಪರ್ ನಂಥ ಪಾಸಿಟಿವ್ ನೆಲೆಯ ಚಿತ್ರ ಆಸ್ಕರ್ ಗೆ ಆಯ್ಕೆಯಾಗದೇ ಹೋದದ್ದು ಯಾಕೆ ? ಇಂಥ ಪ್ರಶ್ನೆಗಳಲ್ಲಿ ರವಿರಾಜ್ ಗಲಗಲಿ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ.

*

ಸ್ಲಮ್ ಡಾಗ್‌ಗೆ ಪ್ರಶಸ್ತಿ, ಮಿಲಿಯನ್ ಡಾಲರ್ ಪ್ರಶ್ನೆ ? ಕೊಳಕು ಭಾರತ, ನಾರುವ ಸ್ಲಂ, ಭಿಕ್ಷೆ ಬೇಡುವ ಮಕ್ಕಳು ಪಾಶ್ಚಾತ್ಯ ಸಿನಿಮಾ ನಿರ್ದೇಶಕರ ಕಣ್ಣಲ್ಲಿ ಭಾರತ ಕಾಣುವುದು ಹೀಗೆ.

ಅಲ್ಲೇನಿದ್ದರೂ ವಿದೇಶದಲ್ಲಿ ಕುಳಿತ ಪ್ರೇಕ್ಷಕರು, ವಿಮರ್ಶಕರು ಭಾರತದ ಕೊಳಚೆ ಗುಂಡಿ ನೋಡಿ ಪಾಪ ಅನ್ನಬೇಕು, ಇದು ಸಾಕ್ಷಾತ್ ಭಾರತದ ದರ್ಶನ ಎಂದುಕೊಂಡು ಪ್ರಶಸ್ತಿ ಕೊಡಬೇಕು. ನಮ್ಮವರು ಐವತ್ತು ವರ್ಷಕ್ಕೊಮ್ಮೆ ದೊರಕುವ ಪ್ರಶಸ್ತಿ ನೋಡಿ ಖುಷಿ ಪಡೆಬೇಕು, ಭಾರತೀಯ ಚಿತ್ರರಂಗ ಅದ್ಭುತ ಎಂದು ಉದ್ಗರಿಸಬೇಕು.

ಇಸ್ಮಾಯಿಲ್ ಮರ್ಚಂಟ್ ಇಂಗ್ಲೀಷ್‌ನಲ್ಲಿ ಹಲವಾರು ಚಿತ್ರ ನಿರ್ಮಿಸಿದ್ದಾರೆ, ಅವರು ಭಾರತೀಯ ಮೂಲದವರು. ನಮ್ಮವರೆ ಆದ ನಾಸಿರುದ್ದೀನ್ ಶಾ, ಶಬಾನಾ ಆಜ್ಮಿ, ಶಶಿ ಕಪೂರ್, ಐಶ್ವರ್ಯಾ ರೈ ಕೂಡ ಹಲವು ಇಂಗ್ಲೀಷ್ ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ವದೇಶ್, ಲಗಾನ್, ಜೋಧಾ ಅಕ್ಬರ್ ನಂಥ ಚಿತ್ರಗಳಿಗೆ ಅಷ್ಟೇ ಏಕೆ ಮೌಲಿನ್ ರೋಜ್ ಎಂಬ ಇಂಗ್ಲೀಷ್ ಓಪೆರಾಗೂ ರೆಹಮಾನ್ ಸಂಗೀತ ನೀಡಿದ್ದಾರೆ.

ನಮ್ಮಶೇಖರ ಕಪೂರ್ “ಎಲಿಜಬೆತ್ ” ಚಿತ್ರ ನಿರ್ದೇಶಿಸಿದ್ದಾರೆ. ಅಮೀರ್ ಖಾನ್ ತಾರೆ ಜಮೀನ್ ಪರ್, ಶಾರುಖ್ “ಚಕ್ ದೆ ಇಂಡಿಯಾ” ಮಾಡಿದ್ದಾರೆ. ಮರಾಠಿ, ಬೆಂಗಾಲಿಗಳಲ್ಲಿ ಅತ್ಯುತ್ತಮ, ವಿಶ್ವದರ್ಜೆಯ ಚಿತ್ರಗಳು ಬಂದಿವೆ, ಆದರೆ ಅವಕ್ಕೆಲ್ಲ ಆಸ್ಕರ್ ಆಗಲಿ, ಗೋಲ್ಡನ್ ಗ್ಲೋಬ್ ಆಗಲಿ ದೊರಕಿಲ್ಲ. ಯಾಕೆ ? ಏಕೆಂದರೆ ಅವೆಲ್ಲ ಭಾರತೀಯರ ಚಿತ್ರಗಳು, ಆದರೆ ಸ್ಲಂ ಡಾಗ್ ವಿದೇಶಿಯರು ನಿರ್ಮಿಸಿ, ನಿರ್ದೇಶಿಸಿದ ಚಿತ್ರ.

ರೆಹಮಾನ್‌ರ ಹಲವು ಚಿತ್ರಗಳು ಆಸ್ಕರ್ ಪಟ್ಟಿಯಲ್ಲಿ ನಾಮ ನಿರ್ದೇಶನಕ್ಕೆ ಮಾತ್ರ ಸೀಮಿತ. ವಿದೇಶಿಯರಿಗೆ ನಮ್ಮಲ್ಲಿನ ಅಸ್ಪ್ರಶ್ಯತೆ, ಸಾಮಾಜಿಕ ಅನ್ಯಾಯದ ಬಗೆಗಿನ ಚಿತ್ರಗಳೂ ಅಪ್ಯಾಯಮಾನವೆನಿಸುವುದಿಲ್ಲ, ಅವರಿಗೇನಿದ್ದರೂ ನಮ್ಮ ಹೊಲಸುತನದ ಪ್ರದರ್ಶನವಾಗಬೇಕು, ಅದಕ್ಕೆ ವಿದೇಶಿಯರೆ ನಿರ್ದೇಶಕರಾಗಬೇಕು.

ಅಂದಾಗ ಮಾತ್ರ ಪ್ರಶಸ್ತಿ. ಅಷ್ಟಕ್ಕೂ ಸ್ಲಂ ಡಾಗ್‌ನಲ್ಲಿ ಅಂತಹ ವಿಶೇಷವೇನಿಲ್ಲ, ಇದಕ್ಕೂ ಮೊದಲು ಸಲಾಂ ಬಾಂಬೆ, ನಾದರಿಯ ಹಲವು ಚಿತ್ರಗಳು ಭಾರತದಿಂದ ಪ್ರಶಸ್ತಿ ಸಾಲಿನಲ್ಲಿದ್ದವು. ಶ್ವಾಸ್‌ನಂತಹ ಉತ್ತಮ ಚಿತ್ರವೂ ಪಟ್ಟಿಯಲ್ಲಿತ್ತು, ಇತ್ತೀಚೆಗೆ ತಾರೆ ಜಮೀನ್ ಪರ್ ಕೂಡ ಹೊರಗೆ ಬಿತ್ತು. ಯಾಕೆಂದರೆ ಅದು ನವ ಭಾರತದ ಚಿತ್ರಣ ಮಾಡಿಸುವ ಸಿನಿಮಾ,. ವಿದೇಶಿಯರಿಗೆ ಹೇಗೆ ಇಷ್ಟವಾದೀತು ?

ಕ್ರ್ಯಾಶ್ ಎನ್ನುವ ಸಿನಿಮಾ ಮೂರು ಆಸ್ಕರ್ ಪ್ರಶಸ್ತಿ ಪಡೆದಿದೆ. ಚಿತ್ರದಲ್ಲಿರುವುದೆಲ್ಲ ಜನಾಂಗೀಯ ನಿಂದನೆ, ಅಸ್ಪ್ರಶ್ಯತೆ, ಕಪ್ಪು, ಬಿಳಿಯ ಅಮೆರಿಕನ್ನರ ಭಿನ್ನಮತ. ಅದಕ್ಕೆ ದೊರಕಿದ ಪ್ರಶಸ್ತಿ ಈ ಮೊದಲು ನಮ್ಮ ಸಾಮಾಜಿಕ ಜೀವನ ಪದ್ಧತಿ ಬಿಂಬಿಸುವ ಚಿತ್ರಗಳಿಗೇಕೆ ದೊರೆಯಲಿಲ್ಲ ?.

ಕಾರಣವಿಷ್ಟೇ, ಅಮೆರಿಕ, ಇಂಗ್ಲೆಂಡ್ ಸೇರಿದಂತೆ ಪಾಶ್ಚಾತ್ಯ ಸಿನಿಮಾ ಪ್ರಶಂಸಕರು ತಮ್ಮ ದೇಶದ, ಭಾವನೆಗಳ ಕನ್ನಡಕದೊಳಗಿಂದ ಉಳಿದ ದೇಶದ ಚಿತ್ರಗಳನ್ನೂ ಅಳೆಯುತ್ತಾರೆ. ಅವರಿಗೆ ಸರಿ ಅನ್ನಿಸಿದರೆ ಪ್ರಶಸ್ತಿ, ಇಲ್ಲವಾದರೆ ಇಲ್ಲ, ಇದು ಸದ್ಯದ ಸ್ಥಿತಿ. ಅದಕ್ಕೆ ಭಾರತೀಯ ಚಿತ್ರರಂಗ ಆಸ್ಕರ್ ಅಥವಾ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳನ್ನು ಜಾಗತಿಕ ಪ್ರಶಸ್ತಿ ಅಂದುಕೊಳ್ಳಬಾರದು. ಆಗ ಮಾತ್ರ ನಮ್ಮ ಮನೋಭಾವ ಹಾಗೂ ಪಾಶ್ಚಾತ್ಯರ ಮನೋಭಾವ ಬದಲಾಗಬಹುದು.

ನೆಗೆಟಿವ್ ಭಾರತದ ವೈಭವೀಕರಣ !

without comments

“ಸ್ಲಂಡಾಗ್ ಮಿಲಿನಿಯೇರ್’ ಫಿಲ್ಮ್ ಬಗ್ಗೆ ಪ್ರತಿಕ್ರಿಯೆ ಆರಂಭವಾಗಿದೆ.  ಪ್ರಮೋದ್ ಮತ್ತು ಚೇತನಾ ತೀರ್ಥಹಳ್ಳಿಯವರು ಕಾಮೆಂಟ್ ರೂಪದಲ್ಲಿ ಹಾಕಿದ ಪ್ರತಿಕ್ರಿಯೆಯನ್ನು ಇಲ್ಲಿ ಹಾಕುತ್ತಿದ್ದೇನೆ. ಈ ಸಂವಾದವನ್ನು ಮುಂದುವರೆಸಿ. ನಿಮ್ಮ ಅನಿಸಿಕೆಯನ್ನು www.saangatya@gmail.com ಗೆ ಕಳುಹಿಸಿ.

*

ಈ ಸಿನೆಮಾವನ್ನು ನೋಡಿದ್ದೇನೆ. ಅಸಹ್ಯ ಅನಿಸುವಷ್ಟು ಹಿ೦ಸೆ ಇದೆ, ವೆಸ್ಟರ್ನ್ ಜನತೆಗಳಿಗೆ ನಮ್ಮ ಭಾರತ ಕೊಳಚೆ ಪ್ರದೇಶಗಳನ್ನು ತೆರೆದಿಟ್ಟು ‘ನೋಡಿ ನಾವು ಹೀಗೆ’ ಎ೦ಬ೦ತಿದೆ. ಮನಸ್ಸು ಭಾರವಾಗುತ್ತದೆ- ಪ್ರಮೋದ್.

*

ಸ್ಲಂ ಡಾಗ್ ಮಿಲಿನಿಯೇರ್ ಇಂಗ್ಲಿಶ್ ಆವೃತ್ತಿ ಸಿಕ್ಕಿತು. ನೋಡಿದೆ. ಕೊಳಕು ಅನಿಸಿದರೂ ವಾಸ್ತವಿಕ ಅಂಶಗಳು ಧಾರಾಳವಾಗಿದೆ. ಒಂದಂತೂ ನಿಜ… ಭಾರತದ ‘ಪಾಸಿಟಿವ್ ಅಪ್ರೋಚ್’ ಅಥವಾ ಕನ್ಸ್ಟ್ರಕ್ಟಿವ್’ ಸಿನೆಮಾಗಳಿಗೆ ಪ್ರಶಸ್ತಿ ಖಂಡಿತ ಬರೋದಿಲ್ಲ. ಸಿನೆಮಾ ಮಾತ್ರವಲ್ಲ, ಸಾಹಿತ್ಯದ ವಿಷಯದಲ್ಲೂ ಹಾಗೇ. ಎಷ್ಟು ಕೊಳಕಾಗಿ ಚಿತ್ರಿಸುತ್ತೀರೋ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಷ್ಟು ಹೆಚ್ಚು ಬಹುಮಾನ ಪಡೆಯುವಿರಿ…
ಈ ಕಾರಣದಿಂದಾಗಿಯೇ ‘ಲಗಾನ್’ ‘ತಾರೇ ಜಮೀನ್ ಪರ್’ ರೀತಿಯ ಚಿತ್ರಗಳಿಗೆ ಅವಾರ್ಡು ಸಿಗದೆಹೋಗುವುದು. ಎಲ್ಲ ದೇಶಗಳ- ಭಾಶೆಗಳ ಸಿನೆಮಾ ಹಣೆಬರಹವೂ ಹೀಗೇ ಇದೆಯಾ? ತಿಳಿದವರು ದಯವಿಟ್ಟು ಹೇಳಿ…   ಚೇತನಾ ತೀರ್ಥಹಳ್ಳಿ

Written by saangatya

January 15, 2009 at 7:03 am